GULBARGA VARTHE

GULBARGA VARTHE

Monday, 26 February 2018

News and photo Date: 26-2-2018

ಲೋಕಸಭಾ ಸದಸ್ಯರ ಪ್ರವಾಸ
**************************
ಕಲಬುರಗಿ,ಫೆ.26.(ಕ.ವಾ.)-ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಹೆಲಿಕ್ಯಾಪ್ಟರ್ ಮೂಲಕ ಫೆಬ್ರವರಿ 27ರಂದು ಮಧ್ಯಾಹ್ನ 12.30 ಗಂಟೆಗೆ ಕಲಬುರಗಿಗೆ ಆಗಮಿಸಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು.
ಫೆಬ್ರವರಿ 28ರಂದು ಬೆಳಿಗ್ಗೆ 10.30 ಗಂಟೆಗೆ ಸುಪರ್ ಸ್ಪೇಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆ, ಟ್ರಾಮಾ ಸೆಂಟರ್ ಹಾಗೂ ಗುಲಬರ್ಗಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್) ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30 ಗಂಟೆಗೆ ಎ.ಪಿ.ಎಂ.ಸಿ. ಯಾರ್ಡ್‍ನ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ಕಲಬುರಗಿಯಿಂದ ಗುರುಮಿಠಕಲ್‍ಗೆ ಪ್ರಯಾಣಿಸುವರು.
ಸಂಪುಟ ಉಪ ಸಮಿತಿ ಸಭೆಯಲ್ಲಿ ತೊಗರಿ ಸಮಸ್ಯೆ ಚರ್ಚೆ
*************************************************
ಕಲಬುರಗಿ,ಫೆ.26.(ಕ.ವಾ.)-ಬೆಂಬಲ ಬೆಲೆಯಲ್ಲಿ ಮತ್ತೆ ತೊಗರಿ ಖರೀದಿಸುವ ಸಂಬಂಧ ಪರವಾನಿಗೆ ನೀಡುವಂತೆ ಹಲವು ಸಲ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ತಿಳಿಸಿದರು.
ಅವರು ಸೋಮವಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ರೈತಪರ ಸಂಘಟನೆಗಳು ನಗರದ ಜಗತ ವೃತ್ತದಲ್ಲಿ ಕೈಗೊಂಡಿರುವ ಅಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಉಪವಾಸ ಸತ್ಯಾಗ್ರಹ ನಿರತರೊಂದಿಗೆ ಚರ್ಚಿಸಿದರು.
ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಬೆಲೆ ನಿಗದಿ ಸಂಪುಟ ಉಪ ಸಮಿತಿ ಸಭೆಯಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಬೆಂಬಲ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ತೊಗರಿ ಖರೀದಿಸಲು, ಬೆಲೆ ನಿಯಂತ್ರಣ ಹಾಗೂ ತೊಗರಿ ಬೆಳೆಗಾರರ ಒಟ್ಟಾರೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
ಪ್ರಸಕ್ತ ವರ್ಷದಲ್ಲಿ ತೊಗರಿ ಉತ್ಪಾದನೆ ಹೆಚ್ಚಾಗಿದ್ದು, ಒಟ್ಟು 45 ಲಕ್ಷ ಕ್ವಿಂಟಲ್ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಉದ್ದೇಶ ರಾಜ್ಯ ಸರ್ಕಾರಕ್ಕಿದೆ. ಈ ಸಂಬಂಧ ಪರವಾನಿಗೆ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, ಮತ್ತೊಮ್ಮೆ ಇಲ್ಲಿನ ರೈತರ ಬೇಡಿಕೆ ಮತ್ತು ತೊಗರಿ ಬೆಳೆ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದರು.
ಬಡ ಮತ್ತು ಸಣ್ಣ ರೈತರ ಅನುಕೂಲಕ್ಕಾಗಿ ಈಗಾಗಲೇ 140 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲ ಹಂತದಲ್ಲಿ 15 ಲಕ್ಷ ಕ್ವಿಂಟಲ್ ಹಾಗೂ ಎರಡನೇ ಹಂತದಲ್ಲಿ 10 ಲಕ್ಷ ಕ್ವಿಂಟಲ್ ನೋಂದಾಯಿತ ರೈತರಿಂದ ತೊಗರಿ ಖರೀದಿಸಲಾಗಿದೆ. ರೈತರು ಬೆಳೆದ ಎಲ್ಲ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂಬ ರೈತರ ಬೇಡಿಕೆಯಂತೆ ಕೇಂದ್ರ ಸರ್ಕಾರ ಪರವಾನಿಗೆ ನೀಡಿದ್ದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರವು ಮೂರನೇ ಹಂತದ ತೊಗರಿ ಖರೀದಿಗೆ ಪರವಾನಿಗೆ ನೀಡಿದ್ದಲ್ಲಿ ತೊಗರಿ ಮಾರಾಟಕ್ಕೆ ನೋಂದಣಿ ಮಾಡದ ರೈತರು ಸಹ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಪ್ರತಿಯೊಬ್ಬ ರೈತರಿಂದ 10 ಕ್ವಿಂಟಲ್‍ಕ್ಕಿಂತಲೂ ಹೆಚ್ಚಿನ ತೊಗರಿ ಖರೀದಿಸಲು ಸಹಾಯವಾಗುವುದು ಎಂದರು.
ರೈತ ಮುಖಂಡ ಮಾರುತಿ ಮಾನ್ಪಡೆ ಹಾಗೂ ಅಮರಣ ಉಪಹಾಸ ಸತ್ಯಾಗ್ರಹ ಕೈಗೊಳ್ಳುತ್ತಿರುವ ರೈತರು ಮಾತನಾಡಿ, ತೊಗರಿ ಬೆಳೆಗಾರರ ನೋಂದಣಿ ಅವಧಿ ವಿಸ್ತರಿಸಬೇಕು. ಎಫ್.ಪಿ.ಓ., ಟಿ.ಎ.ಪಿ.ಸಿ.ಎಂ.ಎಸ್. ಒಳಗೊಂಡಂತೆ ಇನ್ನೂ ಹೆಚ್ಚಿನ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು, ಹೊರ ದೇಶದಿಂದ ಆಮದು ಆಗುವ ಬೆಳೆ ಕಾಳುಗಳ ಮೇಲೆ ಆಮದು ಶುಲ್ಕ ಹಾಕಬೇಕು. ಪ್ರತಿ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿಸುವ ಷರತ್ತು ಕೈಬಿಡಬೇಕು ಎಂದು ಆಗ್ರಹಿಸಿದರು.
