GULBARGA VARTHE

GULBARGA VARTHE

Thursday, 12 April 2018

NEWS AND PHOTO DATE: 12--04--2018

ಜಿಲ್ಲಾಧಿಕಾರಿಗಳಿಂದ ಮತ ಎಣಿಕೆ ಕೇಂದ್ರ ಪರಿಶೀಲನೆ
ಕಲಬುರಗಿ,ಏ.12.(ಕ.ವಾ)-ವಿಧಾನಸಭಾ ಚುನಾವಣೆಯ ಮತ ಎಣಿಕೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಗುಲಬರ್ಗಾ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಗುಲಬರ್ಗಾ ಗ್ರಾಮೀಣ ಮತ್ತು ಜೇವರ್ಗಿ ಹಾಗೂ ಪರೀಕ್ಷಾ ಭವನದಲ್ಲಿ ಆಳಂದ ಮತಕ್ಷೇತ್ರದ ಮತ ಎಣಿಕೆ ಮಾಡಲು ಮತ ಎಣಿಕಾ ಕೇಂದ್ರಗಳನ್ನು ಸ್ಥಾಪಿಸಲು ಮಾರ್ಗದರ್ಶನ ನೀಡಿದರು.
ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಿ ಮಾಧ್ಯಮದವರಿಗೆ ಮತ ಎಣಿಕೆಯ ಪ್ರತಿ ಸುತ್ತಿನ ಫಲಿತಾಂಶ ಹಾಗೂ ರಾಜ್ಯದ ಫಲಿತಾಂಶ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ತಿಳಿಸಿದರು. ಮಾಧ್ಯಮ ಕೇಂದ್ರದಲ್ಲಿ ಗಣಕಯಂತ್ರಗಳನ್ನು, ಇಂಟರ್‍ನೆಟ್ ಸೌಲಭ್ಯ ಹಾಗೂ ವೈ.ಫೈ. ಸೌಲಭ್ಯ ಕಲ್ಪಿಸಲು ತಿಳಿಸಿದರು.
ಮತ ಎಣಿಕಾ ಕೇಂದ್ರದಲ್ಲಿ ಸೂಕ್ತ ಬ್ಯಾರಿಕೇಡಿಂಗ್ ವ್ಯವಸ್ಥೆ ಕಲ್ಪಿಸಿ ಕೌಂಟಿಂಗ್ ಏಜೆಂಟ್‍ರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ಮತದಾನದ ನಂತರ ಎಲೆಕ್ಟ್ರಾನಿಕ್ ಮತಯಂತ್ರ ಹಾಗೂ ವಿ.ವಿ. ಪ್ಯಾಟ್ ಯಂತ್ರ ಸಂಗ್ರಹಿಸಲು ಪ್ರತಿ ಮತಕ್ಷೇತ್ರಗಳಿಗೆ ತಲಾ ಮೂರು ಭದ್ರ ಕೋಣೆಗಳನ್ನು ಗುರುತಿಸಲಾಗಿದ್ದು, ವಿವಿ ಪ್ಯಾಟ್ ಯಂತ್ರ ಸಹಿತ ಸಂಗ್ರಹಿಸಬೇಕಾಗಿರುವುದರಿಂದ ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆಯಿದೆ. ಈಗಾಗಲೇ ಗುರುತಿಸಿರುವ ಭದ್ರ ಕೋಣೆಗಳ ವಿಸ್ತೀರ್ಣ ಪರಿಶೀಲಿಸಿ ಎಲ್ಲ ಮತಯಂತ್ರಗಳನ್ನು ಸಂಗ್ರಹಿಸಲು ಬೇಕಾಗುವ ಭದ್ರ ಕೋಣೆಗಳ ವಿವರ ಸಲ್ಲಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು ಪ್ರತಿಯೊಂದು ಮತ ಎಣಿಕೆ ಕೇಂದ್ರಗಳ ಹತ್ತಿರ ಅಗ್ನಿ ಶಾಮಕ ದಳ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲದ ಮುಖ್ಯ ಪ್ರವೇಶ ದ್ವಾರ ಹೊರತುಪಡಿಸಿ ಆವರಣ ಗೋಡೆಯ ಎಲ್ಲ ದ್ವಾರಗಳನ್ನು ಮುಚ್ಚಲಾಗುವುದು. ಮತ ಎಣಿಕೆ ಏಜೆಂಟರು ಮತ್ತು ಸಿಬ್ಬಂದಿಗಳಿಗೆ ಪಾಸುಗಳ ವ್ಯವಸ್ಥೆ ಮಾಡಿದ್ದಲ್ಲಿ ಅವರನ್ನು ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ನೀಡಲು ಅನುಕೂಲವಾಗುವುದು. ವಿಶ್ವವಿದ್ಯಾಲಯದ ಮುಖ್ಯ ಪ್ರವೇಶ ದ್ವಾರದಿಂದ ಏಜೆಂಟರು ಮತ್ತು ಸಿಬ್ಬಂದಿಗಳಿಗೆ ಮತ ಎಣಿಕೆ ಕೇಂದ್ರಗಳಿಗೆ ಹೋಗಲು ಬಸ್ಸುಗಳ ವ್ಯವಸ್ಥೆ ಮಾಡಿದಲ್ಲಿ ಅನುಕೂಲವಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ರಘುನಂದನಮೂರ್ತಿ, ಕಲಬುರಗಿ ಸಹಾಯಕ ಆಯುಕ್ತ ಎನ್.ಆರ್. ಉಮೇಶಚಂದ್ರ, ಕಲಬುರಗಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ದಯಾನಂದ ಅಗಸರ್, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಜೀಜುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಏ. 16ರಂದು ವಿವಿಧ ರಾಜಕೀಯ ಪಕ್ಷಗಳಿಗೆ ಇವಿಎಂ ಮತ್ತು ವಿವಿ ಪ್ಯಾಟ್ ತರಬೇತಿ
