GULBARGA VARTHE

GULBARGA VARTHE

Wednesday, 17 January 2018

News and photo Date: 17--01--2018

ಕಲಬುರಗಿಯನ್ನು ಪ್ರಶಂಸೆಗೆ ಪಾತ್ರರಾಗುವ ಹಾಗೆ ಅಭಿವೃದ್ಧಿ ಮಾಡಲು ಸಲಹೆ
*******************************************************************
ಕಲಬುರಗಿ,ಜ.17.(ಕ.ವಾ.)-ವಿಭಾಗೀಯ ಕೇಂದ್ರವಾಗಿರುವ ಕಲಬುರಗಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ, ಆರೋಗ್ಯ ಸೇವೆ, ಶಾಲಾ-ಕಾಲೇಜುಗಳನ್ನು ಅಭಿವೃದ್ಧಿಗೊಳಿಸಿ ಬೇರೆ ರಾಜ್ಯಗಳಿಂದ ಬರುವವರು ಪ್ರಸಂಶೆ ಪಾತ್ರವಾಗುವ ಹಾಗೆ ಮಾಡಬೇಕೆಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.
ಅವರು ಬುಧವಾರ ಕುಸನೂರ ರಸ್ತೆಯಲ್ಲಿರುವ ಪಂಚಾಯತ್‍ರಾಜ್ ಇಂಜನಿಯರಿಂಗ್ ವಿಭಾಗದ ಕಚೇರಿ ಆವರಣದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಕಚೇರಿ ಕಲಬುರಗಿ, ಪಂಚಾಯತ್‍ರಾಜ್ ಇಂಜನಿಯರಿಂಗ್ ಉಪವಿಭಾಗ ಕಲಬುರಗಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಕಲಬುರಗಿ ನೂತನ ಕಚೇರಿ ಕಟ್ಟಡದ ಉದ್ಘಾಟಿಸಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಸತಿ ಗೃಹದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು.
ನಗರ ಅಥವಾ ಜಿಲ್ಲೆ ಅಭಿವೃದ್ಧಿಯಾಗಿದೆ ಎಂಬುವುದಕ್ಕೆ ಅಲ್ಲಿನ ರಸ್ತೆ ಸಂಪರ್ಕ ಸಾಕ್ಷಿಯಾಗುತ್ತದೆ. ಹಳ್ಳಿ ರಸ್ತೆಗಳು ಜಿಲ್ಲೆಯಿಂದ ತಾಲೂಕು ಹಾಗೂ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ರಸ್ತೆಗಳು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗುವುದರಿಂದ ಅಭಿವೃದ್ಧಿ ಎದ್ದು ಕಾಣುತ್ತದೆ. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಉತ್ತಮ ಕೆಲಸಗಳಾಗಿವೆ ಎಂದು ಹೇಳಿದರು.
ಈ ಹಿಂದೆ ಬಿಜಾಪುರ, ಹೈದ್ರಾಬಾದ್, ಅಹ್ಮದನಗರವರೆಗಿನ ಪ್ರದೇಶ ಗುಲಬರ್ಗಾ ಆಡಳಿತಕ್ಕೆ ಒಳಪಡುತ್ತಿದ್ದವು. ಗುಲಬರ್ಗಾ ಆಡಳಿತ ವಿಭಾಗವನ್ನು ಐದು ಭಾಗಗಳನ್ನಾಗಿ ಬೇರ್ಪಡಿಸಲಾಗಿದೆ. ವಿಜಯಪುರದ ಆದಿಲಶಾಹಿ, ಬೀದಿರನ ಬರಿದಶಾಹಿ, ಹೈದ್ರಾಬಾದಿನ ಗೋಲ್ಕುಂಡಾ ಹಾಗೂ ಗುಜುರಾತನಲ್ಲಿ ಸಣ್ಣ ಭಾಗವಾಗಿ ವಿಂಗಡಿಸಲಾಗಿದೆ ಎಂಬ ಕಲಬುರಗಿಯ ಹಿನ್ನೆಲೆಯನ್ನು ನೆನಪಿಸಿದರು.
ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯಲ್ಲಿ ರಸ್ತೆ, ಚರಂಡಿ, ಕಟ್ಟಡ, ಕುಡಿಯುವ ನೀರು, ಶಾಲಾ-ಕಾಲೇಜುಗಳಿಗೆ ಆವರಣ ಗೋಡೆ ಹಾಗೂ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಸಂಸದರು ಸರ್ಕಾರಿ ಆಸ್ತಿಗಳ ಸಮರ್ಪಕ ನಿರ್ವಹಣೆ ಮಾಡಿ ಅವುಗಳನ್ನು ರಕ್ಷಿಸಬೇಕು. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಆಡಳಿತದ ಚುಕ್ಕಾಣಿ ಹಿಡಿದವರು ಅಭಿವೃದ್ಧಿ ಕಾಮಗಾರಿಗಳನ್ನು ನಿರ್ದಿಷ್ಟ ಮಾನದಂಡಗಳಂತೆ ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮಾತನಾಡಿ, ರಾಜ್ಯದಲ್ಲೇ ಪ್ರಪ್ರಥಮವಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗ ಕಚೇರಿಯನ್ನು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯಿತಿಯ ಹಳೆ ಕಟ್ಟಡ ಮೇಲ್ಛಾವಣಿ ಮತ್ತು ಕೊಠಡಿಗಳನ್ನು 70 ಲಕ್ಷ ರೂ.