GULBARGA VARTHE

GULBARGA VARTHE

Thursday, 19 April 2018

news and photo Date: 19--04--2018

ವಿಧಾನಸಭಾ ಚುನಾವಣೆ: ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
**************************************************************
ಕಲಬುರಗಿ,ಏ.19.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2018ರ ಮೇ 12ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಎರಡನೇ ದಿನವಾದ ಇಂದು ಗುರುವಾರ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆಯ ವಿವರ: 34-ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಮಲಕಾಜಪ್ಪ ತಂದೆ ಯಶವಂತರಾವ ಪಾಟೀಲ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಒಂದು ನಾಮಪತ್ರ, 44-ಗುಲಬರ್ಗಾ ದಕ್ಷಿಣ ಮತಕ್ಷೇತ್ರದಿಂದ ರಿಜವಾನ್ ಉರ್ ರಹೆಮಾನ್ ಸಿದ್ದೀಕಿ ತಂದೆ ಫಜಲ್ ಮೊಹಮ್ಮದ ಸಿದ್ದೀಕಿ ಅವರು ಪಕ್ಷೇತರದಿಂದ ಒಂದು ನಾಮಪತ್ರ ಹಾಗೂ 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಿಂದ ಚಂದ್ರಕಾಂತ ತಂದೆ ಬಸವರಾಜ ಪಾಟೀಲ ಅವರು ಭಾರತೀಯ ಜನತಾ ಪಾರ್ಟಿಯಿಂದ ಒಂದು ನಾಮಪತ್ರ ಸಲ್ಲಿಸಿರುತ್ತಾರೆ. ಇನ್ನುಳಿದ 6 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.
ಈವರೆಗೆ ಒಟ್ಟು ನಾಲ್ಕು ಅಭ್ಯರ್ಥಿಗಳು ನಾಲ್ಕು ನಾಮಪತ್ರಗಳು ಸಲ್ಲಿಸಿದಂತಾಗಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 24 ರಂದು ಕೊನೆಯ ದಿನವಾಗಿದೆ.
ಸೆಕ್ಟರ್ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ನಿಖರವಾಗಿ ತಿಳಿಯಲು ಸಲಹೆ
***************************************************************
ಕಲಬುರಗಿ,ಏಪ್ರಿಲ್.19.(ಕ.ವಾ.)-ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಸೆಕ್ಟರ್ ಅಧಿಕಾರಿಗಳು ಚುನಾವಣೆ ನಿಯಮಗಳನ್ನು ನಿಖರವಾಗಿ ತಿಳಿದುಕೊಳ್ಳಬೇಕು. ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಕರ್ತವ್ಯದ ಎಲ್ಲ ಅಂಶಗಳನ್ನು ತಿಳಿಯಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೇನರ್‍ಗಳಿಗೆ ಏರ್ಪಡಿಸಿದ್ದ ತರಬೇತಿಯ ಅಧ್ಯಕ್ಷತೆವಹಿಸಿ ಮಾತನಾಡಿ ಅವರು, ಓರ್ವ ಸೆಕ್ಟರ್ ಅಧಿಕಾರಿಗೆ 15 ರಿಂದ 20 ಮತಗಟ್ಟೆಗಳ ಜವಾಬ್ದಾರಿಯನ್ನು ನೀಡಲಾಗಿದೆ. ಈ ಮತಗಟ್ಟೆಗಳಲ್ಲಿ ಏನಾದರೂ ತೊಂದರೆಗಳಿದ್ದರೆ ಅವುಗಳನ್ನು ಸೆಕ್ಟರ್ ಅಧಿಕಾರಿಗಳೇ ಪರಿಹರಿಸಬೇಕಾಗುತ್ತದೆ. ಕಾರಣ ಸೆಕ್ಟರ್ ಅಧಿಕಾರಿಗಳು ಎಲೆಕ್ಟ್ರಾನಿಕ್ ಮತಯಂತ್ರ, ನೀತಿ ಸಂಹಿತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಇನ್ನಿತರೆ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿದರು.
ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಹಾಗೂ ಮತಗಟ್ಟೆ ಅಧಿಕಾರಿಗಳು ಮಸ್ಟರಿಂಗ್ ಸಮಯದಲ್ಲಿ ಆಯಾ ಮತಕ್ಷೇತ್ರಗಳಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಪಟ್ಟಿಯಂತೆ ಅವರ ಹೆಸರು, ಚಿಹ್ನೆ, ಕ್ರಮ ಸಂಖ್ಯೆ ಹೊಂದಾಣಿಕೆ ಆಗಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಯಾವುದೇ ತೊಂದರೆ ಕಂಡು ಬಂದಲ್ಲಿ ಮಸ್ಟರಿಂಗ್ ಸಮಯದಲ್ಲಿಯೇ ನಿವಾರಿಸಿಕೊಳ್ಳಬೇಕು. ಪೊಲಿಂಗ್ ಪಾರ್ಟಿಗಳು ಮತಗಟ್ಟೆಗೆ ತೆರಳುವ ಮುನ್ನ ಎಲೆಕ್ಟ್ರಾನಿಕ್ ಮತಯಂತ್ರ, ವಿವಿ ಪ್ಯಾಟ್, ಮತದಾರರ ರಜಿಸ್ಟರ್, ಮತದಾರರ ಚೀಟಿ, ಅಧಿಕೃತ ಮತದಾರರ ಪಟ್ಟಿ, ಸೇವಾ ಮತದಾರರ ಪಟ್ಟಿಗಳನ್ನೊಳಗೊಂಡ ಎಲ್ಲ ದಾಖಲಾತಿಗಳನ್ನು ಪಡೆಯಬೇಕು. ಮತಗಟ್ಟೆಗೆ ಹೋದ ನಂತರ ಮತಗಟ್ಟೆ ಪರಿಶೀಲಿಸಿ ಚುನಾವಣಾಧಿಕಾರಿಗಳಿಗೆ ಅಥವಾ ಸೆಕ್ಟರ್ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕೆಂದು ತಿಳಿಸಿದರು.
ಮತದಾನದ ದಿನದಂದು ಬೆಳಿಗ್ಗೆ 6 ಗಂಟೆಗೆ ಅಣುಕು ಮತದಾನ ಪ್ರಾರಂಭಿಸಬೇಕು. ಒಂದು ವೇಳೆ ಪೊಲಿಂಗ್ ಏಜೆಂಟರು ಬಾರದಿದ್ದಲ್ಲಿ ಮತದಾರರ ಸಮ್ಮುಖದಲ್ಲಿ 50 ಅಣುಕು ಮತದಾನ ಕೈಗೊಳ್ಳಬೇಕು. ಅಣುಕು ಮತದಾನದಲ್ಲಿ ಚಲಾಯಿಸಿದ ಮತಗಳನ್ನು ಕಂಟ್ರೋಲ್ ಯುನಿಟ್‍ನಿಂದ ತೆಗೆದು ಹಾಕಬೇಕು ಹಾಗೂ ವಿವಿ ಪ್ಯಾಟ್‍ನಲ್ಲಿ ಸಂಗ್ರಹವಾದ ಚೀಟಿಗಳನ್ನು ಸಹ ತೆಗೆಯಬೇಕು. ಬೆಳಿಗ್ಗೆ 7 ಗಂಟೆಗೆ ವಾಸ್ತವಿಕವಾಗಿ ಮತದಾನ ಪ್ರಾರಂಭವಾಗುವ ಹಾಗೆ ನೋಡಿಕೊಳ್ಳಬೇಕು. ಮತದಾನಕ್ಕೆ ಆಗಮಿಸುವ ಮತದಾರರಿಗೆ ಎಡಗೈ ತೋರಬೆರಳಿಗೆ ಅಳಿಸಲಾಗದ ಶಾಹಿ ಗುರುತು ಹಾಕಬೇಕು. ಮತವನ್ನು ಗುಪ್ತವಾಗಿ ಚಲಾಯಿಸಬೇಕಾಗಿರುವುದರಿಂದ ಮತಗಟ್ಟೆಯಲ್ಲಿ ಮೊಬೈಲ್ ಬಳಸದಂತೆ ನಿಷೇಧಿಸಬೇಕು ಹಾಗೂ ಮತ ಚಲಾಯಿಸುವಾಗ ಮತಯಂತ್ರ ಬೇರೆಯವರಿಗೆ ಕಾಣದಂತೆ ವ್ಯವಸ್ಥೆ ಮಾಡಬೇಕೆಂದರು.
