GULBARGA VARTHE

GULBARGA VARTHE

Tuesday, 16 January 2018

news and photos Date: 16--1--2018

ರಾಷ್ಟ್ರೀಯ ಹೆದ್ದಾರಿ ರಸ್ತೆಗೆ 624 ಕೋಟಿ ರೂ.ವೆಚ್ಚ
*********************************************
-ಡಾ.ಮಲ್ಲಿಕಾರ್ಜುನ ಖರ್ಗೆ
**************************
ಕಲಬುರಗಿ,ಜ.16.(ಕ.ವಾ.)-ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 609 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು 624 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು.
ಅವರು ಮಂಗಳವಾರ ಜೇವರ್ಗಿ ತಾಲೂಕಿನ ನರಿಬೋಳದಲ್ಲಿ ಕೇಂದ್ರ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಚಾಮನೂರ-ನರಿಬೋಳ ರಸ್ತೆಯಲ್ಲಿ ಬರುವ ಚಾಮನೂರ ಗ್ರಾಮದ ಹತ್ತಿರ ಹೊಸದಾಗಿ 50 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ಕಲಬುರಗಿ ಜಿಲ್ಲೆಯಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿಗಳು ಇರಲಿಲ್ಲ. ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಜೇವರ್ಗಿಯಿಂದ ಶ್ರೀರಂಗಪಟ್ಟಣವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಸೋಲಾಪುರ, ಕಲಬುರಗಿ, ಯಾದಗಿರಿ, ರಾಯಚೂರದಿಂದ ಬೆಂಗಳೂರವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಸಧ್ಯ ಮೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗಳು ಸೇರಲಿವೆ. ಸೋಲಾಪುರ ಕಡೆಯಿಂದ, ಹುಮನಾಬಾದ್ ಕಡೆಯಿಂದ ಹಾಗೂ ಪರ್ಗಿಯಿಂದ ರಾಷ್ಟ್ರೀಯ ಹೆದ್ದಾರಿಗಳು ಕಲಬುರಗಿಗೆ ಸೇರುತ್ತವೆ. ವಿಜಯಪುರ, ಶಹಾಪುರ, ಯಾದಗಿರಿ, ಗುರುಮಠಕಲ್, ಪರ್ಗಿ ಮೂಲಕ ಹೈದ್ರಾಬಾದ್‍ವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಅನುಮತಿಸಲಾಗಿದ್ದು, ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ 150ಎ ಜೇವರ್ಗಿಯಿಂದ ಚಾಮರಾಜನಗರವರೆಗೆ ಈಗಾಗಲೇ ನಾಲ್ಕು ಪಥದ ರಸ್ತೆ ನಿರ್ಮಿಸಲು ಅನುಮತಿಸಲಾಗಿದೆ. ಜೇವರ್ಗಿಯಿಂದ ದೇವದುರ್ಗದವರೆಗೆ 885 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಅನುದಾನ ಕಾಯ್ದಿರಿಸಲು ಮುಂಬರುವ ಬಜೆಟ್‍ನಲ್ಲಿ ಸೇರ್ಪಡೆ ಮಾಡಲಾಗಿದೆ. ದೇವದುರ್ಗ ಕ್ರಾಸ್‍ದಿಂದ ತಿಂಥಣಿ ಸೇತುವೆ ವರೆಗಿನ 390 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಿಸಲು ಮಂಜೂರಾತಿ ದೊರೆತಿದೆ ಎಂದರು.
187.50 ಕೋಟಿ ರೂ. ವೆಚ್ಚದ ಕಲಬುರಗಿಯಿಂದ ಯಾದಗಿರಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಕೆಲಸ ಈಗಾಗಲೇ ಪ್ರಾರಂಭಗೊಂಡಿದೆ. ಇದರಲ್ಲಿ ಶೇ.50ರಷ್ಟು ಭಾಗ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲಾಗುವುದು. ಚಿತ್ತಾಪುರ ಕ್ರಾಸ್‍ದಿಂದ ಯಾದಗಿರಿ ಹಾಗೂ ಕಡೆಚೂರವರೆಗೆ ಸಿಮೆಂಟ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಲೋಕೋಪಯೋಗಿ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆ, ಕಾಲೇಜುಗಳನ್ನು ನಿರ್ಮಿಸಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಇನ್ನುಳಿದ ಅಪೂರ್ಣ ಕೆಲಸಗಳನ್ನು ಶಾಸಕ ಡಾ. ಅಜಯಸಿಂಗ್ ಅವರು ಪೂರ್ಣಗೊಳಿಸುತ್ತಿದ್ದಾರೆ. ಅಜಯಸಿಂಗ್ ಅವರು ಜೇವರ್ಗಿ ಮತಕ್ಷೇತ್ರದಲ್ಲಿ ರಸ್ತೆ, ಸೇತುವೆ, ಪ್ರಾಥಮಿಕ ಆರೋಗ್ಯ ಕೇಂದ್ರ, ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಅಲ್ಲದೇ ಹ.ಕ.ಪ್ರ.ಅ. ಮಂಡಳಿಯಿಂದ ಸಾಕಷ್ಟು ಹಣ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮತದಾರರ ನಿರೀಕ್ಷೆಯಂತೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದ ಶಾಸಕರಲ್ಲಿ ಇವರು ಒಬ್ಬರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮಾತನಾಡಿ, ರಾಜ್ಯದಲ್ಲಿರುವ ರೈತರ ಹಿತಕಾಪಾಡಲು ಸರ್ಕಾರ ಸದಾ ಸಿದ್ದವಿದೆ. ರೈತರ ಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುಮಾರು 8000 ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ರೈತರು ಬೆಳೆದ ಬೆಳೆಯ ಬೆಲೆ ಕುಸಿತ ಕಂಡಾಗ ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಸಮರ್ಪಕ ಬೆಂಬಲ ಬೆಲೆ ನೀಡಿ ಉತ್ತೇಜಿಸುತ್ತಿದೆ. ಕಳೆದ ವರ್ಷ ರಾಜ್ಯದಾದ್ಯಂತ ಸುಮಾರು 34 ಲಕ್ಷ ಕ್ವಿಂಟಲ್ ತೊಗರಿ ಬೆಂಬಲ ಬೆಲೆಯಲ್ಲಿ ಖರೀದಿಸಲಾಗಿತ್ತು. ಈ ವರ್ಷವೂ 16.50 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಗಾಗಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಹಿಂದಿನ ಯುಪಿಎ ಸರ್ಕಾರದ ಕಾಲದಲ್ಲಿ ಸಚಿವರಾಗಿದ್ದ ಸಂಸದರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದಿಂದಾಗಿ ಈ ಭಾಗಕ್ಕೆ 371(ಜೆ) ಕಲಂಗೆ ತಿದ್ದುಪಡಿ ತಂದು ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ದೊರಕಿಸಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಈಗಾಗಲೇ 4500 ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ, ನರಿಬೋಳ ಹತ್ತಿರ ನಿರ್ಮಿಸಲಾಗುತ್ತಿರುವ ಸೇತುವೆಯಿಂದಾಗಿ ಜೇವರ್ಗಿ ಹಾಗೂ ಚಿತ್ತಾಪುರ ಮತಕ್ಷೇತ್ರಗಳ ಜನರ ಸಾರಿಗೆ ಸಂಪರ್ಕಕ್ಕೆ ತುಂಬಾ ಅನುಕೂಲವಾಗಲಿದೆ. ಜೇವರ್ಗಿ ಮತಕ್ಷೇತ್ರದಲ್ಲಿ ಸಧ್ಯ 200 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ನಾಲ್ಕು ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುತ್ತಿದೆ. ಕೋನಹಿಪ್ಪರಗಾ, ಕಟ್ಟಿಸಂಗಾವಿ, ನರಿಬೋಳ-ಚಾಮನೂರ ಹಾಗೂ ಟಿನ್ನೂರ ಬ್ರಿಜ್ಡ್ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು. ಜೇವರ್ಗಿ ಮತಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಮತಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೇವರ್ಗಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಚಂದಮ್ಮ ಸಂಗಣ್ಣ, ನರಿಬೋಳ ತಾಲೂಕ ಪಂಚಾಯಿತಿ ಸದಸ್ಯೆ ಅಯ್ಯಮ್ಮ ಮಹಾದೇವಪ್ಪ ಸೂಲಹಳ್ಳಿ, ಕಡಬೂರ ತಾಲೂಕು ಪಂಚಾಯಿತಿ ಸದಸ್ಯ ದಾನಮ್ಮ ಸಾಬಣ್ಣ, ನರಿಬೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಮರಿಲಿಂಗಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೋಡಲಗಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ರಜಾಕ್ ಮನಿಯಾರ, ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ ರಾಠೋಡ, ರಾಷ್ಟ್ರೀಯ ಹೆದ್ದಾರಿ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ದೇವಿದಾಸ್ ಚವ್ಹಾಣ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಪಿ. ನಾಗಪ್ಪಾ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ಜ.17ರಂದು ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ
************************************************
ಕಾನೂನು ಅರಿವು ನೆರವು ಕಾರ್ಯಕ್ರಮ
**********************************
ಕಲಬುರಗಿ,ಜ.16.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಎನ್.ಎಸ್.ಎಸ್. ಘಟಕ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಹಾಗೂ ಸ್ವಚ್ಚ ಸಂಕಲ್ಪ ಟ್ರಸ್ಟ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರೀಯ ಯುವ ದಿನಾಚರಣೆ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜನವರಿ 17ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್.ಮಾಣಿಕ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ವಿಜಯ ಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕಲಬುರಗಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎನ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ವೆಂಕಣ ಡೊಣ್ಣೆಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕಲಬುರಗಿ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಮತದಾನದ ಮಹತ್ವ ಹಾಗೂ ನೋಂದಣಿ ಕುರಿತು ಮಾತನಾಡುವರು.

ಜನವರಿ 18ರಂದು ಅಡುಗೆ ಸಹಾಯಕ-ರಾತ್ರಿ ಕಾವಲುಗಾರರ ಹುದ್ದೆಗಳಿಗೆ ಕೌನ್ಸಲಿಂಗ್
*************************************************************************
ಕಲಬುರಗಿ,ಜ.16.(ಕ.ವಾ.)-ಕಲಬುರಗಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿಯಿರುವ ಅಡುಗೆ ಸಹಾಯಕರ ಮತ್ತು ರಾತ್ರಿ ಕಾವಲುಗಾರರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 2018ರ ಜನವರಿ 18ರಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೌನ್ಸಲಿಂಗ್ ಏರ್ಪಡಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 18ರಂದು ಅಡುಗೆ ಸಹಾಯಕರ ಹುದ್ದೆಗೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ರಾತ್ರಿ ಕಾವಲುಗಾರರ ಹುದ್ದೆಗೆ ಮಧ್ಯಾಹ್ನ 1.30 ರಿಂದ ಸಂಜೆ 5.30 ಗಂಟೆಯವರೆಗೆ ಕೌನ್ಸಲಿಂಗ್ ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಖುದ್ದಾಗಿ ಕೌನ್ಸಲಿಂಗ್‍ಗೆ ಹಾಜರಾಗಬೇಕು. ನಿಗದಿತ ಸಮಯಕ್ಕೆ ಹಾಜರಾಗದೇ ಇದ್ದಲ್ಲಿ ಅಂಥಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಠಪಡಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯ ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-278621ನ್ನು ಸಂಪರ್ಕಿಸಲು ಕೋರಿದೆ.

