GULBARGA VARTHE

GULBARGA VARTHE

Monday, 2 April 2018

news and photo date: 02-04-2018

ಸ್ವೀಪ್ ಪರಿಣಾಮಕಾರಿ ಅನುಷ್ಠಾನದಿಂದ ಮತದಾನ ಪ್ರಮಾಣ ಹೆಚ್ಚಳ
************************************************************
ಕಲಬುರಗಿ,ಏಪ್ರಿಲ್.02.(ಕ.ವಾ.)-ದೇಶದಾದ್ಯಂತ ಈ ಹಿಂದೆ ನಡೆದಿರುವ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡ ಪ್ರಯುಕ್ತ ಮತದಾನದಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ಮೂಡಿಸುವಂತೆ ಕೇಂದ್ರ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ ಸಿನ್ಹಾ ತಿಳಿಸಿದರು.
ಅವರು ಸೋಮವಾರ ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ಕಚೇರಿಯಿಂದ ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫ್‍ರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೊಂದಿಗೆ ಮಾತನಾಡಿ, ಈ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ತೊಂದರೆಗಳಿದ್ದರೆ ನಿವಾರಿಸಬೇಕು. ಯಾವುದೇ ಆಶೆ-ಆಮಿಷಗಳಿಗೆ ಒಳಗಾಗದೇ ನೈತಿಕ ಮತದಾನ ಮಾಡುವ ಹಾಗೆ ಬೂತ ಮಟ್ಟದಲ್ಲಿ ಮತದಾರರಿಗೆ ಜಾಗೃತಿ ಮೂಡಿಸಬೇಕು ಎಂದರು.
ಸ್ವೀಪ್ ಸಮಿತಿಯು ಜಿಲ್ಲೆಯಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗೆ ನೋಂದಣಿಯಾಗದ ಯುವ ಮತದಾರರನ್ನು ಗುರುತಿಸಿ ಮುಂದಿನ ವಾರದೊಳಗಾಗಿ ಶಿಬಿರ ಹಮ್ಮಿಕೊಂಡು ನೋಂದಣಿ ಮಾಡಿಸಲು ಕ್ರಮ ಜರುಗಿಸಬೇಕು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ಮತಖಾತ್ರಿ ಯಂತ್ರ (ವಿವಿ ಪ್ಯಾಟ್) ಗಳ ಜಾಗೃತಿಯನ್ನು ಮತದಾರರಿಂದ ಅಣುಕು ಮತದಾನ ಮಾಡಿಸುವ ಮೂಲಕ ಮೂಡಿಸಬೇಕು. ವಿಕಲಚೇತನರಿಗೆ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಯಾಗದಂತೆ ಸುಗಮ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಮತದಾರರು ತಮ್ಮ ಮೊಬೈಲ್‍ಗಳ ಮೂಲಕ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳುವ ಕುರಿತು ಅರಿವು ಮೂಡಿಸಬೇಕೆಂದರು.
ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಬೂತ ಮಟ್ಟದಲ್ಲಿ ವಿವಿ ಪ್ಯಾಟ್ ಅರಿವು ಮೂಡಿಸಲು “ಪರಿಚಯ” ಎಂಬ ಕಾರ್ಯಕ್ರಮವನ್ನು ಪ್ರಸಕ್ತ ಮಾಹೆಯ ಎರಡು ವಾರಗಳ ಅವಧಿಯಲ್ಲಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ 2267 ಮತಗಟ್ಟೆಗಳಲ್ಲಿ ಬೂತ ಮಟ್ಟದ ಜಾಗೃತಿ ಗುಂಪುಗಳ ಮುಖಾಂತರ ಅಣುಕು ಮತದಾನ ಮಾಡಿಸಲಾಗುವುದು. ಕಳೆದ ಚುನಾವಣೆಗಳಲ್ಲಿ ಮಹಿಳಾ ಮತದಾರರ ಮತದಾನದ ಪ್ರಮಾಣ ತುಂಬಾ ಕಡಿಮೆ ಇರುವ ಕಾರಣ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ವಿನೂತನ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳಾ ಮತದಾರರ ಕೈಯಲ್ಲಿ ಚುನಾವಣಾ ಲೋಗೋ ಮೆಹಂದಿ ಹಾಕುವುದು, ರಂಗೋಲಿ, ಫ್ಯಾಶನ್ ಶೋ, ಮತದಾನದ ದಿನದಂದು ಪ್ರಥಮ ಮತದಾನ ಮಾಡಿದ ಮಹಿಳೆಯರಿಗೆ ಕಾಣಿಕೆ ನೀಡಲಾಗುವುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಸ್ವೀಪ್ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಕಂಟ್ರೋಲ್ ರೂಮ್: ವಾಟ್ಸಪ್ ನಿರ್ವಹಣೆ ಮಾಡಲು ಅಧಿಕಾರಿ/ಸಿಬ್ಬಂದಿಗಳ ನೇಮಕ
*************************************************************************
ಕಲಬುರಗಿ,ಏಪ್ರಿಲ್.02.(ಕ.ವಾ.)-ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ಶಾಂತಿಯುತ, ಸುವ್ಯವಸ್ಥೆ ಮತ್ತು ಪಾರದರ್ಶಕವಾಗಿ ನಡೆಸುವ ದೃಷ್ಠಿಯಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಸಲ್ಲಿಸಲು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಮತ್ತು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಕಂಟ್ರೋಲ್ ರೂಮ್‍ಗಳನ್ನು ಸ್ಥಾಪಿಸಲಾಗಿದೆ. ಈ ಕಂಟ್ರೋಲ್ ರೂಮ್‍ಗಳಲ್ಲಿನ ವಾಟ್ಸ್‍ಪಗಳನ್ನು ನಿರ್ವಹಣೆ ಮಾಡಲು ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದ್ದಾರೆ.


ಸಂಬಂಧಪಟ್ಟ ಅಧಿಕಾರಿಗಳು ಈ ಕಂಟ್ರೋಲ್ ರೂಮ್‍ನ ವಾಟ್ಸ್‍ಪ್‍ಗಳಲ್ಲಿ ಬರುವ ಸಂದೇಶಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಬೇಕು. ಇದಲ್ಲದೇ ಸದರಿ ವಾಟ್ಸ್‍ಪ್‍ಗಳಲ್ಲಿನ ದೂರು ಸಂದೇಶಗಳನ್ನು ಇ-ಮೇಲ್ ಮುಖಾಂತರ ಮುದ್ರಿಸಿಕೊಂಡು ದಾಖಲೆ ಇಡಬೇಕೆಂದು ತಿಳಿಸಿದ್ದಾರೆ. ಕಾರ್ಯಾಲಯದ ವಿವರ, ನೇಮಕಗೊಂಡ ಅಧಿಕಾರಿ/ ಸಿಬ್ಬಂದಿಗಳ ಹೆಸರು, ಹುದ್ದೆ ಹಾಗೂ ವಾಟ್ಸಪ್ ಸಂಖ್ಯೆ ವಿವರ ಇಂತಿದೆ.
ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ-ಕಲಬುರಗಿ ನಗರಾಭಿವೃದ್ಧಿ ಕೋಶದ ಪುರಸಭೆ ತಹಶೀಲ್ದಾರ ಆನಂದಶೀಲ ಮತ್ತು ವಾಟ್ಸಪ್ ಸಂಖ್ಯೆ 9448634567. 34-ಅಫಜಲಪುರ ಚುನಾವಣಾಧಿಕಾರಿಗಳು-ಅಫಜಲಪುರ ತಹಶೀಲ್ದಾರ ಕಾರ್ಯಲಯದ ಪ್ರ.ದ.ಸ. ಮಹ್ಮದ್ ಮುಸ್ತಾಕ ಮತ್ತು ವಾಟ್ಸಪ್ ಸಂ. 7760788998. 35-ಜೇವರ್ಗಿ ಚುನಾವಣಾಧಿಕಾರಿಗಳು-ಜೇವರ್ಗಿ ತಹಶೀಲ್ದಾರ ಕಾರ್ಯಾಲಯದ ಶಿರಸ್ತೇದಾರ ವಿಜಯಕುಮಾರ ಮತ್ತು ವಾಟ್ಸಪ್ ಸಂಖ್ಯೆ 9739231678. 40-ಚಿತ್ತಾಪುರ ಚುನಾವಣಾಧಿಕಾರಿಗಳು-ಚಿತ್ತಾಪುರ ತಹಶೀಲ್ದಾರ ಕಾರ್ಯಾಲಯದ ಪ್ರ.ದ.ಸ. ಮಹಾಲಿಂಗಯ್ಯ ಮತ್ತು ವಾಟ್ಸಪ್ ಸಂಖ್ಯೆ 9845413323.
