GULBARGA VARTHE

GULBARGA VARTHE

Friday, 9 February 2018

News and Photo Date: 9--2---2018

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
*********************************************
ಕಲಬುರಗಿ,ಫೆ.09.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಫೆಬ್ರವರಿ 10 ರಿಂದ 13ರವರೆಗೆ ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಫೆಬ್ರವರಿ 14ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಸಿರಿ ಕಾರ್ಯಕ್ರಮ ಅನುಷ್ಠಾನದಲ್ಲಿ ಚಂದ್ರಂಪಳ್ಳಿ ಶಾಲೆ ಮಾದರಿ
*****************************************************
ಕಲಬುರಗಿ,ಫೆ.09.(ಕ.ವಾ)-ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಸಿರಿ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿ ಮಾದರಿ ಶಾಲೆಯಾಗಿ ಮಾರ್ಪಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಂದ್ರಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರು ಹಾಗೂ ಮೂರು ಮಕ್ಕಳನ್ನು ಸಿರಿ ಚಾಂಪಿಯನ್‍ಗಳೆಂದು ಗುರುತಿಸಿ ಸನ್ಮಾನಿಸಿ ಮಾತನಾಡಿದರು.
ಚಂದ್ರಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಕಸ್ಮಿಕವಾಗಿ ಭೇಟಿ ನೀಡಿದಾಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಿಸ್ತಿನಿಂದ ಕೂಡಿ, ಶಾಲಾ ವಾತಾವರಣ ಅಚ್ಟುಕಟ್ಟಾಗಿ ಇಟ್ಟಿದ್ದರು. 4 ರಿಂದ 8ನೇ ತರಗತಿಯ ಎಲ್ಲ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ದೊರೆಯಬೇಕಾದ ಶಿಕ್ಷಣ, ಆಟ-ಪಾಠ ಎಲ್ಲವೂ ದೊರೆತು ಶಾಲೆಯನ್ನು ಗ್ರಾಮದ ಆಸ್ತಿಯನ್ನಾಗಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜೊತೆಗುಡಿ ಸಿರಿ ಕಾರ್ಯಕ್ರಮದ ಉದ್ದೇಶ ಕಾರ್ಯಗತಗೊಳಿಸಿದ್ದಾರೆ. ಈ ಶಾಲೆಯ ಶಿಕ್ಷಕರ ಪ್ರಯತ್ನದಿಂದ ಗ್ರಾಮದಲ್ಲಿ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಈ ಹಿಂದೆ ಸೋಮವಾರದಂದು ಶಹಾಬಾದ ಕಡೆಗೆ ಪ್ರಯಾಣಿಸುತ್ತಿರುವಾಗ ಕೆಸರಟಗಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಲಾಗಿತ್ತು. ಕೆಸರಟಗಿಯಲ್ಲಿ ಶಾಲಾ ಕಟ್ಟಡ, ಶಾಲಾ ಕೊಠಡಿಗಳು, ಮಕ್ಕಳು ಇದ್ದರೂ ಸಹಿತ ಮಧ್ಯಾಹ್ನ 12 ಗಂಟೆಗೆ ಶಾಲಾ ಮಕ್ಕಳು ಬಿಸಿಲಿನಲ್ಲಿ ಕ್ರಿಕೇಟ್ ಆಡುತ್ತಿದ್ದರು. ಶಾಲೆಗೆ ಶಿಕ್ಷಕರು ಬಾರದಿರುವ ಕಾರಣ ಮಕ್ಕಳ ಭವಿಷ್ಯದ ಮೇಲೆ ವ್ಯತರಿಕ್ತ ಪ್ರಭಾವ ಬೀರುತ್ತಿದೆ. ನಗರದ ಸಮೀಪದ ಪ್ರದೇಶದಲ್ಲಿ ಈ ರೀತಿಯ ವ್ಯವಸ್ಥೆ ಇರುವುದು ಬಹಳ ಗಂಭೀರ ಸಮಸ್ಯೆಯಾಗಿದೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು.
