GULBARGA VARTHE

GULBARGA VARTHE

Tuesday, 21 February 2017

News and photo Date: 21--2--2017

ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಮಹಾನ್ ಪುರುಷ ಡಾ. ಬಿ.ಆರ್. ಅಂಬೇಡ್ಕರ್
******************************************************************************
ಕಲಬುರಗಿ,ಫೆ.21.(ಕ.ವಾ.)-ಶತಶತಮಾನಗಳಿಂದ ತುಳಿತಕ್ಕೊಳಗಾದ ಶೋಷಿತ ಸಮುದಾಯಕ್ಕೆ ಎಲ್ಲ ರೀತಿಯ ಸಮಾನ ಹಕ್ಕು ನೀಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮಹಾನ್ ಪುರುಷ ಡಾ.ಬಿ.ಆರ್.ಅಂಬೇಡ್ಕರ ಅವರಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್. ಅಂಬೇಡ್ಕರವರ 125ನೇ ಜಯಂತ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಡಾ. ಬಿ.ಆರ್. ಅಂಬೇಡ್ಕರ ಜೀವನ ಚರಿತ್ರೆಯ “ಭಾರತ ಭಾಗ್ಯ ವಿಧಾತ” ಧ್ವನಿ-ಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿವಿಧ ಪ್ರಾಂತ, ಭಾಷೆ, ಅಸಂಖ್ಯಾತ ಜಾತಿಗಳು ಹೊಂದಿದ್ದರೂ ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿದೆ. ಇದಕ್ಕೆ ಕಾರಣ ಯಾವುದೇ ಧರ್ಮಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ವಿಶ್ವಕ್ಕೆ ಮಾದರಿಯಾದ ಎಲ್ಲ ವರ್ಗವೂ ಒಪ್ಪುವ ಸಂವಿಧಾನವನ್ನು ಭಾರತಕ್ಕೆ ಸಮರ್ಪಿಸಿದ್ದು. ಇದು ಭವ್ಯ ಭಾರತಕ್ಕೆ ಭದ್ರ ಬುನಾದಿಯಾಗಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಎಲ್ಲರಿಗೂ ಸಮಾನ ಹಕ್ಕು ನೀಡಿದ ಭಾರತದ ಭಾಗ್ಯ ವಿಧಾತ ಬಾಬಾ ಸಾಹೇಬರು. ಇಂತಹ ಮಹಾ ಪುರುಷನ ಬದುಕು ಇಂದಿನ ಪೀಳಿಗೆಗೆ ಪ್ರಸ್ತುತಪಡಿಸುವ “ಭಾರತ ಭಾಗ್ಯ ವಿಧಾತ” ಕಾರ್ಯಕ್ರಮ ವಾರ್ತಾ ಇಲಾಖೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ತುಳಜಾರಾಂ ಎಸ್. ಪವಾರ ಸ್ವಾಗತಿಸಿದರು. ಶಿವಾನಂದ ಅಣಜಗಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದೆ ಅಪರ್ಣಾ ಮತ್ತು ತಂಡದವರು ನಾಡಗೀತೆ ಹಾಡಿದರು.

ಪ್ರೇಕ್ಷಕರನ್ನು ತುದಿಗಾಲಲ್ಲಿಯೇ ನಿಲ್ಲಿಸಿದ “ಭಾರತ ಭಾಗ್ಯ ವಿಧಾತಾ”
****************************************************************
ಕಲಬುರಗಿ,ಫೆ.21.(ಕ.ವಾ.)-ಬಿರುಸಿನ ಪ್ರದರ್ಶನ, ಬೆರಳುಗೊಳಿಸುವ ನಟನೆ, ಕಣ್ತುಬಿಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ಹಿನ್ನೆಲೆ ಸಂಗೀತ, ದೇಶಿ ಜಾನಪದ ಕಲೆಗಳ ವೈಭವದಲ್ಲಿ ಅನಾವರಣಗೊಂಡ ವೈಚಾರಿಕ ಕಥಾ ಹಂದರದ ಭಾರತ ಭಾಗ್ಯವಿಧಾತಾ ಸಾವಿರಾರು ಜನರು ಮನೆಗೆದ್ದಿತು.
ಭಾರತ ತಳಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾನ್ ಚೇತನ್ ಡಾ.ಬಿ.ಆರ್. ಅಂಬೇಡ್ಕರ್‍ವರ 125ನೇ ಜಯಂತಿಯ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಭಾರತ ಭಾಗ್ಯವಿಧಾತಾ ಧ್ವನಿ ಬೆಳಕು ಕಾರ್ಯಕ್ರಮ ಕಿಕ್ಕಿರಿದ ಪ್ರೇಕ್ಷಕರನ್ನು ತುದಿಗಾಲಲ್ಲೇ ನಿಲ್ಲಿಸಲು ಯಶಸ್ವಿಯಾಯಿತು.
ಅತ್ಯಂತ ಆಕರ್ಷಕವಾದ ಧ್ವನಿ ಬೆಳಕಿನ ವೈಭವದಲ್ಲಿ ಪಾತ್ರಧಾರಿಗಳ ನೃತ್ಯ, ಅಭಿನಯ, ದೃಶ್ಯದಿಂದ ದೃಶ್ಯಕ್ಕೆ ಪಡೆದುಕೊಳ್ಳುತ್ತಿರುವ ವೇಗ ನೋಡುಗರ ಮನಸ್ಸನ್ನು ಚೆತೋಹಾರಿಗೊಳಿಸಿತು.
ಬೃಹತ್ತಾದ ವೇದಿಕೆಯಲ್ಲಿ ಪಾದರಸದಂತೆ ಚಲನಶೀಲತೆ ಪಡೆದ 80 ಕಲಾವಿದರ ವಿಭಿನ್ನ ಅಭಿನಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಬಿಗಿಯಾದ ಕಥಾಹಂದರ, ಬಿರುಸಿನ ಸಂಭಾಷಣೆ, ವೈಭಯುತ ದೃಶ್ಯಗಳ ಸಂಯೋಜನೆ, ಶ್ರೀಮಂತ ಜನಪದ ಕಲೆಗಳ ಚಿತ್ತಾರ, ನೆರಳು ಬೆಳಕಿನ ದೃಶ್ಯ ವೈಭವದಲ್ಲಿ ಹಾಡು ನೃತ್ಯ, ಸಿನಿಮಿಯ ಶೈಲಿ ಹೀಗೆ ಎಲ್ಲವೂ ಒಳಗೊಂಡ ರಂಜನೀಯ ಅಂಶಗಳ ಜಾನಪದ ಕಲೆಗಳ ಹಂದರದಲ್ಲಿ ನಡೆದ ಅಂಬೇಡ್ಕರ್ ಅವರ ಜೀವನ ಗಾಥೆಯ ಮೆರವಣಿಗೆ ಅಬಾಲವೃದ್ಧರ ಮನಸ್ಸಿನ ಕದತಟ್ಟಿತು.
ಇದು ಸಾಪ್ಟವೇರ್ ಇಂಜನಿಯರ್ ಕಥೆಯಲ್ಲ. ಸೋಶಿಯಲ್ ಇಂಜಿನಿಯರ್ ಕಥೆ ಎಂದು ಪಾತ್ರವೊಂದು ನುಡಿಯುತ್ತಿದ್ದಂತೆ ಅಂಬೇಡ್ಕರ ಅವರ ಜೀವನದ ಸಂಕಷ್ಟಗಳ ಸರಮಾಲೆ, ಸ್ವಾಭಿಮಾನದ ಬದುಕಿನ ನಡೆ, ಲೋಕೋದ್ಧಾರದ ಹಾದಿ, ಸೈದ್ಧಾಂತಿಕ ಚರ್ಚೆಗಳು, ರಾಜಕೀಯ ನಾಯಕರ ಭಿನ್ನಾಭಿಪ್ರಾಯ, ರಾಜಿಸಂಧಾನ, ದಲಿತರ, ಶೋಷಿತರ, ಮಹಿಳೆಯರ, ಅಸ್ಪøಶ್ಯರ, ಕಾರ್ಮಿಕರ ಹೀಗೆ ನೋಂದವರ ನೋವಿಗೆ ಸ್ಪಂದಿಸುವ ಚಾರಿತ್ರಿಕ ಹಿನ್ನೋಟಗಳು, ಗೊರವರ ಕುಣಿತ, ಕಂಸಾಳೆ, ವೀರಭದ್ರಕುಣಿತ, ಭೂತಕೊಲ, ಯಕ್ಷಗಾನ, ಬಯಲಾಟ, ಗೀಗೀಪದ, ಡೊಳ್ಳುಕುಣಿತ, ಮರಾಠಿ ನೆಲದ ಮಂಜರಾ ಜನಪದ ನೃತ್ಯ ಮಾಧ್ಯಮದಲ್ಲಿ ಹೊರಹೊಮ್ಮುತ್ತ ನೋಡುಗರ ಮನ, ಮನಸ್ಸನ್ನು ಕಲಕುತ್ತ ಸಾಗಿತು.
ಭಾರತೀಯ ಸಾಮಾಜದ ಜಾತಿ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ರಾಜಕೀಯ ಒಳನೋಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಸರಳ ರೀತಿಯಲ್ಲಿ ಜನರಿಗೆ ಅರ್ಥಮಾಡಿಸುತ್ತಾ ಅಂಬೇಡ್ಕರ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತ ಸಾಗುವ ಭಾರತ ಭಾಗ್ಯವಿಧಾತಾ ಎಲ್ಲರ ಮನ ಗೆದ್ದಿತು. ಅಂಬೇಡ್ಕರ ಅವರು ಬುದ್ಧ ಧರ್ಮದ ಅನುಯಾಯಿಯಾಗಿ ವೇದಿಕೆಯಲ್ಲಿ ಶಾಂತಿಮಂತ್ರ ಪಠಣವಾಗುತ್ತಿದ್ದಂತೆ ಜನ ಧನ್ಯತಾಭಾವದತ್ತ ಮುಖ ಮಾಡಿದಂತಿತ್ತು.
ಬೃಹತ್ ವೇದಿಕೆಯಲ್ಲಿ ಪಾದರಸಂತೆ ಹರಿದಾಡಿದ ಕಲಾವಿದರು, ಅದ್ದೂರಿ ದೃಶ್ಯ ವೈಭವಗಳು, ಒಂದುವರೆತಾಸಿನ ಸಮಯ ಕಳೆದಿದ್ದೆ ಪ್ರೇಕ್ಷಕರಿಗೆ ಗೊತ್ತಾಗಲಿಲ್ಲ. ಚಂದ್ರಶೇಖರ ಪಾಟೀಲ ಮೈದಾನದ ತುಂಬಿ ಅವರಿಸಿಕೊಂಡ ಜನಸಮೂಹಕ್ಕೆ ಶೋ ಮುಗಿದ ಮೇಲೂ ಖರ್ಚಿಯಿಂದ ಮೇಲೇಳದೇ ಶೋ ಮುಗಿತಾ ಎಂಬ ಉದ್ಗಾರಗಳು ಕೇಳಿಬಂದವು.


No comments:

Post a Comment