GULBARGA VARTHE

GULBARGA VARTHE

Monday, 30 April 2018

News and photo Date: 30-4-2018

 ಎರಡು ದಿನಗಳಲ್ಲಿ ಕುಡಿಯುವ ನೀರು ಸರಬರಾಜು ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ
ಕಲಬುರಗಿ,ಏ.30.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಜೂನ್ ಅಂತ್ಯದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳನ್ನು ಗುರುತಿಸಿ ಅಂತಹ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲು ಅನುಕೂಲವಾಗುವಂತೆ ಸೂಕ್ತ ಕ್ರಿಯಾ ಯೋಜನೆಯನ್ನು ಇನ್ನೇರಡು ದಿನಗಳಲ್ಲಿ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು. 
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದ  ಕುಡಿಯುವ ನೀರಿನ ಸಮಸ್ಯೆ ಕುರಿತು ಸಂಭವನೀಯ ಕ್ರಿಯಾ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಬೋರವೆಲ್‍ಗಳನ್ನು ಗುರುತಿಸಿ, ನೀರಿನ ಮಟ್ಟ ಕಡಿಮೆಯಿರುವ ಹಾಗೂ ಈಗಾಗಲೇ ನೀರು ಬತ್ತಿ ಹೋಗಿರುವ ಬೋರವೇಲ್‍ಗಳನ್ನು ಫ್ಲಶಿಂಗ್ ಅಥವಾ ಹೆಚ್ಚಿನ ಆಳ ಮಾಡಲು ಕ್ರಮ ಜರುಗಿಸಿ ಪುನ: ಬೋರವೇಲ್‍ಗಳಲ್ಲಿ ನೀರು ಲಭ್ಯವಾಗುವ ಹಾಗೆ ನೋಡಿಕೊಳ್ಳಬೇಕು ಎಂದರು.
ಸಧ್ಯ ಬೋರವೆಲ್‍ಗಳಲ್ಲಿ ನೀರಿದ್ದು, ಮುಂದಿನ ದಿನಗಳಲ್ಲಿ ಬೇಸಿಗೆಯಿಂದ ನೀರಿನ ಮಟ್ಟ ಕುಸಿಯುವುದರಿಂದ ಬೋರವೆಲ್‍ಗಳಲ್ಲಿ ನೀರು ಲಭ್ಯವಾಗುವುದಿಲ್ಲ ಎಂಬ ಸಾಧ್ಯತೆಗಳನ್ನು ಮನಗಂಡು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್  ಖುದ್ದಾಗಿ ಪರಿಶೀಲಿಸಿ ವರದಿ ನೀಡಬೇಕು. ಬೇರೆ ಖಾಸಗಿ ಜಲ ಮೂಲಗಳಿಂದ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿದ್ದರೆ ಅಂಥಹ ಮೂಲಗಳನ್ನು ಗ್ರಾಮ ಪಂಚಾಯಿತಿವಾರು ಗುರುತಿಸಿ ಲಭ್ಯವಿರುವ ನೀರಿನ ಪ್ರಮಾಣವನ್ನು ನಮೂದಿಸಿ ಮುಂದಿನ 48 ಗಂಟೆಯೊಳಗಾಗಿ ವರದಿ ಸಲ್ಲಿಸಬೇಕು ಎಂದರು. 
ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಸಧ್ಯ ಇಲ್ಲದಿದ್ದರೂ ಮೇ ತಿಂಗಳಲ್ಲಿ ಸಮಸ್ಯೆ ಉಲ್ಬಣವಾಗಬಹುದು. ಅಧಿಕಾರಿಗಳು ಕುಡಿಯುವ ನೀರು ಪೂರೈಸಲು ಸಿದ್ಧತೆಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರು ಸರಬರಾಜಿಗೆ ಪ್ರಥಮಾದ್ಯತೆ ನೀಡಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಜಲಮೂಲ ಇಲ್ಲದೆ ಸಮರ್ಪಕ ನೀರು ಸರಬರಾಜು ಮಾಡಲು ಸಾಧ್ಯವೇ ಇಲ್ಲ ಎಂಬ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಅಂಥಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು. 
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವನಗೌಡ ಪಾಟೀಲ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.  
