GULBARGA VARTHE

GULBARGA VARTHE

Thursday, 3 May 2018

news and photo date: 3-5-2018

ಮತದಾನಕ್ಕೆ ಕೌಂಟ್ ಡೌನ್-09
****************************
ಎಲ್ಲರಿಗೂ ಒಂದೇ ಮತ-ಕಡ್ಡಾಯವಾಗಿ ಚಲಾಯಿಸಿ
********************************************
ಕಲಬುರಗಿ,ಮೇ.03.(ಕ.ವಾ.)-ದೇಶದ ಸಂವಿದಾನವು ತಮ್ಮ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಶ್ರೀಮಂತ-ಬಡವ, ನಗರ-ಗ್ರಾಮೀಣ ಪ್ರದೇಶ ಹಾಗೂ ಹೆಣ್ಣು-ಗಂಡುಗಳೆಂಬ ಬೇಧವಿಲ್ಲದೇ ಒಂದೆ ಸಮನಾದ ಮತದಾನದ ಹಕ್ಕು ನೀಡಿದೆ. ಇದನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
ಅವರು ಗುರುವಾರ ಕಲಮೂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕವನಳ್ಳಿ ತಾಂಡಾದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾನದ ಹಾಗೂ ವಿವಿಪ್ಯಾಟ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮತದಾರರು ತಾವು ಯಾರಿಗೆ ಮತ ಹಾಕಿದ್ದೇವೆ ಹಾಗೂ ಆ ಮತ ಅವರ ಖಾತೆಗೆ ಜಮಾ ಆಗುತ್ತಿರುವ ಕುರಿತು ಖಾತರಿ ಮಾಡಿಕೊಳ್ಳಲು ಈ ಬಾರಿಯ ಚುನಾವಣೆಯಲ್ಲಿ ವಿವಿಪ್ಯಾಟ್ ಎಂಬ ನೂತನ ಯಂತ್ರ ಪರಿಚಯಿಸಲಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತದಾನ ಮಾಡಿದ ನಂತರ ಯಾರಿಗೆ ಮತದಾನ ಮಾಡಲಾಗಿದೆ ಎಂಬುವುದು ವಿವಿಪ್ಯಾಟ್‍ನಲ್ಲಿ 7 ಸೆಕೆಂಡುಗಳ ಕಾಲ ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ನೀಡಿದ ಸ್ವೀಪ್ ಅಧ್ಯಕ್ಷರು ಬ್ಯಾಲೆಟ್ ಯಂತ್ರದಲ್ಲಿ ಆಯಾ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಜೊತೆಗೆ ಕೊನೆಗೆ ನೋಟಾ ಎಂಬ ಬಟನ್ ಸಹ ಇರುತ್ತದೆ. ಆಯಾ ಮತಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಹಾಕದೇ ಇರುವವರು ನೋಟಾಕ್ಕೆ ಮತ ಹಾಕಬಹುದು. ನಾವು ಯಾರಿಗೂ ಮತ ಹಾಕುವುದಿಲ್ಲ ಎಂದು ಮತದಾನದಿಂದ ವಂಚಿತರಾಗಬಾರದು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದರು.
