GULBARGA VARTHE

GULBARGA VARTHE

Friday, 5 January 2018

NEWS AND PHOTO DATE: 5--1--2018

ಜವಳಿ-ಮುಜರಾಯಿ ಸಚಿವರ ಪ್ರವಾಸ
*********************************
ಕಲಬುರಗಿ,ಜ.05.(ಕ.ವಾ.)-ಜವಳಿ ಹಾಗೂ ಮುಜರಾಯಿ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಜನವರಿ 6ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಜನವರಿ 7ರಂದು ಬೆಳಿಗ್ಗೆ 7 ಗಂಟೆಗೆ ಕಲಬುರಗಿಯಿಂದ ಹಾವೇರಿಗೆ ಪ್ರಯಾಣಿಸುವರು.
ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಸರ್ಕಾರ ಸದಾ ಸಿದ್ಧ
ಕಲಬುರಗಿ,ಜ.4.(ಕ.ವಾ)-ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಿ ಆಸ್ಪತ್ರೆಗಳಿಗೆ ಸುಧಾರಿತ ಉಪಕರಣಗಳನ್ನು ಒದಗಿಸುವ ಮೂಲಕ ಬಡ ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಸದಾ ಸಿದ್ದವಿದೆ ಎಂದು ವೈದ್ಯಕೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಅಡಿಯಲ್ಲಿ ಆಳಂದ ತಾಲೂಕಿನ ಶರಣ ನಗರದಲ್ಲಿ ಹಮ್ಮಿಕೊಂಡಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ಜಿಲ್ಲೆಗೊಂದು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುತ್ತಿದೆ. ಈಗಾಗಲೇ ಕಲಬುರಗಿ, ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ, ಮಡಿಕೇರಿ ಸೇರಿದಂತೆ 7 ಹೊಸ ಸರ್ಕಾರಿ ಮೆಡಿಕಲ್ ಕಾಲೇಜನ್ನು ಆರಂಭಿಸಲಾಗಿದೆ. ಈ ವರ್ಷ ಇನ್ನೂ 6 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುವ ಪ್ರಾಸ್ತಾವನೆ ಸರ್ಕಾರದ ಮುಂದಿದೆ. ಇದರಿಂದಾಗಿ ರಾಜ್ಯದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಸೀಟುಗಳು ದೊರಕಿಸಲು ಅನುಕೂಲವಾಗಿದೆ. ವಿಭಾಗಕ್ಕೊಂದು ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆ ಪ್ರಾರಂಭಿಸಲು ನಿರ್ಣಯ ಕೈಗೊಂಡಿದ್ದು ಈಗಾಗಲೇ ಬೆಳಗಾವಿ ಮತ್ತು ಮೈಸೂರು ವಿಭಾಗದಲ್ಲಿ ಪ್ರಾರಂಭಿಸಲಾಗಿದೆ. ಸ್ವಲ್ಪ ದಿನಗಳಲ್ಲಿ ಕಲಬುರಗಿ ಸೂಪರ್ ಸ್ಪೆಷಿಯಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಅಪಘಾತಕ್ಕೊಳಗಾದವರ ಜೀವ ರಕ್ಷಣೆಗೆ ನಿಗದಿತ ಅವಧಿಯಲ್ಲಿ ತುರ್ತು ಚಿಕಿತ್ಸೆ ಅವಶ್ಯಕವಿದ್ದು ಈ ನಿಟ್ಟಿನಲ್ಲಿ ರಾಜ್ಯದಲ್ಲಿ 2 ಟ್ರಾಮಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಮೈಸೂರಿನಲ್ಲಿ ಪ್ರಾರಂಭವಾಗಿದ್ದು, 30 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ಟ್ರಾಮಾ ಸೆಂಟರ್ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ಸ್ವಲ್ಪ ದಿನಗಳಲ್ಲಿ ಈ ಕೇಂದ್ರವನ್ನು ಉದ್ಘಾಟಿಸಲಾಗುವುದು. ಈ ಭಾಗದ ಜನರು ಹೃದ್ರೋಗ ಮತ್ತು ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಬೇರೆ ರಾಜ್ಯಗಳಿಗೆ ಅಲೆಯುವುದನ್ನು ತಪ್ಪಿಸಲು ಕಲಬುರಗಿಯಲ್ಲಿ ಬೆಂಗಳೂರು ಜಯದೇವ ಹೃದ್ರಾಲಯದ ಹಾಗೂ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಅಂಗ ಸಂಸ್ಥೆಗಳನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗಿದೆ. ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿರುವ ಈ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತÀ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುತ್ತಿವೆ. ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡುದಾರರಿಗೆ ಶೇ. 70 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ವೈದ್ಯರು ರೋಗಿಗಳಿಗೆ ಸಮಯ ನೀಡಿ, ಖಾಸಗಿ ಆಸ್ಪತ್ರೆಗೆ ಸೆಡ್ಡುಹೊಡೆದು ಗುಣಮಟ್ಟದ ಚಿಕಿತ್ಸೆ ನೀಡುವುದರ ಮೂಲಕ ರೋಗಗಳ ಆತ್ಮವಿಶ್ವಾಸ ಗೆಲ್ಲಬೇಕೆಂದು ವೈದ್ಯರಿಗೆ ಕಿವಿ ಮಾತು ಹೇಳಿದರು.
ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆ 2 ಕಿ.ಮೀ ದೂರವಾಗುತ್ತಿದ್ದರಿಂದ ಬಡವ, ಹೆಣ್ಣು ಮಕ್ಕಳು ಹಾಗೂ ವಯಸ್ಸಾದರವರಿಗೆ ತೊಂದರೆಯಾಗುತ್ತಿದೆ ಎಂದು ಮನಗಂಡು ಶರಣ ನಗರದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲಾಗಿದ್ದು, ಆಳಂದ ನಗರದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು. ಆಳಂದದಲ್ಲಿ ಮಟಕಿ ರಸ್ತೆಯ ಮೂಲಕ ಸರ್ಕಾರಿ ಆಸ್ಪತ್ರೆಗೆ ಸಾಗಬೇಕಾದ ದಾರಿ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗಾಗಿ 2 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುವುದು. ಮಟಕಿ ಹಾಗೂ ನಿರಗುಡಿ ಗ್ರಾಮದ ರಸ್ತೆ ಸುಧಾರಣೆಗೆ ಸಚಿವರಾದ ಶರಣಪ್ರಕಾಶ ಪಾಟೀಲ್ ಅವರು ಹಣ ನೀಡಿದ್ದಾರೆ. ಮಿನಿವಿಧಾನಸೌಧ, 2ಗೋದಾಮು, 5 ಸಾವಿರ ಮೆಟ್ರಿಕ್ ಟನ್ ಶೇಖರಿಸಲು ಎಪಿಎಂಸಿ ಅಡಿ ರೈತರಿಗೆ ಗೋದಾಮು ವ್ಯವಸ್ಥೆ ಕಲ್ಪಿಸಲಾಗಿದೆ. ಅಡತ್ ಬಜಾರ ಕಾಮಗಾರಿ ಅಭಿವೃದ್ಧಿಯಲ್ಲಿದೆ. ಭೀಮಾನದಿಯಿಂದ ಅಮರ್ಜಾ ಡ್ಯಾಂಗೆ ನೀರು ತುಂಬುವ 550 ಕೋಟಿ ರೂ. ಕಾಮಗಾರಿ ಮಂಜೂರು ಮಾಡಲಾಗಿದೆ. ಖಜೂರಿ, ತಡಕಲ್, ಜಿಡಗಾ, ಕೋತನ ಹಿಪ್ಪರ್ಗಾ, ಕುಲಾಲಿ ರಸ್ತೆ ದುರಸ್ಥಿಗೆ 170 ಕೋಟಿ ವೆಚ್ಚ ಮಾಡಲಾಗಿದೆ. ತಾಲೂಕಿನಲ್ಲಿ ಸರ್ಕಾರಿ ಐಟಿಐ ಕಾಲೇಜು ಆರಂಭವಾಗಿದ್ದು, ಮುಂದೆ ಪಾಲಿಟೆಕ್ನೆಕ್ ಕಾಲೇಜು ಆರಂಭಿಸುವ ಯೋಜನೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡದ 25 ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್‍ಗಳನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ವಿತರಿಸಿದರು.
ಆಳಂದ ಪುರಸಭೆಯ ಅಧ್ಯಕ್ಷ ಅಂಬಾದಾಸ ಪವಾರ, ಉಪಾಧ್ಯಕ್ಷ ಅಜಗರ ಅಲಿ ಹವಾಲ್ದಾರ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ವಹಾಬ್ ಜರ್ದಿ, ಸದಸ್ಯರಾದ ಗುರುನಾಥ.ಬಿ.ಕಳಸೆ, ಅಶೋಕ ಈಟಾಮಳೆ, ಸೈಫನ ಎಂ.ಜವಳಿ, ಲಕ್ಷ್ಮೀಬಾಯಿ ಸೂರ್ಯಕಾಂತ ಸಾಲೇಗಾಂವ, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎ.ಎಸ್.ರುದ್ರವಾಡಿ, ಆಳಂದ ತಾಲೂಕ ಆರೋಗ್ಯ ಅಧಿಕಾರಿ ಡಾ|| ಅಭಯಕುಮಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತೊಗರಿ ಖರೀದಿ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳ ನೇಮಕ
*******************************************************
ಕಲಬುರಗಿ,ಜ.05.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ಬೆಳೆದಿರುವ ತೊಗರಿ ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಖರೀದಿಸಲು ಜಿಲ್ಲೆಯಲ್ಲಿ ಒಟ್ಟು 113 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸದರಿ ಕೇಂದ್ರಗಳಲ್ಲಿ ನಿಯಮಾನುಸಾರ ಖರೀದಿ ಪ್ರಕ್ರಿಯೆ ನಿರೀಕ್ಷಿಸಲು ಹಾಗೂ ಅವ್ಯವಹಾರಗಳು ಕಂಡು ಬಂದಲ್ಲಿ ಸಕ್ಷಮ ಪ್ರಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಯಲ್ಲಿ ತಾಲೂಕಿಗೆ ಓರ್ವರಂತೆ ಅಧಿಕಾರಿಗಳನ್ನು ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ನೋಡಲ್ ಅಧಿಕಾರಿಗಳೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ನೇಮಕ ಮಾಡಿರುತ್ತಾರೆ.
ಕಲಬುರಗಿ ತಾಲೂಕಿಗೆ ಕೃಷಿ ಇಲಾಖೆಯ ಉಪನಿರ್ದೇಶಕರನ್ನು, ಆಳಂದ ತಾಲೂಕಿಗೆ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರನ್ನು, ಅಫಜಲಪುರ ತಾಲೂಕಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು, ಜೇವರ್ಗಿ ತಾಲೂಕಿಗೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರನ್ನು, ಸೇಡಂ ತಾಲೂಕಿಗೆ ರೇಷ್ಮೆ ಇಲಾಖೆಯ ಉಪನಿರ್ದೇಶಕರನ್ನು, ಚಿತ್ತಾಪುರ ತಾಲೂಕಿಗೆ ಸಹಕಾರ ಸಂಘಗಳ ಉಪ ನಿಬಂಧಕರನ್ನು ಹಾಗೂ ಚಿಂಚೋಳಿ ತಾಲೂಕಿಗೆ ಕೃಷಿ ಮಾರಾಟ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಜಿಲ್ಲಾ ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ, ಸಹಕಾರ, ಕಂದಾಯ ನಿರೀಕ್ಷಕರನ್ನು ಮತ್ತು ಅಧಿಕಾರಿಗಳನ್ನು ಆಯಾ ತಾಲೂಕಿನಲ್ಲಿ ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ.