ಶಿವಕುಮಾರ ಅಂಕಲಗಿ, ವಿಠ್ಠಲ ಪೂಜಾರಿ, ಶಿವಶರಣಪ್ಪ ಚಿಂಚನಸೂರ, ವೀರಶೆಟ್ಟಿ ಸ್ವಾಮಿ ಉಪವಾಸ ನಿರಶನ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ರೈತರಾದ ಬಸವರಾಜ ಪಡಶೆಟ್ಟಿ, ಮೌಲಾ ಮುಲ್ಲಾ, ಮೋಯಿನ್ ಅಹ್ಮದ್, ಶಿವಾನಂದ ಗುಡೂರ, ಸಿದ್ರಾಮ ಪಾಟೀಲ ಕಣ್ಮಸ್, ಶಾಂತಪ್ಪ ಪಾಟೀಲ, ಶರಣಬಸಪ್ಪ ಗಣಜಲಖೇಡ, ಶರಣಬಸಪ್ಪ ಮಮಶೆಟ್ಟಿ ಮತ್ತಿರರು ಇದ್ದರು.
ಮಾರ್ಚ್ 1 ರಿಂದ ಪಿ.ಯು.ಸಿ. ಪರೀಕ್ಷೆ: ಸೂಸ್ರುತವಾಗಿ ನಡೆಸಲು ಸೂಚನೆ
****************************************************************
ಕಲಬುರಗಿ,ಫೆ.26.(ಕ.ವಾ.)-ಪ್ರಸಕ್ತ ಶೈಕ್ಷಣಿಕ ಸಾಲಿನ ಪಿ.ಯು.ಸಿ. ಪರೀಕ್ಷೆಯು ಮಾರ್ಚ್ 1 ರಿಂದ 17ರ ವರಗೆ ಜರುಗಲಿದ್ದು, ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಪರೀಕ್ಷೆಯನ್ನು ಸೂಸ್ರುತಾವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ರೂಟ್ ಅಧಿಕಾರಿಗಳು, ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಲಬುರಗಿ ಜಿಲ್ಲೆಯಾದ್ಯಂತ 18 ಸರ್ಕಾರಿ ಕಾಲೇಜು, 12 ಅನುದಾನಿತ ಮತ್ತು 17 ಅನುದಾನ ರಹಿತ ಕಾಲೇಜುಗಳು ಸೇರಿದಂತೆ ಒಟ್ಟು 47 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 30329 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಲ್ಲಿ 6 ಪರೀಕ್ಷಾ ಕೇಂದ್ರಗಳನು ಸೂಕ್ಷ್ಮ ಕೇಂದ್ರಗಳನ್ನಾಗಿ ಪರಿಗಣಿಸಲಾಗಿದ್ದು, ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸೂಸೂತ್ರವಾಗಿ ನಡೆಯಲು ಮಾರ್ಗಾಧಿಕಾರಿಗಳು ಹಾಗೂ ಜಾಗೃತ ದಳದ ವೀಕ್ಷಕರನ್ನು ನೇಮಿಸಲಾಗುವುದು ಎಂದರು.
ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ. ಅಲ್ಲದೆ ಪರೀಕ್ಷಾ ಪತ್ರಿಕೆಗಳನ್ನು ತೆಗದುಕೊಂಡು ಹೋಗಲು ತಹಶೀಲ್ದಾರ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಕೊಂಡೊಯ್ಯುವ ವಾಹನಕ್ಕೆ ಇದೇ ಪ್ರಥಮ ಬಾರಿಗೆ ಜಿ.ಪಿ.ಆರ್.ಎಸ್. ಸಹ ಅಳವಡಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ಮಾಡುವ ಅಭ್ಯರ್ಥಿಗಳು ಮತ್ತು ಅದಕ್ಕೆ ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವ್ಯದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪರೀಕ್ಷಾ ಕೇಂದ್ರದ ಅಧೀಕ್ಷಕರು ಕೇಂದ್ರದಲ್ಲಿಯೆ ಹಾಜರಿದ್ದು, ಪಿಯು.ಸಿ. ಮಂಡಳಿಯ ನಿರ್ದೇಶನದಂತೆ ಎಲ್ಲ ಅಗತ್ಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರದ ಅಧೀಕ್ಷರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಪರೀಕ್ಷಾ ಆರಂಭದಲ್ಲಿಯೆ ಹೋಳಿ ಹಬ್ಬ ಬರುವುದರಿಂದ ಈ ಬಗ್ಗೆಯೂ ಅಗತ್ಯ ಮುನ್ನೆಚರಿಕೆ ವಹಿಸಿ ಎಂದರು.
ಮೊಬೈಲ್ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು ನಕಲು ಮಾಡುವ ಅಭ್ಯರ್ಥಿಗಳು ಮತ್ತು ಅದಕ್ಕೆ ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವ್ಯದೆಂದು ತಿಳಿಸಿದರು.
ಸಭೆಯಲ್ಲಿ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ಡಿ. ಕಲಬುರಗಿ, ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ಮುಖ್ಯ ಮೇಲ್ವಿಚಾರಕರು ಸೇರಿದಂತೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಲಂಚ ಪಡೆದ ಪಿ.ಡಿ.ಓ. ಸೇರಿ ಇಬ್ಬರಿಗೆ ಜೈಲು ಶಿಕ್ಷೆ ಮತ್ತು ದಂಡ
*******************************************************
ಕಲಬುರಗಿ,ಫೆ.26.(ಕ.ವಾ.)-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹರವಾಳ ಗ್ರಾಮದಲ್ಲಿ ಬದು ನಿರ್ಮಾಣ ಕಾಮಗಾರಿ ಮಾಡಿದ್ದಕ್ಕಾಗಿ ಮೊದಲನೇ ಕಂತಿನ ಹಣ ಬಿಡುಗಡೆ ಮಾಡಲು ಲಂಚ ಪಡೆದ ಆರೋಪಿ ಪಿ.ಡಿ.ಓ ಹಾಗೂ ಮತ್ತೋರ್ವನಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ವ್ಹಿ.ಪಾಟೀಲ ಅವರು ಫೆಬ್ರವರಿ 23 ರಂದು ತೀರ್ಪ ನೀಡಿದ್ದಾರೆ.
