GULBARGA VARTHE

GULBARGA VARTHE

Thursday, 18 January 2018

news and photo date: 18--1-2018

ಯುವಕ ಮತದಾರರ ನೋಂದಣಿಗೆ ಗುರಿ
************************************
ಕಲಬುರಗಿ,ಜ.18.(ಕ.ವಾ.)-ದೇಶದ ಜನಸಂಖ್ಯೆಯ ಪ್ರಮಾಣದಲ್ಲಿ 18 ರಿಂದ 22 ವಯಸ್ಸಿನ ಯುವಕರು ಹೆಚ್ಚಿನ ಪ್ರಮಾಣದಲ್ಲಿದ್ದು, ಅವರ ಪ್ರಮಾಣದ ಸಂಖ್ಯೆಯಷ್ಟು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದಿರುವುದು ಆತಂಕದ ವಿಷಯವಾಗಿದೆ. ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಗುರುವಾರ ಭಾರತೀಯ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ಸರ್ಕಾರಿ ಅನುದಾನಿತ, ಅನುದಾನ ರಹಿತ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ, ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಹಂತದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನವರಿ 24ರವರೆಗೆ ಯುವ ಮತದಾರರು ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, 18 ವರ್ಷ ಮೇಲ್ಪಟ್ಟ ಯುವಕರು ಫಾರಂ ನಂ. 6ನ್ನು ಭರ್ತಿ ಮಾಡಿ ಸಲ್ಲಿಸಬೇಕು. ಜಾತಿ, ಹಣ, ಹೆಂಡದ ಆಮಿಷಕ್ಕೆ ಒಳಗಾಗದೇ ನಿರ್ಭಯದಿಂದ ಮತ ಚಲಾಯಿಸಲು ಹಾಗೂ ನ್ಯಾಯಯುತ ಚುನಾವಣೆ ನಡೆಸಲು ಸ್ವೀಪ್ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಚಲಾಯಿಸಿದ ಮತವನ್ನು ಗೌಪ್ಯವಾಗಿಟ್ಟುಕೊಳ್ಳುವಂತೆ ತಿಳುವಳಿಕೆ ನೀಡಲಾಗುತ್ತಿದೆ ಎಂದರು.
ಚುನಾವಣೆಯಲ್ಲಿ ಒಂದು ಮತ ಒಬ್ಬ ಅಭ್ಯರ್ಥಿಯ ಭವಿಷ್ಯ ನಿರ್ಧರಿಸುವುದರಿಂದ ಮತದಾನದ ದಿನದಂದು ಎಲ್ಲರೂ ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಬೇಕು. ಹೆಚ್ಚು ಜನ ಮತ ಚಲಾಯಿಸದೇ ಇರುವುದರಿಂದ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಖಾತ್ರಿ ಪಡಿಸಿಕೊಳ್ಳಲು ವಿ.ವಿ. ಪ್ಯಾಟ್ ಎಂಬ ಯಂತ್ರವನ್ನು ಅಳವಡಿಸಲಾಗುತ್ತಿದ್ದು, ಈ ಯಂತ್ರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಸ್ವೀಪ್ ಕಾರ್ಯಕ್ರಮದಡಿ ಚುನಾವಣಾ ಸಾಕ್ಷರತಾ ಕ್ಲಬ್ ಕೈಪಿಡಿಯನ್ನು ರೂಪಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ರಚಿಸಿ ಕೈಪಿಡಿಯಲ್ಲಿರುವ ಅಂಶಗಳ ಮೇಲೆ ಚರ್ಚೆಗಳನ್ನು ನಡೆಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೈಪಿಡಿಯಲ್ಲಿ ತಿಳಿಸಿರುವ ಹಾಗೆ ಮತದಾನದ ಜಾಗೃತಿ ಕುರಿತು ಚಟುವಟಿಕೆಗಳನ್ನು ಹಮ್ಮಿಕೊಂಡು ವರದಿ ಮಾಡಬೇಕು. ಶಾಲಾ-ಕಾಲೇಜು ಮಕ್ಕಳು ಚುನಾವಣಾ ಪ್ರಕ್ರಿಯೆಯ ರಾಯಭಾರಿಗಳಾಗಿ ಕುಟುಂಬದವರಿಗೆ ಹಾಗೂ ಮತದಾರರಿಗೆ ಜಾಗೃತಿ ಮೂಡಿಸಬೇಕು. ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಾದ್ಯಂತ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಪೋಸ್ಟರ್ ಮೇಕಿಂಗ್ ಹಾಗೂ ಕೋಲ್ಯಾಜ್ ಸ್ಪರ್ಧೆಗಳನ್ನು ಶಾಲಾ, ಕಾಲೇಜು ಮತ್ತು ಪದವಿ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಜಿಲ್ಲೆಯಾದ್ಯಂತ ಒಳ್ಳೆಯ ಪ್ರಕ್ರಿಯೆ ವ್ಯಕ್ತವಾಗಿದ್ದು, ಅಂತಿಮವಾಗಿ ಜಿಲ್ಲಾಮಟ್ಟದಲ್ಲಿ ಆಯ್ಕೆಯಾದವರ ಹೆಸರನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪ್ರಜ್ಞಾ ಕಾನೂನು ಸಲಹಾ ಸಮಿತಿ ಅಧ್ಯಕ್ಷೆ ಕೆ. ನೀಲಾ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲಾನಾಬಾದ ಸರ್ಕಾರಿ ಪ್ರೌಢಶಾಲೆಯ ಶೇಖ್ ಮಸ್ತಾನ ಜಹಾ, ಚಂದಾಪುರದ ಚನ್ನಬಸವೇಶ್ವರ ಪಿ.ಯು. ಕಾಲೇಜಿನ ಗಾಯತ್ರಿ ಹಾರಕೂಡ, ಜೇವರ್ಗಿ ಸರ್ಕಾರಿ ಪಿ.ಯು. ಕಾಲೇಜಿನ ಶರಣಬಸಪ್ಪ, ಕಲಬುರಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತೀಕ್ಷಾ ಗೋವಿಂದರಾವ ಮತದಾನದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಸಹಾಯಕ ಆಯುಕ್ತೆ ಬಿ. ಸುಶೀಲಾ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಅಕೃತಿ ಸಾಗರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಕಾರ್ಯದರ್ಶಿ ಶಶಿಧರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ, ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿ ಶೇಖರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಲಬುರಗಿ, ಮತ್ತಿತರರು ಪಾಲ್ಗೊಂಡಿದ್ದರು.
ಜನವರಿ 21ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯೋತ್ಸವ
*****************************************************************
ಕಲಬುರಗಿ,ಜ.18.(ಕ.ವಾ.)-ಕಲಬುರಗಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವವನ್ನು ರವಿವಾರ ಜನವರಿ 21ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ತೊನಸನಹಳ್ಳಿ ಎಸ್. ಅಲ್ಲಮಪ್ರಭು ಪೀಠಾಧಿಪತಿಯ ಪೂಜ್ಯ ಮಲ್ಲಣ್ಣಪ್ಪ ಮಹಾಸ್ವಾಮಿ ಹಾಗೂ ಶ್ರೀಶೈಲ ಸಾರಂಗಮಠದ ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯವಹಿಸುವ ಜರುಗುವ ಈ ಸಮಾರಂಭದಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅಧÀ್ಯಕ್ಷತೆ ವಹಿಸುವರು.
ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತ ಅತಿಥಿಗಳಾಗಿ ಹಾಗೂ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅಫಜಲಪುರ ಶಾಸಕ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್. ಮುರುಗನ್, ಕಲಬುರಗಿ ರಾಜ್ಯ ಕೂಲಿ (ಗಂಗಾಮತ) ಸಮಾಜದ ಗೌರವಾಧ್ಯಕ್ಷ ತಿಪ್ಪಣ್ಣಪ್ಪಾ ಕಮಕನೂರ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಕಲಬುರಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಾಮದೇವ ಕಡಕೋಳ ವಿಶೇಷ ಉಪನ್ಯಾಸ ನೀಡುವರು.
ಇದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಯಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯುವುದು. ನಗರ ನೆಹರು ಗಂಜ್‍ನಲ್ಲಿರುವ ನಗರೇಶ್ವರ ಬಾಲವಿಕಾಸ ಮಂದಿರದಿಂದ ಆರಂಭವಾಗುವ ಮೆರವಣಿಗೆಯು ಸೂಪರ ಮಾರ್ಕೆಟ್ ಮಾರ್ಗವಾಗಿ ಜಗತ್ ವೃತ್ತದ ಮೂಲಕ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕೊನೆಗೊಳ್ಳುವುದು.
ಅಕೌಂಟಿಂಗ್ ಕನ್ಸಲ್‍ಟೆಂಟ್ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನ
**********************************************************
ಕಲಬುರಗಿ,ಜ.18.(ಕ.ವಾ.)-ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಹೊಸದಾಗಿ ಸೃಜನೆಯಾಗಿರುವ ಒಂದು ಅಕೌಂಟಿಂಗ್ ಕನ್ಸಲ್‍ಟೆಂಟ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹ ಎಂ.ಕಾಂ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಗುತ್ತಿಗೆ ಅವಧಿಯು ಪ್ರಾಥಮಿಕವಾಗಿ ಒಂದು ವರ್ಷದ್ದಾಗಿದ್ದು, ಮಾಸಿಕ 30,000ರೂ.ಗಳ ವೇತನ ನೀಡಲಾಗುವುದು. ಎಂ.ಕಾಂ. ಪದವಿ, ಅಕೌಂಟಿಂಗ್ ಮತ್ತು ಆಡಿಟ್‍ನಲ್ಲಿ 5 ವರ್ಷಗಳ ಕನಿಷ್ಠ ಅನುಭವ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಹರು. ಇದಲ್ಲದೇ ಅಭ್ಯರ್ಥಿಗಳಿಗೆ ಕಂಪ್ಯೂಟರ ಜ್ಞಾನ ಹೊಂದಿರಬೇಕು. ಎಂ.ಎಸ್. ಆಫೀಸ್, ಟ್ಯಾಲಿಯಲ್ಲಿ ಅನುಭವ ಹೊಂದಿರಬೇಕು.
ನಿಗದಿತ ಅರ್ಜಿ ನಮೂನೆಯನ್ನು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ 11, ಮಿನಿ ವಿಧಾನಸೌಧ, ಕಲಬುರಗಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಜನವರಿ 31ರೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಜನವರಿ 20ರಂದು ಗ್ರಾಹಕರ ಕುಂದುಕೊರತೆ ಸಭೆ
********************************************
ಕಲಬುರಗಿ,ಜ.18.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗ್ರಾಮೀಣ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಚಿತ್ತಾಪುರ, ಶಹಾಬಾದ ಮತ್ತು ಕಾಳಗಿ ಉಪವಿಭಾಗದ ಕಚೇರಿಯಲ್ಲಿ ಜನವರಿ 20ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ಗ್ರಾಹಕರ ಕುಂದುಕೊರತೆ ಸಭೆಯು ಜರುಗಲಿದೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ಶಹಾಬಾದ ಹಾಗೂ ಕಾಳಗಿ ಉಪವಿಭಾಗ ಶಾಖೆಗಳಲ್ಲಿ ಬರುವ ಗ್ರಾಹಕರು/ಸಾರ್ವಜನಿಕರು ತಮ್ಮ ಗ್ರಾಮಗಳಲ್ಲಿನ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಪರಿಹರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಜನಸ್ಪಂದನ ಸಭೆಯ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಜನವರಿ 20ರಂದು ಉಪವಿಭಾಗವಾರು ವಿದ್ಯುತ್ ಗ್ರಾಹಕರ ಸಂವಾದ ಸಭೆ
****************************************************************
ಕಲಬುರಗಿ,ಜ.18.(ಕ.ವಾ.)-ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ (ಕೆ.ಇ.ಆರ್.ಸಿ.) ರವರ ನಿರ್ದೇಶನದ ಮೇರೆಗೆ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಿಂದ ಜನವರಿ 20ರಂದು ಶನಿವಾರ ಮಧ್ಯಾಹ್ನ 3 ರಿಂದ ಸಂಜೆ 5.30 ಗಂಟೆಯವರೆಗೆ ಕಲಬುರಗಿ ನಗರ ವಿಭಾಗದ ವ್ಯಾಪ್ತಿಗೆ ಬರುವ ಉಪ ವಿಭಾಗಗಳ ಗ್ರಾಹಕರ ಸಂವಾದ ಸಭೆಯನ್ನು ಕೆಳಕಂಡ ಉಪವಿಭಾಗವಾರು ಏರ್ಪಡಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ಕಲಬುರಗಿ ನಗರ ಉಪವಿಭಾಗ-1ಕ್ಕೆ ಸಂಬಂಧಿಸಿದಂತೆ ಗ್ರಾಹಕರ ಸಂವಾದ ಸಭೆಯು ಕಲಬುರಗಿ ಸುಪರ ಮಾರ್ಕೆಟಿನ ಉಪವಿಭಾಗ-1ರಲ್ಲಿ, ಕಲಬುರಗಿ ನಗರ ಉಪ ವಿಭಾಗ-2ಕ್ಕೆ ಸಂಬಂಧಿಸಿದ ಗ್ರಾಹಕರ ಸಂವಾದ ಸಭೆಯು ಕಲಬುರಗಿ ಸ್ಟೇಶನ್ ರಸ್ತೆ ಉಪವಿಭಾಗ-2ರಲ್ಲಿ, ಕಲಬುರಗಿ ನಗರ ಉಪವಿಭಾಗ-3ಕ್ಕೆ ಸಂಬಂಧಿಸಿದ ಗ್ರಾಹಕರ ಸಂವಾದ ಸಭೆಯು ಕಲಬುರಗಿ ಎಂ.ಬಿ. ನಗರದಲ್ಲಿರುವ ಉಪ ವಿಭಾಗ-3ರಲ್ಲಿ ಹಾಗೂ ಕಲಬುರಗಿ ನಗರ ಉಪವಿಭಾಗ-4ಕ್ಕೆ ಸಂಬಂಧಿಸಿದ ಗ್ರಾಹಕರ ಸಂವಾದ ಸಭೆಯು ಕಲಬುರಗಿಯ ಜೇವರ್ಗಿ ಕ್ರಾಸ್‍ನಲ್ಲಿರುವ ಕೈಗಾರಿಕಾ ಪ್ರದೇಶ ಉಪವಿಭಾಗ-4ರಲ್ಲಿ ಏರ್ಪಡಿಸಲಾಗಿದೆ.
ಈ ಗ್ರಾಹಕರ ಸಭೆಯು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಸಂಬಂಧಪಟ್ಟ ಉಪವಿಭಾಗಗಳ ಗ್ರಾಹಕರು ಈ ಗ್ರಾಹಕರ ಸಂವಾದ ಸಭೆಯಲ್ಲಿ ಭಾಗವಹಿಸಿ ತಮ್ಮ ಯಾವುದೇ ತರಹದ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಸಲ್ಲಿಸಬಹುದಾಗಿದೆ.
ಸ್ನಾತಕೋತ್ತರ ವಿಭಾಗ: ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಸಾಧನೆ
**********************************************************************
ಕಲಬುರಗಿ,ಜ.18.(ಕ.ವಾ.)-ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯವು 2016-17ನೇ ಸಾಲಿನಲ್ಲಿ ಸ್ನಾತಕೋತ್ತರ ಕೋರ್ಸುಗಳ ವಿವಿಧ ವಿಭಾಗಗಳಲ್ಲಿ ರ್ಯಾಂಕು ಪಡೆದ ವಿದ್ಯಾರ್ಥಿನಿಯರ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಶಾಸ್ತ್ರ, ಕನ್ನಡ ಹಾಗೂ ಇತಿಹಾಸ ವಿಭಾಗಗಳಲ್ಲಿ ರ್ಯಾಂಕ್ ಹಾಗೂ ಚಿನ್ನದ ಪದಕ ಪಡೆದಿದ್ದಾರೆ.
ರಾಜ್ಯಶಾಸ್ತ್ರ ವಿಭಾಗದಲ್ಲಿ ಕು. ಅತೀಫಾ ಆಸ್ಮಿ ಶೀಬಾ ಅವರು ಒಂದನೇ ರ್ಯಾಂಕ್ ಚಿನ್ನದ ಪಡೆದಿದ್ದಾರೆ. ಅದೇ ರೀತಿ ರಾಜ್ಯಶಾಸ್ತ್ರದಲ್ಲಿ ಕು. ಬಸಮ್ಮ ಐದನೇ ರ್ಯಾಂಕ್, ಇತಿಹಾಸ ವಿಭಾಗದಲ್ಲಿ ಕು. ಶಶಿಕಲಾ 3ನೇ ರ್ಯಾಂಕ್, ಕನ್ನಡ ವಿಭಾಗದಲ್ಲಿ ಕು. ಶೋಭಾ ಬಾಬುರಾವ ನಾಲ್ಕನೇ ರ್ಯಾಂಕ್ ಹಾಗೂ ಕನ್ನಡ ವಿಭಾಗದ ಎರಡು ಪತ್ರಿಕೆಗಳಲ್ಲಿ ಗರಿಷ್ಠ ಅಂಕ ಗಳಿಸಿದ್ದಕ್ಕೆ ಕು. ಮಧು ಕರದಳಿ ಅವರು ಚಿನ್ನದ ಪದಕ ಪಡೆದಿದ್ದಾರೆ.
ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪಕರು ಹೊರಡಿಸಿದ ಸ್ನಾತಕೋತ್ತರ ಕೋರ್ಸುಗಳ ರ್ಯಾಂಕ್ ಪಟ್ಟಿ ಪ್ರಕಾರ ಆಯಾ ವಿಭಾಗಕ್ಕೆ ಐದು ರಾಂಕಗಳನ್ನು ನೀಡಲಾಗುತ್ತದೆ. ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ರ್ಯಾಂಕ್ ಗಳಿಸಿದ್ದಕ್ಕಾಗಿ ಕಾಲೇಜು ಅಭಿವೃದ್ಧಿ ಪರಿಷತ್ತಿನ ಅಧ್ಯಕ್ಷರು ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಎಲ್ಲ ಅಭಿವೃದ್ಧಿ ಪರಿಷತ್ತಿನ ಸದಸ್ಯರು, ಪ್ರಾಚಾಯರಾದ ಪ್ ಖಂಡೇರಾವ, ಬೋಧಕ/ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವಸತಿ ಶಾಲೆ ಪ್ರವೇಶ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
********************************************
ಕಲಬುರಗಿ,ಜ.18.(ಕ.ವಾ.)-ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ವಸತಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಡಾ|| ಬಿ.ಆರ್. ಅಂಬೇಡ್ಕರ ವಸತಿ ಶಾಲೆಗಳಲ್ಲಿ 2018-19ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 25ರವರೆಗೆ ವಿಸ್ತರಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ತಮ್ಮ ಸಮೀಪದ ವಸತಿ ಶಾಲೆಯ ಪ್ರಾಂಶುಪಾಲರಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಫೆಬ್ರವರಿ 25ರೊಳಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಈ ಹಿಂದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ 13 ಎಂದು ನಿಗದಿಪಡಿಸಲಾಗಿತ್ತು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 19ರಿಂದ ಅಖಿಲ ಭಾರತ ವೃತ್ತಿ ಪರೀಕ್ಷೆ
*****************************************
ಕಲಬುರಗಿ,ಜ.18.(ಕ.ವಾ.)-ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಜನವರಿ 19ರಿಂದ ಫೆಬ್ರವರಿ 15ರವರೆಗೆ ನಡೆಸಲಾಗುವ ಅಖಿಲ ಭಾರತ ವೃತ್ತಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಈ ಪರೀಕ್ಷೆಯನ್ನು ಪಾರದರ್ಶಕತೆ, ಸುಸೂತ್ರವಾಗಿ ಹಾಗೂ ಯಾವುದೇ ಅವ್ಯವಹಾರವನ್ನು ನಡೆಯದಂತೆ ನೋಡಿಕೊಳ್ಳಲು ಪರೀಕ್ಷಾ ಕೇಂದ್ರಕ್ಕೆ ಮುಖ್ಯಸ್ಥರನ್ನಾಗಿ ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷರನ್ನು ನೇಮಿಸಿ ಆದೇಶಿಸಲಾಗಿದೆ. ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಇನ್‍ವಿಜಿಲೇಟರ್ಸ್ ಥೇಯರಿ ಪರೀಕ್ಷೆಗಳಿಗೆ ಪ್ರಾಥಮಿಕ ಅಥವಾ ಪ್ರೌಢಶಾಲಾ ಶಿಕ್ಷಕರನ್ನು ಕರ್ತವ್ಯಕ್ಕೆ ನೇಮಿಸಿಕೊಳ್ಳಬೇಕು.
ಅದೇ ರೀತಿ ಜನವರಿ 19 ರಿಂದ 24ರವರೆಗೆ ಜಿಲ್ಲೆಯ 10 ಕೇಂದ್ರಗಳಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷೆಗೆ ಕಲಬುರಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರನ್ನು ನೋಡಲ್ ಅಧಿಕಾರಿಗಳನ್ನಾ ನೇಮಕ ಮಾಡಲಾಗಿದೆ. ಅದೇ ರೀತಿ ಪ್ರಾಯೋಗಿಕ ಪರೀಕ್ಷೆಗಳಿಗೆ ಪ್ರಾಥಮಿಕ ಅಥವಾ ಪ್ರೌಢಶಾಲಾ ಶಿಕ್ಷಕರನ್ನು ಕರ್ತವ್ಯಕ್ಕೆ ನೇಮಿಸಿಕೊಳ್ಳಬೇಕು.
ಪರೀಕ್ಷೆಗಳ ದಿನದಂದು ಐಟಿಐ ಕಾಲೇಜಿನ ಸಿಬ್ಬಂದಿ, ಪ್ರಾಂಶುಪಾಲರು ಮತ್ತು ಆಡಳಿತ ವರ್ಗದವರನ್ನು ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಥೇಯರಿ ಪರೀಕ್ಷೆಗಳನ್ನು ನಡೆಯುವ ಪರೀಕ್ಷೆ ಕೇಂದ್ರಗಳಲ್ಲಿನ ಅಗತ್ಯ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.
ಸರ್ಕಾರದ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಲು ತಾಂತ್ರಿಕ ತೊಂದರೆಯಾದ್ದಲ್ಲಿ (ಠಿoತಿeಡಿ ಜಿಚಿiಟuಡಿe) ಮಾತ್ರ ಸಂಜೆ 5.30 ಗಂಟೆ ನಂತರವೂ ಸಹ ಮತ್ತು ರವಿವಾರ ಅಥವಾ ಸಾರ್ವತ್ರಿಕ ರಜೆ ದಿನಗಳಂದು ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


No comments:

Post a Comment