GULBARGA VARTHE

GULBARGA VARTHE

Monday, 22 January 2018

News and photo date: 22--11--2018

ಸರ್ಕಾರಿ ನೌಕರರಿಗೆ ಶೀಘ್ರವೇ ವೇತನ ಪರಿಷ್ಕರಣೆಯ ಸಿಹಿ ಸುದ್ದಿ
********************************************************
ಕಲಬುರಗಿ,ಜ.22.(ಕ.ವಾ.)-ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಈಗಾಗಲೇ ಆರನೇ ವೇತನ ಆಯೋಗ ರಚನೆಯಾಗಿದೆ. ಫೆಬ್ರುವರಿ ಅಂತ್ಯದೊಳಗೆ ಆಯೋಗ ವರದಿ ಸಲ್ಲಿಸಲಿದ್ದು, ಆಯೋಗದ ವರದಿಯನ್ನಾಧರಿಸಿ ರಾಜ್ಯದ ಸರ್ಕಾರಿ ನೌಕರರಿಗೆ ಶೀಘ್ರದಲೇ ಸಿಹಿ ಸುದ್ದಿ ಸಿಗಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಸೋಮವಾರ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ದಿನನಿತ್ಯದ ಕೆಲಸ ಕಾರ್ಯಗಳು ಇನ್ನೂ ಹೆಚ್ಚಾಗಿ, ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ಉತ್ತೇಜನ ದೊರೆಯುವುದು. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತೀರ್ಪುಗಾರರು ನೀಡುವ ತೀರ್ಪಿಗೆ ಬದ್ಧರಾಗಿರಬೇಕು. ಕ್ರೀಡೆಗಳಿಂದ ಮನಸ್ಸು ಮತ್ತು ಶರೀರ ಸದೃಢಗೊಳ್ಳುವುದು. ಬೇರೆ ತಾಲೂಕು ಹಾಗೂ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾಪಟುಗಳೊಂದಿಗೆ ಹಾಗೂ ನೌಕರರೊಂದಿಗೆ ಬೆರೆತು ಚರ್ಚಿಸುವ ಸದಾವಕಾಶ ದೊರೆಯುತ್ತದೆ ಎಂದರು.
ಸರ್ಕಾರಿ ನೌಕರರು ತಮ್ಮ ಕಚೇರಿ ಕರ್ತವ್ಯದ ಸಮಯದಲ್ಲಿ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಗೌರವದಿಂದ ಕಂಡು ಅವರ ತೊಂದರೆಗಳನ್ನು ಅರ್ಥೈಸಿಕೊಂಡು ಪರಿಹರಿಸುವಂತಾಗಬೇಕು. ನೌಕರರು ಸಾರ್ವಜನಿಕ ಹಿತಾಸಕ್ತಿಯಿಂದ ಕರ್ತವ್ಯ ನಿರ್ವಹಿಸಿ ನಿಸ್ವಾರ್ಥತೆ, ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿ ಗೌರವಯುತವಾಗಿ ಬಾಳಬೇಕೆಂದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಮಾತನಾಡಿ, ಕ್ರೀಡೆಗಳು ಕ್ರೀಡಾಪಟುಗಳಲ್ಲಿ ಕ್ರೀಡಾ ಸ್ಫೂರ್ತಿ ಪುಳಕಿತಗೊಳಿಸುತ್ತದೆ. ಕ್ರೀಡೆಗಳಲ್ಲಿ ಸೋಲು-ಗೆಲವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾಪಟು ಕಠಿಣ ಪ್ರಯತ್ನದಿಂದ ಗುರಿಯನ್ನು ತಲುಪಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗೂಡಿ ಖುದ್ದಾಗಿ 100 ಮೀಟರ್ ಓಟ ಓಡುವ ಮೂಲಕ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಮತದಾರರ ಪ್ರಮಾಣ ವಚನ ಬೋಧಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮಿಥುನ್‍ಕುಮಾರ, ಹೋಂಗಾರ್ಡ ಕಮಾಂಡಂಟ್ ಸಂತೋಷ ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೇಂಗಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೀರ, ರಾಜ್ಯ ಕ್ರೀಡಾ ಕಾರ್ಯದರ್ಶಿ ನಾಗೇಂದ್ರಪ್ಪ ಅವರಾದ, ವಾಸವದತ್ತಾ ಸಿಮೆಂಟ್ ಉಪಾಧ್ಯಕ್ಷ ರಾಜೇಶ ಕಪತಕರ, ಅಲ್ಟ್ರಾಟೆಕ್ ಸಿಮೆಂಟ್‍ನ ಪಿ.ಸಿ.ಅಂಬಲಗಿ ಮತ್ತಿತರರು ಉಪಸ್ಥಿತರಿದ್ದರು.