ಪೊಲಿಂಗ್ ಪಾರ್ಟಿಯಲ್ಲಿ ಕನಿಷ್ಠ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಕಲಬುರಗಿ ಉತ್ತರ ಸೇರಿದಂತೆ ಜಿಲ್ಲೆಯಾದ್ಯಂತ ಹಲವಾರು ಮತಕ್ಷೇತ್ರಗಳಲ್ಲಿ ಬುರ್ಖಾ ಪದ್ಧತಿ ಜಾರಿಯಲ್ಲಿದ್ದು, ಮಹಿಳಾ ಸಿಬ್ಬಂದಿಗಳು ಮತದಾನಕ್ಕೆ ಆಗಮಿಸುವ ಬುರ್ಖಾ ಧರಿಸಿದ ಮಹಿಳೆಯರನ್ನು ಅವರ ಗುರುತಿನ ಚೀಟಿಯೊಂದಿಗೆ ಗುರುತಿಸಿ ಮತದಾನಕ್ಕೆ ಅನುಕೂಲ ಮಾಡಿಕೊಡಬೇಕು. ಪೊಲಿಂಗ್ ಪಾರ್ಟಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಮತ ಚಲಾಯಿಸಲು ಅನುಕೂಲವಾಗುವ ಹಾಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಮುಂಚಿತವಾಗಿಯೇ ಅಂಚೆ ಮತದಾನ ಚಲಾಯಿಸಬೇಕು ಎಂದು ಹೇಳಿದರು.
ತರಬೇತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಉಪಸ್ಥಿತರಿದ್ದರು. ಮಾಸ್ಟರ್ ಟ್ರೇನರ್ ಡಾ. ಶಶಿಶೇಖರ ರೆಡ್ಡಿ ತರಬೇತಿ ನೀಡಿದರು.
“ಕಾಸಿಗಾಗಿ ಸುದ್ದಿ” ಮೇಲೆ ಹದ್ದಿನ ಕಣ್ಣು
**********************************
ಕಲಬುರಗಿ,ಏ.19.(ಕ.ವಾ.)-ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಅಧಿಕಾರಿಗಳ ತಂಡ ಹದ್ದಿನ ಕಣ್ಣಿಟ್ಟಿದ್ದು, ಅದರಲ್ಲೂ “ಕಾಸಿಗಾಗಿ ಸುದ್ದಿ” ಪ್ರಕಟಣೆ/ ಪ್ರಸಾರವಾದರೆ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಜರುಗಿಸಲು ಸಿದ್ಧಗೊಂಡಿದೆ.
ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಅವರ ಅಧ್ಯಕ್ಷತೆಯಲ್ಲಿ ನಾಲ್ಕು ಅಧಿಕಾರಿಗಳನ್ನೊಳಗೊಂಡ ಎಂ.ಸಿ.ಎಂ.ಸಿ. ( (Media Certification & Monitoring committee) ಸಮಿತಿ ರಚಿಸಲಾಗಿದ್ದು, ಈ ಅಧಿಕಾರಿಗಳ ತಂಡಕ್ಕೆ ನೆರವಾಗಲು 8 ಜನರ ಉಪಸಮಿತಿ ರಚಿಸಲಾಗಿದೆ. ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಮಿತಿಯೂ ಮುದ್ರಣ, ವಿದ್ಯುನ್ಮಾನ, ರೇಡಿಯೋ, ಎಫ್.ಎಂ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿದೆ. ಮುಖ್ಯವಾಗಿ ಕಾಸಿಗಾಗಿ ಸುದ್ದಿ ಮೇಲೆ ತೀವ್ರ ನಿಗಾ ನಿಗಾವಹಿಸಿದೆ.