ಮೊದಲನೇ ಆರೋಪಿ ಪಿ.ಡಿ.ಓ ಮಹೆಬೂಬ ಪಟೇಲ ಅವರಿಗೆ ಕಲಂ7(1) ಡಿ ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಹಾಗೂ 30000/- ರೂ. ದಂಡ ವಿಧಿಸಲಾಗಿದ್ದು, ದಂಡ ನೀಡಲು ತಪ್ಪಿದಲ್ಲಿ ಆರು ತಿಂಗಳ ಶಿಕ್ಷೆ ಹಾಗೂ ಕಲಂ 13(2) ರಡಿಯಲ್ಲಿ 4 ವರ್ಷ ಜೈಲು ಶಿಕ್ಷೆ ಹಾಗೂ 3000/- ರೂ. ದಂಡ ವಿಧಿಸಲಾಗಿದ್ದು, ದಂಡ ನೀಡಲು ತಪ್ಪಿದಲ್ಲಿ ಮೂರು ತಿಂಗಳ ಶಿಕ್ಷೆ ವಿಧಿಸಿದೆ. ಅದೇ ರೀತಿ ಎರಡನೇ ಆರೋಪಿ ಆರೀಫ್ ಇವರಿಗೆ ಕಲಂ 8 (1) ರಡಿ 3 ವರ್ಷ ಜೈಲು ಶಿಕ್ಷೆ ಹಾಗೂ 3000/- ರೂ. ದಂಡ ವಿಧಿಸಿದ್ದು, ದಂಡ ನೀಡಲು ತಪ್ಪಿದಲ್ಲಿ ಮೂರು ತಿಂಗಳ ಶಿಕ್ಷೆ ವಿಧಿಸಲಾಗಿದೆ.
2013-14ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಹರವಾಳ ಗ್ರಾಮದ ಫಿರ್ಯಾದಿ ಸಿದ್ದರಾಮ ಭೀಮರಾಯ ಅದ್ವಾನಿ ಮತ್ತು ಗ್ರಾಮದ ಕೂಲಿ ಕಾರ್ಮಿಕರು ಹರವಾಳ ಗ್ರಾಮದಲ್ಲಿ ಬದು ನಿರ್ಮಾಣ ಕಾಮಗಾರಿ ನಿರ್ವಹಿಸಿದ್ದಕ್ಕಾಗಿ ಮೊದಲನೇ ಕಂತಿನ ಹಣ 10 ಲಕ್ಷ ರೂ. ಬಿಡುಗಡೆ ಮಾಡುವಂತೆ ಜೇವರ್ಗಿ ತಾಲೂಕಿನ ಹರವಾಳ ಗ್ರಾಮ ಪಂಚಾಯತಿಯ ಪಿ.ಡಿ.ಓ ಮಹೆಬೂಬ ಪಟೇಲ್ ಅವರಲ್ಲಿ ಕೇಳಿಕೊಂಡಾಗ ಮಹೆಬೂಬ ಪಟೇಲ್ ಅವರು ಶೇ.50ರಷ್ಟು ಲಂಚದ ಬೇಡಿಕೆಯಿಟ್ಟು ಫಿರ್ಯಾದಿ ಮತ್ತು ಇತರರಿಂದ 2013ರ ಸೆಪ್ಟೆಂಬರ್ 3 ರಂದು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್‍ನಲ್ಲಿ ತನ್ನ ಅಳಿಯ ಆರೀಫ್ ಮೂಲಕ 30000/- ರೂ. ಲಂಚ ಪಡೆದುಕೊಂಡಿರುವ ಬಗ್ಗೆ ಅಂದಿನ ಕರ್ನಾಟಕ ಲೋಕಾಯುಕ್ತ ಪಿ.ಐ. ಶಾಂತಿನಾಥ ಅವರು ಆರೋಪಿತರ ವಿರುದ್ಧ ಕಲಂ 7, 8, 13(1)ಡಿ ಸಂಗಡ 13(2) ಲಂಚ ನಿಷೇಧ ಕಾಯ್ದೆ 1988 ಅಡಿಯಲ್ಲಿ ಅಪರಾಧ ಎಸಗಿದ್ದಾರೆಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿತರ ಪರ ವಾದ-ವಿವಾದ ಆಲಿಸಿದ ನಂತರ ಮೇಲಿನಂತೆ ತೀರ್ಪು ನೀಡಿರುತ್ತಾರೆ. ಕರ್ನಾಟಕ ಲೋಕಾಯುಕ್ತದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಚಾಂದಕವಠೆ ವಾದ ಮಂಡಿಸಿದ್ದರು.
ಶೌಚಾಲಯ ನಿರ್ಮಿಸಿಕೊಂಡು ಪರಿಸರ ಸ್ವಚ್ಛವಾಗಿಟಿಕೊಳ್ಳಿ
**************************************************
ಕಲಬುರಗಿ,ಫೆ.26.(ಕ.ವಾ.)-ನಗರದ ಜನರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವುದಲ್ಲದೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಮಾತ್ರ ಕಲಬುರಗಿ ನಗರ ಸ್ವಚ್ಛ ನಗರವಾಗಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ನಿಯಮಿತದ ಕಲಬುರಗಿ ವಿಭಾಗದ ಕಾರ್ಯಪಾಲಕ ಅಭಿಯಂತ ಡಿ.ವಿ ಬಂಡಿವಾಡ ಹೇಳಿದರು.
ಅವರು ಕೆಯುಐಡಿಎಫ್‍ಸಿ, ಎನ್‍ಕೆಯುಎಸ್‍ಐಪಿ, ಮಹಾನಗರ ಪಾಲಿಕೆ ಹಾಗೂ ಗ್ರಾಮೀಣ ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆ (ಗ್ರಾಮ್ಸ್), ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ಸಾಂದೀಪನಿ ಪ್ರೌಡ ಶಾಲೆಯಲ್ಲಿ ಸೋಮವಾರ ಆಯೋಜಿಸಲಾದ “ನೀರಿನ ಸಂರಕ್ಷಣೆಯ ಮಹತ್ವ ಹಾಗೂ ವೈಯಕ್ತಿಕ ಶೌಚಾಲಯದ ಅನುಕೂಲಗಳ ಕುರಿತು ಕೊಳಚೆ ಪ್ರದೇಶಗಳಲ್ಲಿರುವ ಪ್ರೌಡ ಶಾಲೆ ವಿಧ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ” ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವೈಯಕ್ತಿಕ ಶೌಚಾಲಯ ಇಲ್ಲದ ಕುಟುಂಬದವರಿಗೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ವ್ಯಯ ಮಾಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು. ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಎಂಬ ವಿದ್ಯಾರ್ಥಿನಿ ಪಾಲಕರಿಗೆ ಪಟ್ಟು ಬಿದ್ದು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡ ರೀತಿಯಲ್ಲಿ ನಿಮ್ಮ ಮನೆಯಲ್ಲಿಯೂ ಶೌಚಾಲಯವಿಲ್ಲದವರು ಶೌಚಾಲಯ ಕಟ್ಟಿಸಿಕೊಂಡು ಮುಜುಗರದಿಂದ ಪಾರಾಗಿ ಎಂದು ಹೇಳಿದರು.