41-ಸೇಡಂ ಚುನಾವಣಾಧಿಕಾರಿಗಳು-ಸೇಡಂ ತಹಶೀಲ್ದಾರ ಕಾರ್ಯಾಲಯ ಶಿರಸ್ತೇದಾರ ನಾಗನಾಥ ಮತ್ತು ವಾಟ್ಸಪ್ ಸಂಖ್ಯೆ 9632370680. 42-ಚಿಂಚೋಳಿ ಚುನಾವಣಾಧಿಕಾರಿಗಳು-ಚಿಂಚೋಳಿ ತಹಶೀಲ್ದಾರ ಕಾರ್ಯಾಲಯದ ಎ.ದ.ಸ. ಭೀಮರೆಡ್ಡಿ ಮತ್ತು ವಾಟ್ಸಪ್ ಸಂಖ್ಯೆ 9739700181. 43-ಗುಲಬರ್ಗಾ (ಗ್ರಾಮೀಣ) ಚುನಾವಣಾಧಿಕಾರಿಗಳು–ಕಲಬುರಗಿ ಸಹಾಯಕ ಆಯುಕ್ತರ ಕಾರ್ಯಾಲಯದ ಎ.ದ.ಸ. ಸಂತೋಷ ಸಂಕಾ ಮತ್ತು ವಾಟ್ಸಪ್ ಸಂ. 7829061080. 44-ಗುಲಬರ್ಗಾ (ದಕ್ಷಿಣ) ಚುನಾವಣಾಧಿಕಾರಿಗಳು- ಕಲಬುರಗಿ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಗುರುನಾಥ ಮತ್ತು ವಾಟ್ಸಪ್ ಸಂಖ್ಯೆ 9743522227.45-ಗುಲಬರ್ಗಾ(ಉತ್ತರ) ಚುನಾವಣಾಧಿಕಾರಿಗಳು-ಕಲಬುರಗಿ ಮಹಾನಗರ ಪಾಲಿಕೆ ಶಿರಸ್ತೇದಾರ ಜಿತೇಂದ್ರ ಪಲಂಗೆ ಮತ್ತು ವಾಟ್ಸಪ್ ಸಂಖ್ಯೆ 9743422227.46-ಆಳಂದ ಚುನಾವಣಾಧಿಕಾರಿಗಳು-ಆಳಂದ ತಹಶೀಲ್ದಾರ ಕಾರ್ಯಾಲಯದ ಎ.ದ.ಸ. ಆನಂದ ಮತ್ತು ವಾಟ್ಸಪ್ ಸಂಖ್ಯೆ 9008421427.

ಸೇಡಂ: ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
********************************************************************
ಕಲಬುರಗಿ,ಏಪ್ರಿಲ್.02.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಸೇಡಂ ಪಟ್ಟಣದಲ್ಲಿ ಪ್ರಾರಂಭಿಸಲಾದ ಮೌಲಾನಾ ಅಜಾದ್ ಆಂಗ್ಲ ಮಾಧ್ಯಮ ಮಾದರಿ ವಸತಿ ರಹಿತ ಶಾಲೆಯಲ್ಲಿ 6ನೇ ತರಗತಿಯ ಪ್ರವೇಶಕ್ಕಾಗಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸೇಡಂ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಈ ಶಾಲೆಯನ್ನು ಸೇಡಂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 6ನೇ ತರಗತಿಗೆ 60 ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಶೇ. 75ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಶೇ. 25ರಷ್ಟು ಸ್ಥಾನಗಳನ್ನು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಶೇ. 50ರಷ್ಟು ಸ್ಥಾನಗಳು ಬಾಲಕಿಯರಿಗೆ ಮೀಸಲಿರಿಸಲಾಗಿದೆ.