ಗಳಲ್ಲಿ ನವೀಕರಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿರಿ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಗಳಲ್ಲಿ ಆಯ್ಕೆಯಾದ ಪ್ರಥಮ ಮೂರು ಬಹುಮಾನಗಳ ಚಿತ್ರಗಳನ್ನು ಬಳಸಿ ಈ ವರ್ಷದ ಕ್ಯಾಲೆಂಡರ್ ರೂಪಿಸಲಾಗಿದೆ. ಕ್ಯಾಲೆಂಡಿನಲ್ಲಿ ರಾಷ್ಟ್ರೀಯ ಹಬ್ಬಗಳಾದ ಯುವಕರ ದಿನಾಚರಣೆ, ಮತದಾರರ ದಿನಾಚರಣೆ, ಹೆಣ್ಣು ಮಕ್ಕಳ ದಿನಾಚರಣೆಯಂತಹ ಮಹತ್ವದ ದಿನಾಚರಣೆಯನ್ನು ತಿಳಿಸಲು ಅಳವಡಿಸಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಿಲ್ಲೆಯ ಸುಮಾರು 100 ಶಾಲೆಗಳಿಗೆ ಆವರಣ ಗೋಡೆ ನಿರ್ಮಿಸಿ ಆಸ್ತಿ ರೂಪಿಸಲಾಗಿದೆ. ಇದು ರಾಜ್ಯದಲ್ಲಿ ಮಾದರಿಯಾಗಿದ್ದು, ಶಿಕ್ಷಣ ಇಲಾಖೆಯವರು ಇದರ ಆಧಾರದ ಮೇಲೆ ಎಲ್ಲ ಶಾಲೆಗಳಿಗೆ ಆವರಣ ಗೋಡೆ ನಿರ್ಮಿಸಲು ಸುತ್ತೋಲೆ ಹೊರಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ರಮೇಶ ಯಾಕಾಪುರ, ಕಲಬುರಗಿ ಕಾಡಾ ಅಚ್ಟುಕಟ್ಟು ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳ ವಲಯ ಪ್ರಾಧಿಕಾರದ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹರ್ಷಾನಂದ ಸುಭಾಷ ಗುತ್ತೇದಾರ, ಶಿವಾನಂದ ಭೀಮರಾವ ಪಾಟೀಲ ಮರತೂರ, ಪಂಚಾಯತ್‍ರಾಜ್ ಇಂಜನಿಯರಿಂಗ್ ವಿಭಾಗದ ಮುಖ್ಯ ಇಂಜಿನಿಯರ್ ಶಿವಶಂಕರ ಗುರಗುಂಟಿ, ಕಾರ್ಯನಿರ್ವಾಹಕ ಇಂಜನಿಯರ್ ಶರಣಬಸಪ್ಪ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ ಮೋತಕಪಲ್ಲಿ ಮತ್ತಿತರ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾನೂನು ನಮ್ಮ ನೆರಳಿದ್ದಂತೆ----ಎಸ್.ಆರ್. ಮಾಣಿಕ್ಯ
**************************************************
ಕಲಬುರಗಿ,ಜ.17.(ಕ.ವಾ.)-ತಾಯಿಯ ಗರ್ಭದಿಂದ ಹಿಡಿದು ಮನುಷ್ಯ ಮರಣಹೊಂದುವವರೆಗೂ ಕಾನೂನಿನ ಚೌಕಟ್ಟಿನಲ್ಲಿಯೇ ಬದುಕಬೇಕಾಗುತ್ತದೆ. ಹೀಗಾಗಿ ಕಾನೂನು ನಮ್ಮ ನೆರಳಿದ್ದಂತೆ, ಕಾನೂನು ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ಮಾಣಿಕ್ಯ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಎನ್.ಎಸ್.ಎಸ್. ಘಟಕ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಹಾಗೂ ಸ್ವಚ್ಚ ಸಂಕಲ್ಪ ಟ್ರಸ್ಟ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರೀಯ ಯುವ ದಿನಾಚರಣೆ” ಅಂಗವಾಗಿ ಬುಧವಾರ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸುಮಾರು 60 ಸಾವಿರ ಕಾಯ್ದೆಗಳಿವೆ. ತಾಯಿಯ ಗರ್ಭದಲಿದ್ದಾಗಲೇ ಪ್ರಸವ ಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ, ಜನನ ಹಾಗೂ ಮರಣ ದಿನಾಂಕ ನೋಂದಣಿಗೆ 1961ರ ಕಾಯ್ದೆ, 1986ರಲ್ಲಿ ಗ್ರಾಹಕರ ಹಿತ ರಕ್ಷಣಾ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮೋಟಾರ್ ವಾಹನ ಕಾಯ್ದೆ ಜಾರಿಯಾಗಿದೆ. ಹೀಗೆ ಜನನದಿಂದ ಮರಣದವರೆಗೆ ಕಾನೂನಿನಡಿ ಬದುಕು ಸಾಗುತ್ತದೆ. ಜನನದ ನಂತರ 21 ದಿನಗಳೊಳಗಾಗಿ ಜನನ ನೋಂದಣಿ ಮಾಡುವುದು ಕಡ್ಡಾಯ, ತದನಂತರ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ಯಾವುದೇ ವಸ್ತುಗಳನ್ನು ಹಣ ಕೊಟ್ಟು ಖರೀದಿಸುವವನು ಇಲ್ಲಿ ಗ್ರಾಹಕನಾಗುತ್ತಾನೆ. ವಸ್ತು ಮತ್ತು ಸೇವೆಗಳು ಪಡೆದ ನಂತರ ಅದರಲ್ಲಿ ನ್ಯೂನ್ಯತೆ ಕಂಡುಬಂದಲ್ಲಿ ವಸ್ತು ಖರೀದಿ ರಸೀದಿಯೊಂದಿಗೆ ಗ್ರಾಹಕ ವೇದಿಕೆ ಮೂಲಕ ಕಾನೂನಾತ್ಮಕ ಪರಿಹಾರ ಪಡೆಯಬಹುದು. ಸಮಾಜದಲ್ಲಿ ಸ್ವಾಸ್ಥ್ಯ ಜೀವನ ನಡೆಸುವ ಸಲುವಾಗಿ ಕಾನೂನು ಜಾರಿಗೊಳಿಸಲಾಗಿದೆ. ಯಾವ ಕ್ಷೇತ್ರದಲ್ಲಿರುತ್ತೇವೆಯೋ ಅಲ್ಲಿ ಪರಿಣಿತಿ ಪಡೆಯಬೇಕು. ಯುವಕರು ಶಿಸ್ತು, ಸಂಯಮ, ಉತ್ತಮ ಸಂಸ್ಕಾರ ಪಡೆದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯ ಕರ್ನಾಟಕ ದಿನಪತ್ರಿಕೆಯ ಕಲಬುರಗಿ ಸ್ಥಾನಿಕ ಸಂಪಾದಕ ದೇವಯ್ಯ ಗುತ್ತೇದಾರ್ ಮಾತನಾಡಿ, ಕೇವಲ ಸಮಾಜಕ್ಕಾಗಿಯೇ ಜೀವನ ಸಾಗಿಸಿದ ಸ್ವಾಮಿ ವಿವೇಕಾನಂದರನ್ನು ಇಂದು ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಸಮಾಜ ಗುರುತಿಸುವಂತಹ ವ್ಯಕ್ತಿಗಳಾಗಿ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಮಾತನಾಡಿ, 18 ವರ್ಷ ಮೇಲ್ಪಟ್ಟವರು ಮತದಾನದ ಹಕ್ಕುನ್ನು ಪಡೆದಿರುತ್ತಾರೆ. ಇದೂವರೆಗೂ ಕೇವಲ ಶೇ.66% ಮಾತ್ರ ದೇಶದಲ್ಲಿ ಮತದಾನ ಆಗುತ್ತಿದೆ. ಆದ್ದರಿಂದ ಕಡ್ಡಾಯ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಆಸ್ಟ್ರೇಲಿಯಾದಲ್ಲಿ ಮತದಾನ ಮಾಡದಿದ್ದರೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ವಿವರಿಸಿದರು. ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರೂ ಪರವಾಗಿಯೂ ನೀವು ಮತದಾನ ಮಾಡಲು ಇಚ್ಛಿಸದಿದ್ದಲ್ಲಿ ನೋಟಾ ಎಂಬ ಬಟನ್ ಒತ್ತಬಹುದಾಗಿದೆ. ಯುವಕರು ಭ್ರಷ್ಟಾಚಾರ ತಡೆಗಟ್ಟಲು ಮತದಾನ ಮಾಡುವುದು ಅವಶ್ಯಕವಾಗಿದೆ ಎಂದರು.
ಕಲಬುರಗಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎನ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದರು. ಡಾ.ಶಿವರಾಜ್ ಶಾಸ್ತ್ರಿ ಸ್ವಾಗತಿಸಿದರು. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ವೆಂಕಣ್ಣ ಡೊಣ್ಣೆಗೌಡ ನಿರೂಪಿಸಿದರು. ಕಾಲೇಜಿನ ಪ್ರಾಧ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

ಚಿಂಚೋಳಿಯ ಚಂದಾಪುರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
*********************************************************
ಕಲಬುರಗಿ,ಜ.17.(ಕ.ವಾ.)-ಜಿಲ್ಲೆಯ ಗಡಿ ಭಾಗ ಚಿಂಚೋಳಿಯ ಚಂದಾಪುರದಲ್ಲಿ ಕಲಬುರಗಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜನವರಿ 20 ಮತ್ತು 21ರಂದು ನಡೆಯಲಿದೆ.
ಜನವರಿ 20 ರಂದು ಬೆಳಿಗ್ಗೆ 10.30 ಗಂಟೆಗೆ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುವ ಸಮ್ಮೇಳನದ ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನೆರವೇರಿಸುವರು.
ಹಾರಕುಡ-ಚಿಂಚೋಳಿಯ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠನ ಪೀಠಾಧಿಪತಿಗಳು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ನಡೆಯುವ ನುಡಿ ಜಾತ್ರೆ ಕಾರ್ಯಕ್ರಮದಲ್ಲಿ ಚಿಂಚೋಳಿ ಶಾಸಕರು ಹಾಗೂ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ್ ಜಾಧವ ಸರ್ವರನ್ನು ಸ್ವಾಗತಿಸುವರು.
ಪ್ರವಾಸೋದ್ಯಮ ಹಾಗೂ ಐ.ಟಿ.ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಮರಣ ಸಂಚಿಕೆಯನ್ನು, ಮಾಜಿ ಸಚಿವರಾದ ವೈಜನಾಥ ಪಾಟೀಲ್ ಅವರು ಮೈಲಾರಲಿಂಗ ವಚನ ಸಂಕಲನವನ್ನು ಮತ್ತು ಸುನೀಲ ವಲ್ಯಾಪುರೆ ಅವರು ಪುಸ್ತಕ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಬೀದರ ಸಂಸದ ಭಗವಂತ ಖೂಬಾ ಆಗಮಿಸಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷ ಡಾ.ವೀರಣ್ಣ ದಂಡೆ ಮತ್ತು ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿದ್ರಾಮ ಪೊಲೀಸ್ ಪಾಟೀಲ ಉಪಸ್ಥಿತಿಯಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೀರಭದ್ರ ಸಿಂಪಿ ಪ್ರಾಸ್ತಾವಿಕ ಮಾತನಾಡುವರು.