ಸಹಾಯಕ ಕಾರ್ಯಪಾಲಕ ಅಭಿಯಂತ ಶಿವಕುಮಾರ್ ಬಿ. ಪಾಟೀಲ್ ಮಾತನಾಡಿ ಕಲಬುರಗಿ ನಗರದಲ್ಲಿ ಕೆಯುಐಡಿಎಫ್‍ಸಿ-ಎನ್‍ಕೆಯುಎಸ್‍ಐಪಿ ನಿಂದ ಹಮ್ಮಿಕೊಂಡ ಯೋಜನೆಗಳಲ್ಲಿ ಒಳಚರಂಡಿ ಯೋಜನೆಯು ಒಂದಾಗಿದ್ದು, ಒಳಚರಂಡಿ ಸಂಪರ್ಕ ಪಡೆದ ಕುಟುಂಬಗಳು ಈ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಅಧಿಕೃತಗೊಳಿಸಬೇಕೆಂದು ಮನವಿ ಮಾಡಿದರು.
ಕೆಯುಐಡಿಎಫ್‍ಸಿ-ಎನ್‍ಕೆಯುಎಸ್‍ಐಪಿ ಯೋಜನೆಯ ಯೋಜನಾಧಿಕಾರಿ ಮಹೇಶ್ ಕುಮಾರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ನಂತರ ನೀರಿನ ಸಂರಕ್ಷಣೆ ಮಹತ್ವ ಮತ್ತು ಶೌಚಾಲಯದ ಅನುಕೂಲಗಳ ಸಮಗ್ರವಾದ ಮಾಹಿತಿಯನ್ನು ಒಳಗೊಂಡ ಪಿ.ಪಿ.ಟಿ ಹಾಗೂ ಕಿರು ಚಿತ್ರಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆಯ ಸದಸ್ಯೆ ಜಗದೇವಿ ಎಮ್. ಸೋಮು ಕಾರ್ಯಕ್ರಮ ಉದ್ಘಾಟಿಸಿದರು. ಸಾಂದಿಪಿನಿ ಪ್ರೌಡ ಶಾಲೆ ಮುಖ್ಯೋಪಾಧ್ಯಾಯ ಧನಶ್ರೀ ಕುಲಕರ್ಣಿ, ಶೃತಿ ಉಷಾ ಕುಲಕರ್ಣಿ, ಪ್ರಕಾಶ ಅವಧೆ, ಶಿಕ್ಷಕ ಶ್ರೀಶೈಲ್ ಬೋನಾಳ್ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಗ್ರಾಮ್ಸ್ ಸಂಸ್ಥೆಯ ಸಮುದಾಯ ಸಂಘಟಕಿ ಅಂಜನಾ ವಿ. ಕಂಡೇಶ್ಯಾಮ್ ಸ್ವಾಗತಿಸಿದರೆ ಸಮುದಾಯ ಸಂಘಟಕಿ ಅಶ್ವಿನಿ ಕುಲಕರ್ಣಿ ವಂದಿಸಿದರು. ಸಂಯೋಜಕಿ ಅಂಜನಾ ವಿ. ಕುಲಕರ್ಣಿ ನಿರೂಪಿಸಿದರು.
ಫೆಬ್ರವರಿ 27ಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವ
************************************************************
ಕಲಬುರಗಿ,ಫೆ.26.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ 36ನೇ ವಾರ್ಷಿಕ ಘಟಿಕೋತ್ಸವವು ಫೆಬ್ರವರಿ 27ರಂದು ಬೆಳಿಗ್ಗೆ 11.30 ಗಂಟೆಗೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜರುಗಲಿದ್ದು, ಘನತೆವೆತ್ತ ರಾಜ್ಯದ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ವಜುಭಾಯ್ ರುಡಾಭಾಯ್ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.
ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಗಳಾದ ಬಸವರಾಜ ರಾಯರೆಡ್ಡಿ ಭಾಗವಹಿಸಲಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಹಿರಿಯ ವಿಜ್ಞಾನಿ ಪ್ರೊ ಜಿ.ಪದ್ಮನಾಬನ್ ಅವರು ಘಟಿಕೋತ್ಸವ ಭಾಷಣ ಮಾಡುವರು.
ದೆಹಲಿಯ ಹೆಚ್ಚುವರಿ ವಿಶೇಷ ಪ್ರತಿನಿಧಿಗಳ ಪ್ರವಾಸ
*********************************************
ಕಲಬುರಗಿ,ಫೆ.26.(ಕ.ವಾ.)-ದೆಹಲಿಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರದ ಹೆಚ್ಚುವರಿ ವಿಶೇಷ ಪ್ರತಿನಿಧಿ ಸಲೀಮ ಅಹ್ಮದ್ ಅವರು ವಿಜಯಪುರದಿಂದ ರಸ್ತೆ ಮೂಲಕ ಫೆಬ್ರವರಿ 27ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಗೆ ಆಗಮಿಸುವರು. ನಂತರ ಕಲಬುರಗಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣ ಬೆಳೆಸುವರು.
