GULBARGA VARTHE

GULBARGA VARTHE

Friday, 4 May 2018

news and photo Date: 4-5-2018

 ಮತದಾನಕ್ಕೆ ಕೌಂಟ್ ಡೌನ್-08
ಮನೆಗೆಲಸ ಮಾಡುವ ಮಹಿಳೆಯರಿಗೆ ಮತದಾನದ ಜಾಗೃತಿ
ಕಲಬುರಗಿ,ಮೇ.04.(ಕ.ವಾ.)-ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದಲ್ಲಿ ಮನೆಗೆಲಸ ಮಾಡುವ ಮಹಿಳೆಯರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ತಪಾಸಣೆ ಮಾಡುವ ಮೂಲಕ ಮತದಾನದ ಜಾಗೃತಿ ಮೂಡಿಸಲಾಯಿತು.
ಕಲಬುರಗಿ ನಗರದ ಇಂದಿರಾನಗರದಲ್ಲಿ ಶುಕ್ರವಾರ ಜಿಲ್ಲಾ ಸ್ವೀಪ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾವಂತರು ಮತ್ತು ಶ್ರೀಮಂತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವುದಿಲ್ಲ ಎಂಬ ಸಮೀಕ್ಷೆಗಳಿವೆ. ವಿದ್ಯಾವಂತರ ಮತ್ತು ಶ್ರೀಮಂತರ ಮನೆಗಳಲ್ಲಿ ಮನೆಗೆಲಸ ಮಾಡುವ ಮಹಿಳೆಯರಿಗೆ ಮತದಾನದ ಜಾಗೃತಿ ಮೂಡಿಸುವ ಮೂಲಕ ಮತದಾನದಂದು ಅವರು ಕೆಲಸ ಮಾಡುವ ಮನೆಯ ಎಲ್ಲ ಸದಸ್ಯರಿಗೆ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ತಿಳಿಸಲಾಯಿತು.
ಜಿಲ್ಲಾ ಸ್ವೀಪ ಸಮಿತಿಯಿಂದ ಈಗಾಗಲೇ ಅರು ತಂಡಗಳನ್ನು ರಚಿಸಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಯುವ ಮತದಾರರನ್ನು ಆಕರ್ಷಿಸಿ ಮತದಾನದ ಹಕ್ಕು ಚಲಾಯಿಸಲು ಪ್ರೇರೇಪಿಸಲಾಗುತ್ತಿದೆ.
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ ಬಿಸ್ವಾಸ್, ಜಿಲ್ಲಾ ಪಂಚಾಯತಿ ಸಹ ಕಾರ್ಯದರ್ಶಿ ಸಂಪತ ಪಾಟೀಲ, ಯೋಜನಾ ನಿರ್ದೇಶಕ ಸೂರ್ಯಕಾಂತ, ಕಲಬುರಗಿ ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೋಡ, ತಾಲೂಕು ವೈದ್ಯಾಧಿಕಾರಿ ಡಾ.ರಾಜಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ ಮತ್ತಿತರ ಅಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. 
ಖರ್ಚು-ವೆಚ್ಚದ ವಿವರ ಸಲ್ಲಿಸಲು ಸೂಚನೆ 
ಕಲಬುರಗಿ,ಮೇ.04.(ಕ.ವಾ.)-ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 43-ಗುಲಬರ್ಗಾ ಗ್ರಾಮೀಣ (ಮೀಸಲು) ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು (ಉಮೇದುವಾರರು) ಚುನಾವಣೆಗೆ ಸಂಬಂಧಿಸಿದ ಖರ್ಚು ವೆಚ್ಚದ ವಹಿ, (ಪಾರ್ಟ್-ಎ, ಪಾರ್ಟ-ಬಿ ಮತ್ತು ಪಾರ್ಟ ಸಿ ಪುಸ್ತಕಗಳು), ಬಿಲ್ಸ್/ವೋಚರ್ಸ್, ಬ್ಯಾಂಕ್ ಪಾಸ್ ಬುಕ್/ಬ್ಯಾಂಕ್ ಸ್ಟೇಟ್‍ಮೆಂಟ್‍ಗಳನ್ನು ಪರಿಶೀಲನೆಗಾಗಿ ಸಂಬಂಧಿಸಿದ ದಾಖಲೆಗಳೊಂದಿಗೆ ತಪ್ಪದೇ ಮೇ 5 ರಂದು ಬೆಳಿಗ್ಗೆ 10 ಗಂಟೆಗೆ ಮತ್ತು ಮೇ 10 ರಂದು ಬೆಳಿಗ್ಗೆ 10 ಗಂಟೆಗೆ ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಲ್ಲಿಸಬೇಕೆಂದು 43-ಗುಲಬರ್ಗಾ ಗ್ರಾಮೀಣ (ಮೀಸಲು) ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾdರೆ.
ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಗೆ ನಿರ್ಧಾರ
ಕಲಬುರಗಿ,ಮೇ.04.(ಕ.ವಾ.)- ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಇದೇ ಮೇ 10 ರಂದು ಸರಳವಾಗಿ ಆಚರಿಸಲು ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.


ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಡಳಿತದಿಂದ ಸರಳವಾಗಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಲ್ಲದೆ ತಾಲೂಕು ಮಟ್ಟದಲ್ಲಿಯೂ ಸರಳವಾಗಿ ಜಯಂತಿಯನ್ನು ಆಚರಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಜಯಂತಿ ಅಂಗವಾಗಿ ಕಾರ್ಯಕ್ರಮ ಸಂಘಟನೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಮೆರವಣಿಗೆ ಮಾಡುವುದಿಲ್ಲವೆಂದು ಸ್ಪಷ್ಠಪಡಿಸಿದ ಅವರು ಸಮಾಜದ ಮುಖಂಡರು ಮೆರವಣಿಗೆ ಮಾಡಲು ಬಯಸಿದ್ದಲ್ಲಿ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಮುಖಂಡರು ಜಯಂತಿ ಯಶಸ್ವಿ ಆಚರಣೆಗೆ ಸಲಹೆ-ಸೂಚನೆ ನೀಡಿದರು.
 ಸಭೆಯಲ್ಲಿ ಕಲಬುರಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ರೆಡ್ಡಿ ಸಮಾಜದ ರಾಜ್ಯ ಉಪಾಧ್ಯಕ್ಷ ವಿ.ಶಾಂತರೆಡ್ಡಿ, ಜಿಲ್ಲಾಧ್ಯಕ್ಷ ಪ್ರೊ.ಚೆನ್ನಾರೆಡ್ಡಿ ಪಾಟೀಲ, ಮುಖಂಡರಾದ ಚಂದ್ರಶೇಖರರೆಡ್ಡಿ ಪರಸರೆಡ್ಡಿ, ಬಿ.ಆರ್.ಪಾಟೀಲ, ವಿಜಯರೆಡ್ಡಿ, ಹಣಮಂತರೆಡ್ಡಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಮೇ 5ರಂದು ಕಾನೂನು ಅರಿವು ನೆರವು ಕಾರ್ಯಕ್ರಮ 
ಕಲಬುರಗಿ,ಮೇ.04.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಮೂಲಭೂತ ಕಾನೂನು, ಸಂತ್ರಸ್ಥ ಪರಿಹಾರ ಯೋಜನೆ, ಮಹಿಳೆಯರ ಹಕ್ಕುಗಳ ಬಗ್ಗೆ” ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮೇ 5ರಂದು ಸಂಜೆ 5 ಗಂಟೆಗೆ ಕಲಬುರಗಿಯ ಸುಂದರ ನಗರದಲ್ಲಿರುವ ಸಮುದಾಯ ಭವನದಲ್ಲಿ  ಏರ್ಪಡಿಸಲಾಗಿದೆ.
ಕಲಬುರಗಿ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹೆಚ್.ಕೆ. ನವೀನ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸುಂದರ ನಗರ ಒಕ್ಕೂಟ ಅಧ್ಯಕ್ಷೆ ಲಕ್ಮ್ಮೀ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾರುತಿ ಎನ್., ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನ್ಯಾಯವಾದಿ ಮಾಲತಿ ರೇಶ್ಮಿ ಅವರು ಮಹಿಳಾ ಹಕ್ಕುಗಳ ಬಗ್ಗೆ, ನ್ಯಾಯವಾದಿ ಸರಸಿಜಾ ರಾಜನ್ ಮಹಿಳೆಯರ ಆಸ್ತಿ ಹಕ್ಕಿನ ಬಗ್ಗೆ ವಿಶೇಷ ಉಪನ್ಯಾಸ ನೀಡುವರು.
ನೀರು ಸರಬರಾಜಿನಲ್ಲಿ ವ್ಯತ್ಯಯ 
ಕಲಬುರಗಿ,ಮೇ.04.(ಕ.ವಾ.)-ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ಮತ್ತು ಬೆಣ್ಣೆತೋರಾ ನದಿಯ ಮೂಲ ಸ್ಥಾವರಗಳಲ್ಲಿ 2018 ರ ಮೇ 1 ರ ಮಧ್ಯರಾತ್ರಿಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ಇದರ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆ: ಪದವಿಪೂರ್ವ ಕಾಲೇಜಿನ ಬಾಲಕಿಯರ ಸಾಧನೆ 
ಕಲಬುರಗಿ,ಮೇ.04.(ಕ.ವಾ.)- 2018ರ ಮಾರ್ಚ್‍ನಲ್ಲಿ ಜರುಗಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಬುರಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ 13 ಬಾಲಕಿಯರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿಗೆ ಕೀರ್ತಿ ತಂದಿದ್ದಕ್ಕಾಗಿ  ಕಾಲೇಜಿನ ಪ್ರಾಂಶುಪಾಲ ಶಿವಾಜಿ ಪಾಟೀಲ ಹಾಗೂ ಉಪನ್ಯಾಸ ವೃಂದವರು ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.
ಕಲಾ ವಿಭಾಗ:- ಅರ್ಪಿತಾ ಶಿವಾನಂದ-546 ಅಂಕಗಳು, ಮಹಾದೇವಿ ಭೀಮಾಶಂಕರ—535 ಅಂಕಗಳು, ಹೀನಾ ನದಾಫ-525 ಅಂಕಗಳು, ಮಲ್ಲಮ್ಮ ಬಸವರಾಜ-524 ಅಂಕಗಳು ಹಾಗೂ ಸುಧಾ ಅಶೋಕ-511 ಅಂಕಗಳು.
      ವಾಣಿಜ್ಯ ವಿಭಾಗ:- ಕವಿತಾ ಶಿವಲಿಂಗಯ್ಯ-537 ಅಂಕಗಳು, ಶಾಂತಾಬಾಯಿ ಅಶೋಕ-535 ಅಂಕಗಳು, ಭಾಗ್ಯವಂತಿ ರಾಜಶೇಖರ- 534 ಅಂಕಗಳು, ಸಾವಿತ್ರಿ ಭೀಮಾಶಂಕರ-519 ಅಂಕಗಳು, ಶಮೀನಾ ಮಾರಜಿಸಾಬ್ ಇಟಗಿ-515 ಅಂಕಗಳು, ರೇಶ್ಮಾ ಕಾಸಿಂಸಾಬ್-514 ಅಂಕಗಳು, ಹೀನಾ ಮೌಲಾಸಾಬ್-510 ಅಂಕಗಳು.
ವಿಜ್ಞಾನ ವಿಭಾಗ: ಸಂಗೀತಾ ಗುಂಡಪ್ಪ- 519 ಅಂಕಗಳು.
ಮೇ 5ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಮೇ.04.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಉಪ ವಿತರಣಾ ಕೇಂದ್ರದಿಂದ 33/11 ಕೆ.ವಿ.  ಗೊಬ್ಬೂರ ಕೇಂದ್ರದಲ್ಲಿ ಸುಧಾರಣಾ ಕಾರ್ಯ ಕೈಗೊಂಡಿರುವ ಪ್ರಯುಕ್ತ  ಮೇ 5ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಉಪ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫೀಡರ್ ವ್ಯಾಪ್ತಿಯ ಗ್ರಾಮ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
33/11ಕೆ.ವಿ. ಗೊಬ್ಬೂರ ವಿತರಣಾ ಕೇಂದ್ರ: ಎಫ್-1 ಗೊಬ್ಬೂರ ಬಿ ಐಪಿ, ಎಫ್-2 ಗೊಬ್ಬೂರ ಎನ್.ಜೆ.ವಾಯ್. ಎಫ್-3 ಬೀದನೂರ ಮತ್ತು ಎಫ್-4 ಹಾವನೂರ ಮತ್ತು ಎಫ್. 5 ಎಸ್.ಆರ್.ಕೆ. 


No comments:

Post a Comment