ಚಂದ್ರಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಶಿಕಾಂತ ಮಾತನಾಡಿ, ಶಿಸ್ತು ಶಿಕ್ಷಣಕ್ಕೆ ತಳಹದಿಯಾಗಿದೆ. ಗ್ರಂಥಾಲಯ, ಶಾಲಾ ಆವರಣ ಸ್ವಚ್ಛತೆ, ಉದ್ಯಾನವನ ಅಭಿವೃದ್ಧಿಗಾಗಿ ಶಾಲೆಯಲ್ಲಿ ಮಕ್ಕಳಿಂದಲೇ ಹಲವಾರು ಸಮಿತಿಗಳನ್ನು ರಚಿಸಿ ಮಕ್ಕಳಿಗೆ ಜವಾಬ್ದಾರಿ ನೀಡಲಾಗಿದೆ. ಶಾಲೆಯಲ್ಲಿ ಪಾಲಕರ ಸಭೆ ಕರೆದು ಶೌಚಾಲಯದ ಜಾಗೃತಿ ಮೂಡಿಸುವ ಮೂಲಕ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ ಮತ್ತಿತರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಚಂದ್ರಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಯ ದರ್ಶನ ದೇವೇಂದ್ರ, 7ನೇ ತರಗತಿಯ ಪದ್ಮಾವತಿ ಈರಪ್ಪ, 6ನೇ ತರಗತಿಯ ಶಿವಾನಿ ನಾಗೇಂದ್ರಪ್ಪ, ಮುಖ್ಯ ಗುರುಗಳಾದ ವೀರಶೆಟ್ಟಿ ಅಂಬಲಗಿ, ಸಹಶಿಕ್ಷಕ ಶಶಿಕಾಂತ ಅವರನ್ನು ಸನ್ಮಾನಿಸಲಾಯಿತು.
ಮೂರ್ನಾಲ್ಕು ದಿನದಲ್ಲಿ 2ನೇ ಹಂತದ ತೊಗರಿ ಖರೀದಿ ಆರಂಭ
******************************************************
ಕಲಬುರಗಿ, ಫೆ.09.(ಕ.ವಾ)-ರಾಜ್ಯದಲ್ಲಿ ತೊಗರಿ ಮಾರಾಟ ಮಾಡುವ ರೈತರು ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಗಮನಿಸಿದ ಸರ್ಕಾರವು ಇನ್ನೂ ಹೆಚ್ಚಿನ ಪ್ರಮಾಣದ ತೊಗರಿ ಖರೀದಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎರಡನೇ ಹಂತದ ತೊಗರಿ ಖರೀದಿಗೆ ಪರವಾನಿಗೆ ದೊರೆತಿದ್ದು, ಮೂರ್ನಾಲ್ಕು ದಿನಗಳಲ್ಲಿ ತೊಗರಿ ಖರೀದಿ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ತೊಗರಿ ಖರೀದಿಸಲಾದ ಮೊದಲ ಹಂತಕ್ಕೆ ರಾಜ್ಯದಾದ್ಯಂತಹ 16.5 ಲಕ್ಷ ಟನ್ ತೊಗರಿ ಖರೀದಿಗೆ ಗುರಿ ನಿಗದಿ ಮಾಡಲಾಗಿತ್ತು. ಜಿಲ್ಲೆಯಿಂದ ಒಟ್ಟು 1.13 ಲಕ್ಷ ರೈತರು ತೊಗರಿ ಮಾರಾಟಕ್ಕೆ ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಿದ್ದರು. ಈ ಪೈಕಿ 39447 ರೈತರಿಂದ 669000 ಕ್ವಿಂಟಲ್ ತೊಗರಿ 144 ಕೇಂದ್ರಗಳ ಮೂಲಕ ಖರೀದಿಸಲಾಗಿದೆ. ಇವರಿಗೆ ಒಟ್ಟು 401 ಕೋಟಿ ರೂ. ಪಾವತಿಸಬೇಕಾಗಿದ್ದು, ಆನ್‍ಲೈನ್ ಮೂಲಕ ಪಟ್ಟಿಯನ್ನು ನೆಫೆಡ್‍ಗೆ ಸಲ್ಲಿಸಲಾಗಿದೆ. ಮುಂದಿನ 15 ದಿನದೊಳಗಾಗಿ ಹಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗುವ ನಿರೀಕ್ಷೆಗಳಿವೆ ಎಂದರು.
ತೊಗರಿ ಖರೀದಿ ಕೇಂದ್ರಗಳಲ್ಲಿಯೇ ಕಡಲೆ ಖರೀದಿ ಮಾಡಲಾಗುತ್ತಿದೆ. ಕಡಲೆ ಬೆಳೆಯದ ಪ್ರದೇಶ ಹೊರತು ಪಡಿಸಿ ಜಿಲ್ಲೆಯಲ್ಲಿ ಹೋಬಳಿಗೆ ಒಂದರಂತೆ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು. ಕಡಲೆಯನ್ನು 4400 ರೂ.ಗಳ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 20 ಲಕ್ಷ ಕ್ವಿಂಟಲ್ ಕಡಲೆ ಖರೀದಿಯನ್ನು ಸರ್ಕಾರ ಮಾಡಲಿದೆ. ಸದ್ಯದಲ್ಲೇ ನೋಂದಣಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಪಾಲ್ಗೊಂಡಿದ್ದರು.
60 ಸಾವಿರ ಹೊಸ ಮತದಾರರ ನೋಂದಣಿ
*************************************
ಕಲಬುರಗಿ, ಫೆ.09.(ಕ.ವಾ)-ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗಿದ್ದು, ಜಿಲ್ಲೆಯಿಂದ ಒಟ್ಟು 60 ಸಾವಿರ ಹೊಸ ಮತದಾರರನ್ನು ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿದ್ದು ಮರಣ ಹೊಂದಿದ 35,000 ಮತದಾರರನ್ನು ಪರಿಶೀಲಿಸಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. 35,000 ಮತದಾರರು ಸ್ಥಳಾಂತರವಾಗಿರುವ ಮಾಹಿತಿ ಸಂಗ್ರಹವಾಗಿದ್ದು, ಇವರಿಗೆ ನೋಟೀಸ ನೀಡಿ, ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಈ ವರ್ಷ 109 ನೂತನ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಹಿಂದಿನ 2158 ಮತಗಟ್ಟೆಗಳು ಸೇರಿದಂತೆ ಒಟ್ಟು 2267 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ ಎಂದರು.
ಜಿಲ್ಲೆಯ ಮತಗಟ್ಟೆಗಳ ಪರಿಶೀಲನೆ ಹಾಗೂ ಸಿದ್ಧತೆಗೆ ಎರಡು ಸಮಿತಿಗಳನ್ನು ರಚಿಸಲಾಗಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ಸಮರ್ಪಕ ಗಾಳಿ ಮತ್ತು ಬೆಳಕಿನ ವ್ಯವಸ್ಥೆ, ಶೌಚಾಲಯ, ವಿಕಲಚೇತನರು ಸುಲಭವಾಗಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಲು ಅಡೆತಡೆಯಾಗದಂತೆ ರ್ಯಾಂಪ್ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಈ ವ್ಯವಸ್ಥೆಗಳನ್ನು ಮತ್ತು ಮತಗಟ್ಟೆಯ ದುರಸ್ತಿಯನ್ನು ಫೆಬ್ರವರಿ 28ರೊಳಗಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಫೆಬ್ರವರಿ 28ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ ತಿಳಿಸಿದರು.
ಮತದಾರರ ಪಟ್ಟಿಯ ವೀಕ್ಷಕರು ಈಗಾಗಲೇ ಎರಡು ಸಭೆಗಳನ್ನು ಕರೆದು ಪರಿಶೀಲಿಸಿದ್ದಾರೆ. ಮೂರು ಬಾರಿ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಒಂದಡೆಗೆ ಎರಡಕ್ಕಿಂತ ಹೆಚ್ಚು ಬೂತಗಳನ್ನು ಹೊಂದಿರುವ ಮತಗಟ್ಟೆಗಳನ್ನು ಗುರುತಿಸಿ ಬೂತಗಳನ್ನು ಬೇರ್ಪಡಿಸಿ ಮತಗಟ್ಟೆ ಸ್ಥಾಪಿಸಲು ಸ್ಥಳ ಪರಿಶೀಲಿಸುವಂತೆ ತಹಶೀಲ್ದಾರರಿಗೆ ಸೂಚಿಸಲಾಗಿದೆ. ಮತದಾರರಿಗೆ ಮತದಾನದ ಮಹತ್ವ ಮತ್ತು ಜಾಗೃತಿ ಮೂಡಿಸಲು ಈಗಾಗಲೇ ಜಿಲ್ಲೆಯಾದ್ಯಂತ ಸ್ವಿಪ್ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಸ್ವೀಪ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲೆ ಹಾಗೂ ಕೋಲ್ಯಾಜ್ ಸ್ಪರ್ಧೆಗಳಲ್ಲಿ ಜಿಲ್ಲೆಯಿಂದ 3 ಜನ ವಿದ್ಯಾರ್ಥಿಗಳು ರಾಜ್ಯಕ್ಕೆ ಆಯ್ಕೆಯಾಗಿ ರಾಜ್ಯ ಚುನಾವಣಾ ಆಯುಕ್ತರಿಂದ ಬಹುಮಾನ ಪಡೆದಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಪಾಲ್ಗೊಂಡಿದ್ದರು.
ಫೆಬ್ರವರಿ 10ರಂದು ಇಂದಿರಾ ಕ್ಯಾಂಟಿನ್ ಉದ್ಘಾಟನೆ
**********************************************
ಕಲಬುರಗಿ, ಫೆ.09.(ಕ.ವಾ)-ಕಲಬುರಗಿ ನಗರದಲ್ಲಿ ಒಟ್ಟು 7 ಸ್ಥಳಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗುತ್ತಿದ್ದು, ಫೆಬ್ರುವರಿ 10ರಂದು ಮಹಾನಗರ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್ ಉದ್ಘಾಟಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸ್ಟೇಷನ್ ಐಬಿ ಹತ್ತಿರ, ಸೂಪರ್ ಮಾರ್ಕೇಟ್ ಸಿಟಿ ಬಸ್ ನಿಲ್ದಾಣ, ತಾಜ್ ಸುಲ್ತಾನ್‍ಪುರ ಎಪಿಎಂಸಿ ಯಾರ್ಡ, ಜಯದೇವ ಆಸ್ಪತ್ರೆ (ವಿತ್ ಕಿಚನ್) ಸೇರಿದಂತೆ ಒಟ್ಟು 6 ಇಂದಿರಾ ಕ್ಯಾಂಟಿನ್‍ಗಳ ನಿರ್ಮಾಣ ಪೂರ್ಣಗೊಂಡಿದ್ದು, ಇನ್ನೇರಡು ದಿನಗಳಲ್ಲಿ ಆರಂಭಗೊಳ್ಳಲಿವೆ. ಆಳಂದ ಚೆಕ್‍ಪೋಸ್ಟ್ ಹತ್ತಿರದ ಇಂದಿರಾ ಕ್ಯಾಂಟೀನ್ ನಿರ್ಮಾಣ ಹಂತದಲ್ಲಿದೆ ಎಂದರು.
ಈಗಾಗಲೇ ಇಂದಿರಾ ಕ್ಯಾಂಟಿನ್ ಆರಂಭಿಸಲು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದ್ದು, ಆದಷ್ಟು ಬೇಗ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು. ಕ್ಯಾಂಟೀನ್‍ಗಳಿಗೆ ಅವಶ್ಯಕವಿರುವ ಆಹಾರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಪಾಲ್ಗೊಂಡಿದ್ದರು.
