GULBARGA VARTHE

GULBARGA VARTHE

Thursday, 21 December 2017

NEWS AND PHOTO DATE: 21--12--2017

ಇ.ಎಸ್.ಐ.ಸಿ ಆಸ್ಪತ್ರೆ: ವಿಮಾ ರಹಿತ ಸಾರ್ವಜನಿಕರಿಗೂ ಆರೋಗ್ಯ ಸೇವೆ
****************************************************************
ಕಲಬುರಗಿ,ಡಿ.21.(ಕ.ವಾ.)-ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆ ಕೇವಲ ವಿಮಾ ವ್ಯಕ್ತಿಗಳಿಗೆ ಮತ್ತು ಬಿ.ಪಿ.ಎಲ್ ಕುಟುಂಬದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ತಪ್ಪು ಕಲ್ಪನೆ ಜನರಲ್ಲಿದ್ದು, ಜನರು ಈ ತಪ್ಪು ಕಲ್ಪನೆಯಿಂದ ಹೊರಬರಬೇಕು. ಇಲ್ಲಿ ವಿಮಾ ವ್ಯಕ್ತಿ ಸೇರಿದಂತೆ ಬಿ.ಪಿ.ಎಲ್ ವ್ಯಕ್ತಿ ಮತ್ತು ಸಾರ್ವಜನಿಕರಿಗೂ ಒಳರೋಗಿ ಹಾಗೂ ಹೊರರೋಗಿಯಾಗಿ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಕಲಬುರಗಿ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೂತನ ಡೀನ್ ಡಾ. ಪ್ರಶಾಂತ ಪೌನಿಪಗರ ತಿಳಿಸಿದರು.
ಗುರುವಾರ ಇಲ್ಲಿನ ಇ.ಎಸ್.ಐ.ಸಿ. ಆಸ್ಪತ್ರೆಯ ಕೌನ್ಸಿಲ್ ಸಭಾಂಗಣದಲ್ಲಿ ಆಸ್ಪತ್ರೆಯಿಂದ ಡಿಸೆಂಬರ್ 18 ರಿಂದ 2018ರ ಜನವರಿ 17ರ ವರಗೆ ಆಸ್ಪತ್ರೆಯಲ್ಲಿ ಬಿ.ಪಿ.ಎಲ್ ಕುಟುಂಬದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವ ಬಗ್ಗೆ ವಿವರಿಸಲು ಕರೆಯಲಾದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತ, ದೇಶದಲ್ಲಿಯೆ ವಿಮಾವಲ್ಲದ ಸಾರ್ವಜನಿಕರಿಗೂ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆ ಕಲಬುರಗಿ ಆಗಿದೆ. ಸಾಮಾನ್ಯವಾಗಿ ಇ.ಎಸ್.ಐ.ಸಿ. ಆಸ್ಪತ್ರೆಯಲ್ಲಿ ವಿಮಾ ವ್ಯಕ್ತಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಈ ಭಾಗದ ಜನರಿಗೆ ಅನುಕೂಲವಾಗಲೆಂದೆ 450 ಹಾಸಿಗೆವುಳ್ಳ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಹೊಂದಿರುವ ಆಸ್ಪತ್ರೆ ಇಲ್ಲಿ ಸ್ಥಾಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಿಧಿಸುವ ದರಗಳನ್ನೆ ಇಲ್ಲಿಯೂ ವಿಧಿಸಲಾಗುತ್ತಿದ್ದು, ಅದರಂತೆ ವಿಮಾವಲ್ಲದ ಹಾಗೂ ಬಿ.ಪಿ.ಎಲ್ ರಹಿತ ವ್ಯಕ್ತಿಗಳಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇನ್ನು ಹೊರರೋಗಿ ಚಿಕಿತ್ಸೆಗೆ 10 ರೂ. ಮಾತ್ರ ಬಳಕೆದಾರರ ಶುಲ್ಕ ಪಡೆಯಲಾಗುತ್ತಿದೆ. ಬಿ.ಪಿ.ಎಲ್ ಕುಟುಂಬದವರಿಗೆ ಸಂಪೂರ್ಣ ಉಚಿತ ಇದ್ದು, ಕಲಬುರಗಿ ಸೇರಿದಂತೆ ಸುತ್ತಮುತ್ತದ ಪ್ರದೇಶದ ಜನರು ಇದರ ಪ್ರಯೋಜನೆ ಪಡೆಯಬೇಕು ಎಂದು ಮನವಿ ಮಾಡಿದರು.
