GULBARGA VARTHE

GULBARGA VARTHE

Friday, 10 February 2017

NI 10-02-2017 & PHOTOS
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ

ಕಲಬುರಗಿ,ಫೆ.10.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಕರ್ನಾಟಕ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 11ರಂದು ಬೆಳಿಗ್ಗೆ 5.39 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಅಧ್ಯಕ್ಷರು ಬೆಳಗಿನ 11 ಗಂಟೆಗೆ ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸುವರು. ನಂತರ ಸಚಿವರು ಚಪೇಟ್ಲಾ ಗ್ರಾಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನ: ಮರಳಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಫೆಬ್ರವರಿ 12ರಂದು ರಾತ್ರಿ 9 ಗಂಟೆಗೆ ಸೋಲಾಪುರ-ಯಶವಂತಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ
ಕಲಬುರಗಿ,ಫೆ.10.(ಕ.ವಾ.)-ಎಲ್ಲ ಶಾಲಾ ಶಿಕ್ಷಕರು ಶಾಲಾ ಮಕ್ಕಳ ತಾಯಿಯ ಸ್ಥಾನದಲ್ಲಿ ನಿಂತು ಅವರ ಉಜ್ವಲ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಹೊಂದಿದ್ದು, ಮಕ್ಕಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಬೇಕೆಂದು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಅರವಿಂದ ಕುಮಾರ ಹೇಳಿದರು.
ಅವರು ಶುಕ್ರವಾರ ಕಲಬುರಗಿ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ 2016-17ನೇ ಸಾಲಿನ “ಅರಳಲಿ ಬಾಲ್ಯ-ಬೆಳಗಲಿ ಭವಿಷ್ಯ” ಮಕ್ಕಳ ಹಕ್ಕುಗಳ ರಕ್ಷಣಾ ಆಂದೋಲನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದೇಶದ ಆಸ್ತಿಯಾಗಿದ್ದು, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ತಡೆಯಲು ಮಕ್ಕಳ ಪಾಲಕರು, ಶಾಲಾ ಶಿಕ್ಷಕರು ಸೇರಿದಂತೆ ಇಡೀ ಸಮಾಜವೇ ಕೈಜೋಡಿಸಬೇಕು. ಬಡತನ, ತಿಳುವಳಿಕೆ ಮತ್ತು ಶಿಕ್ಷಣ ಇಲ್ಲದಿರುವುದು ಹಾಗೂ ಒತ್ತಡಗಳು ಬಾಲ್ಯ ವಿವಾಹಕ್ಕೆ ಮೂಲ ಕಾರಣವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳ ತಂದೆ ತಾಯಿಗಳಿಗೆ ಬಾಲ್ಯವಿವಾಹದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಅತ್ಯವಶ್ಯಕವಾಗಿದೆ.
ಮಕ್ಕಳು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ತಂದೆ ತಾಯಿಗಳಿಗೆ, ಹಿರಿಯರಿಗೆ ಮತ್ತು ಶಾಲಾ ಶಿಕ್ಷಕರಿಗೆ ವಿಧೇಯರಾಗಿರಬೇಕು. ಬಾಲ್ಯ ವಿವಾಹ ಆಗುವುದಿಲ್ಲವೆಂದು ಮಕ್ಕಳು ದೃಢ ಸಂಕಲ್ಪ ಮಾಡಬೇಕಲ್ಲದೆ, ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು. ಸಂವಿಧಾನದಲ್ಲೂ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಪ್ರಸ್ತಾಪಿಸಲಾಗಿದ್ದು, ಮಕ್ಕಳು ಈ ಹಕ್ಕುಗಳ ನೆರವು ಪಡೆಯಬೇಕು. ಇತರರಲ್ಲಿ ಸಾಮಾಜಿಕ ಕಳಕಳಿಯನ್ನು ಬೆಳೆಸುವುದರೊಂದಿಗೆ ಸಮಾಜದ ಉನ್ನತಿಗೆ ಪ್ರಯತ್ನಿಸಬೇಕೆಂದರು.
ಹೈಕೋರ್ಟಿನ ಇನ್ನೋರ್ವ ನ್ಯಾಯಾಧೀಶ ಬಿ.ಎ. ಪಾಟೀಲ ಮಾತನಾಡಿ, ಮಕ್ಕಳ ಮನಸ್ಸು ಮುಗ್ಧತೆಯಿಂದ ಹಸಿ ಮಣ್ಣಿನಂತಿರುತ್ತದೆ. ಪಾಲಕರು ಒಳ್ಳೆಯ ಆಚಾರ-ವಿಚಾರ, ಆಹಾರ-ವಿಹಾರ ಮತ್ತು ಸಂಸ್ಕøತಿಯನ್ನು ಪರಿಪಾಲಿಸಿದರೆ ಮಕ್ಕಳು ಸಹ ಅದನ್ನೇ ಪರಿಪಾಲಿಸುವರು. ಪಾಲಕರು ಮಕ್ಕಳ ಉನ್ನತಿಗೆ ಪ್ರೋತ್ಸಾಹಿಸಬೇಕು ಹಾಗೂ ಧನಾತ್ಮಕ ಚಿಂತನೆಗಳತ್ತ ಗಮನ ಹರಿಸುವಂತೆ ನೋಡಿಕೊಳ್ಳಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಮಕ್ಕಳು ಬೆಳೆಯುವ ಸಿರಿ ಮೊಳಕೆಯಲ್ಲಿದ್ದಂತಿದ್ದು, ಸಮಾಜದಲ್ಲಿ ಈ ಮೊಳಕೆಯನ್ನು ಚಿವುಟುವ ಕಾರ್ಯ ಮೊದಲು ನಿಲ್ಲಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ ಮತ್ತು ಇತರ ಪೂರಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಸರ್ವಾಂಗೀಣ ಅಭಿವೃದಿಗಾಗಿ ಹಾಗೂ ಸುಂದರ ಸಮಾಜ ನಿರ್ಮಾಣಕ್ಕಾಗಿ ಎಲ್ಲ ಪಾಲಕರು, ಶಿಕ್ಷಕರು ಹಾಗೂ ಆಡಳಿತಗಾರರು ಪ್ರಯತ್ನಿಸಬೇಕು. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಆದ್ಯತೆಯ ಮೇಲೆ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟುವ ಮಹತ್ತರ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಗಳ ಮೇಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಮಕ್ಕಳ ರಕ್ಷಣಾಧಿಕಾರಿಗಳು ತಳಮಟ್ಟದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಣ ತೊಡಗಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕೆಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶೆ ನ್ಯಾಯಮೂರ್ತಿ ರತ್ನಕಲಾ, ಕಲಬುರಗಿ ಹೈಕೋರ್ಟ ಪೀಠದ ಹೆಚ್ಚುವರಿ ರಜಿಸ್ಟ್ರಾರ್ ಜನರಲ್ ಎಸ್.ಎಂ. ಪಾಟೀಲ, ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವ್ಹಿ. ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕ ಹರೀಶ ಜೋಗಿ ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸ್ಪರ್ಧಾ ಪರೀಕ್ಷೆ, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ಮಾಹಿತಿ ಉತ್ಸವ ಮತ್ತು ಧ್ವನಿ ಬೆಳಕು ಕಾರ್ಯಕ್ರಮದ ಯಶಸ್ಸಿಗೆ
ಕಲಬುರಗಿ,ಫೆ.10.(ಕ.ವಾ.)-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ 2017ರ ಫೆಬ್ರವರಿ 19 ಮತ್ತು 20ರಂದು ಆಯೋಜಿಸುವ ಮಾಹಿತಿ ಉತ್ಸವದ ಹಾಗೂ 21ರಂದು ಆಯೋಜಿಸುವ “ಭಾರತ ಭಾಗ್ಯವಿಧಾತಾ” ಧ್ವನಿ ಬೆಳಕು ಕಾರ್ಯಕ್ರಮದ ಯಶಸ್ಸಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಹೇಳಿದರು.
ಅವರು ಶುಕ್ರವಾರ ಕಲಬುರಗಿಯಲ್ಲಿ ಮಾಹಿತಿ ಉತ್ಸವ ಹಾಗೂ “ಭಾರತ ಭಾಗ್ಯವಿಧಾತಾ” ಧ್ವನಿ ಬೆಳಕು ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಫೆಬ್ರವರಿ 19 ಮತ್ತು 20ರಂದು ಆಯೋಜಿಸಲಾಗುವ ಮಾಹಿತಿ ಉತ್ಸವದಲ್ಲಿ ಉಚಿತವಾಗಿ ನೀಡಲಾಗುವ ಒಟ್ಟು 20 ಮಳಿಗೆಗಳಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ರೇಷ್ಮೆ, ಖಾದಿ ಮತ್ತು ಗ್ರಾಮೋದ್ಯೋಗ, ಪ್ರವಾಸೋದ್ಯಮ, ಕಾನೂನು ಮಾಪನ ಶಾಸ್ತ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸರ್ವ ಶಿಕ್ಷಣ ಅಭಿಯಾನ ಮುಂತಾದ ವಿವಿಧ ಅಭಿವೃದ್ಧಿ ಇಲಾಖೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಹಾಗೂ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳು ಉತ್ಪಾದಿಸಿದ ವಸ್ತುಗಳ ಮತ್ತು ಆಹಾರ ಉತ್ಪಾದನಾ ವಸ್ತುಗಳ ಮಾರಾಟದ ಹಾಗೂ ಆಯ್ದ ಫಲಾನುಭವಿಗಳನ್ನು ಕರೆತರುವ ವ್ಯವಸ್ಥೆ ಮಾಡಬೇಕು. ಎರಡು ದಿನಗಳ ಈ ಮಾಹಿತಿ ಉತ್ಸವದ ಅಂಗವಾಗಿ ಕಾರ್ಯಕ್ರಮಗಳು ಪ್ರತಿದಿನ ಸಂಜೆ 5.30 ರಿಂದ ರಾತ್ರಿ 8 ಗಂಟೆಯವರೆಗೆ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಜಿಲ್ಲೆಗಳ ಕಲಾ ಪ್ರದರ್ಶನವನ್ನು ಸಂಘಟಿಸಲಾಗುವುದು.
ಭಾರತರತ್ನ, ಸಂವಿಧಾನ ಶಿಲ್ಪಿ ಹಾಗೂ ಮಹಾ ಮಾನವತಾವಾದಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಫೆಬ್ರವರಿ 21ರಂದು ಸಂಜೆ 7ರಿಂದ ಆಯೋಜಿಸಲಾಗುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಸಾಧನೆ ಯಶೋಗಾಥೆಯನ್ನು ಬಿಂಬಿಸುವ “ಭಾರತ ಭಾಗ್ಯವಿಧಾತಾ” ಧ್ವನಿ ಬೆಳಕು ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಸುಮಾರು 80 ಕಲಾವಿದರು ಪಾಲ್ಗೊಳ್ಳಲಿದ್ದು, 90 ನಿಮಿಷಗಳ ಕಾರ್ಯಕ್ರಮ ಪ್ರಸ್ತುತಪಡಿಸುವರು.
ಮೂರು ದಿನಗಳ ಕಾಲ ನಡೆಯುವ ಈ ಎಲ್ಲ ಕಾರ್ಯಕ್ರಮಗಳಿಗೆ ಪ್ರತಿದಿನ ಕನಿಷ್ಠ 3000 ಜನರು ಸೇರುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರು ಕ್ರಮಕೈಗೊಳ್ಳಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಅಡಿಯಲ್ಲಿರುವ ಕಾಲೇಜು ಮತ್ತು ವಸತಿ ನಿಲಯಗಳ ವಿದ್ಯಾರ್ಥಿಗಳನ್ನು, ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ, ಕಲಬುರಗಿ ನಗರದಲ್ಲಿರುವ ಎಲ್ಲ ಪದವಿ ಕಾಲೇಜುಗಳ, ಎಲ್ಲ ಪದವಿಪೂರ್ವ ಕಾಲೇಜುಗಳ ಎನ್.ಎಸ್.ಎಸ್. ಹಾಗೂ ಇತರ ವಿದ್ಯಾರ್ಥಿಗಳನ್ನು, ಕಾಲೇಜು ಶಿಕ್ಷಣ ಇಲಾಖೆಯಿಂದ ಎನ್.ಎಸ್.ಎಸ್. ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳು, ಕಲಬುರಗಿ ನಗರದ ಎಲ್ಲ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಎಲ್ಲ ಯುವಕ ಮಂಡಳಿ ಹಾಗೂ ಯುವತಿ ಮಂಡಳಿಗಳ ಎಲ್ಲ ಸದಸ್ಯರು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸುತ್ತೋಲೆ ಹೊರಡಿಸಿ ಕರೆ ತರುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ.ಸುನಿಲಕುಮಾರ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಜಿ.ಚಂದ್ರಕಾಂತ ಸರ್ವರನ್ನು ಸ್ವಾಗತಿಸಿ ಮಾಹಿತಿ ಉತ್ಸವ ಹಾಗೂ “ಭಾರತ ಭಾಗ್ಯವಿಧಾತಾ” ಧ್ವನಿ ಬೆಳಕು ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.   ಅಬಕಾರಿ ಇಲಾಖೆ: ವಾಹನಗಳ ಬಹಿರಂಗ ಹರಾಜು
ಕಲಬುರಗಿ,ಫೆ.10.(ಕ.ವಾ.)-ಕಲಬುರಗಿ ಅಬಕಾರಿ ಉಪ ಆಯುಕ್ತರ ಕಚೇರಿಯ ವ್ಯಾಪ್ತಿಯಲ್ಲಿರುವ ಕಲಬುರಗಿ, ಜೇವರ್ಗಿ, ಚಿತ್ತಾಪುರ, ಸೇಡಂ, ಚಿಂಚೋಳಿ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿರುವ ವಿವಿಧ ಮಾದರಿಯ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಫೆಬ್ರವರಿ 14 ರಿಂದ 16 ರವರೆಗೆ ಬೆಳಿಗ್ಗೆ 11 ಗಂಟೆಗೆ ಆಯಾ ಕಚೇರಿಗಳಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಬಹಿರಂಗ ಹರಾಜು ಮಾಡುವ ದಿನಾಂಕ, ಸ್ಥಳ ಮತ್ತು ವಾಹನಗಳ ವಿವರ ಇಂತಿದೆ. ಫೆಬ್ರವರಿ 14: ಕಲಬುರಗಿ ವಲಯ ನಂ. 1ರಲ್ಲಿ: ಓಮಿನಿ ಕಾರ. ಚಿತ್ತಾಪುರ ವಲಯ ಕಚೇರಿ: ಬಜಾಜ ಡಿಸ್ಕವರಿ ದ್ವಿಚಕ್ರ, ಟಿವಿಎಸ್ ಎಕ್ಸಲ್ ದ್ವಿಚಕ್ರ, ಹಿರೋ ಹೊಂಡಾ ಫ್ಯಾಶನ್ ಪ್ಲಸ್ ದ್ವಿಚಕ್ರ, ಅಪ್ಪೆ ಗೂಡ್ಸ್ ಟಂಟಂ.ಫೆಬ್ರವರಿ 15: ಆಳಂದ ವಲಯ ಕಚೇರಿ: ಹಿರೋ ಹೊಂಡಾ ದ್ವಿಚಕ್ರ. ಸೇಡಂ ವಲಯ ಕಚೇರಿ: ಹಿರೋ ಹೊಂಡಾ ಸ್ಲೈಂಡರ್ ದ್ವಿಚಕ್ರ, ಹಿರೋ ಹೊಂಡಾ ಸ್ಲೈಂಡರ್ ದ್ವಿಚಕ್ರ, ಹಿರೋ ಹೊಂಡಾ ಸಿಡಿ 100 ದ್ವಿಚಕ್ರ, ಟಂ ಟಂ ಆಟೋ, 7955 ಬಜಾಜ್ ಪಲ್ಸರ್, ಹಿರೋ ಹೊಂಡಾ ಸ್ಲೈಂಡರ್ ದ್ವಿಚಕ್ರ. ಹಿರೋ ಹೊಂಡಾ ಸ್ಲೈಂಡರ್, ಬಜಾಜ್ ಡಿಸ್ಕವರಿ, ಹಿರೋ ಎಚ್.ಎಫ್. ಡಿಲಕ್ಸ್ ದ್ವಿಚಕ್ರ, ಓವಿಎಸ್ ಸ್ಪೋಟ್ರ್ಸ್.
ಫೆಬ್ರವರಿ 16: ಜೇವರ್ಗಿ ವಲಯ ಕಚೇರಿ: ಟಂಟಂ, ಟಿವಿಎಸ್ ಎಕ್ಸಲ್ ಸುಪರ ಡ್ಯೂಟಿ, ಹಿರೊ ಹೊಂಡಾ ಫ್ಯಾಶನ್ ಪ್ರೋ, ಅಪೇ ಟಂಟಂ. ಚಿಂಚೋಳಿ ವಲಯ ಕಚೇರಿ: ಬಜಾಜ್ ಆಟೋ ರಿಕ್ಷಾ, ಹಿರೋ ಹೊಂಡಾ ಗ್ಲ್ಯಾಮರ್, ಆಟೋ, ಹೊಂಡಾ ಡ್ರೀಮ್ ವಾಹನಗಳು ಹರಾಜಕ್ಕಿದೆ. ಷರತ್ತು ಮತ್ತು ನಿಬಂಧನೆಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ವಾಹನವಿರುವ ಆಯಾ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಬೆಳಿಗ್ಗೆ 10 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.
**********

No comments:

Post a Comment