ಫೆ. 28 ರೊಳಗೆ ಮತದಾನ ಕೇಂದ್ರಗಳಲ್ಲಿನ ನ್ಯೂನತೆ ಸರಿಪಡಿಸಿ
*********************************************************
-ಮೊಹಮ್ಮದ ಮೊಹಸಿನ್
**********************
ಕಲಬುರಗಿ, ಫೆ.09.(ಕ.ವಾ)-ಮುಂಬರುವ ಸಾರ್ವತ್ರಿಕ ವಿಧಾನಸಭೆಗೆ ಈಗಾಗಲೆ ಗುರುತಿಸಲಾಗಿರುವ ಮತದಾನ ಕೇಂದ್ರಗಳಲ್ಲಿ ಕೆಲವೊಂದು ನ್ಯೂನತೆಗಳಿರುವುದನ್ನು ಚುನಾವಣಾ ಆಯೋಗವು ಗುರುತಿಸಿದ್ದು, ಅವೆಲ್ಲವುಗಳನ್ನು ಫೆಬ್ರವರಿ 28 ರೊಳಗೆ ಸರಿಪಡಿಸಿ ಸುಗಮ ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಚುನಾವಣಾ ಮತದಾರರ ಪಟ್ಟಿಯ ವೀಕ್ಷಕ ಮೊಹಮ್ಮದ್ ಮೊಹಸಿನ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮತದಾನ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ರ್ಯಾಂಪ್ ಸೇರಿದಂತೆ ಮತ್ತಿತರ ಮೂಲಭೂತ ಸೌಲಭ್ಯಗಳ ಇರುವಿಕೆ ಬಗ್ಗೆ ಚುನಾವಣಾ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು ಎಂದರು.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಚೇತ್ರಗಳಲ್ಲಿ 5 ಮತದಾನ ಕೇಂದ್ರಗಳಿರುವ 1 ಕಟ್ಟಡ, 4 ಮತದಾನ ಕೇಂದ್ರಗಳಿರುವ 12 ಕಟ್ಟಡ(ಕಲಬುರಗಿ ನಗರದಲ್ಲಿ 8), 3 ಮತದಾನ ಕೇಂದ್ರಗಳಿರುವ 28 ಕಟ್ಟಡ(ಕಲಬುರಗಿ ನಗರದಲ್ಲಿ 8) ಮತ್ತು 6 ಮತದಾನ ಕೇಂದ್ರಗಳಿರುವ 3 ಕಟ್ಟಡಗಳು ಇರುವುದು ಆಯೋಗದ ಗಮನಕ್ಕೆ ಬಂದಿದ್ದು, ಇಂತಹ ಕಟ್ಟಡಗಳ ಸಮೀಪದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಅಗತ್ಯ ಮೂಲಸೌಕರ್ಯವುಳ್ಳ ಸರ್ಕಾರಿ ಕಟ್ಟಡಗಳು ಲಭ್ಯವಿದ್ದಲ್ಲಿ ಮತದಾನ ಕೇಂದ್ರ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅತಿ ಹೆಚ್ಚು ಹೆಸರುಗಳ ಸೇರ್ಪಡೆ ಮತ್ತು ತೆಗೆದುಹಾಕುವಿಕೆ ಇರುವ ಕಡೆ ತಹಶೀಲ್ದಾರರು ಮತ್ತು ಪರಿಷ್ಕರಣೆಯ ಉಸ್ತುವಾರಿ ಅಧಿಕಾರಿಗಳು ಖುದ್ದಾಗಿ ಗ್ರಾಮಗಳಿಗೆ ತೆರಳಿ ಮನೆ-ಮನೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲನೆ ಮಾಡುವುದಲ್ಲದೆ ಈ ಸಂಬಂಧ ಅಗತ್ಯ ದಾಖಲಾತಿಗಳನ್ನು ಪಡೆದಿಟ್ಟುಕೊಳ್ಳಬೇಕು ಎಂದ ಅವರು ಈ ಬಗ್ಗೆ ಅಂಕಿ-ಸಂಖ್ಯೆಯ ಮಾಹಿತಿಯನ್ನು ಸಭೆಗೆ ತರದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ವೀಕ್ಷಕರು ಸಂಬಂಧಿಸಿದ ತಹಶೀಲ್ದಾರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಮತದಾರರ ಪರಿಷ್ಕರಣೆ ಸಂಬಂಧಿಸಿದಂತೆ ಮತದಾನ ದಿನದಂದು ಉದ್ಭವಿಸುವ ಸಮಸ್ಯೆಗಳಿಗೆ ಸಂಬಂಧಿಸಿದ ತಹಶೀಲ್ದಾರರೆ ಜವಾಬ್ದಾರರಾಗುತ್ತಾರೆ ಎಂದ ಅವರು ಮತದಾರರ ಪರಿಷ್ಕರಣೆ ಸಂಬಂಧ ಆನ್‍ಲೈನ್ ಮೂಲಕ ಸ್ವೀಕರಿಸಿದ ದೂರುಗಳ ಬಗ್ಗೆ ರಿಜಿಸ್ಟರ್‍ನಲ್ಲಿ ನಮೂದಿಸಿಕೊಂಡು ಈ ಬಗ್ಗೆ ವರದಿ ನೀಡಬೇಕು ಹಾಗೂ ದೂರುಗಳ ಸ್ಥಿತಿಗಳ ಬಗ್ಗೆ ಸಾರ್ವಜನಿಕರಿಗೆ ಮೊಬೈಲ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಇನ್ನು ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳು, ಗಣ್ಯ ಮತ್ತು ಪ್ರಮುಖ ವ್ಯಕ್ತಿಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಅಥವಾ ತೆಗೆದುಹಾಕುವಿಕೆಯ ಬಗ್ಗೆ ಖುದ್ದಾಗಿ ಪರಿಶೀಲಿಸಿ ಮತದಾನ ದಿನದಂದು ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬೇಕು. ಇದನ್ನು ಗಂಭೀರವಾಗಿ ಪರಿಗಣಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಯಾ ತಹಸೀಲ್ದಾರರು ಸ್ವೀಕರಿಸಿದ ದೂರುಗಳ ಬಗ್ಗೆ ಮತ್ತು ಅದನ್ನು ವಿಲೇವಾರಿ ಮಾಡಿರುವ ಕುರಿತು ವರದಿಯನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ 18-19 ವಯೋಮಾನದ ಸುಮಾರು 3500 ಯುವ ವಿದ್ಯಾರ್ಥಿಗಳ ನೋಂದಣಿಗೆ ಕಾಲೇಜುಗಳಿಗೆ ಲ್ಯಾಪಟಾಪ್ ನೀಡಿ ಅಲ್ಲಿಯೆ ಆನ್‍ಲೈನ್ ಮೂಲಕ ನೊಂದಣಿ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಸ್ವೀಪ್ ಸಮಿತಿಯ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಪ್ರೋಬೇಷನರಿ ಐ.ಎ.ಎಸ್ ಆಕೃತಿ ಸಾಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು, ಮತ್ತೀತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮಳಖೇಡ ಗ್ರಾಮದಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ
******************************************************************
ಕಲಬುರಗಿ,ಫೆ.09.(ಕ.ವಾ)-ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದ ಹಿರಿಯ ಆರೋಗ್ಯ ಸಹಾಯಕ ರಾಜು ಧಾಬಿಮನಿ ಅವರು ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಘೋಷಣೆ ಬೋಧಿಸಿದರು. ಶಾಲೆಯ ಮುಖ್ಯಗುರು ಸರ್ವರ ಜಹಾನ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕ ಗಣಪತಿ ವಿಂಬಡಶೆಟ್ಟಿ ಅವರು ಕುಷ್ಠರೋಗ ಹರಡುವಿಕೆ, ಕುಷ್ಠರೋಗದ ಪ್ರಾರಂಭಿಕ ಲಕ್ಷಣ, ರೋಗಗಳನ್ನು ತಡೆಗಟ್ಟುವ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕ ಮಲ್ಲಿನಾಥ ಗಂಗಾ, ಶಾಲೆಯ ಸಹಶಿಕ್ಷಕಿ ವಿಜಯಲಕ್ಷ್ಮೀ ಪತ್ತಾರ, ಮರಿಯಮ್ಮ ಎಸ್. ನಾಟಿಕರ, ನೂರ ಜಹಾನ್, ಫರಹತ ಜಹಾನ್ ಉಪಸ್ಥಿತಿದ್ದರು. ಸಹಶಿಕ್ಷಕಿ ರಾಜೇಶ್ವರಿ ವಂದಿಸಿದರು.