ಜಿಲ್ಲೆಯಲ್ಲಿ ಪ್ರಸಾರವಾಗುವ ಸ್ಥಳೀಯ ಕೇಬಲ್ ವಾಹಿನಿಗಳ ಎಲ್ಲ ಕಾರ್ಯಕ್ರಮಗಳನ್ನು 24 ಗಂಟೆ ಕಾಲ ನಿರಂತರ ವೀಕ್ಷಣೆಗೆ ಮಾಡಲಾಗುತ್ತಿದ್ದು, ಇಲ್ಲಿ ಸಿಬ್ಬಂದಿಗಳು ಪ್ರತಿ 8 ಗಂಟೆಗೊಮ್ಮೆ ಸರದಿಯನ್ವಯ ಟಿ.ವಿ.ಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರಸಾರದ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರೆಕಾರ್ಡ್ ಮಾಡಲಾಗುತ್ತಿದೆ. ಅಲ್ಲದೆ ಪ್ರತಿ ನಿತ್ಯ ಪತ್ರಿಕೆಯಲ್ಲಿ ಬರುವ ಸುದ್ದಿ/ ಅನಧೀಕೃತ ಜಾಹೀರಾತುಗಳನ್ನು ಸಮಿತಿ ಸದಸ್ಯರು ವೀಕ್ಷಿಸುತ್ತಿದ್ದು, ಕಾಸಿಗಾಗಿ ಸುದ್ದಿ ಪ್ರಕಟಗೊಂಡಲ್ಲಿ ಸಮಿತಿ ಸ್ವಯಂ ದೂರು ದಾಖಲಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸಂಬಂಧಿತ ಚುನಾವಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ.
ಸ್ಥಳೀಯ ಕೇಬಲ್ ವಾಹಿನಿಗಳು ಚುನಾವಣಾ ಜಾಹೀರಾತು ಪ್ರಸಾರಕ್ಕು ಮುನ್ನ ರಾಜಕೀಯ ಪಕ್ಷಗಳು/ ಅಭ್ಯರ್ಥಿಗಳು ಎಂ.ಸಿ.ಎಂ.ಸಿ. ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು. ಪೂರ್ವಾನುಮತಿ ಖಾತ್ರಿಪಡಿಸಿಕೊಂಡು ಕೇಬಲ್ ಟಿ.ವಿ.ಯವರು ಜಾಹೀರಾತು ಪ್ರಸಾರ ಮಾಡಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿದ್ದಲ್ಲಿ ಕೇಬಲ್ ವಾಹಿನಿಗಳ ಉಪಕರಣಗಳನ್ನು ಜಪ್ತಿ ಮಾಡುವ ಅಧಿಕಾರವನ್ನು ಆಯೋಗವು ಚುನಾವಣಾಧಿಕಾರಿಗಳಿಗೆ ನೀಡಿದೆ.
ಪತ್ರಿಕೆಗಳಲ್ಲಿ ಪ್ರಕಟವಾಗುವ ಚುನಾವಣೆಗೆ ಸಂಬಂಧಿಸಿದ ಜಾಹೀರಾತುಗಳನ್ನು ಗಮನಿಸಿ ಆ ಜಾಹೀರಾತಿಗೆ ತಗಲುವ ವೆಚ್ಚವನ್ನು ಜಾಹೀರಾತು ನೀಡಿದ ಪಕ್ಷ/ ಅಭ್ಯರ್ಥಿಯ ವೆಚ್ಚದ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲಾ ಪತ್ರಿಕೆಗಳ ವಾಣಿಜ್ಯ ಜಾಹೀರಾತು ದರ ಪಟ್ಟಿ ವಾರ್ತಾ ಇಲಾಖೆ ಬಳಿಯಿದ್ದು, ಅದರನ್ವಯ ಜಾಹೀರಾತು ದರವನ್ನು ನಿಗದಿಪಡಿಸಲಾಗುತ್ತಿದೆ.
ಯಾವುದು ಪೇಡ್ ನ್ಯೂಸ್:-
• ಒಂದೇ ಸಮಯದಲ್ಲಿ ವಿವಿಧ ಪ್ರಕಟಣೆಗಳಲ್ಲಿ ಭಾವಚಿತ್ರದೊಂದಿಗೆ ಲೇಖನ ರೂಪದಲ್ಲಿ ಸ್ಪರ್ಧಾತ್ಮಕವಾಗಿ ಪ್ರಕಟಗೊಳ್ಳುವ ಬೈಲೈನ್ ಸುದ್ದಿಗಳು.
• ವೃತ್ತಪತ್ರಿಕೆಯ ಒಂದೇ ಪುಟದಲ್ಲಿ ಸ್ಪರ್ಧಾತ್ಮಕ ಅಭ್ಯರ್ಥಿಗಳನ್ನು ಶ್ಲಾಘಿಸುವ ರೀತಿಯಲ್ಲಿ ಮತ್ತು ಜಯಗಳಿಸುವ ಸಾಧ್ಯತೆ ಇರುವ ಬಗ್ಗೆ ಲೇಖನ ಪ್ರಕಟಗೊಳ್ಳುವುದು.
• ಓರ್ವ ಅಭ್ಯರ್ಥಿ ಸಮಾಜದ ಪ್ರತಿಯೊಂದು ವರ್ಗದಿಂದ ಬೆಂಬಲ ಪಡೆಯುತ್ತಿದ್ದು ಮತ್ತು ಕ್ಷೇತ್ರದಿಂದ ಚುನಾವಣೆಯಲ್ಲಿ ಗೆಲ್ಲುತ್ತಾನೆ ಎಂಬ ಸುದ್ದಿಗಳು.
• ಬೈಲೈನ್ ಇಲ್ಲದ ಅಭ್ಯರ್ಥಿಯ ಪರವಾಗಿ ಸುದ್ದಿ ಪ್ರಕಟಣೆ.
• ಯಾವುದೆ ಸುದ್ದಿಯನ್ನು ಒಳಗೊಳ್ಳದೆ ರಾಜ್ಯ/ ಕ್ಷೇತ್ರದಲ್ಲಿ ಇತಿಹಾಸ ಸೃಷ್ಠಿಸಲು ಅಭ್ಯರ್ಥಿ ಅಥವಾ ಪಕ್ಷ ಸಿದ್ಧವಾಗಿದೆ ಎಂದು ಪತ್ರಿಕೆಯಲ್ಲಿ ಕೇವಲ ಶಿರೋನಾಮೆ ಪ್ರಕಟಿಸುವುದು.
• ಯಾವುದೋ ಪಕ್ಷ ಅಥವಾ ಅಭ್ಯರ್ಥಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಸುದ್ದಿಯ ಪ್ರತಿ ವಾಕ್ಯದಲ್ಲಿ ತಿಳಿಸುತ್ತ ಚುನಾವಣೆ ಕಣದಲ್ಲಿರುವ ಇನ್ನುಳಿದ ಪಕ್ಷ ಅಥವಾ ಅಭ್ಯರ್ಥಿ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಸುದ್ದಿ.
• 125-150 ಪದಗಳುಳ್ಳ ಸ್ಥಿರ ಗಾತ್ರದ ಕಠಿಣ ರೂಪದ ಬರವಣಿಗೆ ಹಾಗೂ ಡಬಲ್ ಕಾಲಂನಲ್ಲಿ ಭಾವಚಿತ್ರವಿದ್ದು, ಜಾಹೀರಾತಿನಂತೆ ಬಿಂಬಿಸುವ ಸುದ್ದಿ.
• ಸ್ಲಾಟ್ ಅಧಾರದ ಮೇಲೆ ಪಾವತಿ ಸುದ್ದಿಯಾಗಿ ಅಭ್ಯರ್ಥಿಯಿಂದ ಪಡೆಯಲಾದ ಅನೇಕ ಪ್ರಕಾರದ ಫಾಂಟ್‍ಗಳು ಹಾಗು ಡ್ರಾಪ್ ಕೇಸ್ ಶೈಲಿಗಳನ್ನು, ಛಾಯಾಚಿತ್ರಗಳನ್ನು ನಿರ್ದಿಷ್ಠ ಪತ್ರಿಕೆಯ ಒಂದೇ ಪುಟದಲ್ಲಿ ಎಲ್ಲವನ್ನು ಮುದ್ರಿಸುವುದು ಪೇಡ್ ನ್ಯೂಸ್ ಎಂದು ಪರಿಗಣಿಸಲಾಗುತ್ತದೆ.
ಸಂಶಯಾಸ್ಪದ ಸುದ್ದಿ ಪ್ರಕಟಗೊಂಡರೆ ಮುಂದೇನು:- ಸಂಶಯಾಸ್ಪದ ಕಾಸಿಗಾಗಿ ಸುದ್ದಿ ಪ್ರಕಟ ಮತ್ತು ಪ್ರಸಾರಗೊಂಡಲ್ಲಿ ಸಮಿತಿ ಸ್ವಯಂ ದೂರು ದಾಖಲಿಸಿಕೊಂಡು ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಿದೆ. ಚುನಾವಣಾಧಿಕಾರಿಗಳು ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ 48 ಗಂಟೆಯೊಳಗೆ ಉತ್ತರ ನೀಡಲು ಗಡುವು ನೀಡಲಾಗುತ್ತಿದೆ. ನಿಗಧಿತ ಅವಧಿಯಲ್ಲಿ ಉತ್ತರ ಬಾರದಿದ್ದಲ್ಲಿ ಸಮಿತಿ ತೀರ್ಮಾನವೆ ಅಂತಿಮವಾಗಿರುತ್ತದೆ.