ಈ ಶಾಲೆಯಲ್ಲಿ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳ ಪೋಷಕರು ಅರ್ಜಿ ನಮೂನೆಯನ್ನು ಸದರಿ ಶಾಲೆಯಿಂದ ಅಥವಾ ಸೇಡಂ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ ಅಥವಾ ತಾಲೂಕು ವಿಸ್ತರಣಾಧಿಕಾರಿಗಳ ಮಾಹಿತಿ ಕೇಂದ್ರದಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಜೂನ್ 15ರ ಸಂಜೆ 5.30 ಗಂಟೆಯೊಳಗಾಗಿ ಸದರಿ ಶಾಲೆಯಲ್ಲಿ ಅಥವಾ ಸೇಡಂ ಕೆ.ಇ.ಬಿ. ಕಾಲೋನಿಯಲ್ಲಿರುವ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಅಥವಾ ಮೊಬೈಲ್ ಸಂಖ್ಯೆ 9972554852, 7760680162ಗಳನ್ನು ಸಂಪರ್ಕಿಸಲು ಕೋರಿದೆ.

ಕಡವು ನಡೆಸುವ ಹಕ್ಕು ಹರಾಜು ಮುಂದೂಡಿಕೆ
****************************************
ಕಲಬುರಗಿ,ಏಪ್ರಿಲ್.02.(ಕ.ವಾ.)-ಕಲಬುರಗಿಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಲಯ ವ್ಯಾಪಿಯಲ್ಲಿ ಬರುವ ಕಡವುಗಳನ್ನು 2018-19ನೇ ಸಾಲಿಗೆ ಏಪ್ರಿಲ್ 4ರಂದು ನಡೆಯಬೇಕಿದ್ದ ಕಡವು ನಡೆಸುವ ಹಕ್ಕಿನ ಬಹಿರಂಗ ಹರಾಜನ್ನು ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಎಲ್ಲ ಕಡವಿನ ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಇದನ್ನು ಗಮನಿಸಬೇಕೆಂದು ಕಲಬುರಗಿ ವಲಯದ ಕಡವು ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಸಿಗಾಗಿ ಸುದ್ದಿ ಪ್ರಕಟಿಸಿದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು
********************************************************
ಕಲಬುರಗಿ,ಏ.02.(ಕ.ವಾ.)-ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸಿದಲ್ಲಿ ಅಂತಹ ಮಾಧ್ಯಮ ಸಂಸ್ಥೆಗಳ ವಿರುದ್ಧ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ “ಪೇಡ್ ನ್ಯೂಸ್” ಸಂಬಂಧ ಜಿಲ್ಲೆಯ ವಿವಿಧ ಮುದ್ರಣ ಮತ್ತು ವಿದ್ಯುನ್ಮಾನ ಪತ್ರಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೇಡ್ ನ್ಯೂಸ್ ಪ್ರಕರಣದಲ್ಲಿ ಸಾರ್ವಜನಿಕರು ಸಹ ಸಮಿತಿಗೆ ದೂರು ಸಲ್ಲಿಸಲು ಅವಕಾಶವಿದ್ದು, ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷರು ಆಗಿರುವ ಅವರು ತಿಳಿಸಿದರು.
ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅಭ್ಯರ್ಥಿ ಅಥವಾ ಪಕ್ಷಕ್ಕೆ ಬೆಂಬಲಿಸುವ ಅಥವಾ ಉತ್ತೇಜಿಸುವ ರೀತಿಯಲ್ಲಿ ಸುದ್ದಿ, ಉಮೇದುವಾರರು ಎದುರಾಳಿಗಳನ್ನು ದೂಷಿಸುವ ರೀತಿಯಲ್ಲಿ ಏಕಪಕ್ಷೀಯವಾಗಿ ಸುದ್ದಿ ಪ್ರಸಾರ ಅಥವಾ ಮತದಾರರಲ್ಲಿ ಗೊಂದಲ ಮೂಡಿಸುವ ರೀತಿಯಲ್ಲಿ ಸುದ್ದಿ ಪ್ರಕಟ ಮತ್ತು ಪ್ರಸಾರವಾದಲ್ಲಿ, ಪದೇ ಪದೇ ನಿರ್ದಿಷ್ಠ ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕ್ರಮ ಹಾಗೂ ಚಟುವಟಿಕೆಗಳ ಸುದ್ದಿಗಳನ್ನು ಪುನರಾವರ್ತಿಸಿದ್ದಲ್ಲಿ ಅದನ್ನು ಪೇಡ್ ನ್ಯೂಸ್ ಎಂದು ಪರಿಗಣಿಸಲಾಗುವುದು. ಆದರೆ ಸಭೆ-ಸಮಾರಂಭ ಮತ್ತು ವಾಸ್ತವಿಕ ವರದಿ ಮತ್ತು ಎಲ್ಲರ ಅಭಿಪ್ರಾಯ ಪಡೆದು ಸುದ್ದಿಯನ್ನು ಮಾಡಿದಲ್ಲಿ ಅದು ಪೇಡ್ ನ್ಯೂಸ್ ವ್ಯಾಪ್ತಿಗೆ ಬರಲ್ಲ ಎಂದು ಸ್ಪಷ್ಠಪಡಿಸಿದ್ದರು.
ಜಿಲ್ಲಾ ಚುನಾವಣಾಧಿಕಾರಿಗಳು ಪೇಡ್ ನ್ಯೂಸ್ ಅಥವಾ ಅನಧಿಕೃತ ಜಾಹೀರಾತು ಎಂದು ನಿರ್ಧರಿಸಿದ್ದಲ್ಲಿ 96 ಗಂಟೆಯೊಳಗೆ ಸಂಬಂಧಿಸಿದ ಅಭ್ಯರ್ಥಿ ಅಥವಾ ಪಕ್ಷಕ್ಕೆ ಸ್ಪಷ್ಠಿಕರಣ ಕೋರಲಾಗುವುದು. ಇದಕ್ಕೆ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷ 48 ಗಂಟೆ ಒಳಗೆ ಉತ್ತರ ನೀಡಬೇಕಾಗುತ್ತದೆ. ಅಗತ್ಯವಿದ್ದಲ್ಲಿ ಮಾಧ್ಯಮ ಸಂಸ್ಥೆಗಳಿಗೂ ಸಹ ನೋಟಿಸ್ ನೀಡಿ ಉತ್ತರ ಪಡೆಯಲಾಗುವುದು ಎಂದರು.
ಮುದ್ರಣ, ವಿದ್ಯುನ್ಮಾನ, ಸೋಷಿಯಲ್ ಮೀಡಿಯಾ ಮತ್ತು ಬಲ್ಕ್ ಎಸ್.ಎಂ.ಎಸ್ ಮೇಲೆ ನಿಗಾ ಇಡಲು ವಾರ್ತಾ ಇಲಾಖೆಯಲ್ಲಿ ಮೀಡಿಯಾ ಮಾನಿಟರಿಂಗ್ ಕಮಿಟಿ ಕಾರ್ಯನಿರ್ವಹಿಸಲಿದ್ದು, ಪ್ರತಿ ದಿನ ಪತ್ರಿಕೆ ಮತ್ತು ಸ್ಥಳೀಯ ಕೇಬಲ್ ವಾಹಿನಿಗಳು ಪ್ರಾಸಾರ ಮಾಡುವ ಕಾಸಿಗಾಗಿ ಸುದ್ದಿ ಕುರಿತು ಪೇಡ್ ನ್ಯೂಸ್ ಪರಿಶೀಲನಾ ಉಪ ಸಮಿತಿಯು ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರುವುದು. ನಿಯಮಾನುಸಾರ ಪರಿಶೀಲನೆಯ ನಂತರ ಕಾಸಿಗಾಗಿ ಸುದ್ದಿ ಪ್ರಕಟಗೊಂಡಲ್ಲಿ ಸದರಿ ವೆಚ್ಚವನ್ನು ಆಯಾ ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಕ್ಕೆ ಸೇರಿಸುವುದಲ್ಲದೆ ನಿಯಮಾನುಸಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಜಾಹೀರಾತು ಪ್ರಕಟಗೊಳಿಸುವ ಮುನ್ನ ಪೂರ್ವಾನುಮತಿ ಕಡ್ಡಾಯ:- ಉಪ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಾಹೀರಾತು ಪೂರ್ವಾನುಮತಿ ಉಪ ಸಮಿತಿ ರಚಿಸಲಾಗಿದ್ದು, ಅಭ್ಯರ್ಥಿ ಅಥವಾ ರಾಜಕೀಯ ಪಕ್ಷ ಅಥವಾ ಸಂಸ್ಥೆ ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮುನ್ನ ಈ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಪಕ್ಷಗಳು ಮತ್ತು ಸ್ಪರ್ಧಾ ಅಭ್ಯರ್ಥಿಗಳ ಸಂದರ್ಭದಲ್ಲಿ ಜಾಹೀರಾತು ಪ್ರಕಟ ಅಥವಾ ಪ್ರಸಾರ ದಿನದಿಂದ 3 ದಿನಗಳ ಮುಂಚೆ ಮತ್ತು ಸಂಸ್ಥೆ ಅಥವಾ ಸಂಘಟನೆ ಸಂದರ್ಭದಲ್ಲಿ 7 ದಿನ ಮುಂಚೆ ಪೂರ್ವಾನುಮತಿಗೆ ನಿಗಧಿತ ನಮೂನೆಯ ಅರ್ಜಿ ಹಾಗೂ ಎರಡು ಸೆಟ್ ಡಿ.ವಿ.ಡಿ.ಗಳನ್ನು ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಸಿ.ಎಂ.ಸಿ ಸಮಿತಿಗೆ ಸಲ್ಲಿಸಬೇಕು. ಸಮಿತಿ ಇದನ್ನು ಪರಿಶೀಲಿಸಿ ಅಕ್ಷೇಪಣೆಗಳಿದ್ದಲ್ಲಿ ಅದನ್ನು ತಿದ್ದುಪಡಿ ಮಾಡಿ ಅನುಮತಿ ನೀಡುತ್ತದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತುಳಜಾರಾಮ ಎಸ್.ಪವಾರ ಅವರು ಪಿ.ಪಿ.ಟಿ ಮೂಲಕ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ, ಪೇಡ್ ನ್ಯೂಸ್ ಉಪ ಸಮಿತಿ, ಜಾಹೀರಾತು ಪೂರ್ವಾನುಮತಿ ಕುರಿತು ಕಾರ್ಯವಿಧಾನದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಜಿಲ್ಲೆಯ ವಿವಿಧ ಮುದ್ರಣÀ, ವಿದ್ಯುನ್ಮಾನ ಮಾಧ್ಯಮದವರು ಭಾಗವಹಿಸಿದ್ದರು.

ಅಕ್ರಮ ಮದ್ಯ ಸಾಗಣೆ: 17 ಪ್ರಕರಣ ದಾಖಲು
*****************************************
ಕಲಬುರಗಿ,ಏ.02.(ಕ.ವಾ.)-ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಹಾಗೂ ಅಕ್ರಮಗಳನ್ನು ತಡೆಗಟ್ಟಲ್ಲು ಜಿಲ್ಲೆಯಾದ್ಯಂತ 24 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಚುನಾವಣೆ ನೀತಿ ಸಂಹಿತೆ ಜಾರಿನಿಂದ ಏಪ್ರಿಲ್ 1 ವರೆಗೆ ಒಟ್ಟು 17 ಪ್ರಕರಣಗಳನ್ನು ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.
