GULBARGA VARTHE

GULBARGA VARTHE

Tuesday, 20 February 2018

news and photo date: 20--2--2018

ತ್ರಿಪದಿ ಕವಿ ಸರ್ವಜ್ಞ ನಿಗಮ ಸ್ಥಾಪಿಸಲು ಸರ್ಕಾರಕ್ಕೆ ಮನವಿ
***************************************************
ಕಲಬುರಗಿ,ಫೆ.20.(ಕ.ವಾ.)-ಶತಮಾನಗಳ ಹಿಂದೆ ತ್ರಿಪದಿಗಳನ್ನು ರಚಿಸಿ ತ್ರಿಪದಿಯ ಬ್ರಹ್ಮನೆಂದು ಪ್ರಸಿದ್ದಿಯಾಗಿ ವಿಶ್ವಕ್ಕೆ ಮಾದರಿಯಾಗಿರುವ ಮಹಾ ಮಾನವತಾವಾದಿ ಕನ್ನಡ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ನಿಗಮವನ್ನು ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಎಮ್ ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹಾ ಮನವತಾವಾದಿ ಕನ್ನಡ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಮನುಷ್ಯನಾಗಿರುವ ಭಕ್ತ ಕುಂಬಾರ ಭಕ್ತಿಯಿಂದ ಭಗವಂತನ್ನು ಪಡೆದುಕೊಂಡ. ಕಾಯಕವೇ ಕೈಲಾಸ ಎಂದುಕೊಂಡ ಕುಂಬಾರ ಸಮಾಜದ ದಿನೇ ದಿನೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.
ಡಾ.ಬಿ.ಆರ್ ಅಂಬೇಡ್ಕರ್, ನಿಜ ಶರಣ ಅಂಬಿಗರ ಚೌಡಯ್ಯ, ಕನಕದಾಸ ಇಂತಹ ಹಲವು ಮಹ್ಮಾತರ ಜಯಂತಿಗಳು ಯಾವ ರೀತಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದೊ ಅದೇ ರೀತಿ ಮಹಾ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿಯು ಆಚರಣೆಯಾಗಬೇಕು ಎಂದು ನಿವೃತ್ತ ಗ್ರಂಥಪಾಲಕ ಹಾಗೂ ಸಾಹಿತಿ ಬನ್ನಪ್ಪ ಬಿ.ಕೆ ಸರ್ವಜ್ಞ ಕುರಿತು ತಮ್ಮ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಹಲವು ಮಹಾತ್ಮರ ಜಯಂತಿ ಆಚರಣೆ ಮಾಡುವುದರ ಉದ್ದೇಶ ಆ ಮಹಾತ್ಮರ ಗುಣಗಳನ್ನು ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನುಗ್ಗಲಿ ಎನ್ನುವುದೇ ಆಗಿದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಾಧನೆಗೆ ಮಾಡಲು ಗಟ್ಟಿ ಮನಸ್ಸು ಅವಶ್ಯಕ. ಕುಂಬಾರ ಸಮಾಜದ ಜನರಲ್ಲಿ ಒಗಟ್ಟಿನ ಕೊರತೆಯಿದೆ ಎಂದರು.
ಆಡು ಮುಟ್ಟದ ಗಿಡವಿಲ್ಲ ಕವಿ ಸರ್ವಜ್ಞ ಬರೆಯದ ವಿಷಯವಿಲ್ಲಾ ಎನ್ನುವಂತೆ ಶತಮಾನಗಳ ಹಿಂದೆ ಕವಿ ಸರ್ವಜ್ಞ ಹಲವಾರು ವಿಷಯಗಳ ಕುರಿತು ವಚನಗಳನ್ನು ರಚಿಸಿದರು. ಸದ್ಯ ಅವರು ಬರೆದ 2 ಸಾವಿರ ವಚನಗಳು ಲಭ್ಯ ಇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಯಕ ಜೀವಿಗಳಿಗೆ ಸನ್ಮಾನ ಮಾಡಲಾಯಿತು. ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಶಿವಶರಣಪ್ಪ ಕುಂಬಾರ, ಜಿಲ್ಲಾ ಕುಂಬಾರ ಸಂಘದ ಮಹಿಳಾ ಘಟಕ ಅಧ್ಯಕ್ಷೆ ರೇಖಾ ನಂದಕುಮಾರ ಕುಂಬಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವಿವಿಧ ಕಲಾ ತಂಡಗಳ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಸುಪರ್ ಮಾರ್ಕೇಟ್ ಜನತಾ ಬಜಾರದಿಂದ ಜಗತ್ ವೃತ್ತದ ಮೂಲಕ ಡಾ.ಎಸ್.ಎಂ ಪಂಡಿತ ರಂಗಮಂದಿರವರೆಗೆ ಜರುಗಿತು.

ಯುವ ಜನಾಂಗಕ್ಕೆ ಮಾನವ ಹಕ್ಕುಗಳ ತಿಳುವಳಿಕೆ ನೀಡುವುದು ಅವಶ್ಯ
**************************************************************
ಕಲಬುರಗಿ,ಫೆ.20(ಕ.ವಾ.)-ಬೆಳೆಯುತ್ತಿರುವ ಮುಂದಿನ ಯುವ ಜನಾಂಗಕ್ಕೆ ಮಾನವ ಹಕ್ಕಗಳ ಬಗ್ಗೆ ಜಾಗೃತಿ ಮೂಡಿಸುವುದು ಪ್ರಸ್ತುತ ಸಂದರ್ಭದಲ್ಲಿ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರಳಿ ನಾಗರಾಜ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಕರ್ನಾಟಕ ರಾಜ್ಯ ಮಾನವ ಹಕ್ಕಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಮಗ್ರ ಮಾನವ ಹಕ್ಕುಗಳ ಸಂರಕ್ಷಣಾ ಸಂಘ(ರಿ) ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಜೇವರ್ಗಿ ರಸ್ತೆಯ ಅಯ್ಯಪ್ಪ ಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಮಾನವ ಹಕ್ಕುಗಳ ಸಂರಕ್ಷಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳ ನಡುವೆ ನಮಗೆ ಬೇಕಾಗಿರುವ ಗುಣಮಟ್ಟದ ನೀರು, ಆಹಾರ, ಉತ್ತಮವಾದ ಪರಿಸರ ಹಾಗೂ ಮೌಲ್ಯಯುತವಾದ ಶಿಕ್ಷಣ ಪಡೆದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದಿನ ದಿನಗಳಲ್ಲಿ ಎಲ್ಲ ಅಪರಾಧಗಳಿಗೆ ಶೈಕ್ಷಣಿಕ ಗುಣಮಟ್ಟವೇ ಕಾರಣ. ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಿದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಸುಗಮವಾಗಿ ಪಡೆಯಲು ಸಹಾಯಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ಹಾಗು ಅರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಪ್ರಯತ್ನ ಮಾಡಬೇಕು ಹಾಗೂ ಶಿಕ್ಷಣವೂ ಒಂದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವುದರಿಂದ ಇದಕ್ಕೆ ಹೆಚ್ಚು ಪ್ರಾತಿನಿದ್ಯ ನೀಡಬೇಕೆಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಮಾತನಾಡಿ, ಮಾನವ ಹಕ್ಕುಗಳು ಒಬ್ಬ ಮನುಷ್ಯನನ್ನು ನೈಸರ್ಗಿಕವಾಗಿ ಬೇರೊಬ್ಬರಿಗೆ ಹಾನಿ ಉಂಟು ಮಾಡದೆ ತನಗೆ ಬೇಕಾದ ಜೀವನವನ್ನು ಸಾಗಿಸಬಹುದಾಗಿದೆ. ಅಂತಹ ಒಂದು ಸಮಾಜವನ್ನು ನಿರ್ಮಾಣ ಮಾಡಲು ನಾವೆಲ್ಲರೂ ನಮ್ಮ ಇತಿ ಮಿತಿಗಳನ್ನು ಅರಿತು ಕೆಲಸ ಕಾರ್ಯಗಳನ್ನು ಮಾಡಿದಾಗ ಮಾತ್ರ ಅದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎನ್.ಶಿವಕುಮಾರ ಮಾತನಾಡಿ, ಮಾನವ ಹಕ್ಕುಗಳು ಸಮಾಜದ ಒಬ್ಬ ಕಟ್ಟಕಡೆಯ ವ್ಯಕ್ತಿ ತನಗೆ ಬೇಕಾದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಹಕ್ಕಗಳನ್ನು ಪಡೆದು ಉತ್ತಮ ಸಾಂಸ್ಕೃತಿಕ ನೆಲೆಗಟ್ಟನ್ನು ಕಂಡುಕೊಳ್ಳಲು ಪ್ರಯತ್ನಿಸುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪಡೆದ ಶ್ರೀ ದೇವಿ ಮುತ್ಯಾ ಶಕ್ತಿ ಪೀಠ, ಶ್ರೀನಿವಾಸ ಸರಡಗಿ ಇವರನ್ನು ಹಾಗೂ ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.
ನ್ಯಾಯವಾದಿಗಳು ಹಾಗೂ ಶಿಕ್ಷಣ ಇಲಾಖೆ ಕಾನೂನು ಸಲಹೆಗಾರ ಸುನಿತಾ ಆರ್. ಪೋಲೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡಮನಿ ಇವರು ಮಾನವ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಾ.ಶಿ.ಬೆನಕಹಳ್ಳಿ ಸ್ವಾಗತಿಸಿದರು, ಆರ್. ಎಂ. ಯಾಳಗಿ ಕಾರ್ಯಕ್ರಮ ನಿರೂಪಿಸಿದರು, ಈರನಗೌಡ ಪೋಲೀಸ್ ಪಾಟೀಲ್ ವಂದಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತಿಯಲ್ಲಿದ್ದರು.