ಸ್ವೀಪ್ ಸಮಿತಿಯಿಂದ ಬ್ಯಾಡ್ಜ್ ಬಿಡುಗಡೆ
*********************************
ಕಲಬುರಗಿ,ಫೆ.09.(ಕ.ವಾ.)-ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನದಲ್ಲಿ ಭಾಗಿಯಾಗಲು ಹಾಗೂ ಅದರ ಮಹತ್ವ ಕುರಿತು ಅರಿವಿಗೆ ಶ್ರಮಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿಯು ಚುನಾವಣಾ ಸಿಬ್ಬಂದಿಗೆ ನೀಡಲೆಂದೆ ಹೊರತಂದಿರುವ “ಬ್ಯಾಡ್ಜ್” ಗಳನ್ನು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಚುನಾವಣಾ ಮತದಾರರ ಪಟ್ಟಿಯ ವೀಕ್ಷಕ ಮೊಹಮ್ಮದ್ ಮೊಹಸಿನ್ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರು, ಚುನಾವಣಾ ಕಾರ್ಯದಲ್ಲಿ ನಿರತರಾಗಿರುವ ಬಿ.ಎಲ್.ಓ.ಗಳು, ಶಿಕ್ಷಕರು ಹಾಗೂ ಇನ್ನೀತರ ಸಿಬ್ಬಂದಿಗಳಿಗೆ ಈ ಬ್ಯಾಡ್ಜ್‍ಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ 10 ಸಾವಿರ ಬ್ಯಾಡ್ಜ್‍ಗಳನ್ನು ಸಿದ್ದಪಡಿಸಲಾಗಿದ್ದು, ಇದನ್ನು ಸಿಬ್ಬಂದಿಗಳು ಹಾಕಿಕೊಂಡು ಕಾರ್ಯನಿರ್ವಹಿಸುವ ಮುಖೇನ ಚುನಾವಣೆಯ ಮಹತ್ವ ಸಾರುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ವಿಶೇಷವಾಗಿ ಯುವ ಸಮುದಾಯವನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭಾಗಿಯಾಗಲು ಪ್ರೇರೇಪಿಸಲು 18-18 ಪರಿಕಲ್ಪನೆಯೊಂದಿಗೆ (ವರ್ಷ 2018, ಮತದಾನಕ್ಕೆ ಬೇಕು 18 ವರ್ಷ) ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ 18 ಜನರನ್ನೊಳಗೊಂಡ ತಂಡದ ಒಂದು ಗ್ರಾಮ ಮತ್ತೊಂದು ಗ್ರಾಮದ ತಂಡದೊಂದಿಗೆ ಕಬ್ಬಡ್ಡಿ ಸ್ಪರ್ಧೆ, ನಂತರ ತಾಲೂಕು ಮಟ್ಟದ ಸ್ಪರ್ಧೆ ಹಾಗೂ ಅದೇ ಅದೇ ಸಂಖ್ಯೆ ಮಹಿಳೆಯರಿಗೆ ಕುಂಟಲಪಿ ಸ್ಪರ್ಧೆ ಏರ್ಪಡಿಸಲಾಗಿದೆ. ಮನೆಯಲ್ಲಿ ಕೆಲಸ ನಿರ್ವಹಿಸುವ ಸುಮಾರು 500 ಗೃಹ ಕಾರ್ಮಿಕ ಮಹಿಳೆಯರ ಕೈಗಳಿಗೆ ಮೆಹಂದಿ ಹಚ್ಚುವುದು ಸೇರಿದಂತೆ ಅನೇಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸ್ವೀಪ್ ಕಾರ್ಯಚಟುವಟಿಕೆಯ ಕ್ರಿಯಾ ಯೋಜನೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಪ್ರೋಬೇಷನರಿ ಐ.ಎ.ಎಸ್ ಆಕೃತಿ ಸಾಗರ, ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರರು ಮತ್ತೀತರ ಅಧಿಕಾರಿಗಳು ಉಪಸ್ಥಿತರಿದ್ದರು.
ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
**********************************************************************
ಕಲಬುರಗಿ,ಫೆ.09.(ಕ.ವಾ.)-ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುತ್ತಿರುವ ವಿವಿಧ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯು ಫೆಬ್ರವರಿ 10ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದುಗಡೆಯಿರುವ ರೇಷ್ಮಿ ಪದವಿ ಕಾಲೇಜಿನಲ್ಲಿ (ಒಂದು ಪರೀಕ್ಷಾ ಕೇಂದ್ರ) ಹಾಗೂ ಫೆಬ್ರವರಿ 11ರಂದು ನಗರದ ಒಟ್ಟು 87 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 9 ರಿಂದ 11.30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಜರುಗಲಿದೆ.
ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಮೆರವಣಿಗೆ ಹಾಗೂ ಧರಣಿ ನಡೆಸಬಾರದು ಹಾಗೂ ಜಿರಾಕ್ಸ್/ಪುಸ್ತಕ ಮಳಿಗೆಗಳನ್ನು ಮುಚ್ಚುವಂತೆ ಕಲಬುರಗಿ ತಹಶೀಲ್ದಾರ್ ಅಶೋಕ ಹಿರೋಳ್ಳೆ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ಸ್ ವಸ್ತು ಮತ್ತು ಚಿಕ್ಕ ಗಾತ್ರದ ಪುಸ್ತಕಗಳನ್ನು ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.
ಆಡಳಿತ ಮಂಡಳಿ ಚುನಾವಣೆಗೆ ಬಾಕಿಯಿರುವ ಸಹಕಾರ ಸಂಘಗಳ ಗಮನಕ್ಕೆ
******************************************************************
ಕಲಬುರಗಿ,ಫೆ.09.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ 2018ರ ಜನವರಿ 1 ರಿಂದ ಡಿಸೆಂಬರ್ 31 ರ ಅಂತ್ಯಕ್ಕೆ ಆಡಳಿತ ಮಂಡಳಿ ಚುನಾವಣೆಗೆ ಬಾಕಿ ಇರುವ ಎಲ್ಲ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಹಾಗೂ ಸಹಕಾರ ಬ್ಯಾಂಕುಗಳ ನಿಯಮ 13(ಡಿ)(1) ರಲ್ಲಿ ತಮ್ಮ ಸಂಘದ ಮಾಹಿತಿ ಭರ್ತಿ ಮಾಡಿ ತಮ್ಮ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಂದ ಪರಿಶೀಲನೆ ಜರುಗಿಸಿ ಉಪನಿಬಂಧಕರ ಕಚೇರಿಗೆ ಸಲ್ಲಿಸಿದಲ್ಲಿ ಮಾತ್ರ ಸಂಘಗಳ/ಸೌಹಾರ್ದ ಸಹಕಾರಿಗಳು ಹಾಗೂ ಸಹಕಾರ ಬ್ಯಾಂಕುಗಳ ಚುನಾವಣೆಗಾಗಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು. ಮಾಹಿತಿ ಸಲ್ಲಿಸದೇ ಇದ್ದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರೇ ಹೊಣೆಗಾರರಾಗುವರು.
ಈ ಹಿನ್ನೆಲೆಯಲ್ಲಿ 2018ರ ಜನವರಿ 1 ರಿಂದ ಡಿಸೆಂಬರ್ 31 ರ ಅಂತ್ಯಕ್ಕೆ ಚುನಾವಣೆಗೆ ಬಾಕಿ ಇರುವ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ಹಾಗೂ ಸಹಕಾರ ಬ್ಯಾಂಕುಗಳು ತಮ್ಮ ತಮ್ಮ ಉಪವಿಭಾಗದ ಸಹಾಯಕ ನಿಬಂಧಕರಿಗೆ ಸಂಪರ್ಕಿಸಿ ಮಾಹಿತಿ ಪಡೆದು ತಕ್ಷಣ ಕಲಬುರಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ತಪ್ಪಿದಲ್ಲಿ ಸದರಿ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ಹಾಗೂ ಸಹಕಾರ ಬ್ಯಾಂಕುಗಳು ಸ್ಥಗಿತಗೊಂಡಿವೆ ಎಂದು ಪರಿಗಣಿಸಿ ಸಮಾಪನೆ ಮಾಡಲಾಗುವುದು ಎಂದು ಕಲಬುರಗಿ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಜಿಲ್ಲಾ ಸಹಕಾರ ಚುನಾವಣಾಧಿಕಾರಿ ಟಿ. ಫೈರೋಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment