GULBARGA VARTHE

GULBARGA VARTHE

Tuesday, 27 March 2018

NEWS AND PHOTO DATE: 27--3--2018

ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆ ಹಿನ್ನಲೆ: ತಕ್ಷಣದಿಂದ ನೀತಿ ಸಂಹಿತೆ
*************************************************************************ಜಾರಿ-- ಆರ್.ವೆಂಕಟೇಶ್ ಕುಮಾರ
*******************************
ಕಲಬುರಗಿ,ಮಾ.27.(ಕ.ವಾ.)-ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಇಂದಿನಿಂದಲೇ (ಮಾರ್ಚ್ 27) ಕಲಬುರಗಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.
ಅವರು ಮಂಗಳವಾರ ಇಲ್ಲಿನ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರಾಜಕೀಯ ನಾಯಕರಿಗೆ ಸರ್ಕಾರದಿಂದ ಒದಗಿಸಲಾದ ವಾಹನಗಳನ್ನು ಕೂಡಲೇ ಹಿಂಪಡೆಯಲಾಗುವುದು. ಹೆದ್ದಾರಿ ಫಲಕಗಳ ಮೇಲಿರುವ ಸರ್ಕಾರಿ ಜಾಹೀರಾತುಗಳ ಫ್ಲೆಕ್ಸಗಳನ್ನು ತೆಗೆಯಲಾಗುವುದು. ಅಲ್ಲದೆ ಸರ್ಕಾರಿ ಪ್ರವಾಸಿ ಮಂದಿರಗಳನನ್ನು ಸಹ ವಶಕ್ಕೆ ಪಡೆಯಲಾಗುವುದು. ಚುನಾವಣಾ ಆಯೋಗದ ಅನುಮತಿ ಪಡೆಯದೆ ವರ್ಗಾವಣೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಇನ್ನೂ ಅನುಮತಿ ಪಡೆದು ರಜೆ ಮೇಲೆ ತೆರಳಿರುವ ಸರ್ಕಾರಿ ನೌಕರರು 24 ಗಂಟೆಯೊಳಗಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದರು.
ಏಪ್ರಿಲ್ 17ಕ್ಕೆ ವಿಧಾನಸಭಾ ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನವಾಗಿದ್ದು, ಏಪ್ರಿಲ್ 25ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ ಹಾಗೂ ನಾಮಪತ್ರ ಹಿಂಪಡೆಯಲು ಏಪ್ರಿಲ್ 27 ಅಂತಿಮ ದಿನವಾಗಿರುತ್ತದೆ. ಒಂದೇ ಹಂತದಲ್ಲಿ ಮೇ 12ರಂದು ಮತದಾನ ನಡೆಯಲಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ. ಒಟ್ಟಾರೆ ಮೇ 18ರೊಳಗೆ ಸಂಪೂರ್ಣ ಚುನಾವಣಾ ಕಾರ್ಯ ಮುಗಿಯಬೇಕಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಕಲಬುರಗಿ ಗ್ರಾಮೀಣ, ಚಿಂಚೋಳಿ ಮತ್ತು ಚಿತ್ತಾಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿವೆ. ಒಟ್ಟು 2097936 ಮತದಾರರಿದ್ದು, ಇದರಲ್ಲಿ 1062823 ಪುರುಷ ಹಾಗೂ 1035113 ಮಹಿಳಾ ಮತದಾರರಿದ್ದಾರೆ. ಸರಾಸರಿ ಜನಸಂಖ್ಯೆ ಹೋಲಿಸಿದರೆ 72.15% ಮತದಾರರಿದ್ದಾರೆ. ಒಟ್ಟು 2267 ರೆಗ್ಯುಲರ್ ಮತಗಟ್ಟೆಗಳು ಮತ್ತು 117 ಆಕ್ಸಲರಿ ಮತಗಟ್ಟೆ ಸೇರಿದಂತೆ ಒಟ್ಟು 2384 ಮತಗಟ್ಟೆಗಳು ಇರಲಿವೆ. ಈ ಬಾರಿ 71 ಕ್ಲಿಷ್ಟಕರ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈಗಾಗಲೆ ಫೆಬ್ರವರಿ 28ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆದಾಗಿಯೂ ನಮೂನೆ 6,7,8ರ ಮೂಲಕ ಮತದಾರರ ಪಟ್ಟಿಯಲ್ಲಿ ಅಪಲೋಡ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿಯೆ ತಹಶೀಲ್ದಾರರ ಮತ್ತು ನಾಡ ಕಚೇರಿಗಳಲ್ಲಿ ವೋಟರ್ ಫೆಸಿಲಿಟೇಷನ್ ಸೆಂಟರ್ ಸ್ಥಾಪಿಸಲಾಗಿದೆ ಎಂದರು.
