GULBARGA VARTHE

GULBARGA VARTHE

Sunday, 11 February 2018

NEWS AND PHOTO DATE: 11--2--2018

ಒಂದು ವಾರದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸಮಗ್ರ ತಿದ್ದುಪಡಿ
      ಕಲಬುರಗಿ,ಫೆ.11.(ಕ.ವಾ)-ರಾಜ್ಯದಲ್ಲಿರುವ ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡಿಸಿ ಕೆರೆ ಅಭಿವೃದ್ಧಿಗೊಳಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒಂದು ವಾರದಲ್ಲಿ ಸಮಗ್ರ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಅವರು ರವಿವಾರ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದು ಐತಿಹಾಸಿಕ ಮತ್ತು ದಿಟ್ಟ ನಿರ್ಧಾರವಾಗಿದೆ. ಕೆರೆಗಳ ಜಿರ್ಣೋದ್ಧಾರ, ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಉಳಿಸಬೇಕಾಗಿದೆ. ಇದಕ್ಕಾಗಿ  ಕೆರೆ ಅಭಿವೃದ್ಧಿಗಾಗಿ ಸಲಹಾ ಸಮಿತಿಗಳನ್ನು ರಚಿಸಲಾಗುವುದು.  ಕೆರೆ ಅಭಿವೃದ್ಧಿ ಸಂಘಗಳಿಗೆ ಕೆರೆ ಹೂಳೆತ್ತುವ ಜವಾಬ್ದಾರಿ ವಹಿಸಲಾಗುವುದು. ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೊಳಪಡುವ 1251 ಕೆರೆಗಳ ಹೂಳು ತೆಗೆಯಲು 60 ಕೋಟಿ ರೂ.ಗಳನ್ನು ಈಗಾಗಲೇ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಈ ಹಿಂದೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟು 36,000 ಕೆರೆಗಳಿದ್ದವು. ಎಲ್ಲ ಗ್ರಾಮ ಪಂಚಾಯಿತಿಗಳಿಂದ ಕೆರೆಗಳ ವರದಿ ತರಿಸಿಕೊಂಡು ಕ್ರೂಢೀಕರಿಸಿದಾಗ ಕೇವಲ 29,000 ಕೆರೆಗಳು ಆಸ್ತಿತ್ವದಲ್ಲಿವೆ. ಇನ್ನೂಳಿದ 7000 ಕೆರೆಗಳ ಮಾಹಿತಿ ಲಭ್ಯವಾಗುತ್ತಿಲ್ಲ. ಕೆರೆ ಉಳಿದರೆ ಮಾತ್ರ ಮನುಷ್ಯನಿಗೆ ಉಳಿವಿದೆ. ರೈತರಿಗೆ  ಕೆರೆಗಳು ಮುಖ್ಯವಾಗಿದ್ದು, ಗ್ರಾಮಕ್ಕೆ ಒಂದು ಕೆರೆ ಇದ್ದಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕೇಂದ್ರ ಸರ್ಕಾರ ತೊಗರಿ ಖರೀದಿಗಾಗಿ 16.5 ಲಕ್ಷ ಕ್ವಿಂಟಲ್ ಗುರಿ ನಿಗದಿಪಡಿಸಿತ್ತು. ಅದರಂತೆ ಕೇಂದ್ರ ಸರ್ಕಾರ ನೀಡಿದ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುವ ಮೂಲಕ ಪ್ರತಿ ಕ್ವಿಂಟಲ್‍ಗೆ 6000 ರೂ.ಗಳ ದರದಲ್ಲಿ ತೊಗರಿ ಖರೀದಿಸಲಾಗಿದೆ. ಹೈದ್ರಾಬಾದ್ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ರೈತರು ಸುಮಾರು 90 ಲಕ್ಷ ಕ್ವಿಂಟಲ್ ತೊಗರಿ ಬೆಳೆದಿದ್ದು, ತೊಗರಿ ಮಾರಾಟಕ್ಕೆ 3.18 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದರು. ರಾಜ್ಯ ಸರ್ಕಾರವು ಹೆಚ್ಚಿನ ತೊಗರಿ ಖರೀದಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದಾಗ ಮತ್ತೆ 1 ಲಕ್ಷ ಕ್ವಿಂಟಲ್ ತೊಗರಿ ಖರೀದಿಗೆ ಪರವಾನಿಗೆ ನೀಡಿದ್ದು, ಫೆಬ್ರವರಿ 14ರಿಂದ ತೊಗರಿ ಖರೀದಿ ಪ್ರಾರಂಭಿಸಲಾಗುವುದು. ಇಷ್ಟಾದರೂ ಇನ್ನೂ ಹೆಚ್ಚಿನ ಪ್ರಮಾಣದ ತೊಗರಿ ರೈತರಲ್ಲಿ ಉಳಿದುಕೊಳ್ಳುವುದರಿಂದ ಮತ್ತೆ ಹೆಚ್ಚಿನ ತೊಗರಿ ಖರೀದಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಭಾಗದ ಸಂಸದರು ಸಹಿತ ಪ್ರಧಾನಮಂತ್ರಿಗಳ ಮೇಲೆ ಒತ್ತಡ ತಂದು ಈ ಭಾಗದ ಎಲ್ಲ ತೊಗರಿ ಖರೀದಿಗೆ ಸಹಕರಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾದನ ಹಿಪ್ಪರಗಾದ ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಕ್ಕಲಕೋಟ ಮತಕ್ಷೇತ್ರದ ಶಾಸಕ ಸಿದ್ದರಾಮ ಮೇತ್ರೆ, ಆಳಂದ ಮತಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ,  ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ವಿಠ್ಠಲರಾವ ಪಾಟೀಲ, ಸಿದ್ರಾಮಪ್ಪ ದಂಗಾಪುರ, ಭೀಮರಾವ ಪಾಟೀಲ, ರಮೇಶ ಲೋಹಾರ, ಬಸವಂತರಾವ ಪಾಟೀಲ ಧಂಗಾಪುರ, ಸಲಾಂ ಸಗರಿ, ಶರಣಬಸಪ್ಪ ಭೂಸನೂರ, ಸಣ್ಣ  ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಆರ್. ರುದ್ರಯ್ಯ, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ವಿಜಯಪುರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಲಯದ ಮುಖ್ಯ ಇಂಜಿನಿಯರ್ ಕೆ.ಹೆಚ್. ರಾಜು ಮತ್ತಿತರರು ಪಾಲ್ಗೊಂಡಿದ್ದರು.
ಆಳಂದ ಮತಕ್ಷೇತ್ರ: ಮರುಭೂಮಿಯಾಗದಂತೆ ತಪ್ಪಿಸಲು ಅಂತರ್ಜಲ ಅಭಿವೃದ್ಧಿ
    ಕಲಬುರಗಿ, ಫೆ.11.(ಕ.ವಾ)-ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ, ಇಂಗಿಸಿ ಹಾಗೂ ಮಿತವಾಗಿ ಬಳಸಿ ಉಳಿಸಿದ್ದಲ್ಲಿ ಮಾತ್ರ ಈ ಭಾಗವನ್ನು ಮರಳುಗಾಡು ಆಗುವುದನ್ನು ತಪ್ಪಿಸಬಹುದಾಗಿದೆ ಎಂದು  ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಅವರು ರವಿವಾರ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಆಳಂದ ಕ್ಷೇತ್ರವನ್ನು ಮರುಭೂಮಿಯನ್ನಾಗಿಸಲು ತಪ್ಪಿಸಲು ಸಣ್ಣ ನೀರಾವರಿ ಕಾರ್ಯದರ್ಶಿ ಮತ್ತು ಮುಖ್ಯ ಇಂಜಿನಿಯರರನ್ನು ಸಿರಪೂರ ಮಾದರಿ ಅಂತರ್ಜಲ ಅಭಿವೃದ್ಧಿ ಅಧ್ಯಯನಕ್ಕೆ ಕಳುಹಿಸಿ 20 ಕೋಟಿ ರೂ. ಮಂಜೂರು ಮಾಡಿ ಆಳಂದ ಕ್ಷೇತ್ರದಲ್ಲಿ ಅಂತರ್ಜಲ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಈ ಕಾಮಗಾರಿಯನ್ನು ಚುನಾವಣೆ ಘೋಷಣೆಯಾಗುವುದಕ್ಕಿಂತ ಮುಂಚೆ ಪ್ರಾರಂಭಿಸಿ ಮಳೆಗಾಲ ಪ್ರಾರಂಭ ಆಗುವುದರೊಳಗಾಗಿ ಪೂರ್ಣಗೊಳಿಸಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು.  ಈ ವರ್ಷವು ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದು, ಯಾವುದೇ ಜಲಾಶಯ ಭರ್ತಿಯಾಗಿಲ್ಲ. ಇದು ಎಚ್ಚರಿಕೆ ಘಂಟಿಯಾಗಿದೆ. ಒಕ್ಕಲುತನಕ್ಕೆ ಅವಲಂಭಿಸಿರುವ ಕುಟುಂಬಗಳು ತುಂಬಾ ಕಷ್ಟದಲ್ಲಿವೆ ಎಂದರು.
ಶಿರಾ ಮತಕ್ಷೇತ್ರದಲ್ಲಿ ಕೊಳವೆ ಬಾವಿ 1200 ಅಡಿ ಕೊರೆದರೂ ನೀರು ಸಿಗುತ್ತಿದ್ದಿಲ್ಲ. ಈ ಹಿಂದಿನ ಯುಪಿಎ ಸರ್ಕಾರ 200 ಕೋಟಿ ರೂ. ನೀಡಿದ್ದರಿಂದ ಶಿರಾ ಮತಕ್ಷೇತದ ಹಳ್ಳಕೊಳ್ಳಗಳಲ್ಲಿ ಸುಮಾರು 35-40 ಕಿ.ಮೀ. ನಷ್ಟು ನೀರು ನಿಲ್ಲಿಸುವ ಕೆಲಸ ಮಾಡಲಾಗಿದೆ. ಸುಮಾರು ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ. ಇದರಿಂದಾಗಿ ಸಧ್ಯ ಅಂತರ್ಜಲಮಟ್ಟ 100 ಅಡಿಗೆ ಬಂದಿದೆ. ಇದೇ ಮಾದರಿಯ ಕೆಲಸ ಆಳಂದ ಮತಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ. ಪ್ರಕೃತಿಯನ್ನು ಉಳಿಸುವ ಚಿಂತನೆ ಮಾಡುವ ಬೆರಳೆಣಿಕೆಯ ಶಾಸಕರಲ್ಲಿ ಬಿ.ಆರ್. ಪಾಟೀಲ ಒಬ್ಬರಾಗಿದ್ದು, ಆಳಂದ ಮತಕ್ಷೇತ್ರವನ್ನು ಹಸಿರನ್ನಾಗಿಸಿ ಅಂತರ್ಜಲ ಹೆಚ್ಚಿಸುವ ಕನಸು ಅವರದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳಂದ ಮತಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಮುಖ್ಯಮಂತ್ರಿಗಳು ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ವಿಶೇಷ ಕಾರ್ಯಕ್ರಮ ನೀಡಿ 90 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಈ ಪೈಕಿ ಮೊದಲ ಹಂತವಾಗಿ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.  ಇಂದು ಶಂಕುಸ್ಥಾಪನೆಯಾಗಿರುವ ಅಂತರ್ಜಲ ಅಭಿವೃದ್ಧಿಪಡಿಸುವ ವಿಶೇಷ ಯೋಜನೆಯಡಿ ಮಾದನ ಹಿಪ್ಪರಗಾ ವ್ಯಾಪ್ತಿಯ ಹಳ್ಳಗಳಲ್ಲಿ 16 ಕಿ.ಮೀ. ವರೆಗೆ ಹೂಳೆತ್ತುವ ಹಾಗೂ ಪ್ರತಿ 200 ಮೀಟರಿಗೊಂದು ಬಾಂಧಾರ ನಿರ್ಮಿಸಿ ನೀರು ನಿಲ್ಲಿಸಲಾಗುವುದು. ಇದರಿಂದ ಅಂತರ್ಜಲ ಹೆಚ್ಚಿಗೆ ಆಗುವುದು ಎಂದರು.
10 ಎಕರೆ ಭೂಮಿವುಳ್ಳ ರೈತರು 2 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿ ಉಳಿದ ಭೂಮಿಯನ್ನು ನೀರಾವರಿ ಮಾಡಬಹುದಾಗಿದೆ. ಈ ರೀತಿಯ ನಮ್ಮ ಹೊಲ ನಮ್ಮ ಕೆರೆ ಯೋಜನೆಯನ್ನು ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸಚಿವರು ಇದಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಇದು ಜಾರಿಯಾದಲ್ಲಿ ನೀರಾವರಿಗೆ ಉತ್ತಮ ಭವಿಷ್ಯವಿದೆ. 2004ರಲ್ಲಿ ಆಳಂದ ಭಾಗದಲ್ಲಿ 14 ಕೆರೆ ನಿರ್ಮಿಸಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿರುವ ಪ್ರಯುಕ್ತ ರೈತರು ಕೆರೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಇದರಿಂದಾಗಿ ಕೆರೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ ಎಂದರು.
  ಕಳೆದ ವರ್ಷ ಆಳಂದ ಮತಕ್ಷೇತ್ರದಲ್ಲಿ 140 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗಿದೆ. ಅಂತರ್ಜಲ ಕುಸಿದಿರುವ ಕಾರಣ ಕೊಳವೆ ಬಾವಿಯಲ್ಲಿಯೂ ನೀರು ದೊರಕುತ್ತಿಲ್ಲ. ಭೂಮಿಗೆ ಬಿದ್ದ ನೀರನ್ನು ನಿಲ್ಲಿಸುವ, ಇಂಗಿಸುವ ಹಾಗೂ ಮರ ಬೆಳೆಸುವ ಕೆಲಸ ಎಲ್ಲರೂ ಮಾಡಬೇಕಾಗಿದೆ. ಈ ಹಿಂದಿನ ನಿಸರ್ಗವನ್ನು ಪುನ: ಸೃಷ್ಟಿಸಬೇಕಾಗಿದೆ. ಇದಕ್ಕೆ ಬಹಳ ಕಷ್ಟಪಡುವ ಅವಶ್ಯಕತೆ ಇದೆ ಎಂದು ಹೇಳಿದರು.           ಕಾರ್ಯಕ್ರಮದಲ್ಲಿ ಮಾದನ ಹಿಪ್ಪರಗಾದ ಶ್ರೀ ಮ.ನಿ.ಪ್ರ. ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಕ್ಕಲಕೋಟ ಮತಕ್ಷೇತ್ರದ ಶಾಸಕ ಸಿದ್ದರಾಮ ಮೇತ್ರೆ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ವಿಠ್ಠಲರಾವ ಪಾಟೀಲ, ಸಿದ್ರಾಮಪ್ಪ ದಂಗಾಪುರ, ಭೀಮರಾವ ಪಾಟೀಲ, ರಮೇಶ ಲೋಹಾರ, ಬಸವಂತರಾವ ಪಾಟೀಲ ಧಂಗಾಪುರ, ಸಲಾಂ ಸಗರಿ, ಶರಣಬಸಪ್ಪ ಭೂಸನೂರ, ಸಣ್ಣ  ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಆರ್. ರುದ್ರಯ್ಯ, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ವಿಜಯಪುರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಲಯದ ಮುಖ್ಯ ಇಂಜಿನಿಯರ್ ಕೆ.ಹೆಚ್. ರಾಜು ಮತ್ತಿತರರು ಪಾಲ್ಗೊಂಡಿದ್ದರು.
No comments:

Post a Comment