GULBARGA VARTHE

GULBARGA VARTHE

Tuesday, 30 January 2018

NEWS AND PHOTO DATE: 30--1--2018

ತೆಲಂಗಾಣದ ಬಾಂಧವ್ಯದಿಂದ ಗಡಿ ಭಾಗದಲ್ಲಿ ಅಭಿವೃದ್ಧಿ
ಕಲಬುರಗಿ,ಜ.30.(ಕ.ವಾ.)-ರಾಜ್ಯದ ನೆರೆಯ ತೆಲಂಗಾಣ ರಾಜ್ಯದ ಸಹಾಯ ಹಾಗೂ ಸಹಕಾರದಿಂದ ಸೇಡಂ ಮತಕ್ಷೇತ್ರದ ಗಡಿ ಭಾಗದ ಹಲಕೋಡ ಗ್ರಾಮದ ಹತ್ತಿರ ಸೇತುವೆ ನಿರ್ಮಿಸಲಾಗಿದೆ ಮತ್ತು ಜಟ್ಟೂರ ಹತ್ತಿರ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಮಂಗಳವಾರ ಸೇಡಂ ಮತಕ್ಷೇತ್ರದ ಹಲಕೋಡ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಅಡ್ಡಲಾಗಿ ನೂತನವಾಗಿ 5.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆ ಉದ್ಘಾಟಿಸಿ ಮಾತನಾಡಿ, ನಮ್ಮ ಸರ್ಕಾರ ರಚನೆಯಾದ ತಕ್ಷಣ ಹಲಕೋಡ ಭಾಗದ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿಸಲು ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಲಾಗಿತ್ತು. ಸಧ್ಯ ಹಲಕೋಡ ಸೇತುವೆಯಿಂದ ತೆಲಂಗಾಣದ ವಿಕರಾಬಾದಿಗೆ ಸುಲಭ ರಸ್ತೆ ಸಂಪರ್ಕ ದೊರೆಯಲಿದೆ ಎಂದರು.
ಹಲಕೋಡ ಸೇತುವೆಯು ಶಾಶ್ವತವಾಗಿ ಬಾಳಿಕೆಯಾಗಲು ಸೇತುವೆಯ ಎರಡು ಪಕ್ಕದಲ್ಲಿ ರಕ್ಷಾ ಗೋಡೆ ಹಾಗೂ ಸೇತುವೆ ಮೇಲೆ ಇನ್ನೊಂದು ಪದರು ರಸ್ತೆ ನಿರ್ಮಿಸಲು ಸೂಚಿಸಲಾಗಿದೆ. ತೆಲಂಗಾಣ ಮತ್ತು ಕರ್ನಾಟಕ ರಾಜ್ಯ ಜೊತೆಗೂಡಿ ತೆಲಂಗಾಣಕ್ಕೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ ಇಂದ್ರಚೆಡ್-ಹಯ್ಯಾಳ, ಚಿತ್ರಸಾಲದಿಂದ ರಸ್ತೆ ನಿರ್ಮಿಸಲಾಗಿದೆ. ಅಡಕಿ-ಮೈಲೂರ ಸೇತುವೆ ಕೂಡ ನಿರ್ಮಿಸಲಾಗಿದೆ. 1.5 ಕೋಟಿ ರೂ. ವೆಚ್ಚದಲ್ಲಿ ಹಲಕೋಡದಿಂದ ತೆಲಂಗಾಣ ಗಡಿಯವರೆಗೆ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಸೇಡಂ ಮತ್ತು ಚಿಂಚೋಳಿ ಭಾಗಕ್ಕೆ ತೆಲಂಗಾಣದ ತಾಂಡೂರುನಿಂದ ಬಸ್ ಸೌಲಭ್ಯ ದೊರಕಿಸಲು ತೆಲಂಗಾಣದ ಸಚಿವರಿಗೆ ತಿಳಿಸಲಾಗಿದೆ. ತೆಲಂಗಾಣ ರಾಜ್ಯದ ಜೊತೆಗೆ ಅನೂನ್ಯ ಬಾಂಧವ್ಯ ಸಾಧಿಸಿ ಈ ಭಾಗದ ಎಲ್ಲ ಸಂಪರ್ಕ ರಸ್ತೆ ಮತ್ತು ಬ್ಯಾರೇಜ್‍ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಸರ್ಕಾರವು ರೈತರ ನೆರವಿಗಿದ್ದು, ರೈತರ 8000 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ, ಉದ್ದು, ಹೆಸರು ಬೇಳೆಗಳನ್ನು ಖರೀದಿಸಿದೆ. ಬಡವರು ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ, ವೃತ್ತಿಪರ ಕೋರ್ಸುಗಳು ಓದಲು 371(ಜೆ) ಸಹಕಾರಿಯಾಗಿದೆ. 371(ಜೆ) ಯಿಂದಾಗಿ ಈ ಭಾಗಕ್ಕೆ ಹೆಚ್ಚಿನ ಅನುದಾನ ದೊರೆತು ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದರು. 
ತೆಲಂಗಾಣ ಸರ್ಕಾರದ ಸಾರಿಗೆ ಸಚಿವ ಡಾ. ಪಿ. ಮಹೇಂದ್ರರೆಡ್ಡಿ ಮಾತನಾಡಿ, ತೆಲಂಗಾಣ ರಾಜ್ಯದಲ್ಲಿ ಸಾರಿಗೆ ಇಲಾಖೆಯಿಂದ ಒಟ್ಟು 1130 ಅಂತರರಾಜ್ಯ ಬಸ್ಸುಗಳು ಸಂಚರಿಸುತ್ತವೆ. ಇದರೊಂದಿಗೆ ಕರ್ನಾಟಕದ ಸೇಡಂ ಹಾಗೂ ಚಿಂಚೋಳಿ ಭಾಗಕ್ಕೂ ಬಸ್ ಸೇವೆ ಒದಗಿಸಲಾಗುವುದು. ತೆಲಂಗಾಣದಿಂದ ಕರ್ನಾಟಕ ಗಡಿಯವರೆಗೆ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕದೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿ ಎಲ್ಲ ರೀತಿಯಲ್ಲಿಯೂ ಸಚಿವರೊಂದಿಗೆ ಸಹಕರಿಸಲಾಗುವುದು. ಗಡಿ ಪ್ರದೇಶ ಅಭಿವೃದ್ಧಿಯಾದರೆ ಎರಡೂ ರಾಜ್ಯಗಳಿಗೆ ಪ್ರಯೋಜನವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಲರಾಂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಶರಣಪ್ಪ ಶಂಕರ, ರಾಜೇಶ ಗುತ್ತೇದಾರ, ಚಿಂಚೋಳಿ ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂಬದ, ಸೇಡಂ ಎ.ಪಿ.ಎಂ.ಸಿ. ಅಧ್ಯಕ್ಷ ಗುರುದತ್ತ ರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿಚ್ಚರೆಡ್ಡಿ ಪಾಟೀಲ, ತೆಲಂಗಾಣದ ಬಶಿರಾಬಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಯ ಪ್ರಸಾದ, ಗಣ್ಯರಾದ ರಮೇಶ ಮಾದಕ ತಾಂಡೂರ, ಸುಭಾಷಚಂದ್ರ ನಿಷ್ಠಿ, ಪ್ರಭಾಕರ ಕೋಕಟ, ನರೇಶ ಮಾದತ, ಸುದರ್ಶನರೆಡ್ಡಿ ಪಾಟೀಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಜಯ ದಶರಥ ಸಂಗನ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಗಡಿ ಭಾಗದಲ್ಲಿ ಬ್ಯಾರೇಜ್ ನಿರ್ಮಾಣದಿಂದ ಎರಡು ರಾಜ್ಯದ ರೈತರಿಗೆ ಅನುಕೂಲ 
ಕಲಬುರಗಿ,ಜ.30.(ಕ.ವಾ.)-ಸೇಡಂ ಮತಕ್ಷೇತ್ರದ ಜಟ್ಟೂರ ಹತ್ತಿರ ನಿರ್ಮಿಸಲಾಗುತ್ತಿರುವ ಬ್ರಿಜ್ ಕಂ ಬ್ಯಾರೇಜ್‍ನಿಂದಾಗಿ ತೆಲಂಗಾಣ ಮತ್ತು ರಾಜ್ಯದ ರೈತರಿಗೆ ಅನುಕೂಲವಾಗಲಿದ್ದು, ತೆಲಂಗಾಣ ಸರ್ಕಾರ ಇದಕ್ಕೆ ಸಮ್ಮತಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಮಂಗಳವಾರ ಜಟ್ಟೂರ ಹತ್ತಿರ ನೂತನವಾಗಿ 25 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬ್ಯಾರೇಜ್ ನಿರ್ಮಾಣದಿಂದಾಗಿ ಕಾಗಿಣಾ ನದಿಯಲ್ಲಿ 4 ಕಿ.ಮೀ. ವರೆಗೆ ನೀರು ನಿಲ್ಲಲಿದ್ದು, ಸುಮಾರು 1500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ರೈತರು ಇದರ ಪ್ರಯೋಜನ ಪಡೆಯಬೇಕು. ಬ್ರಿಜ್ ಕಂ ಬ್ಯಾರೇಜ್‍ನಿಂದಾಗಿ ಜೇವಣಗಿಗೆ ರಸ್ತೆ ಸಂಪರ್ಕ ಸಾಧ್ಯವಾಗಲಿದ್ದು, ಜೇವಣಗಿವರೆಗೆ ರಸ್ತೆ ನಿರ್ಮಾಣ ಮಾಡಲಾಗುವುದು. ಈ ಭಾಗಕ್ಕೆ ತೆಲಂಗಾಣದಿಂದ ಬಸ್ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಸರ್ಕಾರವು ಬಡವರ ಅಭಿವೃದ್ಧಿಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಮೈತ್ರಿ , ಮನಸ್ವಿನಿ, ವಿದ್ಯಾಸಿರಿ, ಪಶುಭಾಗ್ಯ, ಕೃಷಿ ಭಾಗ್ಯ ಮತ್ತಿತರ ಯೋಜನೆಗಳನ್ನು ಜಾರಿಗೆ ತಂದಿದೆ. ಒಂದು ಸಮೀಕ್ಷೆಯ ಪ್ರಕಾರ ಹೈದ್ರಾಬಾದ್ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ದಿಗೆ ರೂಪಿಸಲಾಗಿರುವ 371(ಜೆ) ಕಲಂ ನಿಂದಾಗುವ ಪ್ರಯೋಜನ ಕುರಿತು ಶೇ. 65 ರಷ್ಟು ಜನರಿಗೆ ಮಾಹಿತಿ ಇಲ್ಲ. ಎಲ್ಲರೂ ಈ ಕಲಂದಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಬೇಕು. ಬಡವರ ಮಕ್ಕಳು 371(ಜೆ) ದಿಂದಾಗಿ ಡಾಕ್ಟರ್, ಇಂಜಿನಿಯರ್ ಆಗುತ್ತಿದ್ದಾರೆ. ಈ ಭಾಗದಲ್ಲಿ ಖಾಲಿಯಿರುವ 30,000 ನೌಕರಿಗಳಲ್ಲಿ ಈಗಾಗಲೇ ಈ ಭಾಗದ 22,000 ಯುವಕರಿಗೆ ನೌಕರಿ ನೀಡಲಾಗಿದೆ. 10,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಸರ್ಕಾರವು ಈ ಭಾಗದ ಅಭಿವೃದ್ಧಿಗೆ 4500 ಕೋಟಿ ರೂ. ಅನುದಾನ ನೀಡಿದ್ದರಿಂದ ಅಭಿವೃದ್ಧಿ ವೇಗದಲ್ಲಿ ನಡೆದಿದೆ ಎಂದರು.
ತೆಲಂಗಾಣ ಸರ್ಕಾರದ ಸಾರಿಗೆ ಸಚಿವ ಡಾ. ಪಿ. ಮಹೇಂದ್ರರೆಡ್ಡಿ ಮಾತನಾಡಿ,  ಎರಡೂ ರಾಜ್ಯಗಳ ಗಡಿಯಲ್ಲಿರುವ ಕಾಗಿಣಾ ನದಿಗೆ ಬ್ಯಾರೇಜುಗಳು, ಚೆಕ್ ಡ್ಯಾಂಕ್‍ಗಳು ನಿರ್ಮಿಸುವುದರಿಂದ ಎರಡೂ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಕಾರಣ ಕಾಗಿಣಾ ನದಿಗೆ ಬ್ಯಾರೇಜುಗಳನ್ನು ನಿರ್ಮಿಸಲು ಕ್ರಮ ಜರುಗಿಸಲಾಗುವುದು. ತೆಲಂಗಾಣ ಸರ್ಕಾರವು ರೈತರಿಗೆ 24 ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದು, ಇದು ದೇಶದಲ್ಲೇ ಮಾದರಿಯಾಗಿದೆ. ಇದರಿಂದ ರೈತರು ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಅನುಕೂಲವಾಗಿದೆ. ಜೊತೆಗೆ ರೈತರಿಗೆ ಕೃಷಿ ಹೊಂಡ ಸಹಿತ ನಿರ್ಮಿಸಿಕೊಡಲಾಗುತ್ತಿದೆ. ಜಟ್ಟೂರ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದಿಂದ ತಾಂಡೂರವರೆಗೆ ರಸ್ತೆ ಸಂಪರ್ಕ ಪ್ರಾರಂಭವಾಗಲಿದ್ದು, ತಾಂಡೂರದಿಂದ ಬಸ್ ಸೌಲಭ್ಯ ಒದಗಿಸಲಾಗುವುದು. ಇದರಿಂದ  ತಾಂಡೂರನಲ್ಲಿರುವ ಮಾರುಕಟ್ಟೆಗೆ ಈ ಭಾಗದ ರೈತರು ಪ್ರಯಾಣಿಸಲು ಅನುಕೂಲವಾಗುವುದು. ಕರ್ನಾಟಕ ರಾಜ್ಯದ ಗಡಿಯಲ್ಲಿ ಯಾವುದೇ ಅಭಿವೃದ್ಧಿ ಮಾಡಲು ತೆಲಂಗಾಣದ ಪರವಾನಿಗೆ ಬೇಕಾದಲ್ಲಿ ಅದಕ್ಕೆ ಖಂಡಿತ ಸಕ್ರಿಯವಾಗಿ ಕ್ರಮ ಜರುಗಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಲರಾಂ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಶರಣಪ್ಪ ಶಂಕರ, ರಾಜೇಶ ಗುತ್ತೇದಾರ, ಚಿಂಚೋಳಿ ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಕಂಬದ, ಸೇಡಂ ಎ.ಪಿ.ಎಂ.ಸಿ. ಅಧ್ಯಕ್ಷ ಗುರುದತ್ತ ರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿಚ್ಚರೆಡ್ಡಿ ಪಾಟೀಲ, ತೆಲಂಗಾಣದ ಬಶಿರಾಬಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಯ ಪ್ರಸಾದ, ಗಣ್ಯರಾದ ರಮೇಶ ಮಾದಕ ತಾಂಡೂರ, ಸುಭಾಷಚಂದ್ರ ನಿಷ್ಠಿ, ಪ್ರಭಾಕರ ಕೋಕಟ, ನರೇಶ ಮಾದತ, ಸುದರ್ಶನರೆಡ್ಡಿ ಪಾಟೀಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿಜಯ ದಶರಥ ಸಂಗನ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಜನವರಿ 31ರಂದು ಫಲ-ಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭ
ಕಲಬುರಗಿ,ಜ.30.(ಕ.ವಾ.)-ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 2017-18ನೇ ಸಾಲಿನ ಫಲಪುಷ್ಪ ಪ್ರದರ್ಶನದ ಸಮಾರೋಪ ಸಮಾರಂಭವು ಜನವರಿ 31ರಂದು  ಸಂಜೆ 5 ಗಂಟೆಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ ಜರುಗಲಿದೆ.
ಕರ್ನಾಟಕ ರಾಜ್ಯ ತೋಟಗಾರಿಕೆ ಮಹಾಮಂಡಳ ಅಧ್ಯಕ್ಷ ಬಸವರಾಜ ಆರ್. ಪಾಟೀಲ ಅವರು ಬಹುಮಾನ ವಿತರಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸುವರು.
ಅಫಜಲಪುರ ಶಾಸಕ  ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್ ಭಾಗವಹಿಸುವರು.
ಅದೇ ರೀತಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ,  ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಕಲಬುರಗಿ  ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಫೆಬ್ರವರಿ 2ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಕಲಬುರಗಿ,ಜ.30.(ಕ.ವಾ.)-ಕಲಬುರಗಿಯ ಐವಾನ್-ಇ-ಶಾಹಿ ಹೊಸ ಅತಿಥಿ ಗೃಹದಲ್ಲಿ ಫೆಬ್ರವರಿ 2ರಂದು ಸಂಜೆ 4 ಗಂಟೆಗೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಫೆಬ್ರವರಿ 3ರಂದು ಸಣ್ಣೂರದಲ್ಲಿ ಜನಸ್ಪಂದನ ಸಭೆ
ಕಲಬುರಗಿ,ಜ.30.(ಕ.ವಾ.)-ಕಲಬುರಗಿ ತಾಲೂಕಿನ ಅವರಾದ(ಬಿ) ಹೋಬಳಿ ವ್ಯಾಪ್ತಿಯ ಸಣ್ಣೂರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಫೆಬ್ರವರಿ 3ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಕಲಬುರಗಿ ಗ್ರೇಡ್-2 ತಹಶೀಲ್ದಾರ್ ಜಗನ್ನಾಥ ಎಂ. ಪೂಜಾರಿ ತಿಳಿಸಿದ್ದಾರೆ. ಸಣ್ಣೂರ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.

ಜನವರಿ 31ರಂದು ಕಾನೂನು ಅರಿವು ನೆರವು ಕಾರ್ಯಕ್ರಮ
ಕಲಬುರಗಿ,ಜ.30.(ಕ.ವಾ.)-ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಷೇಧ ಕೋಶ ಹಾಗೂ ಚಂದ್ರಕಾಂತ ಪಾಟೀಲ ಮೇಮೋರಿಯಲ್ ಪದವಿ ಪೂರ್ವ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ “ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಅದರಿಂದಾಗುವ ದುಷ್ಪರಿಣಾಮಗಳ” ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು  ಜನವರಿ 31ರಂದು ಮಧ್ಯಾಹ್ನ 12 ಗಂಟೆಗೆ ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಬಳಿಯಿರುವ ಚಂದ್ರಕಾಂತ ಪಾಟೀಲ ಮೇಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್ ಮಾಣಿಕ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಚಂದ್ರಕಾಂತ ಪಾಟೀಲ ಮೇಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಜಿ.ಟಿ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಲಬುರಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಶಿವಶರಣಪ್ಪ ಎಂ.ಡಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಪನ್ಮೂಲ ವ್ಯಕ್ತಿಯಾಗಿ ಕಲಬುರಗಿ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಸಲಹೆಗಾರ ಸುಜಾತಾ ಪಾಟೀಲ “ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮಗಳ” ಕುರಿತು ಮಾತನಾಡುವರು.
ಜನವರಿ 31ರಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಕಲಬುರಗಿ,ಜ.30.(ಕ.ವಾ.)-ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವಿ. ಪಾಟೀಲ ಅವರ ಉಪಸ್ಥಿತಿಯಲ್ಲಿ ಜನವರಿ 31ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಗರದ ಎಲ್ಲ ನ್ಯಾಯಾಧೀಶರು, ಸಿಬ್ಬಂದಿ ವರ್ಗ ಹಾಗೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಅರ್ಥಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಿಗೆ ಆತ್ಮೀಯ ಬೀಳ್ಕೊಡುಗೆ
ಕಲಬುರಗಿ,ಜ.30.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸತತ 36 ವರ್ಷಗಳ ಸೇವೆ ಸಲ್ಲಿಸಿ ಜನವರಿ 31 ರಂದು ವಯೋನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಅವರಿಗೆ ಮಂಗಳವಾರ ಅರ್ಥಶಾಸ್ತ್ರ ವಿಭಾಗದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ವವಿದ್ಯಾಲಯದ ಪರೀಕ್ಷಾಂಗದ ಕುಲಸಚಿವ ಡಾ. ಡಿ.ಎಂ.ಮದರಿ ಮಾತನಾಡಿ, ಡಾ.ವಾಸುದೇವ ಸೇಡಂ ಅವರು ವಿಶ್ವವಿದ್ಯಾಲಯದಲ್ಲಿ ಸಲ್ಲಿಸಿದ ಸೇವೆಯನ್ನು ಕೊಂಡಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ವಾಸುದೇವ ಸೇಡಂ ಅವರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಜ್ಞಾನಾರ್ಜನೆ ನೀಡಲು ಶಕ್ತಿ ಮೀರಿ ಪ್ರಯತ್ನಿಸಿದ್ದು, ಪ್ರಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.
ವಿಭಾಗದ ಮುಖ್ಯಸ್ಥ ಡಾ.ದಶರಥ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿಭಾಗದ ಭೋಧಕ, ಭೋಧಕೇತರ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ವಿಜಯಕುಮಾರ ಹೆಬ್ಬಾಳಕರ ಸ್ವಾಗತಿಸಿದರೆ ನಾಗಪ್ಪ ಮಾನೆ ವಂದಿಸಿದರು.
ವಾಹನದ ಬಿಡಿಭಾಗ ಖರೀದಿಗೆ ದರಪಟ್ಟಿ ಆಹ್ವಾನ
ಕಲಬುರಗಿ,ಜ.30.(ಕ.ವಾ.)-ಕಲಬುರಗಿ ಹೈಕೋರ್ಟ್ ಪೀಠದ ಕಚೇರಿಯ ಕೋರ್ಲಾ, ಇನ್ನೋವಾ, ಅಂಬಾಸಿಡರ್ ಮತ್ತು ಹೊಂಡಾ ಎಕ್ಟಿವಾ ವಾಹನಗಳಿಗೆ ಉಪಯೋಗ ಮಾಡಿದ ವಿವಿಧ ಬಿಡಿಭಾಗಗಳಾದ ಟೈರ್, ಟ್ಯೂಬ್, ಬ್ಯಾಟರಿಗಳನ್ನು ಖರೀದಿಸಲು ಅರ್ಹರಿಂದ ದರಪಟ್ಟಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. 
ಇಚ್ಛೆಯುಳ್ಳವರು ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಕಲಬುರಗಿ ಪೀಠ ಇವರ ಹೆಸರಿನಲ್ಲಿ ಪಡೆದ 100 ರೂ.ಗಳ ಇ.ಎಂ.ಡಿ. ಮೊತ್ತದ ಡಿ.ಡಿ.ಯೊಂದಿಗೆ ದರಪಟ್ಟಿಯನ್ನು ಕಲಬುರಗಿ ಪೀಠದ ಕಾರ್ಯಾಲಯಕ್ಕೆ 2018ರ ಫೆಬ್ರುವರಿ 8ರ ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು. ದರಪಟ್ಟಿಯ ಲಕೋಟೆ ಮೇಲೆ “ಕೊಟೇಶನ್ ಫಾರ್ ಪರಚೇಸಿಂಗ್ ಆಫ್ ಯೂಸ್ಡ್ ಸ್ಪೇರ್ ಪಾಟ್ಸ್” ಎಂದು ನಮೂದಿಸಬೇಕು. 
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು ಫೆಬ್ರವರಿ 12ರಂದು ಬೆಳಿಗ್ಗೆ 11 ಗಂಟೆಗೆ ತೆರೆಯಲಾಗುವುದು. ಷರತ್ತು, ನಿಬಂಧನೆ, ದರಪಟ್ಟಿ ತೆರೆಯುವ ದಿನಾಂಕ ಸೇರಿದಂತೆ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹೈಕೋರ್ಟ ಪೀಠದ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.
No comments:

Post a Comment