GULBARGA VARTHE

GULBARGA VARTHE

Friday, 17 February 2017

NI 17-02-2017 & PHOTOS
ಉದ್ಯೋಗ ಖಾತರಿ ಹೆಚ್ಚು ಅನುದಾನ ಮೀಸಲಿಡಲು ಮನವಿ
ಕಲಬುರಗಿ,ಫೆ.17.(ಕ.ವಾ.)-ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಡವರ, ಕೂಲಿ ಕಾರ್ಮಿಕರ, ಶೋಷಿತಕ್ಕೊಳಗಾದವರ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕಿಗಾಗಿ ಜಾರಿಗೊಳಿಸಿದ್ದು, ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಅತ್ಯಧಿಕ ಅನುದಾನ ಮೀಸಲಿಡಬೇಕೆಂದು ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಶುಕ್ರವಾರ ಕಲಬುರಗಿ ತಾಲೂಕಿನ ಸೈಯ್ಯದ್ ಚಿಂಚೋಳಿ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಸಣ್ಣ ನೀರಾವರಿ ಕೆರೆಯ ಹೊಳೆತ್ತುವ ಕಾಮಗಾರಿಯ ಪರಿಶೀಲನೆ ನಡೆಸಿ ಮಾತನಾಡಿದರು.
ಸದರಿ ಯೋಜನೆಯ ಅನುಷ್ಠಾನಕ್ಕಾಗಿ ವಾರ್ಷಿಕ 1.20 ಲಕ್ಷ ಕೋಟಿ ರೂ. ಅನುದಾನ ಬೇಕಾಗಲಿದ್ದು, 2017-18ನೇ ಸಾಲಿನ ಆಯವ್ಯಯದಲ್ಲಿ 48000 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದು, ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಇದಲ್ಲದೇ ಕರ್ನಾಟಕ ರಾಜ್ಯಕ್ಕೆ ಬೇಕಾಗುವ 5000 ಕೋಟಿ ರೂ. ಮತ್ತು ಕಲಬುರಗಿ ಜಿಲ್ಲೆಗೆ ಬೇಕಾಗುವ 250 ಕೋಟಿ ರೂ. ಅನುದಾನವನ್ನು ಸಹ ತುರ್ತಾಗಿ ಬಿಡುಗಡೆ ಮಾಡಬೇಕು. ಇದರಿಂದ ಕೂಲಿ ಮಾಡುವ ಕುಟುಂಬಗಳು ಸುಗಮ ಸಂಸಾರ ಸಾಗಿಸಲು ಅನುಕೂಲವಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿರುವವರು ಸೋಮಾರಿಗಳಾಗದೇ ಕಷ್ಟಪಟ್ಟು ದುಡಿಯುವುದನ್ನು ರೂಢಿಸಿಕೊಳ್ಳಬೇಕು. ಎಷ್ಟೇ ಕಷ್ಟ ಬಂದರೂ ಯಾವುದೇ ಕಾರಣಕ್ಕೂ ಇರುವ ಅಲ್ಪಸ್ವಲ್ಪ ಜಮೀನನ್ನು ಮಾರಿಕೊಳ್ಳಬಾರದು. ಕಷ್ಟದ ಹಾಗೂ ಒಳ್ಳೆಯ ಸಮಯದಲ್ಲಿಯೂ ಸುಗಮವಾದ ಜೀವನ ನಡೆಸುವುದನ್ನು ಕಲಿಯಬೇಕು. ಗ್ರಾಮೀಣ ಭಾಗದಲ್ಲಿರುವ ಎಲ್ಲ ಕೂಲಿ ಕಾರ್ಮಿಕರು ಉದ್ಯೋಗ ಆರಿಸಿ ಬೇರಡೆ ವಲಸೆ ಹೋಗದೇ ಗ್ರಾಮದ ಸಮೀಪದಲ್ಲಿಯೇ ಕೈಗೊಂಡ ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆಯಬೇಕೆಂದರು.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮಾತನಾಡಿ, ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಬಡಜನರು ಪ್ರತಿ ವರ್ಷ 100 ದಿನ ಉದ್ಯೋಗ ಪಡೆಯುವ ಕಾನೂನು ಬದ್ಧ ಹಕ್ಕು ಒದಗಿಸುತ್ತದೆ. ಕೂಲಿ ಕೆಲಸ ಮಾಡಲು ಬರುವವರಿಗೆ ಕೂಲಿ ಒದಗಿಸಲು ಯಾವುದೆ ಯಾವುದೇ ತೊಂದರೆಯಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಸದರಿ ಯೋಜನೆಯಡಿ ಈ ವರ್ಷ 60 ಕೋಟಿ ಖರ್ಚು ಮಾಡಲಾಗಿದೆ.
ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ, ಜಿಲ್ಲಾ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಶರಣಬಸಪ್ಪ ಹಾಗರಗಾ, ತಾಜ ಸುಲ್ತಾನಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಲಕ್ಷ್ಮೀಕಾಂತ ಸಾವಳಗಿ, ಉಪಾಧ್ಯಕ್ಷ ವಿಠ್ಠಲ ಎಲ್. ಗೌಳಿ, ಸದಸ್ಯೆ ಮಂಜೂಳಾ ಚನ್ನಮಲ್ಲಶೆಟ್ಟಿ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸೈಯ್ಯದ್ ಚಿಂಚೋಳಿ ಸಣ್ಣ ನೀರಾವರಿ ಕೆರೆಯ ಹೊಳೆತ್ತುವ ಕಾಮಗಾರಿಗಾಗಿ ಕಳೆದ ವರ್ಷ 22 ಲಕ್ಷ ರೂ. ಖರ್ಚು ಮಾಡಿ 9656 ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ. ಇದರಿಂದ ಕೆರೆಯಲ್ಲಿ 118 ಲಕ್ಷ ಲೀಟರ್ ಹೆಚ್ಚುವರಿ ನೀರು ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಲಾಗಿದೆ. ಈಗ ಪುನ: ಹೊಳೆತ್ತುವ ಕಾಮಗಾರಿಯನ್ನು ಫೆಬ್ರವರಿ 6ರಿಂದ ಪ್ರಾರಂಭಿಸಿದ್ದು, ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ತಲಾ 20 ಜನರ 44 ಗುಂಪುಗಳನ್ನು ರಚಿಸಲಾಗಿದೆ. ಇಲ್ಲಿ ಪ್ರತಿದಿನ ಕಲಸ ಮಾಡುತ್ತಿರುವ 500 ಕೂಲಿ ಕಾರ್ಮಿಕರು 100 ದಿನಗಳ ಉದ್ಯೋಗ ಪೂರೈಸಿದ್ದು, ಹೆಚ್ಚುವರಿಯಾಗಿ 50 ದಿನಗಳ ಉದ್ಯೋಗ ಒದಗಿಸಲಾಗುವುದು. ಇದಲ್ಲದೇ ಕೆರೆ ಸಮೀಪದ 2 ನಾಲೆಗಳ ಆಳ ಅಗಲು ವಿಸ್ತರಿಸುವ ಕಾಮಗಾರಿಯನ್ನು ಸಹ ಕೈಗೊಳ್ಳಲಾಗುವುದೆಂದರು.

ಪ್ರೌಢಶಾಲಾ ಮಕ್ಕಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ
ಕಲಬುರಗಿ,ಫೆ.17.(ಕ.ವಾ.)-ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿಯ 782 ಮತ್ತು ಪರಿಶಿಷ್ಟ ಪಂಗಡದ 280 ಹಾಗೂ ಇತರೆ ಹಿಂದುಳಿದ ವರ್ಗದ 450 ಮಕ್ಕಳು ಸೇರಿದಂತೆ ಒಟ್ಟು 1512 ಪ್ರೌಢಶಾಲಾ ಮಕ್ಕಳ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣ ಪ್ರಕಾಶ ಪಾಟೀಲ ಹಾಗೂ ಲೋಕಸಭಾ ಸದಸ್ಯ ಡಾ|| ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಶುಕ್ರವಾರ ಹಸಿರು ನಿಶಾನೆ ತೋರಿ ಮಕ್ಕಳಿಗೆ ಶುಭ ಕೋರಿದರು.
ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ., ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪ್ರವಾಸದ ನಕಾಶೆ, ಅಗತ್ಯ ಔಷಧಿ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳ ದೂರವಾಣಿ, ಪ್ರಮುಖ ಸ್ಥಳಗಳ ದೂರವಾಣಿಗಳ ಸಂಖ್ಯೆ ಇಟ್ಟುಕೊಳ್ಳಬೇಕು. ಈ ಕುರಿತು ಮಕ್ಕಳ ಪಾಲಕರಿಗೂ ಮಾಹಿತಿ ಒದಗಿಸಬೇಕೆಂದು ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಈ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದಲ್ಲಿ ಮಕ್ಕಳ ಯೋಗಕ್ಷೇಮೆ ನೋಡಿಕೊಳ್ಳಲು 60 ಶಿಕ್ಷಕರು ಹಾಗೂ 60 ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಈ ಪ್ರವಾಸದಲ್ಲಿ ಅಫಜಲಪುರ ತಾಲೂಕಿನ ವಿದ್ಯಾರ್ಥಿಗಳು ಮೈಸೂರಿನ ಐತಿಹಾಸಿಕ ಸ್ಥಳಗಳು, ತುಂಗಭದ್ರಾ ಡ್ಯಾಂ,. ಜಿಂದಾಲ್ ಕಂಪನಿ, ಹಂಪಿ, ಕೂಡಲಸಂಗಮ ಮತ್ತು ಆಲಮಟ್ಟಿ ಡ್ಯಾಂಗಳಿಗೆ; ಆಳಂದ ತಾಲೂಕಿನ ಮಕ್ಕಳು ವಿಜಯಪುರದ ಐತಿಹಾಸಿಕ ಸ್ಥಳಗಳು, ಜೋಗಫಾಲ್ಸ್, ಮುರಡೇಶ್ವರ, ಸಿರಸಿ, ಗೋಕರ್ಣ, ಕೈಗಾ ಅಣು ಸ್ಥಾವರ, ಸೀಬರ್ಡ್ ನೌಕಾನೆಲೆ, ಅಡಿಕೆ ಸಂಸ್ಕರಣೆ ಕೇಂದ್ರಗಳಿಗೆ; ಜೇವರ್ಗಿ ತಾಲೂಕಿನ ಮಕ್ಕಳು ಹುಬ್ಬಳ್ಳಿ ಐಟಿ ಪಾರ್ಕ್, ಧಾರವಾಡ ಸೈನ್ಸ್ ಸೆಂಟರ್, ದಾಂಡೇಲಿ ಪೇಪರ್ ಮಿಲ್, ಸಿಂಥೆರಿ ರಾಕ್, ಅಂಬಿಕಾ ನಗರ ವಿದ್ಯುತ್ ಸ್ಥಾವರ ಮತ್ತು ಉಳವಿ ಓ.ಡಿ.ಎಫ್. ಕೈಗಾರಿಕಾ ಅಣುಸ್ಥಾವರ, ಕಾರವಾರ ಬೀಚ್ ಮತ್ತು ಅಡಿಕೆ ಸಂಸ್ಕರಣಾ ಕೇಂದ್ರ, ಕೂಡಲ ಸಂಗಮಗಳಿಗೆ; ಕಲಬುರಗಿ (ದ) ವಿದ್ಯಾರ್ಥಿಗಳು ತುಂಗಭದ್ರಾ ಜಲಾಶಯ, ಉದ್ಯಾನವನ, ಜಿಂದಾಲ್ ಉಕ್ಕಿನ ಕಾರ್ಖಾನೆ, ತೋರಣಗಲ್, ಚಿತ್ರದುರ್ಗ ಕೋಟೆ, ಮಳವಳ್ಳಿ ತೋಟ, ಪ್ರಾಣಿ ಸಂಗ್ರಹಾಲಯ, ಸಿದ್ಧಗಂಗಾ ಮಠ, ವಿಶ್ವೇಶ್ವರಯ್ಯ ಮ್ಯೂಸಿಯಂ, ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ಬನ್ನೇರುಘಟ್ಟ ಮತ್ತು ಸಾಫ್ಟವೇರ್ ಸಂಸ್ಥೆಗಳಿಗೆ; ಚಿಂಚೋಳಿ ತಾಲೂಕಿನ ಮಕ್ಕಳು ಜೋಗಫಾಲ್ಸ್, ಜವಳಿ ಪಾರ್ಕ್, ಭದ್ರಾವತಿ ಉಕ್ಕು ಕಾರ್ಖಾನೆ, ಹುಲಿಗಳ ಧಾಮ, ಕೈಗಾರಿಕಾ ಉದ್ಯಮ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ; ಚಿತ್ತಾಪುರ ತಾಲೂಕಿನ ಮಕ್ಕಳು ಕಾಫಿ ತೋಟಗಳು, ಪೊಲೀಸ್ ಕಾರ್ಯಾಲಯ, ಅರಣ್ಯ ಸಂಪತ್ತು, ನೈಸರ್ಗಿಕ ತಾಣಗಳು, ಕೈಗಾರಿಕಾ ಉದ್ಯಮ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭೇಟಿ. ಕಲಬುರಗಿ (ಉ) ಮಕ್ಕಳು ಬೆಂಗಳೂರಿನ ಸಾಫ್ಟವೇರ್ ಸಂಸ್ಥೆಗಳು, ಬಯೋಟೆಕ್ನಾಲೋಜಿ ಪ್ರಯೋಗಾಲಯ, ವಿಶ್ವೇಶ್ವರಯ್ಯ ಮ್ಯೂಸಿಯಂ, ಬನ್ನೇರುಘಟ್ಟ, ಕೈಗಾರಿಕಾ ಉದ್ಯಮ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳು, ಸೇಡಂ ತಾಲೂಕಿನ ಮಕ್ಕಳು ಜೋಗಫಾಲ್ಸ್, ಜವಳಿ ಪಾರ್ಕ್, ಭದ್ರಾವತಿ ಉಕ್ಕು ಕಾರ್ಖಾನೆ, ಹುಲಿಗಳ ಧಾಮ, ಕೈಗಾರಿಕಾ ಉದ್ಯಮ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ
ಕಲಬುರಗಿ,ಫೆ.17.(ಕ.ವಾ.)-ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರು ಬಳ್ಳಾರಿಯಿಂದ ಫೆಬ್ರವರಿ 19ರಂದು ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಫೆಬ್ರವರಿ 20ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸುವರು.
ಫೆಬ್ರವರಿ 20ರಂದು ಮಧ್ಯಾಹ್ನ 12.30 ಗಂಟೆಗೆ ಗರ್ಭಕೋಶಕ್ಕೆ ಕತ್ತರಿ ಕುರಿತು ಪರಿಶೀಲಿಸಲು ಕಲಬುರಗಿ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಫೆಬ್ರವರಿ 21ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯಿಂದ ಬೀದರಿಗೆ ಪ್ರಯಾಣಿಸುವರು.

ಫೆಬ್ರವರಿ 18 ಮತ್ತು 21ರಂದು ಎ.ಸಿ.ಬಿ.ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಕಲಬುರಗಿ,ಫೆ.17.(ಕ.ವಾ.)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ಸೇಡಂ ಹಾಗೂ ಅಫಜಲಪುರ ತಾಲೂಕುಗಳಿಗೆ ಕ್ರಮವಾಗಿ ಫೆಬ್ರವರಿ 18 ಮತ್ತು 21ರಂದು ಭೇಟಿ ನೀಡಿ ಬೆಳಗಿನ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಭ್ರಷ್ಟಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಉಪ ಅಧೀಕ್ಷಕ ಸಂತೋಷ ಬನ್ನಟ್ಟಿ ತಿಳಿಸಿದ್ದಾರೆ.
ಭೇಟಿ ದಿನಾಂಕ, ವಾರ, ಅಧಿಕಾರಿಗಳ ಹೆಸರು, ತಾಲೂಕಿನ ಹೆಸರು ಹಾಗೂ ಅಹವಾಲು ಸ್ವೀಕರಿಸುವ ಸ್ಥಳದ ವಿವರ ಇಂತಿದೆ. ಫೆಬ್ರವರಿ 18ರಂದು ಶನಿವಾರ: ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ ಕಲ್ಲೆದೇವರು ಮೊಬೈಲ್ ಸಂ. 9480803610, 9448828787-ಸೇಡಂ ಪ್ರವಾಸಿ ಮಂದಿರ. ಫೆಬ್ರವರಿ 21ರಂದು ಮಂಗಳವಾರ: ಪೊಲೀಸ್ ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ ಡಪ್ಪಿನ್ ಮೊಬೈಲ್ ಸಂ. 9480803609, 9663548820-ಅಫಜಲಪುರ ಪ್ರವಾಸಿ ಮಂದಿರ.

ಫೆಬ್ರವರಿ 19ರಂದು ಮಾಹಿತಿ ಉತ್ಸವದ ಉದ್ಘಾಟನಾ ಸಮಾರಂಭ

ಕಲಬುರಗಿ,ಫೆ.17.(ಕ.ವಾ.)-ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಫೆಬ್ರವರಿ 19 ಹಾಗೂ 20ರಂದು ಮಾಹಿತಿ ಉತ್ಸವವನ್ನು ಏರ್ಪಡಿಸಲಾಗಿದೆ.
ಫೆಬ್ರವರಿ 19ರಂದು ರವಿವಾರ ಸಾಯಂಕಾಲ 5.30 ಗಂಟೆಗೆ ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಮಾಹಿತಿ ಉತ್ಸವ ಸಮಾರಂಭವನ್ನು ಉದ್ಘಾಟಿಸುವರು. ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಅವರ ಘನ ಉಪಸ್ಥಿತಿಯಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಸಿ.ರೇವೂರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಲಬುರಗಿ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಬಸವರಾಜ್ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅಫಜಲಪುರ ಶಾಸಕ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ ಡಾ. ಖಮರುಲ್ ಇಸ್ಲಾಂ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ, ಮಹಾನಗರಪಾಲಿಕೆ ಮಹಾಪೌರ ಸೈಯ್ಯದ್ ಅಹ್ಮದ್ ವಿಶೇಷ ಆಹ್ವಾನಿತರಾಗಿ ಆಗಮಿಸುವರು.

ಕಲಬುರಗಿ ಜನತೆಯ ಕಣ್ಮನ ತಣಿಸುವ
ಮಾಹಿತಿ ಉತ್ಸವ ಹಾಗೂ ಭಾರತ ಭಾಗ್ಯವಿಧಾತಾ ಧ್ವನಿ ಬೆಳಕು
ಕಲಬುರಗಿ,ಫೆ.17.(ಕ.ವಾ.)-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಫೆಬ್ರವರಿ 19 ರಿಂದ 20ರಂದು ಮಾಹಿತಿ ಉತ್ಸವ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರವರ 125ನೇ ಜಯಂತ್ಯೋತ್ಸವ ಅಂಗವಾಗಿ ಫೆಬ್ರವರಿ 21ರಂದು “ಭಾರತ ಭಾಗ್ಯವಿಧಾತಾ” ಧ್ವನಿ ಬೆಳಕು ಕಾರ್ಯಕ್ರಮ ಆಯೋಜಿಸಿದೆ.
ಈ ಮಾಹಿತಿ ಉತ್ಸವದಲ್ಲಿ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುವ ಯೋಜನೆಗಳ ಮಾಹಿತಿ ಒದಗಿಸುವ ವಸ್ತು ಪ್ರದರ್ಶನ, ಇ.ಎಸ್.ಐ.ಸಿ. ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರುಚಿಕಟ್ಟಾದ ತಿಂಡಿ ತಿನಿಸುಗಳ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಫೆಬ್ರವರಿ 19ರಂದು ಸಂಜೆ 6 ಗಂಟೆಯಿಂದ ಮೈಸೂರು ಕಲಾವಿದರಿಂದ ಹೊಸ ಮತ್ತು ಹಳೆಯ ಚಲನಚಿತ್ರ ಗೀತೆಗಳ ಗಾನಯಾನ ಮೂಡಿ ಬರಲಿದೆ. ಫೆಬ್ರವರಿ 20ರಂದು ಸಾಯಂಕಾಲ 5.30 ರಿಂದ ರಾಜ್ಯ ವಿವಿಧ ಜಿಲ್ಲೆಗಳ ಜಾನಪದ ತಂಡಗಳಿಂದ ಗೀತಗಾಯನ, ತೊಗಲುಗೊಂಬೆಯಾಟ, ಕಂಸಾಳೆ ಮತ್ತು ಡೊಳ್ಳು ಕುಣಿತ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ನಮ್ಮ ದೇಶದ ಬುದ್ಧ, ಬಸವಣ್ಣ, ಮಹಾತ್ಮಾಗಾಂಧೀಜಿ, ಡಾ. ಬಾಬಾಸಾಹೇಬ ಅಂಬೇಡ್ಕರರು ಸತ್ಯ, ಶಾಂತಿ, ಅಹಿಂಸೆ ಮತ್ತು ಸಮಾನತೆ ಎಂಬ ಮಹಾ ಮೌಲ್ಯಗಳನ್ನು ತಿಳಿಸಿಕೊಟ್ಟವರು. ಭಾರತದ ತಳಸಮುದಾಯಗಳ ಆತ್ಮಸ್ಥೈರ್ಯಕ್ಕೆ ಅಡಿಗಲ್ಲಾಗಿ ನಿಂತು ಶತಮಾನಗಳ ಶೋಷಣೆಗೆ ಸಂವಿಧಾನ ರಚನೆಯ ಮೂಲಕ ವಿದಾಯ ಹೇಳಿದ ಮಹಾ ಮಹಾನವತಾವಾದಿ ಅಂಬೇಡ್ಕರರ ಜೀವನದ ಕಹಿ ಘಟನೆಗಳು ಸೇರಿದಂತೆ ವಿವಿಧ ಮಜಲುಗಳ ಮೇಲೆ “ಭಾರತ ಭಾಗ್ಯವಿಧಾತಾ” ಧ್ವನಿ ಬೆಳಕು ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾ ಚೇತನದ ಜೀವನ ಚರಿತೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕಥೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞ ಹಾಗೂ ಭಾರತದ ಸಂವಿಧಾನ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿ ಡಾ. ಬಾಬಾಸಾಹೇಬ ಅಂಬೇಡ್ಕರರ ಯಶೋಗಾಥೆ ಮತ್ತು ಜೀವಗಾಥೆ ಇದಾಗಿದೆ. ಫೆಬ್ರವರಿ 21ರಂದು ಸಂಜೆ 6.30 ಗಂಟೆಯಿಂದ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 80 ಜನ ಕಲಾವಿದರು ಡಾ. ಅಂಬೇಡ್ಕರರ ಯಶೋಗಾಥೆಯನ್ನು ವಿವಿಧ ದೃಶ್ಯ ವೈಭವಗಳ ಮೂಲಕ ಅನಾವರಣಗೊಳಿಸಲಿದ್ದಾರೆ. ಕಣ್ತುಂಬಿಸುವ ಬೆಳಗಿನ ಲೋಕ, ಕಿವಿದುಂಬಿಸುವ ಹಿನ್ನಲೆ ಸಂಗೀತ ಹಾಗೂ ವೈಚಾರಿಕತೆಯ ಹಿನ್ನೋಟ ಧ್ವನಿ ಬೆಳಕು ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ.
ಕಲಬುರಗಿ ನಗರದ ಎಲ್ಲ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಮತ್ತು ಸಂಘಟನೆಗಳ ಸದಸ್ಯರು, ಯುವಕ/ಯುವತಿ ಮಂಡಳಿಗಳ ಸದಸ್ಯರು, ಪ್ರೌಢಶಾಲೆ ಮಕ್ಕಳು, ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ವೈದ್ಯಕೀಯ, ನರ್ಸಿಂಗ್, ಫಾರ್ಮಸಿ, ಹೋಮಿಯೋಪಥಿ, ಕೃಷಿ, ಇಂಜಿನಿಯರಿಂಗ್, ಬಿ.ಎಡ್./ಡಿ.ಎಡ್. ಮತ್ತಿತರ ಕಾಲೇಜುಗಳ, ಗುಲಬರ್ಗಾ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮೂರು ದಿನಗಳ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮಗಳಲ್ಲಿ ಪ್ರತಿದಿನ ಸಂಜೆ 5 ಗಂಟೆಗೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ. ಕಲಬುರಗಿ ನಗರದ ಜನತೆಗೆ ಈ ಕಾರ್ಯಕ್ರಮ ವೀಕ್ಷಿಸುವ ಒಂದು ಸುವರ್ಣಾವಕಾಶವಾಗಿದೆ.
ಫೆಬ್ರವರಿ 22ರಿಂದ ರಸ್ತೆ ಸಂಚಾರಿ ಮಾದರಿ ಸಮೀಕ್ಷೆ
ಕಲಬುರಗಿ,ಫೆ.17.(ಕ.ವಾ.)-ಲೋಕೋಪಯೋಗಿ ಇಲಾಖೆಯಿಂದ ಫೆಬ್ರವರಿ 22ರ ಬೆಳಗಿನ 6 ಗಂಟೆಯಿಂದ ಫೆಬ್ರವರಿ 24ರ ಬೆಳಗಿನ 6 ಗಂಟೆಯವರೆಗೆ ರಾಜ್ಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಮಾದರಿ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮಾರುತಿ ಗೋಖಲೆ ತಿಳಿಸಿದ್ದಾರೆ.
ಈ ಗಣತಿಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆ ಸಂಚಾರದ ಸಾಂದ್ರತೆ, ತೀವ್ರತೆ ಕಂಡು ಹಿಡಿಯಲು ಹಾಗೂ ರಸ್ತೆಗಳ ಅಗಲಳತೆ ನಿರ್ಧರಿಸಲು, ರಸ್ತೆಗಳನ್ನು ಮೇಲ್ದರ್ಜೆಗೇರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗಲಿದೆ. ಇದಕ್ಕಾಗಿ ರಸ್ತೆಗಳ ಮೇಲೆ ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಗಣತಿ ಕೇಂದ್ರಗಳಿದ್ದಲ್ಲಿ “ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ. ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ” ಎಂದು ಸೂಚನಾ ಫಲಕಗಳನ್ನು ತೂಗು ಬಿಟ್ಟಿರುತ್ತಾರೆ. ಇಂತಹ ಸ್ಥಳಗಳಲ್ಲಿ ಎಲ್ಲ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಬೇಕೆಂದು ಅವರು ಕೋರಿದ್ದಾರೆ.

ಫೆಬ್ರವರಿ ಮಾಹೆಗೆ ಆಹಾರ ಧಾನ್ಯ ಮತ್ತು ಸೀಮೆಎಣ್ಣೆ ಬಿಡುಗಡೆ

ಕಲಬುರಗಿ,ಫೆ.17.(ಕ.ವಾ.)-ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕಲಬುರಗಿ ಜಿಲ್ಲೆಯಲ್ಲಿ 2017ರ ಫೆಬ್ರವರಿ ಮಾಹೆಯಲ್ಲಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಆಹಾರ ಧಾನ್ಯ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ತಿಳಿಸಿದ್ದಾರೆ.
ಪ್ರತಿ ಕಾರ್ಡಿಗೆ ನಿಗದಿಪಡಿಸಿದ ಆಹಾರಧಾನ್ಯ ಪ್ರಮಾಣದ ವಿವರ ಇಂತಿದೆ. ಅಂತ್ಯೋದಯ ಅನ್ನ(ಎಎವೈ): ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡಿಗೆ 35 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಇದಲ್ಲದೇ 1 ಕೆ.ಜಿ. ಸಕ್ಕರೆಯನ್ನು ಕೆ.ಜಿಗೆ 15ರೂ. ದರದಂತೆ, 1ಲೀಟರ್ ತಾಳೆಎಣ್ಣೆಯನ್ನು 25ರೂ.ದರದÀಂತೆ, 1ಕೆ.ಜಿ. ಉಪ್ಪನ್ನು ಕೆ.ಜಿಗೆ 2 ರೂ. ದರದಂತೆ ಹಾಗೂ 1 ಕೆ.ಜಿ. ಹೆಸರುಕಾಳು ಕೆ.ಜಿ.ಗೆ ರೂ. 33 ದರರಂತೆ ವಿತರಿಸಲಾಗುತ್ತಿದೆ.
ಬಿಪಿಎಲ್ ಏಕಸದಸ್ಯ ಪಡಿತರ ಚೀಟಿದಾರರಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ. ಇದಲ್ಲದೇ 1 ಕೆ.ಜಿ. ಸಕ್ಕರೆಯನ್ನು ಕೆ.ಜಿ.ಗೆ 15ರೂ. ದರದಂತೆ, 1ಲೀಟರ್ ತಾಳೆಎಣ್ಣೆಯನ್ನು 25ರೂ. ದರದಂತೆ, 1ಕೆ.ಜಿ. ಉಪ್ಪನ್ನು ಕೆ.ಜಿಗೆ 2 ರೂ. ದರದಂತೆ ಹಾಗೂ 1 ಕೆ.ಜಿ. ಹೆಸರುಕಾಳು ಕೆ.ಜಿ.ಗೆ 33ರೂ. ದರರಂತೆ ವಿತರಿಸಲಾಗುತ್ತಿದೆ.
ಒಂದನೇ ತಾರೀಖಿನಿಂದ ತಿಂಗಳ ಕೊನೆಯ ದಿನದವರೆಗೆ ಮಂಗಳವಾರ ಮತ್ತು ಸಾರ್ವತ್ರಿಕ ರಜಾದಿನ ಹೊರತುಪಡಿಸಿ ಪ್ರತಿದಿನ ಬೆಳಗಿನ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಾಯಂಕಾಲ 4 ರಿಂದ ರಾತ್ರಿ 8 ಗಂಟೆಯವರೆಗೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡಲಾಗುವುದು.
ಕೂಪನ್ ವ್ಯವಸ್ಥೆ ಜಾರಿಯಲ್ಲಿರುವ ಅಂಗಡಿಗಳಲ್ಲಿ ಪಡಿತರ ಚೀಟಿದಾರರು ಕೂಪನ ಇರುವ ಪ್ರಮಾಣದಲ್ಲಿ ಆಹಾರಧಾನ್ಯ ಪಡೆಯಬೇಕು. ಒಂದು ವೇಳೆ ಅಂಗಡಿಯವರು ನಿರಾಕರಿಸಿದ್ದಲ್ಲಿ ಆಯಾ ತಾಲೂಕಿನ ಸಂಬಂಧಪಟ್ಟ ತಹಸೀಲ್ದಾರರಿಗೆ ಹಾಗೂ ಪಡಿತರ ಪ್ರದೇಶಕ್ಕೆ ಸಂಬಂಧಿಸಿದಂತೆ ಕಲಬುರಗಿ ಪಡಿತರ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಮೀನಿನ ಬಲೆ ಹಣೆಯುವ ತರಬೇತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ,ಫೆ.17.(ಕ.ವಾ.)-ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆಯಿಂದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್ 3 ಹಾಗೂ 4 ರಂದು ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳಲ್ಲಿ ಒಂದಾದ “ಕಟಬು” ಜನಾಂಗದ 400 ಜನರಿಗೆ ಮೀನಿನ ಬಲೆ ಹೆಣೆಯುವ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಆಸಕ್ತಿಯಿರುವ ಕಲಬುರಗಿ ಜಿಲ್ಲೆಯ ಕಟಬು ಜನಾಂಗದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ ಪಾಷಾ ಕಾರಟಗಿ ತಿಳಿಸಿದ್ದಾರೆ.
ಅಭ್ಯರ್ಥಿಯು ಕುಟುಂಬ ವಾರ್ಷಿಕ ಆದಾಯ 2 ಲಕ್ಷ ರೂ.ದೊಳಗಿರಬೇಕು. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿಗೆ ಬೇಕಾದ ಸಾಮಗ್ರಿಗಳನ್ನು ಸಂಸ್ಥೆಯಿಂದ ಪೂರೈಸಲಾಗುತ್ತದೆ. ತರಬೇತಿಯ ನಂತರ ಸಂಸ್ಥೆಯಿಂದ ಪ್ರಮಾಣಪತ್ರವನ್ನು ನೀಡಲಾಗುವುದು. ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯಾಲಯದಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಪಾಸ್‍ಪೋರ್ಟ ಅಳತೆಯ ಭಾವಚಿತ್ರದೊಂದಿಗೆ ಜಾತಿ/ಆದಾಯ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿಯನ್ನು (ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ) ದಾಖಲಾತಿಗಳೊಂದಿಗೆ ಫೆಬ್ರವರಿ 25 ರೊಳಗಾಗಿ ಸದರಿ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಮೊದಲು ಬಂದವರಿಗೆ ಪ್ರಥಮಾದ್ಯತೆ ನೀಡಲಾಗುವುದು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಫೆಬ್ರವರಿ 21ರಂದು ವಾಹನದ ಹರಾಜು
ಕಲಬುರಗಿ,ಫೆ.17.(ಕ.ವಾ.)-ಕಲಬುರಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಆಧೀಕ್ಷಕರ ಕಚೇರಿಯ ಒಂದು ನಿರುಪಯುಕ್ತ ಮಹೇಂದ್ರ ಜೀಪಿನ ಟೆಂಡರ್-ಕಂ-ಬಹಿರಂಗ ಹರಾಜು ಫೆಬ್ರವರಿ 21ರಂದು ಮಧ್ಯಾಹ್ನ 12ಗಂಟೆಗೆ ಕಲಬುರಗಿಯ ಹಳೆಯ ಐ.ಜಿ.ಪಿ. ಕಚೇರಿಯ ಆವರಣದಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕರವರ ಕಚೇರಿಯಲ್ಲಿ ನಡೆಸÀಲಾಗುವುದು ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ವಾಹನದ ಹರಾಜಿನಲ್ಲಿ ಭಾಗವಹಿಸುವರು 5000ರೂ.ಗಳ ಠೇವಣಿ ಹಣ ಪಾವತಿಸಿ ಹರಾಜಿನಲ್ಲಿ ಭಾಗವಹಿಸಬೇಕು. ಹರಾಜು ಮಾಡುವ ವಾಹನದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಸದರಿ ಕಾರ್ಯಾಲಯವನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
************************
No comments:

Post a Comment