ಆಸ್ಪತ್ರೆಯಲ್ಲಿ ಪ್ರಸ್ತುತ ಒಳರೋಗಿ ಮತ್ತು ಹೊರರೋಗಿ ವಿಭಾಗದಲ್ಲಿ ಪ್ರಸ್ತುತ ಶೇ.30-40 ರಷ್ಟು ಜನರು ಮಾತ್ರ ಆರೋಗ್ಯ ಸೇವೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಆರಂಭದಲ್ಲಿ ಔಷಧಿ ಸಮಸ್ಯೆ ಇತ್ತು, ಇದೀಗ ಆ ಸಮಸ್ಯೆ ಬಗೆಹರಿದಿದ್ದು ಕೇಂದ್ರ ದರ ಒಪ್ಪಂದದ ಪ್ರಕಾರ ಸಬ್ಸಿಡಿ ದರದಲ್ಲಿ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ವಿತರಿಸಲಾಗುತ್ತಿದೆ. 24 ಗಂಟೆ ಅಂಬುಲೆನ್ಸ್ ಸೇವೆ ಲಭ್ಯವಿದ್ದು, ಒಳರೋಗಿಗಳಿಗೆ ರಕ್ತ ನಿಧಿ ಸಹ ಸ್ಥಾಪಿಸಲಾಗಿದೆ. ತುರ್ತು ಸೇವೆಯ ಉಪಕರಣಗಳು, ಹೆರಿಗೆ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಎಕ್ಸ್-ರೇ, ಅಸ್ತಮಾ ರೋಗಿಗಳಿಗೆ ಆರ್.ಎನ್.ಟಿ.ಸಿ.ಪಿ ಮಶೀನ್, ಶಸ್ತ್ರಚಿಕಿತ್ಸೆಗೆ ಅಂತರಾಷ್ಟ್ರೀಯ ಮಟ್ಟದ 10 ಓ.ಟಿ.ಗಳಿದ್ದು, ಇದರಲ್ಲಿ 4 ಜರ್ಮನ್ ಓ.ಟಿ.ಗಳಿವೆ. ಮುಂದಿನ ಒಂದು ವಾರದಲ್ಲಿ ಸಿ.ಟಿ.ಸ್ಕ್ಯಾನ್ ಸೇವೆ ಸಹ ರೋಗಿಗಳಿಗೆ ಲಭ್ಯವಾಗಲಿದೆ. ರೋಗಿಗಳ ತಪಾಸಣೆಗೆ ಅತ್ಯುನ್ನತ ದರ್ಜೆಯ ವೈದ್ಯ ಸಿಬ್ಬಂದಿ ಸಹ ಸೇವೆ ನೀಡಲು ಲಭ್ಯರಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು ಜಾರಿಯಲ್ಲಿರುವುದರಿಂದ ಜನ ಸಹಜವಾಗಿ ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದು, ಇಲ್ಲಿಯೂ ತಾಯಿ ಭಾಗ್ಯ ಯೋಜನೆಯಡಿ ಸೇವೆ ನೀಡಲು ಅನುಮತಿ ನೀಡುವಂತೆ ಇ.ಎಸ್.ಐ.ಸಿ. ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ನೀಡುವ ನಿರೀಕ್ಷೆ ಇದೆ. ಪ್ರಚಾರದ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ಆಸ್ಪತ್ರೆಯ ವಿವಿಧ ಸೌಲಭ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಇಲ್ಲಿನ ವೈದ್ಯಕೀಯ ಕಾಲೇಜಿಗೆ ಪ್ರತಿ ವರ್ಷ 100 