GULBARGA VARTHE

GULBARGA VARTHE

Thursday, 1 February 2018

News and Photo Date: 01--02--2018

ಪ್ರವಾಸೋದ್ಯಮ ಸಚಿವರ ಪ್ರವಾಸ
******************************
ಕಲಬುರಗಿ,ಫೆ.01.(ಕ.ವಾ.)-ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವÀ ಪ್ರಿಯಾಂಕ ಖರ್ಗೆ ಅವರು ಹೈದ್ರಾಬಾದ್‍ನಿಂದ ರಸ್ತೆ ಮೂಲಕ ಫೆಬ್ರವರಿ 2ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿಗೆ ಆಗಮಿಸುವರು. ಅಂದು ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಬಸವಾದಿ ಶರಣರನ್ನು ಸಮಾಜಕ್ಕೆ ಸೀಮಿತಗೊಳಿಸಬಾರದು
***************************************************
--ಸಚಿವ ಡಾ|| ಶರಣಪ್ರಕಾಶ ಪಾಟೀಲ
*********************************
ಕಲಬುರಗಿ,ಫೆ.01.(ಕ.ವಾ.)-ಹನ್ನೇರಡನೇ ಶತಮಾನದಲ್ಲಿ ಬಸವಕಲ್ಯಾಣದ ಅನುಭವ ಮಂಟಪದಲ್ಲಿದ್ದ ಮಹಾನ್ ಶರಣರು ಮಾನವ ಕುಲದ ಉದ್ಧಾರಕ್ಕೆ ಶ್ರಮಿಸಿ ವಚನಗಳನ್ನು ರಚಿಸಿದ್ದಾರೆ. ಅವರನ್ನು ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಗುರುವಾರ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಮಡಿವಾಳ ಮಚಿದೇವರ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಹನ್ನೇರಡನೇ ಶತಮಾನದ ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯಕ್ಕೆ ಹೆಚ್ಚಿನ ಪ್ರಚಾರ ನೀಡಬೇಕಾಗಿದೆ. ಶರಣ ತತ್ವ ಸಕಲ ಜೀವರಾಶಿಗಳಿಗೆ ಲೇಸು ಬಯಸಿದೆ. ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಪರಿಚಯಿಸುವ ಕೆಲಸವಾಗಬೇಕು. ವಚನಗಳನ್ನು ಓದಿ ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ಕಾರವು ಎಲ್ಲ ಸಮಾಜಕ್ಕೆ ಗೌರವ ಕೊಡುವ ಉದ್ದೇಶದಿಂದ ಸಮಾಜ ಹಾಗೂ ಮನುಕುಲಕ್ಕೆ ಮಾರ್ಗದರ್ಶಕರಾಗಿರುವ ಮಹಾನ್ ವ್ಯಕ್ತಿಗಳನ್ನು ಗುರುತಿಸಿ ಜಯಂತಿ ಆಚರಿಸುತ್ತಿದೆ. ಹಿಂದುಳಿದ ಕುಂಬಾರ ಮತ್ತು ಮಡಿವಾಳ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಅನುದಾನ ನೀಡಲಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಚಿಗರಳ್ಳಿ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ದಬಸವ ಕಬೀರ ಮಹಾಸ್ವಾಮಿ ಮಾತನಾಡಿ, ಶ್ರೀ ಮಡಿವಾಳ ಮಾಚಿದೇವರು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ರಚಿಸಿದ ವಚನಗಳನ್ನು ರಕ್ಷಿಸಿದ್ದಾರೆ. ಮಾಚಿದೇವರು ಬಟ್ಟೆ ತೊಳೆಯುವುದನ್ನು ಲಿಂಗ ಪೂಜೆಗೆ ಸಮಾನ ಎಂದು ಭಾವಿಸಿದ್ದರು. ಕಾಯಕದಲ್ಲಿ ಸಣ್ಣದು ದೊಡ್ಡದು ಇರುವುದಿಲ್ಲ. ಕಾಯಕವನ್ನು ನಿಷ್ಠೆಯಿಂದ ಮಾಡುವುದು ಮುಖ್ಯ. ತುಳಿತಕ್ಕೆ, ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಕೈಹಿಡಿದು ಎತ್ತುವುದೇ ಲಿಂಗಾಯತ ಧರ್ಮವಾಗಿದೆ ಶೋಷಿತ ವರ್ಗ ನಿರ್ಮಾಣ ಮಾಡಲು ಧರ್ಮ ಹುಟ್ಟಿಕೊಂಡಿಲ್ಲ ಎಂದರು..