ಮತದಾನಕ್ಕೆ ಕೌಂಟ್ ಡೌನ್-12
ರೈತರು ಮತ್ತು ರೈತ ಅನುವುಗಾರರಿಗೆ ಮತದಾನದ ಜಾಗೃತಿ 
ಕಲಬುರಗಿ,ಏ.30.(ಕ.ವಾ.)-ಈ ಚುನಾವಣ್ಯಾಗ ನಾವು ಯಾರಿಗಿ ಓಟ್ ಹಾಕಿವಿ ಅನ್ನುದು ಮಶಿನಿನ್ಯಾಗ ನೋಡಿ ಖಾತ್ರಿ ಮಾಡ್ಕೋಬಹುದು ಅಂತ ವಿಡಿಯೋ ತೋರಸ್ಯಾರ. ಇದು ಭಾಳ ಛಲೋ ಕೆಲಸಾ ಆಗೈತ್ರಿ ಎಂದು ರಾವೂರ ಗ್ರಾಮದ ರೈತ ವೆಂಕಣ್ಣ ಹೊಲಗೇರಿ ಹೇಳಿದರು. 
ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೊಟನೂರಿನ ಕೃಷಿ ತರಬೇತಿ ಕೇಂದ್ರದಲ್ಲಿ ಏಳು ತಾಲೂಕಿನ ಪ್ರಗತಿ ಪರ ರೈತರಿಗಾಗಿ, ರೈತ ಅನುವುಗಾರರಿಗಾಗಿ  ಹಾಗೂ ಕೃಷಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತದಾನ ಜಾಗೃತಿಯ ವಿಡಿಯೋ ವೀಕ್ಷಿಸಿ ವೆಂಕಣ್ಣ ಹೊಲಗೇರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 
   ನಮ್ಮ ಮನ್ಯಾಗ್ ಒಟ್ಟ ಹತ್ತ ಮಂದಿ ಅದೀವರಿ. ಇದರ್ಯಾಗ 9 ಮಂದಿಗಿ ಓಟಿನ ಚೀಟಿ ಐತ್ರಿ. ಎಲ್ಲಾರಿಗಿ ಮೇ 12ಕ್ಕ ಬೂತಿಗಿ ಕರಕೊಂಡ ಹೋಗಿ  ಓಟ್ ಮಾಡಸ್ತಿನ್ರಿ. ಛೊಲೋ ಮನಷ್ಯಾನ್ನ ಗೆಲ್ಲಸಲಾಕ  ಎಲ್ಲಾರೂ ಓಟ್ ಮಾಡಬೇಕ್ರಿ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, 18 ವರ್ಷದ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಹಿಂದಿನ ಚುನಾವಣೆಗಳಲ್ಲಿ ಸರಾಸರಿಯಾಗಿ ಶೇ. 70 ರಷ್ಟು ಮತದಾನವಾಗಿದೆ. ಈ ಬಾರಿಯ ಚುನಾವಣೆಯಲ್ಲಿ   ಶೇ. 100 ರಷ್ಟು  ಮತ ಚಲಾಯಿಸಿ ಎಲ್ಲರಿಗೂ ಬೇಕಾಗಿರುವ ಜನಪ್ರತಿನಿಗಳನ್ನು ಆಯ್ಕೆ ಮಾಡಬೇಕು. ಯಾರೂ ಮತದಾನದಲ್ಲಿ ಭಾಗವಹಿಸಲು ಆಸಕ್ತಿ ತೋರುವುದಿಲ್ಲ ಅಂಥವರನ್ನು ಪ್ರೇರೇಪಿಸಬೇಕು. 5 ವರ್ಷಕ್ಕೆ ಒಂದು ಬಾರಿ ಮಾತ್ರ ಮತದಾನದ ಹಕ್ಕು ಲಭ್ಯವಾಗುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಸ್ವತಂತ್ರವಾಗಿ ಬದುಕುವ ವ್ಯವಸ್ಥೆ ಇದ್ದು, ಚುನಾವಣೆಗಳ ಮೂಲಕ ತಮಗೆ ಇಷ್ಟವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ನೀಡಲಾಗಿದೆ. ಈ ಹಕ್ಕನ್ನು ಎಲ್ಲರೂ ಕಡ್ಡಾಯವಾಗಿ ಚಲಾಯಿಸಬೇಕೆಂದು ತಿಳಿಸಿದರು. 
ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ ಮಾತನಾಡಿ, ರೈತ ಬಾಂಧವರೆಲ್ಲರೂ ಮತದಾನದ ದಿನದಂದು ಕಡ್ಡಾಯವಾಗಿ ಮತ ಚಲಾಯಿಸಬೇಕು. ರೈತ ಅನುವುಗಾರರು ಎಲ್ಲ ರೈತರು ಮತದಾನ ಮಾಡುವ ಹಾಗೆ ಪ್ರೇರೇಪಿಸಬೇಕು. ಎಲ್ಲ ರೈತರು ಕಡ್ಡಾಯವಾಗಿ ಮತದಾನ ಮಾಡುವ ಹಾಗೆ ನೋಡಿಕೊಳ್ಳಬೇಕು.  ಎಲ್ಲ ಚುನಾವಣೆಗಳಲ್ಲಿ ಕೇವಲ ಶೇ. 60 ರಷ್ಟು ಮತದಾನವಾಗಿ ಇನ್ನುಳಿದ ಶೇ. 40 ರಷ್ಟು ಮತದಾರರ ಜನಪ್ರತಿನಿಧಿಗಳು ಆಯ್ಕೆಯಾಗುವುದಿಲ್ಲ. ಎಲ್ಲರೂ ಮತದಾನ ಮಾಡುವ ಮೂಲಕ ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕೆಂದು ತಿಳಿಸಿದರು. 
ವಿಕಲಚೇತನರು ಸರಾಗವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಅನುಕೂಲವಾಗುವ ಹಾಗೆ ಎಲ್ಲ ವ್ಯವಸ್ಥೆಗಳನ್ನು ಚುನಾವಣಾ ಆಯೋಗದಿಂದ ಮಾಡಲಾಗುತ್ತಿದೆ ಎಂಬ ವಿಡಿಯೋ ವೀಕ್ಷಿಸಿ ತುಂಬಾ ಆನಂದವಾಯಿತು. ವಿಕಲಚೇತನರ ಮತದಾನಕ್ಕಾಗಿ ಆಯೋಗ ಕೈಗೊಂಡ ಕ್ರಮ ತುಂಬಾ ಚೆನ್ನಾಗಿದ್ದು, ವಿಕಲಚೇತನರು ಮತಗಟ್ಟೆಗೆ ಆಗಮಿಸುವಲ್ಲಿ ಆಗುವ ತೊಂದರೆಗಳಿಂದ ಮತದಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಂದೋಲಾ ಗ್ರಾಮದ  ವಿಕಲಚೇತನ ರೈತ ಶಿವಶರಣಪ್ಪ ಧುಮ್ಮದ್ರಿ ಅಭಿಪ್ರಾಯಪಟ್ಟರು. 
ಕಾರ್ಯಕ್ರಮದ ಅಂಗವಾಗಿ ಎಲ್ಲರಿಗೂ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಚುನಾವಣಾ ಆಯೋಗದಿಂದ ನೀಡಿರುವ ವಿಡಿಯೋ ಪ್ರದರ್ಶನ ಮಾಡಲಾಯಿತು. ಜಿಲ್ಲೆಯ ಸುಮಾರು 200 ಪ್ರಗತಿಪರ ರೈತರು ಹಾಗೂ 256 ರೈತ ಅನುವುಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ ಬಿಸ್ವಾಸ್, ಸ್ವೀಪ್ ನೋಡಲ್ ಅಧಿಕಾರಿ ಮೈಸೂರು ಗಿರೀಶ, ಜಿಲ್ಲಾ ಪಂಚಾಯಿತಿ ಸಹ ಕಾರ್ಯದರ್ಶಿ ಸಂಪತ್ ಪಾಟೀಲ, ಯೋಜನಾ ನಿರ್ದೇಶಕ ಸೂರ್ಯಕಾಂತ, ಕಲಬುರಗಿ ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೋಡ, ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.  
ಪ್ರಧಾನ ಜಿಲ್ಲಾ ನ್ಯಾಯಾಧೀಶರಿಂದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ
ಕಲಬುರಗಿ,ಏ.30.(ಕ.ವಾ.)- ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿ.ವಿ. ಮಲ್ಲಾಪುರೆ ಅವರು ಸೋಮವಾರ ಕಲಬುರಗಿ ನಗರದ ಎಂ.ಎಸ್.ಕೆ. ಮಿಲ್ ಹತ್ತಿರದ ಕಣ್ಣಿ ಮಾರುಕಟ್ಟೆಯಲ್ಲಿ  ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ, ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಸಹರಾ ಸೇವಾ ಸಂಸ್ಥೆ ಹಾಗೂ ಡಾನ್ ಬಾಸ್ಕೋ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 
ಕಣ್ಣಿ ಮಾರ್ಕೆಟ್‍ಗೆ ಆಗಮಿಸಿದ್ದ ಎಲ್ಲ ತರಕಾರಿ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು. ಮೇ 12ರಂದು ಕಡ್ಡಾಯವಾಗಿ ತಪ್ಪದೇ ಮತದಾನ ಮಾಡಲು ತಿಳಿಸಲಾಯಿತು. ಯಾವುದೇ ಕಾರಣಕ್ಕೂ ತಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬಾರದೆಂದು ಜಾಗೃತಿ ಮೂಡಿಸಲಾಯಿತು. 
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ, ಸಂತೋಷ ಭೈರಾಮಡಗಿ, ರಘೋತ್ತಮ ಸರಾಫ್, ಸಂಜೀವಕುಮಾರ ಡೊಂಗರಗಾಂವ, ಬಿ.ಎಸ್. ಪಾಟೀಲ, ಸಂಗಮೇಶ ನಂದಗಿ, ಲಕ್ಷ್ಮೀಕಾಂತ, ಯಶವಂತರಾವ, ವಿಠ್ಠಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. 

ಮೇ 1ರಂದು ಇಂದಿರಾ ಕ್ಯಾಂಟೀನ್ ಬಂದ
ಕಲಬುರಗಿ,ಏಪ್ರಿಲ್.30.(ಕ.ವಾ.)-ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ 2018ರ ಮೇ 1ರಂದು ಕಲಬುರಗಿ ನಗರದ ಎಲ್ಲ ಇಂದಿರಾ ಕ್ಯಾಂಟೀನ್‍ಗಳು ಬಂದ ಇರುತ್ತದೆ. ಕಲಬುರಗಿ ನಗರದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಮೇ 1ರಂದು ಅಸಂಘಟಿತ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕಲಬುರಗಿ,ಏಪ್ರಿಲ್.30.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಅಸಂಘಟಿತ ಕೂಲಿ ಕಾರ್ಮಿಕರಿಗೆ 2018ರ ಮೇ 1 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್) ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಅಯುಕ್ತ ರಘುನಂದನಮೂರ್ತಿ ತಿಳಿಸಿದ್ದಾರೆ. 
ನಗರದಲ್ಲಿರುವ ಮನೆ ಕೆಲಸ ನಿರ್ವಹಿಸುವ, ಕೂಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರಿಗೆ ಈ ಶಿಬಿರವನ್ನು ಹಮ್ಮಿಕೊಂಡು ಅಂದೇ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು. ಮಹಾನಗರ ಪಾಲಿಕೆಯ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಮತ್ತು ನಗರದ ವಿವಿಧಡೆ ಕೆಲಸ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಈ ಶಿಬಿರದ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮೇ 1ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
ಕಲಬುರಗಿ,ಏ.30.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕ್ರೇಡಾಯ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ” ಅಂಗವಾಗಿ ಅಸಂಘಟಿತ ಕಾರ್ಮಿಕರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು 2018ರ ಮೇ 1ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ (ಹೈಕೋರ್ಟ್ ಹಿಂದುಗಡೆಯಿರುವ) ಶರಣಸಿರಸಗಿಯ ಕಾಶಿ ಕಮಲ  ಗೃಹದಲ್ಲಿ ಏರ್ಪಡಿಸಲಾಗಿದೆ. 
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅವರು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ಸಹಾಯಕ ಕಾರ್ಮಿಕ ಆಯುಕ್ತ ದೇವರಾಜು ಎಂ.ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಕಲಬುರಗಿ ಕ್ರೇಡಾಯ್ ಅಧ್ಯಕ್ಷ ಸಂಜೋಗ ರಾಠಿ, ಕಾರ್ಯದರ್ಶಿ ಅಸ್ಫಾಕ್ ಅಹ್ಮದ್, ಚೇರಮನ್ ಮೊಹ್ಮದ್ ರಫಿಯುದ್ದೀನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. 
ಕಲಬುರಗಿ ಕಾರ್ಮಿಕ ನಿರೀಕ್ಷಕ ರಮೇಶ ಸುಂಬಡ ಅವರು “ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಹಾಗೂ ಸೌಲಭ್ಯ”ಗಳ ಕುರಿತು, ಕಲಬುರಗಿ ಹಿರಿಯ ಕಾರ್ಮಿಕ ನಿರೀಕ್ಷಕ ರವಿಂದ್ರಕುಮಾರ ಅವರು “ವಿವಿಧ ಕಾರ್ಮಿಕ ಕಾಯ್ದೆ” ಕುರಿತು ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕ ಸುಧಾ ಅವರು “ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ ಕಾಯ್ದೆ” ಕುರಿತು ವಿಶೇಷ ಉಪನ್ಯಾಸ ನೀಡುವರು. 
ಮೇ 4ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
ಕಲಬುರಗಿ,ಏಪ್ರಿಲ್.30.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ತಾಲೂಕುಗಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ದಿನಾಂಕಗಳಂದು ನಡೆಸಲಾಗುವುದು ಎಂದು ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದ ದಿನಾಂಕ, ಸ್ಥಳ ಮತ್ತು ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ. 
ಮೇ 4ರಂದು: ಅಫಜಲಪುರ ತಾಲೂಕಿನ ಬಡದಳ ಪ್ರಾಥಮಿಕ ಆರೋಗ್ಯ ಕೇಂದ್ರ-ಡಿ.ಎಂ.ಹೆಚ್.ಪಿ. ತಂಡ. ಮೇ 8ರಂದು: ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ|| ವಿಜಯೇಂದ್ರ.ಮೇ 9 ರಂದು: ಆಳಂದ ತಾಲೂಕಿನ ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ|| ಆಲೋಕ ಘನಾತೆ. ಮೇ 11ರಂದು: ಅಫಜಲಪುರ ತಾಲೂಕು ಆಸ್ಪತ್ರೆ-ಡಿ.ಎಂ.ಹೆಚ್.ಪಿ. ತಂಡ.ಮೇ 15ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ-ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ|| ರಾಹುಲ ಮಂದಕನಳ್ಳಿ. ಮೇ 16ರಂದು: ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಸರ್ಕಾರಿ ತಾಲೂಕು ಆಸ್ಪತ್ರೆ- ಮನೋವೈದ್ಯ ಡಾ|| ಎಂ. ಇರ್ಫಾನ್. 
ಮೇ 18ರಂದು: ಜೇವರ್ಗಿ ತಾಲೂಕು ಆಸ್ಪತ್ರೆ- ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ|| ಮುನಾವರ.  ಮೇ 22ರಂದು: ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ  ಡಾ. ಅಜಯ ಢಗೆ.  ಮೇ 23ರಂದು: ಸೇಡಂ ತಾಲೂಕಿನ ಮಳಖೇಡ ಸರ್ಕಾರಿ ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೃದ್ಯ ಆಲೋಕ ಘನಾತೆ. ಮೇ 25ರಂದು: ಆಳಂದ ತಾಲೂಕಿನ ಗೋಳಾ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ್ರ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ|| ವಿಜಯೇಂದ್ರ. ಮೇ 29ರಂದು: ಕಲಬುರಗಿ ತಾಲೂಕಿನ ಅವರಾದ ಪ್ರಾಥಮಿಕ ಆರೋಗ್ಯ ಕೇಂದ್ರ್ರ-  ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ|| ಅಮೂಲ ಪತಂಗೆ. ಮೇ 30ರಂದು: ಆಳಂದ ತಾಲೂಕಿನ ಮಾದನ ಹಿಪ್ಪರಗಾ ಸರ್ಕಾರಿ ಆರೋಗ್ಯ ಕೇಂದ್ರ-ಡಿ.ಎಂ.ಹೆಚ್.ಪಿ. ತಂಡ. 
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. 
ಬಹು ವಿಧ ಚಿಕಿತ್ಸೆ ಪಡೆದು ಕುಷ್ಠರೋಗ ತೊಲಗಿಸಿ
ಕಲಬುರಗಿ,ಏ.30.(ಕ.ವಾ.)-ಮೈಕೋಬ್ಯಾಕ್ಟೀರಿಯಾ ಲೆಪ್ರೇಬ್ಯಾಸಲೆ ಎಂಬ ರೋಗಾಣುವಿನಿಂದ ಬರುವ ಕುಷ್ಠರೋಗ ಖಾಯಿಲೆ ಮುಖ್ಯವಾಗಿ ನರ ಮತ್ತು ಚರ್ಮದ ಕಾಯಿಲೆಯಾಗಿದ್ದು, ಬಹು ವಿಧ ಔಷಧ ಚಿಕಿತ್ಸೆ ಪಡೆಯುವ ಮೂಲಕ ಕುಷ್ಠರೋಗವನ್ನು ತೊಲಗಿಸಬಹುದಾಗಿದೆ ಎಂದು ಕಲಬುರಗಿ ಜಿಲ್ಲಾ ಕುಷ್ಠರೋಗ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜದಲ್ಲಿ ಕುಷ್ಠರೋಗದ ಕುರಿತು ಜನರಲ್ಲಿ ಕೆಲವು ತಪ್ಪು ಕಲ್ಪನೆ ಇರುದರಿಂದ ವೈಜ್ಞಾನಿಕ ಮನೋಭಾವನೆ ಮೂಡಿಸುವುದು ಅತ್ಯಾವಶ್ಯಕವಾಗಿದ್ದು, ಈ ಹಿನ್ನೆಲೆಯಲ್ಲಿ ರೋಗದ ಹರಡುವಿಕೆ, ಲಕ್ಷಣ, ಚಿಕಿತ್ಸೆ ಕುರಿತು ಅವರು ಈ ಕೆಳಕಂಡಂತೆ ವಿವರಣೆ ನೀಡಿದ್ದಾರೆ.
ರೋಗ ಹರಡುವಿಕೆ: ಕುಷ್ಠರೋಗವು ಬಹಳ ನಿಧಾನವಾಗಿ ಹರಡುತ್ತದೆ. ಈ ರೋಗದ ಲಕ್ಷಣಗಳು 2 ರಿಂದ 5 ವರ್ಷ ಅವಧಿಯಲ್ಲಿ ಕಾಣಿಸಿಕೊಳ್ಳುತ್ತದೆ.  ಚಿಕ್ಸಿತೆ ಪಡೆಯದ ಕುಷ್ಠರೋಗಿಯೂ ಸೀನಿದಾಗ ಮತ್ತು ಕೆಮ್ಮಿದಾಗ ಹೊರಹೊಮ್ಮುವ ಬ್ಯಾಕ್ಟಿರಿಯಾದಿಂದ ಈ ರೋಗ ಇತರರಿಗೆ ಹರಡುವ ಸಂಭವ ಇರುತ್ತದೆ.  
ದೇಹದ ಯಾವುದೇ ಭಾಗದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು. ಕೈ ಕಾಲುಗಳಲ್ಲಿ ಜೋಮು ಉಂಟಾಗುವುದು ಕುಷ್ಠರೋಗದ ಪ್ರಾರಂಭಿಕ ಲಕ್ಷಣಗಳಾಗಿವೆ. 
ರೋಗವನ್ನು ತಡೆಗಟ್ಟುವ ಬಗೆ:-ಮಚ್ಚೆಗಳನ್ನು  ಗುಪ್ತವಗಿರಸದೆ ವೈದ್ಯರಿಗೆ  ತೋರಿಸುವುದು ದೇಹದ ಮೇಲಿನ ಯಾವುದೇ ಮಚ್ಚೆ ಕುಷ್ಠರೋಗದ ಲಕ್ಷಣವಾಗಿರಬಹುದು. ಈ ರೋಗವನ್ನು ಬಹು ವಿಧ ಔಷದ ಚಿಕ್ಸಿತೆಯಿಂದ ಗುಣಪಡಿಸಬಹುದು ಹಾಗೂ ಈ ಔಷದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ.
ರೋಗದ ಪ್ರಾರಂಭಿಕ ಹಂತದಲ್ಲಿ ಕ್ರಮಬದ್ದ ಬಹು ವಿಧ ಔಷದ ಚಿಕ್ಸಿತೆ ಪಡೆಯುವುದರಿಂದ ಸಂಪೂರ್ಣ ಗುಣ ಹಾಗೂ ಅಂಗವಿಕಲತೆಯನ್ನು ತಡೆಗಟ್ಟಬಹುದು. ಚಿಕ್ಸಿತೆಯ ಅವಧಿ ಕೇವಲ 6 ಅಥವಾ 12 ತಿಂಗಳು ಹಾಗೂ  ಮನೆಯಲ್ಲಿಯೇ  ಚಿಕ್ಸಿತೆಯನ್ನು  ಪಡೆಯಬಹುದು. ಕುಷ್ಠರೋಗದ  ಬಗೆ ಸರಿಯಾದ  ಮಾಹಿತಿಯನ್ನು ತಿಳಿದು ಜನ  ಸಾಮಾನ್ಯರಿಗೆ ತಿಳಿಸುವುದು. ಹೆಚ್ಚಿನ  ಮಾಹಿತಿಗಾಗಿ  104ಕ್ಕೆ ಮತ್ತು ಕಲಬುರಗಿ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡದ (ಜಯದೇವ ಆಸ್ಪತ್ರೆ) ವಾರ್ಡ ನಂ.124 ರಲ್ಲಿರುವ ಚರ್ಮರೋಗ ತಜ್ಞ ವೈದ್ಯರನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ. 

No comments:

Post a Comment