ಕಲಬುರಗಿ,ಏ.12.(ಕ.ವಾ)-ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ಏಪ್ರಿಲ್ 16 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇವಿಎಂ, ವಿವಿ ಪ್ಯಾಟ್ ಕುರಿತು ಅರಿವು ಹಾಗೂ ಐಟಿ ಅಪ್ಲಿಕೇಶನ್ಸ್ ಕುರಿತು ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪಕ್ಷದ ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಈ ತರಬೇತಿಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 15ರಂದು ಕಿತ್ತೂರು ರಾಣಿ ಚೆನ್ನಮ್ಮ-ಏಕಲವ್ಯ ವಸತಿ ಶಾಲೆ ಪ್ರವೇಶ ಪರೀಕ್ಷೆ
ಕಲಬುರಗಿ,ಏ.12.(ಕ.ವಾ)-ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಡಿಯಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ ವಸತಿ ಶಾಲೆಗಳಲ್ಲಿ 2018-19ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ 2018ರ ಏಪ್ರಿಲ್ 15ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಆಯಾ ತಾಲೂಕಿನ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಏಪ್ರಿಲ್ 13ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
ಕಲಬುರಗಿ,ಏ.12.(ಕ.ವಾ)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಚುನಾವಣಾ ಆಯೋಗ, ಜಿಲ್ಲಾಡಳಿತ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ, ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಆಹಾರ ಸಂರಕ್ಷಣೆ ಹಾಗೂ ಗುಣಮಟ್ಟ ಪ್ರಾಧಿಕಾರಿ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಮೂಲಭೂತ ಕಾನೂನು, ಮತದಾನ ಹಾಗೂ ಆಹಾರ ಸಂಕರ್ಷಣೆ ಮತ್ತು ಗುಣಮಟ್ಟ ಕಾಯ್ದೆ ಬಗ್ಗೆ” ಅರಿವು ನೆರವು ಕಾರ್ಯಕ್ರಮವನ್ನು ಏಪ್ರಿಲ್ 13ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯದ ಪ್ರಭಾರಿ ಪ್ರಾಂಶುಪಾಲ ವಿಜಯಕುಮಾರ ಜಿ.ಎಂ. ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ. ದೀಪಕ ಸುಲಾಕೆ ಅವರು ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಕಾಯ್ದೆ ಕುರಿತು ಹಾಗೂ ಕಲಬುರಗಿ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಅವರು ಮತದಾನ ಮತ್ತು ಮಾದರಿ ನೀತಿ ಸಂಹಿತೆ ಕುರಿತು ವಿಶೇಷ ಉಪನ್ಯಾಸ ನೀಡುವರು.
