GULBARGA VARTHE

GULBARGA VARTHE

Thursday, 16 February 2017

News and photo Date: 16---02---2017

ಕಲಬುರಗಿಯಲ್ಲಿ ಪೊಲೀಸ್ ಆಯುಕ್ತರ ಕಚೇರಿ ಪ್ರಾರಂಭಿಸಲು ಕ್ರಮ
****************************************************************
ಕಲಬುರಗಿ,ಫೆ.16.(ಕ.ವಾ.)-ಕಲಬುರಗಿ ನಗರÀದಲ್ಲಿ ಪೊಲೀಸ್ ಆಯುಕ್ತರ ಕಚೇರಿ ಸ್ಥಾಪನೆಗೆ ಸುಮಾರು 30 ಕೋಟಿ ರೂ. ಅವಶ್ಯಕವಾಗಿದ್ದು, ಈ ಕುರಿತು ಈಗಾಗಲೇ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾರಂಭಿಕ ಹಂತವಾಗಿ ಕಲಬುರಗಿಯಲ್ಲಿ ವಿಶೇಷವಾಗಿ ಹೊಸ ಪೊಲೀಸ್ ಅಧೀಕ್ಷಕರ ಹುದ್ದೆ ಸೃಷ್ಟಿಸಲಾಗುವುದು ಎಂದು ಗೃಹ ಸಚಿವ ಡಾ|| ಜಿ. ಪರಮೇಶ್ವರ ಹೇಳಿದರು.
ಅವರು ಗುರುವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದಾದ ಬಳಿಕ ಸಾಧಕ-ಬಾಧಕಗಳನ್ನು ಗಮನಿಸಿ ಆಯುಕ್ತರ ಹುದ್ದೆ ಪ್ರಾರಂಭಿಸಲಾಗುವುದು ಎಂದರು.
ಕರ್ನಾಟಕ ರಾಜ್ಯದಲ್ಲಿ ಮರಳು ಮಾಫಿಯಾ ತಡೆಗಟ್ಟಲು ಸರ್ಕಾರ ಬದ್ಧವಾಗಿದ್ದು, ಮರಳು ಮಾಫಿಯಾ ತಡೆ ಕಾರ್ಯಾಚರಣೆಗೆ ಸರ್ಕಾರ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಈ ಮಾಫಿಯಾದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಬಾಹಿರವಾಗಿ ಅಕ್ರಮ ಮರಳುಗಾರಿಕೆಯನ್ನು ಯಾವುದೇ ಕಾರಣಕ್ಕೂ ಸರ್ಕಾರ ಸಹಿಸದು. ಕಂದಾಯ, ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ಕೈಗೊಳ್ಳಲು ಸೂಚಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳೇನಾದರೂ ಈ ಮಾಫಿಯಾದಲ್ಲಿ ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಹಳ್ಳಿಗೆ ಓರ್ವ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಈ ಪೊಲೀಸ್ ಸಿಬ್ಬಂದಿ ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ನಡುವೆ ಸೇತು ಬಂಧವಾಗಿ ಕಾರ್ಯ ನಿರ್ವಹಿಸುವರು. ಈಶಾನ್ಯ ಪೊಲೀಸ್ ವಲಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗೆ ಸೂಕ್ತ ಕ್ರಮಕೈಗೊಳ್ಳಲು ಎನ್.ಹೆಚ್. ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಚರ್ಚೆ ಮಾಡಿ ಹಾಗೂ ಅಪಘಾತ ಜರುಗುವ ಸ್ಥಳಗಳನ್ನು ಗುರುತಿಸಲು ಸೂಚಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಪ್ರತಿ ತಿಂಗಳು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಂಘಟನೆಗಳೊಂದಿಗೆ ಸಮಾಲೋಚನಾ ಸಭೆ ನಡೆಸಲು ಹಾಗೂ ದೌರ್ಜನ್ಯಕ್ಕೊಳಗಾದವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹೋದರತೆ ಕಾಪಾಡುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಶಾಂತಿ ಸಭೆಗಳನ್ನು ಆಯೋಜಿಸಲು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಹ ಸೂಚಿಸಲಾಗಿದೆ ಎಂದರು.
ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕ ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಶಶಿಕುಮಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ ಈ ಸಂದರ್ಭದಲ್ಲಿ ಹಾಜರಿದ್ದರು.

ರಾಜ್ಯ ಸರ್ಕಾರದ ಆಯವ್ಯಯ ಶೇ.15ರಷ್ಟು ಹೆಚ್ಚುವ ಸಂಭವ
***********************************************************
ಕಲಬುರಗಿ,ಫೆ.16.(ಕ.ವಾ.)-ರಾಜ್ಯ ಸರ್ಕಾರದ 2017-18ನೇ ಸಾಲಿನ ಆಯವ್ಯಯದಲ್ಲಿ ಕಳೆದ ಸಾಲಿನ ಆಯವ್ಯಯಗಿಂತ ಶೇ. 15ರಷ್ಟು ಹಣ ಹೆಚ್ಚಳವಾಗುವ ಸಂಭವವಿದೆ. ಸರ್ಕಾರ ಜನಪರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕಳೆದ 2016-17ನೇ ಸಾಲಿನ ಆಯವ್ಯಯದಲ್ಲಿ 1.63 ಲಕ್ಷ ಕೋಟಿ ರೂ. ಹಣ ನಿಗದಿಪಡಿಸಿದೆ ಎಂದು ಗೃಹ ಸಚಿವ ಡಾ|| ಜಿ. ಪರಮೇಶ್ವರ ಹೇಳಿದರು.
ಅವರು ಗುರುವಾರ ಶಹಾಬಾದ ನಗರಸಭೆ ಕಾರ್ಯಾಲಯದ ಹತ್ತಿರ 2.50 ಕೋಟಿ ರೂ. ವೆಚ್ಚದಿಂದ ನಿರ್ಮಿಸಲಾಗುವ ಪೊಲೀಸ್ ಉಪಾಧೀಕ್ಷಕರ ಕಚೇರಿ ಕಟ್ಟಡದ ಹಾಗೂ ಶಹಾಬಾದ ಪೊಲೀಸ್ ಠಾಣೆಯ ಶಂಕುಸ್ಥಾಪನೆ ಹಾಗೂ ಸುಮಾರು 11 ಕೋಟಿ ರೂ. ವೆಚ್ಚದಿಂದ ಕೈಗೊಳ್ಳಲಾಗುವ ಬಾಲಕ/ಬಾಲಕಿಯರ ವಸತಿ ನಿಲಯ, ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಜನಪರ ಹಾಗೂ ಬಡವರ ಪರವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚು ಹಣ ಒದಗಿಸುವ ಮೂಲಕ ಅನ್ಯಭಾಗ್ಯ, ಕ್ಷೀರಭಾಗ್ಯದಂತಹ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರಾಜ್ಯ ಸರ್ಕಾರ ಬಡ ಜನರಿಗಾಗಿ ರಾಜ್ಯದಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ ಎಂದರು.
ಕರ್ನಾಟಕ ರಾಜ್ಯದ ಪೊಲೀಸ್ ವ್ಯವಸ್ಥೆ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಪ್ರತಿ ಪೊಲೀಸ್ ಠಾಣೆಗೆ 1.75 ಕೋಟಿ ರೂ. ಖರ್ಚು ಮಾಡಿ ಕಂಪ್ಯೂಟರ್, ದೂರವಾಣಿ, ವೈರಲೆಸ್ ಮತ್ತು ವಾಹನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಠಾಣೆಗಳಿಂದ ಕ್ಷಣಾರ್ಥದಲ್ಲಿ ಮಾಹಿತಿ ಲಭಿಸುವ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಗಾಗಿ 1000 ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ ಎಂದು ನುಡಿದರು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಲು 1018 ಕೋಟಿ ರೂ. ವೆಚ್ಚದಿಂದ 11000 ಮನೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 4000 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, 4000 ಮನೆಗಳನ್ನು ನಿರ್ಮಿಸುವ ಕಾರ್ಯ ಟೆಂಡರ್ ಹಂತದಲ್ಲಿದೆ.
ಬಡ ಜನರು, ನೊಂದವರು ಹಾಗೂ ಮಹಿಳೆಯರು ಪ್ರತಿ ಪೊಲೀಸ್ ಠಾಣೆ ಹಾಗೂ ಪ್ರತಿ ತಹಸೀಲ ಕಚೇರಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಗು ಮೊಗದಿಂದ ಹೊರಬಂದಾಗ ಅದು ಉತ್ತಮ ಮತ್ತು ಪರಿಣಾಮಕಾರಕ ಆಡಳಿತಕ್ಕೆ ನಿದರ್ಶನವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಕ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ರಾಜ್ಯದ ಎಲ್ಲ 176 ತಾಲೂಕುಗಳಲ್ಲಿ ಆಗ್ನಿ ಶಾಮಕ ಪೊಲೀಸ್ ಠಾಣೆಗಳನ್ನು ಹೊಂದಿರುವ ಏಕೃಕ ರಾಜ್ಯ ಕರ್ನಾಟಕವಾಗಿದೆ. ಕಲಬುರಗಿ ಜಿಲ್ಲೆಯ ಶಹಾಬಾದ ನಗರದಲ್ಲಿ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳ ವಾಸ್ತವ್ಯಕ್ಕೆ ಅನುಕೂಲವಾಗುವಂತೆ 24 ವಸತಿ ಗೃಹಗಳ ನಿರ್ಮಾಣ ಕಾರ್ಯಕ್ಕಾಗಿ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಅದೇ ರೀತಿ ಶಹಾಬಾದ ಪಟ್ಟಣಕ್ಕೆ ಆಗ್ನಿ ಶಾಮಕ ಪೊಲೀಸ್ ಠಾಣೆಯನ್ನು ಸಹ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2017-18ನೇ ಸಾಲಿನ ಆಯವ್ಯಯದಲ್ಲಿ 1500 ಕೋಟಿ ರೂ. ಹೆಚ್ಚಿಸಲು ಮುಖ್ಯಮಂತ್ರಿಗಳಿಗೆ ಕೋರಲಾಗಿದ್ದು, ಅವರು ಇದಕ್ಕೆ ಸಮ್ಮತಿಸಿದ್ದಾರೆ. ಶಹಾಬಾದ ಮತ್ತು ಯಾದಗಿರಿಗಳಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಮಂಜೂರಾತಿಗೂ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಶಹಾಬಾದಿನಲ್ಲಿ ವಾಸಿಸಲು ಅನುವಾಗುವಂತೆ ವಸತಿ ಗೃಹಗಳನ್ನು ನಿರ್ಮಿಸಬೇಕೆಂದು ಗೃಹ ಸಚಿವರನ್ನು ಕೋರಿದರು.
ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣ ಪ್ರಕಾಶ ಪಾಟೀಲ ಮಾತನಾಡಿ, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ 371(ಜೆ) ಜಾರಿಯಿಂದ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಬೃಹತ್ ಕ್ರಾಂತಿ ಉಂಟಾಗುತ್ತಿದೆ. ಗುಣಮಟ್ಟದ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆ ನೀಡಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಅಧÀ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಶಾಸಕರುಗಳಾದ ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಶಹಾಬಾದ ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ, ಸದಸ್ಯ ಗಿರೀಶ ಖಂಬಾನೂರ, ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ ಗುತ್ತೇದಾರ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ. ಸುನೀಲ ಕುಮಾರ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಸ್ವಾಗತಿಸಿದರು. ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು.

