GULBARGA VARTHE

GULBARGA VARTHE

Tuesday, 13 March 2018

news and photo Date: 13--3--2018

ಹೈ.ಕ. ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ ರೂಪಿಸಲು ಕ್ರಮ
*******************************************************
ಕಲಬುರಗಿ,ಮಾ.13.(ಕ.ವಾ.)-ಹೈದ್ರಾಬಾದ ಕರ್ನಾಟಕ ಪ್ರದೇಶದ ಎಲ್ಲ ತಾಲೂಕುಗಳಲ್ಲಿ ಕ್ಷೇತ್ರವಾರು ಅವಶ್ಯಕವಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಸಮಗ್ರ ಯೋಜನಾ ವರದಿ ರೂಪಿಸಲಾಗುವುದು ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿüವೃದ್ಧಿ ಮಂಡಳಿ ಕಚೇರಿಯಲ್ಲಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಮುಂದಿನ 10 ವರ್ಷಗಳಲ್ಲಿ ಆಯಾ ತಾಲೂಕುಗಳಿಗೆ ಅವಶ್ಯಕವಿರುವಂತಹ ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರುಗಳಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೈಗೊಳ್ಳಲು ಮಂಡಳಿಯಿಂದ ಮತ್ತು ರಾಜ್ಯದ ವಲಯದಿಂದ ಲಭ್ಯವಾಗುವ ಅನುದಾನದ ಅನುಗುಣವಾಗಿ ಸಮಗ್ರ ಯೋಜನಾ ವರದಿ ರೂಪಿಸಲಾಗುವುದು. ಸಮಗ್ರ ಯೋಜನಾ ವರದಿ ರೂಪಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹೇಳಿದರು.
ಯೋಜನಾ ವರದಿಗೆ ಅನುಗುಣವಾಗಿ ಹಮ್ಮಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು. ಹೈ.ಕ. ಭಾಗದ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ತೊಂದರೆಯಿದ್ದರೆ ಕೆಲವು ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೊರತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೈಗೊಳ್ಳಲು ಯೋಜನೆ ಇದ್ದರೆ ಅನುಕೂಲವಾಗುವುದು. ಇದಕ್ಕಾಗಿ ಎಲ್ಲರೊಂದಿಗೆ ಚರ್ಚಿಸಲಾಗುವುದು. ಮಾನವ ಅಭಿವೃದ್ಧಿ ಕ್ಷೇತ್ರಕ್ಕೂ ಸಹ ಆದ್ಯತೆ ನೀಡಲಾಗುವುದು ಎಂದರು.
ಹೈ.ಕ. ಭಾಗದ ಅಭಿವೃದ್ಧಿಗಾಗಿ ಕೈಗೊಂಡಿರುವ 371 ಕಲಂ ತಿದ್ದುಪಡಿಗೂ ಮುಂಚೆ ಮಂಡಳಿಗೆ ಪ್ರತಿ ವರ್ಷ ಕೇವಲ 30 ಕೋಟಿ ರೂ. ಅನುದಾನ ಲಭ್ಯವಾಗುತ್ತಿತ್ತು. ಆದರೆ ಈಗ ಪ್ರತಿವರ್ಷ 1500 ಕೋಟಿ ರೂ. ಅನುದಾನ ಲಭ್ಯವಾಗುತ್ತಿರುವುದರಿಂದ ಇದಕ್ಕನುಗುಣವಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ನಿರ್ದಿಷ್ಟ ಅವಧಿಯಲ್ಲಿ ಯೋಜನೆಗಳು ಮುಕ್ತಾಯಗೊಳ್ಳುವ ಹಾಗೆ ನೋಡಿಕೊಂಡಲ್ಲಿ ಅಭಿವೃದ್ಧಿ ಶೀಘ್ರಗತಿಯಲ್ಲಿ ನಡೆಯಲಿದೆ. ಮಂಡಳಿಯಲ್ಲಿ ಸಲಹೆ ನೀಡುವವರ ತಂಡವಿದ್ದು, ಅವರ ಸಹಾಯ ಪಡೆಯಲಾಗುವುದು ಎಂದರು.
ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾದ ನಂತರ ರಾಜ್ಯ ಸರ್ಕಾರವು ಮಂಡಳಿಗೆ 5 ವರ್ಷಗಳಲ್ಲಿ 6000 ಕೋಟಿ ರೂ.ಗಳನ್ನು ನೀಡಿದೆ. ಸರ್ಕಾರದಲ್ಲಾಗಲಿ ಅಥವಾ ಮಂಡಳಿಯಲ್ಲಾಗಲಿ ಹಣದ ಕೊರತೆ ಇರುವುದಿಲ್ಲ. ಆದರೆ ಯೋಜನಾ ಬದ್ಧವಾಗಿ ಕೆಲಸ ಮಾಡಬೇಕಾಗಿದೆ. ಶೀಘ್ರ ಗತಿಯಲ್ಲಿ ಕಾಮಗಾರಿಗಳನ್ನು ಮುಕ್ತಾಯಗೊಳಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಸಚಿವರಾದ ರಾಯರಡ್ಡಿ ಅವರು ಐದು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿ ಅಪಾರ ಅನುಭವ ಹೊಂದಿದ್ದು, ಮುಂದಾಲೋಚನೆಯಿಂದ ಕೆಲಸ ಮಾಡುವವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಬಿವೃದ್ಧಿ ಮಂಡಳಿಗೆ ಒಳ್ಳೆಯ ದಿಕ್ಕನ್ನು ನೀಡಲಿದ್ದಾರೆ. ಎರಡು ವರ್ಷಗಳ ಅವಧಿಗಾಗಿ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು, ಈ ಅವಧಿಯಲ್ಲಿ ಪ್ರಮಾಣಿಕತೆಯಿಂದ ಅಭಿವೃದ್ಧಿ ಮಾಡಲಾಗಿದೆ ಎಂದರು.
ಸಭೆಯಲ್ಲಿ ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ, ಶಾಸಕ ಬಿ.ಆರ್. ಪಾಟೀಲ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಮಂಡಳಿ ಕಾರ್ಯದರ್ಶಿ ಹರ್ಷ ಗುಪ್ತಾ, ಉಪನಿರ್ದೇಶಕ ಬಸವರಾಜ ಮತ್ತಿತರರು ಪಾಲ್ಗೊಂಡಿದ್ದರು.