ಅವರು ಸೋಮವಾರಿ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪೇಡ್ ನ್ಯೂಸ್ ಸಂಬಂಧ ಪತ್ರಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದಾಖಲಿಸಿಕೊಂಡ ಎಲ್ಲ 17 ಪ್ರಕರಣಗಳು ಅಕ್ರಮ ಮದ್ಯ ಸಾಗಣಿಕೆಗೆ ಸಂಬಂಧಿಸಿದ್ದಾಗಿವೆ. ಇದರಿಂದ 2 ಲಕ್ಷ ರೂ. ಮೌಲ್ಯದ 329 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಪ್ರತಿ ಮದ್ಯದ ಅಂಗಡಿಗಳು ಹಾಗೂ ಅಬಕಾರಿ ಡಿಪೋಗಳಲ್ಲಿ ಮಾರಾಟ ಮತ್ತು ಸಂಗ್ರಹದ ಬಗ್ಗೆ ಪ್ರತಿದಿನ ವರದಿ ನೀಡುವಂತೆ ಅಬಕಾರಿ ಉಪ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯ ಹೊಂದಿಕೊಂಡಂತೆ ಜಿಲ್ಲಾ ಮತ್ತು ಅಂತರರಾಜ್ಯ ಗಡಿ ಇರುವುದರಿಂದ, 24 ಚೆಕ್ ಪೋಸ್ಟ್‍ಗಳಲ್ಲಿ ಪ್ರತಿ 8 ಗಂಟೆಗಳಂತೆ ದಿನದ 24 ಗಂಟೆಗಳ ಕಾಲ ಎಸ್.ಎಸ್.ಟಿ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಅಕ್ರಮ ವಸ್ತುಗಳ ಸಾಗಣೆ, ಹಣ, ಸಾಮಗ್ರಿಗಳು, ಉಡುಗೆಗಳ ಬಗ್ಗೆ ನಿಗಾ ವಹಿಸಲಿವೆ. ತಂಡದ ಮುಖ್ಯಸ್ಥರಿಗೆ ಕಾರ್ಯನಿರ್ವಾಹಕ ದಂಡಾಧಿಕಾರದ ಅಧಿಕಾರ ನೀಡಲಾಗಿದ್ದು, ಸ್ಥಳದಲ್ಲಿಯೆ ಇವರು ವಾರೆಂಟ್ ಸಹ ಹೊರಡಿಸಬಹುದಾಗಿದೆ. ಇದಲ್ಲದೆ ಜಿಲ್ಲೆಯಲ್ಲಿ 72 ಫ್ಲೈಯಿಂಗ್ ಸ್ಕ್ವಾಡ್ ಸಹ ಕಾರ್ಯನಿರ್ವಹಿಸಲಿವೆ ಎಂದರು.

ವಿಶೇಷ ಬೇಸಿಗೆ ಕ್ರೀಡಾ ಶಿಬಿರಕ್ಕೆ ಚಾಲನೆ
************************************
ಕಲಬುರಗಿ,ಏಪ್ರಿಲ್.02.(ಕ.ವಾ.)-ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ “ಗೀತಾ ಪರಿವಾರ” ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 2 ರಿಂದ 15ರವರೆಗೆ ಏರ್ಪಡಿಸಲಾಗಿದ್ದ ವಿಶೇಷ ಬೇಸಿಗೆ ಕ್ರೀಡಾ ತರಬೇತಿ ಶಿಬಿರವನ್ನು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೇರ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಬೇಸಿಗೆ ರಜೆಯಲ್ಲಿ ಮಕ್ಕಳು ಟಿ.ವಿ. ಮತ್ತು ಮೊಬೈಲ್ ಇತ್ಯಾದಿಗಳ ಸಂಪರ್ಕ ಬಿಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಈಜು, ಬಾಸ್ಕೇಟ್‍ಬಾಲ್, ಶಟಲ್ ಬ್ಯಾಡ್ಮಿಂಟನ್, ಸ್ಕೇಟಿಂಗ್, ಹಾಕಿ, ಅಥ್ಲೇಟಿಕ್ಸ್ ಮತ್ತು ಕ್ರೀಕೇಟ್ ಆಟದ ಬಗ್ಗೆ ತಾಂತ್ರಿಕ ತರಬೇತಿ ನೀಡಲು ಈ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ತೀರ್ಪುಗಾರ ಯೋಗೇಶ ಪಾಟೀಲ ಶಿಬಿರದ ಶಿಬಿರದ ಅಧ್ಯಕ್ಷತೆ ವಹಿಸಿದ್ದರು. ಗೀತಾ ಪರಿವಾರ ಕಾರ್ಯದರ್ಶಿ ಆರತಿ ಮಾಲು, ತರಬೇತುದಾರ ಸಂಜಯ ಬಾಣದ, ಅಶೋಕ, ಪ್ರವೀಣ ಉಪಸ್ಥಿತರಿದ್ದರು. ಅಥ್ಲೇಟಿಕ್ಸ್ ತರಬೇತುದಾರ ನಾಗರಾಜ ಕಾರ್ಯಕ್ರಮ ನಿರೂಪಿಸಿದರು. ಬಿ. ಕೀರ್ತವರ್ಧನ ವಂದಿಸಿದರು. ಈ ಶಿಬಿರದಲ್ಲಿ ಒಟ್ಟು 150 ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.



No comments:

Post a Comment