GULBARGA VARTHE

GULBARGA VARTHE

Wednesday, 11 April 2018

news and photo Date: 11--04--2018

 ಹೈಕೋರ್ಟ ನ್ಯಾಯಾಧೀಶಕರುಗಳಿಗೆ ಮತಯಂತ್ರದ ಮಾಹಿತಿ
ಕಲಬುರಗಿ,ಏ.11.(ಕ.ವಾ)-ಕಲಬುರಗಿ ಹೈಕೋರ್ಟಿನ ನ್ಯಾಯಾಧೀಶರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಡಳಿತದ ವತಿಯಿಂದ ಕಲಬುರಗಿ ಹೈಕೋರ್ಟನಲ್ಲಿ ಬುಧುವಾರ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ (ಮತ ಖಾತ್ರಿ ಯಂತ್ರ) ಕುರಿತು ಮಾಹಿತಿ ನೀಡಲಾಯಿತು.
ಕಲಬುರಗಿ ಹೈಕೋರ್ಟಿನ ನ್ಯಾಯಾಧೀಶರುಗಳಾದ ನ್ಯಾಯಮೂರ್ತಿ ಹೆಚ್.ಜಿ. ರಮೇಶ, ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ, ನ್ಯಾಯಮೂರ್ತಿ ಆರ್. ದೇವದಾಸ ಹಾಗೂ ಹೈಕೋರ್ಟ್ ಸಿಬ್ಬಂದಿಗಳಿಗೆ ಭಾರತ ಇಲೆಕ್ಟ್ರಿಕಲ್ ಲಿಮಿಲಿಟೆಡ್‍ನ ಇಂಜಿನಿಯರ್ ನರೇಂದ್ರ ಕೌಶಿಕ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ವಿವಿ ಪ್ಯಾಟ್ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಎಲೆಕ್ಟ್ರಾನಿಕ್ ಮತಯಂತ್ರದೊಂದಿಗೆ ವಿವಿ ಪ್ಯಾಟ್ ಯಂತ್ರವನ್ನು ಬಳಸಲಾಗುತ್ತಿದೆ. ವಿವಿ ಪ್ಯಾಟ್ ಯಂತ್ರದಲ್ಲಿ ಮತದಾರ ತಾನು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೆನೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಒಂದು ವಿವಿ ಪ್ಯಾಟ್‍ನಲ್ಲಿ 1500 ಮತಗಳನ್ನು ಸಂಗ್ರಹಿಸಬಹುದಾಗಿದೆ. ಒಂದು ಬ್ಯಾಲೆಟ್ ಯುನಿಟ್‍ನಲ್ಲಿ 16 ಜನ ಅಭ್ಯರ್ಥಿಗಳ ಹೆಸರನ್ನು ಪ್ರದರ್ಶಿಸಬಹುದಾಗಿದೆ. ಯಾವುದೇ ಮತಕ್ಷೇತ್ರದಲ್ಲಿ 16 ಜನಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿದ್ದರೆ ಎರಡು ಅಥವಾ ಹೆಚ್ಚು ಬ್ಯಾಲೆಟ್ ಯುನಿಟ್‍ಗಳನ್ನು ಜೋಡಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. 
ಮತದಾನದ ದಿನದಂದು ಅಣುಕು ಮತದಾನ ಮಾಡಿದಾಗ ಅಣುಕು ಮತದಾನದಲ್ಲಿ ಮಾಡಿರುವ ಮತದಾನದಷ್ಟು ವಿವಿ ಪ್ಯಾಟ್‍ನಲ್ಲಿ ರಸೀದಿಗಳು ಸಂಗ್ರಹವಾಗಿರುವುದನ್ನು ಎಣಿಕೆ ಮಾಡಿ ತಾಳೆ ಮಾಡಲಾಗುವುದು. ವಿವಿ ಪ್ಯಾಟ್‍ನಲ್ಲಿ ಏಳು ಸೆಕೆಂಡಗಳ ಕಾಲ ಪ್ರದರ್ಶನವಾಗುವ ಚೀಟಿಯಲ್ಲಿ ಪಕ್ಷದ ಅಭ್ಯರ್ಥಿ ಹೆಸರು, ಪಕ್ಷದ ಚಿಹ್ನೆ, ಬ್ಯಾಲೆಟ್ ಪೇಪರ್‍ನಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಹಾಗೂ ಅವಶ್ಯಕ ಮಾಹಿತಿಗಳು ಮುದ್ರಣವಾಗಿ ಪ್ರದರ್ಶನವಾಗುತ್ತದೆ ಎಂದು ನ್ಯಾಯಮೂರ್ತಿಗಳಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾಹಿತಿ ನೀಡಿದರು. 
  ಈ ಸಂದರ್ಭದಲ್ಲಿ ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಬಿ.ಇ.ಎಲ್. ಇಂಜಿನಿಯರ್ ಶಿವಕುಮಾರ, ಮಾಸ್ಟರ್ ತರಬೇತಿದಾರ ಶಶಿಶೇಖರ ರಡ್ಡಿ ಮತ್ತಿತರರು ಉಪಸ್ಥಿತರಿದ್ದರು. 

