GULBARGA VARTHE

GULBARGA VARTHE

Tuesday, 12 December 2017

NEWS AND PHOTO DATE: 12--12--2017

ಮುಖ್ಯಮಂತ್ರಿಗಳ ಕಾರ್ಯಕ್ರಮ ಲೋಪವಾಗದಂತೆ ನಿರ್ವಹಿಸಲು ಸೂಚನೆ
*****************************************************************
ಕಲಬುರಗಿ,ಡಿ.12(ಕ.ವಾ.)-ಕಲಬುರಗಿ ಜಿಲ್ಲೆಗೆ ಮುಖ್ಯಮಂತ್ರಿಗಳು ಡಿಸೆಂಬರ್ 16 ರಂದು ಆಗಮಿಸಿ 3 ತಾಲೂಕುಗಳಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಈ ಕಾರ್ಯಕ್ರಮಗಳಲ್ಲಿ ಯಾವುದೇ ಲೊಪವಾಗದಂತೆ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಿದ್ಧತೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೂರು ತಾಲೂಕುಗಳಲ್ಲಿ ಕಾರ್ಯಕ್ರಮ ಜರುಗುವ ಸ್ಥಳಗಳ ಪರಿಶೀಲನೆ ಮಾಡಲಾಗಿದೆ. ಪ್ರತಿ ತಾಲೂಕಿನಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸುವ ಸಂಭವವಿದ್ದು, ಸೂಕ್ತ ಸಿದ್ಧತೆ ಮಾಡಿಕೊಳ್ಳಲು ತಿಳಿಸಿದರು.
ಮುಖ್ಯಮಂತ್ರಿಗಳೊಂದಿಗೆ ಜಿಲ್ಲೆಗೆ ಅಗಮಿಸುವ ಗಣ್ಯರಿಗೆ, ಅಧಿಕಾರಿಗಳಿಗೆ ಹಾಗೂ ಪತ್ರಕರ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ತಾಲೂಕಿಗೆ ಒಬ್ಬ ನೂಡಲ್ ಅಧಿಕಾರಿಗಳನ್ನು ನೇಮಿಸಿ ಆಹಾರ, ವಾಹನ, ಸ್ವಾಗತ, ವೇದಿಕೆ ಸಿದ್ಧತೆ, ಮೀಡಿಯಾ, ಹಾಗೂ ಶಿಷ್ಠಾಚಾರ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ಹಾಗೂ ಮೂರು ತಾಲೂಕು ಕೇಂದ್ರಗಳನ್ನು ಸ್ವಚ್ಛವಾಗಿಡಲು ಸೂಚಿಸಿದರು.
ಅಫಜಲಪೂರ, ಸೇಡಂ ಹಾಗೂ ಜೇವರ್ಗಿ ತಾಲೂಕಿನ ಯಡ್ರಾಮಿಯಲ್ಲಿ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಮೂರು ತಾಲೂಕುಗಳಲ್ಲಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಆಗಬೇಕಾಗಿರುವ ಕಾಮಗಾರಿಗಳ ಯಾದಿಯನ್ನು ಇಂದು ಸಾಯಂಕಾಲದೊಳಗಾಗಿ ಸಲ್ಲಿಸಿ ಪರವಾನಿಗೆ ಪಡೆಯಬೇಕು. ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ವಿತರಣೆ ಮಾಡಬೇಕಾಗಿರುವ ಸವಲತ್ತುಗಳನ್ನು ಸಹ ಸಿದ್ಧವಾಗಿಟ್ಟುಕೊಂಡು ವಿವರ ಮಾಹಿತಿಯನ್ನು ನೀಡಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಮುಖ್ಯಮಂತ್ರಿಗಳು ಒಂದೇದಿನ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದರಿಂದ ಬಂದೋಬಸ್ತ್‍ಗೆ ಪೊಲೀಸರೊಂದಿಗೆ ಅಧಿಕಾರಿಗಳು ಸಹಕರಿಸಬೇಕು. ಭದ್ರತೆ ವಿಷಯದಲ್ಲಿ ಎಲ್ಲ ಅಧಿಕಾರಿಗಳು ಜವಾಬ್ದಾರಿವಹಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಆಕೃತಿ ಸಾಗರ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ
**************************************************************
ಕಲಬುರಗಿ,ಡಿ.12.(ಕ.ವಾ): ಯಾವುದೇ ಸಂಘ ಸಂಸ್ಥೆ ಅಥವಾ ಸಂಘಟನೆಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಯಾವುದೇ ಪರವಾನಿಗೆ ಇಲ್ಲದೇ ಹೆಲ್ಮೆಟ್ ಧರಿಸದೇ ಬೈಕ್ ರ್ಯಾಲಿ ಮಾಡಲು ಅವಕಾಶವಿರುವುದಿಲ್ಲ. ಬೈಕ್ ರ್ಯಾಲಿ ಕೈಗೊಳ್ಳುವಾಗ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪರವಾನಿಗೆ ಪಡೆದು ಹೆಲ್ಮೆಟ್ ಧರಿಸಿ ಬೈಕ್ ರ್ಯಾಲಿ/ಜಾಥಾ ಮಾಡಬೇಕು. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಆಲೋಕಕುಮಾರ ಅವರು ತಿಳಿಸಿದ್ದಾರೆ.
ಕೆಲವೊಂದು ಸಂಘಟನೆಗಳು ಡಿಸೆಂಬರ್ 09 ಮತ್ತು 11 ರಂದು ಅನುಕ್ರಮವಾಗಿ ಕಲಬುರಗಿ ನಗರ ಮತ್ತು ಜೇವರ್ಗಿ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ರ್ಯಾಲಿ ಮಾಡಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿದ್ದರಿಂದ ಜೇವರ್ಗಿ ಪಟ್ಟಣದಲ್ಲಿ 2 ಪ್ರಕರಣ ಮತ್ತು ಕಲಬುರಗಿ ನಗರದಲ್ಲಿ ಸ್ಟೇಶನ್ ಬಜಾರ್, ಬ್ರಹ್ಮಪೂರ ಮತ್ತು ಚೌಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ಅದೇ ರೀತಿ ಈಶಾನ್ಯ ವಲಯದ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಹೆಲ್ಮೆಟ್ ರಹಿತ ವಾಹನ ಚಾಲನೆ, ಕುಡಿದ ಅಮಲಿನಲ್ಲಿ ವಾಹನ ಚಾಲನೆ, ಟ್ರಿಪಲ್ ರೈಡಿಂಗ್ ಪ್ರಕರಣಗಳು, ಅತೀ ವೇಗ ಮತ್ತು ನಿಷ್ಕಾಳಜಿತನದ ಚಾಲನೆ, ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ, ಸಮವಸ್ತ್ರ ಧರಿಸದೇ ವಾಹನ ಚಾಲನೆ, ವಾಹನಗಳಿಗೆ ಟಿಂಟೇಡ್ ಗ್ಲಾಸ್ ಅಳವಡಿಕೆ ಇತ್ಯಾದಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮೋಟಾರು ವಾಹನ ಕಾಯ್ದೆ ಮತ್ತು ಐಪಿಸಿ ಕಲಂಗಳ ಅಡಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲು ಮಾಡಲಾಗಿದೆ.
ಜೆಸ್ಕಾಂ: ಸೌರ ಚಾಲಿತ ಪಂಪ್‍ಸೆಟ್ ಅಳವಡಿಸಲು 11 ತಾಲೂಕು ಆಯ್ಕೆ
***************************************************************
ಕಲಬುರಗಿ,ಡಿ.12.(ಕ.ವಾ): ಸೌರ ಚಾಲಿತ ಜಾಲಮುಕ್ತ ನೀರಾವರಿ ಪಂಪ್‍ಸೆಟ್‍ಗಳನ್ನು ಅಳವಡಿಸಲು ಜೆಸ್ಕಾಂ ವ್ಯಾಪ್ತಿಯಲ್ಲಿನ 11 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (ನಿಗಮ ಯೋಜನೆ) ಮುಖ್ಯ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಚಿಕೆಯಾದ ಜೆಸ್ಕಾಂ ವಿಭಾಗದ 11 ತಾಲೂಕುಗಳ ವಿವರ ಇಂತಿದೆ. ಕಾರ್ಯ ಮತ್ತು ಪಾಲನೆ ಕಲಬುರಗಿ ವಿಭಾಗದ ಜೇವರ್ಗಿ, ಚಿತ್ತಾಪುರ ಮತ್ತು ಚಿಂಚೋಳಿ. ಕಾರ್ಯ ಮತ್ತು ಪಾಲನೆ ಯಾದಗಿರಿ ವಿಭಾಗದ ಯಾದಗಿರಿ. ಕಾರ್ಯ ಮತ್ತು ಪಾಲನೆ ರಾಯಚೂರ ವಿಭಾಗದ ರಾಯಚೂರ ಮತ್ತು ಸಿಂಧನೂರ. ಕಾರ್ಯ ಮತ್ತು ಪಾಲನೆ ಬಳ್ಳಾರಿ ವಿಭಾಗದ ಸಂಡೂರ. ಕಾರ್ಯ ಮತ್ತು ಪಾಲನೆ ಬೀದರ ವಿಭಾಗದ ಹುಮನಾಬಾದ, ಭಾಲ್ಕಿ ಹಾಗೂ ಬೀದರ ತಾಲೂಕುಗಳಲ್ಲಿ 259 ನೀರಾವರಿ ಪಂಪ್‍ಸೆಟ್‍ಗಳನ್ನು ಅಳವಡಿಸಲಾಗುತ್ತಿದೆ.
ಮೊದಲು ಬಂದ ಅರ್ಜಿದಾರರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತಿಯುಳ್ಳ ಫಲಾನುಭವಿಗಳು ಲಿಖಿತ ಒಪ್ಪಿಗೆ ಪತ್ರ, ಭೂದಾಖಲೆಗಳ ಪ್ರಮಾಣಪತ್ರ, ಜಲ ಇಳುವರಿ ಪ್ರಮಾಣಪತ್ರ, ಜಾತಿ ಮತ್ತು ಪ್ರಮಾಣಪತ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಇ.ಡಿ.ಎಲ್. ಇವರ ಹೆಸರಿನಲ್ಲಿ 1 ಲಕ್ಷ ರೂ.ಗಳ ವಂತಿಗೆಯ ಡಿ.ಡಿ. ಪಡೆದು ಲಗತ್ತಿಸಿ ಡಿಸೆಂಬರ್ 15 ರೊಳಗಾಗಿ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ ವಿಭಾಗದ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ವಿಭಾಗದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಚೇರಿಗಳನ್ನು ಸಂಪರ್ಕಿಸಲು ತಿಳಿಸಿದ್ದಾರೆ.

No comments:

Post a Comment