GULBARGA VARTHE

GULBARGA VARTHE

Wednesday, 7 February 2018

News and photo date: 7-2-2018

ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನಲ್ಲಿ ಅಂಗ ಹಾಗೂ ದೇಹದಾನ ಕೇಂದ್ರ ಪ್ರಾರಂಭ
************************************************************************
ಕಲಬುರಗಿ,ಫೆ.7.(ಕ.ವಾ.)-ಕಲಬುರಗಿಯ ಇಎಸ್‍ಐಸಿ ಮೆಡಿಕಲ್ ಕಾಲೇಜಿನಲ್ಲಿ ಅಂಗದಾನ ಹಾಗೂ ದೇಹದಾನ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕಲಬುರಗಿಯ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಡೀನ್ ಡಾ|| ಪ್ರಶಾಂತ ಪೌನಿಪಗರ ತಿಳಿಸಿದರು.
ಅವರು ಬುಧವಾರ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂಗ ಹಾಗೂ ದೇಹದಾನ ಕೇಂದ್ರ ಕಲಬುರಗಿಯಲ್ಲಿ ಪ್ರಾರಂಭಿಸುವುದು ವಿನೂತನವಾಗಿದ್ದು, ಅಂಗ ಮತ್ತು ದೇಹದಾನ ಮಾಡಿದ ಕುಟುಂಬಕ್ಕೆ ಇ.ಎಸ್.ಐ.ಸಿ. ಆಸ್ಪತ್ರೆಯಿಂದ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವುದು ಎಂದರು.
ಸಾವು ಸಂಭವಿಸಿದ ನಂತರ ಮಾನವನ ದೇಹವನ್ನು ಸುಟ್ಟು ಅಥವಾ ಮಣ್ಣು ಮಾಡಿ ನಾಶ ಮಾಡುವುದಕ್ಕಿಂತ ದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ದಾನ ಮಾಡಿದರೆ ಅದರಿಂದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು ಹಾಗೂ ಸಂಶೋಧನೆ ಕೈಗೊಳ್ಳಲು ಅನುಕೂಲವಾಗುವುದು. ಎಂ.ಸಿ.ಎ. ನಿಯಮಾವಳಿಗಳ ಪ್ರಕಾರ ಹತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಒಂದು ದೇಹ ಬೇಕಾಗುತ್ತದೆ. ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜಿಗೆ ವರ್ಷಕ್ಕೆ ಸುಮಾರು ಹತ್ತು ಮೃತ ದೇಹಗಳ ಅವಶ್ಯಕತೆಯಿದೆ ಎಂದು ತಿಳಿಸಿದ ಅವರು ನಾಗರಿಕರು ಸ್ವಯಂ ಪ್ರೇರಿತರಾಗಿ ದೇಹದಾನ ಮಾಡಲು ಮುಂದಾಗಬೇಕು ಎಂದರು.
ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಅಂಗರಚನಾ ವಿಭಾಗದ ಮುಖ್ಯಸ್ಥರು ಹಾಗೂ ಪ್ರೊಫೇಸರ್ ಡಾ|| ಹೆಚ್.ಎಸ್. ಕಡಲಿಮಟ್ಟಿ ಮಾತನಾಡಿ, ಫೆಬ್ರವರಿ 8ರಿಂದ ದೇಹದಾನ ಮಾಡುವವರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ನೋಂದಣಿ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಅರ್ಜಿ ನಮೂನೆ ಭರ್ತಿ ಮಾಡಿ ಇಬ್ಬರೂ ಸಮೀಪದ ಸಂಬಂಧಿಗಳ ಸಾಕ್ಷ್ಯಿ ನೀಡಿದ್ದಲ್ಲಿ ನೋಂದಣಿ ಕಾರ್ಯ ಪೂರ್ಣಗೊಳ್ಳುವುದು. ದೇಹದಾನ ಮಾಡಿದ ವ್ಯಕ್ತಿಯು ಮೃತಪಟ್ಟ ನಂತರ ಸಂಬಂಧಿಕರು ತಿಳಿಸಿದ್ದಲ್ಲಿ ಮೃತ ದೇಹವನ್ನು ಸಕಲ ಮರ್ಯಾದೆಗಳೊಂದಿಗೆ ವೈದ್ಯಕೀಯ ಕಾಲೇಜಿಗೆ ತಂದು 10 ವಾರಗಳ ಕಾಲ ಶೀತ ಸಂಗ್ರಹಾಗಾರದಲ್ಲಿ ಇರಿಸಲಾಗುವುದು. ಈ ಸಮಯದಲ್ಲಿ ಹತ್ತಿರದ ಸಂಬಂಧಿಗಳು ದೇಹ ಪಡೆಯಲು ಇಚ್ಛಿಸಿದ್ದಲ್ಲಿ ಮರಳಿ ಸಲ್ಲಿಸಲಾಗುವುದು. 10 ವಾರಗಳ ನಂತರ ದೇಹವನ್ನು ಸಂರಕ್ಷಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು. ದೇಹದಾನಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|| ದೀನಾನಾಥ ಪೂಜಾರಿ, ಸಹಾಯಕ ಪ್ರಾಧ್ಯಾಪಕ ಡಾ|| ಚಂದ್ರೀಕಾ ತೇಲಿ, ಮತ್ತಿತರು ಉಪಸ್ಥಿತರಿದ್ದರು.
ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಕಾರ್ಯಾಗಾರದ ಮೂಲಕ ಜಾಗೃತಿ
*************************************************************************
ಕಲಬುರಗಿ,ಫೆ.7.(ಕ.ವಾ.)-ಮಕ್ಕಳ ದುರ್ಬಳಕೆ, ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಟ್ಟದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸಹಾಯವಾಣಿ ಸಲಹಾ ಮಂಡಳಿಯ 9ನೇ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಮುಂದಿನ ಎರಡು ವಾರಗಳಲ್ಲಿ ಎಲ್ಲ ತಾಲೂಕುಗಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ತಹಶೀಲ್ದಾರ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ತಾಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಬೇಕೆಂದರು.
ಮಕ್ಕಳ ಸಹಾಯವಾಣಿ 1098 ಕ್ಕೆ ಹೆಚ್ಚಿನ ಪ್ರಚಾರ ಹಾಗೂ ಮಾಹಿತಿ ನೀಡಲು ಎಲ್ಲ ಅಂಗನವಾಡಿ ಕೇಂದ್ರ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಲಸ್ನೇಹಿ ಗೋಡೆ ಬರಹಗಳನ್ನು ಎರಡು ವಾರಗಳಲ್ಲಿ ಪೂರ್ಣಗೊಳಿಸಬೇಕು. ಸ್ವಯಂ ಸೇವಾ ಸಂಸ್ಥೆಗಳು ಅಲ್ಲಲ್ಲಿ ಭೇಟಿ ನೀಡಿ ಮಾಹಿತಿ ನೀಡಬೇಕು. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸಬೇಕು. ಕಂದಾಯ, ಕಾರ್ಮಿಕ ಹಾಗೂ ಪಂಚಾಯತ್‍ರಾಜ್ ಇಲಾಖೆಯ ಅಧಿಕಾರಿಗಳು ಜೊತೆಗುಡಿ ಮಕ್ಕಳ ರಕ್ಷಣೆ ಮಾಡಬೇಕೆಂದರು.
ಮಕ್ಕಳ ಕಲ್ಯಾಣ ಸಮಿತಿಯಿಂದ ಜಿಲ್ಲೆಯಲ್ಲಿ ನಡೆಯುವ ಬಾಲ್ಯವಿವಾಹಗಳನ್ನು ತಪ್ಪಿಸಲಾಗುತ್ತದೆ. ಆದರೆ ನಂತರದ ದಿನಗಳಲ್ಲಿ ಬಾಲಕಿಯರ ಕುಟುಂಬದ ಮೇಲೆ ನಿಗಾ ಇಟ್ಟು ಪುನ: ಬಾಲ್ಯವಿವಾಹ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಆದರೆ ಜಿಲ್ಲೆಯಲ್ಲಿ ಕೆಲವು ಪ್ರಕರಣಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸೇಡಂ ಹಾಗೂ ಅಫಜಲಪುರ ತಾಲೂಕಿನಲ್ಲಿ ನಿಲ್ಲಿಸಿದ ಬಾಲ್ಯವಿವಾಹದ ಪ್ರಕರಣಗಳಲ್ಲಿ ಬಾಲಕಿಯರು ಗಂಡನ ಮನೆಯಲ್ಲಿ ಇರುವುದು ಕಂಡು ಬಂದಿರುವ ವಿಷಯ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಬಾಲಕಿಯರ ವಯಸ್ಸು 18 ವರ್ಷ ದಾಟುವವರೆಗೂ ಬಾಲಕಿಯ ಕುಟುಂಬದ ಮೇಲೆ ನಿಗಾ ಇಟ್ಟು ಎಚ್ಚರಿಕೆವಹಿಸಬೇಕೆಂದು ಸೂಚಿಸಿದರು.
ಮಕ್ಕಳ ಕಲ್ಯಾಣ ಸಮಿತಿಯು ಗ್ರಾಮ ಮಟ್ಟದಲ್ಲಿ, ಪುರಸಭೆ ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ತಿಂಗಳಿಗೆ ಒಂದು ಬಾರಿಯಾದರೂ ಸಭೆ ಸೇರಿ ಅನುಪಾಲನಾ ವರದಿ ಸಲ್ಲಿಸಬೇಕು. ಸಭೆಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ಉಪ ಕಾರ್ಯದರ್ಶಿ ಶಶಿಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಚೈಲ್ಡ್ ಲೈನ್ ನೋಡಲ್ ಕೇಂದ್ರದ ನಿರ್ದೇಶಕ ಡಾ. ಲಿಂಗರಾಜ್ ಎನ್. ಕೋಣಿನ್, ಚೈಲ್ಡ್ ಲೈನ್ ಕೋಲ್ಯಾಬ ಕೇಂದ್ರ ಡಾನ್‍ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾ|| ಸಜೀ ಜಾರ್ಜ್, ಮಾರ್ಗದರ್ಶಿ ಸಂಸ್ಥೆಯ ಉಪನಿರ್ದೇಶಕ ಆನಂದರಾಜ, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಹೆಚ್ಚಿನ ತಂಡ ರಚಿಸಿ ಇಟ್ಟಂಗಿ ಭಟ್ಟಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲು ಸೂಚನೆ
*************************************************************************
ಕಲಬುರಗಿ,ಫೆ.7.(ಕ.ವಾ.)-ನಗರದಲ್ಲಿ ಹಾಗೂ ನಗರದ ಸುತ್ತಮುತ್ತ ಹಲವಾರು ಕಡೆ ಇಟ್ಟಂಗಿ ಭಟ್ಟಿಗಳಿದ್ದು, ಇಲ್ಲಿ ಬಾಲಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ಕನಿಷ್ಠ 5 ತಂಡಗಳನ್ನು ರಚಿಸಿ ಎಲ್ಲ ಇಟ್ಟಂಗಿ ಭಟ್ಟಿಗಳ ಮೇಲೆ ಏಕಕಾಲದಲ್ಲಿ ಹಠಾತ ದಾಳಿ ಮಾಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಬಂಧಿಸಿದ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಬಾಲಕಾರ್ಮಿಕ ನಿರ್ಮೂಲನೆಗೆ ಸಂಬಂಧಿಸಿದಂತೆ ರಚಿಸಲಾದ 11 ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡದ ಅಧಿಕಾರಿಗಳು ಕಡ್ಡಾಯವಾಗಿ ದಾಳಿಯಲ್ಲಿ ಪಾಲ್ಗೊಳ್ಳಬೇಕು. ದಾಳಿಯಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿನದಾಗಿದ್ದು, ಪೊಲೀಸ್ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳುವಂತೆ ಸೂಚಿಸಿದರು.
ಬಾಲಕಾರ್ಮಿಕರನ್ನು ಬಳಸುವ ಯಾರೇ ಆಗಿರಲಿ ಅವರ ಮೇಲೆ ಎಫ್.ಐ.ಆರ್. ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಶಿಕ್ಷೆಗೆ ಗುರಿ ಮಾಡಬೇಕು. ಅಪಾಯಕಾರಿ ಪ್ರದೇಶಗಳಲ್ಲಿ ಬಾಲಕಾರ್ಮಿಕರನ್ನು ಬಳಸುತ್ತಿದ್ದಲ್ಲಿ ಅಂಥವರಿಗೆ ಖಂಡಿತ ಶಿಕ್ಷೆ ಆಗಲೇ ಬೇಕು. ಜಿಲ್ಲೆಯ ಪ್ರತಿಯೊಂದು ಕಾರ್ಖಾನೆಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಮಾಹಿತಿ ಫಲಕ ಹಾಕಬೇಕು. ಮಾಹಿತಿ ಫಲಕ ಅಳವಡಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಬಾಲಕಾರ್ಮಿಕ ಪದ್ಧತಿ ನಿಷೇಧ ಕುರಿತು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಕಾರ್ಮಿಕ ಅಧಿಕಾರಿಗಳು ಬಾಲಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಿ, ದಾಳಿ ಸಮಯದಲ್ಲಿ ಸಿಕ್ಕ ಬಾಲಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು. ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಅಪರಾಧ ಯಾರೂ ಮಾಡಬಾರದು. ಪಾಲಕರು 14ವರ್ಷದೊಳಗಿನ ಮಕ್ಕಳನ್ನು ಹಣ ಗಳಿಸಲು ಬೇರಡೆ ಕೆಲಸಕ್ಕೆ ಕಳುಹಿಸಿದರೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿ ಅಪರಾಧವಾಗುತ್ತದೆ. ಎಲ್ಲ ಶಾಲಾ ವಾಹನಗಳಲ್ಲಿ ಮಕ್ಕಳ ಸಹಾಯವಾಣಿ 1098 ಹಾಗೂ ಬಾಲಕಾರ್ಮಿಕ ನಿರ್ಮೂಲನೆ ಬಗ್ಗೆ ಮಾಹಿತಿ ನೀಡುವ ಸ್ಟೀಕರ್‍ಗಳನ್ನು ಹಚ್ಚಬೇಕು ಎಂದರು.
ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂಧಿಹಟ್ಟಿ ಮಾತನಾಡಿ, 2017ರ ಏಪ್ರಿಲ್‍ದಿಂದ 2018ರ ಜನವರಿವರೆಗೆ ಜಿಲ್ಲೆಯಲ್ಲಿ ಒಟ್ಟು 354 ಬಾಲಕಾರ್ಮಿಕರ ಪತ್ತೆಗಾಗಿ ದಾಳಿ ನಡೆಸಲಾಗಿದೆ. ಈ ಅವಧಿಯಲ್ಲಿ ಕಲಬುರಗಿ-23, ಅಫಜಲಪರ-03, ಚಿತ್ತಾಪುರ-03, ಚಿಂಚೋಳಿ-05, ಜೇವರ್ಗಿ-04, ಸೇಡಂ-05 ಹೀಗೆ ಒಟ್ಟು 43 ಬಾಲಕಾರ್ಮಿಕರ ಪತ್ತೆಯಾಗಿದ್ದು, 39 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಆಳಂದದಲ್ಲಿ ದಾಳಿ ನಡೆಸಿದಾಗ ಯಾವುದೇ ಬಾಲಕಾರ್ಮಿಕರು ಪತ್ತೆಯಾಗಿರುವುದಿಲ್ಲ. 2017ರ ಡಿಸೆಂಬರ್ 19ರಿಂದ 21ರವರೆಗೆ ಮರು ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಮಯದಲ್ಲೂ ಬಾಲಕಾರ್ಮಿಕರು ಪತ್ತೆಯಾಗಿಲ್ಲ. ಸರ್ಕಾರದಿಂದ ಬಾಲಕಾರ್ಮಿಕ ಶಾಲೆ ಪ್ರಾರಂಭಿಸಲು ಸೂಚಿಸಿದ್ದು, ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಕಾರ್ಮಿಕ ನಿರೀಕ್ಷಕರಾದ ರಮೇಶ ಸುಂಬಡ, ರವೀಂದ್ರಕುಮಾರ, ಸುಧಾ ಗರಗ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಫೆಬ್ರವರಿ 8ರಂದು ಕಲಬುರಗಿ ವಸ್ತ್ರ ಉತ್ಸವ-ವಿಶೇಷ ಕೈಮಗ್ಗ ಮೇಳ ಉದ್ಘಾಟನೆ
*********************************************************************
ಕಲಬುರಗಿ,ಫೆ.07.(ಕ.ವಾ)-ಕಲಬುರಗಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಮಹಾಶಿವರಾತ್ರಿ ಹಬ್ಬ, ಹೋಳಿ ಹಬ್ಬ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಫೆಬ್ರವರಿ 8ರಿಂದ 22ರವರೆಗೆ ಕಲಬುರಗಿಯ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಶ್ರೀ ಬಾಪುಗೌಡ ದರ್ಶನಾಪುರ ರಂಗಮಂದಿರದ ಕನ್ನಡ ಭವನದಲ್ಲಿ “ಕಲಬುರಗಿ ವಸ್ತ್ರ ಉತ್ಸವ-ವಿಶೇಷ ಕೈಮಗ್ಗ ಮೇಳ-2018”ರ ಅಂಗವಾಗಿ ಕೈಮಗ್ಗ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ” ವನ್ನು ಏರ್ಪಡಿಸಲಾಗಿದೆ.
ಫೆಬ್ರವರಿ 8ರಂದು ಸಂಜೆ 6 ಗಂಟೆಗೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಘನ ಉಪಸ್ಥಿತಿ ವಹಿಸುವರು.
ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕರ್ನಾಟಕ ರಾಜ್ಯ ಕೈಮಗ್ಗ ಸಹಕಾರಿ ಮಹಾಮಂಡಳ ನಿಗಮದ ಅಧ್ಯಕ್ಷ ಎನ್. ವಿರೂಪಾಕ್ಷಪ್ಪ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ರಮೇಶ ಯಾಕಾಪುರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜವಳಿ ಅಭಿವೃದ್ಧಿ ಆಯುಕ್ತ ಆರ್ ಗಿರೀಶ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್. ಮುರುಗನ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಕೈಮಗ್ಗ ಮತ್ತು ಜವಳಿ ಇಲಾಖೆಯ ಅಪರ ನಿರ್ದೇಶಕ ವಿಜಯಕುಮಾರ ಬಿ. ನಿರಾಳೆ, ಬಳ್ಳಾರಿ ಉತ್ತರ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ. ಶ್ರೀಧರ ನಾಯಕ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ, ನೇಕಾರ ಸೇವಾ ಕೇಂದ್ರದ ಉಪನಿರ್ದೇಶಕ ಜವಾಹರಲಾಲ ಕುನ್ಸೋತ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ, ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾ ಮಂಡಳಿ (ಕಾವೇರಿ ಹ್ಯಾಂಡಲೂಮ್) ಬೆಂಗಳೂರು ಹಾಗೂ ಕೈಮಗ್ಗ ಮತ್ತು ಜವಳಿ ಜಿಲ್ಲಾ ಪಂಚಾಯಿತಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮಳನ್ನು ಏರ್ಪಡಿಸಲಾಗಿದೆ.
ಫೆಬ್ರವರಿ 8 ರಂದು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ
*****************************************************
ಕಲಬುರಗಿ,ಫೆ.07.(ಕ.ವಾ)-ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ರೆಡ್‍ಕ್ರಾಸ್ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 8ರಂದು ಬೆಳಿಗ್ಗೆ 10.30 ಗಂಟೆಗೆ “ಅಪಘಾತ ಜೀವ ರಕ್ಷಕ ಯೋಜನೆಯಡಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ”ವನ್ನು ಕಲಬುರಗಿಯ ಸರ್ಕಾರಿ ಐ.ಟಿ.ಐ. ಕಾಲೇಜಿನ ಆವರಣದಲ್ಲಿನ ಕಾರ್ಮಿಕ ಭವನದಲ್ಲಿ ಏರ್ಪಡಿಸಲಾಗಿದೆ.
ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಕಾರ್ಯಾಗಾರವನ್ನು ಉದ್ಘಾಟಿಸುವರು. ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನ್ ಮೂರ್ತಿ ಅಧ್ಯಕ್ಷತೆ ವಹಿಸುವರು. ಕಲಬುರಗಿ ಉಪ ಪೊಲೀಸ್ ಅಧೀಕ್ಷಕ ಲೋಕೇಶ ಬಿ.ಜಗಲಾಸರ್, ರೆಡ್ ಕ್ರಾಸ್ ಸಂಸ್ಥೆ ಚೇರಮನ್ ಅಪ್ಪಾರಾವ ಅಕ್ಕೋಣಿ, ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಶಂಕರ ಕಟ್ಟಿ ಸಂಗಾವಿ ಮುಖ್ಯ ಅತಿಥಿಗಳಾಗಿ ಹಾಗೂ ಡಾ| ಮಲ್ಲಾರಾವ ಮಲ್ಲೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ಫೆಬ್ರವರಿ 8ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಫೆ.07.(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಗಾಜಿಪುರ, 11ಕೆ.ವಿ. ಬ್ರಹ್ಮಪುರ ಹಾಗೂ 11ಕೆ.ವಿ. ಜಯನಗರ ಮತ್ತು ಜಿ.ಜಿ.ಹೆಚ್. ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿರುವ ಪ್ರಯುಕ್ತ ಫೆಬ್ರವರಿ 8ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11ಕೆ.ವಿ ಗಾಜಿಪುರ ಫೀಡರ: ಚಕ್ಕರಕಟ್ಟಾ, ಸುಪರ ಮಾರ್ಕೆಟ್, ಮಟನ ಮಾರ್ಕೆಟ್, ಹಳೇ ಕಮಾಂಡೆಂಟ್ ಕಚೇರಿ, ರೇಮಾಂಡ್ ಶೋ ರೂಂ, ಗಾಜಿಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು. 11ಕೆ.ವಿ ಬ್ರಹ್ಮಪೂರ ಫೀಡರ: ಶಹ ಬಜಾರ, ಕೈಲಾಶ ನಗರ, ಮಹಾಲಕ್ಷ್ಮೀ ಲೇಔಟ್, ಜಿ.ಡಿ.ಎ. ಮತ್ತು ಸುತ್ತ ಮುತ್ತಲಿನ ಪ್ರದೇಶಗಳು. 11ಕೆ.ವಿ. ಜಯನಗರ ಮತ್ತು ಜಿ.ಜಿ.ಹೆಚ್. ಪೀಡರ: ಜಯನಗರ, ಓಕಳಿಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಅರಿಹಂತ ನಗರ, ಎನ್.ಜಿ.ಓ. ಕಾಲೋನಿ, ಸೂರ್ಯನಗರ, ಡಾಕ್ಟರ್ ಕಾಲೋನಿ, ತೇಲಕರ್ ಲೇಔಟ್, ಪೂಜಾ ಕಾಲೋನಿ, ತೇಲಕರ ಲೇಔಟ್, ಕುಸುನೂರ ಜಿ.ಡಿ.ಎ. ಲೇಔಟ್, ವಿಶ್ವೇಶ್ವರಯ್ಯ ಕಾಲೋನಿ, ಆಂಜನೇಯ ನಗರ, ಸಂತೋಷ ಹೋಟೆಲ್, ಅಣ್ಣಮ್ಮಾ ನಗರ, ಭಾಗ್ಯನಗರ, ಡೆಂಟಲ್ ಕಾಲೇಜ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಫೆಬ್ರವರಿ 9ರಂದು ಅಣವೀರಭದ್ರೇಶ್ವರ ದೇವಸ್ಥಾನದಲ್ಲಿ ಟೆಂಗಿನ ಹರಾಜು
**************************************************************
ಕಲಬುರಗಿ,ಫೆ.07.(ಕ.ವಾ)-ಚಿತ್ತಾಪುರ ತಾಲೂಕಿನ ಕೋರವಾರ ಗ್ರಾಮದ ಅಣವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯು ಫೆಬ್ರವರಿ 14 ರಿಂದ 17 ರವರೆಗೆ ನಡೆಯಲಿದೆ. ಜಾತ್ರೆಯ ಅಂಗವಾಗಿ ಫೆಬ್ರವರಿ 9ರಂದು ಮಧ್ಯಾಹ್ನ 1 ಗಂಟೆಗೆ ಇದೇ ದೇವಸ್ಥಾನದಲ್ಲಿ ಟೆಂಗಿನ ಹರಾಜು ಮಾಡಲಾಗುತ್ತಿದ್ದು, ಆಸಕ್ತಿಯುಳ್ಳ ಟೆಂಗಿನ ವ್ಯಾಪಾರಿಗಳು ಈ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಚಿತ್ತಾಪೂರ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಸಂತ ಸೇವಾಲಾಲ ಜಯಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಣಯ
ಕಲಬುರಗಿ,ಫೆ.07.(ಕ.ವಾ.)-ಲಂಬಾಣಿ ಸಮಾಜದ ದಾರ್ಶನಿಕ ಮತ್ತು ಸಮಾಜ ಸುಧಾರಕ ಸಂತ ಶ್ರೀ ಸೇವಾಲಾಲ ಜಯಂತಿಯನ್ನು ಫೆಬ್ರವರಿ 15ರಂದು ಗುರುವಾರ ಕಲಬುರಗಿ ನಗರದಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕಲಬುರಗಿಯಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಜಯಂತಿ ಆಚರಣೆಯ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ರಂಗಮಂದಿರವರೆಗೆ ಸಂತ ಶ್ರೀ ಸೇವಾಲಾಲ ಅವರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಆಯೋಜಿಸಲು ಹಾಗೂ ಮುಖ್ಯ ಕಾರ್ಯಕ್ರಮವನ್ನು ಬೆಳಿಗ್ಗೆ 11 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಂತ ಶ್ರೀ ಸೇವಾಲಾಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲು ಹಾಗೂ ಸಂತ ಶ್ರೀ ಸೇವಾಲಾಲ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.
ಸದರಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳನ್ನು, ಬೇಡಸೂರಿನ ಪರಮೇಶ್ವರ ಮಹಾರಾಜ, ಮುಗಳ ನಾಗಾಂವ ಜೇಮಸಿಂಗ್ ಮಹಾರಾಜ್ ಹಾಗೂ ಗಬ್ಬೂರವಾಡಿಯ ಬಳಿರಾಮ ಮಹಾರಾಜ ಅವರನ್ನು ಕಾರ್ಯಕ್ರಮದ ಸಾನಿಧ್ಯ ವಹಿಸಲು ಆಹ್ವಾನಿಸುವಂತೆ ಸಭೆಯು ತೀರ್ಮಾನಿಸಿತು.
ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಆಕರ್ಷಕ ಕಲಾ ತಂಡಗಳ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್ ಮುಂತಾದವುಗಳÀ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಂತ ಶ್ರೀ ಸೇವಾಲಾಲ ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ರೇವುನಾಯಕ ಬೆಳಮಗಿ, ಸುಭಾಷ ರಾಠೋಡ, ಆರ್.ಜಿ. ಜಾಧವ, ರವಿ ರಾಠೋಡ, ವಿಠ್ಠಲ ಆರ್. ಚವ್ಹಾಣ, ವಿನೋದ, ಡಿ.ಬಿ.ನಾಯಕ ಮತ್ತಿತರ ಗಣ್ಯರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಉಪಸ್ಥಿತರಿದ್ದರು.
ಫೆ. 11 ರಂದು ದ್ವಿ.ದ.ಸ. ಹಾಗೂ ಫೆ. 25ರಂದು
******************************************
ಪ್ರ.ದ.ಸ. ಪರೀಕ್ಷೆ: ತೀವ್ರ ಕಟ್ಟೆಚ್ಚರಕ್ಕೆ ಸೂಚನೆ
***************************************
ಕಲಬುರಗಿ,ಫೆ.07.(ಕ.ವಾ.)-ಕರ್ನಾಟಕ ಲೋಕಸೇವಾ ಆಯೋಗದಿಂದ ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಥಮ ದರ್ಜೆ ಸಹಾಯಕ ಹುದ್ದೆಯ ನೇಮಕಾತಿಗಾಗಿ ಕ್ರಮವಾಗಿ ಫೆಬ್ರವರಿ 11 ಮತ್ತು ಫೆಬ್ರವರಿ 25ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯನ್ನು ತೀವ್ರ ಕಟ್ಟೆಚ್ಚರ ಮತ್ತು ಜವಾಬ್ದಾರಿಯಿಂದ ನಡೆಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೂಟ್ ಅಧಿಕಾರಿಗಳು, ಜಾಗೃತಿ ದಳದ ಮುಖ್ಯಸ್ಥರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಪರೀಕ್ಷೆಗಾಗಿ ಜಿಲ್ಲೆಯಾದ್ಯಂತ ಒಟ್ಟು 118 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಕಲಬುರಗಿಯಲ್ಲಿ-87, ಜೇವರ್ಗಿ-11, ಸೇಡಂ-08, ಆಳಂದ-05, ಚಿತ್ತಾಪುರದಲ್ಲಿ-07 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದ್ವಿತೀಯ ದರ್ಜೆ ಪರೀಕ್ಷೆಗಾಗಿ ಒಟ್ಟು 54,290 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗಾಗಿ 75 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 27547 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸೂಸೂತ್ರವಾಗಿ ನಡೆಯಲು ಒಟ್ಟು 27 ರೂಟ್ ಅಧಿಕಾರಿಗಳನ್ನು ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ. ವೀಕ್ಷಕರು ಹಾಗೂ ಮಾರ್ಗಾಧಿಕಾರಿಗಳು ಮುಂಚಿತವಾಗಿಯೇ ತಮಗೆ ನೇಮಿಸಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು. ಈಗಾಗಲೇ ಫೆಬ್ರವರಿ 4ರಂದು ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳು ಕಾರಣಾಂತರಗಳಿಂದ ರದ್ದಾದ ಕಾರಣ ಪ್ರ.ದ.ಸ. ಹಾಗೂ ದ್ವಿ.ದ.ಸ. ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಖಜಾನೆಯಲ್ಲಿ ಸಂಗ್ರಹಿಸಲಾಗಿದ್ದು, ಅವುಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸಿ ಇಡುವಂತೆ ತಿಳಿಸಿದರು.
ಪ್ರ.ದ.ಸ. ಹಾಗೂ ದ್ವಿ.ದ.ಸ. ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಮೊಬೈಲ್, ಬ್ಲ್ಯೂಟೂತ್‍ಗಳನ್ನು ತೆಗೆದುಕೊಂಡು ಹೋಗಲಾರದಂತೆ ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿ ಸಂಗ್ರಹಿಸಿ ಇಡಬೇಕು. ಪರೀಕ್ಷೆಗಳಲ್ಲಿ ಯಾರಾದರೂ ಮೊಬೈಲ್ ಅಥವಾ ಬ್ಲ್ಯೂಟೂತ್ ಬಳಸಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಲಾಗುವುದು. ಕೆಲವು ಕೇಂದ್ರಗಳಲ್ಲಿ ಮುಖ್ಯಸ್ಥರು ನಕಲು ಮಾಡಲು ಉತ್ತೇಜಿಸುತ್ತಿರುವ ಬಗ್ಗೆ ನಿಖರ ಮಾಹಿತಿ ದೊರೆತಿದ್ದು, ಈ ಬಾರಿ ನಕಲು ನಡೆದಲ್ಲಿ ಅವರ ವಿರುದ್ಧ ಎಫ್.ಐ.ಆರ್. ದಾಖಲಿಸಿ ಶಿಕ್ಷೆಗೆ ಗುರಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಹಿಂದೆ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಆಸನ, ಕುಡಿಯುವ ನೀರು, ಸಾಕಷ್ಟು ಬೆಳಕಿನ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಹಾಗೂ ಸುಗಮ ಪರೀಕ್ಷಾ ಸಿದ್ಧತೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರತ್ಯೇಕ ಮಹಿಳಾ ಮತ್ತು ಪುರುಷ ಪೊಲೀಸರನ್ನು ನೇಮಿಸುವುದು. ಪೊಲೀಸರು ಪರೀಕ್ಷಾ ಆರಂಭವಾಗುವ ಒಂದು ಗಂಟೆ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಅಭ್ಯರ್ಥಿಗಳನ್ನು ತಪಾಸಣೆ ನಡೆಸಿಯೇ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುವು ಮಾಡಿಕೊಡಬೇಕೆಂದರು.
ಸಭೆಯಲ್ಲಿ ಜೇವರ್ಗಿ ತಹಶೀಲ್ದಾರ ಅಕೃತಿ ಸಾಗರ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ಮಾರ್ಗಾಧಿಕಾರಿಗಳು, ವೀಕ್ಷಕರು, ಮುಖ್ಯ ಮೇಲ್ವಿಚಾರಕರು ಸೇರಿದಂತೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರ ಪ್ರವಾಸ
************************************************************
ಕಲಬುರಗಿ,ಫೆ.7.(ಕ.ವಾ.)-ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಗನ್ನಾಥ ಆರ್. ಜಮಾದಾರ ಅವರು ಫೆಬ್ರವರಿ 12ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಗೆ ಆಗಮಿಸುವರು.
ನಂತರ ಅಂದು ಕಲಬುರಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದ ಕಾರ್ಯಕ್ರಮಗಳ ಕುರಿತು ಬೆಸ್ತ, ಕಬ್ಬಲಿಗ, ಕೋಲಿ, ಗಂಗಾಮತ, ಮೊಗವೀರ ಸಮುದಾಯಗಳ ಮುಖಂಡರೊಂದಿಗೆ ಮತ್ತು ಸಮಾಜದವರೊಂದಿಗೆ ಸಮಾಲೋಚಿಸುವರು. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಫೆಬ್ರವರಿ 14ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸುವರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ
**********************************************************
ಕಲಬುರಗಿ,ಫೆ.7.(ಕ.ವಾ.)-ಕರ್ನಾಟಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ಫೆಬ್ರುವರಿ 8 ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯಿಂದ ಗುರುಮಠಕಲ್‍ಗೆ ಪ್ರಯಾಣಿಸಿ, ಗುರುಮಠಕಲ್ ಮತಕ್ಷೇತ್ರದ ಮಲ್ಹಾರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಭೂಮಿ ಪೂಜೆಯಲ್ಲಿ ಭಾಗವಹಿಸಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಫೆಬ್ರುವರಿ 9ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯಿಂದ ಗುರುಮಿಠಕಲ್‍ಗೆ ಪ್ರಯಾಣಿಸಿ, ಗುರುಮಠಕಲ್ ಮತಕ್ಷೇತ್ರದ ಕಣೆಕಲ್ ರಸ್ತೆಯ ಭೂಮಿ ಪೂಜೆಯಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಫೆಬ್ರುವರಿ 10ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿಯಿಂದ ಗುರುಮಠಕಲ್‍ಗೆ ಪ್ರಯಾಣಿಸಿ, ಗುರುಮಿಠಕಲ್ ಮತಕ್ಷೇತ್ರದ ಆನೂರ ಪಿ, ಆನೂರ ಕೆ. ರಸ್ತೆ ಭೂಮಿ ಪೂಜೆಯಲ್ಲಿ ಭಾಗವಹಿಸಿ ನಂತರ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.
ಫೆಬ್ರವರಿ 9ರಂದು ಜೇವರ್ಗಿಯಲ್ಲಿ ಅಹವಾಲು ಸ್ವೀಕಾರ
**********************************************
ಕಲಬುರಗಿ,ಫೆ.7.(ಕ.ವಾ.)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಬಸವರಾಜ ಯಲಿಗಾರ ಅವರು ಫೆಬ್ರವರಿ 9ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಗೆಯವರೆಗೆ ಜೇವರ್ಗಿ ಪ್ರವಾಸಿ ಮಂದಿರದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಕುಂದುಕೊರತೆ ಅಹವಾಲುಗಳನ್ನು ಸ್ವೀಕರಿಸುವರು.
ಪೊಲೀಸ್ ಇನ್ಸ್‍ಪೆಕ್ಟರ್ ಬಸವರಾಜ ಯಲಿಗಾರ ಅವರ ಮೊಬೈಲ್ ಸಂಖ್ಯೆ 9480803609 ಇರುತ್ತದೆ. ಜೇವರ್ಗಿ ತಾಲೂಕಿನ ಸಾರ್ವಜನಿಕರು ಈ ಅಹವಾಲು ಸ್ವೀಕಾರ ಸಭೆಗೆ ಹಾಜರಾಗಿ ತಮ್ಮ ಕುಂದುಕೊರತೆ ಅಹವಾಲು ದೂರುಗಳ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:

Post a Comment