ಪಂಚ ಮಹಾಭೂತಗಳು ಮೇಲು ಕೀಳಂಬದೇ ಎಲ್ಲರಿಗೂ ಸರಿ ಸಮಾನವಾಗಿ ದೊರೆಯುವುದರಿಂದ ಬಸವಾದಿ ಶರಣರು ಸಮಾಜವನ್ನು ಸರಿ ಸಮಾನವಾಗಿ ರೂಪಿಸಲು ಮುಂದಾಗಿದ್ದರು. ಇಂದು ಹೊಲಸು ಮಾಡುವವರನ್ನು ದೊಡ್ಡವರು, ಹೊಲಸನ್ನು ಸ್ವಚ್ಛ ಮಾಡುವವರನ್ನು ಸಣ್ಣವರೆಂದು ಭಾವಿಸುತ್ತಿರುವುದು ದು:ಖದ ವಿಷಯವಾಗಿದೆ. ನಿಮ್ನ ವರ್ಗದ ಜನರನ್ನು ಗುರುತಿಸಿ ಸಮಾಜದ ಮಾರ್ಗದರ್ಶಕರ ಜಯಂತಿ ಸರ್ಕಾರ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಮಲ್ಲಣ್ಣ ಎಸ್. ಮಡಿವಾಳ ಅವರು ವಿಶೇಷ ಉಪನ್ಯಾಸ ನೀಡಿ, ಶ್ರೀ ಮಡಿವಾಳ ಮಾಚಿದೇವರು ಬಾಲ್ಯದಿಂದಲೇ ಪಾರಮಾರ್ಥಿಕ ವಿಷಯಕ್ಕೆ ಹೆಚ್ಚಿನ ಒಲವು ತೋರಿದ್ದರು. ಇವರ ಭಕ್ತಿ ನೋಡಿದ ದೇವರ ಹಿಪ್ಪರಗಿಯ ಶಿವಾಚಾರ್ಯರು ಲಿಂಗ ದೀಕ್ಷೆ ನೀಡಿ ವೇದಶಾಸ್ತ್ರ ಕಲಿಸುವರು. ನಂತರ ಮಾಚಿದೇವರು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಸದಸ್ಯರಾಗಿ ಹಲವಾರು ವಚನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೇವಲ 345 ವಚನಗಳು ಮಾತ್ರ ಸಧ್ಯ ಲಭ್ಯವಾಗಿವೆ. ಮಾಚಿದೇವರು ವಿರಾಗ್ರಣಿ ಹಾಗೂ ಪವಾಡ ಪುರುಷರಾಗಿದ್ದಾರೆ. ಬಸವ ಕಲ್ಯಾಣದ ಬಿಜ್ಜಳನು ಬಸವಾದಿ ಶರಣರನ್ನು ಹತ್ಯೆಗೈಯಲು ಆದೇಶಿಸಿದಾಗ ಮಾಚಿದೇವರು ಶರಣರ ಸೈನ್ಯ ರಚಿಸಿ ಹೋರಾಡಿ ವಚನಗಳನ್ನು ರಕ್ಷಿಸಿದ್ದಾರೆ ಎಂದ ಅವರು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕು. ದೋಭಿಘಾಟ್ ಅಭಿವೃದ್ಧಿಪಡಿಸಿ ಅಲ್ಲಿಗೆ ನೀರು ಮತ್ತು ವಿದ್ಯುಚ್ಛಕ್ತಿ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಶ್ರೀ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಶಿವಪುತ್ರ ಎಸ್. ಮಲ್ಲಾಬಾದಕರ್, ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮತ್ತಿತರರು ಪಾಲ್ಗೊಂಡಿದ್ದರು.
ದಿನಾಚರಣೆಯ ಅಂಗವಾಗಿ ಕಲಬುರಗಿಯ ಹುಮನಾಬಾದ ರಿಂಗ್‍ರೋಡನ ಶ್ರೀ ಮಡಿವಾಳ ಮಾಚಿದೇವರ ವೃತ್ತದಿಂದ ಪ್ರಾರಂಭಿಸಿದ ಮಡಿವಾಳ ಮಾಚಿದೇವರ ಭಾವಚಿತ್ರ ಮತ್ತು ವಿವಿಧ ಕಲಾ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆ ನೆಹರು ಗಂಜ್, ಕಿರಾಣಾ ಬಜಾರ, ಸುಪರ ಮಾರ್ಕೇಟ್, ಜಗತ್ ವೃತ್ತದ ಮಾರ್ಗವಾಗಿ ಡಾ. ಎಸ್.ಎಂ.ಪಂಡಿತ ರಂಗಮಂದಿರವರೆಗೆ ವಿಜೃಂಭಣೆಯಿಂದ ಜರುಗಿತು.

ಸರ್ಕಾರದಿಂದ ಫೆಬ್ರವರಿ 15ರಂದು ಸಂತ
*************************************
ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಆಚರಣೆ
*******************************************
ಕಲಬುರಗಿ,ಫೆ.01.(ಕ.ವಾ.)-ಬಂಜಾರಾ ಸಮಾಜದ ದಾರ್ಶನಿಕ, ಸಮಾಜ ಸುಧಾರಕರು ಹಾಗೂ ಮಹಾನ್ ಸಂತರಾದ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿಯನ್ನು ರಾಜ್ಯ ಸರ್ಕಾರದಿಂದ ಫೆಬ್ರವರಿ 15ರಂದು ಆಚರಿಸಲು ನಿರ್ಧರಿಸಿ ಆದೇಶ ಹೊರಡಿಸಿದೆ. ಇದಕ್ಕೆ ಕಲಬುರಗಿ ಜಿಲ್ಲೆಯ ಸಮಸ್ತ ಬಂಜಾರ ಸಮುದಾಯವು ಹರ್ಷ ವ್ಯಕ್ತಪಡಿಸಿದೆ.
ಜವಳಿ ಮತ್ತು ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿ ಹಾಗೂ ಚಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಹಾಗೂ ರಾಜ್ಯದ ಬಂಜಾರಾ ಸಮಾಜದ ಮುಖಂಡರ ಮನವಿಯ ಮೇರೆಗೆ ಮುಖ್ಯಮಂತ್ರಿಗಳು ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿಯನ್ನು ರಜೆ ರಹಿತ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಅನುದಾನ ಸಹಿತ ಬಿಡುಗಡೆ ಮಾಡಿದ್ದಾರೆ. ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸೇವಾಲಾಲ ಮಹಾರಾಜರ ಜಯಂತಿಯನ್ನು ಆಚರಿಸಲಾಗುವುದು.

ಫೆಬ್ರವರಿ 2ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ
**********************************************
ಕಲಬುರಗಿ,ಫೆ.01.(ಕ.ವಾ.)-ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಫೆಬ್ರವರಿ 2ರಂದು ಸಂಜೆ 4 ಗಂಟೆಗೆ ಕಲಬುರಗಿ ಹೊಸ ಐವಾನ್-ಇ-ಶಾಹಿ ಅತಿಥಿ ಗೃಹದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ನೆಲ್ದಾಳ ಶರಣಪ್ಪ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ನಾಗಶೆಟ್ಟಿ ಜಿ. ಗಂದಗೆ ಹಾಗೂ ಅಹಾರ ಸಂರಕ್ಷಣಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ ಡಾ|| ದೀಪಕ ಕುಮಾರ ಸುಕೆ ಉಪನ್ಯಾಸ ನೀಡುವರು. “ಬೆಳೆಯುತ್ತಿರುವ ಡಿಜಿಟಲ್ ಮಾರುಕಟ್ಟೆ ಗ್ರಾಹಕರು ರಕ್ಷಣೆಯಲ್ಲಿ ಸಮಸ್ಯೆಗಳು ಮತ್ತು ಸವಾಲುಗಳು” ಎಂಬುದು ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಘೋಷ ವಾಕ್ಯವಾಗಿದೆ.

ಫೆಬ್ರವರಿ 2ರಂದು ಸ್ಪರ್ಶ ಕುಷ್ಠರೋಗ ಅರಿವು
**************************************
ಆಂದೋಲನ ಅಂಗವಾಗಿ ಜಾಥಾ-ಉಪನ್ಯಾಸ ಕಾರ್ಯಕ್ರಮ
***************************************************
ಕಲಬುರಗಿ,ಫೆ.01.(ಕ.ವಾ.)-ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ವಿಭಾಗ ಕಲಬುರಗಿ ಇವುಗಳ ಸಹಯೋಗದಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದ ಅಂಗವಾಗಿ ಬೀದಿನಾಟಕ ತಂಡನ್ನೊಳಗೊಂಡ ಜಾಥಾವನ್ನು ಫೆಬ್ರವರಿ 2 ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಉದ್ಘಾಟಿಸುವರು. ಈ ಜಾಥಾವು ಜಿಲ್ಲಾ ಆಸ್ಪತ್ರೆ ಅವರಣದಿಂದ ಜಗತ್ ವೃತ್ತ ಮಾರ್ಗವಾಗಿ ಹಳೆಯ ಜಿಲ್ಲಾ ಪಂಚಾಯಿತಿ ಸಭಾಂಗಣವರೆಗೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಹಳೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ ಅವರು ಉದ್ಘಾಟಿಸುವರು. ಕಲಬುರಗಿ ಜಿಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ|| ಬಿ.ಎನ್. ಜೋಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಮಾಧವರಾವ ಕೆ. ಪಾಟೀಲ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ|| ಶರಣಬಸಪ್ಪ ಕ್ಯಾತ್ನಾಳ, ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಾಲಯದ ಹಿರಿಯ ವೈದ್ಯಾದಿಕಾರಿ ಡಾ|| ವಿಜಯಲಕ್ಷ್ಮೀ ಜಿ.ವಿ. ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿ ಡಾ|| ರಾಜಕುಮಾರ ಎ. ಕುಲಕರ್ಣಿ ಮುಖ್ಯ ಅತಿರ್ಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ನಿವೃತ್ತ ಸಹಾಯಕ ಕುಷ್ಠರೋಗ ಅಧಿಕಾರಿ ಎಂ.ಪಿ. ಕಾಂಬಳೆ ಉಪನ್ಯಾಸ ನೀಡುವರು.

ಫೆಬ್ರವರಿ 6ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
**************************************************
ಕಲಬುರಗಿ,ಫೆ.01.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ವಾರ ಮತ್ತು ದಿನಾಂಕಗಳಂದು ನಡೆಸಲಾಗುವುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ.
ಶಿಬಿರದ ದಿನಾಂಕ, ಸ್ಥಳ ಮತ್ತು ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ. ಫೆಬ್ರವರಿ 6 ರಂದು ಆಳಂದÀ ತಾಲೂಕು ಆಸ್ಪತ್ರೆ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ|| ಚಂದ್ರಶೇಖರ ಹುಡೇದ. ಫೆಬ್ರವರಿ 9 ರಂದು ಅಫಜಲಪುರ ತಾಲೂಕು ಆಸ್ಪತ್ರೆ-ಜಿಲ್ಲಾ ಆಸ್ಪತ್ರೆಯ/ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಕಾರಿ ಮನೊವೈದ್ಯರು. ಫೆಬ್ರವರಿ 16ರಂದು ಜೇವರ್ಗಿ ತಾಲೂಕು ಆಸ್ಪತ್ರೆ-ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ|| ಅಮೋಲ ಪತಂಗೆ. ಫೆಬ್ರವರಿ 20ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ|| ರಾಹುಲ ಮಂದಕನಳ್ಳಿ. ಫೆಬ್ರವರಿ 27ರಂದು ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ|| ಅಜಯ ಧಗೆ ಭೇಟಿ ನೀಡುವರು.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಹಳ ಮಂಕಾಗಿರುವ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆÉಯಿಂದ ತೊಂದರೆ, ಯಾರ ಜೊತೆಗೂ ಸೇರದಿರುವ, ಬೇರೆಯವರಿಗೆ ಕಾಣಿಸದ ದೃಶ್ಯ ತಮಗೆ ಕಾಣಿಸುತ್ತದೆ ಹಾಗೂ ಕೇಳಿಸದ ಧ್ವನಿ ತನಗೆ ಕೇಳಿಸುತ್ತದೆ ಎನ್ನುವ, ಎಲ್ಲರ ಬಗ್ಗೆ ಸಂಶಯ ಪಡುವ, ಆತ್ಮಹತ್ಯೆ ಬಗ್ಗೆ ಆಲೋಚಿಸುವ, ಮೂರ್ಛೆರೋಗ, ಬುದ್ಧಿಮಾಂದ್ಯರು ಮುಂತಾದ ಮಾನಸಿಕ ತೊಂದರೆ ಅಥವಾ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 3ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
**************************************************
ಕಲಬುರಗಿ,ಫೆ.01.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ-ಡಾನ್‍ಬಾಸ್ಕೋ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ತೃತೀಯ ಲಿಂಗಿಗಳ ಹಾಗೂ ಲೈಂಗಿಕ ಕಾರ್ಯಕರ್ತರ ಹಕ್ಕು ಮತ್ತು ಬಾಧ್ಯತೆಗಳ” ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಫೆಬ್ರವರಿ 3ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅಧ್ಯಕ್ಷತೆ ವಹಿಸುವರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವಿ. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ರಿನಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಬೆಂಗಳೂರಿನ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಅವರು “ಅಂಗನವಾಡಿ ಕಾರ್ಯಕರ್ತೆಯರ ಮತ್ತು ಆಶಾ ಕಾರ್ಯಕರ್ತೆಯರ ಸಾಮಾಜಿಕ ಜವಾಬ್ದಾರಿಗಳು”, ಕಲಬುರಗಿಯ ಎಸ್.ಪಿ.ಜೆ. ಮತ್ತು ಸಂಸ್ಕಾರ ಪ್ರತಿಷ್ಠಾನ ಸಂಸ್ಥೆಯ ನಿರ್ದೇಶಕ ವಿಠಲ ಚಿಕಣಿ ಅವರು “ಮಕ್ಕಳ ರಕ್ಷಣೆ ಮತ್ತು ಪೋಷಣೆಯಲ್ಲಿ ನಮ್ಮೆಲ್ಲರ ಪಾತ್ರ ಮತ್ತು ಜವಾಬ್ದಾರಿಗಳು”. ಕಲಬುರಗಿ ತೃತೀಯ ಲಿಂಗಿಗಳ ಸಮುದಾಯ ಸ್ನೇಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೌನೇಶ ಅವರು “ತೃತೀಯ ಲಿಂಗಿಗಳ ಮತ್ತು ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆ ಮತ್ತು ಸರ್ಕಾರದ ಸೌಲಭ್ಯಗಳು” ಕುರಿತು ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುವರು.

ಪುಸ್ತಕಗಳು ಆಯ್ಕೆಗಾಗಿ ಸಲ್ಲಿಸಲು ಅವಧಿ ವಿಸ್ತರಣೆ
*******************************************
ಕಲಬುರಗಿ,ಫೆ.01.(ಕ.ವಾ.)-ಸಾರ್ವಜನಿಕ ಗ್ರಂಥಾಲಯ ಇಲಾಖೆಯು ವಿವಿಧ ಯೋಜನೆಗಳಡಿ 2017ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ 2017ರ ಆಗಸ್ಟ್ 1 ರಿಂದ ಡಿಸೆಂಬರ್ 31ರವರೆಗೆ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ, ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ/ ಆಂಗ್ಲ/ ಇತರೆ ಭಾರತೀಯ ಭಾಷೆಯ ಗ್ರಂಥಗಳನ್ನು ರಾಜ್ಯಮಟ್ಟದ ಪುಸ್ತಕ ಸಮಿತಿಯಿಂದ ಆಯ್ಕೆಗಾಗಿ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ಹಾಗೂ ವಿತರಕರಿಂದ ಮೊದಲನೇ ಹಂತದಲ್ಲಿ ಪುಸ್ತಕಗಳನ್ನು ಸಲ್ಲಿಸುವ ಅವಧಿಯನ್ನು ಫೆಬ್ರವರಿ 20ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಅಜಯಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017ರ ಆಗಸ್ಟ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ಗ್ರಂಥ ಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲಿ 2018ರ ಫೆಬ್ರವರಿ 19ರೊಳಗೆ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಮಾತ್ರ ಆಯ್ಕೆಗಾಗಿ ಅರ್ಜಿಯೊಂದಿಗೆ ಪುಸ್ತಕದ ಒಂದು ಪ್ರತಿಯನ್ನು (ನೋಂದಣಿ ಪತ್ರದ ಪ್ರತಿಯೊಂದಿಗೆ) ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಕಚೇರಿಗೆ 2018ರ ಫೆಬ್ರವರಿ 20ರ ಸಂಜೆ 5.30 ಗಂಟೆಯೊಳÀಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಗತ್ ವೃತ್ತದಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಫೆಬ್ರವರಿ 2ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ,ಫೆ.01.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಐ.ಟಿ. ಪಾರ್ಕ್ ಹಾಗೂ 11ಕೆ.ವಿ. ಬುದ್ಧ ನಗರ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಫೆಬ್ರವರಿ 2ರಂದು ಬೆಳಿಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11ಕೆ.ವಿ. ಐ.ಟಿ. ಪಾರ್ಕ್: ಸಂತೋಷ ಕಾಲೋನಿ, ವರ್ಗಿಸ್ ಅಪಾರ್ಟ್‍ಮೆಂಟ್, ಮಾಣಿಕ ಪ್ರಭು ಕಾಲೋನಿ, ಐ.ಟಿ.ಪಾರ್ಕ್, ಉದನೂರ ರಿಂಗ್ ರೋಡ್, ಜಯತೀರ್ಥ ಕಲ್ಯಾಣ ಮಂಟಪ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಬುಧ್ದ ನಗರ: ತಾರಫೈಲ್, ಗೌಸ್ ನಗರ, ಅಂಬಿಕಾ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಫೆ. 4 ರಂದು ಎಫ್‍ಡಿಎ ಪರೀಕ್ಷೆ: ತೀವ್ರ ಕಟ್ಟೆಚ್ಚರಕ್ಕೆ ಸೂಚನೆ
**************************************************
ಕಲಬುರಗಿ,ಫೆ.01.(ಕ.ವಾ.)-ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಯ ನೇಮಕಾತಿಗಾಗಿ ಕಲಬುರಗಿ ನಗರ ಮತ್ತು ಜೇವರ್ಗಿಯಲ್ಲಿ ಫೆಬ್ರವರಿ 4ರಂದು ನಡೆಯಲಿರುವ ಎಫ್.ಡಿ.ಎ. ಪರೀಕ್ಷೆಯನ್ನು ತೀವ್ರ ಕಟ್ಟೆಚ್ಚರ ಮತ್ತು ಜವಾಬ್ದಾರಿಯಿಂದ ನಡೆಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಗುರುವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೂಟ್ ಅಧಿಕಾರಿಗಳು, ಜಾಗೃತಿ ದಳದ ಮುಖ್ಯಸ್ಥರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಲಬುರಗಿ ನಗರದಲ್ಲಿ 75 ಮತ್ತು ಜೇವರ್ಗಿಯ 4 ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 75 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 31 ಸಾವಿರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸೂಸೂತ್ರವಾಗಿ ನಡೆಯಲು ತಲಾ 19 ಮಾರ್ಗಾಧಿಕಾರಿಗಳು ಹಾಗೂ ಜಾಗೃತ ದಳದ ವೀಕ್ಷಕರನ್ನು ನೇಮಿಸಲಾಗಿದೆ. ವೀಕ್ಷಕರು ಹಾಗೂ ಮಾರ್ಗಾಧಿಕಾರಿಗಳು ಅಗತ್ಯ ಮುನ್ನೇಚ್ಚರಿಕೆ ಕ್ರಮ ಕೈಗೊಂಡು ತಮಗೆ ವಹಿಸಲಾದ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಬೇಕೆಂದರು.
ಫೆಬ್ರವರಿ 4ರಂದು ಬೆಳಗಿನ 10 ರಿಂದ 11.30 ಗಂಟೆವರೆಗೆ ಪತ್ರಿಕೆ-1 ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಪತ್ರಿಕೆ-2 ಸಾಮಾನ್ಯ ಕನ್ನಡ/ ಇಂಗ್ಲೀಷ ಪರೀಕ್ಷೆ ನಡೆಯಲಿದೆ. ಓ.ಎಂ.ಆರ್. ಶೀಟ್‍ನಲ್ಲಿ ಅಭ್ಯರ್ಥಿಗಳ ಎಲ್ಲ ಮಾಹಿತಿ ಮುದ್ರಿತ ಗೊಂಡಿರುವುದರಿಂದ ಇದನ್ನು ಖಚಿತಪಡಿಸಿಕೊಂಡು ಅಭ್ಯರ್ಥಿಗಳು ಕೇವಲ ಸಹಿ ಮಾತ್ರ ಮಾಡಬೇಕೆಂದರು. ಭಾನುವಾರ ದಿನದಂದು ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳ ರವಾನೆಗಾಗಿ ಕಲಬುರಗಿ ನಗರದ 06 ಮತ್ತು ಜೇವರ್ಗಿ ಪಟ್ಟಣದಲ್ಲಿ 01 ಅಂಚೆ ಕಚೇರಿಗಳು ವಿಶೇಷವಾಗಿ ಕಾರ್ಯನಿರ್ವಹಿಸಲಿವೆ ಎಂದರು.
ಮಾರ್ಗಾಧಿಕಾರಿಗಳು ಪರೀಕ್ಷಾ ದಿನದಂದು ನಿಗದಿತ ಸಮಯಕ್ಕೆ ಖಜಾನೆಯಲ್ಲಿ ಹಾಜರಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ಪೂರೈಸಬೇಕು. ಆದರೆ ಪ್ರಶ್ನೆ ಪತ್ರಿಕೆ ಬಂಡಲ್‍ಗಳನ್ನು ಪಡೆಯುವ ಮುನ್ನ ಬಂಡಲ್ ಭದ್ರಪಡಿಸಿರುವುದನ್ನು (ಸೀಲ್) ಖಚಿತಪಡಿಸಿಕೊಳ್ಳಬೇಕೆಂದರು.
ಪರೀಕ್ಷಾ ಕೇಂದ್ರದಲ್ಲಿ ಆಸನ, ಕುಡಿಯುವ ನೀರು, ಸಾಕಷ್ಟು ಬೆಳಕಿನ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಹಾಗೂ ಸುಗಮ ಪರೀಕ್ಷಾ ಸಿದ್ಧತೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರತ್ಯೇಕ ಮಹಿಳಾ ಮತ್ತು ಪುರುಷ ಪೊಲೀಸರನ್ನು ನೇಮಿಸುವುದು. ಪೊಲೀಸರು ಪರೀಕ್ಷಾ ಆರಂಭವಾಗುವ ಒಂದು ಗಂಟೆ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಅಭ್ಯರ್ಥಿಗಳನ್ನು ತಪಾಸಣೆ ನಡೆಸಿಯೇ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುವು ಮಾಡಿಕೊಡಬೇಕೆಂದರು.
ಮೊಬೈಲ್ ಹಾಗೂ ಇನ್ನಿತರ ಉಪಕರಣಗಳು ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್, ವೈರಲೆಸ್ ಸೆಟ್, ಸ್ಲೈಡರೂಲ್ ಕ್ಯಾಲ್ಕುಲೇಟರ್, ವಾಚ್ ಕ್ಯಾಲ್ಕುಲೇಟರ್, ಪಠ್ಯ ಪುಸ್ತಕ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ ಹೆಚ್ಚುವರಿ ಜಿಲ್ಲಾಧಿಕಾರಿಗಳು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾದರೆ ಅಂತಹವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರವೇಶ ಪತ್ರದೊಂದಿಗೆ ಗುರುತಿನ ಚೀಟಿ ಕಡ್ಡಾಯ: ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ಆಧಾರ ಕಾರ್ಡ ತರುವುದು ಕಡ್ಡಾಯವಾಗಿದೆ. ಒಂದು ವೇಳೆ ಆಧಾರ ಕಾರ್ಡ ಇಲ್ಲದಿದ್ದಲ್ಲಿ ಆಧಾರ ನೋಂದಣಿ ಮಾಡಿದ ಸ್ವೀಕೃತ ಪ್ರತಿಯೊಂದಿಗೆ ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್ ಅಥವಾ ಸರ್ಕಾರಿ ನೌಕರರ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಮೂಲ ದಾಖಲೆ ತರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಗುರುತಿನ ಚೀಟಿಯನ್ನು ತರದಿದ್ದಲ್ಲಿ ಪರೀಕ್ಷೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.
ಸಭೆಯಲ್ಲಿ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್, ಕರ್ನಾಟಕ ಲೋಕಸೇವಾ ಆಯೋಗ ಕಲಬುರಗಿ ಪ್ರಾಂತೀಯ ಕಚೇರಿಯ ಹಿರಿಯ ಸಹಾಯಕ ಅಂಬರೀಷ, ಮಾರ್ಗಾಧಿಕಾರಿಗಳು, ವೀಕ್ಷಕರು, ಮುಖ್ಯ ಮೇಲ್ವಿಚಾರಕರು ಸೇರಿದಂತೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.No comments:

Post a Comment