ಏಪ್ರಿಲ್ 24ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆ
ಕಲಬುರಗಿ,ಏ.12.(ಕ.ವಾ)-ಕಲಬುರಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಅಲ್ಪಸಂಖ್ಯಾತರ (ನವೋದಯ) ಮಾದರಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯಲ್ಲಿನ ಅಲ್ಪಸಂಖ್ಯಾತರ ಹಾಗೂ ವಿವಿಧ ಸಮುದಾಯದ ವಿದ್ಯಾರ್ಥಿಗಳಿಗೆ ಇದೇ ಏಪ್ರಿಲ್ 22 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೆಳಕಂಡ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಅಫಜಲಪುರ, ಆಳಂದ, ಚಿಂಚೋಳಿ, ಫರಹತಾಬಾದ ಹಾಗೂ ದಂಡೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕಲಬುರಗಿಯ ಸುಪರ ಮಾರ್ಕೇಟ್‍ನಲ್ಲಿರುವ ಎಂ.ಪಿ.ಹೆಚ್.ಎಸ್. ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
ವಾಡ, ಯಾಳವಾರ, ಸೇಡಂ ಹಾಗೂ ಫೀಲ್ಟರ್ ಬೆಡ್ ಕಲಬರಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಲಬುರಗಿಯ ಹಳೆಯ ಎಸ್.ಪಿ. ಆಫೀಸ್ ಕಚೇರಿ ಹತ್ತಿರದಲ್ಲಿಉವ ಸರ್ಕಾರಿ ಮಹಿಳಾ ಪಿ.ಯು. ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ಆಯಾ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿಯೇ ಪ್ರವೇಶ ಪತ್ರವನ್ನು ಪಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಗಣಕಯಂತ್ರ ಕೋರ್ಸ್ ಸಂಸ್ಥೆ ಪ್ರಾರಂಭಿಸಲು ಅರ್ಜಿ ಆಹ್ವಾನ
ಕಲಬುರಗಿ,ಏ.12.(ಕ.ವಾ)-ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ವಾಣಿಜ್ಯ ಸಂಸ್ಥೆಗಳು/ಗಣಕಯಂತ್ರ ಶಿಕ್ಷಣ ಸಂಸ್ಥೆಗಳು ನಡೆಸುವ ಸಂಬಂಧ ಸರ್ಕಾರದಿಂದ ಅಧಿಸೂಚನೆಯನ್ನು ಹೊರಡಿಸಿ ಅಗತ್ಯ ನಿಯಮಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಕಲಬುರಗಿ ವಿಭಾಗದ ವ್ಯಾಪ್ತಿಯಲ್ಲಿ ವಾಣಿಜ್ಯ ಶಾಲೆಗಳಿಂದ/ನೋಂದಾಯಿತ ಸಂಸ್ಥೆ/ಟ್ರಸ್ಟ್ ಅಥವಾ ಸಾರ್ವಜನಿಕರಿಂದ ಗಣಕಯಂತ್ರ ಕೋರ್ಸ್ ಸಂಸ್ಥೆಗಳನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಸಹ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನಾಂಕ ಇರುತ್ತದೆ. ಇದಕ್ಕಾಗಿ ಸಾಮಾನ್ಯ ವರ್ಗದವರು 2000 ರೂ. ಡಿ.ಡಿ. ಹಾಗೂ ಎಸ್.ಸಿ./ಎಸ್.ಟಿ. ವರ್ಗದವರು 1000 ರೂ.ಗಳ ಡಿ.ಡಿ.ಯನ್ನು ಸಹನಿರ್ದೇಶಕರು/ ಕಾರ್ಯದರ್ಶಿಗಳು, ಅಪರ ಆಯುಕ್ತ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗ ಕಲಬುರಗಿ ಹೆಸರಿನಲ್ಲಿ ಪಡೆದು ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವಾಣಿಜ್ಯ ಸಂಸ್ಥೆಗಳ ನೋಂದಣಿ ಮತ್ತು ಮಾನ್ಯತೆ) ನಿಯಮಗಳು 1999 ಮತ್ತು ಸರ್ಕಾರಿ ಅಧಿಸೂಚನೆ ಸಂಖ್ಯೆ ಇಡಿ 135 ಎಸ್‍ಓಎಚ್ 2011 ಬೆಂಗಳೂರು ದಿನಾಂಕ: 28-05-2013ರನ್ವಯ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಳಿಗಾಗಿ ಕಲಬುರಗಿಯ ವೆಬ್‍ಸೈಟ್http://cpigulbarga.kar.nic.in ನ್ನು ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿ ನೃಪತುಂಗ ರಸ್ತೆ ಬೆಂಗಳೂರು ಇವರ ವೆಬ್‍ಸೈಟ್http://www.schooleducation.kar.nic.in/s…/seccommerceedu.html ಅಥವಾ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ, ಕಲಬುರಗಿ ವಿಭಾಗ ಕಲಬುರಗಿಯ ವಾಣಿಜ್ಯ ಶಿಕ್ಷಣ ಶಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಕೋರಲಾಗಿದೆ.
ಬಾಲಕನ ಪೋಷಕರ ಪತ್ತೆಗೆ ಮನವಿ
ಕಲಬುರಗಿ,ಏ.12.(ಕ.ವಾ)-ಕಲಬುರಗಿ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿರುವ 13 ವರ್ಷದ ಅಮರ ತಂದೆ ಅಶೋಕಗೌಡ 2012ರ ಜೂನ್ 1ರಂದು ಕಲಬುರಗಿ ಚೈಲ್ಡ್ ಲೈನ್ ಸಂಸ್ಥೆಗೆ ದಾಖಲಾಗಿರುತ್ತಾನೆ. ಈ ಬಾಲಕನು ತನ್ನ ಅಜ್ಜಿ ಜೊತೆ ಜೇವರ್ಗಿ ತಾಲೂಕಿನ ಮೈದಲಗಿಯ ಮದುವೆಗೆ ಬಂದಿರುವುದಾಗಿ ತಿಳಿಸಿದ್ದು, ಬಾಲಕನು ಸೋಲಾಪುರ ಎಂದು ವಿಳಾಸ ಹೇಳುತ್ತಿದ್ದು, ಈ ಬಾಲಕನು ಸ್ಪಷ್ಟ ಯಾವುದೇ ಮಾಹಿತಿ/ವಿಳಾಸ ತಿಳಿಸಿರುವುದಿಲ್ಲ.
ಈಗ ಸಧ್ಯ ಈ ಬಾಲಕನು ಕಲಬುರಗಿ ಬಾಲಕರ ಬಾಲ ಮಂದಿರದ ನಿವಾಸಿಯಾಗಿದ್ದು, ಈ ಬಾಲಕ ಬಿಳಿ ಬಣ್ಣ, 4.5 ಅಡಿ ಎತ್ತರ, 30 ಕೆ.ಜಿ ತೂಕ ಹೊಂದಿರುತ್ತಾನೆ.
ಮೇಲ್ಕಂಡ ಬಾಲಕನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 60 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಕಲಬುರಗಿಯ ಪ್ರಗತಿ ಕಾಲೋನಿಯ ಬಾಲಕರ ಸರ್ಕಾರಿ ಬಾಲ ಮಂದಿರದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂಖ್ಯೆ 08472-269438 ನ್ನು ಸಂಪರ್ಕಿಸಲು ಕೋರಿದೆ.No comments:

Post a Comment