ಕವನಳ್ಳಿ ತಾಂಡಾ ನಿವಾಸಿಗಳಾದ ಅಂಬರೀಬಾಯಿ ಕಮಲು, ಗುರಜಿನಬಾಯಿ ಗೋವಿಂದ ಪವಾರ ಹಾಗೂ ಮೋತಿರಾಮ ಶಂಕರ ಪವಾರ ಮಾತನಾಡಿ, ನಾವು ಈ ಹಿಂದಿನ ಚುನಾವಣೆಗಳಲ್ಲಿ ಯಾರಿಂದಲೂ ಹಣ ಪಡೆದು ಮತ ಹಾಕಿಲ್ಲ. ಈ ಚುನಾವಣೆಯಲ್ಲಿಯೂ ಯಾರಿಂದಲೂ ಹಣ ಪಡೆಯುವುದಿಲ್ಲ ಹಾಗೂ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುತ್ತೇವೆ. ಈ ಚುನಾವಣೆಯಲ್ಲಿ ಮತದಾನ ಖಾತ್ರಿ ಮಾಡಿಕೊಳ್ಳಲು ಅಳವಡಿಸಿರುವ ಯಂತ್ರದಿಂದ ನಮಗೆ ವಿಶ್ವಾಸ ಹೆಚ್ಚಾಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಪ್ಯಾಟ್ ಮಾಹಿತಿ ನೀಡಲಾಯಿತು. ಮತದಾನದ ಜಾಗೃತಿ ಮೂಡಿಸುವ ಕರಪ್ರಗಳನ್ನು ವಿತರಿಸಲಾಯುತು ಹಾಗೂ ಎಲ್ಲರಿಗೂ ಮತದಾನದ ಪ್ರತಿಜ್ಞಾ ವಿಧಿ ಬೊಧಿಸಲಾಯಿತು.
ನಂತರ ಕಲಬುರಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ವರ್ತಕರಿಗೆ, ಹಮಾಲರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್ ಮಾತನಾಡಿ, ಮತದಾನದ ಹಕ್ಕು 5 ವರ್ಷಕ್ಕೆ ಒಂದು ಬಾರಿ ಮಾತ್ರ ಪ್ರಾಪ್ತವಾಗುತ್ತದೆ. ಮೇ 12 ರಂದು ಮತದಾನದ ದಿನ ಮತ ಚಲಾಯಿಸದೇ ಹೋದಲ್ಲಿ ನಂತರ ಮತ ಚಾಲಾಯಿಸಲು ಅವಕಾಶ ಇರುವುದಿಲ್ಲ. ಕಾರಣ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನದಿಂದ ವಂಚಿತರಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸಹ ಕಾರ್ಯದರ್ಶಿ ಸಂಪತ ಪಾಟೀಲ, ಕಲಬುರಗಿ ತಾಲೂಕು ಪಂಚಾಯತಿ ಕಾರ್ಯನಿವಾಹಕ ಅಧಿಕಾರಿ ಚಂದ್ರಕಾಂತ ಜಿವಣಗಿ, ಕಲಮೂಡ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಂಬಾರಾಯ ಕಟ್ಟೀಮನಿ, ಕಲಬುರಗಿ ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ ಮತ್ತಿತರ ಅಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮತದಾನದ ಪ್ರತಿಜ್ಞಾವಿಧಿ ಬೊಧಿಸಲಾಯಿತು.
ಪ್ರತಿ ಜಾಹೀರಾತಿಗೆ ಪ್ರಕಟಣೆ ನೀಡಿದವರ ವಿವರ ಮುದ್ರಣ ಕಡ್ಡಾಯ
**********************************************************
ಕಲಬುರಗಿ,ಮೇ.03.(ಕ.ವಾ.)-ಕರ್ನಾಟಕ ವಿಧಾನಸಭಾ ಚುನಾವಣೆ-2018 ಸಂಬಂಧಿಸಿದಂತೆ ಚುನಾವಣಾ ಪ್ರಚಾರ ಕುರಿತು ಜಾಹೀರಾತು ಪ್ರಕಟಿಸುವ ಪತ್ರಿಕೆಗಳು ತಮ್ಮ ಪತ್ರಿಕೆಗಳಲ್ಲಿನ ಪ್ರತಿ ಜಾಹೀರಾತಿನ ಮೇಲ್ಭಾಗದಲ್ಲಿ ‘ಜಾಹೀರಾತು’ ಹಾಗೂ ಕೊನೆಯಲ್ಲಿ ಜಾಹೀರಾತು ಪ್ರಕಟಣೆ ನೀಡಿದವರ ಹೆಸರು ಮತ್ತು ವಿಳಾಸವನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಸದಸ್ಯ ಕಾರ್ಯದರ್ಶಿ ಮೈಸೂರು ಗಿರೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ನೀಡಲಾಗುವ ಜಾಹೀರಾತುಗಳಿಗೆ ಪತ್ರಿಕೆಗಳು ಜಾಹೀರಾತು ನೀಡಿದವರ ಹೆಸರನ್ನು ಪ್ರಕಟಿಸುತ್ತಿಲ್ಲ ಎಂಬುದನ್ನು ಸಮಿತಿಯ ಗಮನಕ್ಕೆ ಬಂದಿರುತ್ತದೆ. ಇನ್ನು ಮುಂದೆ ಪ್ರತಿ ಜಾಹೀರಾತಿಗೆ ಮೇಲ್ಭಾಗದಲ್ಲಿ ‘ಜಾಹೀರಾತು’ ಹಾಗೂ ಕೊನೆಯಲ್ಲಿ ಜಾಹೀರಾತು ಪ್ರಕಟಣೆ ನೀಡಿದವರ ಹೆಸರು ಮತ್ತು ವಿಳಾಸವನ್ನು ಮುದ್ರಿಸದಿದ್ದಲ್ಲಿ ಅಂಥವರ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೇ 4 ರಿಂದ 6ರವರೆಗೆ ಅಂಚೆ ಮತಪತ್ರ ಚಲಾವಣೆ ವ್ಯವಸ್ಥೆ
******************************************************
ಕಲಬುರಗಿ,ಮೇ.03.(ಕ.ವಾ.)-ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯ ನಿರತರಾದ ಸಿಬ್ಬಂದಿಗಳಿಗೆ ಕಲಬುರಗಿ ಜಿಲ್ಲೆಯ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಂಚೆ ಮತದಾನ ಮಾಡಲು ಅಂಚೆ ಮತಪತ್ರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯ ನಿರತರಾದ ನೌಕರರು ಮೇ 4 ರಿಂದ 6 ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಆಯಾ ಸಂಬಂಧಪಟ್ಟ ಕ್ಷೇತ್ರದ ಅಂಚೆ ಮತಪತ್ರದ ಸೌಲಭ್ಯ ಕೇಂದ್ರಗಳಲ್ಲಿ (ಮತವಿರುವ ಕ್ಷೇತ್ರದಲ್ಲಿ) ಅಂಚೆ ಮತಪತ್ರ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ನೌಕರರು ತಮ್ಮ ಚುನಾವಣಾ ಗುರುತಿನ ಚೀಟಿ ಹಾಗೂ ಚುನಾವಣಾ ಕರ್ತವ್ಯ ನೇಮಕಾತಿ ಆದೇಶದೊಂದಿಗೆ ಹಾಜರಾಗಿ ಮತ ಚಲಾಯಿಸುವಂತೆ ಅವರು ಕೋರಿದ್ದಾರೆ.
ವಿಧಾನಸಭಾವಾರು ಸ್ಥಾಪಿಸಲಾದ ಅಂಚೆ ಮತ ಕೇಂದ್ರಗಳ ವಿವರ ಇಂತಿದೆ. ಅಫಜಲಪುರ: ಅಫಜಪುರ ತಹಶೀಲ್ದಾರರ ಕಚೇರಿ. ಜೇವರ್ಗಿ: ಜೇವರ್ಗಿ ತಹಶೀಲ್ದಾರರ ಕಚೇರಿ. ಚಿತ್ತಾಪುರ: ಚಿತ್ತಾಪುರ ತಹಶೀಲ್ದಾರರ ಕಚೇರಿ. ಸೇಡಂ: ಸೇಡಂ ಸ್ಟೇಶನ್ ರಸ್ತೆಯಲ್ಲಿರುವ ಸಹಾಯಕ ಆಯುಕ್ತರ ಕಚೇರಿ. ಚಿಂಚೋಳಿ: ಚಿಂಚೋಳಿ ತಹಶೀಲ್ದಾರರ ಕಚೇರಿ. ಕಲಬುರಗಿ ಗ್ರಾಮೀಣ: ಕಲಬುರಗಿ ಸುಪರ ಮಾರ್ಕೆಟಿನ ತಹಶೀಲ್ದಾರ ಕಚೇರಿ ಹತ್ತಿರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಂ.ಪಿ.ಹೆಚ್.ಎಸ್.). ಕಲಬುರಗಿ ದಕ್ಷಿಣ: ಕಲಬುರಗಿ ಮಹಾನಗರ ಪಾಲಿಕೆಯ ಹಳೆಯ ಕಟ್ಟಡ. ಕಲಬುರಗಿ ಉತ್ತರ: ಕಲಬುರಗಿ ಜಗತ್ ವೃತ್ತದ ಹೊಸ ಮಹಾನಗರ ಪಾಲಿಕೆ ಕಟ್ಟಡ. ಆಳಂದ: ಆಳಂದ ತಹಶೀಲ್ದಾರ ಕಚೇರಿ.


No comments:

Post a Comment