ಇದಕ್ಕು ಮುನ್ನ ಬೆಳಿಗ್ಗೆ 8 ಗಂಟೆಗೆ ಶಾಸಕ ಡಾ.ಉಮೇಶ ಜಾಧವ ಅವರು ರಾಷ್ಟ್ರಧ್ವಜಾರೋಹಣ ಮತ್ತು ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೀರಭದ್ರಪ್ಪ ಸಿಂಪಿ ಅವರು ಪರಿಷತ್ ಧ್ವಜಾರೋಹಣ ನೆರವೇರಿಸುವರು. ನಂತರ 9 ಗಂಟೆಗೆ ಚಂದಾಪುರ ಪಟ್ಟಣದ ಡಾ|| ಅಂಬೇಡ್ಕರ ವೃತ್ತದಿಂದ ಕಲಾ ತಂಡಗಳೊಂದಿಗೆ ಆರಂಭವಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯೂ ಬಸ್ ನಿಲ್ದಾಣ-ಬಸವೇಶ್ವರ ಚೌಕ್ ಮಾರ್ಗವಾಗಿ ಸಮ್ಮೇಳನದ ವೇದಿಕೆಗೆ ಕೊನೆಗೊಳ್ಳಲಿದೆ. ಚಿಂಚೋಳಿ ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ ಮೆರವಣಿಗೆಗೆ ಚಾಲನೆ ನೀಡುವರು.
ಉದ್ಘಾಟನಾ ಕಾರ್ಯಕ್ರಮದ ನಂತರ ಮದ್ಯಾಹ್ನ 12.20 ರಿಂದ 12.40ರ ವರೆಗೆ ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ, ಮಧ್ಯಾಹ್ನ 1 ರಿಂದ 2 ಗಂಟೆ ವರೆಗೆ ಗಡಿನಾಡು ಸೌಹಾರ್ದತೆ ಗೋಷ್ಠಿ, 2.20 ರಿಂದ 3.40 ಗಂಟೆ ವರೆಗೆ ಸಾಂಸ್ಕøತಿಕ ಅಸ್ಮಿತೆ ಗೋಷ್ಠಿ, ಸಾಯಂಕಾಲ 4 ರಿಂದ 6 ಗಂಟೆ ವರೆಗೆ ಕವಿಗೋಷ್ಠಿ-1, 6 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಜನವರಿ 21 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರಗೆ ಬಿಸಿಲು ನಾಡಿನ ಹಸಿರು(ಚಿಂಚೋಳಿ ತಾಲೂಕು ದರ್ಶನ) ಕುರಿತು ವಿಶೇಷ ಉಪನ್ಯಾಸ, ಬೆಳಿಗ್ಗೆ 11.20 ರಿಂದ 12.40 ಗಂಟೆ ವರೆಗೆ ವರ್ತಮಾನದ ಸವಾಲುಗಳ ಕುರಿತು ಗೋಷ್ಠಿ, ಮಧ್ಯಾಹ್ನ 1 ರಿಂದ 2.20 ಗಂಟೆ ವರೆಗೆ ಭವಿಷ್ಯದ ಬೆಳಕು ಕುರಿತು ಗೋಷ್ಠಿ, ಮಧ್ಯಾಹ್ನ 2.40 ರಿಂದ 4 ಗಂಟೆ ವರೆಗೆ ಕವಿಗೋಷ್ಠಿ-2, ಸಾಯಂಕಾಲ 4 ರಿಂದ 4.30 ಗಂಟೆ ವರೆಗೆ ಬಹಿರಂಗ ಅಧಿವೇಶನ, 4.30 ರಿಂದ 6 ಗಂಟೆವರೆಗೆ ಗೌರವ ಸನ್ಮಾನ ಮತ್ತು ಸಮಾರೋಪ ಸಮಾರಂಭ ಜರುಗಲಿದೆ.

ಅಕೌಂಟಿಂಗ್ ಕನ್ಸಲ್‍ಟೆಂಟ್ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನ
**********************************************************
ಕಲಬುರಗಿ,ಜ.17.(ಕ.ವಾ.)-ಕಲಬುರಗಿ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಹೊಸದಾಗಿ ಸೃಜನೆಯಾಗಿರುವ ಒಂದು ಅಕೌಂಟಿಂಗ್ ಕನ್ಸಲ್‍ಟೆಂಟ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಹ ಎಂ.ಕಾಂ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ಮಾಸಿಕ 30,000ರೂ.ಗಳ ವೇತನ ನೀಡಲಾಗುವುದು. ಎಂ.ಕಾಂ. ಪದವಿ, ಅಕೌಂಟಿಂಗ್ ಮತ್ತು ಆಡಿಟ್‍ನಲ್ಲಿ 5 ವರ್ಷಗಳ ಕನಿಷ್ಠ ಅನುಭವ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಹರು. ಅಭ್ಯರ್ಥಿಗಳ ನೇಮಕಾತಿ ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು, ಅರ್ಹ (ಮೇರಿಟ್) ಸರ್ಕಾರದ ನಿಯಮ, ಸುತ್ತೋಲೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಗುತ್ತಿಗೆ ಅವಧಿಯು ಪ್ರಾಥಮಿಕವಾಗಿ ಒಂದು ವರ್ಷದ್ದಾಗಿದ್ದು, ಅಭ್ಯರ್ಥಿಯು ಕಂಪ್ಯೂಟರ ಜ್ಞಾನವುಳ್ಳರಾಗಿದ್ದು, ಎಂ.ಎಸ್. ಆಫೀಸ್, ಟ್ಯಾಲಿಯಲ್ಲಿ ಅನುಭವ ಹೊಂದಿರಬೇಕು. ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
ನಿಗದಿತ ಅರ್ಜಿ ನಮೂನೆಯನ್ನು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ 11, ಮಿನಿ ವಿಧಾನಸೌಧ, ಕಲಬುರಗಿ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳಾದ ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರಮಾಣಪತ್ರ ಪ್ರತಿ ಹಾಗೂ ಒಂದು ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಜನವರಿ 31ರೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾನೂನು ಪದವಿಧರರಿಗೆ ನ್ಯಾಯಾಂಗ ಆಡಳಿತದ ವೃತ್ತಿ ತರಬೇತಿ
*********************************************************
ಕಲಬುರಗಿ,ಜ.17.(ಕ.ವಾ.)-ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿಗಾಗಿ ಖಾಲಿಯಿರುವ ಒಟ್ಟು 14 ಸ್ಥಾನಗಳಿಗೆ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಜನಾಂಗಕ್ಕೆ ಸೇರಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ 2ಎ, 3ಎ ಮತ್ತು 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ. ಮಿತಿಯೊಳಗಿರಬೇಕು. ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 3.50 ಲಕ್ಷ ರೂ. ಆದಾಯ ಮಿತಿಯೊಳಗಿರಬೇಕು. ಮಹಿಳಾ ಅಭ್ಯರ್ಥಿಗಳಿಗೆ ಶೇ.33 ರಷ್ಟು ಮೀಸಲಾತಿ ನೀಡಲಾಗುವುದು. ತರಬೇತಿ ಅವಧಿ 4 ವರ್ಷಗಳದ್ದಾಗಿದ್ದು, ತರಬೇತಿ ಅವಧಿಯಲ್ಲಿ ಪ್ರತಿ ಮಾಹೆಯಾನ 4000 ರೂ.ಗಳ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು. ಪ್ರವರ್ಗ-1ರಡಿ ಬರುವ ಅಭ್ಯರ್ಥಿಗಳ ವಯಸ್ಸು 31 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಲು ನಗದಿಪಡಿಸಿದ 3 ವರ್ಷದೊಳಗೆ ಅಭ್ಯರ್ಥಿಗಳು ವಕೀಲ ವೃತ್ತಿ ಕೈಗೊಳ್ಳಲು ನಿಗದಿಪಡಿಸಿದ ಕಾನೂನು ಪದವಿ ಪಡೆದಿರಬೇಕು.
ಎಲ್.ಎಲ್.ಬಿ. ಕೋರ್ಸಿನ ಎಲ್ಲ ವರ್ಷಗಳ ದೃಢೀಕೃತ ಅಂಕಪಟ್ಟಿ, ವಕೀಲ ವೃತ್ತಿ ಕೈಗೊಳ್ಳಲು ನೋಂದಣಿ ಮಾಡಿದ ಪ್ರಮಾಣಪತ್ರ ಹಾಗೂ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣಪತ್ರ ದಾಖಲಾತಿಗಳನ್ನು ಲಗತ್ತಿಸಿ ಜನವರಿ 30ರ ಸಂಜೆ 5.30 ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸಲ್ಲಿಸಬೇಕು. ಅಪೂರ್ಣವಾದ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9243689100ನ್ನು ಸಂಪರ್ಕಿಸಲು ಕೋರಿದೆ.

ಜನವರಿ 19ರಂದು ಮಹಾಯೋಗಿ ವೇಮನ ಜಯಂತ್ಯೋತ್ಸವ
*****************************************************
ಕಲಬುರಗಿ,ಜ.17.(ಕ.ವಾ.)-ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾಯೋಗಿ ವೇಮನ್ ಜಯಂತ್ಯೋತ್ಸವವನ್ನು ಶುಕ್ರವಾರ ಜನವರಿ 19ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಮಹಾಯೋಗಿ ವೇಮನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದಲ್ಲಿ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಎಸ್. ಮುರುಗನ್, ಮಾಜಿ ಸಚಿವರು ಹಾಗೂ ಕಲಬುರಗಿ ರಡ್ಡಿ ಸಮಾಜದ ಗೌರವಾಧ್ಯಕ್ಷ ಶರಣಬಸಪ್ಪ ದರ್ಶನಾಪುರ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕಲಬುರಗಿ ಗುಲಬರ್ಗಾ ವಿಶ್ವವಿದ್ಯಾಲಯ, ಖಾಸಗಿ ಕಾಲೇಜುಗಳ ಶಿಕ್ಷಕರ ಸಂಘದ ಅಧ್ಯಕ್ಷ ಪ್ರೊ. ಎಸ್.ಎಲ್. ಪಾಟೀಲ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ದಿನಾಚರಣೆಯ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಸರದಾರ ವಲ್ಲಭಭಾಯಿ ಪಟೇಲ್ ಪ್ರಾರಂಭವಾಗಿ ಡಾ. ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಮಹಾಯೋಗಿ ವೇಮನ್ ಭಾವಚಿತ್ರ ಮತ್ತು ವಿವಿಧ ಕಲಾ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆ ಜರುಗುವುದು.

ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ-ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮ
*************************************************************************
ಕಲಬುರಗಿ,ಜ.17.(ಕ.ವಾ.)-ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ಸ್ವಾಮಿ ವಿವೇಕಾನಂದರ 155ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಮತ್ತು ಯುವ ಸ್ಪಂದನಾ ಅರಿವು, ಜೀವನ ಕೌಶಲ್ಯ ಕಾರ್ಯಕ್ರಮವನ್ನು ಕಲಬುರಗಿಯ ವಿಶ್ವನಾಥರೆಡ್ಡಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿತ್ತು.
ಕಲಬುರಗಿ ರಾಜಾಪೂರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮಹೇಶ್ವರಾನಂದಜೀ ಮಹಾರಾಜ ದಿವ್ಯ ಸಾನಿಧ್ಯ ವಹಿಸಿದ್ದರು. ಯುಥ್ ಫಾರ್ ಸೇವಾ ಕೇಂದ್ರದ ರಾಷ್ಟ್ರೀಯ ಸಂಯೋಜಕಿ ಸ್ವಾತಿ ರಾಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್. ಜಿ. ನಾಡಗೀರ, ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಷಣ್ಮುಖಯ್ಯ, ವಿಶ್ವ ವಿದ್ಯಾಲಯ ಸಂಘದ ಜಂಟಿ ಕಾರ್ಯದರ್ಶಿ ಎಸ್.ಡಿ. ನಿಜಗುಣಿ, ವಿಶ್ವನಾಥರೆಡ್ಡಿ ಮುದ್ನಾಳ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಯುವ ಪರಿವರ್ತಕ ದೇವಪ್ಪಾ ಕನ್ನಡಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕುರಿತು ಮಾತನಾಡಿ, ಯುವ ಸ್ಪಂದನದ ಅರಿವನ್ನು ಮೂಡಿಸಿದರು.

ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು
*******************************************
ವಿದ್ಯಾರ್ಥಿಗಳಿಗೆ ಚಿತ್ರಕಲಾ-ಪ್ರಬಂಧ ಸ್ಪರ್ಧೆ
*************************************
ಕಲಬುರಗಿ,ಜ.17.(ಕ.ವಾ.)-ಭಾರತೀಯ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಲಬುರಗಿ ಉತ್ತರ ವಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢ ಶಾಲಾ ಮಕ್ಕಳಿಗಾಗಿ ಸ್ವೀಪ್ ಕಾರ್ಯಕ್ರಮದಡಿಯಲ್ಲಿ ಬ್ಲಾಕ್‍ಮಟ್ಟದ ಚಿತ್ರಕಲೆ, ಪ್ರಬಂಧ ಮತ್ತು ಭಿತ್ತಿ ಪತ್ರ ಸ್ಪರ್ಧೆಗಳನ್ನು ಬುಧವಾರದಂದು ಕಲಬುರಗಿಯ ನಗರೇಶ್ವರ ಶಿಕ್ಷಣ ಸಂಸ್ಥೆಯ ಶರಬಯ್ಯಾ ಗಾದಾ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಉತ್ತರ ವಲಯದ ಪ್ರೌಢಶಾಲೆಗಳಿಂದ 96 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.
ಕಲಬುರಗಿ ಉತ್ತರ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಪಂಚಶೀಲಾ ಬೇನಾಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಹಣಮಂತರಾವ ಕುಲಕರ್ಣಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಕಾಂತ ಕಿಣಗಿ ,ಶರಬಯ್ಯಾ ಗಾದಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ.ಶ್ರೀನಿವಾಸ, ಸೊಂತ ಸರ್ಕಾರಿ ಪ್ರೌಢಶಾಲೆ ಶಾಲೆಯ ಮುಖ್ಯಗುರುಗಳಾದ ಪರಮೇಶ್ವರ ಹಾಗೂ ನಗರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶಂಕರ ಪವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಬಿ.ಆರ್.ಪಿ ಚಂದ್ರಕಾಂತ ಕಿಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮತದಾನದ ಮಹತ್ವ ,ಪ್ರಜಾಪ್ರಭುತ್ವ, ಗಣರಾಜ್ಯ,ಸಾರ್ವಭೌಮ ಕುರಿತು ಸವಿಸ್ತಾರವಾಗಿ ಮಕ್ಕಳೊಂದಿಗೆ ಮಾತನಾಡಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಕಲಬುರಗಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ಮುಧೋಳ, ಕಲಬುರಗಿ ಉತ್ತರ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಪಂಚಶೀಲಾ ಬೇನಾಳ, ಶರಬಯ್ಯಾ ಗಾದಾ ಪ್ರೌಢಶಾಲೆಯ ಮುಖ್ಯ ಗುರು ಶ್ರೀನಿವಾಸ, ಶರಬಯ್ಯಾ ಗಾದಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಡೆಸಿಕೊಟ್ಟರು ಬಿ.ಆರ್.ಪಿ. ಪ್ರಶಾಂತ ಸ್ವಾಗತಿಸಿದರು. ಸಿ.ಆರ್.ಸಿ. ಮಲ್ಲಿನಾಥ ಪಾಟೀಲ್ ಕಾರ್ಯಕ್ರಮದ ನಿರೂಪಿಸಿದರು. ಸೊಂತ ಸಿ.ಆರ್.ಪಿ ಕಾಶೀನಾಥ ವಂದಿಸಿದರು.

69ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನ
**************************************************************
ಕಲಬುರಗಿ,ಜ.17.(ಕ.ವಾ.)-ಕಲಬುರಗಿ ನಗರದಲ್ಲಿ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು 2018ರ ಜನವರಿ 26ರಂದು ಅತ್ಯಂತ ಸಂಭ್ರಮ-ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕಲಬುರಗಿಯಲ್ಲಿ ಜರುಗಿದ ಸಭೆಯು ಸರ್ವಾನುಮತದ ನಿರ್ಣಯ ಕೈಗೊಂಡಿತು.
ಗಣರಾಜ್ಯೋತ್ಸವದ ದಿನದಂದು ಬೆಳಿಗ್ಗೆ 7 ರಿಂದ 8-30 ಗಂಟೆಯವರೆಗೆ ಎಲ್ಲ ಇಲಾಖೆಗಳ ಮುಖ್ಯಸ್ಥರು ತಮ್ಮ ತಮ್ಮ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರು ರಾಷ್ಟ್ರ ಧ್ವಜಾರೋಹಣ ನೆರವೇರಿಸಬೇಕು. ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್ ಪರೇಡ ಮೈದಾನದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಲು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರನ್ನು ಆಹ್ವಾನಿಸಲು ಹಾಗೂ ಈ ಸಮಾರಂಭಕ್ಕೆ ಜಿಲ್ಲೆಯ ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರನ್ನು ಮತ್ತಿತರ ಚುನಾಯಿತ ಪ್ರತಿನಿಧಿಗಳನ್ನು ಸಹ ಆಹ್ವಾನಿಸಲು ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.
ಈ ಬಾರಿ ಗಣರಾಜ್ಯೋತ್ಸವ ಸಮಾರಂಭವನ್ನು ವಿನೂತನವಾಗಿ ಹಾಗೂ ಆಕರ್ಷಕವಾಗಿ ಆಚರಿಸಲು ಜಿಲ್ಲಾಧಿಕಾರಿಗಳು ಕಲಬುರಗಿ ಸಹಾಯಕ ಆಯುಕ್ತೆ ಪಿ. ಸುಶೀಲಾ ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಸಮಿತಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಭೀಮಾಶಂಕರ ತೆಗ್ಗೆಳ್ಳಿ ಅವರ ಅಧ್ಯಕ್ಷತೆಯಲ್ಲಿ ಸ್ತಬ್ದ ಚಿತ್ರ ರಚನಾ ಸಮಿತಿ ರಚಿಸಿದರು. ಈ ಸಮಿತಿಗಳು ಸಭೆ ಕರೆದು ಈ ನಾಡಿನ ಜಾನಪದ ಹಾಗೂ ಸಾಂಪ್ರದಾಯಿಕ ಕಲೆಗಳಾದ ಡೊಳ್ಳು ಕುಣಿತ, ಲಂಬಾಣಿ ನೃತ್ಯಗಳಂತಹ ಕಲೆಗಳ ತಂಡಗಳನ್ನು ಹಾಗೂ ಎಲ್ಲ ಅಭಿವೃದ್ಧಿ ಇಲಾಖೆಗಳು ಕಡ್ಡಾಯವಾಗಿ ಸ್ತಬ್ದ ಚಿತ್ರಗಳನ್ನು ಕವಾಯತನಲ್ಲಿ ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಸ್ತಬ್ದಚಿತ್ರಗಳು ಗಣರಾಜ್ಯೋತ್ಸವ ಕವಾಯತು ಮುಗಿದ ನಂತರ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಲು ಸೂಚಿಸಿದರು.
ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಕರ್ಷಿಸಲು ಮತ್ತು ಮನರಂಜನೆ ನೀಡಲು ಗಾಳಿಪಟ, ರಂಗೋಲಿ, ಬಲೂನ್, ಮರಳು ಕಲೆಗಳಂತಹ ವಿನೂತನ ಕಲಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ಆರಿಸುವ ಪ್ರಾಯೋಗಿಕ ಕಾರ್ಯಕ್ರಮ ಹಾಗೂ ಪೊಲೀಸ್ ಇಲಾಖೆಯಿಂದ ಸಮರ ಕಲೆಗಳನ್ನು ಪ್ರದರ್ಶಿಸಬೇಕೆಂದರು.
ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವದ ಮುಖ್ಯ ಸಮಾರಂಭಕ್ಕೆ ಹಾಗೂ ಸಂಜೆ ರಂಗಮಂದಿರದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಗಣರಾಜ್ಯೋತ್ಸವದ ಅಂಗವಾಗಿ ನೆರವೇರಿಸಲಾಗುವ ಧ್ವಜಾರೋಹಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಹಾಗೂ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿಯ ಅಗೌರವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗಣರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸಲು ಅನುಕೂಲವಾಗುವಂತೆ ರಚಿಸಲಾದ ವಿವಿಧ ಉಪಸಮಿತಿಗಳು ಕೂಡಲೇ ಸಭೆಗಳನ್ನು ನಡೆಸಿ ಅವುಗಳಿಗೆ ವಹಿಸಿದ ಕೆಲಸ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಗಣರಾಜ್ಯೋತ್ಸವದ ಅಂಗವಾಗಿ ಕಲಬುರಗಿ ನಗರದಲ್ಲಿರುವ ಎಲ್ಲ ವೃತ್ತ, ಸರ್ಕಾರಿ ಕಚೇರಿ ಕಟ್ಟಡಗಳು, ಚಲನಚಿತ್ರ ಮಂದಿರಗಳನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಬೇಕೆಂದು ಅವರು ಸೂಚಿಸಿದರು.
ಕಲಬುರಗಿ ಸಹಾಯಕ ಆಯುಕ್ತೆ ಬಿ. ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಪ್ರೊಬೇಷನರಿ ಅಧಿಕಾರಿ ಅಕೃತಿ ಸಾಗರ, ಶಿಷ್ಟಾಚಾರ ತಹಸೀಲ್ದಾರ ಪ್ರಕಾಶ ಚಿಂಚೋಳಿಕರ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಎಸ್.ಸಿ.ಪಿ.-ಟಿ.ಎಸ್.ಪಿ. ಅನುದಾನ ಸಂಪೂರ್ಣ ಬಳಕೆಗೆ ಸಜ್ಜಾಗಲು ಸೂಚನೆ
******************************************************************
ಕಲಬುರಗಿ,ಜ.17.(ಕ.ವಾ.)-ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ವಿವಿಧ ಇಲಾಖೆಗಳಿಗೆ ನಿಗದಿಯಾಗಿರುವ ಅನುದಾನವು ಸಂಪೂರ್ಣವಾಗಿ ಬಿಡುಗಡೆಯಾಗಲಿದ್ದು, ಇದೇ ವರ್ಷ ಆ ಹಣವನ್ನು ಖರ್ಚು ಮಾಡಲು ಅಧಿಕಾರಿಗಳು ಸಂಪೂರ್ಣ ಸಜ್ಜಾಗಿರುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ಅವರು ಬುಧವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕಾರ್ಯಕ್ರಮಗಳು ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುತ್ತಿರುವ ಕುರಿತು ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಮಾರ್ಚ್ ಅಂತ್ಯದವರೆಗೆ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಅನುದಾನ ಖರ್ಚು ಮಾಡದೇ ಇದ್ದಲ್ಲಿ ಕಾನೂನಿನಿಂದ ಯಾರಿಗೂ ರಕ್ಷೆ ಸಿಗುವುದಿಲ್ಲ ಎಂದು ಎಚ್ಚರಿಸಿದರು.