ಹೈ.ಕ.ಪ್ರ.ಅ. ಮಂಡಳಿಗೆ ಕೇಂದ್ರ ಸರ್ಕಾರ ಅನುದಾನ ನೀಡಲು ಒತ್ತಾಯ
**************************************************************
ಕಲಬುರಗಿ,ಮಾ.13.(ಕ.ವಾ.)-ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಗೆ ಹೈ.ಕ. ಭಾಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಶೇ. 50 ರಷ್ಟು ಅನುದಾನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿüವೃದ್ಧಿ ಮಂಡಳಿ ಕಚೇರಿಯಲ್ಲಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿ, ಹೈ.ಕ. ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡಲು ಒತ್ತಾಯಿಸುವುದನ್ನು ಗಂಭೀರವಾಗಿ ಚಿಂತನೆ ಮಾಡಲಾಗುವುದು ಎಂದರು.
ಹೈ.ಕ. ಪ್ರದೇಶದ ಅಭಿವೃದ್ಧಿಗಾಗಿ ಈ ಹಿಂದಿನ ಕೇಂದ್ರ ಸರ್ಕಾರವು 371ನೇ ಕಲಂಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಕಲ್ಪಿಸಿದೆ. 371ನೇ ಕಲಂಗೆ ತಿದ್ದುಪಡಿಯಾಗಿ 5 ವರ್ಷ ಗತಿಸಿದರೂ ಕೇಂದ್ರದಿಂದ ಅಭಿವೃದ್ಧಿಗಾಗಿ ಯಾವುದೇ ಹಣ ಮಂಡಳಿಗೆ ಬಂದಿಲ್ಲ. ರಾಜ್ಯ ಸರ್ಕಾರವು ಮಂಡಳಿಗೆ ಈವರೆಗೆ 6000 ಕೋಟಿ ರೂ.ಗಳನ್ನು ನೀಡಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗುತ್ತಿದೆ ಎಂದರು.
ಹೈ.ಕ. ಭಾಗದ ಅಭಿವೃದ್ಧಿಗಾಗಿ 371(ಜೆ) ಕಲಂ ರೂಪಿಸಿ ಅನುಷ್ಠಾನಗೊಳಿಸಲು ಸಚಿವರಾದ ಹೆಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮುಂದೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಹಾಗೂ ಗದಗ ಜಿಲ್ಲೆಯ ರೋಣ ಮತ್ತು ಮುಂಡರಗಿ ತಾಲೂಕಿನ ಆರು ಹಳ್ಳಿಗಳನ್ನು ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಸೇರಿಸುವ ಮನವಿಗಳಿದ್ದವು. ಈ ಸಮಿತಿಯು ಪರಿಶೀಲಿಸಿ ಹರಪನಹಳ್ಳಿಯು ಹೈ.ಕ. ಪ್ರದೇಶದ ಈಶಾನ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಅನ್ವಯವಾಗುವುದರಿಂದ ಹರಪನಹಳ್ಳಿಯನ್ನು 371(ಜೆ) ಅಡಿಯಲ್ಲಿ ಸೇರ್ಪಡೆ ಮಾಡಲಾಯಿತು. ಆದರೆ ಗದಗ ಜಿಲ್ಲೆಯ ರೋಣ ಮತ್ತು ಮುಂಡರಗಿ ತಾಲೂಕಿನ ಆರು ಹಳ್ಳಿಗಳನ್ನು 371(ಜೆ) ಅಡಿಯಲ್ಲಿ ಸೇರ್ಪಡೆ ಮಾಡಲು ಅವಕಾಶಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ, ಶಾಸಕ ಬಿ.ಆರ್. ಪಾಟೀಲ, ಮುಖಂಡರಾದ ಅಲ್ಲಮಪ್ರಭು ಪಾಟೀಲ, ಮಂಡಳಿ ಕಾರ್ಯದರ್ಶಿ ಹರ್ಷ ಗುಪ್ತಾ, ಉಪನಿರ್ದೇಶಕ ಬಸವರಾಜ ಉಪಸ್ಥಿತರಿದ್ದರು.

ಎಲೆಕ್ಟ್ರಾನಿಕ್ ಮತಯಂತ್ರಗಳು ಮತದಾನಕ್ಕೆ ವಿಶ್ವಾಸಾರ್ಹ
***************************************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ಜಿಲ್ಲೆಗೆ ಸರಬರಾಜು ಮಾಡಿರುವ ಎಲ್ಲ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸಲಾಗಿದ್ದು, ಮತದಾನಕ್ಕೆ ವಿಶ್ವಾಸಾರ್ಹವಾಗಿವೆ. ಮತದಾನ ಯಂತ್ರದಲ್ಲಿ ಯಾವುದೇ ತೊಂದರೆಯಿದ್ದಲ್ಲಿ ಅಂತವುಗಳನ್ನು ಬದಲಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮತದಾರರ ಯಾದಿ ಮತ್ತು ಮತಯಂತ್ರ ಪರಿಶೀಲನಾಧಿಕಾರಿ ಸಂಜೀವಕುಮಾರ ಪ್ರಸಾದ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳÀ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, 1ನೇ ಜನವರಿ 2018ಕ್ಕೆ ಅನ್ವಯವಾಗುವಂತೆ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಪಕ್ಷದ ಮುಖಂಡರು ಪಟ್ಟಿಯನ್ನು ಪಡೆದುಕೊಳ್ಳಬೇಕೆಂದರು.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ಕಲಬುರಗಿ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ಸಾವಿರಾರು ಸಂಖ್ಯೆಯಲ್ಲಿ ಎಲೆಕ್ಟ್ರಾನಿಕ್ಸ್ ಮತಯಂತ್ರಗಳು ಬಂದಿವೆ. ಇವುಗಳಲ್ಲಿ ಯಾವುದನ್ನಾದರೂ ಗುರುತಿಸಿ ರಾಜಕೀಯ ಪಕ್ಷದವರು ಮತದಾನ ಮಾಡುವ ಮೂಲಕ ಪರಿಶೀಲಿಸಬಹುದಾಗಿದೆ. ಮುಂದಿನ ಚುನಾವಣೆಯಲ್ಲಿ ಮತದಾನ ಯಾವ ಅಭ್ಯರ್ಥಿಗೆ ಮಾಡಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ನೂತನವಾಗಿ ವಿ.ವಿ. ಪ್ಯಾಟ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ರಾಜಕೀಯ ಪಕ್ಷದವರು ಯಾವುದೇ ಅನುಮಾನ ಪಡುವ ಅವಶ್ಯಕತೆಯಿಲ್ಲ ಎಂದರು.
ಮತದಾರರಲ್ಲಿ ಕಡ್ಡಾಯ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಶಾಲಾ ಹಂತಗಳಲ್ಲಿಯೇ ಚುನಾವಣಾ ಸಾಕ್ಷರತಾ ಕ್ಲಬ್‍ಗಳನ್ನು ರಚಿಸಿ ಶಾಲಾ ಮಕ್ಕಳಿಗೆ ಕಡ್ಡಾಯ ಹಾಗೂ ನೈತಿಕ ಮತದಾನದ ಅರಿವು ಮೂಡಿಸಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿ ಮತದಾನದ ಅರಿವು ಮೂಡಿಸಲಾಗುತ್ತಿದೆ ಎಂದ ಅವರು ಪ್ರತಿ ಮತಗಟ್ಟೆಗಳ ವಿವರ ಹಾಗೂ ನಕ್ಷೆಗಳನ್ನು ಗಣಕೀಕೃತಗೊಳಿಸಿ ವೆಬ್‍ಸೈಟ್‍ನಲ್ಲಿ ಅಳವಡಿಸಲಾಗುತ್ತಿದೆ. ರಾಜಕೀಯ ಪಕ್ಷದವರು ಮತಗಟ್ಟೆಗಳ ವ್ಯಾಪ್ತಿಯನ್ನು ವೆಬ್‍ಸ್ಶೆಟ್‍ಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಹೇಳಿದರು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ಜಿಲ್ಲೆಗೆ ಸರಬರಾಜು ಮಾಡಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ಮೇಲೆ ಪಕ್ಷಗಳಿಗೆ ವಿಶ್ವಾಸವಿಲ್ಲ. ಹಿಂದಿನ ಚುನಾವಣೆಯಲ್ಲಿ ಮತಯಂತ್ರಗಳು ವಿಶ್ವಾಸ ಕಳೆದುಕೊಂಡಿವೆ. ಕಾರಣ ಚುನಾವಣಾ ಆಯೋಗವು ಬ್ಯಾಲೆಟ್ ಪೇಪರ್ ಮುಖಾಂತರ ಮತದಾನ ಪ್ರಕ್ರಿಯೆ ನಡೆಸಬೇಕು ಅಥವಾ ಎಲೆಕ್ಟ್ರಾನಿಕ್ ಮತಯಂತ್ರದ ಮತ ಎಣಿಕೆಯೊಂದಿಗೆ ವಿವಿ ಪ್ಯಾಟ್‍ನಲ್ಲಿರುವ ಚೀಟಿಗಳನ್ನು ಎಣಿಕೆ ಮಾಡಬೇಕೆಂದು ಸಲಹೆ ನೀಡಿದರು. ಇದಕ್ಕೆ ಚುನಾವಣಾ ಆಯೋಗದ ಪರಿಶೀಲನಾಧಿಕಾರಿ ಸಂಜೀವಕುಮಾರ ಪ್ರಸಾದ ಅವರು ಸ್ಪಂದಿಸಿ ತಮ್ಮ ಸಲಹೆಗಳನ್ನು ನೋಂದಾಯಿಸಿಕೊಳ್ಳಲಾಗಿದ್ದು, ಇದನ್ನು ಭಾರತ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 2267 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ 1061123 ಪುರುಷ, 1032682 ಮಹಿಳಾ ಹಾಗೂ 324 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 2094129 ಮತದಾರರಿದ್ದಾರೆ. ಮತದಾರರ ಪಟ್ಟಿಯಲ್ಲಿ ಶೇ. 99.21 ರಷ್ಟು ಭಾವಚಿತ್ರಗಳನ್ನು ಹೊಂದಿರುವ ಮತದಾರರು ಇದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಭಾರತ ಚುನಾವಣಾ ಆಯೋಗದ ಮತದಾರರ ಯಾದಿ ಮತ್ತು ಮತಯಂತ್ರ ಪರಿಶೀಲನಾಧಿಕಾರಿ ಅಶೋಕಕುಮಾರ, ಸೇಡಂ ಸಹಾಯಕ ಆಯುಕ್ತ ಬಿ. ಸುಶೀಲಾ, ಮಹಾನಗರ ಪಾಲಿಕೆ ಆಯುಕ್ತ ರಂಘುನಂದನಮೂರ್ತಿ, ಎಲ್ಲ ತಾಲೂಕುಗಳ ತಹಶೀಲ್ದಾರರು, ಚುನಾವಣಾ ತಹಶೀಲ್ದಾರ ಸಂಜುಕುಮಾರ, ಬಿ.ಎಲ್.ಓ.ಗಳು ಪಾಲ್ಗೊಂಡಿದ್ದರು.

ಮಾರ್ಚ್ 17ರವರೆಗೆ ತೊಗರಿ ಖರೀದಿ ಪ್ರಕ್ರಿಯೆ ಅವಧಿ ವಿಸ್ತರಣೆ
******************************************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಪ್ರಕ್ರಿಯೆ ಅವಧಿಯನ್ನು ಮಾರ್ಚ್ 17ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಅಧ್ಯಕ್ಷ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
ಎಲ್ಲಾ ಖರೀದಿ ಕೇಂದ್ರಗಳ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ಈ ನಿಗದಿತ ದಿನಾಂಕದೊಳಗಾಗಿ ಅವರ ಕೇಂದ್ರದಲ್ಲಿ ಆನ್‍ಲೈನ್‍ನಲ್ಲಿ ನೊಂದಾಯಿಸಿಕೊಂಡು ಖರೀದಿಗಾಗಿ ಬಾಕಿ ಉಳಿದಿರುವ ರೈತರಿಂದ ತೊಗರಿ ಖರೀದಿಯನ್ನು ಪೂರ್ಣಗೊಳಿಸಲು ಹಾಗೂ ಖರೀದಿಸಿದ ತೊಗರಿಯ ಮಾಹಿತಿಯನ್ನು ಆನ್‍ಲೈನ್ ತಂತ್ರಾಂಶದಲ್ಲಿ ನಿಗದಿತ ಅವಧಿಯೊಳಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕು. ಖರೀದಿಸಿದ ತೊಗರಿ ದಾಖಲೆಗೆ ಬರದೇ ಇದ್ದಲ್ಲಿ ಸಂಬಂಧಪಟ್ಟ ಕಾರ್ಯದರ್ಶಿಗಳು ಇದಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 15ರಂದು ವಿಶ್ವ ಗ್ರಾಹಕರ ದಿನಾಚರಣೆ
******************************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಇದೇ ಮಾರ್ಚ್ 15ರಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ನಗರದ ಐವಾನ್-ಎ-ಶಾಹಿ ಹೊಸ ಅತಿಥಿ ಗೃಹದ ಸಭಾಂಗಣದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 15ರಿಂದ ವಿಶೇಷ ಬೇಸಿಗೆ ಈಜು ತರಬೇತಿ ಶಿಬಿರ
***************************************************
ಕಲಬುರಗಿ,ಮಾ.13.(ಕ.ವಾ.)-ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನುರಿತ ಈಜು ತರಬೇತುದಾರರಿಂದ ವಿಶೇಷ ಈಜು ಬೇಸಿಗೆ ತರಬೇತಿ ಶಿಬಿರವನ್ನು ಮಾರ್ಚ್ 15 ರಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಏರ್ಪಡಿಸಲಾಗಿದೆ.ಬಾಲಕಿಯರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಬ್ಯಾಚ್ ಮೂಲಕ ತರಬೇತಿ ನೀಡಲಾಗುವುದು. ಅದೇ ರೀತಿ ಬೇಬಿಪೂಲ್‍ದಲ್ಲಿ 7 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಶ್ವನಾಥ ಅವರ ಮೊಬೈಲ್ ಸಂಖ್ಯೆ 9880212769ನ್ನು ಸಂಪರ್ಕಿಸಬೇಕೆಂದು ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

No comments:

Post a Comment