ಕಾಸಿಗಾಗಿ ಸುದ್ದಿ ದೃಢಪಟ್ಟರೆ:- ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿ ಹಾಗೂ ಭಾರತ ಚುನಾವಣಾ ಆಯೋಗದ ವಿಚಾರಣೆಯಲ್ಲಿ ಕಾಸಿಗಾಗಿ ಸುದ್ದಿ ದೃಢಪಟ್ಟಲ್ಲಿ ಆಯೋಗವು ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಭಾರತೀಯ ಪತ್ರಿಕಾ ಮಂಡಳಿ ಅಥವಾ ನ್ಯಾಷನಲ್ ಬ್ರೋಡ್‍ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಆಥಾರಿಟಿ(ಓಃSಂ) ಅವರಿಗೆ ಪ್ರಕರಣವನ್ನು ವಹಿಸುತ್ತದೆ.
ಸೋಷಿಯಲ್ ಮೀಡಿಯಾ ಮೇಲು ಕಟ್ಟೆಚ್ಚರ:- ವಿದ್ಯುನ್ಮಾನ ಮಾಧ್ಯಮದ ಪರಿಭಾಷೆಯಲ್ಲಿಯೆ ಬರುವ ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಬ್ಲಾಗರ್ ಸೇರಿದಂತೆ ಇನ್ನೀತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುವ ಅನಧಿಕೃತ ಜಾಹೀರಾತು, ವ್ಯಕ್ತಿ ನಿಂದನೆ, ತೇಜೋವಧೆ ಮತ್ತು ಧಾರ್ಮಿಕ ಆಧಾರದ ಮೇಲೆ ಮತದಾರರಿಗೆ ಪ್ರಭಾವ ಬೀರುವಂತಹ ಪೋಸ್ಟ್‍ಗಳ ಮೇಲೆ ಎಂ.ಸಿ.ಎಂ.ಸಿ ಸಮಿತಿ ಹಾಗೂ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ತೀವ್ರ ಕಟ್ಟೆಚರ ವಹಿಸಿದ್ದು, ಇದಕ್ಕಾಗಿ ಪ್ರತ್ಯೇಕ ತಂಡ ನಿಯೋಜಿಸಲಾಗಿದೆ.
ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ:- ಅಭ್ಯರ್ಥಿ, ರಾಜಕೀಯ ಪಕ್ಷ ಅಥವಾ ಸಂಘ-ಸಂಸ್ಥೆಗಳು ಚುನಾವಣೆಗೆ ಸಂಬಂಧಿಸಿದ ಜಾಹೀರಾತಗಳನ್ನ ವಿದ್ಯುನ್ಮಾನ ಮಾಧ್ಯಮಗಳಲ್ಲಿ, ಕೇಬಲ್ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ, ಎಲ್.ಇ.ಡಿ ಪ್ರಚಾರ ವಾಹನಗಳಲ್ಲಿ (ಧ್ವನಿ ಮುದ್ರಿತ ಹಾಡು, ಭಾಷಣ ಹಾಗೂ ವೀಡಿಯೋ) ಪ್ರಸಾರ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ರೂಪದ ಬಲ್ಕ್ ಎಸ್.ಎಂ.ಎಸ್, ಧ್ವನಿ ಸಂದೇಶ ಪ್ರಸಾರ ಮಾಡುವ ಮುನ್ನ ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
ಎಂ.ಸಿ.ಎಂ.ಸಿ. ಸಮಿತಿಯ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದ ಸಮಿತಿಯ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ವಾರ್ತಾಧಿಕಾರಿ ಮೈಸೂರು ಗಿರೀಶ್ ಅವರು, ಜಿಲ್ಲೆಯಲ್ಲಿ ಈವರೆಗೂ ಯಾವುದೇ ಕಾಸಿಗಾಗಿ ಸುದ್ದಿ ಪ್ರಕರಣ ದಾಖಲಾಗಿಲ್ಲ. ಜಿಲ್ಲಾ ಮಾಧ್ಯಮ ಪಟ್ಟಿಯಲ್ಲಿರುವ ಕೆಲವೊಂದು ಪತ್ರಿಕೆಗಳು ಎಂ.ಸಿ.ಎಂ.ಸಿ. ಸಮಿತಿಗೆ ಪತ್ರಿಕೆಗಳನ್ನು ಸರಬರಾಜು ಮಾಡುತ್ತಿರಲಿಲ್ಲ. ಇಂತಹ ಪತ್ರಿಕೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಒಂದೊಮ್ಮೆ ನಿಯಮಿತವಾಗಿ ಪತ್ರಿಕೆ ಸರಬರಾಜು ಮಾಡದಿದ್ದಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಮಿತಿ ಶಿಫಾರಸ್ಸು ಮಾಡಲಿದೆ ಎಂದು ತಿಳಿಸಿದರು.
