GULBARGA VARTHE

GULBARGA VARTHE

Wednesday, 22 February 2017

News Date: 22--02--2017

ಪಿಂಚಣಿದಾರರು ಕಡ್ಡಾಯವಾಗಿ ಫೆಬ್ರವರಿ 28ರೊಳಗಾಗಿ ಆಧಾರ ಸಂಖ್ಯೆ ಸಲ್ಲಿಸಲು ಸೂಚನೆ
*************************************************************************************
ಕಲಬುರಗಿ,ಫೆ.22.(ಕ.ವಾ.)-ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ತಮ್ಮ ವಾಸಸ್ಥಳ/ವಿಳಾಸ ಬದಲಾವಣೆ ಮಾಡಿದ್ದಲ್ಲಿ ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಬದಲಾದ ವಿಳಾಸದ ಮಾಹಿತಿಯನ್ನು ಪಿಂಚಣಿ ಮಂಜೂರಾತಿ ನಿಯಮ 28ರನ್ವಯ ಕಡ್ಡಾಯವಾಗಿ ಸಲ್ಲಿಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಲಿಯಾಸ್ ಅಹ್ಮದ್ ಇಸಾಮದಿ ತಿಳಿಸಿದ್ದಾರೆ.
ಅದರಂತೆ ಕೇಂದ್ರ ಸರ್ಕಾರದ ನೇರ ಹಣ ಸಂದಾಯ ಯೋಜನೆ (ಡಿ.ಬಿ.ಟಿ.)ಯಡಿ ಪ್ರತಿ ಫಲಾನುಭವಿಯು ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಸಂಖ್ಯೆ, ಬ್ಯಾಂಕ್/ಅಂಚೆ ಖಾತೆ ಸಂಖ್ಯೆ ಮತ್ತು ಆಧಾರ್ ಜೋಡಣೆಗೆ ಒಪ್ಪಿಗೆ ನೀಡುವುದು ಕಡ್ಡಾಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಪಿಂಚಣಿ ಪಡೆಯುತ್ತಿರುವ ಕಲಬುರಗಿ ಜಿಲ್ಲೆಯ ಫಲಾನುಭವಿಗಳು ತಮ್ಮ ವಾಸಸ್ಥಳ ಬದಲಾವಣೆ ಮಾಡಿದ್ದಲ್ಲಿ ಬದಲಾದ ವಿಳಾಸದ ಜೊತೆಗೆ ಆಧಾರ ಸಂಖ್ಯೆ, ಬ್ಯಾಂಕ್/ಖಾತೆ ವಿವರ ಮತ್ತು ಮೊಬೈಲ್ ಸಂಖ್ಯೆಯನ್ನು ಆಧಾರ್ ಜೋಡಣೆಯ ಒಪ್ಪಿಗೆ ಪತ್ರದೊಂದಿಗೆ ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ 2017ರ ಫೆಬ್ರವರಿ 28ರೊಳಗಾಗಿ ಖುದ್ದಾಗಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಮಾರ್ಚ್ 6ರಿಂದ ಕೆ.ವಿ.ಕೆ.ಯಲ್ಲಿ ರೈತರಿಂದ ತರಬೇತಿ ಕಾರ್ಯಕ್ರಮ
****************************************************************
ಕಲಬುರಗಿ,ಫೆ.22.(ಕ.ವಾ.)-ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃಷಿಯಲ್ಲಿ ವಿವಿಧ ಕೃಷಿ ಮತ್ತು ಕೃಷಿ ಆಧಾರಿತ ಪದ್ಧತಿಗಳ ಬಗ್ಗೆ ಪ್ರಗತಿ ಪರ ರೈತರಿಂದ ತರಬೇತಿ ಕಾರ್ಯಕ್ರಮಗಳನ್ನು ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಯ ವಿಷಯ ಮತ್ತು ದಿನಾಂಕದ ವಿವರ ಇಂತಿದೆ. ಹೈನುಗಾರಿಕೆಯಲ್ಲಿ ಮೇವಿನ ಬೆಳೆಗಳ ಮಹತ್ವ ಮತ್ತು ಅವುಗಳ ಸಂಸ್ಕರಣೆ- ಸಮಗ್ರ ಕೃಷಿ ಪದ್ಧತಿ-ಮಾರ್ಚ್ 6ರಿಂದ 8. ಸಾವಯವ ಕೃಷಿಯ ಮಹತ್ವ-ಮಾರ್ಚ್ 9ರಿಂದ 11. ಪಾಲಿಹೌಸನಲ್ಲಿ ನರ್ಸರಿ ಸಸಿಗಳ (ತರಕಾರಿ ಸಸಿ) ಉತ್ಪಾದನೆ ಮತ್ತು ಮಾರಾಟ-ಮಾರ್ಚ್ 14ರಿಂದ 16. ವೈಜ್ಞಾನಿಕ ಪಶುಸಂಗೋಪನೆ-ಮಾರ್ಚ್ 16ರಿಂದ 18. ಮಣ್ಣು ಮತ್ತು ನೀರು ಸಂರಕ್ಷಣೆ- ಮಾರ್ಚ್ 20ರಿಂದ 22. ಜೈವಿಕ ಪೀಡೆನಾಶಕಗಳ ಉತ್ಪಾದನೆ ಮತ್ತು ಬಳಕೆ- ಮಾರ್ಚ್ 23ರಿಂದ 25. ಎರೆಹುಳು ಗೊಬ್ಬರ ಉತ್ಪಾದನೆ ಮತ್ತು ಮಹತ್ವ-ಮಾರ್ಚ್ 27 ರಿಂದ 29.
ಆಸಕ್ತಿಯುಳ್ಳ ರೈತರು ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಸಬೇಕೆಂದು ಹಾಗೂ ಇದಕ್ಕಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08472-274596/09901627120 ಇರುತ್ತವೆ ಎಂದು ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ರಾಜು ತೆಗ್ಗೆಳ್ಳಿ ತಿಳಿಸಿದ್ದಾರೆ.
ನಂದಿನಿ ಪ್ಯಾಕೇಟ್ ಮೇಲೆ ದಢಾರ-ರುಬೆಲ್ಲಾ ಲಸಿಕೆಯ ಸಂದೇಶ ಮುದ್ರಣ
**********************************************************************
ಕಲಬುರಗಿ,ಫೆ.22.(ಕ.ವಾ.)-ಸರ್ಕಾರದಿಂದ ದಢಾರ ಮತ್ತು ರುಬೆಲ್ಲಾ ರೋಗಗಳ ವಿರುದ್ಧ 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ದಢಾರ ಮತ್ತು ರುಬೆಲ್ಲಾ ಲಸಿಕೆ ಹಾಕುವ ಸಂದೇಶವನ್ನು ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಮೂರು ಜಿಲ್ಲೆಗಳಲ್ಲಿ ಸರಬರಾಜು ಮಾಡಲಾಗುವ ಟೋನ್ಡ್ ನಂದಿನಿ ಹಾಲಿನ ಪ್ಯಾಕೇಟ್‍ಗಳ ಮೇಲೆ ಈಗಾಗಲೇ ಮುದ್ರಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಶೇಖರ ಕಮಕೇರಿ ಹಾಗೂ ಸಹಾಯಕ ವ್ಯವಸ್ಥಾಪಕ ಮಹಮ್ಮದ ಝಿಯಾವುಲ್ಲಾ ತಿಳಿಸಿದ್ದಾರೆ.
ದಢಾರ ಮತ್ತು ರುಬೆಲ್ಲಾ ರಾಷ್ಟ್ರೀಯ ಅಭಿಯಾನದ ಕಾರ್ಯಗತಕ್ಕೆ ಹಾಗೂ ಯಶಸ್ಸಿಗೆ ಪ್ರಯತ್ನ ಮಾಡುವುದು ಎಲ್ಲ ಪ್ರಜೆಗಳ ವಿಶೇಷವಾಗಿ ಸಂಘ-ಸಂಸ್ಥೆ, ಸರ್ಕಾರೇತರ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸಿ ಲಸಿಕೆಯ ಬಗ್ಗೆ ಸೃಷ್ಟಿಯಾಗುತ್ತಿರುವ ಆತಂಕ ದೂರು ಮಾಡಿ ಜನರಿಗೆ ಆರೋಗ್ಯಕರ ಭವಿಷ್ಯಕ್ಕಾಗಿ ಶ್ರಮಿಸಬೇಕಾಗಿದೆ. ಕಲಬುರಗಿ-ಬೀದರ ಹಾಗೂ ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಒಂದು ರೈತಾಪಿ ಸಂಸ್ಥೆಯಾಗಿದ್ದು, ದಢಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನದ ಅಂಗವಾಗಿ ಸರ್ಕಾರದಿಂದ ನಿಗದಿಪಡಿಸಿದ ಲಸಿಕಾ ಕೇಂದ್ರಗಳಿಗೆ ಜನಸಾಮಾನ್ಯರು ತಮ್ಮ ಮಕ್ಕಳಿಗೆ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಬೇಕೆಂದು ಕೋರಿದ್ದಾರೆ.
ಸೈನಿಕ ಕಲ್ಯಾಣ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
*********************************************************************************
ಕಲಬುರಗಿ,ಫೆ.22.(ಕ.ವಾ.)-ರಾಜ್ಯದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿಯಿರುವ ನಾಲ್ಕು ಉಪನಿರ್ದೇಶಕ ಹುದ್ದೆಗಳ ನೇಮಕಾತಿಗಾಗಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
 ಪ್ರವರ್ಗ-2(ಎ) ಮತ್ತು ಸಾಮಾನ್ಯ ಅಭ್ಯರ್ಥಿಗೆ ತಲಾ 1 ಹುದ್ದೆ ಹಾಗೂ ಪರಿಶಿಷ್ಟ ಜಾತಿಯವರಿಗೆ 2 ಹುದ್ದೆಗಳನ್ನು ಮೀಸಲಿಡಲಾಗಿದೆ. ಇಚ್ಛೆಯುಳ್ಳ ನಿವೃತ್ತ ಅಧಿಕಾರಿಗಳು ತಮ್ಮ ಅರ್ಜಿ ಜೊತೆಗೆ ಸಿ.ವಿ. ಬಯೋಡೆಟಾದೊಂದಿಗೆ ಸೇವಾ ವಿವರ, ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣಪತ್ರಗಳ ದಾಖಲಾತಿಗಳೊಂದಿಗೆ ಅರ್ಜಿಯನ್ನು ಮಾರ್ಚ್ 15ರೊಳಗಾಗಿ ನಿರ್ದೇಶನಾಲಯ, ಸೈನಿಕ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆ, ಬೆಂಗಳೂರು ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459ನ್ನು ಸಂಪರ್ಕಿಸಲು ಕೋರಲಾಗಿದೆ.
ಸರ್ಕಾರೇತರ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನ
*************************************************
ಕಲಬುರಗಿ,ಫೆ.22.(ಕ.ವಾ.)-ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955 ಹಾಗೂ ಪರಿಶಿಷ್ಟ ಜಾತಿ/ವರ್ಗಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989ರಡಿ 2016-17ನೇ ಸಾಲಿನ ವಿಚಾರಗೋಷ್ಠಿ, ಕಾರ್ಯಾಗಾರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲು ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸರ್ಕಾರೇತರ ಸಂಸ್ಥೆಗಳು ಕಡ್ಡಾಯವಾಗಿ ನೋಂದಾಯಿಸಲ್ಪಟ್ಟಿರಬೇಕು ಹಾಗೂ ನವೀಕರಣಗೊಂಡಿರಬೇಕಲ್ಲದೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಗುರುತಿಸಲ್ಪಟ್ಟಿರಬೇಕು. ಸಂಸ್ಥೆಯ ಎಲ್ಲ ದಾಖಲಾತಿಗಳು ಹಾಗೂ ಈ ಹಿಂದೆ ತಮ್ಮ ಸಂಸ್ಥೆಯಿಂದ ಏರ್ಪಡಿಸುವ ಕಾರ್ಯಕ್ರಮಗಳ ಫೋಟೋ ಮತ್ತು ಪತ್ರಿಕಾ ವರದಿಗಳನ್ನು ಸಲ್ಲಿಸಬೇಕು. ಇಚ್ಛೆಯುಳ್ಳ ಸರ್ಕಾರೇತರ ಸಂಘ ಸಂಸ್ಥೆಗಳು ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ 2017ರ ಫೆಬ್ರವರಿ 25ರೊಳಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು. ಅಪೂರ್ಣವಾದ ಹಾಗೂ ತಡವಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಹಾಶಿವರಾತ್ರಿ ಪ್ರಯುಕ್ತ ಮಾಂಸ ಮಾರಾಟ ನಿಷೇಧ
***************************************************
ಕಲಬುರಗಿ,ಫೆ.22.(ಕ.ವಾ.)-ಮಹಾಶಿವರಾತ್ರಿಯನ್ನು ಫೆಬ್ರವರಿ 24ರಂದು ಆಚರಿಸುತ್ತಿರುವ ಪ್ರಯುಕ್ತ ಸದರಿ ದಿನದÀÀಂದು ಕಲಬುರಗಿ ನಗರದಲ್ಲಿರುವ ಎಲ್ಲ ಕಸಾಯಿ ಖಾನೆ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಯಾವುದೇ ರೀತಿಯ ಪ್ರಾಣಿ ವಧೆ ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಈ ಆದೇಶ ಉಲ್ಲಂಘಿಸಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಪಿ. ಸುನೀಲಕುಮಾರ್ ತಿಳಿಸಿದ್ದಾರೆ.
ಲ್ಯಾಪ್‍ಟಾಪ್-ಡೆಸ್ಕಟಾಪ್ ಸರಬರಾಜಿಗಾಗಿ ದರಪಟ್ಟಿ ಆಹ್ವಾನ
***********************************************************
ಕಲಬುರಗಿ,ಫೆ.22.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿಯ ಕಾರ್ಯಾಲಯದ ಯೋಜನಾ ಶಾಖೆಗೆ ಹೆಚ್‍ಪಿ ಲ್ಯಾಪ್‍ಟಾಪ್-01, ಹೆಚ್‍ಪಿ ಡೆಸ್ಕಟಾಪ್-07 ಹಾಗೂ ಹೆಚ್‍ಪಿ ಸ್ಕ್ಯಾನರ್-01 ಸರಬರಾಜು ಮಾಡಲು ಅರ್ಹ ತಯಾರಕರು/ಅಧೀಕೃತ ವಿತರಕರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ತಿಳಿಸಿದ್ದಾರೆ.
ಖಾಲಿ ಟೆಂಡರ್ ಬುಕ್‍ಲೆಟ್‍ಗಾಗಿ ಅರ್ಜಿ ಸಲ್ಲಿಸಲು ಹಾಗೂ ಬುಕಲೆಟ್ ಪಡೆಯಲು ಫೆಬ್ರವರಿ 25 ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಟೆಂಡರ್ ಬುಕಲೆಟ್‍ನ್ನು ಫೆಬ್ರವರಿ 27ರ ಸಾಯಂಕಾಲ 4 ಗಂಟೆಯೊಳಗಾಗಿ ಸಲ್ಲಿಸಬೇಕು. ಫೆಬ್ರವರಿ 27ರಂದು ಸಾಯಂಕಾಲ 4.30 ಗಂಟೆಗೆ ಟೆಂಡರ್ ತೆರೆಯಲಾಗುವುದು. ಇಎಂಡಿ ಮೊತ್ತ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯಾಲಯ ಕಲಬುರಗಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-278614ನ್ನು ಸಂಪರ್ಕಿಸಲು ಕೋರಲಾಗಿದೆ.

No comments:

Post a Comment