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಆರಂಭದ ಎರಡು ವರ್ಷದಲ್ಲಿ ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿಮಾದಾರರಿಗೆ ನಿಗದಿಪಡಿಸಿರುವ ಶೇ.40 ಕೋಟಾದಡಿ ಕೇರಳ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಇಲ್ಲಿನ ಅಭ್ಯರ್ಥಿಗಳು ಹೆಚ್ಚಿನ ಪ್ರವೇಶ ಹೊಂದಬೇಕು ಎಂಬ ಕಳಕಳಿ ಇದೆ. ಕಾಲೇಜಿನ ಮೊದಲನೇ ತಂಡ 2018ಕ್ಕೆ ಪಾಸ್ ಔಟ್ ಆಗುತ್ತದೆ. ಮುಂದೆ ಸ್ನಾತಕೋತ್ತರ ಪದವಿ ಆರಂಭಿಸುವ ಚಿಂತನೆ ಇದ್ದು, ಒಟ್ಟಾರೆ ಈ ಆಸ್ಪತ್ರೆ ಏಮ್ಸ್ ಮಾದರಿಯಲ್ಲಿ ಪ್ರತಿಷ್ಠಿತ ಸಂಸ್ಥೆಯನ್ನಾಗಿ ಗುರುತಿಸಿಕೊಳ್ಳಬೇಕೆಂದು ಅಭಿಲಾಷೆ ನಾವು ಹೊಂದಿದ್ದೇವೆ ಎಂದು ಡಾ.ಪ್ರಶಾಂತ ಪೌನಿಪಗರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಸಂಗ್ರಾಮ, ಅಕಾಡೆಮಿಕ್ ರಜಿಸ್ಟ್ರಾರ್ ಡಾ.ಹೆಚ್.ಎಸ್.ಕಡ್ಲಿಮಟ್ಟಿ ಇದ್ದರು.


ಒತ್ತಡದಿಂದ ಹೊರಬರಲು ಪೊಲೀಸರಿಗೆ ಕ್ರೀಡಾಕೂಟ ಸಹಕಾರಿ
*******************************************************
ಕಲಬುರಗಿ,ಡಿ.21.(ಕ.ವಾ.)-ಸಮಾಜದ ರಕ್ಷಕರಾದ ಪೊಲೀಸರು ನಿರಂತರವಾಗಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಒತ್ತಡದಿಂದ ಹೊರತರಲು ಮತ್ತು ವೃತ್ತಿಯಿಂದ ಪ್ರವೃತ್ತಿ ಕಡೆಗೆ ಕರೆದೊಯ್ಯಲು ವಾರ್ಷಿಕ ಕ್ರೀಡಾಕೂಟ ಸಹಾಯಕಾರಿಯಾಗಿದೆ ಎಂದು ಕಲಬುರಗಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಬಿ.ವ್ಹಿ.ಪಾಟೀಲ್ ತಿಳಿಸಿದರು.
ಅವರು ಗುರುವಾರ ಕಲಬುರಗಿ ನಗರದ ಪೊಲೀಸ್ ಕವಾಯತ ಮೈದಾನದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಡಿಸೆಂಬರ್ 21 ರಿಂದ 23 ರವರೆಗೆ ಹಮ್ಮಿಕೊಂಡಿರುವ ಜಿಲ್ಲಾ ವಾರ್ಷಿಕ ಕ್ರೀಡಾಕೂಟ-2017 ಉದ್ಘಾಟಿಸಿ ಮಾತನಾಡಿದರು.
“ಆರೋಗ್ಯವೇ ಭಾಗ್ಯ” ಎನ್ನುವಂತೆ ಪ್ರತಿಯೊಬ್ಬರಿಗೂ ಆರೋಗ್ಯವೇ ಸಂಪತ್ತು. ಕ್ರೀಡೆಯಿಂದ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇಲ್ಲಿ ಭಾಗವಹಿಸುವ ಕ್ರೀಡಾ ಸ್ಪರ್ಧಿಗಳು ಸೋಲು-ಗೆಲುವು ಲೆಕ್ಕಿಸದೆ ಕ್ರೀಡಾ ಮನೋಭಾವನೆಯಿಂದ ಆಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸೋಲೆ ಗೆಲುವಿನ ಮೆಟ್ಟಿಲು. ಸೋತವರು ಗೆಲುವನ್ನು ಒಂದು ಸವಾಲಾಗಿ ಸ್ವೀಕರಿಸಿ ಮುಂದೆ ಸಾಗಬೇಕು ಎಂದು ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ವರ್ಷವಿಡಿ ಪೊಲೀಸರು ಹಬ್ಬ-ಹರಿದಿನ, ಸಭೆ ಸಮಾರಂಭ, ಗಣ್ಯರ ಭದ್ರತೆ ಎಂದು ಹಲವು ನೆಪವಡಿ ವಿಶ್ರಾಂತಿ ಪಡೆಯದೇ ನಿರಂತರಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದಲೇ ಅಪರಾಧ ಪ್ರಕರಣದಲ್ಲಿ ಎರಡನೇ ಸ್ಥಾನದಲ್ಲಿರುವ ಕಲಬುರಗಿ ಎಂತಹ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಕಾಪಾಡಲು ಸಾಧ್ಯವಾಗಿದೆ. ಇತ್ತೀಚಿಗೆ ಕಲಬುರಗಿ ನಗರದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಹಗಲಿರುಳು ಎನ್ನದೆ ಸಂಚಾರಿ ಪೊಲೀಸರ ನಿರಂತರ ಪರಿಶ್ರಮದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಕರ್ತವ್ಯದೊಂದಿಗೆ ಆರೋಗ್ಯ ಕಡೆಯೂ ಪೊಲೀಸರು ಗಮನಹರಿಸಬೇಕು ಎಂದು ಅವರು ತಿಳಿಸಿದರು.
ಇಂದಿನಿಂದ ಮೂರು ದಿನಗಳವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಎ ಉಪವಿಭಾಗ, ಬಿ ಉಪವಿಭಾಗ, ಜಿಲ್ಲಾ ಶಸ್ತ್ರ ಪಡೆ, ಫರಹತಾಬಾದ, ಅಫಜಲಪುರ, ಚಿಂಚೋಳಿ, ಶಹಾಬಾದ ಮತ್ತು ಅಶೋಕ ನಗರದ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸೇರಿದಂತೆ ಒಟ್ಟು ಎಂಟು ಪೊಲೀಸ್ ತಂಡಗಳು ಕ್ರೀಡೆಯಲ್ಲಿ ಭಾಗವಹಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೆಲೋಗಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಕಾಶಿನಾಥ ಕ್ರೀಡಾ ಜ್ಯೋತಿ ಬೆಳಗಿಸಿದರು. ಕ್ರೀಡಾಕೂಟ ಮುಖ್ಯಸ್ಥ ಶರಣಬಸಪ್ಪಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಕೆ.ಎಸ್.ಆರ್.ಪಿ ಕಮಾಂಡೆಂಟ್ ಬಸವರಾಜ ಜಿರಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಿವಶಂಕರ, ನಿವೃತ್ತ ಎಸ್.ಪಿ. ಯಾತನೂರ, ನಿವೃತ್ತ ಪೊಲೀಸ್ ಅಧಿಕಾರಿ ಸಜ್ಜಾದೆ ಅಲಿ ಇನಾಮದಾರ, ಪಿ.ಎಸ್.ಐ.ಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದರು.

ಶುಲ್ಕ ವಿನಾಯಿತಿ ಮಂಜೂರಾತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
***********************************************************
ಕಲಬುರಗಿ,ಡಿ.21.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ವ್ಯಾಸಂಗ ವೇತನ/ಫೆಲೋಶಿಪ್ ಮತ್ತು ಶುಲ್ಕ ವಿನಾಯಿತಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 23ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡುವ ಮಾಸಿಕ 5,000ರೂ.ಗಳ ವ್ಯಾಸಂಗ ವೇತನ/ಫೆಲೋಸಿಪ್ ಹಾಗೂ ನಿಗದಿತ ಶುಲ್ಕ ವಿನಾಯಿತಿಗಾಗಿ ಈ ಹಿಂದೆ ಆಯ್ಕೆಯಾಗಿ ಪ್ರಸ್ತುತ ಸಾಲಿನಲ್ಲಿ ಮುಂದುವರಿಸುತ್ತಿರುವ ಅರ್ಹ ನವೀಕರಣ ವಿದ್ಯಾರ್ಥಿಗಳು ಹಾಗೂ ದಿನಾಂಕ:01-04-2017 ರಿಂದೀಚೆಗೆ ಪ್ರಥಮ ವರ್ಷದಲ್ಲಿ ಪೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಸಹ ಈಗ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ 2, 3 ಮತ್ತು 4ನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಮೊದಲು ಈ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸದಿದ್ದಲ್ಲಿ ಈಗ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ www.backwardclasses.nic.in ವೆಬ್‍ಸೈಟ್‍ನ್ನು ಹಾಗೂ ಸಹಾಯವಾಣಿ ದೂರವಾಣಿ ಸಂಖ್ಯೆ: 080-65-70004ಗಳನ್ನು ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಕಚೇರಿ ಸಮಯದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಸಂಪರ್ಕಿಸಲು ಹಾಗೂ ಕಲಬುರಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.

ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹಧನ: ಆನ್‍ಲೈನ್ ಅರ್ಜಿ ಆಹ್ವಾನ
************************************************************************
ಕಲಬುರಗಿ,ಡಿ.21.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿಯ ಅಂತರ್ಜಾತಿ ವಿವಾಹಿತ ದಂಪತಿಗಳು ಪ್ರೋತ್ಸಾಹಧನ ಮಂಜೂರಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಅಂತರ್ಜಾತಿ ವಿವಾಹವಾಗುವ ದಂಪತಿಗಳು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದವರಾಗಿರಬೇಕು. ಈ ಸೌಲಭ್ಯ ಪಡೆಯುವ ಪರಿಶಿಷ್ಟ ಜಾತಿ ವಧುವಿಗೆ ವಯೋಮಿತಿ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷದೊಳಗಿರಬೇಕು ಹಾಗೂ ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷದೊಳಗಿರಬೇಕು.
ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ವಧು ಮತ್ತು ವರನ ವಾರ್ಷಿಕ ಆದಾಯವು 50,000ರೂ. ಗಳನ್ನು ಮೀರಿರಬಾರದು. ಈ ಸೌಲಭ್ಯ ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ವಧು-ವರನು ವಿವಾಹವಾದ ಬಳಿಕ ವಾಸ್ತವ್ಯವಿರುವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕು. ವಿವಾಹ ಕಾರ್ಯಕ್ರಮದ ಭಾವಚಿತ್ರ ಹಾಗೂ ವಧು-ವರನ ಜಂಟಿ ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಮಂಜೂರಾದ ಪ್ರೋತ್ಸಾಹಧನ ಹಣವನ್ನು ವಧು-ವರನಿಗೆ ಜಂಟಿಯಾಗಿ ಮಂಜೂರು ಮಾಡಿ ವಧು-ವರನ ಹೆಸರಿನಲ್ಲಿರುವ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಅರ್ಹ ದಂಪತಿಗಳು ಇಲಾಖೆಯ www.sw.kar.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿ ಒಂದು ಪ್ರತಿ, ವಧು-ವರನ ದೃಢೀಕೃತ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜಿಲ್ಲಾ ನೋಂದಣಿ ಕಚೇರಿಯಿಂದ ಪಡೆದ ವಿವಾಹ ಆಗಿರುವ ಬಗ್ಗೆ ನೋಂದಣಿ ಪ್ರಮಾಣಪತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣಪತ್ರ, ವಧು-ವರನ ದೃಢೀಕೃತ ಆಧಾರ ಕಾರ್ಡ, ಪಡಿತರ ಚೀಟಿ, ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣಪತ್ರದ ಜಿರಾಕ್ಸ್ ಪ್ರತಿ, ವಿವಾಹವಾದ ಕುರಿತು ಫೋಟೋ ಮತ್ತು ವಧು-ವರನ ಜಂಟಿ ಭಾವಚಿತ್ರ ಹಾಗೂ ವಧು-ವರನ ರಾಷ್ಟ್ರೀಕೃತ ಬ್ಯಾಂಕಿನ ಜಂಟಿ ಖಾತೆಯ ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್ ಪ್ರತಿಯ ದಾಖಲೆಗಳನ್ನು ಲಗತ್ತಿಸಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಜನವರಿ 4 ರಿಂದ ನಾಟಕ ರಚನೆ ಮತ್ತು ಅಯ್ಕೆ ಕಾರ್ಯಾಗಾರ
*******************************************************
ಕಲಬುರಗಿ,ಡಿ.21.(ಕ.ವಾ.)-ಕಲಬುರಗಿ ರಂಗಾಯಣದಿಂದ ನಾಟಕ ರಚನೆ ಮತ್ತು ಆಯ್ಕೆ ಕಾರ್ಯಾಗಾರವನ್ನು 2018ರ ಜನವರಿ 4ರಿಂದ 6ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕಲಬುರಗಿ ರಂಗಾಯಣದ ಆಡಿಟೋರಿಯಂ ಹಾಲ್‍ನಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ. ಪಾಟೀಲ ಅವರು ತಿಳಿಸಿದ್ದಾರೆ.
ಈ ಕಾರ್ಯಾಗಾರದಲ್ಲಿ ಬೆಂಗಳೂರಿನಿಂದ 30 ವರ್ಷಕ್ಕಿಂತ ಹೆಚ್ಚಿನ ಅನುಭವಸ್ಥರು, ನಾಟಕ ನಿರ್ದೇಶಕರು ಮತ್ತು ನಾಟಕಕಾರರಾದ ಶಶಿಕಾಂತ ಯಡಳ್ಳಿ ಭಾಗವಹಿಸುವರು. ಆಸಕ್ತಿಯುಳ್ಳ ಬರಹಗಾರರು, ನಾಟಕ ರಚನೆಗಾರರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.
ಈ ಕಾರ್ಯಾಗಾರದಲ್ಲಿ ಯಾವ ರೀತಿ ನಾಟಕ ಬರೆಯಬೇಕು ಮತ್ತು ಯಾವ ರೀತಿಯಲ್ಲಿ ಬರೆದಿದ್ದ ನಾಟಕವನ್ನು ಆಯ್ಕೆ ಮಾಡುವ ಕುರಿತು ವಿಸ್ತಾರವಾಗಿ ಮಾಹಿತಿ ನೀಡಲಾಗುವುದು. ಒಳ್ಳೆಯ ನಾಟಕವನ್ನು ಬರೆದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-227735, ಮೊಬೈಲ್ ಸಂಖ್ಯೆ 9663736364ನ್ನು ಸಂಪರ್ಕಿಸಲು ಕೋರಲಾಗಿದೆ.

ಸಫಾಯಿ ಕರ್ಮಚಾರಿಗಳಿಗೆ ಅರಿವು: ಡಿ.23ರಂದು ವಿಭಾಗೀಯ ಮಟ್ಟದ ವಿಚಾರ
*********************************************************************
ಸಂಕಿರಣ
*********
ಕಲಬುರಗಿ,ಡಿ.21.(ಕ.ವಾ.)-ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು ಹಾಗೂ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ವಿಭಾಗೀಯ ಮಟ್ಟದ ವಿಚಾರ ಸಂಕಿರಣವನ್ನು ಡಿಸೆಂಬರ್ 23ರಂದು ಶನಿವಾರ ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ ಹಾಗೂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತರಾಗಿ ಪಾಲ್ಗೊಳ್ಳುವರು. ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆಯಲ್ಲಿ ಜರುಗುವ ಈ ಕಾರ್ಯಕ್ರಮಕ್ಕೆ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್, ಕಲಬುರಗಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅರವಿಂದ ಚೌವ್ಹಾಣ, ಕಲಬುರಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಸಜ್ಜನ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಗೋಕುಲ ನಾರಾಯಣ ಸ್ವಾಮಿ ಹಾಗೂ ಜೆ.ಕೆ. ಮೀನಾಕ್ಷಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು.
ಒಂದು ದಿನದ ಈ ವಿಚಾರ ಸಂಕಿರಣದಲ್ಲಿ ಸರ್ಕಾರದ ವಿವಿಧ ಇಲಾಖೆ, ಇ.ಎಸ್.ಐ, ಭವಿಷ್ಯ ನಿಧಿಯಿಂದ ಪೌರ ಕಾರ್ಮಿಕರಿಗೆ, ಸಫಾಯಿ ಕರ್ಮಚಾರಿಗಳಿಗೆ ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಮಧ್ಯಾಹ್ನ 2ಕ್ಕೆ ಜಾಡಮಾಲಿ ಜಗತ್ತು ನಾಟಕ ಪ್ರದರ್ಶನಗೊಳ್ಳಲಿದೆ.