ಏಪ್ರಿಲ್ 22 ರಂದು ಮಹರ್ಷಿ ಶ್ರೀ ಭಗೀರಥ ಅವರ ಜಯಂತಿ ಆಚರಿಸಲು ನಿರ್ಧಾರ
**********************************************************************
ಕಲಬುರಗಿ,ಏ.19.(ಕ.ವಾ.)- ಮಹರ್ಷಿ ಶ್ರೀ ಭಗೀರಥ ಅವರ ಜಯಂತಿಯನ್ನು ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಇದೇ 22 ರಂದು ಸರಳವಾಗಿ ಆಚರಿಸಲು ಶಿಷ್ಠಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಹರ್ಷಿ ಶ್ರೀ ಭಗೀರಥ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾಡಳಿತದಿಂದ ಸರಳವಾಗಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಲ್ಲದೆ ತಾಲೂಕು ಮಟ್ಟದಲ್ಲಿ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಮಹರ್ಷಿ ಶ್ರೀ ಭಗೀರಥ ಅವರ ಜಯಂತಿಯನ್ನು ಆಚರಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಜಯಂತಿ ಅಂಗವಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಮೆರವಣಿಗೆ ಮಾಡುವುದಿಲ್ಲವೆಂದು ಸ್ಪಷ್ಠಪಡಿಸಿದ ಅವರು ಸಮಾಜದ ಮುಖಂಡರು ಮೆರವಣಿಗೆ ಮಾಡಲು ಬಯಸಿದ್ದಲ್ಲಿ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಮುಖಂಡರು ಜಯಂತಿ ಯಶಸ್ವಿ ಆಚರಣೆಗೆ ಸಲಹೆ-ಸೂಚನೆ ನೀಡಿದರು.
ಸಭೆಯಲ್ಲಿ ಕಲಬುರಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಉಪ್ಪಾರ ಸಮಾಜದ ಗೌರವಾಧ್ಯಕ್ಷ ಲಿಂಗಣ್ಣ ಹೊರಪೇಟೆ, ಪದಾಧಿಕಾರಿಗಳಾದ ಮಹಾದೇವಪ್ಪ ಉಪ್ಪಾರ, ಜಗನ್ನಾಥ ಕೊರಳ್ಳಿ, ರಾಘವೇಂದ್ರ ಸಗರ, ಗುರುನಾಥ ಆರ್.ಹೆಚ್., ಪ್ರಕಾಶ ಗಾಜರೆ, ಶ್ರೀನಿವಾಸ ಮಸರಕಲ್, ತಿಪ್ಪಣ್ಣ ಸೇರಿದಂತೆ ಇನ್ನೀತರ ಮುಖಂಡರು ಉಪಸ್ಥಿತರಿದ್ದರು.
