GULBARGA VARTHE

GULBARGA VARTHE

Thursday, 12 October 2017

NEWS DATE: 12--10--2017

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
********************************************
ಕಲಬುರಗಿ,ಅ.12(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಕರ್ನಾಟಕ ಎಕ್ಸ್‍ಪ್ರೆಸ್ ರೈಲಿನ ಮೂಲಕ ಅಕ್ಟೋಬರ್ 13ರಂದು ಬೆಳಿಗ್ಗೆ 5.39 ಗಂಟೆಗೆ ಕಲಬುರಗಿಗೆ ಆಗಮಿಸುವರು. 
ನಂತರ ಅಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ರಾತ್ರಿ 8.15 ಗಂಟೆಗೆ ಸಿಕಂದ್ರಾಬಾದ್-ಹುಬ್ಬಳ್ಳಿ ಎಕ್ಸ್‍ಪ್ರೆಸ್ ರೈಲಿನ ಮೂಲಕ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು. ನಂತರ ಸಚಿವರು ಮರಳಿ ಹುಬ್ಬಳ್ಳಿಯಿಂದ ಹುಬ್ಬಳ್ಳಿ-ಸಿಕಂದ್ರಾಬಾದ್ ರೈಲಿನ ಮೂಲಕ ಅಕ್ಟೋಬರ್ 15ರಂದು ಬೆಳಿಗ್ಗೆ 7.10 ಗಂಟೆಗೆ ಕಲಬುರಗಿಗೆ ಆಗಮಿಸಿ, ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಅಕ್ಟೋಬರ್ 16ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಜಿಲ್ಲೆಯಲ್ಲಿ ಚೈನೀಸ್ ಪಟಾಕಿಗಳ ಮಾರಾಟ ನಿಷೇಧ 
********************************************
ಕಲಬುರಗಿ.ಅ.12.(ಕ.ವಾ)-ದೇಶದ್ಯಾಂತ ಚೈನೀಸ್ ನಿರ್ಮಿತ ಪಟಾಕಿಗಳ ಮಾರಾಟ ಮಾಡುವುದನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೂ ಚೈನೀಸ್ ನಿರ್ಮಿತ ಪಟಾಕಿಗಳ ಮಾರಾಟವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು. 
ಅವರು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 2017ನೇ ಸಾಲಿನ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟ ಮಾಡುವ ವ್ಯಾಪಾರಸ್ಥರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಚೈನೀಸ್ ಪಟಾಕಿಗಳನ್ನು ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ನಿ ಶಾಮಕ, ತಹಸೀಲ್ದಾರ ಹಾಗೂ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು. 
ಈ ಮೊದಲು ಸುಪರ್ ಮಾರ್ಕೆಟ್ ಮತ್ತು ಕನ್ನಡ ಭವನದಲ್ಲಿ ಪಟಾಕಿ ವ್ಯಾಪಾರ ಮಾಡಲಾಗುತ್ತಿತ್ತು. ಇವು ಜನನಿಬೀಡ ಪ್ರದೇಶಗಳಾಗಿದ್ದರಿಂದ ಈ ವರ್ಷ ನಗರದ ವಿಜಯ ವಿದ್ಯಾಲಯ ಕಾಲೇಜು ಆವರಣದ ಖಾಲಿ ಸ್ಥಳದಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆಗಳನ್ನು ನಿರ್ಮಿಸಿ ಪಟಾಕಿ ವ್ಯಾಪಾರ ಮಾಡುವಂತೆ ತಿಳಿಸಿದರು. ಜಿಲ್ಲೆಯಾದ್ಯಂತ ಯಾವುದೇ ಅನಧೀಕೃತ ಪಟಾಕಿ ಮಾರಾಟ ಹಾಗೂ ಜನ ನೀಬಿಡ ಸ್ಥಳದಲ್ಲಿ ಪಟಾಕಿ ಮಾರಾಟ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರು. 
ಸರ್ಕಾರಿ ನಿಯಮಾವಳಿಗಳ ಪ್ರಕಾರ ಅಗ್ನಿಶಾಮಕ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜನಭರಿತ ಸ್ಥಳಗಳಲ್ಲಿ ಇರುವ ಯಾವುದೇ ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಪಟಾಕಿಗಳ ದಾಸ್ತಾನು ಹಾಗೂ ಮಾರಾಟಕ್ಕೆ ಅನುಮತಿ ನೀಡಬಾರದೆಂದು ನಿರ್ದೇಶಿಸಲಾಗಿದೆ. ಆದಾಗ್ಯೂ ಜನ ನಿಬೀಡ ಪ್ರದೇಶಗಳಲ್ಲಿ ಖಾಯಂ ಅಂಗಡಿಗಳಲ್ಲಿ ಪಟಾಕಿ ದಾಸ್ತಾನು ಅಥವಾ ಮಾರಾಟ ಮಾಡುತ್ತಿದ್ದರೆ ಅಂತಹ ಅಂಗಡಿಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದರು. 
ಈ ವರ್ಷವು ಸಹ ದೀಪಾವಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ವದ ನೀಡದಂತೆ ಶಾಂತಿಯುತವಾಗಿ ಹಬ್ಬ ಆಚರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆಗ್ನಿ ಶಾಮಕ ಅಧಿಕಾರಿ ಪರಶುರಾಮ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಮತ್ತಿರರ ಅಧಿಕಾರಿಗಳು ಭಾಗವಹಿಸಿದ್ದರು.
ಅಕ್ಟೋಬರ್ 14 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ 
**********************************************************
ಕಲಬುರಗಿ,ಅ.12(ಕ.ವಾ.)-ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಸಾಕ್ಷರತಾ ಸಮಾವೇಶ ಹಾಗೂ 51ನೇ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಅಕ್ಟೋಬರ್ 14ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. 
ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರ ಘನ ಉಪಸ್ಥಿತಿಯಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ್ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. 
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಹ್ಮದ್ ಅಜಗರ್ ಚುಲ್‍ಬುಲ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕಕುಮಾರ, ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಕೆ.ಎನ್. ವಿಜಯ, ಕಲಬುರಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ್ ಸಜ್ಜನ್ ವಿಶೇಷ ಆಹ್ವಾನಿರತಾಗಿ ಆಗಮಿಸುವರು. ಕಲಬುರಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕಿ ಸಂಗೀತಾ ಕಟ್ಟಿಮನಿ ವಿಶೇಷ ಉಪನ್ಯಾಸ ನೀಡುವರು.
ಭೂಗತ ವಿದ್ಯುತ್ ಮಾರ್ಗ: ಯಾವುದೇ ಭೂಮಿ ಅಗೆತದ 
************************************************
ಕೆಲಸ ಪ್ರಾರಂಭಿಸುವ ಮೊದಲು ಜೆಸ್ಕಾಂ ಕಚೇರಿಗೆ ಸಂಪರ್ಕಿಸಿ
******************************************************
ಕಲಬುರಗಿ,ಅ.12(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ 11 ಕೆ.ವಿ. ಸಿದ್ದೇಶ್ವರ ಫೀಡರ್ (ಯು.ಜಿ. ಕೇಬಲ್) ಭೂಗತ ವಿದ್ಯುತ್ ಮಾರ್ಗ ಕಾಮಗಾರಿಯ ಕೆಲಸಗಳು ಪೂರ್ಣಗೊಂಡಿರುತ್ತದೆ. ಸದರಿ ವಿದ್ಯುತ್ ಮಾರ್ಗವನ್ನು ಅಕ್ಟೋಬರ್ 13ರಂದು ವಿದ್ಯುತ್ತೀಕರಣಗೊಳಿಸಲಾಗುತ್ತಿದೆ ಹಾಗೂ ನಂತರ ದಿನಗಳಲ್ಲಿ ಚಾಲ್ತಿಯಲ್ಲಿರುತ್ತದೆ. 11ಕೆ.ವಿ. ಸಿದ್ದೇಶ್ವರ ಫೀಡರ್ ಮೇಲೆ ಒಟ್ಟು 09 ರಿಂಗ್ ಮೇನ್ ಯೂನಿಟ್ (ಆರ್.ಎಂ.ಯು) ಅಳವಡಿಸಲಾಗಿದೆ. ಈ ಆರ್.ಎಂ.ಯು. ಮುಖಾಂತರ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಒದಗಿಸಲಾಗುತ್ತಿದೆ ಎಂದು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್ ತಿಳಿಸಿದ್ದಾರೆ.
ಹಾರಕೂಡ ಕಲ್ಯಾಣ ಮಂಟಪ, ಸಿದ್ದಿಪ್ರಿಯ ಹೊಟೇಲ್, ಓಂ ನಗರ ಗೇಟ್, ಖರ್ಗೆ ಪೆಟ್ರೋಲ್ ಪಂಪ್, ಹೆಚ್.ಡಿ.ಎಫ್.ಸಿ. ಎಟಿಎಂ., ಹನುಮಾನ ಮಂದಿರ, ಎಂ.ಆರ್.ಎಂ.ಸಿ. ಕಾಲೇಜು, ಮಿಲಿಂಗ್ ಕಾಲೇಜು ಮತ್ತು ಜಿ.ಟಿ.ಟಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರು ಯಾವುದೇ ಭೂಮಿ ಅಗೆತದ ಕೆಲಸವನ್ನು ಆರಂಭಿಸುವ ಮೊದಲು ಸ್ಥಳೀಯ ಜೆಸ್ಕಾಂ ಕಚೇರಿಯನ್ನು ಸಂಪರ್ಕಿಸಬೇಕು. ಸಧ್ಯ ಇರುವ ಡಿ.ಪಿ. ಮತ್ತು ಗೈ ವೈರ್‍ಗಳಿಗೆ ಧನಕರುಗಳನ್ನು ಕಟ್ಟುವುದು ಹಾಗೂ ಬಟ್ಟೆ ಒಣಗಿಸುವುದನ್ನು ಮಾಡಬಾರದು ಎಂದು ಕಾರ್ಯನಿರ್ವಾಹಕ ಇಂಜಿನಿಯರರು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
****************************
ಕಲಬುರಗಿ,ಅ.12(ಕ.ವಾ.)-ಕರ್ನಾಟಕ ಯಕ್ಷಗಾನ ಅಕಾಡೆಮಿಯು 2017-18ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿ ಅಕಾಡೆಮಿಯ ವ್ಯಾಪ್ತಿಗೆ ಒಳಪಡುವ ಯಕ್ಷಗಾನ ಕ್ಷೇತ್ರದಲ್ಲಿ 5 ತಿಂಗಳ ಕಾಲ ಸಂಶೋಧನೆ ಮಾಡಿ ಪ್ರಬಂಧ ಮಂಡಿಸುವವರಿಗೆ ಫೆಲೋಶಿಪ್ ನೀಡುವ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಇದಕ್ಕಾಗಿ ಪರಿಶಿಷ್ಟ ವರ್ಗದ ಯಕ್ಷಗಾನ ಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ಪರಿಣಿತ ಕಲಾವಿದರು/ತಜ್ಞರಿಂದ ಸಂಶೋಧನೆ/ಪೆಲೋಶಿಪ್‍ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ. 
ಅರ್ಜಿ ಸಲ್ಲಿಸುವವರು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿಬೇಕು. ವಯೋಮಿತಿ 45ವರ್ಷ ಮೀರಿರಬಾರದು. ಯಕ್ಷಗಾನದ ತೆಂಕುತಿಟ್ಟು, ಬಡಗುತಿಟ್ಟು, ಬಡಾಬಡಗುತಿಟ್ಟು, ತಾಳಮದ್ದಳೆ, ಮೂಡಲಪಾಯ, ಯಕ್ಷಗಾನ, ಬೊಂಬೆಯಾಟ, ಯಕ್ಷಗಾನದ ಇತರೆ ಪ್ರಕಾರದ ವಿಷಯಗಳಲ್ಲಿ ಆಸಕ್ತಿಯಿರುವ ಕನ್ನಡ ಭಾಷಾ ವಿಜ್ಞಾನ, ಜಾನಪದ, ಸಮಾಜ ವಿಜ್ಞಾನ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮಹಿಳಾ ಅಧ್ಯಯನ, ಮಾನವಶಾಸ್ತ್ರ, ಪತ್ರಿಕೋದ್ಯಮ, ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ, ಇಂಗ್ಲೀಷ, ಹಿಂದಿ ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿರುವವರು ಅರ್ಜಿ ಸಲ್ಲಿಸಬಹುದಾಗಿದೆ. 
ಈ ಸಂಶೋಧನಾ ಕಾರ್ಯಕ್ಕಾಗಿ ಓರ್ವ ಸಂಶೋಧನಾ ಅಭ್ಯರ್ಥಿಗೆ 90,000ರೂ. ಹಾಗೂ ಮಾರ್ಗದರ್ಶಕರ ಗೌರವ ಸಂಭಾವನೆ 10,000ರೂ. ನಿಗದಿಪಡಿಸಲಾಗಿದೆ. ಆಯ್ಕೆ ಮಾಡಿಕೊಳ್ಳುವ ಅಧ್ಯಯನ ವಿಷಯ ಬಗ್ಗೆ ನಾಲ್ಕು ಪುಟಗಳ ಸಾರಲೇಖ (ಸಾರಾಂಶ) ಹಾಗೂ ತಮ್ಮ ಸಾಧನೆಯ ಕಿರು ಪರಿಚಯ ಹಾಗೂ ಜಾತಿ ಪ್ರಮಾಣಪತ್ರಗಳೊಂದಿಗೆ ಅರ್ಜಿಯನ್ನು ಅಕ್ಟೋಬರ್ 31ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-2 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ kybabangalore@gmail.com ಕಳುಹಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ 
****************************************************
ಕಲಬುರಗಿ,ಅ.12(ಕ.ವಾ.)-ನ್ಯಾಷನಲ್ ಇ-ಸ್ಕಾಲರ್‍ಶಿಫ್ ಯೋಜನೆಯಡಿ ಭಾರತ ಸರ್ಕಾರದ ವಿಕಲಚೇತನ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. 
ಆಸಕ್ತಿಯುಳ್ಳ ವಿಕಲಚೇತನ ವಿದ್ಯಾರ್ಥಿಗಳು www.scholarships.gov.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿ ವೇತನ ಯೋಜನೆಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ hಣಣಠಿ://http://www.disabilityaffairs.gov.in ವೆಬ್‍ಸೈಟ್‍ನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಲಂಚ ಪಡೆದ ಭೂಮಾಪಕನಿಗೆ ಜೈಲು ಶಿಕ್ಷೆ
************************************
ಕಲಬುರಗಿ,ಅ.10.(ಕ.ವಾ.)-ಜಮೀನು ಅಳತೆ ಮಾಡಿದ ಸರ್ವೆ ವರದಿ ನಕಲು ನೀಡಲು 20,000 ರೂ. ಲಂಚ ಪಡೆದ ಜೇವರ್ಗಿ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಭೂಮಾಪಕ ಮರ್ತೂಜಾಸಾಬ್ ಮೋಮಿನ್ ವಿರುದ್ಧ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸೆಷನ್ಸ್ ನ್ಯಾಯಾಧೀಶ ಬಿ.ವಿ. ಪಾಟೀಲ ಅವರು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ. 
ಫಿರ್ಯಾದಿ ಪ್ರಕಾಶ ಅವರು ತಾಯಿಯವರ ಹೆಸರಿನಲ್ಲಿ ಇರುವ ಅಂಬರಖೇಡ ಗ್ರಾಮದ ಸರ್ವೆ ನಂ. 66/1ನ್ನು ಸರ್ವೆ ಮಾಡಿ ವರದಿ ನಕಲು ನೀಡಲು 20,000ರೂ. ಬೇಡಿಕೆ ಇಟ್ಟು. 2013ರ ಆಗಸ್ಟ್ 14ರಂದು ರಾತ್ರಿ 8.30 ಗಂಟೆಗೆ ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಹತ್ತಿರ ಫಿರ್ಯಾದಿ ಪ್ರಕಾಶ ಅವರಿಂದ ಹಣ ಪಡೆದು ಅಪರಾಧ ಎಸೆಗಿರುತ್ತಾರೆ. ಈ ಕುರಿತು ಲೋಕಾಯುಕ್ತ ಇನ್ಸಪೆಕ್ಟರ್ ತಮ್ಮರಾಯ ಪಾಟೀಲ ಅವರು ಆರೋಪಿತನ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದರು.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆರೋಪಿ ಮರ್ತೂಜಾಸಾಬ್ ಮೊಮೀನ್ ವಿರುದ್ಧ ಹಾಜರುಪಡಿಸಲಾದ ಸಾಕ್ಷ್ಯಾಧಾರಗಳು ಸಾಬೀತಾಗಿದ್ದರಿಂದ ಆರೋಪಿ ತಪ್ಪಿತಸ್ಥನೆಂದು ಪರಿಗಣಿಸಿ ಕಲಂ 7ರ ಲಂಚ ನಿಷೇಧ ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 3 ವರ್ಷ ಕಾರಾಗೃಹ ವಾಸ ಹಾಗೂ 10,000 ರೂ. ದಂಡ ಮತ್ತು ಕಲಂ 13(2)ರ ಅಡಿಯಲ್ಲಿನ ಅಪರಾಧಕ್ಕೆ 4 ವರ್ಷ ಶಿಕ್ಷೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಎ.ಎಸ್. ಚಾಂದಕವಠೆ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಸೇಡಂ ಬಾಲಸ್ನೇಹಿ ಯೋಜನೆಯಲ್ಲಿ ಅವ್ಯವಹಾರ ನಡೆದಿಲ್ಲ: ಅಶೋಕ ರಾಜನ್ ಸ್ಪಷ್ಟನೆ
**************************************************************************
ಕಲಬುರಗಿ.ಅ.12.(ಕ.ವಾ.)-ಸೇಡಂ ತಾಲೂಕಿನಲ್ಲಿ ಕಳೆದ ತಿಂಗಳು ಸೆಪ್ಟೆಂಬರ್-2017ರಂದು ನಡೆದ ಜನಸ್ಪಂದನ ಸಭೆಯಲ್ಲಿ ಮುಕ್ರಮ್‍ಖಾನ್ ಅವರು ಸೇಡಂ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ರಾಜನ್ ವಿರುದ್ಧ ಅಂಗನವಾಡಿ ಕೇಂದ್ರಗಳ ಬಾಲಸ್ನೇಹಿ ಗೋಡೆ ಬರಹ ಯೋಜನೆಯಲ್ಲಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಹೇಳಿಕೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ರಾಜನ್ ಸ್ಪಷ್ಟೀಕರಣ ನೀಡಿದ್ದಾರೆ. 
ಸ್ಪಷ್ಟೀಕರಣ:ಸೇಡಂ ತಾಲೂಕಿನ ಬಾಲಸ್ನೇಹಿ ಯೋಜನೆಯಡಿ 52 ಕೇಂದ್ರಗಳು ಆಯ್ಕೆಯಾಗಿದ್ದು, ಕಾರ್ಯಕರ್ತೆಯರಿಗೆ ತಲಾ 1 ಕೇಂದ್ರಕ್ಕೆ 10,000 ರೂಪಾಯಿಯಂತೆ ಅಸವರ ಖಾತೆಗೆ ಹಣ ಜಮಾ ಮಾಡಲಾಗಿರುತ್ತದೆ. ಒಟ್ಟು 41 ಅಂಗನವಾಡಿ ಕೇಂದ್ರಗಳಿಗೆ 2 ಜನ ಪೆಂಟರ್‍ಗಳಿಂದ ಗೋಡೆ ಬರಹ (ಪೇಟಿಂಗ್, ಪ್ರಾಣಿ, ಅಕ್ಷರ ಮಾಲೆ) ಮಾಡಿಸಿದ್ದು, ಇನ್ನು 14 ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಪ್ರಗತಿಯಲ್ಲಿರುತ್ತದೆ. ಗೋಡೆ ಬರಹ ಪೂರ್ಣಗೊಳಿಸಿದ ಪೆಂಟರ್ ಅವರ ಖಾತೆಗೆ ನಿಯಮಾನುಸಾರ ಹಣ ಜಮಾ ಮಾಡಲಾಗಿದೆ. 
ಸರ್ಕಾರದ ಆದೇಶ್ವನಯ ಕೇವಲ 1 ಗೋಡೆಗೆ ಮಾತ್ರ ಗೋಡೆ ಬರಹ ಮಾಡಿಸುವ ಆದೇಶವಿರುತ್ತದೆ. ಆದರೆ 2 ಜನ ಪೆಂಟರ್ ಮನವೊಲಿಸಿ ಅದೇ ಹಣದಲ್ಲಿ 4 ಗೋಡೆಗಳಿಗೆ ಗೋಡೆ ಬರಹ ಮಾಡಿಸಲಾಗಿದೆ. ಯೋಜನೆ ಹಣವನ್ನು ಅಂಗನವಾಡಿ ಖಾತೆಗೆ ಜಮಾ ಮಾಡಿ ಅವರಿಂದ ಪೆಂಟರ್‍ಗಳಿಗೆ ಹಣ ಸಂದಾಯ ಮಾಡಿ ಆರ್‍ಟಿಜಿಎಸ್ ರಶೀದಿ ನೀಡಿರುತ್ತಾರೆ. ಆದ್ದರಿಂದ ಬಾಲಸ್ನೇಹಿ ಯೋಜನೆಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸೇಡಂ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಾಕಾರಿ ಅಶೋಕ ರಾಜನ್ ಸ್ಪಷ್ಟಿಕರಣ ನೀಡಿದ್ದಾರೆ.

No comments:

Post a Comment