GULBARGA VARTHE

GULBARGA VARTHE

Thursday, 30 November 2017

NEWS DATE: 30--11--2017

ಸರ್ಕಾರದ ಸಾಧನೆ ಬಿಂಬಿಸಲು ಯೋಜನೆಗಳ ಅಂಕಿ-ಅಂಶ ಸಂಗ್ರಹ
***********************************************************
ಕಲಬುರಗಿ,ನ.30.(ಕ.ವಾ.)-ರಾಜ್ಯದ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ರಾಜ್ಯದ ಎಲ್ಲ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಸರ್ಕಾರವು ನಿಗದಿಪಡಿಸಿರುವ ಯೋಜನೆಗಳ ತಾಲೂಕುವಾರು ಹಾಗೂ ಜಿಲ್ಲೆಯ ಒಟ್ಟಾರೆ ಅಂಕಿ-ಅಂಶಗಳ ಮಾಹಿತಿಯನ್ನು ಎರಡು ದಿನದೊಳಗಾಗಿ ನೀಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸಕ್ಕೆ ಸಕಲ ಸಿದ್ಧತೆ ಕೈಗೊಳ್ಳಲು ಕರೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸರ್ಕಾರ ಕೈಗೊಂಡಿರುವ ಹಲವು ಜನಪರ ಯೋಜನೆಗಳ ಸಾಧನೆಗಳನ್ನು ಬಿಂಬಿಸುವ “ನುಡಿದಂತೆ ನಡೆದಿದ್ದೇವೆ-ಸಾಧನಾ ಸಂಭ್ರಮ” ಪುಸ್ತಕವನ್ನು ಜಿಲ್ಲಾಡಳಿತದ ವತಿಯಿಂದ ಹೊರತರಲು ಉದ್ದೇಶಿಸಲಾಗಿದೆ ಎಂದರು.
ಅನುಬಂಧ-1ರಲ್ಲಿ ಸರ್ಕಾರವು 21 ಪ್ರಮುಖ ಇಲಾಖೆಗಳ ಮೂಲಕ 2013ರಿಂದ 2017ರವರೆಗಿನ ಅವಧಿಯಲ್ಲಿ ಹಮ್ಮಿಕೊಂಡಿರುವ ಪ್ರಮುಖ ಕಾರ್ಯಕ್ರಮಗಳ ಮಾಹಿತಿಯ ಅಂಕಿ-ಅಂಶಗಳನ್ನು ತಾಲೂಕುವಾರು ಹಾಗೂ ಆಯಾ ಇಲಾಖೆಯ ಜಿಲ್ಲಾವಾರು ಮಾಹಿತಿಯನ್ನು ನೀಡಬೇಕು. ಜೊತೆಗೆ ಅನುಬಂಧ-2ರಲ್ಲಿ ಸರ್ಕಾರ ಹಮ್ಮಿಕೊಂಡಿರುವ ಪ್ರಮುಖ ಯೋಜನೆ ಮತ್ತು ಕಾರ್ಯಕ್ರಮಗಳ ಯೋಜನಾವಾರು ಜಿಲ್ಲಾ ಘೋಷ್ವಾರೆ ಹಾಗೂ ಕಾರ್ಯಕ್ರಮದಿಂದ ಪ್ರಯೋಜನ ಪಡೆದವರ ಫಲಾನುಭವಿಗಳ ಸಂಖ್ಯೆ ಮತ್ತು ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಮೊತ್ತದ ವಿವರವನ್ನು ನೀಡಬೇಕು. ಅನುಬಂಧ-3ರಲ್ಲಿ ಜಿಲ್ಲೆಯಲ್ಲಿ 5 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಪ್ರಮುಖ ಸ್ಥಳೀಯ ಯೋಜನೆ ಮತ್ತು ಕಾರ್ಯಕ್ರಮಗಳ ವಿವರ ನೀಡಬೇಕೆಂದರು.
ಮುಖ್ಯಮಂತ್ರಿಗಳು ಎರಡು ಹಂತಗಳಲ್ಲಿ ಎಲ್ಲ ತಾಲೂಕುಗಳಿಗೆ ಭೇಟಿ ನೀಡಲಿದ್ದು, ಪ್ರಥಮ ಹಂತವಾಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ ಹಾಗೂ ಸೇಡಂ ತಾಲೂಕುಗಳಿಗೆ ಭೇಟಿ ನೀಡುವ ಸಂಭವಗಳಿವೆ. ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರದೊಂದಿಗೆ ಶಂಕುಸ್ಥಾಪನೆಗೆ ಹಾಗೂ ಉದ್ಘಾಟನೆಗೆ ಸಿದ್ಧವಿರುವ ಕಾಮಗಾರಿಗಳ ವಿವರ ಸಹ ನೀಡಬೇಕು. ಅಲ್ಲದೇ ಮುಖ್ಯಮಂತ್ರಿಗಳ ಭೇಟಿ ಕಾರ್ಯಕ್ರಮದಲ್ಲಿ ಪ್ರಮುಖ ಇಲಾಖೆಗಳ ವತಿಯಿಂದ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುವ ಮಾಹಿತಿ ಸಹಿತ ನೀಡಬೇಕು. ಈ ಎಲ್ಲ ಮಾಹಿತಿಗಳನ್ನು ಎರಡು ದಿನದೊಳಗಾಗಿ ಸಲ್ಲಿಸುವಂತೆ ಸೂಚಿಸಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಕಾರಣ ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಲು ಸೂಕ್ತ ಹಾಗೂ ವಿಸ್ತಾರವಾದ ಸ್ಥಳವನ್ನು ಗುರುತಿಸಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಐಎಎಸ್ ಪ್ರೊಬೇಷನರಿ ಅಧಿಕಾರಿ ಅಕೃತಿ ಸಾಗರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನಾಚರಣೆ
***************************************
ಕಲಬುರಗಿ,ನ.30.(ಕ.ವಾ.)-ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಡಿಸೆಂಬರ್ 1ರಂದು ಬೆಳಿಗ್ಗೆ 7-30 ಗಂಟೆಗೆ ಕಲಬುರಗಿಯ ಕೋರ್ಟ್ ರಸ್ತೆಯಲ್ಲಿರುವ ಸೇಂಟ್ ಮೇರಿ ಶಾಲೆಯಿಂದ ಹಮ್ಮಿಕೊಳ್ಳಲಾದ “ಆರೋಗ್ಯ ಎಲ್ಲರ ಹಕ್ಕು, ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷ್ಯವಾಕ್ಯದ ವಾಕಥಾನ್/ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಚಾಲನೆ ನೀಡಲಿದ್ದಾರೆ. ಕಲಬುರಗಿಯ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ರಾಬರ್ಟ್ ಮಿರಾಂದ ದಿವ್ಯ ಸಾನಿಧ್ಯವಹಿಸುವರು. ಸೇಂಟ್ ಮೇರಿ ಶಾಲೆಯಿಂದ ಆರಂಭಗೊಂಡ ಈ ಜಾಥಾವು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ ಸರ್ಕಲ್, ಗೋವಾ ಹೊಟೇಲ್, ಆನಂದ ಹೊಟೇಲ್ ಮುಖಾಂತರ ಸೇಂಟ್ ಮೇರಿ ಶಾಲೆಗೆ ಆಗಮಿಸಿ ಮುಕ್ತಾಯಗೊಳ್ಳಲಿದೆ.
ಕಬುರಗಿಯ ಕೋರ್ಟ ರಸ್ತೆಯಲ್ಲಿರುವ ಸೇಂಟ್ ಮೇರಿ ಶಾಲೆ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಜರುಗುವ ವಿಶ್ವ ಏಡ್ಸ್ ದಿನಾಚರಣೆಯ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮುಖ್ಯ ಅತಿಥಿಗಳಾಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಅತಿಥಿಗಳಾಗಿ ಆಗಮಿಸುವರು. ಎ.ಆರ್.ಟಿ. ಕೇಂದ್ರದ ನೋಡಲ್ ಅಧಿಕಾರಿ ಡಾ. ದೇವೀಂದ್ರಪ್ಪ ಮೈನಾಳ ಅತಿಥಿ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಸ್ಪರ್ಶ ಕೇರ್ ಹೋಂ ಇನ್ಸ್‍ಟಿಟ್ಯೂಟ್, ಸೇಂಟ್ ಮೇರಿ ಶಾಲೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೆ.ಹೆಚ್.ಪಿ.ಟಿ., ರೆಡ್ ರಿಬ್ಬನ್ ಕ್ಲಬ್, ಸ್ವಯಂ ಸೇವಾ ಸಂಸ್ಥೆಗಳು, ಎನ್.ಸಿ.ಸಿ.-32 ಬಟಾಲಿಯನ್ ಮತ್ತು ಎನ್.ಎಸ್.ಎಸ್.ಘಟಕಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದೆ.
ಡಿಸೆಂಬರ್ 2ರಂದು ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜೆ
****************************************************
ಕಲಬುರಗಿ,ನ.30.(ಕ.ವಾ.)-ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಡಿಸೆಂಬರ್ 2ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರ ಈ ಹಿಂದೆ ಪ್ರಕಟಿಸಿದ್ದ ರಜಾ ಪಟ್ಟಿಯಲ್ಲಿ ಶುಕ್ರವಾರ ಡಿಸೆಂಬರ್ 1ರಂದು ನಿಗದಿ ಮಾಡಲಾಗಿತ್ತು. ಕೇಂದ್ರ ಚಂದ್ರ ದರ್ಶನ ಸಮಿತಿಯ ಅಭಿಪ್ರಾಯ ಆಧರಿಸಿ ರಜಾ ದಿನವನ್ನು ಬದಲಾವಣೆ ಮಾಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಬ್ಯೂಟಿ ಪಾರ್ಲರ್ ತರಬೇತಿಗಾಗಿ ಅರ್ಜಿ ಆಹ್ವಾನ
*******************************************
ಕಲಬುರಗಿ,ನ.30.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆ 2015-16ನೇ ಸಾಲಿನ ಶೇ 24.10 ಕ್ರಿಯಾ ಯೋಜನೆಯ ಪಾಲಿಕೆ ನಿಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಅಯುಕ್ತ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕನಿಷ್ಠ 7ನೇ ತರಗತಿ ಪಾಸಾಗಿರಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ, ಬಿ.ಪಿ.ಎಲ್. ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 15ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಎಸ್.ಜೆ.ಎಸ್.ಆರ್.ವೈ. ಕಟ್ಟಡದಲ್ಲಿರುವ ಶೇ. 24.10 ಶಾಖೆಯ ಶಾಖಾ ಮುಖ್ಯಸ್ಥರನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಲ ಮರುಪಾವತಿ ಸಹಾಯಧನಕ್ಕೆ ಅರ್ಜಿ ಆಹ್ವಾನ
**********************************************
ಕಲಬುರಗಿ,ನ.30.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ಜಿಲ್ಲಾಧಿಕಾರಿಗಳಿಂದ ಅನುಮೋದಿತಗೊಂಡ 2011-12 ರಿಂದ 2015-16ನೇ ಸಾಲಿನ ಎಸ್.ಎಫ್.ಸಿ. ಶೇ. 24.10 ಯೋಜನೆಯ ಪರಿಷ್ಕøತ ಕ್ರಿಯಾ ಯೋಜನೆಯಲ್ಲಿ ಎಸ್.ಜೆ.ಎಸ್.ಆರ್.ವೈ./ಡೇ-ನಲ್ಮ್ ಯೋಜನೆ ಅಡಿಯಲ್ಲಿ ಸಾಲ ಮರುಪಾವತಿಗಾಗಿ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಅಯುಕ್ತ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಎಸ್.ಜೆ.ಎಸ್.ಆರ್.ವೈ./ಡೇ-ನಲ್ಮ್ ಯೋಜನೆಯಡಿಯಲ್ಲಿ ಸಾಲ ಪಡೆದಿರಬೇಕು. ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಆಧಾರ ಕಾರ್ಡ, ಸಾಲದ ಅರ್ಜಿ ನಮೂನೆಯ ಜಿರಾಕ್ಸ್ ಪ್ರತಿ, ಸಾಲ ಮಂಜೂರಾತಿ ಪತ್ರ ಹಾಗೂ ಸಾಲದ ಸ್ಟೇಟ್‍ಮೆಂಟ್‍ನ್ನು ಅರ್ಜಿಯೊಂದಿಗೆ ಲಗತ್ತಿಸಿ ಡಿಸೆಂಬರ್ 15ರೊಳಗಾಗಿ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ದಿನಾಂಕದ ಆದ್ಯತೆಗನುಗುಣವಾಗಿ ಸಹಾಯಧನ ನೀಡಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಎಸ್.ಜೆ.ಎಸ್.ಆರ್.ವೈ. ಕಟ್ಟಡದಲ್ಲಿರುವ ಶೇ. 24.10 ಶಾಖೆಯ ಶಾಖಾ ಮುಖ್ಯಸ್ಥರನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿಯಲ್ಲಿ 09 ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ
*****************************************************
ಕಲಬುರಗಿ,ನ.30.(ಕ.ವಾ.)-ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಘಟಕದಲ್ಲಿ ಖಾಲಿಯಿರುವ 09 ಶೀಘ್ರಲಿಪಿಗಾರರ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳ ಪೈಕಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗಾಗಿ ಸ್ಥಳೀಯ ವೃಂದದ 06 ಹುದ್ದೆಗಳು ಹಾಗೂ ಉಳಿದ ಮೂಲ ವೃಂದದ ಸ್ಥಳೀಯೇತರ ಅಭ್ಯರ್ಥಿಗಳಿಗೆ 03 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವ್ಹಿ.ಪಾಟೀಲ ತಿಳಿಸಿದ್ದಾರೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿಗಾರ ಕೋರ್ಸುಗಳ ಪರೀಕ್ಷೆಗಳಲ್ಲಿ ಹಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾದವರು ಅಥವಾ ಕಮರ್ಶಿಯಲ್ ಪ್ರ್ಯಾಕ್ಟೀಸ್ ಡಿಪ್ಲೋಮಾ/ಸೆಕ್ರೆಟ್ರಿಯೇಟ್ ಪ್ರ್ಯಾಕ್ಟೀಸ್ ಅಥವಾ ವಿಶ್ವವಿದ್ಯಾಲಯ ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ನಡೆಸುವ ಇತರೆ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ಕನಿಷ್ಟ 18 ವರ್ಷ ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ. ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ಇರುತ್ತದೆ. ಅರ್ಜಿ ಶುಲ್ಕ 200ರೂ. ಇದ್ದು, ಅರ್ಜಿ ಶುಲ್ಕವನ್ನು ಆನ್‍ಲೈನ್ ಮೂಲಕ ಎಸ್.ಬಿ.ಐ. ಬ್ಯಾಂಕಿನಲ್ಲಿ ಪಾವತಿಸಲು 2018ರ ಜನವರಿ 5 ಕೊನೆಯ ದಿನವಾಗಿದೆ.
ಜಿಲ್ಲಾ ನ್ಯಾಯಾಲಯದ http://ecourts.gov.in/kalaburagi/online-recruitmentವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು 2017ರ ಡಿಸೆಂಬರ್ 4 ರಿಂದ 2018ರ ಜನವರಿ 3ರ ರಾತ್ರಿ 11:59 ಗಂಟೆಯವರೆÀಗೆ ಸಲ್ಲಿಸಬೇಕು. ಅಭ್ಯರ್ಥಿಗಳು ಕೊನೆಯ ದಿನಾಂಕವನ್ನು ಕಾಯದೇ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕು. ಹುದ್ದೆಗಳ ಮೀಸಲಾತಿ, ನೇಮಕಾತಿ ವಿಧಾನ ಹಾಗೂ ಇನ್ನಿತರ ಹೆಚ್ಚಿನ ವಿವರಗಳಿಗಾಗಿ ಕಲಬುರಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಯನ್ನು ಹಾಗೂ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಿದೆ.
ಡಿಸೆಂಬರ್ 1ರಂದು ವಿಕಲಚೇತನರ ಜಿಲ್ಲಾ ಮಟ್ಟದ ಸಾಂಸ್ಕøತಿಕ-ಕ್ರೀಡಾ ಸ್ಪರ್ಧೆ
*******************************************************************
ಕಲಬುರಗಿ,ನ.30.(ಕ.ವಾ.)-ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಕಲಚೇತನರಿಗೆ ಜಿಲ್ಲಾ ಮಟ್ಟದ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಡಿಸೆಂಬರ್ 1ರಂದು ಬೆಳಿಗ್ಗೆ 10.30 ಗಂಟೆಗೆ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಆಸಕ್ತಿಯುಳ್ಳ ವಿಕಲಚೇತನರು ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಅವರು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬನ್ಸಿ ಪವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment