GULBARGA VARTHE

GULBARGA VARTHE

Wednesday, 28 February 2018

news and photo Date: 28-2-2018

ವೈದ್ಯಕೀಯ ನಗರವಾಗಿ ಕಲಬುರಗಿ ಪರಿವರ್ತನೆ
*******************************************
-ಡಾ.ಶರಣಪ್ರಕಾಶ ಪಾಟೀಲ
*************************
ಕಲಬುರಗಿ ಫೆ.28 (ಕ.ವಾ):- ಕಳೆದ ಐದು ವರ್ಷದಲ್ಲಿ ರಾಜ್ಯ ಸರ್ಕಾರವು ಕಲಬುರಗಿ ನಗರದಲ್ಲಿ ಹತ್ತಾರು ಆರೋಗ್ಯ ಸೇವೆಗಳನ್ನು ಜಾರಿಗೆ ತರುವ ಮೂಲಕ ಕಲಬುರಗಿ ನಗರವನ್ನು ವೈದ್ಯಕೀಯ ನಗರವನ್ನಾಗಿ ಪರಿವರ್ತನೆ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.
ಅವರು ಬುಧವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಯ ಸಮುಚ್ಛಯ ಆವರಣದಲ್ಲಿ 192 ಕೋಟಿ ರೂ. ವೆಚ್ಚದ ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆ ಮತ್ತು 55 ಕೋಟಿ ರೂ. ವೆಚ್ಚದ ಟ್ರಾಮಾ ಸೆಂಟರ್ ಉದ್ಘಾಟನೆ ಮತ್ತು 107 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕಲಬುರಗಿ ನಗರಕ್ಕೆ ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಿಮ್ಸ್ ಆಸ್ಪತ್ರೆ, ಟ್ರಾಮಾ ಸೆಂಟರ್ ಇಲ್ಲಿ ಸ್ಥಾಪಿಸುವ ಮೂಲಕ ಜಿಲ್ಲೆಯ ಬಡಜನರು ಆರೋಗ್ಯ ತಪಾಸಣೆಗೆ ದೂರದ ಬೆಂಗಳೂರು ಮತ್ತೀತರ ನಗರಕ್ಕೆ ಅಲೆದಾಡುವನು ತಪ್ಪಿಸಲು ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಇಲ್ಲಿಯೆ ದೊರಕುವಂತಾಗಲೆಂದೆ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಕಿಡ್ನಿ ಸಮಸ್ಯೆ, ಕರಳು ಬೇನೆ, ನರರೋಗ, ಮಕ್ಕಳ ಆರೈಕೆ ಸೇರಿದಂತೆ ಇನ್ನೀತರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಾರ್ವನಿಕರು 2-3 ಲಕ್ಷ ವ್ಯಯ ಮಾಡುತ್ತಾರೆ. ಇದನ್ನು ತಪ್ಪಿಸಲು ಒಂದೆ ಆಸ್ಪ್ರೆಯಲ್ಲಿ ಈ ಎಲ್ಲ ಚಿಕಿತ್ಸೆಗಳನ್ನು ನೀಡುವಂತಹ 107 ಕೋಟಿ ರೂ. ವೆಚ್ಚದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಇಂದು ಅಡಿಗಲ್ಲು ಹಾಕಲಾಗಿದೆ. ಅಲ್ಲದೆ 2018-19ನೇ ಆಯವ್ಯಯದ ಘೋಷಣೆಯಂತೆ ಬರುವಂತಹ ದಿನಗಳಲ್ಲಿ ಕಲಬುರಗಿಯಲ್ಲಿ ಸುಟ್ಟು ಗಾಯಗಳ ಆರೈಕೆ ಕೇಂದ್ರ ಸಹ ಬರಲಿದ್ದು, ಒಟ್ಟಾರೆ ಹೈ.ಕ. ಭಾಗದ ಜನರ ಆರೋಗ್ಯ ಸುಧಾರಣೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಇಂದು ಉದ್ಘಾಟನೆಗೊಂಡ ಟ್ರಾಮಾ ಸೆಂಟರ್‍ಗೆ ವೈದ್ಯಕೀಯ ಉಪಕರಣಗಳ ಖರೀದಿಗೆ 25 ಕೋಟಿ ರೂ. ಅನುದಾನ ಸಹ ಬಿಡುಗಡೆ ಮಾಡಲಾಗಿದ್ದು, ಬರುವ 2 ತಿಂಗಳಲ್ಲಿ ಸೆಂಟರ್ ಅಪಘಾತಕ್ಕೆ ತುತ್ತಾದವರಿಗೆ ಸೇವೆ ನೀಡಲು ಸಿದ್ಧವಾಗಲಿದೆ. ಪ್ರತಿ ಜಿಲ್ಲೆಯಲ್ಲಿಯೂ ಬಡ ಪ್ರತಿಭಾವಂತ ಮಕ್ಕಳು ವರ್ಷಕ್ಕೆ ಕೇವಲ 16000/- ವಾರ್ಷಿಕ ಶುಲ್ಕ ನೀಡಿ ವೈದ್ಯಕೀಯ ಕೋಸ್ ಅಧ್ಯಯನಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರದಿಂದ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದ್ದು, ಅದರಂತೆ ಕಲಬುರಗಿ ನಗರದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿದ್ದಾರೆ ಎಂದರು.
ಎಲ್ಲ ವರ್ಗದವರಿಗೂ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕೆಂಬುದು ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಮಾರ್ಚ್ 2 ರಂದು ಮುಖ್ಯಮಂತ್ರಿಗಳು ಸಾರ್ವತ್ರಿಕ ಆರೋಗ್ಯ ಯೋಜನೆಗೆ ಚಾಲನೆ ನೀಡಲಿದ್ದು, ದೇಶದಲ್ಲಿಯೆ ಈ ರೀತಿಯ ಸೇವೆ ಒದಗಿಸುವ ಕರ್ನಾಟಕ ರಾಜ್ಯ ಪ್ರಥಮವಾಗಲಿದೆ ಎಂದರು.
ಲೋಕಸಭಾ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದ 371ಜೆ ತಿದ್ದುಪಡಿಯಾಗಿ ಈ ಭಾಗದಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನು ಆರಂಭಗೊಂಡಿದೆ. 371ಜೆ ಜಾರಿ ಪೂರ್ವ 6 ಜಿಲ್ಲೆಗಳಲ್ಲಿ 150 ವೈದ್ಯಕೀಯ ಸೀಟುಗಳು ಇಲ್ಲಿನವರಿಗೆ ಸಿಗುತ್ತಿತ್ತು, ಮೀಸಲಾತಿ ಬಂದ ನಂತರ ಪ್ರತಿ ವರ್ಷ 750 ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದಾರೆ. ಮುಂದೆ ವೈದ್ಯರಾಗಿ ಹೊರಹೊಮ್ಮುವ ಇಲ್ಲಿನ ವಿದ್ಯಾರ್ಥಿಗಳು ನಿಸ್ವಾರ್ಥ ಮನೋಭಾವನೆಯಿಂದ ಬಡವರ ಸೇವೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಸಚಿವರು ಉದ್ಯೋಗದಲ್ಲಿಯೂ ಮೀಸಲಾತಿ ಕಲ್ಪಿಸಿ ಸ್ಥಳೀಯರಿಂದಲೆ ಭರ್ತಿ ಮಾಡಲು 30 ಸಾವಿರ ಹುದ್ದೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 22 ಸಾವಿರ ಹುದ್ದೆಗಳನು ಭರ್ತಿ ಮಾಡಿದ್ದು, ಉಳಿದವು ನೇಮಕಾತಿಯ ಹಂತದಲ್ಲಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲೋಕಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 3-4 ವರ್ಷದಲ್ಲಿಯೆ ಆರೋಗ್ಯ ಇಲಾಖೆಯ ಹಲವು ಕಟ್ಟಡಗಳು ನಗರದಲ್ಲಿ ತಲೆ ಎತ್ತಿದ್ದು, ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಕಲಬುರಗಿ ನಗರದ ಒಂದೇ ರಸ್ತೆಯಲ್ಲಿಯೆ ಇದೀಗ 4 ಮೆಡಿಕಲ್ ಕಾಲೇಜುಗಳಿದ್ದು ವಿಶೇಷ. ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ವಾಷಿಂಗ್ಟನ್, ನ್ಯೂಯಾರ್ಕ್, ಜರ್ಮನಿಯಲ್ಲಿರದಂತಹ ಅತ್ಯಾಧುನಿಕ ಸೌಕರ್ಯವುಳ್ಳ ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ಐತಿಹಾಸಿಕ 371ಜೆ ಕಾಯ್ದೆ ತಿದ್ದುಪಡಿ ತರಲಾಗಿ ಅಭಿವೃದ್ಧಿಗೆ ನಾಂದಿ ಹಾಡಿದರು ಸಹ ಕೆಲವರು 70 ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಕೇಳುತ್ತಿರುವವರಿಗೆ ಈ ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಣಿಗೆ ಕಾಣುದಿಲ್ಲವೆ ಎಂದು ಮಾರ್ಮಿಕವಾಗಿ ನುಡಿದ ಅವರು ತಾವು ರಾಜ್ಯದಲ್ಲಿ ಶಾಸಕ-ಸಚಿವನಾಗಿ ಮತ್ತು ಕೇಂದ್ರದಲ್ಲಿ ಸಂಸತ್ ಸದಸ್ಯ-ಸಚಿವನಾಗಿ ಏನೆಲ್ಲ ಕೆಲಸಗಳು ಮಾಡಬೇಕಿತ್ತು ಅದೆಲ್ಲವನ್ನು ಪ್ರಮಾಣಿಕವಾಗಿ ಮಾಡಿದ್ದು, ಜನರು ಚುನಾಯಿಸಿದ್ದಕ್ಕಾಗಿ ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಚಿಂಚೋಳಿ ಶಾಸಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಶಾಸಕ ಅಮರನಾಥ ಪಾಟೀಲ, ಮಹಾನಗರ ಪಾಲಿಕೆಯ ಮಹಾಪೌರರಾದ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ ಅಸ್ಗರ ಚುಲಬುಲ್, ತೊಗರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಎನ್.ಇ.ಕೆ.ಆರ್.ಟಿ.ಸಿ. ಅಧ್ಯಕ್ಷ ಇಲಿಯಾಸ್ ಭಾಗವಾನ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಆಲಂ ಖಾನ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸಚ್ಛಿದಾನಂದ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಹೆಪ್ಸಿಬಾರಾಣಿ ಕೋರ್ಲಪಾಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಸುಭಾಷ ನಾಯಕವಡ, ಸಹಾಯಕ ಕಾರ್ಯನಿರ್ವಾಕ ಅಭಿಯಂತ ಬಿ.ಎಸ್.ಗೋಗಿ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಯದೇವ ಗುತ್ತೇದಾರ ಸೇರಿದಂತೆ ಆರೋಗ್ಯ ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.
ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆ ನಿರ್ದೇಶಕ ಡಾ.ಉಮೇಶ ಎಸ್.ಆರ್. ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ ಸಿ.ಆರ್.ವಂದಿಸಿದರು.
ರಾಷ್ಟ್ರಕೂಟ ಉತ್ಸವ: ಪ್ರಚಾರ ನೀಡುವ ರಥಯಾತ್ರೆಗೆ ಚಾಲನೆ
******************************************************
ಕಲಬುರಗಿ,ಫೆ.28.(ಕ.ವಾ.)-ರಾಷ್ಟ್ರಕೂಟರ ರಾಜಧಾನಿ ಮಳಖೇಡದಲ್ಲಿ ಮಾರ್ಚ್ 4 ಮತ್ತು 5ರಂದು ಆಚರಿಸಲಾಗುತ್ತಿರುವ ರಾಷ್ಟ್ರಕೂಟ ಉತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಪ್ರಚಾರ ನೀಡುವ ರಥಯಾತ್ರೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು.
ಅವರು ಬುಧವಾರ ಇಲ್ಲಿನ ಕನ್ನಡ ಭವನದಲ್ಲಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ಉತ್ಸವಕ್ಕೆ ಹೆಚ್ಚಿನ ಪ್ರಚಾರ ನೀಡುವ ಸಲುವಾಗಿ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವೀರಭದ್ರ ಸಿಂಪಿ ಅವರ ನೇತೃತ್ವದಲ್ಲಿ ಏಳು ತಾಲೂಕಿನ ವಿವಿಧ ಊರುಗಳಲ್ಲಿ ಈ ರಥ ಸಂಚರಿಸಲಿದೆ. ಈ ರಥವು ಆಳಂದ, ಚಿಂಚೋಳಿ, ಸೇಡಂ, ಚಿತ್ತಾಪುರ, ಶಹಾಬಾದ, ಜೇವರ್ಗಿ, ಯಡ್ರಾಮಿ, ಅರಳಗುಂಡಗಿ, ಘತ್ತರಗಾ, ಅಫಜಲಪುರ, ಚಿತ್ತಾಪುರ ಮಾರ್ಗವಾಗಿ ಕಲಬುರಗಿಗೆ ತಲುಪಲಿದ್ದು, ಸುಮಾರು 136 ಹಳ್ಳಿಗಳಲ್ಲಿ ರಥ ಸಂಚರಿಸಲಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ರಾಜಶೇಖರ ಶಿರಗೂರ, ಪತ್ರಕರ್ತರಾದ ಪ್ರಭಾಕರ ಜೋಶಿ, ಮಹಿಪಾಲರೆಡ್ಡಿ ಮುನ್ನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೇಂದ್ರ ಬಸ್‍ನಿಲ್ದಾಣ ಮತ್ತು ಸುಪರ ಮಾರ್ಕೇಟ್‍ನಲ್ಲಿ ಇಂದಿರಾ ಕ್ಯಾಂಟೀನ್
*************************************************************
ಉದ್ಘಾಟನೆ
***********
ಕಲಬುರಗಿ,ಫೆ.28.(ಕ.ವಾ)-ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣ ಮತ್ತು ಸುಪರ ಮಾರ್ಕೇಟ್ ಪ್ರದೇಶದಲ್ಲಿ ಪ್ರಾರಂಭಿಸಲಾದ ಇಂದಿರಾ ಕ್ಯಾಂಟೀನ್‍ಗಳನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹಾಗೂ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸುದರು.
ನಂತರ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಟೋಕಲ್ ಪಡೆದು ಮೋಸರನ್ನ, ಶಿರಾ ಸೇವಿಸಿ ಮಾತನಾಡಿದ ಅವರು ಎರಡು ಟೋಕಲ್ ಪಡೆದುಕೊಂಡು ಸಮಯದ ಅಭಾವದಿಂದ ಒಂದು ಟೋಕನಿನ ಉಪಹಾರ ಮಾಡಿದ್ದು, ಉಪಹಾರ ರುಚಿಯಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದ ಅವರು ಇದೇ ರೀತಿಯ ಉಪಹಾರದ ಗುಣಮಟ್ಟವನ್ನು ಮುಂದುವರೆಸಿಕೊಂಡು ಹೋಗುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.
ಕೂಲಿ ಕಾರ್ಮಿಕರು, ಬಡವರು ಹಸಿವಿನಿಂದ ಬಳಲುಬಾರದು ಮತ್ತು ಕಡಿಮೆ ದರದಲ್ಲಿ ಅವರಿಗೆ ಉಪಹಾರ ಹಾಗೂ ಊಟ ನೀಡಲು ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗುತ್ತಿದ್ದು, ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಇದು ಇಂದಾಗಿದೆ. ಈ ಇಂದಿರಾ ಕ್ಯಾಂಟೀನ್‍ಗಳಲ್ಲಿ 5 ರೂಪಾಯಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ತಲಾ 10 ರೂ.ಗಳಿಗೆ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ, ಮಹಾನಗರ ಪಾಲಿಕೆಯ ಮಹಾಪೌರರಾದ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ ಅಸ್ಗರ ಚುಲಬುಲ್, ತೊಗರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಆಲಂ ಖಾನ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯತ್ ಸಿ.ಇ.ಓ ಹೆಪ್ಸಿಬಾರಾಣಿ ಕೋರ್ಲಪಾಟಿ, ಮಹಾನಗರ ಪಾಲಿಕೆ ರಘುನಂದನಮೂರ್ತಿ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಯದೇವ ಗುತ್ತೇದಾರ, ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಅಂಬರಾಯ ಅಷ್ಟಗಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆ: 30329 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
****************************************************************
ಕಲಬುರಗಿ,ಫೆಬ್ರವರಿ.28.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ 2018ರ ಮಾರ್ಚ್ 1 ರಿಂದ 17ರವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಒಟ್ಟು 47 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ನಡೆಯಲಿದ್ದು, 30329 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸೂಸೂತ್ರವಾಗಿ ನಡೆಯಲು ಮಾರ್ಗಾಧಿಕಾರಿಗಳು ಹಾಗೂ ಜಾಗೃತ ದಳದ ವೀಕ್ಷಕರನ್ನು ನೇಮಿಸಲಾಗಿದ್ದು, ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ಮಾಡುವ ಅಭ್ಯರ್ಥಿಗಳು ಮತ್ತು ಅದಕ್ಕೆ ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಯನ್ನು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಯಲ್ಲಿನ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹೊರತುಪಡಿಸಿ ಇತರೆ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಿ ಈ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು 1973ರ ಸಿಆರ್.ಪಿ.ಸಿ. ಕಲಂ 144ರ ಅನ್ವಯ ಜಿಲ್ಲಾ ದಂಡಾಧಿಕಾರಿ ಆರ್. ವೆಂಕಟೇಶಕುಮಾರ ಘೋಷಿಸಿದ್ದಾರೆ.
ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ-35(ಸಿ)ರ ಅನ್ವಯ ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರದ ಉಪಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು, ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಬೇರೆ ವ್ಯಕ್ತಿಗಳು, ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್ ಹಾಗೂ ವೈರಲೆಸ್ ಸೆಟ್‍ಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶದಲ್ಲಿನ ಎಲ್ಲ ಜಿರಾಕ್ಸ್ ಮತ್ತು ಪುಸ್ತಕ ಅಂಗಡಿ ಮುಂತಾದವನ್ನು ಮುಚ್ಚುವಂತೆಯೂ ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿದ್ದಾರೆ.
ಕ್ರೀಡಾಪಟುಗಳಿಗೆ ನಗದು ಬಹುಮಾನ: ಅರ್ಜಿ ಆಹ್ವಾನ
************************************************
ಕಲಬುರಗಿ,ಫೆ.28.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2015, 2016 ಮತ್ತು 2017ನೇ ಸಾಲಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿ ತಂದ ಕÀಲಬುರಗಿ ಜಿಲ್ಲೆಯ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಿಂದ ಕರ್ನಾಟಕ ತಂಡವನ್ನು ಅಥವಾ ವೈಯಕ್ತಿಕ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಅಧಿಕೃತವಾಗಿ ಪ್ರತಿನಿಧಿಸಿ ಪದಕ ಪಡೆದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಅರ್ಜಿಗಳನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಕಲಬುರಗಿ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಮಾರ್ಚ್ 10ರೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿ
*********************************************************
ಕಲಬುರಗಿ,ಫೆ.28.(ಕ.ವಾ.)-ಬಿ.ಎಸ್.ಎನ್.ಎಲ್. ಗುಲಬರ್ಗಾ ದೂರವಾಣಿ ಸಲಹಾ ಸಮಿತಿ ಸಭೆಯು ರಾಜ್ಯಸಭಾ ಸದಸ್ಯರಾದ ಡಾ. ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ ಗುಲಬರ್ಗಾ ದೂರ ಸಂಪರ್ಕ ಜಿಲ್ಲಾ ಮಹಾ ಪ್ರಬಂಧಕರ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿತು.
ಸಭೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಅವರು ಬಿ.ಎಸ್.ಎನ್.ಎಲ್. ಎಫ್‍ಟಿಟಿಎಚ್ ಸೇವೆ ಬಗ್ಗೆ ಹರ್ಷವ್ಯಕ್ತಪಡಿಸಿ, ಮೊಬೈಲ್ ಸೇವೆಗಳ ಬಗ್ಗೆ ಮಾರ್ಗದರ್ಶನ ನೀಡಿ, ಎಲ್ಲ ಅಧಿಕಾರಿಗಳು ಹಾಗೂ ಕರ್ಮಚಾರಿಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿ ದೇಶವನ್ನು ಅಭಿವೃದ್ಧಿ ಪಡಿಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ದೂರಸಂಪರ್ಕ ಜಿಲ್ಲಾ ಮಹಾಪ್ರಬಂಧಕ ಜೆ.ಶ್ರೀನಿವಾಸರಾವ ಮಾತನಾಡಿ, ರಾಜ್ಯಸಭಾ ಸದಸ್ಯರು ಹಾಗೂ ದೂರವಾಣಿ ಸಲಹಾ ಸಮಿತಿಯ ಸದಸ್ಯರ ಸಲಹೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಹಾಗೂ ಕರ್ಮಚಾರಿಗಳೆಲ್ಲರು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕರಿಸಬೇಕು ಎಂದರು. ದೂರವಾಣಿ ಸಲಹಾ ಸಮಿತಿ ಸದಸ್ಯ ನೀಲಕಂಠರಾಯ ಯೆಲ್ಹೇರಿ ಬಿ.ಎಸ್.ಎನ್.ಎಲ್. ಮೊಬೈಲ್ ಸೇವೆಗಳ ಬಗ್ಗೆ ಉತ್ತಮ ಸಲನೆ ನೀಡಿದರು.
ಉಪ ಮಹಪ್ರಬಂಧಕರಾದ ಕೆ.ಸುರೇಶ, ಡಿ.ಕೆ.ಕುಲಕರ್ಣಿ, ಆಂತರಿಕ ವಿತ್ತಿಯ ಸಲಹೆಗಾರ ಪದಕಿ ಎಮ್.ಶ್ರೀನಿವಾಸ, ಮುಖ್ಯ ಲೆಕ್ಕಾಧಿಕಾರಿ ಆರ್.ಕೆ.ವಕಾರೆ, ಸಹಾಯಕ ಮಹಾಪ್ರಬಂಧಕ ಸುನೀಲ ಗಣಪತಿ, ಲೆಕ್ಕಾಧಿಕಾರಿ ಜಿ.ಎಸ್.ಹೂಗಾರ, ಗೌರ ಶಿವಚಲಪ್ಪಾ ಹಾಗೂ ಮಂಡಲ ಅಭಿಯಂತ ಎಸ್.ಪಿ.ಕರ್ಣಿಕ, ಉಪಮಂಡಲ ಅಭಿಯಂತರರಾದ ಗಿರೀಶ್ ಮೂಲಭಾರತಿ, ನಾಗರಾಜ.ಕೆ.ಎ ಸೇರಿದಂತೆ ಇತರೆ ಅಧಿಕಾರಿಗಳು, ಕರ್ಮಚಾರಿಗಳು ಉಪಸ್ಥಿತರಿದ್ದರು. ಉಪಮಹಾಪ್ರಬಂಧಕ ಕೆ.ಸುರೇಶ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ(ರಾಜಭಾಷೆ) ಎಚ್.ಸಿ.ರಾಠೋಡ ನಿರೂಪಿಸಿದರು.
ಸಿ.ಎಸ್.ಐ. ತಂತ್ರಾಂಶ ಅಳವಡಿಕೆ: ಅಂಚೆ ಸೇವೆ ತಾತ್ಕಾಲಿಕ ಸ್ಥಗಿತ
***********************************************************
ಕಲಬುರಗಿ ಫೆ.28.(ಕ.ವಾ)-ಸಾರ್ವಜನಿಕರಿಗೆ/ಗ್ರಾಹಕರಿಗೆ ಉತ್ಕøಷ್ಟ ಸೇವೆ ನೀಡಲು ಕಲಬುರಗಿ ವಿಭಾಗದ ಎಲ್ಲ ಅಂಚೆ ಕಚೇರಿಗಳಲ್ಲಿ ಮಾರ್ಚ್ 6ರಂದು ಸಿ.ಎಸ್.ಐ. ಎಂಬ ನೂತನ ತಂತ್ರಾಂಶ ಅಳವಡಿಸಲಾಗುತ್ತಿದ್ದು, ಪೂರ್ವಸಿದ್ಧತೆಗಾಗಿ ಮಾರ್ಚ್ 3 ರಿಂದ 5ರವರೆಗೆ ಕಲಬುರಗಿ ವಿಭಾಗದ ಎಲ್ಲ ಅಂಚೆ ಕಚೇರಿಗಳಲ್ಲಿ ತಾತ್ಕಾಲಿಕವಾಗಿ ಅಂಚೆ ಸೇವೆ ಸ್ಥಗಿತಗೊಳ್ಳಲಿದೆ ಎಂದು ಕಲಬುರಗಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಸ್.ಎಸ್. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಮಾರ್ಚ್ 2 ರಿಂದ 5ರವರೆಗೆ ಎಲ್ಲ ಗ್ರಾಮೀಣ ಅಂಚೆ ಕಚೇರಿಗಳಲ್ಲಿಯೂ ಸಹ ಅಂಚೆ ಸೇವೆ ಇರುವುದಿಲ್ಲ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪೌರಕಾರ್ಮಿಕರ ನೇಮಕಾತಿ:
***************************
ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸಿದವರಿಗೆ ಮಾತ್ರ ನೇಮಕಾತಿ
**********************************************************
ಕಲಬುರಗಿ ಫೆ.28.(ಕ.ವಾ)-ಕಲಬುರಗಿ ಜಿಲ್ಲೆಯ ಕಲಬುರಗಿ, ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಸೇಡಂ ಮತ್ತು ವಾಡಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ವೇತನಕ್ಕೆ ಸಮಾನ ವೇತನ, ಇತರೆ ಆಧಾರದ ಮೇಲೆ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರಿಗಾಗಿ ಕರ್ತವ್ಯ ನಿರತರಿಗೆ ಮಾತ್ರ ನೇಮಕಾತಿಗೆ ಪರಿಗಣಿಸಲಾಗುವುದು ಎಂದು ಪೌರ ಕಾರ್ಮಿಕರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿದಾರರಿಗೆ ತಕ್ಷಣ ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮ
*************************************************************
ಕಲಬುರಗಿ ಫೆ.28.(ಕ.ವಾ)-ಈಗಾಗಲೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆÀಯದೇ ಇರುವ ಅರ್ಜಿದಾರರು ತಕ್ಷಣ ಪಡಿತರ ಚೀಟಿ ವಿತರಿಸುವ ಕಾರ್ಯಕ್ರಮದಡಿ ಕಲಬುರಗಿ ತಾಲೂಕಿನ ಪಡಿತರ ಚೀಟಿದಾರರಿಗೆ ಪಡಿತರ ಚೀಟಿ ವಿತರಿಸಲಾಗುತ್ತಿದೆ ಎಂದು ಕಲಬುರಗಿ ತಹಶೀಲ್ದಾರ ಅಶೋಕ ಹಿರೋಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿತರ ಚೀಟಿದಾರರು ಪಡಿತರ ಚೀಟಿ ಪಡೆಯಲು ಕಡ್ಡಾಯವಾಗಿ ಅರ್ಜಿ ಸ್ವೀಕೃತಿ ಪತ್ರ, ಅರ್ಜಿದಾರರ ಯಾರಾದರೂ ಒಬ್ಬ ಹಿರಿಯ ಸದಸ್ಯರ ಕುಟುಂಬದ ವಾರ್ಷಿಕ ಆದಾಯ ಪ್ರಮಾಣಪತ್ರ ಹಾಗೂ ಕುಟುಂಬದ ಎಲ್ಲ ಸದಸ್ಯರ ಆಧಾರ ಕಾರ್ಡ ಪ್ರತಿಯೊಂದಿಗೆ ಅರ್ಜಿಯಲ್ಲಿರುವ ಒಬ್ಬ ಸದಸ್ಯರು ಖುದ್ದಾಗಿ ಕಲಬುರಗಿ ತಹಸೀಲ್ದಾರರ ಕಚೇರಿಗೆ ಭೇಟಿ ನೀಡಿದ್ದಲ್ಲಿ ಸ್ಥಳದಲ್ಲಿಯೇ ತಕ್ಷಣ ಪಡಿತರ ಚೀಟಿ ಪ್ರತಿಯನ್ನು ಮುದ್ರಿಸಿ ನೀಡಲಾಗುವುದು. ನಂತರ ಮೂಲ ಪಡಿತರ ಚೀಟಿಯನ್ನು ಅಂಚೆ ಮೂಲಕ ಅರ್ಜಿದಾರರ ವಿಳಾಸಕ್ಕೆ ಬರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಂಚೋಳಿ: ಲಘು ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನ
***********************************************************
ಕಲಬುರಗಿ ಫೆ.28(ಕ.ವಾ)-ಚಿಂಚೋಳಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡದ ಅಲೆಮಾರಿ/ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಲಘು ವಾಹನ ಚಾಲನಾ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಂಚೋಳಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಚಿಂಚೋಳಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅವಶ್ಯಕ ದಾಖಲೆಗಳಾದ ತಹಶೀಲ್ದಾರರಿಂದ ಪಡೆದ ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಆಧಾರ ಕಾರ್ಡ್ ಝರಾಕ್ಸ್ ಪ್ರತಿಯನ್ನು ಲಗತ್ತಿಸಿ ಮಾರ್ಚ್ 5 ರೊಳಗಾಗಿ ಸಲ್ಲಿಸಬೇಕು. ತಡವಾಗಿ ಬಂದ ಹಾಗೂ ಅಪೂರ್ಣವಾಗಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ: ನೋಂದಾಯಿತ ಸರ್ಕಾರೇತರ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನ
*******************************************************************
ಕಲಬುರಗಿ ಫೆ.28.(ಕ.ವಾ)-ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯಿಂದ 2017-18 ಸಾಲಿನಲ್ಲಿ ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ, ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ರಡಿ ವಿಚಾರಗೋಷ್ಠಿ ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲು ಅರ್ಹ ಸರ್ಕಾರೇತರ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಚ್ಛೆಯುಳ್ಳ ಸರ್ಕಾರೇತರ ಸಂಘ-ಸಂಸ್ಥೆಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಂಸ್ಥೆಯ ನೋಂದಣಿ ಪ್ರತಿ ಮತ್ತು ನವೀಕರಣ ಪ್ರತಿ, ಕಳೆದ 3 ವರ್ಷಗಳ ಅಡಿಟ್ ವರದಿ, ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ ಮತ್ತು ಸಭೆಯ ನಡವಳಿಕೆ ಪ್ರತಿ, ತಾವು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಫೋಟೋ ಪ್ರತಿ, ಸಂಘ ಸಂಸ್ಥೆಯ ಬೈಲಾ ಪ್ರತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪಡೆದ ದೃಢೀಕೃತ ಪ್ರತಿ ಹಾಗೂ ಕಲಾ ತಂಡದ ಸದಸ್ಯರ ಪಟ್ಟಿಯ ದಾಖಲಾತಿಗಳೊಂದಿಗೆ ಲಗತ್ತಿಸಿ ಮಾರ್ಚ್ 5ರೊಳಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ತಡವಾಗಿ ಬಂದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 3ರಂದು ಚಿಂಚೋಳಿಯಲ್ಲಿ ಎ.ಸಿ.ಬಿ. ಅಧಿಕಾರಿಗಳಿಂದ ಅಹವಾಲು ಸ್ವೀಕಾರ
*************************************************************************
ಕಲಬುರಗಿ ಫೆ.28.(ಕ.ವಾ)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಕೆ.ಎಸ್. ಕಲ್ಲೆದೇವರು ಅವರು ಮಾರ್ಚ್ 3ರಂದು ಚಿಂಚೋಳಿಗೆ ಭೇಟಿ ನೀಡಿ, ಚಿಂಚೋಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂದು ಬೆಳಗಿನ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ. ಅವರ ಮೊಬೈಲ್ ಸಂಖ್ಯೆ 9480803610 ಇರುತ್ತದೆ ಎಂದು ಕಲಬುರಗಿ ಭ್ರಷ್ಟಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 27ರಂದು ಬಹಿರಂಗ ಹರಾಜು ಮೂಲಕ ಕಾಗದ ಪತ್ರಗಳ ವಿವೇವಾರಿ
*******************************************************************
ಕಲಬುರಗಿ ಫೆ.28.(ಕ.ವಾ)-ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಲಭ್ಯವಿರುವ ಕಡತಗಳ ಹಾಗೂ ರಜಿಸ್ಟರ್‍ಗಳ ಹರಿದ ಕಾಗದ ಪತ್ರಗಳನ್ನು (ಕೆ.ಸಿ.ಎಸ್.ಆರ್. ನಿಯಮಗಳನ್ವಯ ವಿನಾಶಗೊಳಿಸಿದ ಕಡತಗಳು) 2018ರ ಮಾರ್ಚ್ 27ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಆಸಕ್ತಿಯುಳ್ಳ ಖರೀದಿದಾರರು ಹರಾಜು ಪ್ರಕ್ರಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.
ಹರಾಜಿನಲ್ಲಿ ಭಾಗವಹಿಸುವವರು ಹರಾಜು ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ 1000 ರೂ.ಗಳ ಠೇವಣಿ ಮೊತ್ತದೊಂದಿಗೆ ಸೂಕ್ತ ಗುರುತಿನ (ಭಾವಚಿತ್ರ ಸಹಿತ) ಚೀಟಿಯನ್ನು ಮೇಲ್ಕಂಡ ಕಾರ್ಯಾಲಯದಲ್ಲಿ ನೀಡಬೇಕು. ಹರಾಜಿನ ಬಿಡ್ಡನ್ನು ಒಪ್ಪುವ, ಹೆಚ್ಚು ಮಾಡುವ, ಮರು ಹರಾಜು ಮಾಡುವ ಅಥವಾ ತಿರಸ್ಕರಿಸುವ ಮತ್ತು ಯಾವುದೇ ತಕರಾರುಗಳನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಇರುತ್ತದೆ. ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

No comments:

Post a Comment