ಎಸ್‍ಸಿವಿಟಿ ಹೊಸ ವೃತ್ತಿ ಪ್ರಾರಂಭಿಸಲು ಅರ್ಜಿ ಆಹ್ವಾನ
*****************************************************
ಕಲಬುರಗಿ,ಫೆ.16.(ಕ.ವಾ.)-ಕಲಬುರಗಿ ವಿಭಾಗೀಯ ಕಚೇರಿಗೆ ಒಳಪಡುವ ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎಸ್.ಸಿ.ವಿ.ಟಿ. ಅಡಿಯಲ್ಲಿ 2017 ನೇ ಸಾಲಿಗೆ ಸಂಯೋಜನೆ ಪಡೆಯಲು ಎಲ್ಲ ಸಂಘ ಸಂಸ್ಥೆಗಳಿಂದ ಹಾಗೂ ಸರ್ಕಾರಿ ಅನುದಾನಿತ/ ಅನುದಾನ ರಹಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲ್ಲಿ ಐಟಿಐ (ಎಸ್.ಸಿ.ವಿ.ಟಿ.) ಅಡಿಯಲ್ಲಿ ಹೊಸ ವೃತ್ತಿ ಪ್ರಾರಂಭಿಸಲು ಘಟಕಗಳ ಸಂಯೋಜನೆ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಅರ್ಜಿ ನಮೂನೆ-2, ಅಧಿಸೂಚನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿನ್ನು ಸಂಪರ್ಕಿಸಬೇಕೆಂದು ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ವೈಜಗೊಂಡ ತಿಳಿಸಿದ್ದಾರೆ.

ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ
***********************************************************
ಕಲಬುರಗಿ,ಫೆ.16.(ಕ.ವಾ.)-ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ಉದ್ಘಾಟನಾ ಸಮಾರಂಭವು ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಫೆಬ್ರವರಿ 19ರಂದು ರವಿವಾರ ಮಧ್ಯಾಹ್ನ 12.30 ಗಂಟೆಗೆ ಜರುಗಲಿದೆ.
ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸುವರು. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಸಿ.ರೇವೂರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಕಲಬುರಗಿ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ, ರಾಜ್ಯಸಭಾ ಸದಸ್ಯ ಬಸವರಾಜ್ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅಫಜಲಪುರ ಶಾಸಕ ಮಾಲಿಕಯ್ಯ ವ್ಹಿ. ಗುತ್ತೇದಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು.
ವಿಧಾನಸಭಾ ಶಾಸಕರುಗಳಾದ ಡಾ. ಖಮರುಲ್ ಇಸ್ಲಾಂ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರ, ಮಹಾನಗರಪಾಲಿಕೆ ಮಹಾಪೌರ ಸೈಯ್ಯದ್ ಅಹ್ಮದ್, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತು ಗೌರವಾಧ್ಯಕ್ಷ ಡಾ|| ದಿನಕರ ಮೋರೆ, ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ತು ಜಿಲ್ಲಾಧ್ಯಕ್ಷ ಆರ್.ಬಿ. ಜಗದಾಳೆ ಹಾಗೂ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ ಕದಮ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಕಲಬುರಗಿ ಸಮಾಜ ಚಿಂತಕ ಆರ್.ಡಿ. ಮಾನೆ ವಿಶೇಷ ಉಪನ್ಯಾಸ ನೀಡುವರು.
ಇದಕ್ಕೂ ಮುನ್ನ ಬೆಳಿಗ್ಗೆ 10 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರನ್ನೊಳಗೊಂಡ ವಿವಿಧ ಜಾನಪದ ಕಲಾ ತಂಡದ ಭವ್ಯ ಮೆರವಣಿಗೆಯು ಕಲಬುರಗಿ ನೆಹರು ಗಂಜನ ಬಾಲ ವಿಕಾಸ ಮಂದಿರದಿಂದ ಪ್ರಾರಂಭವಾಗಿ ಸುಪರ ಮಾರ್ಕೆಟ್ ಜಗತ್ ಸರ್ಕಲ್ ವೃತ್ತದ ಮಾರ್ಗವಾಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕೊನೆಗೊಳ್ಳಲಿದೆ.

ಫೆಬ್ರವರಿ 19 ಮತ್ತು 20ರಂದು ಕಲಬುರಗಿಯಲ್ಲಿ ಮಾಹಿತಿ ಉತ್ಸವ
**************************************************************
ಕಲಬುರಗಿ,ಫೆ.16.(ಕ.ವಾ.)-ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಇವುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಫೆಬ್ರವರಿ 19 ಹಾಗೂ 20ರಂದು ಮಾಹಿತಿ ಉತ್ಸವವನ್ನು ಏರ್ಪಡಿಸಲಾಗಿದೆ.
ಈ ಮಾಹಿತಿ ಉತ್ಸವದಲ್ಲಿ ಪ್ರವಾಸೋದ್ಯಮ, ಜವಳಿ ಮತ್ತು ಕೈಮಗ್ಗ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೈಗಾರಿಕೆ ಇಲಾಖೆಗಳ, ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ಇಂಧನ ಮಾಹಿತಿ ಒದಗಿಸುವ ವಸ್ತು ಪ್ರದರ್ಶನ ನಡೆಯಲಿದೆ. ಇ.ಎಸ್.ಐ.ಸಿ. ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ರುಚಿಕಟ್ಟಾದ ತಿಂಡಿ ತಿನಿಸುಗಳ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಸಹ ಸಂಘಟಿಸಲಾಗಿದೆ.
ಮಾಹಿತಿ ಉತ್ಸವ ಅಂಗವಾಗಿ ಫೆಬ್ರವರಿ 19ರಂದು ಸಾಯಂಕಾಲ 6.30 ರಿಂದ 6.40 ಗಂಟೆಯವರೆಗೆ ಚಲನಚಿತ್ರ ಪ್ರಶಸ್ತಿ ಬೆಳ್ಳಿ ಹೆಜ್ಜೆ ವಿಡಿಯೋ, 6.40 ರಿಂದ ಸಾಯಂಕಾಲ 7 ಗಂಟೆಯವರೆಗೆ ಗಾನಯಾನ, ಸಾಯಂಕಾಲ 7 ರಿಂದ 7.15 ಗಂಟೆಯವರೆಗೆ ಅನ್ನ ಭಾಗ್ಯ ಮತ್ತು ಕ್ಷೀರ ಭಾಗ್ಯ ನೃತ್ಯ ರೂಪಕ, ಸಾಯಂಕಾಲ 7.15 ರಿಂದ 7.30 ಗಂಟೆಯವರೆಗೆ ಜನಮನ ವಿಡಿಯೋ, ಸಾಯಂಕಾಲ 7.30 ರಿಂದ 7.50 ಗಂಟೆಯವರೆಗೆ ಗಾನಯಾನ, ಸಾಯಂಕಾಲ 7.50 ರಿಂದ ರಾತ್ರಿ 8.05 ಗಂಟೆಯವರೆಗೆ ಕೃಷಿ ಭಾಗ್ಯ ಹಾಗೂ ಗ್ರಾಮೀಣಾಭಿವೃದ್ಧಿ ನೃತ್ಯರೂಪಕ, 8.05 ರಿಂದ 8.10 ಗಂಟೆಯವರೆಗೆ ಜೀವಸ್ವರ ರಾಜ್ಯೋತ್ಸವ ವಿಡಿಯೋ, ರಾತ್ರಿ 8.10 ರಿಂದ 8.25 ಗಂಟೆಯವರೆಗೆ ಮೈತ್ರಿ ಮತ್ತು ಮನಸ್ವಿನಿ ನೃತ್ಯರೂಪಕ, ರಾತ್ರಿ 8.25 ರಿಂದ 8.30 ಗಂಟೆಯವರೆಗೆ ಈ ಸರ್ಕಾರ ವಿಡಿಯೋ, ರಾತ್ರಿ 8.30 ರಿಂದ 8.50 ಗಂಟೆಯವರೆಗೆ ಗಾನಯಾನ ಹಾಗೂ ರಾತ್ರಿ 8.50 ರಿಂದ 9 ಗಂಟೆಯವರೆಗೆ ಬಾರಿಸು ಕನ್ನಡ ಡಿಂಡಿಮವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಫೆಬ್ರವರಿ 20ರಂದು ಸಾಯಂಕಾಲ 5.30 ರಿಂದ 6 ಗಂಟೆಯವರೆಗೆ ಹುರುಗಲವಾಡಿ ರಾಮಯ್ಯ ಮತ್ತು ತಂಡದವರಿಂದ ಗೀತ ಗಾಯನ, ಸಾಯಂಕಾಲ 6 ರಿಂದ 6.30 ಗಂಟೆಯವರೆಗೆ ತೊಗಲು ಗೊಂಬೆ, ಸಾಯಂಕಾಲ 6.30 ರಿಂದ 6.45 ಗಂಟೆಯವೆರಗೆ ಜನಮನ ವಿಡಿಯೋ, ಸಾಯಂಕಾಲ 6.45 ರಿಂದ 7.15 ಗಂಟೆಯವರೆಗೆ ಪರಿವರ್ತನಾ ಕಲಾ ತಂಡದ ಸಿ.ಆರ್. ನಾಗರಾಜ ಅವರಿಂದ ಕಂಸಾಳೆ, ಸಾಯಂಕಾಲ 7.15 ರಿಂದ 7.30 ಗಂಟೆಯವರೆಗೆ ಜೀವಸ್ವರ ವಿಡಿಯೋ, ಸಾಯಂಕಾಲ 7.30 ರಿಂದ 8.30 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದ ಕಾರ್ಯಕ್ರಮ, ರಾತ್ರಿ 8.30 ರಿಂದ 3 ಲೇಸರ್ ಶೋ ಹಾಗೂ ಬಾಲ ಮಂದಿರದ ಬಾಲಕಿಯರಿಂದ ಡೊಳ್ಳು ಕುಣಿತ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಕೈಗಾರಿಕಾ ವಸ್ತು ಪ್ರದರ್ಶನ: ಮಳಿಗೆ ಕಾಯ್ದಿರಿಸಲು ಫೆಬ್ರವರಿ 20 ಕೊನೆಯ ದಿನ
****************************************************************************
ಕಲಬುರಗಿ,ಫೆ.16.(ಕ.ವಾ.)-ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ. ಡೆವಲೆಪ್ಮೆಂಟ್ ಇನ್‍ಸ್ಟಿಟ್ಯೂಟ್, ಜಿಲ್ಲಾ ಕೈಗಾರಿಕಾ ಕೇಂದ್ರ, ಹೆಚ್.ಕೆ.ಸಿ.ಸಿ.ಐ. ಹಾಗೂ ಕೆ-ಲ್ಯಾಂಪ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ಐದು ದಿನಗಳ ಕಾಲ ನ್ಯಾಷನಲ್ ವೆಂಡರ್ ಡೆವಲೆಪ್ಮೆಂಟ್ ಕಾರ್ಯಕ್ರಮ ಹಾಗೂ ಕೈಗಾರಿಕಾ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಈ ವಸ್ತು ಪ್ರದರ್ಶನದಲ್ಲಿ ಮಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಉದ್ದಿಮೆದಾರರು ತಮ್ಮ ಘಟಕದಲ್ಲಿ ಉತ್ಪಾದಿಸುತ್ತಿರುವ ಉತ್ಪನ್ನಗಳನ್ನು ಪ್ರದರ್ಶಿಸಲು ಫೆಬ್ರವರಿ 20ರೊಳಗಾಗಿ ಮಳಿಗೆಗಳನ್ನು ಕಾಯ್ದಿರಿಸಿಕೊಳ್ಳಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ತಿಳಿಸಿದ್ದಾರೆ.
ಸದರಿ ವಸ್ತುಪ್ರದರ್ಶನದಲ್ಲಿ ರೈಲ್ವೆ ಇಲಾಖೆ, ಬಿ.ಎಸ್.ಎನ್.ಎಲ್., ಜೆಸ್ಕಾಂ, ಕೆ.ಎಸ್.ಆರ್.ಟಿ.ಸಿ. ಹಾಗೂ ಬೃಹತ್ ಕೈಗಾರಿಕೆಗಳಾದ ಬೆಮೆಲ್, ಬಿ.ಹೆಚ್.ಇ.ಎಲ್. ಮತ್ತು ಜಿಲ್ಲೆಯಲ್ಲಿರುವ ಸಿಮೆಂಟ್ ಹಾಗೂ ಇನ್ನಿತರ ಎಲ್ಲಾ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆಹ್ವಾನಿಸಲಾಗುತ್ತಿದೆ. ಆಸಕ್ತಿಯುಳ್ಳ ಸ್ಥಳೀಯ ಹಾಗೂ ರಾಜ್ಯ ವ್ಯಾಪ್ತಿಯ ಕೈಗಾರಿಕೋದ್ಯಮಿಗಳು/ ಕುಶಲಕರ್ಮಿಗಳು (ಆಹಾರ ಪದಾರ್ಥ ಹಾಗೂ ಸಿದ್ಧ ಉಡುಪು ಹೊರತುಪಡಿಸಿ) ತಮ್ಮ ಅವಿಷ್ಕಾರ, ವಿಭಿನ್ನ ಉತ್ಪನ್ನಗಳನ್ನು ಹಾಗೂ ಮೇಲೆ ನಮೂದಿಸಿರುವ ಬೃಹತ್ ಕೈಗಾರಿಕೆಗಳಿಗೆ ಬೇಕಾಗಬಹುದಾದಂತಹ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರುಕಟ್ಟೆಗೆ ವಿಪುಲ ಅವಕಾಶಗಳನ್ನು ಕಂಡುಕೊಳ್ಳಬಹುದಾಗಿದೆ. ಉತ್ಪಾದಕರು ಹಾಗೂ ಖರೀದಿದಾರರಿಗೆ ಇದೊಂದು ವೇದಿಕೆಯಾಗಿದೆ. ಮಳಿಗೆ ಕಾಯ್ದಿರಿಸುವಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಎಂ.ಎಸ್.ಕೆ. ಮಿಲ್ಲ ರಸ್ತೆ, ಜೇವರ್ಗಿ ಕ್ರಾಸ್, ಕಲಬುರಗಿ ಅಥವಾ ಅಧಿಕಾರಿಗಳಾದ ಅಬ್ದುಲ್ ಅಜೀಮ್-9448333593, ಬಿ.ಎಸ್. ಜವಳಗಿ-9632467868ಗಳನ್ನು ಸಂಪರ್ಕಿಸಲು ಕೋರಿದೆ.

ಅಂಗನವಾಡಿ ಮಕ್ಕಳ ಆಧಾರ ನೋಂದಣಿ ಕಾರ್ಯ ಆರಂಭ
********************************************************
ಕಲಬುರಗಿ,ಫೆ.16.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಹುಟ್ಟಿದ ಶಿಶುವಿನಿಂದ ಹಿಡಿದು ಐದು ವರ್ಷದೊಳಗಿನ ಎಲ್ಲ ಮಕ್ಕಳ ಆಧಾರ ನೋಂದಣಿ ಕಾರ್ಯಕ್ಕಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಮೇಲ್ವಿಚಾರಕರು ಹಾಗೂ ಸಿ.ಡಿ.ಪಿ.ಓ. ಅವರಿಗೆ ಒಟ್ಟು 112 ಟ್ಯಾಬ ವಿತರಿಸಿದ್ದು, ನೋಂದಣಿ ಕಾರ್ಯ ಆರಂಭವಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಿಳಿಸಿದ್ದಾರೆ.
ಜಿಲ್ಲೆಯ 3098 ಅಂಗನವಾಡಿ ಕೇಂದ್ರಗಳಲ್ಲಿ 2,10,503 ಮಕ್ಕಳಿದ್ದು, ಈ ಮಕ್ಕಳ ಪೈಕಿ ಈಗಾಗಲೇ 77,508 ಮಕ್ಕಳ ಆಧಾರ ನೋಂದಣಿ ಮಾಡಲಾಗಿದೆ. ಇನ್ನೂ 1,32,995 ಮಕ್ಕಳ ನೋಂದಣಿ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಮಕ್ಕಳ ನೋಂದಣಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಆಧಾರ ನೋಂದಣಿ ಮಾಡಿಕೊಳ್ಳಬೇಕು. ಆಧಾರ ನೋಂದಣಿ ಕುರಿತು ಪೋಷಕರ ಮೊಬೈಲ್‍ಗೆ ಸಂದೇಶ ರವಾನಿಸಲಾಗುತ್ತದೆ. ಮಕ್ಕಳ ಬೆಳವಣಿಗೆಯ ಪ್ರತಿ ಹಂತಗಳಲ್ಲಿ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ಒದಗಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಸಹ ಆಧಾರ ಮೂಲಕವೇ ಪತ್ತೆ ಹಚ್ಚಬಹುದಾಗಿದೆ. ಮಕ್ಕಳ ಆಧಾರ ನೋಂದಣಿ ಸಂಪೂರ್ಣ ಉಚಿತವಾಗಿರುತ್ತದೆ.
ಈಗ ಸರ್ಕಾರದ ಸೌಲಭ್ಯ ಪಡೆಯಲು ಬಹುಮುಖ್ಯವಾಗಿರುವ ಆಧಾರÀ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಎಲ್ಲ ಮಕ್ಕಳಿಗೆ ವಿತರಿಸುವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೈಗೆತ್ತಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 09 ಸಿ.ಡಿ.ಪಿ.ಓ. ಹಾಗೂ 103 ಮೇಲ್ವಿಚಾರಕರಿಗೆ ಟ್ಯಾಬ್ ವಿತರಿಸಿ ಇಲಾಖೆಯಿಂದ ಈ ಕಾರ್ಯ ನಡೆಸಲಾಗುತ್ತಿದೆ. ಆನ್‍ಲೈನ್ ಮೂಲಕವೇ ಮಕ್ಕಳ ಆಧಾರ ನೋಂದಣಿ ಮಾಡಿಸಲಾಗುತ್ತದೆ. ಮಗುವಿನ ಭಾವಚಿತ್ರ ಮತ್ತು ತಂದೆ, ತಾಯಿಯ ಬಯೋಮೆಟ್ರಿಕ್ ಆಧಾರದಲ್ಲಿ ನೋಂದಣಿ ಮಾಡಲಾಗುತ್ತದೆ. ನೋಂದಣಿ ಮಾಡಿದ 45 ದಿನಗಳಲ್ಲಿ ಅಂಚೆ ಮೂಲಕ ಮನೆಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಐದು ವರ್ಷದೊಳಗಿನ ಮಗುವಿನ ಬಯೋಮೆಟ್ರಿಕ್ ಮತ್ತು ಕಣ್ಣಿನ (ಐರಿಸ್) ಪಡೆಯುವುದಿಲ್ಲ. ಐದು ವರ್ಷ ತುಂಬಿದ ಬಳಿಕ ಆಧಾರ ಸಂಖ್ಯೆಗೆ ಈ ಮಾಹಿತಿಗಳನ್ನು ಅಪಡೇಡ್ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.No comments:

Post a Comment