ಕೃಷಿ ಇಲಾಖೆಯಲ್ಲಿ ಗಿರಿಜನ ಉಪಯೋಜನೆಯಡಿ ಕೃಷಿ ಭಾಗ್ಯ ಯೋಜನೆಗೆ ಸಾಕಷ್ಟು ಅನುದಾನ ಲಭ್ಯವಿದ್ದು, ಪರಿಶಿಷ್ಟ ಪಂಗಡದ ರೈತರು ಮುಂದೆ ಬಂದು ಕೃಷಿ ಹೊಂಡ ನಿರ್ಮಿಸಿಕೊಂಡು ಕೃಷಿ ಭಾಗ್ಯ ಯೋಜನೆ ಪ್ರಯೋಜನ ಪಡೆಯಬೇಕು. ತೋಟಗಾರಿಕೆ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರನ್ನು ನೀರಾವರಿಗೆ ಅಳವಡಿಸಲು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಹನಿ ನೀರಾವರಿ ಯೋಜನೆ ಪ್ರಯೋಜನ ದೊರಕಿಸಿ ತೋಟಗಾರಿಕೆಯಲ್ಲಿ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಸರ್ಕಾರವು ಪಶುಭಾಗ್ಯ ಯೋಜನೆಯನ್ನು ರೈತರ ಹಾಗೂ ಸಾರ್ವಜನಿಕರ ಉಪ ಜೀವನಕ್ಕೆ ಸಹಾಯವಾಗುವ ಹಾಗೆ ಆರ್ಥಿಕ ಅಭಿವೃದ್ಧಿ ಹೊಂದಲು ರೂಪಿಸಲಾಗಿದೆ. ಯೋಜನೆ ಜಾರಿಗೆ ಬಂದಾಗಿನಿಂದ ಕಳೆದ ಮೂರು ವರ್ಷಗಳಿಂದ ಪಶುಭಾಗ್ಯ ಯೋಜನೆ ಪ್ರಯೋಜನ ಪಡೆದ ಫಲಾನುಭವಿಗಳನ್ನು ಸಂಪರ್ಕಿಸಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಬೇಕು. ಪಶುಗಳನ್ನು ಪರ್ಚೆಸ ಕಮೀಟಿ ಮುಖಾಂತರ ಖರೀದಿಸುವಂತಾಗಬೇಕು ಎಂದರು.
ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುವವರಿಗೆ ಬಿಲ್ಲು ಪಾವತಿಸುವುದಿಲ್ಲ ಎಂಬ ದೂರುಗಳಿದ್ದು, ಅಧಿಕಾರಿಗಳು ತಾಲೂಕು ಪಂಚಾಯತಿಗಳಿಂದ ಜಿಲ್ಲಾ ಪಂಚಾಯಿತಿಗೆ ಮೇಲು ರುಜುವಿಗಾಗಿ ಬಂದಿರುವ ಬಿಲ್ಲುಗಳ ವಿವರ ಪಡೆಯಬೇಕು. ಆದಷ್ಟು ಬೇಗ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದ ಜಿಲ್ಲಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗರ್ಭಿಣಿಯರು ತಪಾಸಣೆಗೆ ಬರುವಾಗ ಅವರ ಬ್ಯಾಂಕ್ ಖಾತೆ ವಿವರ ಪಡೆಯಬೇಕು. ಬ್ಯಾಂಕ್ ಖಾತೆ ಇಲ್ಲದಿದ್ದಲ್ಲಿ ಖಾತೆ ತೆರೆದು ಕೊಡಬೇಕು. ಈ ಖಾತೆಗೆ ಗರ್ಭಿಣಿಯರಿಗೆ ವಿವಿಧ ಯೋಜನೆಗಳಡಿ ನೀಡುವ ಅನುದಾನವನ್ನು ಕಡ್ಡಾಯವಾಗಿ ಪಾವತಿಸುವಂತೆ ಸೂಚಿಸಿದರು.
ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕಾರ್ಯಕ್ರಮಗಳ ಜಿಲ್ಲಾಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ನೋಟೀಸು ಜಾರಿ ಮಾಡಬೇಕು. ಪದೇ ಪದೇ ಗೈರು ಹಾಜರಾಗುತ್ತಿರುವ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಅಡಿಯಲ್ಲಿ ಎಫ್.ಐ.ಆರ್. ದಾಖಲಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜನವರಿ 18ರಂದು ಜಿಲ್ಲಾ ಮಟ್ಟದ ಈಜು ಸ್ಪರ್ಧೆ
****************************************
ಕಲಬುರಗಿ,ಜ.17.(ಕ.ವಾ.)-ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾ ಕ್ರೀಡಾ ಪ್ರತಿಭೆ ಅಪೇಕ್ಷಣೆ ಅಡಿಯಲ್ಲಿ 14 ಮತ್ತು 18 ವರ್ಷದೊಳಗಿನ ಬಾಲಕ/ಬಾಲಕಿಯರಿಗೆ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಜನವರಿ 18ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಗಳ ವಿವರ ಮತ್ತು ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಚೇಂದ್ರ ಠಾಕೂರ, ತರಬೇತುದಾರರು 9964213553 ಅಥವಾ ವಿಶ್ವನಾಥ ಮೊಬೈಲ್ ಸಂಖ್ಯೆ 9880212769ನ್ನು ಸಂಪರ್ಕಿಸಲು ಕೋರಿದೆ.
ಅದೇ ರೀತಿ ಕಲಬುರಗಿ ಜಿಲ್ಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಲು ಹೋಬಳಿ ಮಟ್ಟದ ಅರ್ಹ ಸಂಘ/ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಗ್ರಾಮೀಣ ಕ್ರೀಡೋತ್ಸವ ಏರ್ಪಡಿಸಲು 50,000 ರೂ.ಗಳ ಅನುದಾನ ನೀಡಲಾಗುವುದು. ಪ್ರೋ ಕಬಡ್ಡಿ, ಖೋ-ಖೋ ಏರ್ಪಡಿಸಲು ಮ್ಯಾಟಗಳನ್ನು ಉಚಿತವಾಗಿ ನೀಡಲಾಗುವುದು. ಬ್ಯಾಂಕ್ ಖಾತೆ ಇರುವುದು ಕಡ್ಡಾಯ. ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8197058425 ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-268637ನ್ನು ಸಂಪರ್ಕಿಸಬೇಕೆಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:

Post a Comment