ಡಿ. 23ರಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಸಂಕೀರ್ಣ ಕಟ್ಟಡ ಉದ್ಘಾಟನೆ
***********************************************************************
ಕಲಬುರಗಿ,ssssಡಿ.21.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಕಲಬುರಗಿ ಮಿನಿ ವಿಧಾನಸೌಧ ಎದುರುಗಡೆ, ಐವಾನ್-ಎ-ಶಾಹಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಸಂಕೀರ್ಣ ಕಟ್ಟಡದ ಉದ್ಘಾಟನಾ ಸಮಾರಂಭವು ಡಿಸೆಂಬರ್ 23ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಸಂಕೀರ್ಣದಲ್ಲಿ ಏರ್ಪಡಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ್ ಅವರು ಕಟ್ಟಡವನ್ನು ಉದ್ಘಾಟಿಸುವರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಹೆಚ್. ಆಂಜನೇಯ ಹಾಗೂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರ ಘನ ಉಪಸ್ಥಿತಿಯಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಚಿಂಚೋಳಿ ಶಾಸಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕಕುಮಾರ ವಿಶೇಷ ಆಹ್ವಾನಿತರಾಗಿ ಆಗಮಿಸುವರು.

ಬಿ.ಇ.ಡಿ. ಕೋರ್ಸಿಗೆ ದಾಖಲಾತಿ: ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ
**********************************************************
ಕಲಬುರಗಿ,ssssಡಿ.21.(ಕ.ವಾ.)-ಪ್ರಸಕ್ತ 2017-18ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸಿನ ದಾಖಲಾತಿಯ ಆಯ್ಕೆ ಪಟ್ಟಿಯನ್ನು ಈಗಾಗಲೇ ವೆಬ್‍ಸೈಟ್‍ನಲ್ಲಿ ಹಾಗೂ ಕಲಬುರಗಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿ.ಟಿ.ಇ) ದಲ್ಲಿ ಪ್ರಕಟಿಸಲಾಗಿದೆ ಎಂದು ಕಲಬುರಗಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ದಾಖಲಾತಿ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊದಲು ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ, ಹಂಚಿಕೆಯಾದ ಸಂಸ್ಥೆ ಸಹಿತ ಆಯ್ಕೆ ಪಟ್ಟಿಯನ್ನು ಗಮನಿಸಬೇಕು. ಅದರಲ್ಲಿ ಹಂಚಿಕೆಯಾದ ಸಂಸ್ಥೆಯು ಒಪ್ಪಿಗೆಯಾದಲ್ಲಿ ಮಾತ್ರ ವ್ಯವಸ್ಥಾಪಕ ಕೇಂದ್ರ(ನೋಡಲ್ ಕೇಂದ್ರ)ದಲ್ಲಿ ತಮ್ಮ ಮೂಲ ದಾಖಲೆಗಳನ್ನು ಡಿಸೆಂಬರ್ 22ರಿಂದ 28ರವರೆಗೆ ಪರಿಶೀಲನೆಗಾಗಿ ಸಲ್ಲಿಸಬೇಕು. ದಾಖಲಾತಿ ಪರಿಶೀಲನೆಯ ನಂತರ ದಾಖಲಾತಿ ಸಿಂಧುವಾದಲ್ಲಿ ಶುಲ್ಕ ಪಾವತಿಸಿ ದಾಖಲಾತಿ ಪಡೆಯುವಂತೆ ನೋಡಲ್ ಕೇಂದ್ರದ ಮುಖ್ಯಸ್ಥರು ಹಾಗೂ ಸಿ.ಟಿ.ಇ.ನ ಪ್ರಾಚಾರ್ಯ ವಿಜಯಕುಮಾರ ಜಿ.ಎಂ. ಅವರು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್ www.schooleducation.kar.nic.in ನ್ನು ನೋಡಬಹುದು ಅಥವಾ ದೂರವಾಣಿ ಸಂಖ್ಯೆ 08472-220128 ನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:

Post a Comment