GULBARGA VARTHE

GULBARGA VARTHE

Thursday, 2 February 2017

News Date: 02-02-2017

ರಾಜೀವ್ ಆವಾಸ್ ಯೋಜನೆ: ಡಿ.ಡಿ. ಹಾಗೂ ದಾಖಲಾತಿ ಸಲ್ಲಿಸುವ ಅವಧಿ ವಿಸ್ತರಣೆ
*******************************************************************************
ಕಲಬುರಗಿ,ಫೆ.02.(ಕ.ವಾ.)-ರಾಜೀವ ಆವಾಸ್ (ಪೈಲೇಟ್ ಪ್ರೊಜೆಕ್ಟ್) ಯೋಜನೆಯಡಿ ಆಯ್ಕೆಯಾದ 920 ಫಲಾನುಭವಿಗಳಿಗೆ 100750 ರೂ.ಗಳ ಡಿ.ಡಿ. ಹಾಗೂ ದಾಖಲಾತಿಗಳನ್ನು ಸಲ್ಲಿಸುವ ಅವಧಿಯನ್ನು 2017ರ ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಆಯ್ಕೆಯಾದ ಫಲಾನುಭವಿಗಳು ಇತ್ತೀಚಿನ ಜಾತಿ, ಆದಾಯ ಪ್ರಮಾಣಪತ್ರದ ಪ್ರತಿ, ಇತ್ತೀಚಿನ 4 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು, ಮಹಾನಗರ ವ್ಯಾಪ್ತಿಯಲ್ಲಿ ಬರುವ ಬಿ.ಪಿ.ಎಲ್. ಪಡಿತರ ಚೀಟಿ ಪ್ರತಿ, ಗುರುತಿನ ಚೀಟಿ, ಆಧಾರ ಕಾರ್ಡ್, ಕಲಬುರಗಿ ನಗರದಲ್ಲಿ ಮನೆ/ನಿವೇಶನ ಇಲ್ಲ ಎಂಬುವುದರ ಬಗ್ಗೆ/ಯಾವುದೇ ಯೋಜನೆಯಡಿ ಸೌಲಭ್ಯ ಪಡೆದಿರುವುದಿಲ್ಲ ಎಂದು 20 ರೂ.ಗಳ ಛಾಪಾ (ಸ್ಟ್ಯಾಂಪ್) ಕಾಗದದ ಮೇಲೆ ಬರೆದು ಕೋರ್ಟ್‍ನಿಂದ ಅಫಿಡವಿಟ್ ಮಾಡಿಸಿ ಸಲ್ಲಿಸಬೇಕು.
ಮಂಜೂರಾದ ಫಲಾನುಭವಿಗಳು ಆಯ್ಕೆ ಪಟ್ಟಿಯಲ್ಲಿ ಇರುವಂತೆ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕಲ್ಲದೇ ರಾಷ್ಟ್ರೀಕೃತ ಬ್ಯಾಂಕಿನಿಂದ ಆಯುಕ್ತರು, ಮಹಾನಗರ ಪಾಲಿಕೆ ಕಲಬುರಗಿ ಇವರ ಹೆಸರಿನಲ್ಲಿ 100750 ರೂ.ಗಳ ಡಿ.ಡಿ.ಯನ್ನು ಪಡೆದು ಸಲ್ಲಿಸಬೇಕು. ನಿಗದಿತ ಅವಧಿ ಮುಗಿದ ನಂತರ ಬಂದ ಡಿ.ಡಿ. ಹಾಗೂ ದಾಖಲಾತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಮೊದಲು ಡಿ.ಡಿ. ಹಾಗೂ ದಾಖಲಾತಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು 2017ರ ಜನವರಿ 31ರವರೆಗೆ ನಿಗದಿಪಡಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ.

ಫೆಬ್ರವರಿ 4ರಂದು ಮಾಜಿ ಸೈನಿಕರ ಕುಂದುಕೊರತೆ ಆಲಿಕೆ
*******************************************************
ಕಲಬುರಗಿ,ಫೆ.02.(ಕ.ವಾ.)-ಬೆಂಗಳೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ (ನಿವೃತ್ತ) ನಿರ್ದೇಶಕ ಬ್ರಿಗೇಡಿಯರ್ ಎಸ್.ಬಿ. ಸಜ್ಜನ್ ಅವರು ಫೆಬ್ರವರಿ 4ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ವಿಕಾಸ ಭವನ (ಮಿನಿ ವಿಧಾನ ಸೌಧ)ದಲ್ಲಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದಲ್ಲಿ ಸೈನಿಕರ/ಮಾಜಿ ಸೈನಿಕರ ಅವಲಂಬಿತರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.
ಕಲಬುರಗಿ, ಬೀದರ, ರಾಯಚೂರ ಮತ್ತು ಯಾದಗಿರಿ ಜಿಲ್ಲೆಗಳ ಮಾಜಿ ಸೈನಿಕರು/ ಮಾಜಿ ಸೈನಿಕರ ಅವಲಂಬಿತರು ಕುಂದುಕೊರತೆಗಳೇನಾದರೂ ಇದ್ದಲ್ಲಿ ಸದರಿ ಕಾರ್ಯಾಲಯವನ್ನು ಖುದ್ದಾಗಿ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯವನ್ನು ಹಾಗೂ ದೂರವಾಣಿ ಸಂಖ್ಯೆ 08472-225003ನ್ನು ಸಂಪರ್ಕಿಸಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ತರಬೇತಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ
**************************************************
ಕಲಬುರಗಿ,ಫೆ.02.(ಕ.ವಾ.)-ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪಿ.ಯು.ಸಿ. ನಂತರ ವಿದ್ಯಾರ್ಹತೆ ಹೊಂದಿರುವ ವಿದ್ಯಾವಂತ ನಿರುದ್ಯೋಗಿ ಅಂಗವಿಕಲ ವ್ಯಕ್ತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಗಳನ್ನು 2017ರ ಫೆಬ್ರವರಿ 15ರೊಳಗಾಗಿ ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-235222/ 232312ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಫೆಬ್ರವರಿ 7ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
*******************************************************
ಕಲಬುರಗಿ,ಫೆ.02.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ವಾರ ಮತ್ತು ದಿನಾಂಕಗಳಂದು ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ತಾಲೂಕು ಆಸ್ಪತ್ರೆÉ ಜರುಗುವ ಶಿಬಿರದ ದಿನಾಂಕ, ವಾರ ಹಾಗೂ ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ. ಮೊದಲನೇ ಮಂಗಳವಾರ: ಫೆಬ್ರವರಿ 7ರಂದು ಆಳಂದÀ ತಾಲೂಕು ಆಸ್ಪತ್ರೆ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ|| ಚಂದ್ರಶೇಖರ ಹೂಡೇದ್. ಎರಡನೇ ಶುಕ್ರವಾರ: ಫೆಬ್ರವರಿ 10ರಂದು ಅಫಜಲಪುರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ. ವಿಜಯೇಂದ್ರ. ಎರಡನೇ ಮಂಗಳವಾರ: ಫೆಬ್ರವರಿ 14ರಂದು ಚಿಂಚೋಳಿ ತಾಲೂಕು ಆಸ್ಪತ್ರೆ- ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ. ವಿಜಯೇಂದ್ರ.ಮೂರನೇ ಶುಕ್ರವಾರ: ಫೆಬ್ರವರಿ 17ರಂದು ಜೇವರ್ಗಿ ತಾಲೂಕು ಆಸ್ಪತ್ರೆ-ಕೆ.ಬಿ.ಎನ್. ಆಸ್ಪತ್ರೆಯ ಮನೋವೃದ್ಯ ಡಾ|| ಅಮೋಲ್ ಪತಂಗೆ. ಮೂರನೇ ಮಂಗಳವಾರ: ಫೆಬ್ರವರಿ 21ರಂದು ಚಿತ್ತಾಪುರ ತಾಲೂಕು ಆಸ್ಪತ್ರೆ- ಕಲಬುರಗಿ ಇ.ಎಸ್.ಐ.ಸಿ. ಮನೋವೈದ್ಯ ಡಾ|| ಇಫರಾನ್. ನಾಲ್ಕನೇ ಮಂಗಳವಾರ: ಫೆಬ್ರವರಿ 28ರಂದು ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೃದ್ಯ ಡಾ. ಅಜಯ ಢಗೆ ಭೇಟಿ ನೀಡುವರು.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಾರ್ವಜನಿಕರು ಮಾನಸಿಕ ತೊಂದರೆ ಅಥವಾ ಮಾನಸಿಕ ರೋಗದಿಂದ ಬಳಲುತ್ತಿದ್ದರೆ, ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಪಿಎಸ್‍ಐ ಸಿವಿಲ್ ನೇಮಕಾತಿಯ ಸಹಿಷ್ಣುತೆ ಮತ್ತು
************************************************
ದೇಹದಾಢ್ರ್ಯತೆ ಪರೀಕ್ಷೆ ಫೆಬ್ರವರಿ 14ಕ್ಕೆ ಮುಂದೂಡಿಕೆ
*****************************************************
ಕಲಬುರಗಿ,ಫೆ.02.(ಕ.ವಾ.)-ಪಿಎಸ್‍ಐ ಸಿವಿಲ್ (ಮಹಿಳಾ/ಸೇವಾನಿರತ) ರವರನ್ನೊಳಗೊಂಡ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.) ಯನ್ನು ಫೆಬ್ರವರಿ 4ರಂದು ಯಾದಗಿರಿ ಜಿಲ್ಲೆಗೆ ಮುಖ್ಯಮಂತ್ರಿಗಳು ಭೇಟಿ ನೀಡಲಿರುವ ಪ್ರಯುಕ್ತ ಈ ಪರೀಕ್ಷೆಯು ಮುಂದೂಡಿ ಫೆಬ್ರವರಿ 14ರಂದು ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಡೆಯಲಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಆಲೋಕ ಕುಮಾರ್ ತಿಳಿಸಿದ್ದಾರೆ.
ಕಾರಣ ಅರ್ಹ ಅಭ್ಯರ್ಥಿಗಳು ಫೆಬ್ರವರಿ 4ರ ಬದಲಾಗಿ ಫೆಬ್ರವರಿ 14ರಂದು ದೈಹಿಕ ಪರೀಕ್ಷೆಗೆ ಹಾಜರಾಗಬೇಕು. ಈ ಕುರಿತು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಸಂದೇಶ ರವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಇದನ್ನು ಗಮನಿಸಬೇಕೆಂದು ಎಂದು ಅವರು ತಿಳಿಸಿದ್ದಾರೆ.

ಜನರಲ್ ನರ್ಸಿಂಗ್-ಮಿಡವೈಫರಿ ಪೂರಕ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
***********************************************************************************
ಕಲಬುರಗಿ,ಫೆ.02.(ಕ.ವಾ.)-ಜನರಲ್ ನರ್ಸಿಂಗ್ ಮತ್ತು ಮಿಡವೈಫರಿ ಪೂರಕ ಪರೀಕ್ಷೆಯು 2017ರ ಫೆಬ್ರವರಿ 2 ರಿಂದ 7ರವರೆಗೆ ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಾಯಂಕಾಲ 5 ಗಂಟೆಯವರೆಗೆ ಕಲಬುರಗಿ ನಗರದ ಒಟ್ಟು 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಈ ಪರೀಕ್ಷೆಗಳಲ್ಲಿ ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿರಾಕ್ಸ್/ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಕಲಬುರಗಿ ತಹಸೀಲ್ದಾರ್ ಅಶೋಕ ಹಿರೊಳ್ಳಿ ಅವರು ಆದೇಶ ಹೊರಡಿಸಿದ್ದಾರೆ.
ಅಲ್ಲದೇ ಪರೀಕ್ಷಾ ಕೇಂದ್ರದ 200 ಮೀಟರ ಪ್ರದೇಶದೊಳಗೆ ಯಾವುದೇ ವ್ಯಕ್ತಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ಸ್ ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಸೂಚಿಸಿದ್ದಾರೆ.
ಅಬಕಾರಿ ಇಲಾಖೆ: ಮುಟ್ಟುಗೊಲು ಹಾಕಿಕೊಂಡ ವಾಹನಗಳ ಬಹಿರಂಗ ಹರಾಜು
ಕಲಬುರಗಿ,ಫೆ.02.(ಕ.ವಾ.)-ಕಲಬುರಗಿ ಅಬಕಾರಿ ಉಪ ಆಯುಕ್ತರ ಕಚೇರಿಯ ವ್ಯಾಪ್ತಿಯಲ್ಲಿರುವ ಕಲಬುರಗಿ, ಸೇಡಂ, ಆಳಂದ ಮತ್ತು ಚಿಂಚೋಳಿ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿರುವ ವಿವಿಧ ಮಾದರಿಯ 6 ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಫೆಬ್ರವರಿ 14 ರಿಂದ 16 ರವರೆಗೆ ಬೆಳಿಗ್ಗೆ 11 ಗಂಟೆಗೆ ಆಯಾ ಕಚೇರಿಗಳಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಬಹಿರಂಗ ಹರಾಜು ಮಾಡುವ ದಿನಾಂಕ, ಸ್ಥಳ ಮತ್ತು ವಾಹನಗಳ ವಿವರ ಇಂತಿದೆ. ಫೆಬ್ರವರಿ 14: ಕಲಬುರಗಿ ವಲಯ ನಂ. 2ರ ಅಬಕಾರಿ ನಿರೀಕ್ಷಕರ ಕಚೇರಿಯ ಅಬಕಾರಿ ಭವನದಲ್ಲಿ ಟಾಟಾ ಸುಮೋ ಮತ್ತು ಇಂಡಿಕಾ ಕಾರ. ಫೆಬ್ರವರಿ 15: ಸೇಡಂ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ ಟಿವಿಎಸ್ ವಿಕ್ಟಾ. ಆಳಂದ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ ಟಿವಿಎಸ್ ವಿಕ್ಟಾ ಜಲ್ ದ್ವಿಚಕ್ರ ಮತ್ತು ಟಾಟಾ ಲಾರಿ. ಫೆಬ್ರವರಿ 16: ಚಿಂಚೋಳಿ ವಲಯ ಕಚೇರಿಯಲ್ಲಿ ಬಜಾಜ್ ಪ್ಲಾಟಿನಾ ದ್ವಿಚಕ್ರ ವಾಹನಗಳು ಹರಾಜಕ್ಕಿದೆ. ಷರತ್ತು ಮತ್ತು ನಿಬಂಧನೆಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ವಾಹನವಿರುವ ಆಯಾ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಬೆಳಿಗ್ಗೆ 10 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.

No comments:

Post a Comment