GULBARGA VARTHE

GULBARGA VARTHE

Saturday, 24 February 2018

news and photo date: 21-2-2018

 ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಮನವಿ
***********************************************************
ಕಲಬುರಗಿ.ಫೆ.24.(ಕ.ವಾ.)-ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಪ್ರಯುಕ್ತ 2018ರ ಮಾರ್ಚ್ 1ರಂದು ಗುರುವಾರ ಕಾಮದಹನ ಮತ್ತು ಮಾರ್ಚ್ 2ರಂದು ಶುಕ್ರವಾರ ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಶನಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೋಳಿ ಹಬ್ಬ ಆಚರಣೆಯ ಅಂಗವಾಗಿ ಕರೆಯಲಾದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಲಬುರಗಿ ಹಾಗೂ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯ ಶಾಂತಿ ಸಮಿತಿ ಸದಸ್ಯರು ಎಚ್ಚರಿಕೆ ವಹಿಸಬೇಕೆಂದರು.
ಸಾರ್ವಜನಿಕರು ಹೋಳಿ ಹಬ್ಬದಲ್ಲಿ ಚರ್ಮಕ್ಕೆ ಹನಿಕಾರಕವಲ್ಲದ ನೈಸರ್ಗಿಕ ಬಣ್ಣ ಮಾತ್ರ ಉಪಯೋಗಿಸಬೇಕು. ಆಹಾರ ಸಂರಕ್ಷಣಾ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ಬಣ್ಣ ದಾಸ್ತಾನು ಮಳಿಗೆಗಳನ್ನು ಪರಿಶೀಲಿಸಬೇಕು. ರಸಾಯನ ಮಿಶ್ರಿತ ಬಣ್ಣ ಮಾರಾಟವಾಗದಂತೆ ನೋಡಿಕೊಳ್ಳಬೇಕು. ರಾಸಾಯನಿಕ ಬಣ್ಣ ಹಚ್ಚುವವರ ಹಾಗೂ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಮಾರ್ಚ್ 1ರಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಲವಂತವಾಗಿ ಬಣ್ಣ ಹಚ್ಚುವುದಾಗಲಿ, ತೊಂದರೆ ಕೊಡುವುದಾಗಲಿ ಮಾಡಬಾರದು. ಹಬ್ಬ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣವನ್ನು ಯಾರಿಗೂ ಒತ್ತಾಯವಾಗಿ ಹಚ್ಚದಂತೆ ಎಚ್ಚರಿಕೆ ವಹಿಸಬೇಕು. ಹಬ್ಬವನ್ನು ಸಂತೋಷದಿಂದ ಆಚರಿಸಬೇಕೇ ವಿನ: ಯಾರಿಗೂ ತೊಂದರೆಯಾಗಬಾರದು. ಎಲ್ಲ ಸಾರ್ವಜನಿಕರು ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಮಾರ್ಚ್ 1 ಮತ್ತು 2ರಂದು ಸಮರ್ಪಕ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಬೇಕೆಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಹಬ್ಬ ಆಚರಣೆ ಎರಡೂ ದಿನಗಳಂದು ಸಂಜೆಯಿಂದ ಸಮರ್ಪಕ ರೀತಿಯಲ್ಲಿ ಹಾಗೂ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುವಂತೆ ಅಗತ್ಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ಮಹಾನಗರ ಪಾಲಿಕೆಯಿಂದ ಕಾಮದಹನ ಬಳಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಲ್ಲದೇ ನಗರದಾದ್ಯಂತ ಬೀದಿ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಬೇಕು. ನಗರದ ಬೀದಿ ದೀಪಗಳನ್ನು ಸಹ ಸರಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಈ ದಿನಗಳಂದು ಅಕ್ರಮವಾಗಿ ಮದ್ಯ ಮಾರಾಟವಾಗುವುದನ್ನು ನಿರ್ಬಂಧಿಸಲು ಅಬಕಾರಿ ಇಲಾಖೆ ವಿಶೇಷ ಗಮನ ಹರಿಸಬೇಕು ಹಾಗೂ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಯಾರಾದರೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಲ್ಲಿ ಪ್ರಯತ್ನಿಸಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಸಾರ್ವಜನಿಕರು ಪರಸ್ಪರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಹಬ್ಬ ಆಚರಿಸಬೇಕು. ಉತ್ತರ ಕರ್ನಾಟಕದಲ್ಲಿ ಹೋಳಿ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಹೋಳಿ ಹಬ್ಬದಲ್ಲಿ ಭಾತೃತ್ವ ಸಂಬಂಧ ಬೆಳೆಸಲು ಬಣ್ಣ ಆಡುತ್ತಾರೆ. ಯಾರೂ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಿ ಸಂಘರ್ಷಕ್ಕೆ ಅವಕಾಶ ನೀಡಬಾರದು. ಯಾವುದೇ ಅಹಿತರ ಘಟನೆ ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಹಬ್ಬದ ದಿನಗಳಂದು ಕಾನೂನು ಉಲ್ಲಂಘನೆ ಮಾಡದಂತೆ ಯುವಕರಿಗೆ ಶಾಂತಿ ಸಮಿತಿ ಸದಸ್ಯರು ತಿಳಿಹೇಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಶಾಂತಿ ಸಮಿತಿ ಸದಸ್ಯ ಬಾಬುರಾವ ಜಹಾಗಿರದಾರ ಸೇರಿದಂತೆ ಇತರ ಸದಸ್ಯರು, ವಿವಿಧ ಧರ್ಮಗಳ ಮುಖಂಡರು, ಹಿರಿಯ ನಾಗರಿಕರು ಹಲವಾರು ಸೂಕ್ತ ಸಲಹೆಗಳನ್ನು ನೀಡಿದರು.
ಯುವಕರು ಮತದಾನದ ಹಕ್ಕಿಗೆ ಮಹತ್ವ ನೀಡಲು ಸಲಹೆ
************************************************
ಕಲಬುರಗಿ.ಫೆ.24.(ಕ.ವಾ.)-ಚುನಾವಣೆಯಲ್ಲಿ ಪ್ರತಿಯೊಂದು ಮತ ಒಬ್ಬ ಅಭ್ಯರ್ಥಿಯ ಭವಿಷ್ಯ ನಿರ್ಧರಿಸಬಹುದಾಗಿದೆ. ಯುವಕರು ತಮ್ಮ ಮತದಾನದ ಹಕ್ಕಿಗೆ ಮಹತ್ವ ನೀಡಿ ಎಲ್ಲರೂ ಮತ ಚಲಾಯಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.
ಅವರು ಶನಿವಾರ ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮಹಿಳೆಯರ ಸಬಲೀಕರಣ ಕುರಿತು ಬಿ.ಎ., ಬಿ.ಎಸ್.ಸಿ. ಹಾಗೂ ಬಿ.ಕಾಂ. ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಚುನಾವಣಾ ಆಯೋಗವು ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಕ್ರಮ ಜರುಗಿಸುತ್ತಿದ್ದು, ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಲು 18ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಯಾದಿಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಬೇಕೆಂದು ತಿಳಿಸಿದರು.
ಮತದಾನವನ್ನು ಯಾವುದೇ ಸಂಶಯವಿಲ್ಲದಂತೆ ನಡೆಸಲು ಈ ವರ್ಷದಿಂದ ಮತದಾರರ ಮತ ಪ್ರಮಾಣೀಕರಿಸುವ ದಾಖಲೆ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಈ ವ್ಯವಸ್ಥೆಯಿಂದ ನಾವು ಯಾರಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. 18ವರ್ಷ ಮೇಲ್ಪಟ್ಟ ಎಲ್ಲರೂ ಶಾಲಾ ಮಟ್ಟದಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ಗಳಲ್ಲಿ ಸದಸ್ಯರಾಗಿ ಶಾಲೆಗಳಲ್ಲಿ ಮತದಾನ ಪ್ರಕ್ರಿಯೆ ಕುರಿತು ಅಣಕು ಪ್ರದರ್ಶನ ಕೈಗೊಳ್ಳಬೇಕು. ಮತದಾನದ ಮಹತ್ವದ ಬಗ್ಗೆ ಪಾಲಕರಿಗೆ ತಿಳಿ ಹೇಳಬೇಕು ಎಂದರು.
ವಿದ್ಯಾರ್ಥಿನಿಯರು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ದೇಶದ ಉಜ್ವಲ ಭವಿಷ್ಯಕ್ಕೆ ಕೊಡುಗೆ ನೀಡಬೇಕು. ಪದವಿ ಓದುತ್ತಿರುವ ಎಲ್ಲ ವಿದ್ಯಾರ್ಥಿನಿಯರು ಇಂದಿನಿಂದಲೇ ತಮ್ಮ ಮುಂದಿನ ಭವಿಷ್ಯ ನಿರ್ಧರಿಸಿಕೊಂಡು ಶತ ಪ್ರತಿಶತ ಪ್ರಮಾಣಿಕತೆಯಿಂದ ಅಧ್ಯಯನ ಮಾಡಬೇಕು. ಮಹಿಳೆಯರು ಮಹಿಳೆಯರಿಗೆ ಸತ್ಕರಿಸುವ ಹಾಗೂ ಗೌರವಿಸುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ರಾಚಪ್ಪ ನಂದಗಿ, ಮನೋಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಬಪ್ಪನ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಇಂದುಮತಿ ಪಾಟೀಲ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಂಕ್ರಪ್ಪ ಹಸ್ತಿ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸ್ವೀಪ್ ಸಮಿತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಸ್ವೀಪ್ ಸಮಿತಿಯಿಂದ ಚುನಾವಣಾ ಲೋಗೋ ಬಿಡುಗಡೆ
************************************************
ಕಲಬುರಗಿ.ಫೆ.24.(ಕ.ವಾ.)-ಚುನಾವಣಾ ಆಯೋಗವು ರೂಪಿಸಿರುವ ಚುನಾವಣಾ ಆಯೋಗದ ಲೋಗೋವನ್ನು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲಾಧಿಕಾರಿಗಳು, ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಈ ಲೋಗೋವನ್ನು ಎಲ್ಲ ಶಾಲಾ ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ನೀಡಲಾಗುವುದು. ಮತದಾರರ ನೋಂದಣಿ ಮತ್ತು ಮತದಾನವನ್ನು ಹೆಚ್ಚಿಸುವಲ್ಲಿ ಜಾಗೃತಿ ಮೂಡಿಸುವುದು ಸ್ವೀಪ್ ಸಮಿತಿಯ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ಕಾಲೇಜು ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಚುನಾವಣಾ ಶಿಕ್ಷಣದ ಮಾಹಿತಿ ನೀಡಲಾಗುತ್ತಿದೆ ಎಂದರು.
ಗ್ರಾಮ ಮಟ್ಟದಲ್ಲಿ ಮತದಾನದ ಮಹತ್ವ ಹಾಗೂ ನೈತಿಕ ಮತದಾನದ ಜಾಗೃತಿ ಮೂಡಿಸಲು 18-18 ಪುರುಷರಿಗೆ ಕಬ್ಬಡ್ಡಿ ಮತ್ತು ಮಹಿಳೆಯರಿಗೆ ಕುಂಟಬಿಲ್ಲೆ ಆಟಗಳನ್ನು ಜಿಲ್ಲೆಯಾದ್ಯಂತ ಏರ್ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ವೀಪ್ ಸಮಿತಿಯಿಂದ ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಂಡು ಚುನಾವಣಾ ಜಾಗೃತಿ ಮೂಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ಎಸ್. ಪವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸರ್ದಾರ್ ಬಲಬೀರ್ ಸಿಂಗ್ ಗೌರವ ಡಾಕ್ಟರೇಟ್‍ಗೆ ಭಾಜನ
**************************************************
ಪ್ರೊ. ಎಸ್.ಆರ್.ನಿರಂಜನ್
************************
ಕಲಬುರಗಿ,ಫೆ.24.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ 36ನೇ ವಾರ್ಷಿಕ ಘಟಿಕೋತ್ಸವವು ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಫೆ.27 ಮಂಗಳವಾರದಂದು ಬೆಳಿಗ್ಗೆ 11.30ಕ್ಕೆ ನಡೆಯಲಿದ್ದು, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಬೀದರನ ಗುರುದ್ವಾರ ಶ್ರೀ ನಾನಕ್ ಝಿರಾ ಸಾಹೇಬ್ ಮತ್ತು ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಬಲಬೀರ್‍ಸಿಂಗ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ ತಿಳಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದದ ಸಭಾಂಗಣದಲ್ಲಿ ಇಂದು ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ವಜುಭಾಯ್ ರೂಡಾಭಾಯ್ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಗಳಾದ ಬಸವರಾಜ ರಾಯರೆಡ್ಡಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಹಿರಿಯ ವಿಜ್ಞಾನಿ ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಪ್ರೊ ಜಿ.ಪದ್ಮನಾಬನ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಈ ಬಾರಿ ದಾನಿಗಳ ಪ್ರಾಯೋಜಕತ್ವದಿಂದ 13 ಚಿನ್ನದ ಪದಕಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದ್ದು, ಒಟ್ಟಾರೆ 165 ಚಿನ್ನದ ಪದಕಗಳಲ್ಲಿ 158 ಚಿನ್ನದ ಪದಕಗಳನ್ನು 67 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ನೀಡಲಾಗುವುದು. 46 ಮಹಿಳಾ ವಿದ್ಯಾರ್ಥಿ ಹಾಗೂ 21 ಪುರುಷ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದುಕೊಳ್ಳಲಿದ್ದಾರೆ. ಉಳಿದ 7 ಚಿನ್ನದ ಪದಕಗಳನ್ನು ನಗದು ಬಹುಮಾನ ರೂಪದಲ್ಲಿ ತಲಾ 6 ಜನ ಮಹಿಳಾ ಹಾಗೂ ಪುರುಷರಂತೆ ಒಟ್ಟು 12 ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮ್ಯಾನೇಜ್‍ಮೆಂಟ್ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ರಸಿಕಾ.ಪಿ.ಮೆಹತಾ ಅತಿ ಹೆಚ್ಚು (08) ಚಿನ್ನದ ಪಡೆದಿದ್ದಾರೆ. ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಕಾಶಿರಾಯ ಜಿರೊಳಿ, ಕನ್ನಡ ವಿಭಾಗದಲ್ಲಿ ರೇಖಾ ಬಸವರಾಜ ತಲಾ (07), ರಾಜ್ಯಶಾಸ್ತ್ರ ವಿಭಾಗದಲ್ಲಿ ಪಾರ್ವತಿ ಯಂಕಣಗೌಡ, ಎಂ.ಸಿ.ಎ ವಿಭಾಗದಲ್ಲಿ ಪೂಜಾ ಮಡೆಪ್ಪ ಹಾಗೂ ಗಣಿತ ವಿಭಾಗದಲ್ಲಿ ರೇಖಾ ಶಂಕರೇಗೌಡ ಜಿ. ತಲಾ (06) ಚಿನ್ನದ ಪದಕ ಹಾಗೂ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಿಯಂ ಸೂರಿ ಹಾಗೂ ರಸಾಯನಶಾಸ್ತ್ರ ವಿಭಾಗದಲ್ಲಿ ಸರಸ್ವತಿ ಯು. ತಲಾ (05) ಚಿನ್ನದ ಪದಕಗಳನ್ನು ಪಡೆದಿರುತ್ತಾರೆ ಎಂದು ವಿವರಿಸಿದರು.
ಪ್ರಸ್ತುತ ಘಟಿಕೋತ್ಸವದಲ್ಲಿ 291 ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಗುತ್ತಿದ್ದು, ಇದರಲ್ಲಿ 180 ಪುರುಷ ಅಭ್ಯರ್ಥಿಗಳು ಮತ್ತು 111 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಸ್ನಾತಕ/ ಸ್ನಾತಕೋತ್ತರ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಪದವಿಗೆ ಒಟ್ಟು 4,183 ವಿದ್ಯಾರ್ಥಿಗಳು ಭಾಜನರಾಗಿದ್ದು, ಈ ಪೈಕಿ 2203 ಪುರುಷ, 1980 ಮಹಿಳಾ ವಿದ್ಯಾರ್ಥಿನಿಯರು ಸೇರಿದ್ದಾರೆ. ಅದೇ ರೀತಿ 23,102 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲಿದ್ದು, ಇದರಲ್ಲಿ 12809 ಪುರುಷ ಮತ್ತು 10293 ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದು ವಿವಿರ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ದಯಾನಂದ ಅಗಸರ್, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ.ಎಂ.ಮದರಿ ಮತ್ತು ಹಣಕಾಸು ಅಧಿಕಾರಿ ಲಕ್ಷ್ಮಣ ರಾಜನಾಳಕರ ಇದ್ದರು.
ಮಕ್ಕಳಲ್ಲಿ ಉತ್ತಮ ವಿಚಾರಗಳನ್ನು ಬಿತ್ತುವುದು ಪೋಷಕರ ಜವಾಬ್ದಾರಿ
************************************************************
ಕಲಬುರಗಿ,ಫೆ.24.(ಕ.ವಾ.)-ಮಕ್ಕಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಅವರಲ್ಲಿ ಉತ್ತಮ ವಿಚಾರಗಳನ್ನು ಬಿತ್ತುವ ಮಹತ್ತರ ಜವಾಬ್ದಾರಿ ಪೋಷಕರದ್ದಾಗಿದೆ ಎಂದು ಕಲಬುರಗಿ ಜಿಲ್ಲಾ ನ್ಯಾಯಿಕ ಮಂಡಳಿಯ ಅಧ್ಯಕ್ಷರಾದ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿದೇವಿ ಅವರು ಅಭಿಪ್ರಾಯಪಟ್ಟರು.
ಅವರು ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಲ ನ್ಯಾಯಿಕ ಮಂಡಳಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರಡೆಯಿರುವ ಸರ್ಕಾರಿ ವೀಕ್ಷಾಣಾಲಯದಲ್ಲಿ ಹಮ್ಮಿಕೊಂಡಿದ್ದ “ಬಾಲ ನ್ಯಾಯಿಕ ಕಾಯ್ದೆ” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೃದು ಮನಸ್ಸಿನ ಮಕ್ಕಳು ತಮಗೆ ಅರಿವಿಲ್ಲದಂತೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಹೀಗೆ ಭಾಗಿಯಾದವರನ್ನು ಸಾಂಪ್ರಾದಾಯಿಕ ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡಿದಲ್ಲಿ ಅವರ ಭವಿಷ್ಯಕ್ಕೆ ಪೆಟ್ಟು ಬೀಳಬಹುದೆಂದು ಅರಿತು ಬಾಲ ನ್ಯಾಯಿಕ ಮಂಡಳಿ ವ್ಯವಸ್ಥೆ ಅಸ್ತಿತ್ವಕ್ಕೆ ತರಲಾಗಿದ್ದು, ಇಲ್ಲಿ ಮಕ್ಕಳಿಗೆ ಪ್ರತ್ಯೇಕ ವಿಚಾರಣೆ ಕೈಗೊಳ್ಳುವುದಲ್ಲದೆ ಅವರ ಸಂರಕ್ಷಣೆ ಪ್ರಮುಖ ಉದ್ದೇಶವಾಗಿದೆ ಎಂದರು.
ಬಾಲ ನ್ಯಾಯಿಕ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ ಬಾಲ ನ್ಯಾಯಿಕ ಕುರಿತು ಮಾತನಾಡಿ ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೆ ಎಂಬ ನಾನ್ನುಡಿಯಂತೆ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಇರುವ ವ್ಯವಸ್ಥೆಯೆ ಬಾಲ ನ್ಯಾಯಿಕ ಮಂಡಳಿ. ಉತ್ತಮ ಸಂಗಡಿರೊಂದಿಗೆ ಸ್ನೇಹ ಮಾಡುವ ಮೂಲಕ ಸತ್ಪ್ರಜೆಗಳಾಗಿ ಹೊರಹೊಮ್ಮಿ ಎಂದು ಮಕ್ಕಳಿಗೆ ಕರೆ ನೀಡಿದರು.
ಬಾಲ ನ್ಯಾಯಿಕ ಕಾಯ್ದೆಯನ್ವಯ ಯಾವುದೇ ಪ್ರಕರಣದಲ್ಲಿ ಭಾಗಿಯಾದ ಅಪ್ರಾಪ್ತ ಮಕ್ಕಳನ್ನು ಪೊಲೀಸರು ಬಂಧನದ ಸಮಯದಲ್ಲಿ ಪೋಷಕರಿಗೆ ಮತ್ತು ಮಕ್ಕಳಿಗೆ ಮಾಹಿತಿ ನೀಡುವುದಲ್ಲದೆ 24 ಗಂಟೆಯೊಳಗೆ ಬಾಲ ನ್ಯಾಯಿಕ ಮಂಡಳಿಗೆ ಹಾಜರುಪಡಿಸಬೇಕಾದದ್ದು ಕಡ್ಡಾಯ. ಕೆಲವೊಂದು ಪ್ರಕರಣಗಳಲ್ಲಿ ಇದು ಉಲ್ಲಂಘನೆಯಾಗುತ್ತಿದ್ದು, ಮಕ್ಕಳು ಮಂಡಳಿಗೆ ದೂರು ನೀಡಿದಲ್ಲಿ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ನ್ಯಾಯಾಧೀಶೆ ಸರಸ್ವತಿದೇವೆ ಅವರು ಮಂಡಳಿಯ ಅಧ್ಯಕ್ಷರಾದ ನಂತರ ಹಲವು ಪ್ರಕರಣಗಳಿಗೆ ತ್ವರಿತ ವಿಲೇವಾರಿ ಭಾಗ್ಯ ನೀಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ಮಾಣಿಕ್ಯ ಮಾತನಾಡಿ ಅಪರಾಧ ಪ್ರಕರಣದಿಂದ ವೀಕ್ಷಣಾಲಯಕ್ಕೆ ಬರುವಂತಹ ಮಕ್ಕಳ ಪೋಷಕರು ತಮ್ಮ ಪರವಾಗಿ ವಾದ ಮಂಡಿಸಲು ವಕೀಲರನ್ನು ನೇಮಿಸಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಕೋರಿದ್ದಲ್ಲಿ ಪ್ರಾಧಿಕಾರ ವಕೀಲರನ್ನು ನೇಮಿಸುವ ಮೂಲಕ ನಿಮ್ಮ ನೆರವಿಗೆ ಬರಲಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಬಳಸಿಕೊಂಡು ಉತ್ತಮ ನಾಗರಿಕರಾಗಿ ಎಂದು ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಾಲ ನ್ಯಾಯಿಕ ಮಂಡಳಿ ಸದಸ್ಯ ಲಿಯಾಖತ್ ಫರೀದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಂಜುಳಾದೇವಿ ರೆಡ್ಡಿ ಸೇರಿದಂತೆ ಇನ್ನೀತರು, ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ ಸ್ವಾಗತಿಸಿ ನಿರೂಪಿಸಿದರು. ಸರ್ಕಾರಿ ವೀಕ್ಷಣಾಲಯದ ಅಧೀಕ್ಷಕ ಬಾಲಕೃಷ್ಣ ಸಾಳವಾಡಗಿ ವಂದಿಸಿದರು.