ವಿಧಾನಸಭಾ ಚುನಾವಣೆ:
**********************
ಅಕ್ರಮ ಸರಾಯಿ, ಮದ್ಯ ಸಾಗಾಟ ತಡೆಯಲು ನಿಯಂತ್ರಣಾ ಕೊಠಡಿ ಸ್ಥಾಪನೆ
******************************************************************
ಕಲಬುರಗಿ.ಏ.19.(ಕ.ವಾ):ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಚುನಾವಣೆಯು ಶಾಂತಿಯುತವಾಗಿ, ಮುಕ್ತವಾಗಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ, ಮದ್ಯ ಮತ್ತು ಸೇಂದಿಗಳಂತಹ ಅಬಕಾರಿ ವಸ್ತುಗಳ ಸಂಗ್ರಹಣೆ, ಸಾಗಾಟ ಮತ್ತು ಮಾರಾಟ ಚಟುವಟಿಗಳನ್ನು ತಡೆಗಟ್ಟಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ದಿನದ 24 ಗಂಟೆ ಕಾರ್ಯನಿರ್ವಹಿಸಲು ಕಂಟ್ರೋಲ್ ರೂಮ್ ಸ್ಥಾಪಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಕಲಬುರಗಿ ಅಬಕಾರಿ ಉಪ ಆಯುಕ್ತರ ಕಚೇರಿ ದೂರವಾಣಿ ಸಂಖ್ಯೆ 08472-278682, ಕಲಬುರಗಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು ದೂರವಾಣಿ ಸಂಖ್ಯೆ 08472-278684, ಚಿತ್ತಾಪೂರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು ದೂರವಾಣಿ ಸಂಖ್ಯೆ 08474-236811, ಆಳಂದ ವಲಯ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08477-203127, ಜೇವರ್ಗಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08442-235215, ಚಿತ್ತಾಪೂರ ವಲಯ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08474-236770, ಸೇಡಂ ವಲಯ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08441-277141 ಹಾಗೂ ಚಿಂಚೋಳಿ ವಲಯ ಅಬಕಾರಿ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08475-273490.
ಏಪ್ರಿಲ್ 21ರಂದು ಗ್ರಾಹಕರ ಕುಂದುಕೊರತೆ ಸಭೆ
******************************************
ಕಲಬುರಗಿ.ಏ.19.(ಕ.ವಾ): ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗ್ರಾಮೀಣ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಶಹಾಬಾದ ಮತ್ತು ಕಾಳಗಿ ಉಪವಿಭಾಗದ ಕಚೇರಿಯಲ್ಲಿ ಏಪ್ರಿಲ್ 21ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ಗ್ರಾಹಕರ ಕುಂದುಕೊರತೆ ಸಭೆಯು ಜರುಗಲಿದೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಶಹಾಬಾದ ಮತ್ತು ಕಾಳಗಿ ಶಾಖೆಗಳಲ್ಲಿ ಬರುವ ಗ್ರಾಹಕರು/ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿನ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಪರಿಹರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಜನಸ್ಪಂದನ ಸಭೆಯ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ: ಎಂಟನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಅಹ್ವಾನ
*************************************************************************
ಕಲಬುರಗಿ.ಏ.19.(ಕ.ವಾ): ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಸಲಾಗುತ್ತಿರುವ ಕಲಬುರಗಿ ಜಗತ ಮೊರಾರ್ಜಿ ದೇಸಾಯಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಬಾಲಕಿಯರ (ಕನ್ನಡ ಮಾಧ್ಯಮ) ವಸತಿ ಪ್ರೌಢ ಶಾಲೆಯಲ್ಲಿ 2018-19ನೇ ಸಾಲಿಗೆ 8ನೇ ತರಗತಿ ಪ್ರವೇಶಕ್ಕಾಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡÀ ಮತ್ತು ಹಿಂದುಳಿದ ವರ್ಗದ ಪ್ರತಿಭಾನ್ವಿತ ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ ಕಲಬುರಗಿಯ ಪ.ಜಾತಿ/ ಪ.ಪಂ. ಪ್ರತಿಭಾನ್ವಿತ ಬಾಲಕಿಯರ ಪ್ರೌಢಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
2017-18ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಉತ್ತೀರ್ಣರಾದ ಬಾಲಕಿಯರು ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ವಸತಿ ಶಾಲೆಯಲ್ಲಿ ಉಚಿತ ವಸತಿ, ಊಟ, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ.
ಆಸಕ್ತ ಅರ್ಹ ಬಾಲಕಿಯರು ಮೊರಾರ್ಜಿ ದೇಸಾಯಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ಬಾಲಕಿಯರ (ಕನ್ನಡ ಮಾಧ್ಯಮ) ವಸತಿ ಶಾಲೆ, ಜಗತ್ ಕಲಬುರಗಿ ಇವರಿಂದ ಅರ್ಜಿ ಪಡೆದು ಭರ್ತಿ ಮಾಡಿ ಮೇ 17ರೊಳಗಾಗಿ ಸದರಿ ವಸತಿ ಶಾಲೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9986969088, 9945434428, 9901360670ಗಳನ್ನು ಸಂಪರ್ಕಿಸಲು ಕೋರಲಾಗಿದೆ.No comments:

Post a Comment