ನೇಮಕಗೊಂಡ ನೋಡಲ್ ಅಧಿಕಾರಿಗಳು ತೊಗರಿ ಖರೀದಿ ಕೇಂದ್ರಕ್ಕೆ ನಿಯಮಿತವಾಗಿ ಭೇಟಿ ನೀಡಿ ಖರೀದಿ ಪ್ರಕ್ರಿಯೆಯನ್ನು ಪರಿಶೀಲಿಸಬೇಕು. ನೋಡಲ್ ಅಧಿಕಾರಿಗಳು ಸರ್ಕಾರದ ನಿರ್ದೇಶನಗಳಂತೆ ಏಜೆನ್ಸಿಯವರು ರೈತರಿಂದ ತೊಗರಿ ಖರೀದಿ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನೋಡಲ್ ಅಧಿಕಾರಿಗಳು ತೊಗರಿ ಖರೀದಿ ಕೇಂದ್ರಗಳಲ್ಲಿ ಅವ್ಯವಹಾರ ಹಾಗೂ ಇನ್ನಿತರ ಸಮಸ್ಯೆಗಳು ಉದ್ಭವಿಸಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ನೋಡಲ್ ಅಧಿಕಾರಿಗಳ ಗಮನಕ್ಕೆ ತರಬೇಕು. ನೋಡಲ್ ಅಧಿಕಾರಿಗಳು ತಪಾಸಣೆ ಕೈಗೊಂಡು ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು.
ಖರೀದಿ ಕೇಂದ್ರಗಳಲ್ಲಿ ಕೃಷಿ ಉತ್ಪನ್ನದ ಸರಿಯಾದ ತೂಕ, ಅಧಿಕೃತ ಪಟ್ಟಿ ನೀಡುವಿಕೆ, ಯಾವುದೇ ಅನಧಿಕೃತ ಧಾನ್ಯ ಪಡೆಯದೆ ಇರುವುದು, ರೈತರಿಂದ ಯಾವುದೇ ರೀತಿಯ ಹಣ ಪಡೆಯುವಿಕೆ ಇವುಗಳನ್ನು ಪರಿಶೀಲಿಸಿ ವರದಿ ನೀಡಬೇಕು. ಜಿಲ್ಲಾ ನೋಡಲ್ ಅಧಿಕಾರಿಗಳು ಪ್ರತಿ 3 ದಿನಗಳಿಗೊಮ್ಮೆ ಲಿಖಿತವಾಗಿ ಅವರವರ ವ್ಯಾಪ್ತಿಗೊಳಪಡುವ ಖರೀದಿ ಕೇಂದ್ರಗಳ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವಿಕಲಚೇತನರ ಬಸ್‍ಪಾಸ್ ಅರ್ಜಿಗೆ ಸಹಿ ಪಡೆಯಲು ದಿನಾಂಕ ನಿಗದಿ
***********************************************************
ಕಲಬುರಗಿ,ಜ.05.(ಕ.ವಾ.)-ವಿಕಲಚೇತನರ ಬಸ್‍ಪಾಸ್ ನವೀಕರಣಕ್ಕಾಗಿ ಬಸ್‍ಪಾಸ್ ಅರ್ಜಿ ನಮೂನೆ ಮೇಲೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಸಹಿ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ದಿನಾಂಕವನ್ನು ನಿಗದಿಪಡಿಸಿರುತ್ತಾರೆ. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಈ ಕೆಳಕಂಡ ದಿನಾಂಕಗಳಂದು ಆಯಾ ತಾಲೂಕು ಪಂಚಾಯಿತಿಗೆ ಭೇಟಿ ನೀಡಿ ದೃಢೀಕರಣ ಮಾಡಿಕೊಡಲಿದ್ದು,. ಆಯಾ ದಿನಾಂಕಗಳಂದು ವಿಕಲಚೇತನರು ಉಪಸ್ಥಿತರಿರಬೇಕೆಂದು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಜನವರಿ 9ರಂದು ಅಫಜಲಪುರ ತಾಲೂಕು, ಜನವರಿ 11ರಂದು ಆಳಂದ, ಜನವರಿ 12ರಂದು ಚಿತ್ತಾಪುರ, ಜನವರಿ 16ರಂದು ಚಿಂಚೋಳಿ, ಜನವರಿ 17ರಂದು ಸೇಡಂ, ಜನವರಿ 18ರಂದು ಜೇವರ್ಗಿ ಹಾಗೂ ಜನವರಿ 19 ಹಾಗೂ 20ರಂದು ಕಲಬುರಗಿಗೆ ಭೇಟಿ ನೀಡುವರು. ಮೇಲ್ಕಂಡ ದಿನಾಂಕಗಳಂದು ಸಹಿ ಮಾಡಿಸಿಕೊಳ್ಳಲು ಆಗದೇ ಇರುವ ವಿಕಲಚೇತನರು ಜನವರಿ 22 ಮತ್ತು 23ರಂದು ಕಲಬುರಗಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಬಂದು ಸಹಿ ಮಾಡಿಸಿಕೊಂಡು ಹೋಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ ನಿವಾಸ ಯೋಜನೆ:
***************************************
ಫಲಾನುಭವಿಗಳು ದಾಖಲೆ ಸಲ್ಲಿಕೆಗೆ ಸೂಚನೆ
***************************************
ಕಲಬುರಗಿ,ಜ.05.(ಕ.ವಾ.)-ಕಲಬುರಗಿ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ ನಿವಾಸ ಯೋಜನೆಯಡಿ 2017-18ನೇ ಸಾಲಿಗೆ ಬೇಡಿಕೆ ಮೇಲೆ ಮನೆ ಅರ್ಜಿ ಸಲ್ಲಿಸಿರುವ/ಸಲ್ಲಿಸಬೇಕಾಗಿರುವ ಫಲಾನುಭವಿಗಳು ತಕ್ಷಣ ಸಂಬಂಧಪಟ್ಟ ಗ್ರಾಮ ಪಂಯಿತಿಗಳಿಗೆ ಭೇಟಿ ನೀಡಿ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕೆಂದು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಕಾಂತ ಜೇವಣಗಿ ತಿಳಿಸಿದ್ದಾರೆ.
ಫಲಾನುಭವಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರದ ಆರ್.ಡಿ. ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಫಲಾನುಭವಿಯ ಮನೆ ನಿರ್ಮಿಸಿಕೊಳ್ಳಬೇಕಾಗಿರುವ ನಿವೇಶನ ಖಾತಾ/ ಸರ್ವೇ ನಂಬರ್‍ಗಳ ದಾಖಲೆಗಳನ್ನು ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿ 18-19ರಂದು ಹತ್ತನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ
**************************************************************
ಕಲಬುರಗಿ,ಜ.05.(ಕ.ವಾ.)-ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ದಶಮಾನೋತ್ಸವ ಸಮ್ಮೇಳನ ಅಂಗವಾಗಿ “ಮಾನವಕುಲದ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ವಿಷಯ ಕುರಿತು ದಶಮಾನೋತ್ಸವ ಸಮ್ಮೇಳವನ್ನು ಜನವರಿ 18 ಮತ್ತು 19ರಂದು ಬೆಂಗಳೂರಿನ ಯಲಹಂಕದಲ್ಲಿರುವ ರೇವಾ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಈ ಸಮ್ಮೇಳನದ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಲು ಮತ್ತು ಸಂಶೋಧನಾ ಸಾರಾಂಶವನ್ನು ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ. ಸಮ್ಮೇಳದ ಕುರಿತು ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‍ಸೈಟ್ ತಿತಿತಿ.ಞsಣಚಿಛಿoಟಿಜಿeಡಿeಟಿಛಿe.ಛಿom ನ್ನು ಸಂಪರ್ಕಿಸಬಹುದಾಗಿದೆ. ಭತಿ ಮಾಡಿದ ಅರ್ಜಿಗಳನ್ನು ಇ-ಮೇಲ್ ಮೂಲಕ ಞsಣಚಿಡಿevಚಿ18@gmಚಿiಟ.ಛಿom ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಎ.ಎಂ. ರಮೇಶ ಅವರ ಮೊಬೈಲ್ ಸಂಖ್ಯೆ 9845258894ನ್ನು ಹಾಗೂ ಅಕಾಡೆಮಿ ದೂರವಾಣಿ ಸಂಖ್ಯೆ 080-26711160ಸಂಪರ್ಕಿಸಲು ಕೋರಲಾಗಿದೆ.

ಜನವರಿ 6ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**********************************************
ಕಲಬುರಗಿ,ಜ.05.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ಜನವರಿ 6ರಂದು ಕಲಬುರಗಿ ನಗರದ 11ಕೆ.ವಿ. ಶರಣನಗರ, ರಾಮಮಂದಿರ ಹಾಗೂ ಶಾಂತಿನಗರ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. ವಿದ್ಯುತ್ ವ್ಯತ್ಯಯ ಉಂಟಾಗುವ ಫೀಡರ್ ವ್ಯಾಪ್ತಿಯ ಪ್ರದೇಶಗಳ ವಿವರ ಇಂತಿದೆ.
11 ಕೆ.ವಿ. ಶರಣ ನಗರ ಫೀಡರ್: ಸುಂದರ ನಗರ, ಬಾಪು ನಗರ, ಬಾಬ್‍ಹೌಸ್, ಬಿಗ್ ಬಜಾರ, ಅಥರ್ ಕಂಪೌಂಡ್, ಎಸ್.ಟಿ.ಬಿ.ಟಿ. ಆಫೀಸ್, ರುಕಮ್ ಕಾಲೇಜ್, ಗಾಜೀಪುರ, ವಿದ್ಯಾನಗರ, ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣ, ತಿರಂದಾಸ, ಭೀಮ ನಗರ, ಇ.ಎಸ್.ಆಯ್. ಆಸ್ಪತ್ರೆ ಸೇಡಂ ರಸ್ತೆ, ಇನಕಮ್ ಟ್ಯಾಕ್ಸ್ ಕಚೇರಿ, ಪಿ.ಎಲ್.ಡಿ.ಬ್ಯಾಂಕ್, ಪೋಲಿಸ್ ಭವನ, ಪೃಥ್ವಿರಾಜ್ ಟಿ.ಸಿ, ಗೋಲ್ಲರ್ ಗಲ್ಲಿ, ಜಗತ್ ಬಡಾವಣೆ, ಆದಿತ್ಯ ಹೋಟೆಲ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು
11 ಕೆ.ವಿ ರಾಮಮಂದಿರ ಫೀಡರ್: ಸದಾಶಿವನಗರ, ರಾಮಮಂದಿರ, ಪಿ ಆಂಡ್ ಟಿ, ನವಣಿ ಲೇಔಟ್, ,ದೇವಾನಗರ, ಓಜಾó ಕಾಲೋನಿ, ಆರ್.ಟಿ ನಗರ, ಸ್ವಾಮಿ ವಿವೇಕಾಂದ ನಗರ, ಸಾಯಿ ಮಂದಿರ, ಕರುಣೇಶ್ವರ ನಗರ, ರಾಜಮಹಲ್ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು
11 ಕೆ.ವಿ.ಶಾಂತಿ ನಗರ ಫೀಡರ್: ಎಂ.ಎಸ್.ಕೆ ಮಿಲ್, ಎಂ.ಎಸ್.ಕೆ.ಮಿಲ್ ಗೇಟ್, ಖಾದ್ರಿ ಚೌಕ್, ಮಹ್ಮದಿ ಚೌಕ್, ಗಾಲಿಬ್ ಕಾಲೋನಿ, ವೆಂಕಟೇಶ್ವರ ಗುಡಿ (ಎನ್.ಆರ್. ಕಾಲೋನಿ), ಅಫಜಲಪುರ ಕ್ರಾಸ್ ಪ್ರದೇಶ, ಶಾಂತಿನಗರ, ವಿದ್ಯಾನಗರ, ವಡ್ಡರ ಗಲ್ಲಿ, ಬೋರಾಬಾಯಿ ನಗರ, ಬಸವ ನಗರ, ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಲೋಕಸಭಾ ಸದಸ್ಯ ವೀರಪ್ಪ ಮೊಯಿಲಿ ಪ್ರವಾಸ
ಕಲಬುರಗಿ,ಜ.05.(ಕ.ವಾ.)-ಲೋಕಸಭೆ ಸಂಸದೀಯ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯರಾದ ಡಾ. ಎಂ. ವೀರಪ್ಪ ಮೊಯಿಲಿ ಅವರು ಹೈದ್ರಾಬಾದಿನಿಂದ ರಸ್ತೆ ಮೂಲಕ ಜನವರಿ 7ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಗೆ ಆಗಮಿಸಿ, ಕಲಬುರಗಿಯಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಂಜೆ 7 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಹೈದ್ರಾಬಾದಿಗೆ ಪ್ರಯಾಣಿಸುವರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷರ ಪ್ರವಾಸ
ಕಲಬುರಗಿ,ಜ.05.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ ಅವರು ಕೆ.ಕೆ. ಎಕ್ಸ್‍ಪ್ರೆಸ್ ರೈಲಿನ ಮೂಲಕ ಜನವರಿ 6ರಂದು ಬೆಳಿಗ್ಗೆ 5.30 ಗಂಟೆಗೆ ಕಲಬುರಗಿಗೆ ಅಗಮಿಸುವರು.
ಅಧ್ಯಕ್ಷರು ಜನವರಿ 6 ಹಾಗೂ 7ರಂದು ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಗುರುಮಿಠಕಲ ಕ್ಷೇತ್ರದ ಗಡಿ ಭಾಗಗಳಿಗೆ ಭೇಟಿ ಹಾಗೂ ಕಾಮಗಾರಿ ಪರಿವೀಕ್ಷಣೆ ಮಾಡಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಜನವರಿ 7ರಂದು ಕಲಬುರಗಿಯಿಂದ ಯಾದಗಿರಿ ಪ್ರಯಾಣಿಸಿ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗುವ ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.


ಮಮ್ಮಿ-ಡ್ಯಾಡಿ ಸಂಸ್ಕøತಿ ಕನ್ನಡಕ್ಕೆ ಮಾರಕ
*****************************************
--- ಡಾ.ನೀಲಮ್ಮ ಕತ್ನಳ್ಳಿ
ಕಲಬುರಗಿ,ಜ.05.(ಕ.ವಾ.)- ಇಂಗ್ಲೀಷ್ ವ್ಯಾಮೋಹದ ಪರಿಣಾಮ ಹುಟ್ಟಿಕೊಂಡಿರುವ ಮಮ್ಮಿ-ಡ್ಯಾಡಿ ಸಂಸ್ಕøತಿ ಕನ್ನಡ ನಾಡು ಮತ್ತು ನುಡಿಗೆ ಮಾರಕವಾಗಿದೆ ಎಂದು ಚಿತ್ತಾಪುರ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಡಾ.ನೀಲಮ್ಮ ಕತ್ನಳ್ಳಿ ಹೇಳಿದರು.
ಅವರು ಶುಕ್ರವಾರ ನಾಗಾವಿಯ ನಾಡು ಚಿತ್ತಾಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ ಚಿತ್ತಾಪುರ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆಯ ಸಮ್ಮೇಳಾನಧ್ಯಕ್ಷೆ ಭಾಷಣದಲ್ಲಿ ಮಾತನಾಡಿದರು. ಇಂಗ್ಲೀಷ್ ಮಧ್ಯಮದಲ್ಲಿ ಮಕ್ಕಳು ಓದಿದರೆ ಮಾತ್ರ ಭವಿಷ್ಯವಿದೆ ಎಂದು ಜನ ಭ್ರಮೆಯಲ್ಲಿರುವ ಕಾರಣ ಕನ್ನಡ ಶಾಲೆಗಳು ಮಕ್ಕಳ ಸಂಖ್ಯೆಯ ಕೊರತೆ ಎದುರಿಸುತ್ತಿದೆ. ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸುವ ಮೂಲಕ ನಾಡು ನುಡಿಯನ್ನು ಬೆಳೆಸಿ ರಕ್ಷಿಸುವುದು ಪ್ರತಿ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದರು
ಹೆಣ್ಣು ಅಬಲೆ, ಭೋಗದ ವಸ್ತು ಎಂದು ಭಾವಿಸಿದ್ದ ಪುರುಷರ ಪೂರ್ಣದೃಷ್ಠಿಯನ್ನು ಹನ್ನೇರಡೆ ಶತಮಾನದಲ್ಲಿ ಬಸವಾದಿ ಶರಣರು ಬದಲಿಸಲು ಪ್ರಯತ್ನಿಸಿ ಮಹಿಳೆಯರಿಗೆ ಗೌರವ ನೀಡಿದರು, ಅದು ಮುಂದುವರೆಯಲಿಲ್ಲ. 21ನೇ ಶತಮಾನದಲ್ಲಿ ಪುರುಷರಂತೆ ಮಹಿಳೆಯು ಸರಿ ಸಮಾನವಾಗಿ ಉದ್ಯೋಗ ಶಿಕ್ಷಣ ಪಡೆದು ಸ್ವಾಭಿಮಾನ ಬದುಕು ಸಾಗಿಸುತ್ತಿದ್ದರು ಸಹ ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾಳೆ. ವಿಜಯಪುರ ಶಾಲಾ ಬಾಲಕಿ ಅತ್ಯಾಚಾರ ಪ್ರಕರಣ ಉಲ್ಲೇಖಿಸಿದ ಅವರು ಇತ್ತೀಚೆಗೆ ಮಹಿಳೆ ಮತ್ತು ಚಿಕ್ಕ ಬಾಲಕೀಯರ ಮೇಲೆ ಆಗುತ್ತಿರುವ ಶೋಷಣೆ, ಅತ್ಯಾಚಾರದ ಪ್ರಕರಣದಲ್ಲಿ ಆರೋಪಿಗಳೀಗೆ ಶಿಕ್ಷೆಯಾಗುತ್ತಿಲ್ಲ ಎಂದು ವಿಷಾಧಿಸಿ ಇಂತಹ ಘಟನೆ ಮರುಕಳಿಸದಂತೆ ತಪ್ಪಿಸ್ಥರಿಗೆ ಕಠೀಣವಾದ ಶಿಕ್ಷೆ ನೀಡುವಂತಾಗಬೇಕು ಹಾಗೂ ಆತ್ಮರಕ್ಷಣೆ ಕೈಗೊಳ್ಳಲು ಪ್ರತಿ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಚಿತ್ತಾಪೂರ ತಾಲೂಕು ಸರ್ವಧರ್ಮಗಳ ಸಾಮರಸ್ಯದ ನೆಲ, ಸಂತ-ಶರಣರು, ಸೂಫಿ-ಬಿಕ್ಕುಗಳನ್ನು ಒಳಗೊಂಡಿರುವ ತಾಲೂಕು ಸೌಹಾರ್ದ ಬದುಕಿಗೆ ಮುನ್ನುಡಿ ಬರೆದಿದೆ. ದೇಶದ ಬೆನ್ನೆಲುಬಾಗಿರುವ ರೈತನ ಸ್ಥಿತಿ ಕಷ್ಠಕರವಾಗಿದೆ. ಬೆಳೆಗೆ ನ್ಯಾಯಯುತ ಬೆಲೆ ಸಿಗದ ಪರಿಣಾಮ ಆತ್ಮಹತ್ಯೆಗೆ ರೈತ ಶರಣಾಗುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಈ ಭಾಗದ ಪ್ರಮುಖ ಬೆಳೆಯಾದ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಪ್ರತಿ ರೈತನಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿಸುವ ಮಿತಿಯನ್ನು ಸರ್ಕಾರವು ಹೆಚ್ಚಿಸುವ ಮೂಲಕ ರೈತ ಸಮುದಾಯದ ಹಿತ ಕಾಯಬೇಕೆಂದು ಅವರು ನುಡಿದರು.
ಸಾಹಿತ್ಯ ಸಮ್ಮೇಳನವನ್ನು ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಆಶಯ ಭಾಷಣ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಹೆಚ್.ಟಿ.ಪೋತೆ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು, ರಾವೂರಿನ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಭರತನೂರು ವಿರಕ್ತಮಠದ ಪೂಜ್ಯಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳು, ಪೂಜ್ಯ ಭಂತೆ ಜ್ಞಾನಪ್ರಕಾಶ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ನಾಗಾವಿ ನಾಡು, ಕಾವ್ಯ ಸಿಂಚನ, ಕಾರಂತ ಲೋಕ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ನಿಕಟ ಪೂರ್ವ ತಾಲೂಕು ಸಮ್ಮೇಳನಾಧ್ಯಕ್ಷರಾದ ವಿಶ್ವನಾಥ ಮಾಸ್ತರ ಬೆಳಗುಂಪ, ನಾಗಯ್ಯ ಸ್ವಾಮಿ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಸದಸ್ಯ ಮಾಪಣ್ಣ ಗಂಜಗೇರಿ, ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಸದಸ್ಯರಾದ ಶಿವಾನಂದ ಪಾಟೀಲ, ರಾಜೇಶ ಗುತ್ತೇದಾರ, ಶಿವರುದ್ರ ಬೇನೂರ, ಚಿತ್ತಾಪುರ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊತಿನಮಡಿ, ಉಪಾಧ್ಯಕ್ಷ ಮಹ್ಮದ ರಸೂಲ ಮುಸ್ತಫಾ, ತಾಲೂಕು ಪಂಚಾಯತ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಎ.ಪಿ.ಎಂ.ಸಿ ಅಧ್ಯಕ್ಷ ಬಸವರಾಜ ಸಜ್ಜನಶೆಟ್ಟಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಲೂದ, ಮುಖಂಡರಾದ ಭೀಮಣ್ಣ ಸಾಲಿ, ಗೋಪಾಲ ರಾಠೋಡ, ಜುಂಬಣ್ಣಾ ಪೂಜಾರಿ, ಅನೀಲ ಇಂಗಿನಶೆಟ್ಟಿ, ಮುಕ್ತಾರ ಪಟೇಲ, ಬಿ.ಇ.ಓ ದೊಡ್ಡರಂಗಪ್ಪ, ಡಿ.ವೈ.ಎಸ್.ಪಿ ಕೆ.ಬಸವರಾಜ, ಸೇರಿದಂತೆ ವಿವಿಧ ತಾಲೂಕಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ಅಸಂಖ್ಯಾತ ಸಾಹಿತಿಗಳು, ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶಾಲಾ ಮಕ್ಕಳಿಂದ ನಡೆದ ಮಲ್ಲಕಂಭ ಪ್ರದರ್ಶನ ಮೈನವಿರೇಳಿಸುವಂತಿತ್ತು.
ಚಿತ್ತಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ನಿರೂಪಿಸಿದರು.
ಇದಕ್ಕು ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ನಾಗಾವಿ ಪ್ರಧಾನ ವೇದಿಕೆಗೆ ಸಂಪಣ್ಣಗೊಂಡಿತ್ತು.

ನಾಡಿನ ನೆಲ-ಜಲ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
******************************************
ಕಲಬುರಗಿ,ಜ.05(ಕ.ವಾ.)-ನಾಡಿನ ಸಂಸೃತಿ, ನೆಲ-ಜಲ, ನಾಡು-ನುಡಿ ರಕ್ಷಿಸಿ ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯವನ್ನು ಕೊಡುಗೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಐ.ಟಿ.ಬಿ.ಟಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಹೇಳಿದರು.
ಅವರು ಶುಕ್ರವಾರ ಚಿತ್ತಾಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ನಾಡಿನ ಮೊಟ್ಟ ಮೊದಲ ಕವಿರಾಜ ಮಾರ್ಗ ಕೃತಿ ನೀಡಿರುವ ಹೈ.ಕ ಭಾಗದ ಈ ನೆಲ ಐತಿಹಾಸಿಕವಾಗಿ ವಿಶ್ವದಲ್ಲಿಯೇ ಶ್ರಿಮಂತ ನಾಡಾಗಿದೆ. ನಮ್ಮ ಭಾಗದಲ್ಲಿ ಅನೇಕ ಐತಿಹಾಸಿಕ ಸ್ಥಳಗಳು ಇವೆ. ಆದರೆ ಅವುಗಳನ್ನು ಸೂಕ್ತ ರೀತಿಯಲ್ಲಿ ಪ್ರಚಾರ ಕೊರತೆಯಾಗಿ ಅವುಗಳನ್ನು ಮರೆಯುತ್ತಿದ್ದೇವೆ. ಇತಿಹಾಸವನ್ನು ತಿಳಿಯುವಲ್ಲಿ ಜನರು ಹಿಂದೆ ಇದಿದ್ದು, ಇಂತಹ ಸಮ್ಮೇಳದ ಮೂಲಕ ಮಕ್ಕಳಿಗೆ ಇತಿಹಾಸವನ್ನು ತಿಳಿಸಬೇಕಾಗಿದೆ. ಸನ್ನತಿ, ಮಳಖೇಡ್, ನಾಗಾವಿಯನ್ನು ಪ್ರವಾಸಿ ತಾಣವಾಗಿ ಮಾಡಲು ಈಗಾಗಲೆ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಸುಮಾರು 25 ಸಾವಿರ ಉಪಜಾತಿ, ವಿವಿಧ ಧರ್ಮಗಳನ್ನು ಹೊಂದಿರುವ ಈ ದೇಶ ಯಾವುದೇ ಧರ್ಮ ಗ್ರಂಥದ ಮೇಲೆ ನಡೆಯುತ್ತಿಲ್ಲ, ಬದಲಾಗಿ ಡಾ.ಅಂಬೇಡ್ಕರ್ ರಚಿಸಿದ ಜಾತ್ಯಾತೀತ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿದೆ. ಇತ್ತೀಚೆಗೆ ಕೆಲವರು ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂದಿರುವುದು ಪ್ರಜಾಸತ್ತಾತ್ಮಕ್ಕೆ ಧಕ್ಕೆಗೆ ಕಾರಣವಾಗುತ್ತಿದ್ದು, ಇದು ಸರಿಯಲ್ಲಾ ಎಂದು ವಿಷಾದ ವ್ಯಕ್ತಪಡಿಸಿದರು.
ಲೇಖಕರು ಪ್ರಗತಿಪರ ಚಿಂತಕರು ಕ್ರಾಂತಿಕಾರರಾಗಬೇಕು. ಸಮಾಜದ ಜನರಲ್ಲಿ ಬೇರೂರಿವ ಅಂಧಕಾರ, ಅಂಧವಿಶ್ವಾಸವನ್ನು ತಮ್ಮ ಲೇಖನಿ ಮೂಲಕ ಹೋಗಲಾಡಿಸಲು ಪ್ರಯತ್ನಿಸಬೇಕು. ವ್ಯಕ್ತಿ ಪೂಜೆಯನ್ನು ಬಿಟ್ಟು ತತ್ವ ಪೂಜೆ ಮಾಡಿದ್ದೆ ಆದಲ್ಲಿ, ಬುದ್ಧ, ಬಸವ, ಅಂಬೇಡಕರ್ ಕಂಡಿರುವ ಪ್ರಬುದ್ಧ ಭಾರತ ಮತ್ತು ಸುವರ್ಣ ಕರ್ನಾಟಕ ನಿರ್ಮಾಣ ಸಾಧ್ಯವಾಗುತ್ತದೆ ಎಂದರು ತಿಳಿಸಿದರು.
ಕನ್ನಡ ನಾಡು-ನುಡಿ ಬಗ್ಗೆ ಬೆಳಕು ಚೆಲ್ಲುವ ಇಂತಹ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆಯಬೇಕು. ಸಮ್ಮೇಳನದ ವಿಚಾರವಂತ ಸಂಗಮವಾಗಿದೆ. ಇಲ್ಲಿಂದ ಉತ್ತಮ ಆಲೋಚನೆಗಳು ಸಮಾಜಕ್ಕೆ ಹೋಗಬೇಕಾಗಿದೆ. ಇಲ್ಲಿನ ಸಾಹಿತಿಗಳು, ನಾಟಕಕಾರ ಬೇಡಿಕೆಯಂತೆ ಮುಂದಿನ ವರ್ಷದ ಒಳಗಾಗಿ ರಂಗಮಂದಿರವನ್ನು ನಿರ್ಮಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಯನ ಸಂಸ್ಥೆಯ ಮುಖ್ಯಸ್ಥ ಡಾ. ಎಚ್.ಟಿ.ಪೋತೆ ಮಾತನಾಡಿ ಸಾಹಿತಿ ತಾಯಿ ಗುಣವನ್ನು ಹೊಂದಿರಬೇಕು. ಲೇಖಕರು ಸಮಾಜದ ಹಿತಕ್ಕಾಗಿ ಮೌಢ್ಯತೆಯನ್ನು ಹೋಗಲಾಡಿಸುವಂತ ಮಾಧ್ಯಮದ ರೀತಿಯಲ್ಲಿ ಕೆಲಸ ಮಾಡಬೇಕು. ಹೈ.ಕ ಭಾಗವು ಭಾರತದಲ್ಲಿಯೇ ವಿಶೇಷವಾದ ನೆಲ. ಬೌದ್ದರು, ಲಿಂಗಾಯತ, ತತ್ಪಪದಕಾರರು ಸಂಸ್ಕøತಿಗೆ ಹೆಸರುವಾಸಿಯಾಗಿದ್ದು, ವೈಚಾರಿಕ ಪರಂಪರೆಯಲ್ಲಿ ನಮ್ಮ ಭಾಗ ಬೆಳೆಯಬೇಕಾದ ಅವಶ್ಯಕತೆ ಇದೆ ಎಂದರು.
ಸಮ್ಮೇಳನಾಧ್ಯಕ್ಷೆ ಡಾ.ನೀಲಮ್ಮ ಕತ್ನಳ್ಳಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಮಾಡಿದರು. ನಂತರ ಸಚಿವರು ಚಿತ್ತಾಪುರ ಮತಕ್ಷೇತ್ರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೈಗೊಳ್ಳಲಾಗಿರುವ ವಿಶೇಷ ಘಟಕ ಯೋಜನ ಹಾಗೂ ಗಿರಿಜನ ಉಪಯೋಜನೆಯಡಿ 458 ಲಕ್ಷ ವೆಚ್ಚದ 26 ಕಾಮಗಾರಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ರಸ್ತೆ ದುರಸ್ತಿಯ 197 ಲಕ್ಷ ವೆಚ್ಚದ 7 ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಆಶಯ ಭಾಷಣ ಮಾಡಿದರು. ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು, ರಾವೂರಿನ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಭರತನೂರು ವಿರಕ್ತಮಠದ ಪೂಜ್ಯಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮಿಗಳು, ಪೂಜ್ಯ ಭಂತೆ ಜ್ಞಾನಪ್ರಕಾಶ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ನಾಗಾವಿ ನಾಡು, ಕಾವ್ಯ ಸಿಂಚನ, ಕಾರಂತ ಲೋಕ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ನಿಕಟ ಪೂರ್ವ ತಾಲೂಕು ಸಮ್ಮೇಳನಾಧ್ಯಕ್ಷರಾದ ವಿಶ್ವನಾಥ ಮಾಸ್ತರ ಬೆಳಗುಂಪ, ನಾಗಯ್ಯ ಸ್ವಾಮಿ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಸದಸ್ಯ ಮಾಪಣ್ಣ ಗಂಜಗೇರಿ, ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಸದಸ್ಯರಾದ ಶಿವಾನಂದ ಪಾಟೀಲ, ರಾಜೇಶ ಗುತ್ತೇದಾರ, ಶಿವರುದ್ರ ಬೇನೂರ, ಚಿತ್ತಾಪುರ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊತಿನಮಡಿ, ಉಪಾಧ್ಯಕ್ಷ ಮಹ್ಮದ ರಸೂಲ ಮುಸ್ತಫಾ, ತಾಲೂಕು ಪಂಚಾಯತ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಎ.ಪಿ.ಎಂ.ಸಿ ಅಧ್ಯಕ್ಷ ಬಸವರಾಜ ಸಜ್ಜನಶೆಟ್ಟಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಲೂದ, ಮುಖಂಡರಾದ ಭೀಮಣ್ಣ ಸಾಲಿ, ಗೋಪಾಲ ರಾಠೋಡ, ಜುಂಬಣ್ಣಾ ಪೂಜಾರಿ, ಅನೀಲ ಇಂಗಿನಶೆಟ್ಟಿ, ಮುಕ್ತಾರ ಪಟೇಲ, ಬಿ.ಇ.ಓ ದೊಡ್ಡರಂಗಪ್ಪ, ಡಿ.ವೈ.ಎಸ್.ಪಿ ಕೆ.ಬಸವರಾಜ, ಸೇರಿದಂತೆ ವಿವಿಧ ತಾಲೂಕಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಪದಾಧಿಕಾರಿಗಳು, ಅಸಂಖ್ಯಾತ ಸಾಹಿತಿಗಳು, ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಶಾಲಾ ಮಕ್ಕಳಿಂದ ನಡೆದ ಮಲ್ಲಕಂಭ ಪ್ರದರ್ಶನ ಮೈನವಿರೇಳಿಸುವಂತಿತ್ತು.
ಚಿತ್ತಾಪುರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ನಿರೂಪಿಸಿದರು.
ಇದಕ್ಕು ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ನಾಗಾವಿ ಪ್ರಧಾನ ವೇದಿಕೆಗೆ ಸಂಪಣ್ಣಗೊಂಡಿತ್ತು.

ಜನವರಿ 22ರಂದು ಸರ್ಕಾರಿ ನೌಕರರ ಕ್ರೀಡಾಕೂಟ-ಸಾಂಸ್ಕøತಿಕ ಸ್ಪರ್ಧೆ
*************************************************************
ಕಲಬುರಗಿ,ಜ.05.(ಕ.ವಾ.)-ಜಿಲ್ಲಾಢಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ 2017-18ನೇ ಸಾಲಿನ ಕಲಬುರಗಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿ ಸ್ಪರ್ಧೆಗಳನ್ನು ಜನವರಿ 22ರಂದು ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472-268637 ಅಥವಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ಮೊಬೈಲ್ ಸಂಖ್ಯೆ 9972767607ನ್ನು ಸಂಪರ್ಕಿಸಬೇಕೆಂದು ಕಲಬುರಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:

Post a Comment