ಫೆಬ್ರವರಿ 21ರಿಂದ ರಸ್ತೆ ಸಂಚಾರಿ ಮಾದರಿ ಸಮೀಕ್ಷೆ
********************************************
ಕಲಬುರಗಿ,ಫೆ.20.(ಕ.ವಾ.)-ಲೋಕೋಪಯೋಗಿ ಇಲಾಖೆಯಿಂದ 2018ನೇ ಸಾಲಿಗೆ ಫೆಬ್ರವರಿ 21ರ ಬೆಳಿಗ್ಗೆÀ 6 ಗಂಟೆಯಿಂದ ಫೆಬ್ರವರಿ 23ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಮಾದರಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಕಲಬುರಗಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಗಣತಿಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆ ಸಂಚಾರದ ಸಾಂದ್ರತೆ, ತೀವ್ರತೆ ಕಂಡು ಹಿಡಿಯಲು ಹಾಗೂ ರಸ್ತೆಗಳ ಅಗಲಳತೆ ನಿರ್ಧರಿಸಲು, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗಲಿದೆ. ಇದಕ್ಕಾಗಿ ರಸ್ತೆಗಳ ಮೇಲೆ ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಗಣತಿ ಕೇಂದ್ರಗಳಿದ್ದಲ್ಲಿ “ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ. ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ” ಎಂದು ಸೂಚನಾ ಫಲಕಗಳನ್ನು ತೂಗು ಬಿಟ್ಟಿರುತ್ತಾರೆ. ಇಂತಹ ಸ್ಥಳಗಳಲ್ಲಿ ಎಲ್ಲ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಬೇಕೆಂದು ಅವರು ಕೋರಿದ್ದಾರೆ.
ಕರ್ನಾಟಕ ಸಂಘಟನೆಯ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ
ಕಲಬುರಗಿ,ಫೆ.20.(ಕ.ವಾ.)-ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದ ಬಳಿ ಅನ್ನಭಾಗ್ಯ ಯೋಜನೆಯ ಅಕ್ಕಿ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುತ್ತಿರುವ ಬಗ್ಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿ ಆಳಂದ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು 2017ರ ಡಿಸೆಂಬರ್ 30ರಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತಹಶೀಲ್ದಾರರು ಹಾಗೂ ಆಹಾರ ಸಿಬ್ಬಂದಿ ಸ್ಥಳ ತನಿಖೆ ನಡೆಸಿ ಪರಿಶೀಲನೆ ಮಾಡಲಾಗಿ, ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಮೇಲ್ನೋಟಕ್ಕೆ ತಪ್ಪು ಎಂದು ಕಂಡು ಬಂದ ಪ್ರಯುಕ್ತ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪ್ರಕರಣ ತನಿಖೆಗೆ ಒಳಪಡಿಸಲಾಗಿದೆ ಎಂದು ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ವಸತಿ ನಿಲಯದ ಬಾಡಿಗೆಗಾಗಿ ಅರ್ಜಿ ಆಹ್ವಾನ
****************************************
ಕಲಬುರಗಿ,ಫೆ.20.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಜೇವರ್ಗಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಬಾಡಿಗೆ ಕಟ್ಟಡಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜೇವರ್ಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟಡದ ಬಾಡಿಗೆಯನ್ನು ಲೋಕೋಪಯೋಗಿ ಇಲಾಖೆಯಿಂದ ಅಥವಾ ಇಲಾಖೆಯ ನಿಯಮದಂತೆ ನಿಗದಿಪಡಿಸಿದ ದರದಂತೆ ನೀಡಲಾಗುತ್ತದೆ. ಈ ಬಾಲಕರ ವಸತಿ ನಿಲಯವು 125 ಸಂಖ್ಯಾಬಲ ಹೊಂದಿರುತ್ತದೆ. ಆಸಕ್ತ ಕಟ್ಟಡಗಳ ಮಾಲೀಕರು ನೇರವಾಗಿ ಜೇವರ್ಗಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಸ್ತರಣಾಧಿಕಾರಿಗಳ ಮೊಬೈಲ್ ಸಂಖ್ಯೆ 9741171001 ಹಾಗೂ ನಿಲಯ ಪಾಲಕರ ಮೊಬೈಲ್ ಸಂಖ್ಯೆ 9886891633ನ್ನು ಸಂಪರ್ಕಿಸಲು ಕೋರಿದೆ.

No comments:

Post a Comment