ಕರ್ತವ್ಯಕ್ಕೆ ಹಾಜರಾಗಲು ಸೂಚನೆ
ಕಲಬುರಗಿ,ಏ.11.(ಕ.ವಾ)-ಕಲಬುರಗಿ ತಾಲೂಕಿನ (ಉ.ವ.) ಹರಸೂರ ಸರ್ಕಾರಿ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕ ಶ್ರೀಧರ ರಾವಜೀ ಕುಲಕರ್ಣಿ ಅವರು 2013ರ ಜುಲೈ 19 ರಿಂದ ಈವರೆಗೆ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ. 
ಈಗಾಗಲೇ ಸದರಿ ಸಿಬ್ಬಂದಿಗೆ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಶಾಲೆಯ ಮುಖ್ಯಗುರುಗಳ ಮುಖಾಂತರ ಮೂರು ನೋಟೀಸು ಜಾರಿ ಮಾಡಲಾಗಿದೆ. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಂತಿಮ ನೋಟೀಸು ಸಹ ಜಾರಿ ಮಾಡಲಾಗಿದ್ದರೂ ಸಹ ಸದರಿ ಸಿಬ್ಬಂದಿಯು ಈವರೆಗೆ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. 
ಸದರಿ ನೌಕರರು ಈ ಪತ್ರಿಕಾ ಪ್ರಕಟಗೊಂಡ 15 ದಿನದೊಳಗಾಗಿ ಹರಸೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ನೌಕರರು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಕೆ.ಸಿ.ಎಸ್.ಆರ್. ನಿಯಮಾವಳಿ ಪ್ರಕಾರ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಏ.11.(ಕ.ವಾ)-ಸಮಾಜ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಜಿಲ್ಲೆಯ ಪ್ರತಿಷ್ಠಿತ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. 
ಕಲಬುರಗಿ ಶೀರನೂರ ಭಾರತೀಯ ವಿದ್ಯಾ ಕೇಂದ್ರ (ಕನ್ನಡ ಮಾಧ್ಯಮ), ತಾಡತೆಗನೂರು ಸ್ವಾಮಿ ವಿವೇಕಾನಂದ ವಿದ್ಯಾಪೀಠ (ಕನ್ನಡ ಮಾಧ್ಯಮ) ಮತ್ತು ನಾವದಗಿ ದೇಸಿ ವಿದ್ಯಾ ಕೇಂದ್ರ (ಕನ್ನಡ ಮಾಧ್ಯಮ) ಹಾಗೂ ಉದನೂರ ರಸ್ತೆಯ ಡಿ.ಡಿ. ಯು ಇಂಟ್‍ನ್ಯಾಷನಲ್ ಸ್ಕೂಲ್ (ಆಂಗ್ಲ ಮಾಧ್ಯಮ) ಶಾಲೆಗಳಲ್ಲಿ ಉಚಿತವಾಗಿ 6ನೇ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗಳ ಪ್ರವೇಶಕ್ಕೆ ಅರ್ಹರಿದ್ದು, ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ದೊಳಗಿರಬೇಕು. ವಿದ್ಯಾರ್ಥಿಯು 5ನೇ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚಿಗೆ ಅಂಕ ಪಡೆದು ಉತ್ತೀರ್ಣರಾಗಿರಬೇಕು.  
     ಅರ್ಹ ವಿದ್ಯಾರ್ಥಿಗಳು ಸಂಬಂಧಪಟ್ಟ ಆಯಾ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಏಪ್ರಿಲ್ 16ರಿಂದ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಏಪ್ರಿಲ್ 28ರೊಳಗೆ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

No comments:

Post a Comment