ಫೆಬ್ರವರಿ 27ರಂದು ಕಾರ್ಯಾಗಾರ ಉದ್ಘಾಟನೆ
*****************************************
ಕಲಬುರಗಿ ಫೆ.26(ಕ.ವಾ)-ಕರ್ನಾಟಕ ರಾಜ್ಯ ಸಹಕಾರ ಮಹಾಂಡಳ ನಿಯಮಿತ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಬೆಂಗಳೂರು, ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಕಲಬುರಗಿ ಹಾಗೂ ಸಹಕಾರ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ವಿಭಾಗÀದಲ್ಲಿ ಪತ್ತಿನ ಸಹಕಾರ ಸಂಘಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಫೆಬ್ರವರಿ 27 ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಸುಪರ ಮಾರ್ಕೇಟಿನ ಬ್ರಹ್ಮಪುರ ಪೊಲೀಸ್ ಸ್ಟೇಶನ್ ಹತ್ತಿರದ ಚೇಂಬರ್ ಆಫ್ ಕಾಮರ್ಸ್‍ನಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಅಧ್ಯಕ್ಷ ಸಿ.ಎಂ.ಮಾರೇಗೌಡ ಕಾರ್ಯಾಗಾರವನ್ನು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಸಿದ್ರಾಮರೆಡ್ಡಿ ವಿ.ಪಾಟೀಲ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಹೆಚ್.ವಿ ನಾಗರಾಜ್, ಕರ್ನಾಟಕ ರಾಜ್ಯ ಸಹಕಾರಿ ಪತ್ತಿನ ಮಹಾಮಂಡಳ ಉಪಾಧ್ಯಕ್ಷ ಡಾ.ಸಂಜಯ್ ಪಿ.ಹೊಸಮಠ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕರುಗಳಾದ ಶಕುಂತಲಾ ಕೆ.ಬೆಲ್ದಾಲೆ, ವಿಜಯಕುಮಾರ್ ಪಾಟೀಲ್, ಆರ್.ಕೆ.ಪಾಟೀಲ್, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ನಿರ್ದೇಶಕರುಗಳಾದ ಶಿವರಾಜ್ ಬಿ.ಪಾಟೀಲ್,ಆಕಾಶ ಪಾಟೀಲ್, ಧರೇಪ್ಪ ಎಂ.ಅಲಗೂರ, ಗುರುಪಾದಪ್ಪಗೌಡ ಬ.ಪಾಟೀಲ್, ಹೋನ್ನಯ್ಯ ವಿ.ಹಿರೇಮಠ, ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಸಂಘಗಳ ಯೂನಿಯನ್ ಅಧ್ಯಕ್ಷ ವೀರನಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಮತ್ತು ಸಹಕಾರ ಸಂಘಗಳ ಜಂಟಿ ನಿಬಂಧಕ ಐ.ಎಸ್. ಗಿರೆಡ್ಡಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕ ಟಿ. ಫೈರೋಜ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಈ ಕಾರ್ಯಾಗಾರದ ಅಂಗವಾಗಿ ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಸಹಕಾರ ಸಂಘಗಳ ಅಪರ ನಿಬಂಧಕ ಹೆಚ್.ಎಸ್. ನಾಗರಾಜಯ್ಯ ಅವರು ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳು ಹಾಗೂ ಸಹಕಾರ ಸಂಘಗಳ ಕಾಯಿದೆ/ನಿಯಮಗಳ ಇತ್ತೀಚಿನ ತಿದ್ದುಪಡಿಗಳು ಕುರಿತು, ಮಧ್ಯಾಹ್ನ 2ರಿಂದ 3.30 ಗಂಟೆಯವರೆಗೆ ಬೆಂಗಳೂರಿನ ಸನ್ನದು ಲೆಕ್ಕಪರಿಶೋಧಕ ಅನಿಲ್ ಭಾರದ್ವಾಜ್ ಆದಾಯ ತೆರಿಗೆ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳು ಮತ್ತು ಸರಕು ಸೇವಾ ತೇರಿಗೆಯ (ಜಿ.ಎಸ್.ಟಿ.) ಪ್ರಮುಖ ಅಂಶಗಳ ಕುರಿತು ಹಾಗೂ ಮಧ್ಯಾಹ್ನ 3.45 ರಿಂದ ಸಂಜೆ 5.30 ಗಂಟೆಯವರೆಗೆ ಬೆಂಗಳೂರಿನ ವ್ಯಕ್ತಿತ್ವ ವಿಕಲನ ತರಬೇತುದಾರ ಜಿ.ಎಸ್. ಘಣಿಭೂಷನ ಅವರು ಬಾಳುವ ಕಲೆ, ಹಾಸ್ಯ ಹಾಗೂ ಮಾನವೀಯ ಮೌಲ್ಯಗಳು ಕುರಿತು ಉಪನ್ಯಾಸ ನೀಡುವರು.
ಮಾರ್ಚ್ 3ರಂದು ಬಬಲಾದ (ಎ.ಕೆ.) ಗ್ರಾಮದಲ್ಲಿ ಜನಸ್ಪಂದನ ಸಭೆ
ಕಲಬುರಗಿ,ಫೆ.26.(ಕ.ವಾ.)-ಕಲಬುರಗಿ ತಾಲೂಕಿನ ಮಹಾಗಾಂವ ಹೋಬಳಿ ವ್ಯಾಪ್ತಿಯ ಬಬಲಾದ (ಎ.ಕೆ.) ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಮಾರ್ಚ್ 3 ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಕಲಬುರಗಿ ಗ್ರೇಡ್-2 ತಹಶೀಲ್ದಾರ್ ಜಗನ್ನಾಥ ಎಂ. ಪೂಜಾರಿ ತಿಳಿಸಿದ್ದಾರೆ. ಬಬಲಾದ (ಎ.ಕೆ.) ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ಮುಖ್ಯಮಂತ್ರಿಗಳಿಂದ ಮಾರ್ಚ್ 2ರಂದು
***********************************
ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಉಪ್ಪಾರ ಅಭಿವೃದ್ಧಿ ನಿಗಮಗಳ ಉದ್ಘಾಟನೆ
************************************************************************
ಕಲಬುರಗಿ,ಫೆ.26.(ಕ.ವಾ.)-ಹೊಸದಾಗಿ ಅಸ್ವಿತ್ವಕ್ಕೆ ಬಂದಿರುವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಮಾರ್ಚ್ 2 ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಾಗೂ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಗಳನ್ನು ಅಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಅರಮನೆ ಮೈದಾನ ಟೆನ್ನಿಸ್ ಪೆವಿಲಿಯನ್‍ನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸುವರು.
ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರು, ಶಾಸಕರು, ವಿವಿಧ ನಿಗಮಗಳ ಅಧ್ಯಕ್ಷರು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಹಿಂದುಳಿದ ವರ್ಗಗಳ ವಿವಿಧ ಜಾತಿ, ಜನಾಂಗದ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸುವರು. ಕಲಬುರಗಿ ಜಿಲ್ಲೆಯ ಈ ಎರಡು ಸಮುದಾಯದವರು ಹಾಗೂ ಸಾರ್ವಜನಿಕರು ಈ ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 27ರಂದು ಗ್ರಾಹಕರ ಸಂಪರ್ಕ ಸಭೆ
**************************************
ಕಲಬುರಗಿ.ಫೆ.26.(ಕ.ವಾ.)-ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ (ಕೆ.ಇ.ಆರ್.ಸಿ.) ನಿರ್ದೇಶನ ಮೇರೆಗೆ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯಿಂದ ಕಲಬುರಗಿ ನಗರ ವಿಭಾಗದ ವ್ಯಾಪ್ತಿಗೆ ಬರುವ ಉಪವಿಭಾಗಗಳ ಗ್ರಾಹಕರ ಸಂಪರ್ಕ ಸಭೆಯು ಕಲಬುರಗಿ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 27ರಂದು ಕಲಬುರಗಿಯ ಸ್ಟೇಶನ್ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಇಂಜಿನಿಯರ ಅಸೋಸಿಯೇಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಗ್ರಾಹಕರ ಸಂಪರ್ಕ ಸಭೆ ನಡೆಯುವ ಉಪವಿಭಾಗದ ಹೆಸರು ಹಾಗೂ ಸಮಯದ ವಿವರ ಇಂತಿದೆ. ಕಲಬುರಗಿ ನಗರ ಉಪವಿಭಾಗ-1 ಮತ್ತು ನಗರ ಉಪವಿಭಾಗ-3ಕ್ಕೆ ಸಂಬಂಧಿಸಿದಂತೆ ಗ್ರಾಹಕರ ಸಂಪರ್ಕ ಸಭೆಯು ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ. ಕಲಬುರಗಿ ನಗರ ಉಪವಿಭಾಗ-2 ಮತ್ತು ನಗರ ಉಪವಿಭಾಗ-4ಕ್ಕೆ ಸಂಬಂಧಿಸಿದಂತೆ ಗ್ರಾಹಕರ ಸಂಪರ್ಕ ಸಭೆ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆಯವರೆಗೆ. ಗ್ರಾಹಕರು ಗ್ರಾಹಕರ ಸಂಪರ್ಕ ಸಭೆಗೆ ಹಾಜರಾಗಿ ತಮ್ಮ ಯಾವುದೇ ತರಹದ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ಲಘು ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನ
************************************************
ಕಲಬುರಗಿ ಫೆ.26(ಕ.ವಾ)-ಆಳಂದ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡದ ಅಲೆಮಾರಿ/ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗಾಗಿ ಲಘು ವಾಹನ ಚಾಲನಾ ತರಬೇತಿ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಆಳಂದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅವಶ್ಯಕ ದಾಖಲೆಗಳಾದ ತಹಶೀಲ್ದಾರರಿಂದ ಪಡೆದ ಜಾತಿ ಹಾಗೂ ಆದಾಯ ಪ್ರಮಾಣಪತ್ರ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಆಧಾರ ಕಾರ್ಡ್ ಝರಾಕ್ಸ್ ಪ್ರತಿಯನ್ನು ಲಗತ್ತಿಸಿ ಮಾರ್ಚ್ 5 ರೊಳಗಾಗಿ ಸಲ್ಲಿಸಬೇಕು. ತಡವಾಗಿ ಬಂದ ಹಾಗೂ ಅಪೂರ್ಣವಾಗಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನೋಂದಾಯಿತ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನ
********************************************
ಕಲಬುರಗಿ ಫೆ.26(ಕ.ವಾ)-ಆಳಂದ ಸಮಾಜ ಕಲ್ಯಾಣ ಇಲಾಖೆಯಿಂದ 2017-18 ಸಾಲಿನಲ್ಲಿ ನಾಗರೀಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ, ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989 ರಡಿ ವಿಚಾರಗೋಷ್ಠಿ ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲು ನೊಂದಾಯಿತ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಳಂದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಚ್ಛೆಯುಳ್ಳ ನೋಂದಾಯಿತ ಸಂಘ ಸಂಸ್ಥೆಯವರು ಅವಶ್ಯಕ ಎಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಮಾರ್ಚ್ 5ರ ರ ಸಂಜೆ 5 ಗಂಟೆಯೊಳಗಾಗಿ ಆಳಂದ ಸಮಾಜ ಕಲ್ಯಾಣ ಇಲಾಖೆ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ತಡವಾಗಿ ಒಂದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವರ ಪ್ರವಾಸ
*******************************
ಕಲಬುರಗಿ,ಫೆ.26.(ಕ.ವಾ.)-ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರು ಬೆಂಗಳೂರಿನಿಂದ ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 28ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಸಚಿವರು ಅಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಚಿತ್ತಾಪುರಕ್ಕೆ ಪ್ರಯಾಣಿಸಿ, ಬೆಳಿಗ್ಗೆ 10 ಗಂಟೆಗೆ ಚಿತ್ತಾಪುರದಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30 ಗಂಟೆಗೆ ಚಿತ್ತಾಪುರದಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
ಫೆ. 28ರಂದು ಎ.ಪಿ.ಎಂ.ಸಿ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ-
******************************************************************
ಶಂಕುಸ್ಥಾಪನೆ
*************
ಕಲಬುರಗಿ,ಜ.26.(ಕ.ವಾ.)-ಕೃಷಿ ಮಾರಾಟ ಇಲಾಖೆ, ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಲಬುರಗಿಯಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸಿ.ಸಿ. ರಸ್ತೆ, ಸ್ವಚ್ಛತೆ, ವರ್ಗೀಕರಣ ಹಾಗೂ ಪ್ಯಾಕಿಂಗ್ ಘಟಕ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಮುಚ್ಚು ಹರಾಜು ಕಟ್ಟೆ, 1000 ಮೆ.ಟನ್ ಸಾಮಥ್ರ್ಯದ ಸೈಲೋ ನಿರ್ಮಾಣ ಇನ್ನಿತರೆ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭವನ್ನು ಫೆಬ್ರವರಿ 28ರಂದು ಮಧ್ಯಾಹ್ನ 12.30 ಗಂಟೆಗೆ ಕಲಬುರಗಿ ನೆಹರು ಗಂಜ್‍ನ ರೈತ ಭವನ ರಸ್ತೆಯಲ್ಲಿರುವ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟಿಸುವರು. ಕೃಷಿ ಮಾರುಕಟ್ಟೆ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರ ಘನ ಉಪಸ್ಥಿತಿಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅಧ್ಯಕ್ಷತೆ ವಹಿಸುವರು.
ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ದತ್ತಾತ್ರೇಯ ಸಿ. ಪಾಟೀಲ್ ರೇವೂರ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಕಲಬುರಗಿ ದಾಲಮಿಲ್ ಅಸೋಸಿಯೇಶನ್ ಅಧ್ಯಕ್ಷ ಡಾ. ಚಿದಂಬರರಾವ ಎಸ್. ಪಾಟೀಲ, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘದ ಅಧ್ಯಕ್ಷ ಶಿವಕುಮಾರ ಘಂಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಪ್ರವಾಸಿಗರ ದಣಿವು ನಿವಾರಿಸಲಿವೆ “ಫೆಸಿಲಿಟೀಸ್ ಸೆಂಟರ್‍ಗಳು”
****************************************************
ಪ್ರವಾಸ... ಅಂದರೆ ಸಾಕು ಅದೇನೊ ಉಲ್ಲಾಸ, ಮೈಯಲ್ಲಿ ರೋಮಾಂಚನ ಒಂದು ರೀತಿಯ ಸಂಚಲನ. ಪ್ರವಾಸದ ಮುಂಚೆ ಪ್ರವಾಸಿ ತಾಣಗಳ ಬಳಿ ಮೂಲಸೌಲಭ್ಯಗಳು, ವಸತಿ ಇನ್ನೀತರ ಮಾಹಿತಿ ಅರಿತು ಪ್ರವಾಸ ಕೈಗೊಳ್ಳುವುದು ವ್ಯವಸ್ಥಿತ ಪ್ರವಾಸದ ಗುಟ್ಟು ಮತ್ತು ಸುಖಕರ ಪ್ರವಾಸದ ಲಕ್ಷಣ ಎಂದರೆ ತಪ್ಪಾಗಲಿಕಿಲ್ಲ.
ಇನ್ನು ಪ್ರವಾಸಿಗರಿಗೆ ಹಾದಿಯುದ್ದಕ್ಕು ತಮಗಿಷ್ಟವಾದ ತಿಂಡಿ-ತಿನುಸುಗಳು, ದಣಿವಾದರೆ ವಿಶ್ರಾಂತಿಗೆ ಅಲ್ಪ ವಿಶ್ರಾಮಗೃಹ, ಹೀಗೆ ಮೂಲಭೂತ ಸೌಲಭ್ಯಗಳಿದ್ದಲ್ಲಿ ಪ್ರಯಾಣಕ್ಕೆ ಇಂತಹ ರಸ್ತೆಗಳನ್ನು ಆಯ್ಕೆ ಮಾಡುವುದು ಸಹಜ. ಹೀಗೆ ರಸ್ತೆ ಬದಿಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಕೇಂದ್ರ ಸ್ಥಾಪಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿರುವ ಅಮೇರಿಕಾ, ಯೂರೋಪ್‍ನಂತಹ ಪಾಶ್ಚಿಮಾತ್ಯ ದೇಶಗಳು ಕ್ಷಿಪ್ರಗತಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಇಂತಹ ಉತ್ಕøಷ್ಠ ಸೌಲಭ್ಯ ಕೇಂದ್ರಗಳು ಸ್ಥಾಪಿಸಿದರೆ ಹೇಗೆ ! ಹೌದು, “ಕುಟೀರ” ಯೋಜನೆಯಡಿ ರಸ್ತೆ ಬದಿ ಪ್ರವಾಸಿ ಮೂಲಸೌಲಭ್ಯ ಕಲ್ಪಿಸುವ ಕೇಂದ್ರ (Wಚಿಥಿ Siಜe ಈಚಿಛಿiಟiಣies ಅeಟಿಣಡಿe) ಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ 2016-17ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದೆ. ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಜಾಲದಲ್ಲಿ ತನ್ನದೆಯಾದ ಸ್ಥಾನ ಹೊಂದಿರುವ ಮತ್ತು “ಒಂದು ರಾಜ್ಯ ಹಲವು ಜಗತ್ತು” ಎಂದೇ ವ್ಯಾಖ್ಯಾನಕ್ಕೆ ಒಳಪಡುವ ಕರ್ನಾಟಕದಲ್ಲಿ ಅನನ್ಯ ಪರಿಸರದ ರಮ್ಯ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಕರಾವಳಿ, ವೈವಿದ್ಯಮ್ಯಯ ವನ್ಯಜೀವಿ ತಾಣಗಳಂತಹ ಹತ್ತು ಹಲವು ಪ್ರವಾಸಿ ಕ್ಷೇತ್ರಗಳಿವೆ. ನಿರಂತರ ಪ್ರವಾಸದಿಂದ ಆಯಾಸಗೊಳ್ಳುವ ಪ್ರವಾಸಿಗರಿಗೆ ಮಾರ್ಗದ ಮಧ್ಯೆ ವಿಶ್ರಾಂತಿಗೆ “ಫೆಸಿಲೀಟೀಸ್ ಸೆಂಟರ್À” ಸ್ಥಾಪಿಸಿ ಪ್ರವಾಸೋದ್ಯಮದ ಬೆಳವಣಿಗೆಗೆ ಉತ್ತೇಜಿಸುವುದೆ ಕೇಂದ್ರ ಸ್ಥಾಪನೆಯ ಉದ್ದೇಶವಾಗಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ, ಚಿತ್ರದುರ್ಗ, ಹಾಸನ, ಮೈಸೂರು, ಕಾರವಾರ, ವಿಜಯಪುರ, ತುಮಕೂರು ಸೇರಿದಂತೆ ರಾಜ್ಯದ 12 ಕಡೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರವಾಸಿ ಸೌಲಭ್ಯ ಕೇಂದ್ರ ತೆರೆಯಲು ಸರ್ಕಾರ ಯೋಜಿಸಿದ್ದು, ಈ ನಿಟ್ಟಿನಲ್ಲಿ ಈಗಾಗಲೆ ಕಾರ್ಯೋನ್ಮುಖವಾಗಿದೆ. ಪ್ರಾಯೋಗಿಕವಾಗಿ ಚಿತ್ತಾಪುರ ತಾಲೂಕಿನ ಮಾಡಬೂಳ ಬಳಿ ಮತ್ತು ಚಿತ್ರದುರ್ಗದ ಮರಘಟ್ಟ ಬಳಿ ಕೇಂದ್ರಗಳು ಸ್ಥಾಪಿಸಲಾಗುತ್ತಿದೆ. ತದನಂತರ ರಾಜ್ಯದ ಉಳಿದೆಡೆ ಹಂತ ಹಂತವಾಗಿ ಈ ಮೂಲಸೌಲಭ್ಯ ಒದಗಿಸುವ ಕುಟೀರಗಳು ತಲೆ ಎತ್ತಲಿದ್ದು, ಸೇವೆ ನೀಡಲು ಪ್ರವಾಸಿಗರನ್ನು ಕೈಬೀಸಿ ಕರೆಯಲಿವೆ.
“ಪಾಶ್ಚಿಮಾತ್ಯ ದೇಶದಲ್ಲಿ ದೊರೆಯುವಂತೆ ರಾಜ್ಯದಲ್ಲಿಯೂ ಪ್ರವಾಸಿಗರಿಗೆ ಅತ್ಯುತ್ತಮ ದರ್ಜೆಯ ಮೂಲಸೌಲಭ್ಯ ನೀಡಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಇದಕ್ಕಾಗಿ 12 ಕಡೆ ರಸ್ತೆ ಬದಿ ಪ್ರವಾಸಿ ಮೂಲಸೌಲಭ್ಯ ಕೇಂದ್ರ ಸ್ಥಾಪಿಸಲಾಗುತ್ತಿದೆ” ಎನ್ನುತ್ತಾರೆ ಯೋಜನೆಯ ರೂವಾರಿಗಳಾದ ಪ್ರವಾಸೋದ್ಯಮ ಮತ್ತು ಐ.ಟಿ-ಬಿ.ಟಿ ಸಚಿವ ಪ್ರಿಯಾಂಕ ಖರ್ಗೆ ಅವರು.
ಚಿತ್ತಾಪುರ ಮತ್ತು ಚಿತ್ರದುರ್ಗದಲ್ಲಿ ಪ್ರಾಯೋಗಿಕ ಜಾರಿಗೆ:- ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಬಳಿಯ ವಾಘ್ದಾರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ-10ಕ್ಕೆ ಹೊಂದಿಕೊಂಡಂತೆ 1.32 ಎಕರೆ ಜಮೀನಿನಲ್ಲಿ ಸೌಲಭ್ಯ ಕೇಂದ್ರ ಸ್ಥಾಪಿಸಲಾಗುತ್ತಿದೆ. ಈ ಸಂಬಂಧ ಕಲಬುರಗಿ ಜಿಲ್ಲಾ ಪ್ರವಾಸೋದ್ಯಮ ಕಚೇರಿಯಿಂದ 3 ಕೋಟಿ ರೂ. ಅಂದಾಜು ವೆಚ್ಚದ ಪ್ರವಾಸಿ ಸೌಲಭ್ಯ ಕೇಂದ್ರ ಅಭಿವೃದ್ಧಿಪಡಿಸಲು ನಕ್ಷೆಯೊಂದಿಗೆ ವಿವರವಾದ ಅಂದಾಜು ಪಟ್ಟಿಯನ್ನು ಪ್ರವಾಸೋದ್ಯಮ ನಿರ್ದೇಶಕರಿಗೆ ಸಲ್ಲಿಸಲಾಗಿದ್ದು, ಈ ಉದ್ದೇಶಕ್ಕೆ ಈಗಾಗಲೆ 1.25 ಕೋಟಿ ರೂ. ಅನುದಾನ ಸಹ ಬಿಡುಗಡೆ ಮಾಡಲಾಗಿದೆ.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಂತಿರುವ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಹೋಬಳಿಯ ಮರಘಟ್ಟ ಗ್ರಾಮದ ಬಳಿ 2 ಎಕರೆ ಜಮೀನಿನಲ್ಲಿ ಫೆಸಿಲಿಟೀಸ್ ಸೆಂಟರ್ ಸ್ಥಾಪನೆಗೆ 3.99 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವಿತ ಯೋಜನೆಯ ಭಾಗವಾಗಿ ಈಗಾಗಲೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಚಿತ್ತಾಪುರ ಮತ್ತು ಚಿತ್ರದುರ್ಗದ ಪೈಲಟ್ ಯೋಜನೆಗೆ ಉಳಿದ ಅನುದಾನ ಅಂದಾಜು ಪಟ್ಟಿ ಅನುಮೋದನೆಯ ನಂತರ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಸೌಲಭ್ಯ ಕೇಂದ್ರದಲ್ಲಿ ಏನೇನು:- ಪ್ರವಾಸಿಗರಿಗೆ ಲಘು ಉಪಾಹಾರ, ಕೆಫೆಟೇರಿಯಾ, ಕುಡಿಯುವ ನೀರು, ಶೌಚಾಲಯ, ಸ್ಪಾ ಸೆಂಟರ್, ಚಿಕ್ಕ ಅಂಗಡಿ, ಉದ್ಯಾನವನ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಅಲ್ಪ ವಿಶ್ರಾಮಕ್ಕೆ ವಿಶ್ರಾಂತಿ ಕೋಣೆ, ಪ್ರಥಮ ಚಿಕಿತ್ಸೆಯಂತಹ ಮೂಲ ಸೌಲಭ್ಯಗಳು ಅತ್ಯುತ್ತಮ ದರ್ಜೆಯಲ್ಲಿ ಇಲ್ಲಿ ದೊರೆಯಲಿರುವುದು ವಿಶೇಷ. ಇದಲ್ಲದೆ ಪ್ರವಾಸಿ ಕ್ಷೇತ್ರಗಳ ಬಗ್ಗೆ ಮಾಹಿತಿಯೂ ಸಿಗಲಿದೆ.
ಕಟ್ಟಡ ಮತ್ತು ವಿನ್ಯಾಸ:- ಕನಿಷ್ಠ ಎರಡೂವರೆ ಎಕರೆ ಜಮೀನಿನಲ್ಲಿ ಮತ್ತು ಕನಿಷ್ಠ 2.5 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸ್ಥಾಪಿಸಲಾಗುತ್ತಿರುವ ಈ ಕೇಂದ್ರವು ಸ್ಥಳೀಯ ವಾಸ್ತುಶಿಲ್ಪಕ್ಕೆ ಅನುಗುಣವಾಗಿ ನಿರ್ಮಾಣಗೊಳ್ಳಲಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ.
ಸಾರ್ವಜನಿಕ-ಸಹಭಾಗಿತ್ವದಲ್ಲಿ ನಿರ್ವಹಣೆ:- ರಾಜ್ಯ ಸರ್ಕಾರದ ಅನುದಾನದಿಂದ ನಿರ್ಮಾಣಗೊಳ್ಳಲಿರುವ ಈ ಕೇಂದ್ರಗಳ ನಿರ್ವಹಣೆ ಮಾತ್ರ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಕಟ್ಟಡ ಪೂರ್ಣಗೊಂಡ ನಂತರ ನಿರ್ವಹಣೆಗೆ ಪ್ರವಾಸಿ ಕ್ಷೇತ್ರದಲ್ಲಿ ಈ ರೀತಿಯ ಕಾರ್ಯನಿರ್ವಹಿಸಿದ ಅನುಭವವುಳ್ಳ ಎಜೆನ್ಸಿಗಳಿಗೆ ನಿಯಮಾವಳಿಯನ್ವಯ ಟೆಂಡರ್ ಕರೆದು ನಿರ್ವಹಣೆಯ ಜವಾಬ್ದಾರಿ ನೀಡಲಾಗುತ್ತದೆ.


No comments:

Post a Comment