ಫೆಬ್ರವರಿ 25ರಂದು ನಿಂಬರ್ಗಾ ನೂತನ ಬಸ್ ನಿಲ್ದಾಣ ಉದ್ಘಾಟನೆ
**********************************************************
ಕಲಬುರಗಿ.ಫೆ.24.(ಕ.ವಾ.)-ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-2ರಿಂದ ಆಳಂದ ತಾಲೂಕಿನ ನಿಂಬರ್ಗಾ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭವನ್ನು ಫೆಬ್ರವರಿ 25ರಂದು ಬೆಳಿಗ್ಗೆ 10 ಗಂಟೆಗೆ ನಿಂಬರ್ಗಾ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದೆ.
ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಈ ಸಮಾರಂಭವನ್ನು ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಅವರ ಘನ ಉಪಸ್ಥಿತಿಯಲ್ಲಿ ಆಳಂದ ವಿಧಾನಸಭಾ ಶಾಸಕ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಆಳಂದ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಅಶೋಕ ಗುತ್ತೇದಾರ, ನಿಂಬರ್ಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಅಮೃತಪ್ಪಾ ಬಿಬ್ರಾಣಿ, ನಿಂಬರ್ಗಾ ಮತಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ತೈನಿನ್ ಸಲ್ಮಾ ಬೇಗಂ ಮೆಹಬೂಬ್ ಸಾಹೇಬ್, ತಾಲೂಕು ಪಂಚಾಯಿತಿ ಸದಸ್ಯ ದತ್ತಾತ್ರೇಯ ಶಿವಯೋಗಪ್ಪ ದುರ್ಗದ್, ಎಲ್ಲ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವರು.
ಫೆಬ್ರವರಿ 25ರಂದು ಚಿಂಚೋಳಿ ನೂತನ ಬಸ್ ನಿಲ್ದಾಣ ಉದ್ಘಾಟನೆ
*********************************************************
ಕಲಬುರಗಿ.ಫೆ.24.(ಕ.ವಾ.)-ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗ-1ರಿಂದ ಚಿಂಚೋಳಿ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭವನ್ನು ಫೆಬ್ರವರಿ 25ರಂದು ಸಂಜೆ 5.30 ಗಂಟೆಗೆ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದೆ.
ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಈ ಸಮಾರಂಭವನ್ನು ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಅವರ ಘನ ಉಪಸ್ಥಿತಿಯಲ್ಲಿ ಚಿಂಚೋಳಿ ಶಾಸಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ ಅಧ್ಯಕ್ಷತೆ ವಹಿಸುವರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಚಿಂಚೋಳಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಪುರಸಭೆ ಅಧ್ಯಕ್ಷೆ ಇಂದುಮತಿ ಮನೋಹರ ದೇಗಲ್ಮಡಿ, ಎಲ್ಲ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರುಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವರು.
ಫೆಬ್ರವರಿ 27ರಂದು ವಿಭಾಗ ಮಟ್ಟದ ಕಾಲೇಜು ರಂಗೋತ್ಸವ ಉದ್ಘಾಟನೆ
***************************************************************
ಕಲಬುರಗಿ.ಫೆ.24.(ಕ.ವಾ.)-ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಹಾಗೂ ರಂಗಾಯಣ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಭಾಗ ಮಟ್ಟದ ಕಾಲೇಜು ರಂಗೋತ್ಸವ-2018ನ್ನು (ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆ) ಫೆಬ್ರವರಿ 27 ಹಾಗೂ 28ರಂದು ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಫೆಬ್ರವರಿ 27ರಂದು ಬೆಳಿಗ್ಗೆ 10.30 ಗಂಟೆಗೆ ಜೇವರ್ಗಿ ತಾಲೂಕಿನ ಮಳ್ಳಿಯ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತ ಎಲ್.ಬಿ.ಕೆ. ಆಲ್ದಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಕಲಬುರಗಿ ಹಿರಿಯ ರಂಗಕರ್ಮಿ ಪ್ರೊ. ಪ್ರಭಾಕರ ಸಾತಖೇಡ ಹಾಗೂ ಹಿರಿಯ ಡೊಳ್ಳು ಕಲಾವಿದ ಪುಂಡಲೀಕ ಪೂಜಾರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ರಂಗೋತ್ಸವ ಅಂಗವಾಗಿ ಫೆಬ್ರವರಿ 27ರಂದು ವಿವಿಧ ಕಾಲೇಜುಗಳಿಂದ ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ, ನೃಪತುಂಗ, ಸೂತ್ರದ ಗೊಂಬೆ, ಕ್ಯಾಪ್ಟನ್ ಗೋಪಿನಾಥ, ಉರಿಲಿಂಗ, ಮದುವೆ ಹೆಣ್ಣು ನಾಟಕಗಳು ಹಾಗೂ ಡೊಳ್ಳು ಕುಣಿತ, ಗುರ್ಜಿ ಕುಣಿತ, ಕಂಸಾಳೆ, ಸುಗ್ಗಿ ಹಾಡು, ಹಳ್ಳಿ ಸೊಡಗು ಜಾನಪದ ನೃತ್ಯಗಳು ಹಾಗೂ ಫೆಬ್ರವರಿ 27ರಂದು ವಿವಿಧ ಕಾಲೇಜುಗಳಿಂದ ಮಾತನಾಡುವ ಕಲ್ಲುಗಳು, ಇದು ಕಾರಣ, ಶರೀಫ್, ಎದೆಗೆ ಬಿದ್ದ ಅಕ್ಷರ, ಕೆಂಪು ಹೂವು, ರಾವಣ ಸಂಹಾರ ನಾಟಕಗಳು ಮತ್ತು ಡೊಳ್ಳು ಕುಣಿತ, ತಮಟೆ ವಾದನ, ಕೋಲಾಟ, ಕಂಸಾಳೆ, ಗೆಜ್ಜೆ ಕೋಲಾಟ ಜಾನಪದ ನೃತ್ಯಗಳು ಪ್ರದರ್ಶನಗೊಳ್ಳಲಿದೆ.
ಫೆಬ್ರವರಿ 26ರಂದು ಗ್ರಾಹಕರ ಸಂಪರ್ಕ ಸಭೆ
**************************************
ಕಲಬುರಗಿ.ಫೆ.24.(ಕ.ವಾ.)-ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ (ಕೆ.ಇ.ಆರ್.ಸಿ.) ನಿರ್ದೇಶನ ಮೇರೆಗೆ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯಿಂದ ಕಲಬುರಗಿ ನಗರ ವಿಭಾಗದ ವ್ಯಾಪ್ತಿಗೆ ಬರುವ ಉಪವಿಭಾಗಗಳ ಗ್ರಾಹಕರ ಸಂಪರ್ಕ ಸಭೆಯು ಕಲಬುರಗಿ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 26ರಂದು ಕಲಬುರಗಿಯ ಸ್ಟೇಶನ್ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಇಂಜಿನಿಯರ ಅಸೋಸಿಯೇಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಗ್ರಾಹಕರ ಸಂಪರ್ಕ ಸಭೆ ನಡೆಯುವ ಉಪವಿಭಾಗದ ಹೆಸರು ಹಾಗೂ ಸಮಯದ ವಿವರ ಇಂತಿದೆ. ಕಲಬುರಗಿ ನಗರ ಉಪವಿಭಾಗ-1 ಮತ್ತು ನಗರ ಉಪವಿಭಾಗ-3ಕ್ಕೆ ಸಂಬಂಧಿಸಿದಂತೆ ಗ್ರಾಹಕರ ಸಂಪರ್ಕ ಸಭೆಯು ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ. ಕಲಬುರಗಿ ನಗರ ಉಪವಿಭಾಗ-2 ಮತ್ತು ನಗರ ಉಪವಿಭಾಗ-4ಕ್ಕೆ ಸಂಬಂಧಿಸಿದಂತೆ ಗ್ರಾಹಕರ ಸಂಪರ್ಕ ಸಭೆ ಅಂದು ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆಯವರೆಗೆ. ಗ್ರಾಹಕರು ಗ್ರಾಹಕರ ಸಂಪರ್ಕ ಸಭೆಗೆ ಹಾಜರಾಗಿ ತಮ್ಮ ಯಾವುದೇ ತರಹದ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ಸಾರಿಗೆ ಸಚಿವರ ಪ್ರವಾಸ
**********************
ಕಲಬುರಗಿ,ಫೆ.24.(ಕ.ವಾ.)-ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಹುಬ್ಬಳ್ಳಿ-ಸಿಕಂದ್ರಬಾದ್ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 25ರಂದು ಬೆಳಿಗ್ಗೆ 7.10 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಬೆಳಿಗ್ಗೆ 10 ಗಂಟೆಗೆ ನಿಂಬರ್ಗಾದಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಮಡಿಯಾಳ ಗ್ರಾಮದಲ್ಲಿ ಕನಕಮೂರ್ತಿ ಆನಾವರಣ ಕಾರ್ಯಕ್ರಮದಲ್ಲಿ, ಮಧ್ಯಾಹ್ನ 2.30 ಗಂಟೆಗೆ ಜೇವರ್ಗಿಯಲ್ಲಿ ವಿವಿಧ ಹಿಂದುಳಿದ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 5.30 ಗಂಟೆಗೆ ಚಿಂಚೋಳಿಯಲ್ಲಿ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 8 ಗಂಟೆಗೆ ಚಿಂಚೋಳಿಯಿಂದ ಹೈದ್ರಾಬಾದಿಗೆ ಪ್ರಯಾಣಿಸುವರು.
ಮತದಾರರ ಪಟ್ಟಿ ವೀಕ್ಷಕರ ಪ್ರವಾಸ
********************************
ಕಲಬುರಗಿ,ಫೆ.24.(ಕ.ವಾ.)-ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಚುನಾವಣಾ ಮತದಾರರ ಪಟ್ಟಿ ವೀಕ್ಷಕ ಮೊಹಮ್ಮದ್ ಮೊಹಸಿನ್ ಅವರು ಬೀದರದಿಂದ ರಸ್ತೆ ಮೂಲಕ ಫೆಬ್ರವರಿ 25ರಂದು ರವಿವಾರ ಸಂಜೆ 4 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಸಂಜೆ 4.15 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ಕುರಿತು ಪ್ರಗತಿ ಪರಿಶೀಲನಾ ಸಭೆ, ಸಂಜೆ 5 ಗಂಟೆಗೆ ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷದ ಮುಖಂಡರುಗಳೊಂದಿಗೆ ಮತದಾರರ ಪಟ್ಟಿ ಬಗ್ಗೆ ಸಲಹೆ-ಸೂಚನೆ ಮತ್ತು ಅಹವಾಲು ಸ್ವೀಕರಿಸುವರು. ನಂತರ ವಿಧಾನಸಭಾ ಮತಕ್ಷೇತ್ರಗಳಿಗೆ ಭೇಟಿ ನೀಡುವ ವೀಕ್ಷಕರು ರಾತ್ರಿ 9.05 ಗಂಟೆಗೆ ಕಲಬುರಗಿಯಿಂದ ಸೋಲಾಪುರ-ಯಶವಂತಪುರ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ರಾಷ್ಟ್ರಕೂಟ ಉತ್ಸವದ ವೆಬ್‍ಸೈಟ್ ಉದ್ಘಾಟನೆ
*****************************************
ಕಲಬುರಗಿ,ಫೆ.24.(ಕ.ವಾ.)-ಸೇಡಂ ತಾಲೂಕಿನ ಮಳಖೇಡ್‍ನಲ್ಲಿ ಮಾರ್ಚ್ 4 ಹಾಗೂ 5ರಂದು ಜರುಗಲಿರುವ ರಾಷ್ಟ್ರಕೂಟ ಉತ್ಸವಕ್ಕೆ ಸಂಬಂಧಿಸಿದಂತೆ ತಿತಿತಿ.ಡಿಚಿshಣಡಿಚಿಞuಣಚಿuಣsಚಿv.iಟಿ ವೆಬ್‍ಸೈಟ್‍ನ್ನು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಉದ್ಘಾಟಿಸುವರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಚಂದ್ರಶೇಖರ ಕಂಬಾರ ಅವರನ್ನು ರಾಷ್ಟ್ರಕೂಟ ಉತ್ಸವ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಅವರೊಂದಿಗೆ ಸಾಧ್ಯವಾದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳುವರು. ಪದ್ಮಶ್ರೀ ಪ್ರಶಸ್ತಿ ವಿಜೇತ ಇಬ್ರಾಹಿಂ ಸುತಾರ ಸಹ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಷ್ಟ್ರಕೂಟ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಶೇ. 80ರಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದ್ದು, ರಾಷ್ಟ್ರದ ಖ್ಯಾತ ಕಲಾವಿದರು ಸಹ ಆಗಮಿಸುವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಜೊತೆಗೂಡಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ರಾಷ್ಟ್ರಕೂಟರ ಕುರಿತು ಸಂಶೋಧನೆ ಮಾಡಿದ ಖ್ಯಾತ ಸಂಶೋಧಕರು ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವರು. ಗೋಷ್ಠಿಗಳಲ್ಲಿ ಮಂಡಿಸಲಾದ ಅಂಶಗಳನ್ನು ದಾಖಲೀಕರಿಸಲಾಗುವುದು. ಇವುಗಳನ್ನು ಸಂಶೋಧನೆಗೆ ಬಳಸಿಕೊಳ್ಳಲು ಅನುಕೂಲವಾಗುವುದು. ಜೊತೆಗೆ ಈ ಭಾಗದ ಲೇಖಕರು ರಚಿಸಿರುವ ಹಲವಾರು ಪುಸ್ತಕಗಳು ಸಹ ಬಿಡುಗಡೆಗೊಳಿಸಲಾಗುವುದು ಎಂದರು.
ಮಳಖೇಡನಲ್ಲಿ ರಾಷ್ಟ್ರಕೂಟರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಪ್ರಾರಂಭಿಸಲಾಗುವುದು. ರಾಷ್ಟ್ರಕೂಟರು ತಮ್ಮ ಆಡಳಿತಾವಧಿಯಲ್ಲಿ ಈ ಭಾಗಕ್ಕೆ ನೀಡಿದ ಸಾಹಿತ್ಯ, ಸಂಸ್ಕøತಿ, ಕಲೆ ಹಾಗೂ ವಿವಿಧ ರಂಗಗಳಲ್ಲಿ ಕೈಗೊಂಡ ಆಡಳಿತ ಸುಧಾರಣೆಗಳ ಕುರಿತು ತಿಳಿ ಹೇಳುವುದೇ ರಾಷ್ಟ್ರಕೂಟ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಎರಡು ದಿನಗಳ ಕಾಲ ನಡೆಯುವ ರಾಷ್ಟ್ರಕೂಟ ಉತ್ಸವಕ್ಕೆ ಸರ್ಕಾರವು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ 30 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಇನ್ನೂ 30 ಲಕ್ಷ ರೂ.ಗಳು ಹೆಚ್.ಕೆ.ಆರ್.ಡಿ.ಬಿ.ಯಿಂದ ನೀಡಲು ಕೋರಲಾಗಿದೆ ಎಂದರು.
ಮಳಖೇಡದಲ್ಲಿ ರಾಷ್ಟ್ರಕೂಟ ಮಹಾದ್ವಾರ ನಿರ್ಮಿಸಲು ನಿರ್ಣಯಿಸಲಾಗಿದ್ದು, ಸಧ್ಯ ಇರುವ ಮಳಖೇಡ ರಸ್ತೆಯು ಸಂಪೂರ್ಣ ಅಭಿವೃದ್ಧಿ ಹೊಂದಿದ ನಂತರ ಮಹಾದ್ವಾರ ನಿರ್ಮಿಸಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಮಳಖೇಡ ಕೋಟೆ ಸುಧಾರಣೆ ಕಾಮಗಾರಿಗೆ ಮಂಜೂರಾತಿ ದೊರೆತು ಈಗಾಗಲೇ ಒಂದು ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಾಹಿತಿಗಳು, ಕಲಾವಿದರು ಪಾಲ್ಗೊಂಡಿದ್ದರು.
ಮರಣ ಹೊಂದಿದ ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರು
*********************************************************
ತೆಗೆದು ಹಾಕುವ ಪ್ರಕ್ರಿಯೆ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಕೆಗೆ ಸೂಚನೆ
*****************************************************
ಕಲಬುರಗಿ.ಫೆ.24(ಕ.ವಾ)-ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 44-ಗುಲಬರ್ಗಾ ದಕ್ಷಿಣ ಹಾಗೂ 45-ಗುಲಬರ್ಗಾ ಉತ್ತರ ವಿಧಾನಸಭಾ ಮತಕ್ಷೇತ್ರಗಳಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳನ್ನು ದಿನಾಂಕ: 01-01-2018ಕ್ಕೆ ಅನುಗುಣವಾಗಿ ಪರಿಷ್ಕರಣೆ ಮಾಡಲಾಗಿದೆ. ಈ ಪರಿಷ್ಕರಣೆ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಮರಣ ಹೊಂದಿದ, ಸ್ಥಳಾಂತರಗೊಂಡ ಹಾಗೂ ಎರಡೆರಡು ಹೆಸರುಗಳುಳ್ಳ ಮತದಾರರ ಹೆಸರುಗಳನ್ನು ನೀಡಿರುತ್ತಾರೆ. ಆಯೋಗದ ನಿಯಮಗಳಂತೆ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1950ರ ಕಲಂ 22 ಹಾಗೂ ಮತದಾರರ ನೋಂದಣಿ ನಿಯಮ 1960ರ ನಿಯಮ 21ಎ ಅಡಿಯಲ್ಲಿ ಈ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ ತಿಳಿಸಿದಾರೆ.
ಮರಣ ಹೊಂದಿದ, ಸ್ಥಳಾಂತರಗೊಂಡ ಹಾಗೂ ಎರಡೆರಡು ಹೆಸರುಗಳುಳ್ಳ ಮತದಾರರ ಹೆಸರುಗಳನ್ನು ಮಹಾನಗರ ಪಾಲಿಕೆಯ ನೋಟಿಸ್ ಬೋರ್ಡ್‍ನಲ್ಲಿ ಅಳವಡಿಸಲಾಗಿದ್ದು, ಈ ಕುರಿತು ಎಲ್ಲ ಮತದಾರರಿಗೆ ನೋಟಿಸ್‍ಗಳನ್ನು ಮತಗಟ್ಟೆ ಅಧಿಕಾರಿಗಳ ಮೂಲಕ ನೀಡಿ ಪಂಚನಾಮ ಮಾಡಲಾಗಿದೆ. ಈ ಎಲ್ಲ ಮತದಾರರು ನೋಟೀಸು ಮುಟ್ಟಿದ 7 ದಿನದೊಳಗಾಗಿ ತಮ್ಮ ಆಕ್ಷೇಪಣೆಗಳು ಇದ್ದಲ್ಲಿ ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿ ಇವರಿಗೆ ಸಲ್ಲಿಸಬೇಕು. ಈ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಆಕ್ಷೇಪಣೆಗಳು ಬಾರದೇ ಇದ್ದಲ್ಲಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಲಾಗುವುದು. 44-ಗುಲಬರ್ಗಾ ದಕ್ಷಿಣ ಮತ್ತು 45-ಗುಲಬರ್ಗಾ ಉತ್ತರ ವಿಧಾನಸಭಾ ಮತಕ್ಷೇತ್ರಗಳ ಮತದಾರರು ಇದನ್ನು ಗಮನಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 3ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು
***************************************************
ಕಲಬುರಗಿ,ಫೆ.24.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿ 2018ರ ಮಾರ್ಚ್ 3ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆಗಳನ್ನು ನಡೆಸಲಾಗುವುದು ಎಂದು ಹೆÀಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ತಿಳಿಸಿದ್ದಾರೆ. ತಾಲೂಕುವಾರು ನಡೆಯುವ ಜನಸ್ಪಂದನಗಳ ಹೋಬಳಿ, ಗ್ರಾಮ ಮತ್ತು ಸಭೆ ಸ್ಥಳಗಳ ವಿವರ ಇಂತಿದೆ.
ಕಲಬುರಗಿ-ಮಹಾಗಾಂವ ಹೋಬಳಿಯ ಬಬಲಾದ(ಎ.ಕೆ.) ಗ್ರಾಮ ಪಂಚಾಯಿತಿ ಕಾರ್ಯಾಲಯ. ಆಳಂದ-ನಿಂಬರ್ಗಾ ಹೋಬಳಿಯ ಗೋಳಾ(ಬಿ) ಗ್ರಾಮ ಪಂಚಾಯಿತಿ ಕಾರ್ಯಾಲಯ. ಅಫಜಲಪುರ-ಕರಜಗಿ ಹೋಬಳಿಯ ಮಾಶ್ಯಾಳ ಗ್ರಾಮ ಪಂಚಾಯಿತಿ ಕಾರ್ಯಾಲಯ. ಜೇವರ್ಗಿ-ನೆಲೋಗಿ ಹೋಬಳಿಯ ಹುಲ್ಲೂರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಸೇಡಂ-ಆಡಕಿ ಹೋಬಳಿಯ ಲಿಂಗಂಪಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿತ್ತಾಪುರ-ಚಿತ್ತಾಪುರ ಹೋಬಳಿಯ ಸಾತನೂರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿಂಚೋಳಿ-ಐನಾಪುರ ಹೋಬಳಿಯ ಪಂಗರಗಾ ಸರ್ಕಾರಿ ಶಾಲಾ ಆವರಣ.
ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ನಾಮ ನಿರ್ದೇಶನ ಅರ್ಜಿ ಆಹ್ವಾನ
****************************************************
ಕಲಬುರಗಿ,ಫೆ.24.(ಕ.ವಾ.)-ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ 2017-18ನೇ ಸಾಲಿನ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಕಲಬುರಗಿ ಜಿಲ್ಲೆಯ 07 ತಾಲೂಕಿನ ಅರ್ಹ ರೈತ ಬಾಂಧವರಿಂದ ನಾಮ ನಿರ್ದೇಶನ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್.ಮೊಕಾಶಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರಗತಿಪರ ರೈತರ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲು ಸರ್ಕಾರ ತೀರ್ಮಾನಿಸಿದೆ. ಕೃಷಿ ವಲಯದಲ್ಲಿ ತಮ್ಮದೇ ಆದ ಅಮೂಲ್ಯ ಅನ್ವೇಷಣೆ/ವಿಶಿಷ್ಟ ಸಾಧನೆ ಮೂಲಕ ರೈತರ ಸಮುದಾಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಪರಿಣಿತ ಕೃಷಿಕ ರೈತ ಮಹನೀಯರನ್ನು ಗುರುತಿಸಿ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನಗದು ಬಹುಮಾನದೊಂದಿಗೆ ನೀಡಿ ಗೌರವಿಸಲಾಗುವುದು.
ಕೃಷಿ ಕ್ಷೇತ್ರದಲ್ಲಿ ಗಮನಾರ್ಹ/ವಿಶಿಷ್ಟ ಸಾಧನೆಯನ್ನು ಮಾಡಿರಬೇಕು. ಅವರ ಸಂಶೋಧನೆಗಳು/ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟು ಕೃಷಿ ಕ್ಷೇತ್ರದ ಏಳಿಗೆಗೆ ಪೂರಕವಾಗಿರಬೇಕು. ಅಭ್ಯರ್ಥಿಗಳು ಮಾಡಿರುವ ಸಾಧನೆಯ ಮೂಲ ಸ್ವರೂಪವಾಗಿದ್ದು ಬೇರೆಯವರು ಮಾಡಿರುವ ಸಾಧನೆಗಿಂತ ಭಿನ್ನವಾಗಿರಬೇಕು. ರಾಜ್ಯ/ಕೇಂದ್ರ ಸರಕಾರಗಳ ವಿವಿಧ ಇಲಾಖೆ ಮತ್ತು ಅಂಗ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ /ನಿರ್ವಹಿಸುತ್ತಿರುವ ಅಭ್ಯರ್ಥಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
ನಾಮ ನಿರ್ದೇಶನಗಳ ಅರ್ಜಿಯ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳ ಕಚೇರಿಯಲ್ಲಿ ಪಡೆಯಬೇಕು. ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಸಂಬಂಧಪಟ್ಟ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಥವಾ ತಾಲೂಕು ತಾಂತ್ರಿಕ ಅಧಿಕಾರಿಗಳಿಗೆ ಮಾರ್ಚ್ 5ರ ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಶಸ್ತಿಗೆ ಕುರಿತು ಹೆಚ್ಚಿನ ಮಾಹಿತಿಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮತ್ತು ತಾಲೂಕಾ ತಾಂತ್ರಿಕ ಅಧಿಕಾರಿಗಳಿಂದ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತತ್ವಪದ ಹಾಗೂ ಏಕತಾರಿ ಪದಗಳ ಕಲಿಕಾ ತರಬೇತಿ ಶಿಬಿರ: ಅರ್ಜಿ ಆಹ್ವಾನ
*******************************************************************
ಕಲಬುರಗಿ,ಫೆ.24.(ಕ.ವಾ.)-ಕರ್ನಾಟಕ ಜಾನಪದ ಅಕಾಡೆಮಿಯಿಂದ 2017-18ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮೂಲ ಗುರುಗಳಿಂದ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಜಾನಪದ ಗಾಯನ, ತತ್ವಪದ ಮತ್ತು ಏಕತಾರಿ ಪದಗಳ ಕಲಿಕಾ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಅರ್ಜಿಗಳನ್ನು ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು, ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯಾಲಯ ಅಥವಾ ಅಕಾಡೆಮಿಯ ತಿತಿತಿ.ಞಚಿಡಿಟಿಚಿಣಚಿಞಚಿರಿಚಿಟಿಚಿಠಿಚಿಜಚಿ.iಟಿ ವೆಬ್‍ಸೈಟ್‍ದಿಂದ ಅರ್ಜಿಗಳನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 5 ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ 080-22215509ನ್ನು ಸಂಪರ್ಕಿಸಲು ಕೋರಲಾಗಿದೆ.
ಮರಗಳ ಕಟಾವು: ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
*************************************************
ಕಲಬುರಗಿ,ಫೆ.24.(ಕ.ವಾ.)-ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹ ಅವರಣದಲ್ಲಿ ಡಾರಮೇಟರಿ ಕಟ್ಟಡ ನಿರ್ಮಾಣಕ್ಕಾಗಿ ಸದರಿ ನಿವೇಶನದಲ್ಲಿ 113 ಮರಗಳನ್ನು ಕಡಾವು ಮಾಡುವುದು ಅವಶ್ಯಕತೆಯಿದ್ದು, ಮರಗಳ ಕಟಾವಿಗಾಗಿ ಕಲಬುರಗಿ ವಿಭಾಗದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಅನುಮತಿ ಕೋರಿರುತ್ತಾರೆ.
ಮರಗಳ ಕಟಾವಿಗೆ ಸಂಬಂಧಿಸಿದಂತೆ ಈ ಪ್ರಕಟಣೆ ಪ್ರಕಟಗೊಂಡ 7 ದಿನಗೊಳಗಾಗಿ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆ ಹಾಗೂ ತಕರಾರುಗಳಿದ್ದಲ್ಲಿ ಲಿಖಿತವಾಗಿ ಮರಗಳ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾದೇಶಿಕ ಅರಣ್ಯ ವಿಭಾಗ, ಎಸ್.ಬಿ.ಟೆಂಪಲ್ ರೋಡ ಅರಣ್ಯ ಭವನ ಕಲಬುರಗಿ ಇವರಿಗೆ ಸಲ್ಲಿಸಬೇಕೆಂದು ಕಲಬುರಗಿ ವಿಭಾಗದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ತರನುಮ್ ಜಬೀನ್ ಅವರಿಗೆ ಪಿಹೆಚ್.ಡಿ.
***********************************
ಕಲಬುರಗಿ,ಫೆ.24.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ರಾಜ್ಯಶಾಸ್ತ್ರ ವಿಷಯದಲ್ಲಿ ತರನುಮ್ ಜಬೀನ ನಬಿ ಪಟೇಲ್ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಚಂದ್ರಕಾಂತ ಯಾತನೂರ ಅವರ ಮಾರ್ಗದರ್ಶನದಲ್ಲಿ “ಪಾಲಿಟಿಕಲ್ ಲಿಡರ್‍ಶಿಫ್ ಆಫ್ ಮೈನಾರಿಟಿಸ್ ಇನ್ ಕರ್ನಾಟಕ ವಿತ್ ಸ್ಪೇಶಿಯಲ್ ರೆಫಿರೆನ್ಸ್ ಟು ಹೈದ್ರಾಬಾದ್ ಕರ್ನಾಟಕ ರಿಜನ್: ಎ ಸ್ಟಡಿ” (Poಟiಣiಛಿಚಿಟ ಐeಚಿಜeಡಿshiಠಿ oಜಿ ಒiಟಿoಡಿiಣies iಟಿ ಏಚಿಡಿಟಿಚಿಣಚಿಞಚಿ ತಿiಣh Sಠಿeಛಿiಚಿಟ ಖeಜಿeಡಿeಟಿಛಿe ಣo ಊಥಿಜಡಿಚಿbಚಿಜ ಏಚಿಡಿಟಿಚಿಣಚಿಞಚಿ ಖegioಟಿ: ಂ Sಣuಜಥಿ) ಕುರಿತು ತರನುಮ್ ಜಬೀನ ಪ್ರಬಂಧವನ್ನು ಮಂಡಿಸಿದ್ದರು.
ರವಿ ಎಂ. ಅವರಿಗೆ ಪಿಹೆಚ್.ಡಿ.
****************************
ಕಲಬುರಗಿ,ಫೆ.24.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಮೈಕ್ರೋ ಬಯಾಲಜಿ ವಿಷಯದಲ್ಲಿ ರವಿ ಎಂ. ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥ ವಾಯ್.ಎಂ. ಜಯರಾಜ್ ಅವರ ಮಾರ್ಗದರ್ಶನದಲ್ಲಿ “ಸ್ಟಡೀಸ್ ಆನ್ ಥೇರಾಫ್ಯೂಟಿಕಲಿ ಆಂಡ್ ಇಂಡಸ್ಟ್ರಿಯಲ್ ಎಂಜೈಮ್ಸ್ ಫ್ರಮ್ ಮೈಕ್ರೋಆರ್ಗನಿಸಮ್ ” (Sಣuಜies oಟಿ ಖಿheಡಿಚಿಠಿeuಣiಛಿಚಿಟಟಥಿ ಚಿಟಿಜ Iಟಿಜusಣಡಿiಚಿಟ ಇಟಿzಥಿmes ಈಡಿom ಒiಛಿಡಿooಡಿgಚಿಟಿism) ಕುರಿತು ರವಿ ಎಂ. ಪ್ರಬಂಧವನ್ನು ಮಂಡಿಸಿದ್ದರು.
ವಿವಿಧ ಯೋಜನೆಗಳಡಿ 1020 ಫಲಾನುಭವಿಗಳಿಗೆ 398.07 ಲಕ್ಷ ರೂ.ಮಂಜೂರು
***********************************************************************
ಕಲಬುರಗಿ,ಫೆ.24.(ಕ.ವಾ.)-ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2017-18 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಂಬಂಧ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚೀಟಿ ಎತ್ತುವ ಮೂಲಕ ಜಿಲ್ಲೆಯ 1020 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಒಟ್ಟಾರೆ 398.07 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಆಯ್ಕೆಯಾದ ಫಲಾನುಭವಿಗಳಲ್ಲ್ಲಿ 606 ಮಹಿಳೆಯರು, 403 ಪುರುಷರು ಹಾಗೂ 11 ಜನ ವಿಕಲಚೇತನ ಸೇರಿದ್ದಾರೆ.
ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಡಿ 274 (ಪುರುಷ ಮತ್ತು ಮಹಿಳಾ) ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 72.90 ಲಕ್ಷ ರೂ. ಈ ಯೋಜನೆಯಡಿ ಖರ್ಚು ಮಾಡಲಾಗುತ್ತಿದೆ. ಟೂರಿಸ್ಟ್ ಟ್ಯಾಕ್ಸಿ/ಸರಕು ಸಾಗಾಣಿಕೆ ವಾಹನ ಖರೀದಿ ಸಹಾಯಧನ ಯೋಜನೆಯಡಿ 108 ಲಕ್ಷ ರೂ.ಗಳ ಸಹಾಯಧನ ನೀಡಲು ಒಟ್ಟು 36 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಗೊಲ್ಲ ಹಾಗೂ ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ಟೂರಿಸ್ಟ್ ಟ್ಯಾಕ್ಸಿ/ ಸರಕು ಸಾಗಾಣಿಕೆ ವಾಹನ ಖರೀದಿಸಲು ಸಹಾಯಧನ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ 3 ಲಕ್ಷ ರೂ.ಗಳಂತೆ 2 ಫಲಾನುಭವಿಗಳಿಗೆ ವಾಹನ ಖರೀದಿಗಾಗಿ ಒಟ್ಟು 6 ಲಕ್ಷ ರೂ.ಗಳನ್ನು ಸಹಾಯಧನ ನೀಡಲಾಗುವುದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅವಧಿ ಸಾಲ ಯೋಜನೆಯಡಿ ಜಿಲ್ಲೆಯ 228 ಫಲಾನುಭವಿಗಳಿಗೆ 66.09 ಲಕ್ಷ ರೂ.ಗಳ ಸಾಲ ಮಂಜೂರು ಮಾಡಲು ನಿರ್ಣಯಿಸಲಾಯಿತು. ಈ ಪೈಕಿ 112 ಮಹಿಳೆಯರು, 106 ಪುರುಷರು ಹಾಗೂ 10 ಜನ ವಿಕಲಚೇತನರು ಇದರ ಪ್ರಯೋಜನ ಪಡೆಯಲಿದ್ದಾರೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ “ಮಹಿಳಾ ಸಮೃದ್ಧಿ” ಯೋಜನೆಯಡಿ ಜಿಲ್ಲೆಯ ಆಯಾ ವಿಧಾನಸಭಾ ಕ್ಷೇತ್ರಗಳಿಗೆ ನಿಗದಿಪಡಿಸಿದ ಆರ್ಥಿಕ ಗುರಿಯಂತೆ ಒಟ್ಟು 20 ಗುಂಪುಗಳ 304 ಮಹಿಳೆಯರಿಗೆ 70ಲಕ್ಷ ರೂ.ಗಳನ್ನು ಮಂಜೂರು ಮಾಡಲು ಸಭೆ ನಿರ್ಧರಿಸಿತು. ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಜಿಲ್ಲೆಯ ಒಟ್ಟು 55 ಭೌತಿಕ ಗುರಿ ನಿಗದಿಪಡಿಸಿದ್ದು, 2017-18ನೇ ಸಾಲಿಗೆ 10 ಜನ ಪುರುಷರು, 10 ಮಹಿಳೆಯರು ಸೇರಿದಂತೆ 20 ಜನರಿಗೆ ಒಟ್ಟು 51,93,168 ರೂ.ಗಳನ್ನು ಮಂಜೂರು ಮಾಡಲು ಸಭೆ ಒಮ್ಮತ ವ್ಯಕ್ತಪಡಿಸಿತು.
ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ವಿವಿಧ ಯೋಜನೆಗಳಡಿ ಒಟ್ಟು 98 (43 ಮಹಿಳೆಯರು, 54 ಪುರುಷರು, 01 ವಿಕಲಚೇತನ) ಫಲಾನುಭವಿಗಳನ್ನು ಆಯ್ಕೆ ಮಾಡಿ 52.53 ಲಕ್ಷ ರೂ. ಗಳನ್ನು ಖರ್ಚು ಮಾಡಲು ಸಭೆ ನಿರ್ಧರಿಸಿತು.
No comments:

Post a Comment