GULBARGA VARTHE

GULBARGA VARTHE

Friday, 6 April 2018

news date: 06--4--2018

ಚೌಕಿ ತಾಂಡಾದಲ್ಲಿ ವಾಂತಿಭೇದಿ ಪ್ರಕರಣ:
*************************************
24 ಗಂಟೆ ನಿರಂತರ ವೈದ್ಯಕೀಯ ಸೇವೆ ನೀಡಲು ಡಿ.ಹೆಚ್.ಓ. ಸೂಚನೆ
*************************************************************
ಕಲಬುರಗಿ,ಏ.06.(ಕ.ವಾ.)-ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಪ್ರಾಥಮಿಕ ಆರೋಗ್ಯ ಕೆಮದ್ರ ವ್ಯಾಪ್ತಿಯ ಚೌಕಿ ತಾಂಡದಲ್ಲಿ ಕಂಡುಬಂದಿರುವ ವಾಂತಿಭೇದಿ ಪ್ರಕರಣ ಪ್ರಸ್ತುತ ಹತೋಟಿಗೆ ಬಂದಿದ್ದು, ತಾಂಡದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ಕೆಂದ್ರ ಸ್ಥಾಪಿಸಿ ಇಲ್ಲಿ 24 ಗಂಟೆ ಕಾಲ ವೈದ್ಯಕೀಯ ಚಿಕಿತ್ಸೆ ನೀಡಲು ಅಗತ್ಯ ವೈದ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಧವರಾವ ಕೆ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೇ ರೋಗಿಯ ತೀವ್ರತೆಯನ್ನು ನೋಡಿ ಮುಂದಿನ ಹಂತದ ಚಿಕಿತ್ಸೆಗೆ ಅನುಕೂಲವಾಗುವಂತೆ ಚಿಮ್ಮನಚೋಡ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವಶ್ಯಕ ಔಷಧಿಗಳನ್ನು ಸ್ಟಾಕ್ ಇಟ್ಟುಕೊಳ್ಳುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಲಾಗಿದೆ ಎಂದ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚಿಸಲಾಗಿದೆ. ಸಿಬ್ಬಂದಿಗಳ 4 ತಂಡ ರಚಿಸಲಾಗಿದ್ದು, ಈ ತಂಡ ಮನೆ ಮನೆ ಭೇಟಿ ನೀಡಿ ಪ್ರತಿದಿನ ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ತಿಳಿಸಲಾಗಿದೆ ಎಂದರು.
ಏಪ್ರಿಲ್ 1ರಂದು ತಾಂಡಾದ ಜನರು ಪಕ್ಕದ ಮೆಹಬೂಬನಗರ ಜಿಲ್ಲೆಯ ಬಾಬಜಿ ನಗರ ನಡೆಯುವ ಕಾಳಿಕಾ ದೇವಿ ಜಾತ್ರೆಗೆ ಹೋಗಿ ಅಲ್ಲಿ ಕುರಿ ಮಾಂಸ ಸೇವನೆ ಮಾಡಿ ವಾಪಸ್ಸಾಗಿರುತ್ತಾರೆ. ಮಾಂಸ ಸೇವನೆ ಮಾಡಿದವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಂತಿಭೇದಿಯಾಗಿದೆ. ಏಪ್ರಿಲ್ 3ರಂದು 2, ಏಪ್ರಿಲ್ 4 ಹಾಗೂ ಏಪ್ರಿಲ್ 5ರಂದು ತಲಾ 11 ಸೇರಿದಂತೆ ಒಟ್ಟು 24 ವಾಂತಿಬೇಧಿ ಪ್ರಕರಣಗಳು ದಾಖಲಾಗಿವೆ.
ಈ ಕುರಿತು ಉಪ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಕಾಲರಾ ನಿಯಂತ್ರಣ ತಂಡವು ಏಪ್ರಿಲ್ 5ರಂದು ಚಿಮ್ಮನಚೋಡ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಚೌಕಿ ತಾಂಡಾಕ್ಕೆ ಭೇಟಿ ನೀಡಿ ಪ್ರತಿ ಮನೆ ಸಮೀಕ್ಷೆ ಮಾಡಿದಾರೆ. ವಾಂತಿ ಭೇದಿ ಪ್ರಕರಣಗಳು ಕಂಡು ಬಂದ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಶಿಕ್ಷಣ ಹಾಗೂ ಹಲೋಜಿನ ಮಾತ್ರೆ, ಓ.ಆರ್.ಎಸ್. ಪಾಕೇಟ್‍ಗಳನ್ನು ವಿತರಿಸಲಾಗಿದೆ. ಇದಲ್ಲದೆ ಶುಕ್ರವಾರ ಖುದಾಗಿ ತಾವು ತಾಂಡಕ್ಕೆ ಭೇಟಿ ನೀಡಿದ್ದು, ಅಲ್ಲಿ ಒದಗಿಸುತ್ತಿರುವ ವೈದ್ಯೋಪಚಾರವನ್ನು ಹಾಗೂ ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳ ಆರೋಗ್ಯ ವಿಚಾರಿಸಿದ್ದು, ಎಲ್ಲರು ಗುಣಮುಖರಾಗುತ್ತಿದ್ದಾರೆ ಎಂದು ಡಿ.ಎಚ್.ಓ. ತಿಳಿಸಿದ್ದಾರೆ.