ವಾಜಪೇಯಿ ನಗರ ವಸತಿ ಯೋಜನೆಯಡಿ ಅರ್ಜಿ ಆಹ್ವಾನ
***************************************************
ಕಲಬುರಗಿ,ಜ.16.(ಕ.ವಾ.)-ಆಳಂದ ಪುರಸಭೆ ವ್ಯಾಪ್ತಿಯಲ್ಲಿ 2017-18ನೇ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಲಂಬೀಯ ಕಟ್ಟಡ (ಜಿ+1) ನಿರ್ಮಾಣಕ್ಕಾಗಿ ಅರ್ಹ ಮಹಿಳಾ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಳಂದ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಸೌಲಭ್ಯ ಪಡೆಯಲಿಚ್ಛಿಸುವ ಆಳಂದ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳು ಬೇಡಿಕೆ ಸಮೀಕ್ಷೆಯಲ್ಲಿ ಹೆಸರು ಇರಬೇಕು. ಆಧಾರ ಕಾರ್ಡ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಫಲಾನುಭವಿಯು 5ವರ್ಷಕ್ಕಿಂತ ಮೇಲ್ಪಟ್ಟು ಪಟ್ಟಣದಲ್ಲಿ ವಾಸವಾಗಿರುವ ಕುರಿತು ವಾಸಸ್ಥಳ ಪ್ರಮಾಣಪತ್ರ, ವಸತಿ ಹಾಗೂ ನಿವೇಶನ ರಹಿತ ಪ್ರಮಾಣಪತ್ರ, ಆಯ್ಕೆಯಾದ ಫಲಾನುಭವಿಗಳ ವಂತಿಕೆ ಹಣ ಕಟ್ಟಲು ಬದ್ಧರಾಗಿರಬೇಕು. ವಸತಿ ಯೋಜನೆಯ ಮಾರ್ಗಸೂಚಿಯಂತೆ ಎಲ್ಲ ಷರತ್ತುಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಜನವರಿ 31ರ ಸಾಯಂಕಾಲ 4-30 ಗಂಟೆಯೊಳಗಾಗಿ ಪುರಸಭೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಳಂದ ಪುರಸಭೆ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.

ಜನವರಿ 19ರಿಂದ ಕಾಲುವೆಗಳಿಗೆ ನೀರು ಸ್ಥಗಿತ
****************************************
ಕಲಬುರಗಿ,ಜ.16.(ಕ.ವಾ.)-ಕೆಳದಂಡೆ ಮುಲ್ಲಾಮಾರಿ ಯೋಜನೆಯ ಹಿಂಗಾರು ಹಂಗಾಮಿಗೆ ಪ್ರದೇಶದಲ್ಲಿ ಬೆಳೆದ ಎಲ್ಲ ಬೆಳೆಗಳು ಕಟಾವು ಆಗುತ್ತಿದ್ದು, ನೀರು ಬಳಕೆದಾರರು ಹಾಗೂ ರೈತರ ಬೇಡಿಕೆ ಇಲ್ಲದ್ದನ್ನು ಗಮನಿಸಿ ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ಮುಲ್ಲಾಮಾರಿ ಜಲಾಶಯದ ಕಾಲುವೆಯಿಂದ ಜಮೀನುಗಳಿಗೆ ನೀರು ಹರಿಸುವುದನ್ನು ಜನವರಿ 19ರ ಬೆಳಿಗ್ಗೆ 8 ಗಂಟೆಯಿಂದ ಸ್ಥಗಿತಗೊಳಿಸಲಾಗುವುದು.
ಕೆಳದಂಡೆ ಮುಲ್ಲಾಮಾರಿ ಯೋಜನೆಯ ಹಿಂಗಾರು ಹಿಂಗಾಮಿಗೆ 2018ರ ಜನವರಿ 8 ರಿಂದ ನೀರು ಬಿಡಲಾಗುತ್ತಿದೆ. ಮುಖ್ಯ ಕಾಲುವೆಯ ಅಂತಿಮ ತುದಿಗೆ ನೀರು ತಲುಪಿರುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಲಬುರಗಿ ಐ.ಪಿ.ಸಿ ವಿಭಾಗ-1ರ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಣ್ಣೆತೋರಾ ಜಲಾಶಯ: ಕಾಲುವೆಗಳಿಗೆ ನೀರು ಬಿಡುಗಡೆ
**************************************************
ಕಲಬುರಗಿ,ಜ.16.(ಕ.ವಾ.)-ನೀರು ಬಳಕೆದಾರರ ಸಂಘಗಳ ಬೇಡಿಕೆಯನ್ವಯ 2017-18ನೇ ಸಾಲಿನ ಬೆಳೆಗಳಿಗೆ ಬೆಣ್ಣೆತೋರಾ ಯೋಜನೆಯ ಜಲಾಶಯದಿಂದ ಬಲದಂಡೆ ಹಾಗೂ ಎಡದಂಡೆ ಕಾಲುವೆಗಳಿಗೆ 2018ರ ಜನವರಿ 16ರಿಂದ ನೀರು ಹರಿಬಿಡಲಾಗಿದೆ ಎಂದು ಬೆಣ್ಣೆತೋರಾ ಆಣೆಕಟ್ಟು ಯೋಜನೆಯ ಹೆಬ್ಬಾಳ ವಿಭಾಗ-4ರ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಅವರ ಆದೇಶದಂತೆ ನೀರು ಹರಿಬಿಡಲಾಗುತ್ತಿದ್ದು, ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು ಕಾಲುವೆ ನೀರಿನ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರಸ್ತೇದಾರ ಸೈಯದ್ ನಿಸಾರ ಅಹ್ಮದ್ ಅಮಾನತ್ತು