45 ವರ್ಷದೊಳಗಿನ ಪುರುಷರಿಗೆ 100 ಮೀ., 200 ಮೀ., 400 ಮೀ., 800 ಮೀ., 1500 ಮೀ., 400 ಮೀ ಹರ್ಡಲ್ಸ್, 5000 ಮೀ, 10000 ಮೀ.ಓಟ, ಉದ್ದಜಿಗಿತ, ಡಿಸ್ಕಸ್ ಥ್ರೋ, ಜಾವಲಿನ ಎಸೆತ, 4ಘಿ100 ರಿಲೇ, 4ಘಿ400 ರಿಲೇ, ಹಾಪ್ ಸ್ಟೆಪ್ ಆಂಡ್ ಜಂಪ್, ಹ್ಯಾಮರ್ ಥ್ರೋ, ಎತ್ತರ ಜಿಗಿತ, ಗುಂಡು ಎಸೆತ ಸ್ಪರ್ಧೆಗಳು, 45 ವರ್ಷ ಮೇಲ್ಪಟ್ಟವರಿಗೆ 100 ಮೀ., 400 ಮೀ., 800 ಮೀ. ಗುಂಡು ಎಸೆತ, ಡಿಸ್ಕರ್ ಎಸೆತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಗುಂಪು ಸ್ಪರ್ಧೆಗಳಾದ ಫುಟ್‍ಬಾಲ್, ವಾಲಿಬಾಲ್, ಹಾಕಿ, ಕಬ್ಬಡ್ಡಿ, ಟೇಬಲ್ ಟೆನ್ನಿಸ್ ಸಿಂಗಲ್ಸ್ ಮತ್ತು ಡಬಲ್ಸ್, ಬ್ಯಾಡ್ಮಿಂಟಲ್, ಕೇರಂ, ಕ್ರಿಕೆಟ್, ಬಾಸ್ಕೆಲ್‍ಬಾಲ್, ಚೆಸ್, ಈಜು. 45 ವರ್ಷ ಮೇಲ್ಪಟ್ಟ ಪುರುಷರಿಗೆ ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್, ಟೇಬಲ್ ಟೆನ್ನಿಸ್, ಸಿಂಗಲ್ಸ್, ಟೆನ್ನಿಸ್ ಸೇರಿದಂತೆ ಕುಸ್ತಿ, ಭಾರ ಎತ್ತುವಿಕೆ, ಪವರ್ ಲಿಫ್ಟಿಂಗ್ ಮತ್ತು ಉತ್ತಮ ದೇಹಧಾಡ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
40 ವರ್ಷದೊಳಗಿನ ಮಹಿಳೆಯರಿಗೆ 100 ಮೀ., 200 ಮೀ, 400 ಮೀ, 800 ಮೀ, 100 ಮೀ ಹರ್ಡಲ್ಸ್, ಓಟ, ಉದ್ದಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವಲಿನ ಎಸೆತ, 4ಘಿ100 ರಿಲೇ, 4ಘಿ400 ರಿಲೇ ಸ್ಪರ್ಧೆಗಳು. 40 ವರ್ಷ ಮೇಲ್ಪಟ್ಟವರಿಗೆ 100 ಮೀ., 200 ಮೀ., 800 ಮೀ. ಗುಂಡು ಎಸೆತ, ಡಿಸ್ಕಸ್ ಎಸೆತ.
40 ವರ್ಷದೊಳಗಿನ ಗುಂಪು ಸ್ಪರ್ಧೆಗಳಾದ ಬ್ಯಾಡ್ಮಿಂಟನ್, ಸಿಂಗಲ್ಸ್ ಮತ್ತು ಡಬಲ್ಸ್, ಟೇಬಲ್ ಟೆನ್ನಿಸ್, ಸಿಂಗಲ್ಸ್ ಮತ್ತು ಡಬಲ್ಸ್, ಕೇರಂ ಸಿಂಗಲ್ಸ್ ಮತ್ತು ಡಬಲ್ಸ್, ಟೆನಿಕಾಯ್ಟ್ಟ ಸಿಂಗಲ್ಸ್ ಮತ್ತು ಡಬಲ್ಸ್, ಥ್ರೋಬಾಲ್ ಹಾಗೂ ಈಜು ಸ್ಪರ್ಧೆಗಳು, 40 ವರ್ಷ ಮೇಲ್ಟಟ್ಟವರಿಗೆ ಟೇಬಲ್ ಟೆನ್ನಿಸ್-ಸಿಂಗಲ್ಸ್, ಬ್ಯಾಡ್ಮಿಂಟನ್-ಸಿಂಗಲ್ಸ್, ಟೆನಿಕಾಯ್ಟ್-ಸಿಂಗಲ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಹಿಂದೂಸ್ತಾನಿ ಸಂಗೀತದ ಮೌಖಿಕ (ಕ್ಲಾಸಿಕಲ್), ಲಘು ಶಾಸ್ತ್ರೀಯ ಸಂಗೀತ-ಮೌಖಿಕ (ಕ್ಲಾಸಿಕಲ್), ಕರ್ನಾಟಕ ಶಾಸ್ತ್ರೀಯ ಸಂಗೀತದ ಶಾಸ್ತ್ರೀಯ ಸಂಗೀತ ಮತ್ತು ಲಘು ಶಾಸ್ತ್ರೀಯ. ಜಾನಪದ ನೃತ್ಯ, ಭರತ ನಾಟ್ಯ, ಕಥಕ, ಕಥಕಳಿ, ಮಣಿಪುರಿ, ಕೂಚುಪುಡಿ, ಓಡಿಸ್ಸಿ ನೃತ್ಯ ಸ್ಪರ್ಧೆಗಳು. ಸ್ಟ್ರೀಂಗ್ ವಾದ್ಯಗಳು, ಹಿಂದೂಸ್ತಾನಿ, ವಿಂಡ್ ವಾದ್ಯಗಳು, ಪರಕೇಶನ್ ವಾದ್ಯಗಳು, ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಕಿರು ನಾಟಕ ಸ್ಪರ್ಧೆಗಳು ನಡೆಯಲಿವೆ.
ಮತದಾನ ಪ್ರೇರೇಪಿಸಲು ಶಾಲೆಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ಗಳ ರಚನೆ
********************************************************************
ಕಲಬುರಗಿ, ಜ.22.(ಕ.ವಾ)- ಯುವ ಹಾಗೂ ಭಾವಿ ಮತದಾರರನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಮತದಾನ ಮಾಡುವುದಕ್ಕಾಗಿ ಹುರಿದುಂಬಿಸಲು ರಾಜ್ಯ ಸರ್ಕಾರವು ಶಾಲೆ, ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ/ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ಗಳನ್ನು ರಚಿಸುತ್ತಿದೆ.
ಮತದಾರರ ಸಾಕ್ಷರತಾ ಕ್ಲಬ್‍ಗಳು ಒಂದು ಚಿಕ್ಕ ಚುನಾವಣಾ ಕಚೇರಿಯಂತೆ ಕಾರ್ಯನಿರ್ವಸಲಿದೆ. ಜಗತ್ತಿನಲ್ಲಿ ಈಗಾಗಲೇ ಲಕ್ಷಾನುಗಟ್ಟಲೆ ಮತದಾರರ ಸಾಕ್ಷರತಾ ಕ್ಲಬ್‍ಗಳು ಯಶಸ್ವಿಯಾಗಿವೆ. ಮುಖ್ಯವಾಗಿ ಮತದಾರರ ಶೈಕ್ಷಣಿಕ ಕ್ಲಬ್ ಚಟುವಟಿಕೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಒಂದು ವೇಳೆ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದರೆ ಶಕ್ತಿಯುತವಾದ ಬೃಹತ್ ಮತದಾರರ ಸಾಕ್ಷರತಾ ಪ್ರಯೋಗವಾಗಿ ಹೊರಹೊಮ್ಮಲಿದೆ.
ಭಾವಿ, ಹೊಸ ಮತದಾರರಲ್ಲಿ ಮತದಾರನ ಪ್ರಕ್ರಿಯೆ ಉಳಿಸಿ ಬೆಳೆಸುವುದು ಮತದಾರರ ಸಾಕ್ಷರತಾ ಕ್ಲಬ್‍ಗಳ ಜವಾಬ್ದಾರಿಯಾಗಿದೆ. 18 ವರ್ಷದ ನಂತರದ ವಯೋಮಾನದ ವ್ಯಕ್ತಿಗಳ ನೋಂದಣಿ ಹಾಗೂ ಮತದಾನದಲ್ಲಿ ಭಾಗವಹಿಸುವ ಹಕ್ಕು ಮತ್ತು ಮತದಾನ ಪದ್ಧತಿ, ಪ್ರಕ್ರಿಯೆ, ಮತದಾರ ಸಂಸ್ಥೆಯ ರಚನೆ, ಸಂಘಟನೆ ಬಗ್ಗೆ ಮಾಹಿತಿ ನೀಡುವ ಗುರಿ ಹೊಂದಿದೆ.
ಇವಿಎಂ (ವಿದ್ಯುನ್ಮಾನ ಮತಯಂತ್ರ) ಮತ್ತು ವಿವಿಪ್ಯಾಟ್ (ಮತದಾರನ ಮತ ಪ್ರಮಾಣೀಕರಿಸುವ ಸಾಧನ) ಪರಿಚಯಿಸುವುದು ಹಾಗೂ ಮತದಾನ ಪ್ರಕ್ರಿಯೆ ನಡೆಸುವ ಬಗ್ಗೆ ಶಿಕ್ಷಣ ನೀಡುವ ಧ್ಯೇಯೋದ್ದೇಶ ಮತದಾರರ ಸಾಕ್ಷರತಾ ಕ್ಲಬ್‍ಗಳದ್ದಾಗಿದೆ. ಚುನಾವಣೆ ಎಂದರೇನು? ಹೇಗೆ? ಯಾವಾಗ? ಎಂಬುದರ ಕುರಿತು 14 ವರ್ಷದಲ್ಲಿರುವಾಗಲೇ (9ನೇ ತರಗತಿ ನಂತರ) ತಿಳಿಸಿ ಕೊಡಲಾಗುತ್ತಿದೆ.
ಮತದಾರರ ಸಾಕ್ಷರತಾ ಕ್ಲಬ್‍ಗಳನ್ನು ಮೂರು ವಿಧಗಳಲ್ಲಿ ಸ್ಥಾಪಿಸಲಾಗುವುದು. 1. ಭವಿಷ್ಯದ ಮತದಾರರು- 9ರಿಂದ 10ನೇ ತರಗತಿ ವಿದ್ಯಾರ್ಥಿಗಳನ್ನು ಕ್ಲಬ್‍ಗಳಲ್ಲಿ ಸದಸ್ಯರನ್ನಾಗಿ ನೊಂದಾಯಿಸಲಾಗುವುದು. 2. ನೂತನ ಮತದಾರರು-18 ವರ್ಷ ತುಂಬಿರುವ ವೃತ್ತಿಪರ, ತಾಂತ್ರಿಕ ಹಾಗೂ ವಿಶ್ವವಿದ್ಯಾಲಯ, ಕಾಲೇಜು ವಿದ್ಯಾರ್ಥಿಗಳನ್ನು ಸದಸ್ಯರನ್ನಾಗಿಸಿ ಅವರನ್ನು ಪತದಾರರ ಪಟ್ಟಿಯಲ್ಲಿ ಸೇರ್ಪಡೆಮಾಡಲಾಗುವುದು. 3. ಸಮುದಾಯಗಳು- ಔಪಚಾರಿಕ ಶಿಕ್ಷಣದಿಂದ ಹೊರಗುಳಿದ ಎಲ್ಲಾ ಯುವಕರಿಗೆ ಗ್ರಾಮ ಮತ್ತು ಪಟ್ಟಣಗಳಲ್ಲಿ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಮತದಾನದ ಜಾಗೃತಿ ಮೂಡಿಸುವುದು.
ಮತದಾರರ ಸಾಕ್ಷರತಾ ಕ್ಲಬ್‍ಗಳಿಗೆ ಚುನಾವಣಾ ಕರ್ತವ್ಯದ ಅನುಭವ ಪಡೆದ ಇಬ್ಬರು ಶಿಕ್ಷಕರು ನೋಡಲ್ ಅಧಿಕಾರಿಗಳಾಗಿ ಹಾಗೂ ಮೆಂಟರ್ಸ್ ಆಗಿ ಕಾರ್ಯನಿರ್ವಹಿಸುವರು. ಭಾವಿ ಮತದಾರರನ್ನು ಇಎಲ್‍ಸಿ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರಿಗೆ ಪ್ರಾಯೋಗಿಕ ಅನುಭವ ನೀಡಲಾಗುವುದು. ನೋಡಲ್ ಅಧಿಕಾರಿಗಳ ಸಲಹೆ ಮತ್ತು ಮೇಲ್ವಿಚಾರಣೆಯೊಂದಿಗೆ ಮತದಾರರ ಸಾಕ್ಷರತಾ ಕ್ಲಬ್‍ಗಳು ಕಾರ್ಯಚಟುವಟಿಕೆ ನಡೆಸುವ ಜವಾಬ್ದಾರಿ ಹೊಂದಿರುತ್ತದೆ. ಕ್ಲಬ್‍ನ ಚಟುವಟಿಕೆಗಳನ್ನು ನಿರ್ಧರಿಸಿ ಒಂದು ವರ್ಷದ ವಾರ್ಷಿಕ ದಿನಚರಿ ಸಿದ್ಧಪಡಿಸಲಾಗುವುದು.
ಒಬ್ಬರು ಅಥವಾ ಇಬ್ಬರೂ ರಾಜ್ಯಶಾಸ್ತ್ರ ಉಪನ್ಯಾಸಕರು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಸುವರು. ಕ್ಲಬ್‍ನ ಕಾರ್ಯನಿರ್ವಾಹಕ ಸಮಿತಿಯ ರಚನೆ ಮತ್ತು ಚುನಾವಣೆ ಪರಿಶೀಲಿಸುವುದು ಹಾಗೂ ನೋಂದಣಿಯಾಗದ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು. ಹೀಗೆ ಭಾವಿ, ನೂತನ ಹಾಗೂ ಅನಕ್ಷರಸ್ಥರಿಗೆ ಮತದಾನದ ಮಹತ್ವ ತಿಳಿಸಿಕೊಡಲು ಸರ್ಕಾರ ಸಿದ್ಧವಾಗಿದ್ದು, ಮತದಾರರ ಸಾಕ್ಷರತಾ ಕ್ಲಬ್‍ಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಲಿವೆ.
ಮೈಸೂರಿನ ಸಿಪೆಟ್ ಸಂಸ್ಥೆಯಿಂದ ವಿವಿಧ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿ
ಕಲಬುರಗಿ,ಜ.22.(ಕ.ವಾ)-ಕರ್ನಾಟಕದ ಏಕೈಕ ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಮೈಸೂರಿನ ಕಾಲೇಜಿನಲ್ಲಿ 2017-18ನೇ ಸಾಲಿಗೆ ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಕ್ಕೆ ಸೇರಿದ ನಿರುದ್ಯೋಗಿ ಯುವಕ/ಯುವತಿಯರಿಗೆ ಉಚಿತ ಊಟ, ವಸತಿ ಹಾಗೂ ಮಾಸಿಕ ಶಿಷ್ಯವೇತನದೊಂದಿಗೆ ಬೇಸಿಕ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ ಹಾಗೂ ವಿವಿಧ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ಮಾಸಿಕ 500ರೂ.ಗಳ ಶಿಷ್ಯವೇತನ ನೀಡಲಾಗುವುದು. ವಯೋಮಿತಿ 18ರಿಂದ 35ವರ್ಷದೊಳಗಿರಬೇಕು. ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಐಟಿಐ, ಡಿಗ್ರಿಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ, 5 ಭಾವಚಿತ್ರ ಹಾಗೂ ಮೂಲ ದಾಖಲೆಗಳೊಂದಿಗೆ ಅಭ್ಯರ್ಥಿಗಳು ನೇರ ಆಯ್ಕೆಗಾಗಿ ಜನವರಿ 24ರ ಸಂಜೆ 5 ಗಂಟೆಯೊಳಗಾಗಿ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ, ನಂ. 437/ಎ, ಹೆಬ್ಬಾಳ್ ಇಂಡಸ್ಟ್ರೀಯಲ್ ಏರಿಯಾ ಮೈಸೂರು ಇಲ್ಲಿ ಹಾಜರಾಗಬೇಕು. ಕೆಲವೇ ಸೀಟುಗಳು ಉಳಿದಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವಿಳಾಸವನ್ನು ಹಾಗೂ ದೂರವಾಣಿ ಸಂಖ್ಯೆ 0821-2510618, ಮೊಬೈಲ್ ಸಂಖ್ಯೆ 9632688884ನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೀಠೋಪಕರಣ ಸರಬರಾಜಿಗಾಗಿ ಅರ್ಜಿ ಆಹ್ವಾನ
******************************************
ಕಲಬುರಗಿ,ಜ.22.(ಕ.ವಾ)-ಯಾದಗಿರಿ ಜಿಲ್ಲಾ ಮತ್ತು ಪ್ರಧಾನ ಜಿಲ್ಲಾ ನ್ಯಾಯಾಲಯ ಘಟಕಕ್ಕೆ ವಿವಿಧ 4 ಮಾದರಿಯ ಫೀಠೋಪಕರಣಗಳನ್ನು ಸರಬರಾಜು ಮಾಡಲು ಕೆ.ಟಿ.ಪಿ.ಪಿ. ಕಾಯ್ದೆ 1999 ನಿಯಮ 2000ರನ್ವಯ ಅರ್ಹ ತಯಾರಕರು, ಡೀಲರ್ ಮತ್ತು ಸರಬರಾಜುದಾರರಿಂದ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಬರಾಜು ಮಾಡುವ ಪೀಠೋಪಕರಣಗಳ ವಿವರ ಇಂತಿದೆ. ಸ್ಟೀಲ್ ಸ್ಲೋಟೆಡ್ ಆ್ಯಂಗಲ್ ರ್ಯಾಕ್ ದೊಡ್ಡದ್ದು-16, ಸ್ಟೀಲ್ ಅಲಮಾರಿ-08, ವುಡನ್ ಚಿಕ್ಕದ್ದು ಟೇಬಲ್-04 ಹಾಗೂ ಹೈ ಬ್ಯಾಕ್ ರಿವಾಲ್ವಿಂಗ್ ಕುಷನ್ ಚೇರ್-04. ಟೆಂಡರ್ ಅರ್ಜಿಗಳನ್ನು ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅದರೊಂದಿಗೆ ಇ.ಎಂ.ಡಿ. 10,000 ರೂ. ಡಿ.ಡಿ./ಎಫ್‍ಡಿಆರ್ ಯನ್ನು ಲಗತ್ತಿಸಿದ ಭದ್ರಪಡಿಸಿದ ಅರ್ಜಿಯ ಎರಡು ಲಕೋಟೆಗಳನ್ನು ಫೆಬ್ರವರಿ 14ರ ಸಂಜೆ 4 ಗಂಟೆಯೊಳಗಾಗಿ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಯಲ್ಲಿ ಸಲ್ಲಿಸಬೇಕು.
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು ಫೆಬ್ರವರಿ 15 ರಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ಪೀಠೋಪಕರಣಗಳ ವಿವರ, ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಗಂಡು ಶಿಶುವಿನ ಪೋಷಕರ ಪತ್ತೆಗೆ ಮನವಿ
*************************************
ಕಲಬುರಗಿ,ಜ.22.(ಕ.ವಾ.)-ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಿಂದನೂರ ರಾಜನಕೊಳ್ಳೂರ ಸೀಮಾಂತರದ ರಾಜನಕೊಳ್ಳೂರ ಗುಳಬಾಳ ಏತನೀರಾವರಿ ಕಾಲುವೆ ಪಕ್ಕದಲ್ಲಿರುವ ಮುದಕಪ್ಪಗೌಡ ಹಳ್ಳಿಕೋಟೆ ಹೊಲದ ಹತ್ತಿರದ ರಸ್ತೆಯ ಮೇಲೆ 2017ರ ಡಿಸೆಂಬರ್ 28ರಂದು ಪತ್ತೆಯಾದ ಒಂದು ದಿವಸದ ಗಂಡು ಶಿಶುವನ್ನು ಯಾದಗಿರಿಯ ಸರ್ಕಾರಿ ಬಾಲಕಿಯರ ಬಾಲ ಮಂದಿರ ಸಿಬ್ಬಂದಿಯಿಂದ ವರ್ಗಾವಣೆ ಬಂದಿದ್ದು, ಈ ಗಂಡು ಶಿಶುವನ್ನು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ 2018ರ ಜನವರಿ 4ರಂದು ದಾಖಲಿಸಲಾಗಿದೆ. ಬಿಳುಪು ಬಣ್ಣ ಹೊಂದಿರುವ ಈ ಗಂಡು ಶಿಶುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಕಲಬುರಗಿ ಅಮೂಲ್ಯ (ಜಿ) ಶಿಶು ಗೃಹದ ಅಧೀಕ್ಷಕ ಶ್ರೀಕಾಂತ ಮೇಂಗಜಿ ತಿಳಿಸಿದ್ದಾರೆ.
ಮೇಲ್ಕಂಡ ಗಂಡು ಶಿಶುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 30 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಗಂಡು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ದೂರವಾಣಿ ಸಂ.08472-265588, ಮೊಬೈಲ್ ಸಂಖ್ಯೆ 9449728576ನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ವಾಣಿಜ್ಯ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
******************************************************
ಕಲಬುರಗಿ,ಜ.22.(ಕ.ವಾ.)-ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ವಾಣಿಜ್ಯ ಪರೀಕ್ಷೆಗಳು ಜನವರಿ 22ರಿಂದ 30ರ ವರೆಗೆ ಕಲಬುರಗಿ ನಗರದ ಐವಾನ್ ಶಾಹಿ ರಸ್ತೆಯಲ್ಲಿರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ.
ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿರಾಕ್ಸ್/ಪುಸ್ತಕ ಮಳಿಗೆಗಳನ್ನು ಮುಚ್ಚುವಂತೆ ಕಲಬುರಗಿ ತಹಶೀಲ್ದಾರ್ ಅಶೋಕ ಹಿರೋಳ್ಳೆ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ಸ್ ವಸ್ತು ಮತ್ತು ಚಿಕ್ಕ ಗಾತ್ರದ ಪುಸ್ತಕಗಳನ್ನು ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಆದೇಶದಲ್ಲಿ ತಿಳಿಸಿರುತ್ತಾರೆ.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿಜ್ಞಾನ ರಂಗೋಲಿ ಸ್ಪರ್ಧೆ ಆಯೋಜನೆ
******************************************************************
ಕಲಬುರಗಿ,ಜ.22.(ಕ.ವಾ)- ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಪಠ್ಯ ಭೋಧನೆಯೊಂದಿಗೆ ಪಠ್ಯೇತರ ಮೂಲಕವೂ ಜ್ಞಾನಾರ್ಜನೆ ಪಡೆಯಲು ಸೋಮವಾರ ಚಿತ್ತಾಪುರ ತಾಲೂಕಿನ ಮಾಲಗತ್ತಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ವಿಜ್ಞಾನ ಚಿತ್ರ” ಬಿಡಿಸುವ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಬಣ್ಣ-ಬಣ್ಣದ ವಿಜ್ಞಾನ ಚಿತ್ರವುಳ್ಳ ರಂಗೋಲಿ ಬಿಡಿಸದರು. ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯಗುರು ಉಮಾಪತಿರಾಜು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಭೂಷಣ, ಶಿಕ್ಷಕರಾದ ಸುಜಾತಾ ನಾಯಕ್, ಸಂಗೀತಾ, ಲಿಂಗಮ್ಮ, ಅನೀಲ ಮಿರಸ್ಕರ ಉಪಸ್ಥಿತರಿದ್ದರು.




No comments:

Post a Comment