ಚೌಕಿ ತಾಂಡಾದಲ್ಲಿ 150 ಮನೆಗಳು ಇದದು, 950 ಜನಸಂಖ್ಯೆ ಇದೆ. ಒಂದು ಓವರ್ ಹೆಡ್ ಟ್ಯಾಂಕ್, ಮಿನಿ ವಾಟರ್ ಸರಬರಾಜು ಇದ್ದು, ತಾಂಡಕ್ಕೆ ನೀರು ಪೂರೈಸುವ ನೀರಿನ ಮೂಲಗಳಿಗೂ ಭೇಟಿ ನೀಡಿರುವ ಕಾಲರಾ ತಂಡ, ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುವಂತೆ ಸಲಹೆ ನೀಡಿದೆ.
ಏಪ್ರಿಲ್ 7ರಂದು ಇ.ಎಸ್.ಐ.ಸಿ. ಅಡಿಟೋರಿಯಂನಲ್ಲಿ ವಿಶ್ವ ಆರೋಗ್ಯ ದಿನಾಚರಣೆ
ಕಲಬುರಗಿ,ಏ.06.(ಕ.ವಾ.)-ಕಲಬುರಗಿ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದಿಂದ ಏಪ್ರಿಲ್ 7ರಂದು ಬೆಳಿಗ್ಗೆ 9 ಗಂಟೆಗೆ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ನಿರಂತರ ವೈದ್ಯಕೀಯ ಕಾರ್ಯಾಗಾರವನ್ನು ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಇ.ಎಸ್.ಐ.ಸಿ. ಅಡಿಟೋರಿಯಂದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯ ಉದ್ದೇಶ ಸಾಧಿಸಲು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪರಿಣಿತರು ವಿವಿಧ ಆರೋಗ್ಯ ಸೇವೆಗಳ/ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವರು. ಇಎಸ್‍ಐಸಿ ಮೆಡಿಕಲ್ ಕಾಲೇಜಿನ ಡೀನ್ ಡಾ. ಪ್ರಶಾಂತ ಪೌನಿಪಗರ ಅವರು ವಿಶ್ವ ಆರೋಗ್ಯ ದಿನಾಚರಣೆಯನ್ನು ಐತಿಹಾಸಿಕ ಹಾಗೂ ದೊಡ್ಡ ಪ್ರಮಾಣಲ್ಲಿ ಆಚರಿಸುವ ಮೂಲಕ ವಿವಿಧ ಶೈಕ್ಷಣಿಕ ಕಾಲೇಜುಗಳಿಂದ ಎಲ್ಲ ಬೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಒಂದೇ ಛಾವಣಿಯಡಿಯಲ್ಲಿ ಪ್ರಯೋಜನ ಪಡೆಯುವಂತೆ ಅವಕಾಶ ಕಲ್ಪಿಸಿದ್ದಾರೆ.
ವಿವಿಧ ವೈದ್ಯಕೀಯ ಕಾಲೇಜು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾರ್ಯಾಗಾರದಲ್ಲಿ ಸುಮಾರು 350 ಪ್ರತಿನಿಧಿಗಳು ಪಾಲ್ಗೊಳ್ಳವರು. ಸಾರ್ವತ್ರಿಕ ಆರೋಗ್ಯ ರಕ್ಷಣೆ (ಯುನಿವರ್ಸಲ್ ಹೆಲ್ತ್ ಕವರೇಜ್) ಈ ವರ್ಷದ ವಿಶ್ವ ಆರೋಗ್ಯ ದಿನಾಚರಣೆಯ ಘೋಷಣೆಯಾಗಿದೆ.
ರಾಜ್ಯ ಸರ್ಕಾರಿ ಕಚೇರಿಗಳ ವೇಳೆ ಬದಲಾವಣೆ
***************************************
ಕಲಬುರಗಿ,ಏ.06.(ಕ.ವಾ.)-ಬೇಸಿಗೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿರುವ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಿ ಕಚೇರಿಗಳ ಸಮಯವನ್ನು 2018ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನ್ವಯವಾಗುವಂತೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಿಗದಿಪಡಿಸಿ ರಾಜ್ಯ ಸರ್ಕಾರವು ಏಪ್ರಿಲ್ 6ರಂದು ಆದೇಶ ಹೊರಡಿಸಿದೆ.
ಈ ಜಿಲ್ಲೆಗಳಲ್ಲಿನ ಎಲ್ಲ ರಾಜ್ಯ ಸರ್ಕಾರಿ ನೌಕರರು ಬದಲಾದ ಕಚೇರಿ ವೇಳಾಪಟ್ಟಿಯಂತೆ ತಮ್ಮ ಕಚೇರಿಗಳಲ್ಲಿನ ಕರ್ತವ್ಯಗಳನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸತಕ್ಕದ್ದು. ಇದಲ್ಲದೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ/ ನೌಕರರು ಚುನಾವಣಾ ಅಧಿಕಾರಿಗಳ ಆದೇಶದಂತೆ ಚುನಾವಣಾ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿರ್ವಹಿಸಬೇಕೆಂಬ ಷರತ್ತಿಗೊಳಪಟ್ಟು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಎಸ್.ಸುಜಾತಾ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಏಪ್ರಿಲ್ 14 ರಿಂದ ರಂಗಾಯಣದಲ್ಲಿ ಚಿಣ್ಣರ ಮಕ್ಕಳ ಬೇಸಿಗೆ ಶಿಬಿರ
********************************************************
ಕಲಬುರಗಿ,ಏ.06.(ಕ.ವಾ.)-ಕಲಬುರಗಿ ರಂಗಾಯಣದಿಂದ 8 ರಿಂದ 14 ವರ್ಷದೊಳಗಿನ ಮಕ್ಕಳಿಗೆ “ಚಿಣ್ಣರ ಮೇಳ” ಬೇಸಿಗೆ ಶಿಬಿರವನ್ನು ಇದೇ ಏಪ್ರಿಲ್ 14ರಿಂದ ಮೇ 13ರವರೆಗೆ ಕಲಬುರಗಿ ರಂಗಾಯಣದ ಸಮುಚ್ಛಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ತಿಳಿಸಿದ್ದಾರೆ.
ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಜಾನಪದ ಕಲೆ, ಅಂಗಿಕ ಅಭಿನಯ, ವಾಚಿಕ ಅಭಿನಯ, ಜಾನಪದ ನೃತ್ಯ, ನಾಟಕ, ಆತ್ಮ ವಿಶ್ವಾಸ, ಪ್ರಸಾದನ, ವಸ್ತ್ರಾಭರಣ, ರಂಗ ಸಂಗೀತ, ರಂಗಸಜ್ಜಿಕೆ, ರಂಗ ಪರಿಕರ ಮತ್ತಿತರ ವಿಷಯಗಳ ಕುರಿತು ತರಬೇತಿ ನೀಡಲಾಗುವುದು. ಶಿಬಿರದ ಕೊನೆಯಲ್ಲಿ ನಾಲ್ಕು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಈ ಶಿಬಿರವು ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ನಾಟಕದಲ್ಲಿ ಅತ್ಯುತ್ತಮ 4 ನಟ ಹಾಗೂ ನಟಿಯರಿಗೆ ತಲಾ 1000 ರೂ. ಗಳು ಹಾಗೂ 4 ಪೋಷಕ ನಟ ನಟಿಯರಿಗೆ ತಲಾ 750 ರೂ. ಗಳ ಬಹುಮಾನದ ಜೊತೆಗೆ ಟ್ರೋಪಿ ಹಾಗೂ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ಕಲಬುರಗಿ ರಂಗಾಯಣದಿಂದ ನೀಡಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ರಂಗಾಯಣ ಕಚೇರಿಯಿಂದ ಪಡೆದು ಭರ್ತಿ ಮಾಡಿ ಏಪ್ರಿಲ್ 10ರೊಳಗಾಗಿ ಸಲ್ಲಿಸಬೇಕು. ಕೇವಲ 100 ಮಕ್ಕಳಿಗೆ ಮಾತ್ರ ಪ್ರವೇಶವಿದ್ದು, ಮೊದಲ ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ದೂರವಾಣಿ ಸಂಖ್ಯೆ 08472-227735 ಹಾಗೂ ಮೊಬೈಲ್ ಸಂಖ್ಯೆ ಮೊಬೈಲ್ ಸಂಖ್ಯೆ 6361405208ನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

No comments:

Post a Comment