ವಿಶೇಷವಾಗಿ ಜಿಲ್ಲಾ ಪಂಚಾಯತ, ತಾಲ್ಲೂಕು ಪಂಚಾಯತ, ಗ್ರಾಮ ಪಂಚಾಯತ, ನಿಗಮ-ಮಂಡಳಿ, ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆಗಳನ್ನು ಸಹ ನಡೆಸಬಾರದು. ಕೋಮು ಗಲಭೆಗೆ ಪ್ರಚೋದಿಸುವ, ಧರ್ಮ, ಜಾತಿ ಆಧಾರಿತ ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಹೊಸದಾಗಿ ಸರ್ಕಾರಿ ಕಾಮಗಾರಿಗಳು ಆರಂಭಿಸುವಂತಿಲ್ಲ. ಈಗಾಗಲೇ ಕಾಮಗಾರಿಗೆ ಚಾಲನೆ ನೀಡಿದರೆ ಅದಕ್ಕೆ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಸ್ವೀಪ್ ಕಾರ್ಯಕ್ರಮವನ್ನು ಮತದಾರರಿಗೆ ತಿಳಿಸಲಾಗಿದೆ. ಇಂದಿನಿಂದ ವಿವಿಪ್ಯಾಟ್ ಗ್ರಾಮ ಪಂಚಾಯತಿ, ತಾಲೂಕಾ ಪಂಚಾಯತಿಯ ಪ್ರತಿಯೊಂದು ಮತಗಟ್ಟೆಗೆ ತಲುಪಿಸಿ, 15 ದಿನಗಳವರೆಗೆ ವಿವಿಪ್ಯಾಟ್ ಜಾಗೃತಿ ಮುಕ್ತಾಯಗೊಳಿಸಲಾಗುವುದು. ಮತದಾನಕ್ಕೆ ಬರುವ ಅಂಗವಿಕಲರಿಗೆ ಅನುಕೂಲವಾಗುವಂತೆ ರ್ಯಾಂಪ್ ವ್ಯಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲು ಕನಿಷ್ಠ ಪಕ್ಷ ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಕಾರಿಡಾರ್ ಮೂಲಭೂತ ಸೌಕರ್ಯಗಳು ಇರಲೇಬೇಕಾಗಿರುವುದರಿಂದ ಈ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ ಎಂದರು.
ಈ ಹಿಂದಿನ ಚುನಾವಣೆಗಳ ಇತಿಹಾಸದ ಹಿನ್ನೆಲೆಯಲ್ಲಿ ಜೇವರ್ಗಿ, ಅಫಜಲಪುರ ವಿಧಾನಸಭಾ ಕ್ಷೇತ್ರಗಳಳು ಎಕ್ಸಪೆಂಡಿಚರ್ ಸೆನ್ಸಿಟಿವ್ ಕ್ಷೇತ್ರಗಳೆಂದು ಗುರುತಿಸಲಾಗಿದ್ದು, ಇಲ್ಲಯೂ ಸಾಮಾನ್ಯ ಕ್ಷೇತ್ರಕ್ಕಿಂತ ಹೆಚ್ಚಿನ ಫ್ಲೈಯಿಂಗ್ ಸ್ಕ್ವಾಡ್‍ಗಳು ಕಾರ್ಯನಿರ್ವಹಿಸಲಿವೆ.
ಕಲಬುರಗಿ ಜಿಲ್ಲೆಯು ಅಂತರಾಜ್ಯಕ್ಕೆ ಹೊಂದಿಕೊಂಡಿದ್ದು, ಚುನಾವಣಾ ನೀತಿ
ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು, ಅಕ್ರಮಗಳನ್ನು ತಡೆಗಟ್ಟವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ 24 ಚೆಕ್‍ಪೋಸ್ಟ್ ಪ್ರಾರಂಭಿಸಲಾಗಿದೆ. ಈ 24 ಚೆಕ್‍ಪೋಸ್ಟ್‍ಗೆ ಪೊಲೀಸ್, ಕಂದಾಯ–ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ನೇಮಿಸಿ 24 ಗಂಟೆ ತಪಾಸಣೆ ಮಾಡಲಾಗುವುದು. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 184 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ.
ಈ ಬಾರಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ ಪಕ್ಷ ಒಂದು ಆಕ್ಸಲರಿ ಮತಗಟ್ಟೆಗಳನ್ನು ವಿಶೇಷವಾಗಿ ಮಹಿಳಾ ಮತದಾರರಿಗೆ ಮೀಸಲಿರುವಂತೆ ಯೋಜನೆ ಹೊಂದಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವುದಕ್ಕೆ ಅವಕಾಶವಿದೆ. ಆದರೆ ಕೋಮುವಾದ, ಜಾತಿ, ಧಾರ್ಮಿಕ ನಡೆಗೆ ಒತ್ತುಕೊಡುವಂತಿಲ್ಲ. ಇದೆಲ್ಲವನ್ನು ಚುನಾವಣಾ ಆಯೋಗ ವೀಕ್ಷಿಸುತ್ತಿರುತ್ತದೆ.
ಕಾಸಿಗಾಗಿ ಸುದ್ದಿ ಸೇರಿದಂತೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಮೇಲೆ ನಿಗಾವಹಿಸಲು ಎಂ.ಸಿ.ಎಂ.ಸಿ. ತಂಡ ನೇಮಿಸಲಾಗಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆಯ ಪತ್ರಕರ್ತರಿಗೆ ದೈನಂದಿನ ಮಾಹಿತಿ ನೀಡಲು ಮಾಧ್ಯಮ ಕೇಂದ್ರ ಸ್ಥಾಪಸಲಾಗುವುದು ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು 24ಘಿ7 ಶುಲ್ಕರಹಿತ 1077 ಸಹಾಯವಾಣಿ ಆರಂಭಿಸಲಾಗುವುದು. ಯಾವುದೆ ಸಂಘ-ಸಂಸ್ಥೆಗಳು ಸಭೆ-ಸಮಾರಂಭ ನಡೆಸಬೇಕಾದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಡಿ.ಎಫ್.ಓ ಶಿವಶಂಕರ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕಲಬುರಗಿ ಎ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಲೋಕೇಶ ಬಿ. ಉಪಸ್ಥಿತರಿದ್ದರು.
ಚುನಾವಣಾ ಕೈಪಿಡಿ ಬಿಡುಗಡೆ: ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರ ತಂದಿರುವ “ವಿಧಾನಸಭಾ ಚುನಾವಣೆ-2018: ಕಲಬುರಗಿ ಜಿಲ್ಲಾ ಚುನಾವಣೆ ಹಿನ್ನೋಟ 1957-2013” ಎಂಬ ಚುನಾವಣಾ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಬಿಡುಗಡೆಗೊಳಿಸಿದರು.
ಜಿಲ್ಲೆಯಲ್ಲಿ 1957 ರಿಂದ 2013 ರವರೆಗೆ ನಡೆದ ಪ್ರತಿ ವಿಧಾನಸಭಾ ಚುನಾವಣೆಯ ಮಾಹಿತಿ ಈ ಕೈಪಿಡಿಯಲ್ಲಿ ಇದ್ದು, ವಿಧಾನಸಭಾ ಕ್ಷೇತ್ರ, ಒಟ್ಟು ಮತದಾರರ ಸಂಖ್ಯೆ, ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಪಕ್ಷ, ಅಭ್ಯರ್ಥಿಗಳು ಪಡೆದ ಮತಗಳು ಸೇರಿದಂತೆ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರವಾರು ನಡೆದ ಚುನಾವಣೆಯ ಸಮಗ್ರ ಮಾಹಿತಿಯನ್ನು ಈ ಕೈಪಿಡಿ ಒಳಗೊಂಡಿದೆ.
ಮಹಾವೀರ ಜಯಂತಿ–ಮಾಂಸ ಮಾರಾಟ ನಿಷೇಧ
*********************************************
ಕಲಬುರಗಿ.ಮಾ.27.(ಕ.ವಾ):-ಕಲಬುರಗಿ ನಗರದಲ್ಲಿ ಮಹಾವೀರ ಜಯಂತಿಯನ್ನು ಇದೇ ಮಾರ್ಚ್ 29ರಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ನಗರದಾದ್ಯಂತ ಯಾವುದೇ ರೀತಿಯ ಪ್ರಾಣಿ ವಧೆ ಮಾಡುವುದನ್ನು ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಹಾಗೂ ಕಸಾಯಿ ಖಾನೆ ಮಾಲೀಕರು ಈ ಆದೇಶವÀನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವಂತೆ ಸೂಚಿಸಿದ್ದಾರೆ. ತಪ್ಪಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
***************************************
ಕಲಬುರಗಿ.ಮಾ.27.(ಕ.ವಾ): ಕಲಬುರಗಿ ನಗರದ ಸಿದ್ದಿ ಬಾಷಾ ದರ್ಗಾದಲ್ಲಿ 2018ರ ಮಾರ್ಚ್ 14ರಂದು ಪ್ಲಾಸ್ಟಿಕ್ ಚೀಲದಲ್ಲಿ ಬಿಟ್ಟು ಹೋದ ಅಂದಾಜು ಒಂದು ದಿನದ ಗಂಡು ಮಗುವನ್ನು ಸ್ಟೇಶನ ಬಜಾರ ಪೊಲೀಸ್ ಸ್ಟೇಶನ್‍ರವರು ಸಾರ್ವಜನಿಕರ ಸಹಾಯದಿಂದ ಅದೇ ದಿನದಂದು ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ. ನಂತರ ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞರು ಹಾಗೂ ಅಧೀಕ್ಷಕರು ಮಗುವಿನ ರಕ್ಷಣೆ ಹಾಗೂ ಪೋಷಣೆಗಾಗಿ ಮಾರ್ಚ್ 22ರಂದು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಿರುತ್ತಾರೆ.
ಬಿಳಿ ಬಣ್ಣ ಹೊಂದಿರುವ ಈ ಗಂಡು ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಮೇಲ್ಕಂಡ ಗಂಡು ಮಗುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಗಂಡು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂ.08472-265588ನ್ನು ಸಂಪರ್ಕಿಸಬೇಕೆಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶು ಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 4ರಂದು ಕಡವು ನಡೆಸುವ ಹಕ್ಕು ಹರಾಜು
*******************************************
ಕಲಬುರಗಿ,ಮಾ.27.(ಕ.ವಾ)-ಕಲಬುರಗಿಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಲಯ ವ್ಯಾಪಿಯಲ್ಲಿ ಬರುವ ಕಡವುಗಳನ್ನು 2018-19ನೇ ಸಾಲಿನ 2018ರ ಏಪ್ರಿಲ್ 1 ರಿಂದ 2019ರ ಮಾರ್ಚ್ 1ರವರೆಗಿನ ಅವಧಿಯಲ್ಲಿ ಇಲಾಖೆಯಿಂದ ಒದಗಿಸುವ ಅಥವಾ ಸ್ವಂತ ಮರದ/ ಫೈಬರ್, ಉಕ್ಕಿನ ಯಂತ್ರ ಚಾಲಿತ ನಾವೆ ಅಥವಾ ಮೂಗ ನಾವೆಯನ್ನು ಇಟ್ಟು ಕಡವು ನಡೆಸುವ ಹಕ್ಕಿನ ಬಹಿರಂಗ ಹರಾಜು ಕಲಬುರಗಿಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಡವು ನಿರೀಕ್ಷಕರ ಕಚೇರಿಯಲ್ಲಿ 2018ರ ಏಪ್ರಿಲ್ 4ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕಲಬುರಗಿ ವಲಯದ ಕಡವು ನಿರೀಕ್ಷಕ ಜಿ.ಆರ್. ಸಂಗಾವಿ ತಿಳಿಸಿದ್ದಾರೆ.
ಆಯಾ ತಾಲೂಕಿನ ಕಡವುಗಳ ವಿವರ ಇಂತಿದೆ. ಜೇವರ್ಗಿ ತಾಲೂಕು: ಹನ್ನೂರ-ಬೆಳಗುಂಪಾ, ಕೊಲ್ಲೂರು-ಹೊತ್ತಿನಮಡು, ದುದ್ದಣಗಿ-ತಾರಾಪುರ, ಮಲ್ಲಾ(ಬಿ)-ಕುಲಕುಂದಾ, ಹೊತ್ತಿನಮಡು-ಕೊಲ್ಲೂರು, ಮಲ್ಲಾ(ಕೆ)-ಮಳಗ, ಹೊನ್ನಾಳ-ತುನ್ನೂರು, ರಾಜವಾಳ-ಕಡಬೂರ, ಮೈನಾಳ-ನೆಲೋಗಿ, ನಾಗನೂರು-ಯಕಂಚಿ. ಅಫಜಲಪುರ ತಾಲೂಕು: ಉಡಚಣ-ರೋಡಗಿ, ಕಡÀಣಿ-ಹಿರಿಯಾಳ, ಹವಳಗಾ-ಕುಮಸಿ, ಹಿರಿಯಾಳ-ಕಡಣಿ, ಭೋಸಗಾ-ಕಡಣಿ, ಟಾಕಾಳಿ-ಭೋಸಗಾ, ಉಮರ್ಗಿ-ಕುಡ್ಲಗಿ, ಶಿವೂರು-ಕ್ಯಾದಗಿ. ಚಿತ್ತಾಪುರ ತಾಲೂಕು: ಯನಗುಂಟಾ-ಹೊನಗುಂಟಾ.
ಉಚ್ಛ ನ್ಯಾಯಾಲಯವು 2005ರ ಫೆಬ್ರವರಿ 25ರಂದು ನೀಡಿದ ತೀರ್ಪಿನಂತೆ ಎಲ್ಲಾ ಗ್ರಾಮ ಪಂಚಾಯಿತಿ/ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡವುಗಳಲ್ಲಿ ಹರಿಗೋಲು ಸೇವೆಯನ್ನು ರದ್ದುಪಡಿಸಿರುವುದರಿಂದ ಮರದ/ಫೈಬರ್/ಉಕ್ಕಿನ ಯಂತ್ರ ಚಾಲಿತ ನಾವೆ ಅಥವಾ ಮೂಗ ನಾವೆಯನ್ನು ಇಟ್ಟು ಕಡವು ನಡೆಸುವ ಗುತ್ತಿಗೆದಾರರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆಯುಳ್ಳವರಾಗಿರುತ್ತಾರೆ.
ಈ ಹರಾಜಿಗೆ ಸಂಬಂಧಿಸಿದಂತೆ ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಲಯದ ಕಡವು ನಿರೀಕ್ಷಕರ ಕಾರ್ಯಾಲಯ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೇರ್ ಆಫ್ ಶಾಂತ ಕೆ. ಚಿಲ್ಲರಗಿ, ಮನೆ. ನಂ. 11-1801, ಎರಡು ಮತ್ತು ಮೂರನೇ ಬಸ್ ಡಿಪೋ, ಎಸ್.ಬಿ. ಕಾಲೇಜು ರಸ್ತೆ, ವಿದ್ಯಾನಗರ ಕಲಬುರಗಿ ಕಚೇರಿಯನ್ನು (ಕಚೇರಿ ದೂರವಾಣಿ ಸಂಖ್ಯೆ 08472-271354) ಹಾಗೂ ಮೊಬೈಲ್ ಸಂಖ್ಯೆ 9880783800ನ್ನು ಸಂಪರ್ಕಿಸಲು ಕೋರಿದೆ.ರಾಜಕೀಯ ನಾಯಕರ ಪೋಸ್ಟರ್ಸ್, ಬ್ಯಾನರ್ ಕೂಡಲೆ ತೆರವುಗೊಳಿಸಿ
 ಆರ್.ವೆಂಕಟೇಶ್ ಕುಮಾರ
ಕಲಬುರಗಿ,ಮಾ.27.(ಕ.ವಾ.)- ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಸರ್ಕಾರಿ ಯೋಜನೆಗಳ ಜಾಹೀರಾತು ಫಲಕಗಳಲ್ಲಿರುವ ರಾಜಕೀಯ ನಾಯಕರ ಭಾವಚಿತ್ರ ಮತ್ತು ಹೆಸರು ಇರುವಂತಹ ಎಲ್ಲ ಪೋಸ್ಟರ್, ಬ್ಯಾನರ್, ಫ್ಲೆಕ್ಸ್ ಮತ್ತು ಹೆದ್ದಾರಿ ಫಲಕಗಳನ್ನು ನೀತಿ ಸಂಹಿತೆ ಜಾರಿಯಾದ 24 ಗಂಟೆ ಒಳಗಾಗಿ ತೆರವುಗೊಳಿಸಬೇಕು ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಂ.ಸಿ.ಸಿ. ಜಾರಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ನೋಡೆಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿರುವ ವಿವಿಧ ಇಲಾಖೆಯ ಜಾಹೀರಾತುಗಳು ತೆರವುಗೊಳಿಸಬೇಕು ಹಾಗೂ ಗೋಡೆ ಬರಹಗಳಿದ್ದಲ್ಲಿ ಸಂಪೂರ್ಣ ವೈಟ್‍ವಾಶ್ ಮಾಡಬೇಕು. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಯ ವೆಬ್‍ಸೈಟ್ ಮತ್ತು ಅಧಿಕೃತ ಸಾಮಾಜಿಕ ಜಾಲತಾಣದ ಗ್ರೂಪ್‍ಗಳಲ್ಲಿ ರಾಜಕೀಯ ನಾಯಕರ ಹೆಸರು ಮತ್ತು ಭಾವಚಿತ್ರ ಇದ್ದಲ್ಲಿ ತೆರವುಗೊಳಿಸುವುದು ಹಾಗೂ ಸರ್ಕಾರದಿಂದ ವಿವಿಧ ನಿಗಮ-ಮಂಡಳಿ ಅಧ್ಯಕ್ಷರಿಗೆ, ಸಚಿವರಿಗೆ ಮತ್ತು ರಾಜಕೀಯ ನಾಯಕರಿಗೆ ನೀಡಲಾಗಿರುವ ವಾಹನದ ಸವಲತ್ತನ್ನು ಕೂಡಲೆ ಹಿಂಪಡೆಯಬೇಕು ಎಂದರು.
ಅನುಮತಿ ಪಡೆದು ರಜೆ ಮೇಲೆ ತೆರಳಿರುವ ಎಲ್ಲ ಸರ್ಕಾರಿ ನೌಕರರು 24 ಗಂಟೆಯೊಳಗಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ತಮ್ಮ ಅನುಮತಿಯಿಲ್ಲದೆ ಯಾರೊಬ್ಬರು ಜಿಲ್ಲೆ ಬಿಟ್ಟು ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೊಸದಾಗಿ ಸರ್ಕಾರಿ ಕಾಮಗಾರಿಗಳು ಆರಂಭಿಸುವಂತಿಲ್ಲ. ಈಗಾಗಲೇ ಕಾಮಗಾರಿಗೆ ಚಾಲನೆ ನೀಡಿದರೆ ಅದಕ್ಕೆ ಅಡ್ಡಿಯಿಲ್ಲ ಎಂದು ಸ್ಪಷ್ಠಪಡಿಸಿದರು. ಹೊಸದಾಗಿ ಪಡಿತರ ಚೀಟಿ ವಿತರಣೆ ಮಾಡುವಂತಿಲ್ಲ, ಫಲಾನುಭವಿಗಳಿಗೆ ಸಾಲ ಮಂಜೂರಾತಿ ಮಾಡುವುದಾಗಲಿ ಅಥವಾ ಖಾತೆಗೆ ಹಣ ಹಾಕುವುದಾಗಲಿ ಅಥವಾ ಚೆಕ್ ನೀಡುವುದಾಗಲಿ ಮಾಡಬಾರದು. ಅಭಿವೃದ್ಧಿ ಕಾಮಗಾರಿಗಳಿಗೆ ಹೊಸದಾಗಿ ಟೆಂಡರ್ ಕರೆಯಬಾರದು, ಈಗಾಗಲೆ ಟೆಂಡರ್ ಬುಲೆಟಿನ್‍ನಲ್ಲಿ ಪ್ರಕಟಣೆಗೊಂಡಿದಲ್ಲಿ ಮುಂದಿನ ಕ್ರಮ ವಹಿಸಬಹುದು. ಆದರೆ ತುರ್ತು ಕೆಲಸಗಳಿಗೆ ಮತ್ತು ಕುಡಿಯುವ ನೀರು ಸೇರಿದಂತೆ ಕೆಲವೊಂದು ಕಾಮಗಾರಿಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದ್ದಾದರು ಸಹ ಅಂತಹ ಜಾಹೀರಾತುಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ಅನುಮತಿ ಪಡೆದು ಪ್ರಕಟಿಸಬೇಕು ಎಂದರು.
ಪ್ರತಿ ವಿದಾನಸಭಾ ಕ್ಷೇತ್ರವಾರು ದೂರವಾಣಿ ಸೌಲಭ್ಯವುಳ್ಳ ದೂರು ಕೋಶ ರಚಿಸಿ ಅಲ್ಲಿ 24 ಗಂಟೆ ಸಿಬ್ಬಂದಿಯನ್ನು ನಿಯೋಜಿಸಬೇಕು. ಕೋಶಕ್ಕೆ ಕರೆ ಮಾಡುವ ದೂರುದಾರರ ಹೆಸರು ಮತ್ತು ವಿಳಾಸವನ್ನು ಪ್ರತ್ಯೇಕ ವಹಿಯಲ್ಲಿ ಬರೆದಿಟ್ಟುಕೊಳ್ಳಬೇಕು ಹಾಗೂ ದೂರುಗಳ ಮೇಲೆ ತೆಗೆದುಕೊಂಡ ಕ್ರಮದ ಬಗ್ಗೆಯೂ ಪ್ರತ್ಯೇಕ ವಹಿ ನಿರ್ವಹಿಸುವುದು. ಫ್ಲೈಯಿಂಗ್ ಸ್ಕ್ವಾಡ್, ಎಸ್.ಎಸ್.ಟಿ. ತಂಡ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕುರಿತು ಆಯಾ ಚುನಾವಣಾಧಿಕಾರಿಗಳು ಪ್ರತಿನಿತ್ಯ ನಿಗಧಿತ ನಮೂನೆಯಲ್ಲಿ ಹಾಗೂ ಅವಧಿಯಲ್ಲಿ ಪ್ರತಿ ದಿನದ ವರದಿ ನೀಡಬೇಕಾಗಿರುವುದರಿಂದ, ಚುನಾವಣೆಗೆ ಸಂಬಂಧಿಸಿದಂತೆ ನೇಮಿಸಲಾದ ಎಲ್ಲಾ ತಂಡಗಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ಅವರು ನಿರ್ದೇಶನ ನೀಡಿದರು.
ಚುನಾವಣೆಯ ಪ್ರತಿ ಮಾಹಿತಿಯೂ ಪತ್ರಕರ್ತರಿಗೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ್ತು ಕ್ಷೇತ್ರವಾರು ತಹಶೀಲ್ದಾರ ಕಚೇರಿಗಳಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಿ, ಪತ್ರಕರ್ತರಿಗೆ ಪ್ರತಿ ದಿನದ ಮಾಹಿತಿ ನೀಡಬೇಕು ಎಂದರು.
ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ 2 ಫ್ಲೈಯಿಂಗ್ ಸ್ಕ್ವಾಡ್‍ಗಳು ಕಾರ್ಯನಿರ್ವಹಿಸಲಿದ್ದರೆ, ಜೇವರ್ಗಿ, ಅಫಜಲಪುರ ವಿಧಾನಸಭಾ ಕ್ಷೇತ್ರಗಳಿಗೆ 3 ಫ್ಲೈಯಿಂಗ್ ಸ್ಕ್ವಾಡ್‍ಗಳು ಕಾರ್ಯನಿರ್ವಹಿಸಲಿವೆ. ಇವೆರಡು ಎಕ್ಸಪೆಂಡಿಚರ್ ಸೆನ್ಸಿಟಿವ್ ಕ್ಷೇತ್ರಗಳೆಂದು ಗುರುತಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಡಿ.ಎಫ್.ಓ ಶಿವಶಂಕರ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಸಹಾಯಕ ಆಯುಕ್ತೆ ಡಾ.ಬಿ.ಸುಶೀಲಾ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ತಾಲೂಕಿನ ತಹಶೀಲ್ದಾರ್‍ಗಳು, ನೋಡೆಲ್ ಅಧಿಕಾರಿಗಳು, ವಿವಿಧ ತಂಡದ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.
ಅಲೆಮಾರಿ/ಅರೆ ಅಲೆಮಾರಿ ಸಮಾವೇಶ ಮುಂದೂಡಿಕೆ
ಕಲಬುರಗಿ,ಮಾ.27.(ಕ.ವಾ)-ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಇದೇ ಮಾರ್ಚ್ 29ಕ್ಕೆ ನಿಗದಿಯಾಗಿದ್ದ ರಾಜ್ಯಮಟ್ಟದ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಅರಿವು ಮೂಡಿಸುವ ಸಮಾವೇಶವÀನ್ನು ಮುಂದೂಡಲಾಗಿದೆ. ಸಾರ್ವಜನಿಕರು ಇದನ್ನು ಗಮನಿಸಬೇಕೆಂದು  ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ ಪಾಷಾ ಕಾರಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment