GULBARGA VARTHE

GULBARGA VARTHE

Monday, 14 May 2018

news and photo Date: 14-5-2018

ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು
*****************************
ಕಲಬುರಗಿ,ಮೇ.14.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 15ರಂದು ಬೆಳಗಿನ 8 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ಸುಮಾರು 485 ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಮತ ಎಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಗುಲಬರ್ಗಾ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಗುಲಬರ್ಗಾ ಗ್ರಾಮೀಣ ಮತ್ತು ಜೇವರ್ಗಿ ಹಾಗೂ ಪರೀಕ್ಷಾ ಭವನದಲ್ಲಿ ಆಳಂದ ಮತಕ್ಷೇತ್ರದ ಮತ ಎಣಿಕೆ ಮಾಡಲು ಮತ ಎಣಿಕಾ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಪ್ರತಿ ಮತಕ್ಷೇತ್ರದಲ್ಲಿ ಮತ ಎಣಿಕೆಗಾಗಿ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಮತ ಎಣಿಕೆ ಸುಪರವೈಸರ್, ಅಸಿಸ್ಟಂಟ್ ಹಾಗೂ ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗಿದೆ. ಸರಿ ಸುಮಾರು 19 ರಿಂದ 20 ಸುತ್ತುಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಬೆಳಿಗ್ಗೆ 7 ಗಂಟೆಯಿಂದ ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಅಂಚೆ ಮತಗಳನ್ನು ಸಹ ಎಣಿಕೆ ಮಾಡಲಾಗುವುದು. ಲಾಟರಿ ಮೂಲಕ ಪ್ರತಿ ಮತಕ್ಷೇತ್ರದಿಂದ ಒಂದು ಮತಗಟ್ಟೆಯನ್ನು ಆಯ್ಕೆ ಮಾಡಿ ಆ ಮತಗಟ್ಟೆಗೆ ಸಂಬಂಧಿಸಿದ ವಿವಿ ಪ್ಯಾಟ್ ಯಂತ್ರದಲ್ಲಿರುವ ಮತದಾನದ ಚೀಟಿಗಳನ್ನು ಎಣಿಕೆ ಮಾಡಲಾಗುವುದು. ಇದನ್ನು ಇ.ವಿ.ಎಂ. ಯಂತ್ರದ ಎಣಿಕೆಯೊಂದಿಗೆ ತಾಳೆ ನೋಡಲಾಗುವುದು ಎಂದರು.
ಮತ ಎಣಿಕಾ ಕೇಂದ್ರ ಹಾಗೂ ಸುತ್ತಮುತ್ತಲೂ ಸಂಪೂರ್ಣವಾಗಿ ಸಿಸಿ ಟಿ.ವ್ಹಿ. ಅಳವಡಿಸಲಾಗಿದೆ. ಮತದಾನಕ್ಕೆ ಬಳಸಿರುವ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್‍ಗಳನ್ನು ಭದ್ರಕೋಣೆಯಲ್ಲಿ ಸಂಗ್ರಹಿಸಲಾಗಿದೆ. ಮತ ಎಣಿಕೆ ಪ್ರಕ್ರಿಯೆಗೆ ಮೂರು ಹಂತಗಳ ಭದ್ರತೆಯನ್ನು ಒದಗಿಸಲಾಗಿದ್ದು, ಭದ್ರತೆಗೆ ಪ್ಯಾರಾ ಮಿಲಿಟರಿ, ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್ ಪೊಲೀಸ್ ಬಳಸಿಕೊಳ್ಳಲಾಗುತ್ತಿದೆ. ಮತ ಎಣಿಕೆಯನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲೆಯಾದ್ಯಂತ ಮೇ 13ರ ರಾತ್ರಿಯಿಂದ ಮೇ 16ರ ಬೆಳಗಿನವರೆಗೆ ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ಈ ಅವಧಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಹಾಗೂ ವಿಜೃಂಭಣೆಯನ್ನು ನಿಷೇಧಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು ಶೇ. 62.60 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಅಫಜಲಪುರ ಶೇ. 67.45, ಜೇವರ್ಗಿ ಶೇ. 68.58, ಚಿತ್ತಾಪುರ ಶೇ. 60.64, ಸೇಡಂ ಶೇ. 73.34, ಚಿಂಚೋಳಿ ಶೇ. 68.47, ಗುಲಬರ್ಗಾ ಗ್ರಾಮೀಣ ಶೇ. 60.34, ಗುಲಬರ್ಗಾ ದಕ್ಷಿಣ ಶೇ. 52.46, ಗುಲಬರ್ಗಾ ಉತ್ತರ ಶೇ. 49.99 ಹಾಗೂ ಆಳಂದ ಶೇ. 68.20 ರಷ್ಟು ಮತದಾನವಾಗಿದೆ. ವಾಡಿಕೆಯಂತೆ ಕಲಬುರಗಿ ನಗರದಲ್ಲಿರುವ ಗುಲಬರ್ಗಾ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗಿದೆ. ಸೇಡಂ ಮತಕ್ಷೇತ್ರವು ಅತೀ ಹೆಚ್ಚು ಮತದಾನಕ್ಕೆ ಭಾಜನವಾಗಿದೆ. ಜಿಲ್ಲೆಯಾದ್ಯಂತ ಕಡಿಮೆ ಮತದಾನವಾಗಲು ಬಿಸಿಲು ಹಾಗೂ ಮತದಾನ ದಿನದಂದು ಅನಿರೀಕ್ಷತವಾಗಿ ಸಾಯಂಕಾಲ ಸುರಿದ ಮಳೆ ಕಾರಣವಾಗಿರಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದೇ ಪ್ರಕರಣಗಳು ನಡೆದಿಲ್ಲ. ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳ ಭದ್ರತೆಯನ್ನು ಕಲ್ಪಿಸಲಾಗಿದೆ ಮೊದಲ ಹಂತವಾಗಿ ಭದ್ರ ಕೊಣೆ ಹತ್ತಿರ ಪ್ಯಾರಾ ಮಿಲಿಟರಿ ತಂಡವನ್ನು, ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಸುಮಾರು ಪ್ಯಾರಾ ಮಿಲಿಟರಿ, ಸಶಸ್ತ್ರ ಮೀಸಲು ಪಡೆ ಸೇರಿದಂತೆ ಸುಮಾರು 4000 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮತ ಎಣಿಕೆ ಕೇಂದ್ರದ ಭದ್ರತೆಗೆ ನೇಮಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಎನ್.ಐ.ಸಿ. ಅಧಿಕಾರಿ ಸುಧೀಂದ್ರ ಅವಧಾನಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜೀಜುದ್ದೀನ್ ಉಪಸ್ಥಿತರಿದ್ದರು.
ಮತ ಎಣಿಕೆ: ನಿಷೇಧಾಜ್ಞೆ ಜಾರಿ
****************************
ಕಲಬುರಗಿ,ಮೇ.14.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ಕಾರ್ಯ 2018ರ ಮೇ 15 ರಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಕಟ್ಟಡಗಳಲ್ಲಿ ನಡೆಯಲಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ವ್ಯಾಪ್ತಿಯಲ್ಲಿ ಮೇ 14 ರ ಸಂಜೆ 6 ಗಂಟೆಯಿಂದ ಮೇ 15ರ ಸಂಜೆ 6 ಗಂಟೆಯವರೆಗೆ ಸಿಆರ್.ಪಿ.ಸಿ ಕಾಯ್ದೆ 1973ರ ಕಲಂ 144ರ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗಡೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಹಾಗೂ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲುಗಳನ್ನು, ಕ್ಷಾರಪದಾರ್ಥ ಇಲ್ಲವೇ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಮತ್ತು ಎಸೆಯುವಂಥಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನೆಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳನ್ನು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಮತ ಎಣಿಕೆ ಕೇಂದ್ರ ವ್ಯಾಪ್ತಿಗೊಳಪಡುವ ಅವರಣದಲ್ಲಿ ಮೊಬೈಲ್, ಬೆಂಕಿ ಪಟ್ಟಣ, ಇಂಕ್ ಪೆನ್, ಬೀಡಿ, ಸಿಗರೇಟ್, ಗುಟಕಾ, ತಂಬಾಕು, ನೀರಿನ ಬಾಟಲ್ ಹಾಗೂ ಧಾರಕವಾದ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಸಹ ಶಿಕ್ಷಕಿ ಸುವರ್ಣಲತಾ ಕರ್ತವ್ಯಕ್ಕೆ ಹಾಜರಾಗಲು ಸೂಚನೆ
****************************************************
ಕಲಬುರಗಿ,ಮೇ.14.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಸಿಂಧನಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ (ಟಿ.ಜಿ.ಟಿ.) ಸುವರ್ಣಲತಾ ಅವರು 2008ರ ಜನವರಿ 31 ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಸದರಿ ಸಿಬ್ಬಂದಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಮೂರು ನೋಟೀಸು ಜಾರಿ ಮಾಡಲಾಗಿದೆ. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಂತಿಮ ನೋಟೀಸು ಸಹ ಜಾರಿ ಮಾಡಲಾಗಿದ್ದರೂ ಸಹ ಸದರಿ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.
ಸದರಿ ನೌಕರರು ಈ ಪತ್ರಿಕಾ ಪ್ರಕಟಗೊಂಡ 15 ದಿನದೊಳಗಾಗಿ ಸೇಡಂ ತಾಲೂಕಿನ ಸಿಂಧನಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ಒಂದು ವೇಳೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹ ಶಿಕ್ಷಕಿ ಶಕುಂತಲಾ ಕರ್ತವ್ಯಕ್ಕೆ ಹಾಜರಾಗಲು ಸೂಚನೆ
**************************************************
ಕಲಬುರಗಿ,ಮೇ.14.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಕುಂತಲಾ ಅವರು 2016ರ ಜನವರಿ 28ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಸದರಿ ಸಿಬ್ಬಂದಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಶಾಲೆಯ ಮುಖ್ಯಗುರುಗಳ ಮೂಲಕ ಮೂರು ನೋಟೀಸು ಜಾರಿ ಮಾಡಲಾಗಿದೆ. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಂತಿಮ ನೋಟೀಸು ಸಹ ಜಾರಿ ಮಾಡಲಾಗಿದ್ದರೂ ಸಹ ಸದರಿ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.
ಸದರಿ ನೌಕರರು ಈ ಪತ್ರಿಕಾ ಪ್ರಕಟಗೊಂಡ 15 ದಿನದೊಳಗಾಗಿ ರಾವೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ಅವಕಾಶ ನೀಡಲಾಗಿದೆ. ಒಂದು ವೇಳೆ ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**********************************************************************************
ಫೋಟೋ ಕ್ಯಾಪಶನ್ : ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶಕುಮರ ಅವರು ನಗರದ ಕಾಮರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಇಂದು ಬೆಳಿಗ್ಗೆ ಅಪಘಾತಕ್ಕೆ ಒಳಗಾಗಿರುವ ಅಫಜಲಪುರ ತಹಶೀಲ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮುಸ್ತಾಕ ಅವರ ಆರೋಗ್ಯವನ್ನು ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿನ ಯಶೋಧಾ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು.
**********************************************************************************

No comments:

Post a Comment