***********************************************
ಕಲಬುರಗಿ,ಜ.16.(ಕ.ವಾ.)-ಸಕ್ಷಮ ಪ್ರಾಧಿಕಾರಿಯ ಪೂರ್ವಾನುಮತಿ ಪಡೆಯದೇ, ಚರ ಹಾಗೂ ಸ್ಥಿರ ಆಸ್ತಿಯನ್ನು ಖರೀದಿ ಹಾಗೂ ಮಾರಾಟ ಮಾಡಿದ ಆರೋಪ ಹೊಂದಿರುವ ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಸೈಯದ್ ನಿಸಾರ ಅಹ್ಮದ್ ಅವರ ಮೇಲಿನ ಆರೋಪಗಳ ವಿಚಾರಣೆ ಬಾಕಿಯಿಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಶಿಸ್ತು ಪ್ರಾಧಿಕಾರಿಗಳು ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರು ಆದೇಶ ಹೊರಡಿಸಿದ್ದಾರೆ.
ಚರ ಮತ್ತು ಸ್ಥಿರ ಆಸ್ತಿಗಳನ್ನು ಖರೀದಿ ಹಾಗೂ ಮಾರಾಟ ಮಾಡುವ ಪೂರ್ವದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದಿರುವುದರಿಂದ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರ ನಿಯಮ 23 ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಸದರಿ ನೌಕರರನ್ನು ಕರ್ನಾಟಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ) ರನ್ವಯ ಅಮಾನತ್ತುಗೊಳಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 98ರ ಅನ್ವಯ ಜೀವನಾಧಾರ ಭತ್ಯೆ ಪಡೆಯಲು ನೌಕರರು ಅರ್ಹರಿದ್ದು, ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡಬಾರದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜನವರಿ 18ರಂದು ಜಿಲ್ಲಾ ಮಟ್ಟದ ಈಜು ಸ್ಪರ್ಧೆ
****************************************
ಕಲಬುರಗಿ,ಜ.16.(ಕ.ವಾ.)-ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಕ್ರೀಡಾ ಪ್ರತಿಭೆ ಅಪೇಕ್ಷಣೆ ಅಡಿಯಲ್ಲಿ 14 ಮತ್ತು 18 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಜನವರಿ 18ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಗಳ ವಿವರ ಮತ್ತು ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಚೇಂದ್ರ ಠಾಕೂರ, ತರಬೇತುದಾರರು 9964213553 ಅಥವಾ ವಿಶ್ವನಾಥ ಮೊಬೈಲ್ ಸಂಖ್ಯೆ 9880212769ನ್ನು ಸಂಪರ್ಕಿಸಲು ಕೋರಿದೆ.
ಅದೇ ರೀತಿ ಕಲಬುರಗಿ ಜಿಲ್ಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಲು ಹೋಬಳಿ ಮಟ್ಟದ ಅರ್ಹ ಸಂಘ/ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಲು 50,000 ರೂ.ಗಳ ಅನುದಾನ ನೀಡಲಾಗುವುದು.


ಪ್ರೋ ಕಬಡ್ಡಿ, ಖೋ-ಖೋ ಏರ್ಪಡಿಸಲು ಮ್ಯಾಟಗಳನ್ನು ಉಚಿತವಾಗಿ ನೀಡಲಾಗುವುದು. ಬ್ಯಾಂಕ್ ಖಾತೆ ಇರುವುದು ಕಡ್ಡಾಯ. ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8197058425 ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-268637ನ್ನು ಸಂಪರ್ಕಿಸಬೇಕೆಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment