GULBARGA VARTHE

GULBARGA VARTHE

Wednesday, 15 February 2017

News and photo Date: 15---02---2017

ಗೃಹ ಸಚಿವರ ಪ್ರವಾಸ
**********************
ಕಲಬುರಗಿ,ಫೆ.15.(ಕ.ವಾ.)-ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 16ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಸಚಿವರು ಬೆಳಗಿನ 10 ಗಂಟೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 1 ಗಂಟೆಗೆ ಶಹಾಬಾದಿನಲ್ಲಿ ಡಿವೈ.ಎಸ್.ಪಿ. ಮತ್ತು ಪೊಲೀಸ್ ಠಾಣೆಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3 ಗಂಟೆಗೆ ಕಲಬುರಗಿಯ ಡಿಸಿಸಿ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
************************************************
ಕಲಬುರಗಿ,ಫೆ.15.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 16ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಸಚಿವರು ಬೆಳಗಿನ 11 ಗಂಟೆಗೆ ಶಹಾಬಾದಿನಲ್ಲಿ ಡಿವೈ.ಎಸ್.ಪಿ. ಮತ್ತು ಪೊಲೀಸ್ ಠಾಣೆಗಳ ಶಿಲಾನ್ಯಾಸ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಡಿಸಿಸಿ ಕಚೇರಿಯಲ್ಲಿ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯುವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಾಯಂಕಾಲ 7 ಗಂಟೆಗೆ ವಿ.ವಿ.ಇ.ಎಸ್. ಓಕಳಿ ವಿದ್ಯಾಮಂದಿರದ ಸಂಸ್ಥಾಪನಾ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಫೆಬ್ರವರಿ 17ರಂದು ಬೆಳಿಗ್ಗೆ 10.30 ಗಂಟೆಗೆ ಸೈಯ್ಯದ್ ಚಿಂಚೋಳಿ ಗ್ರಾಮದಲ್ಲಿ ಎಂ.ಜಿ.ಎನ್.ಆರ್.ಇ.ಜಿ.ಎ. ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡುವರು. ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರಲ್ಲದೆ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಫೆಬ್ರವರಿ 18ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಿಗ್ಗೆ 11.30 ಟೀಚರ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ, ಮಧ್ಯಾಹ್ನ 2 ಗಂಟೆಗೆ ಬಂಜಾರ ಸಮಾಜ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಫೆಬ್ರವರಿ 19ರಂದು ಬೆಳಿಗ್ಗೆ 11 ಗಂಟೆಗೆ ಸೇಡಂದಲ್ಲಿ ಕಲಬುರಗಿ ವಿಭಾಗ ಮಟ್ಟದ ಪೋಸ್ಟ್ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12.30 ಗಂಟೆಗೆ ಕಲಬುರಗಿ ರಂಗಮಂದಿರದಲ್ಲಿ ಏರ್ಪಡಿಸಿರುವ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಕುಂದುಕೊರತೆಯನ್ನು ವಿಚಾರಣೆ ನಡೆಸುವರು. ಸಾಯಂಕಾಲ 5 ಗಂಟೆಗೆ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿರುವ ವಿವಿಧ ಇಲಾಖೆಗಳ ಮಾಹಿತಿ ಉತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಪೌರಾಡಳಿತ ಸಚಿವರ ಪ್ರವಾಸ
*****************************
ಕಲಬುರಗಿ,ಫೆ.15.(ಕ.ವಾ.)-ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಫೆಬ್ರವರಿ 16ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು. ನಂತರ ಸಚಿವರು ಕಲಬುರಗಿಯಿಂದ ಬೀದರ ಜಿಲ್ಲೆಯ ಭಾಲ್ಕಿಗೆ ಪ್ರಯಾಣಿಸುವರು.
ಶಹಾಬಾದ ಪೊಲೀಸ್ ಉಪಾಧೀಕ್ಷಕರ ಕಚೇರಿ ಕಟ್ಟಡದ
****************************************************
ಹಾಗೂ ನಗರ ಪೊಲೀಸ್ ಠಾಣೆಯ ಶಂಕುಸ್ಥಾಪನೆ
**********************************************
ಕಲಬುರಗಿ,ಫೆ.15.(ಕ.ವಾ.)-ಜಿಲ್ಲಾ ಪೊಲೀಸ್ ಕಲಬುರಗಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ನಿಗಮ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 16ರಂದು ಮಧ್ಯಾಹ್ನ 12.20 ಗಂಟೆಗೆ ಶಹಾಬಾದ ನಗರಸಭೆ ಕಾರ್ಯಾಲಯದ ಹತ್ತಿರ ಪೊಲೀಸ್ ಉಪಾಧೀಕ್ಷಕರ ಕಚೇರಿ ಕಟ್ಟಡದ ಹಾಗೂ ಶಹಾಬಾದ ಪೊಲೀಸ್ ಠಾಣೆಯ ಶಂಕುಸ್ಥಾಪನೆಯನ್ನು ಗೃಹ ಸಚಿವ ಡಾ|| ಜಿ. ಪರಮೇಶ್ವರ ಅವರು ನೆರವೇರಿಸುವರು.
ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಹಾಗೂ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಅಧÀ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಗೃಹ ಸಚಿವ ಸಲಹೆಗಾರ ಕೆಂಪಯ್ಯ, ಶಹಾಬಾದ ನಗರಸಭೆ ಅಧ್ಯಕ್ಷೆ ಗೀತಾ ಸಾಹೇಬಗೌಡ, ಸದಸ್ಯ ಗಿರೀಶ ಖಂಬಾನೂರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ರೂಪಕ್ ಕುಮಾರ ದತ್ತಾ ಹಾಗೂ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಟಿ. ಸುನೀಲ ಕುಮಾರ ವಿಶೇಷ ಆಹ್ವಾನಿತರಾಗಿ ಆಗಮಿಸುವರು.
ಫೆಬ್ರವರಿ 17ರಂದು ಕಾನೂನು ಅರಿವು-ನೆರವು ಕಾರ್ಯಕ್ರಮ
*********************************************************
ಕಲಬುರಗಿ,ಫೆ.15.(ಕ.ವಾ.)-ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಎದುರುಗಡೆಯಿರುವ ಸರ್ಕಾರಿ ವೀಕ್ಷಣಾಲಯದಲ್ಲಿ ಫೆಬ್ರವರಿ 17ರಂದು ಮಧ್ಯಾಹ್ನ 2.30 ಗಂಟೆಗೆ ನ್ಯಾಯಿಕ ಸಂಘರ್ಷಕ್ಕೆ ಒಳಗಾದ ಮಕ್ಕಳ ರಕ್ಷಣೆ ಕುರಿತು ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿ.ಜೆ.ಎಂ. ಹಾಗೂ ಬಾಲ ನ್ಯಾಯಿಕ ಮಂಡಳಿಯ ಅಧ್ಯಕ್ಷ ಎಸ್.ಎಲ್. ಚವ್ಹಾಣ ಅವರು ಉದ್ಘಾಟಿಸುವರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲ ನ್ಯಾಯ ಮಂಡಳಿ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಕಲಬುರಗಿ ಇವುಗಳ ಸಂಯುಕ್ತಾಶ್ರಾಯದಲ್ಲಿ ಆಯೋಜಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ವಹಿಸಲಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ಪಾಟೀಲ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಬಾಲ ನ್ಯಾಯಿಕ ಕಾಯ್ದೆ 2015ರ ಕುರಿತು ನ್ಯಾಯವಾದಿ ಪದ್ಮಾವತಿ ಎಲ್. ಚವ್ಹಾಣ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವಿಠ್ಠಲ ಚಿಕಣಿ ಉಪನ್ಯಾಸ ನೀಡಲಿದ್ದಾರೆ.
ದಿನನಿತ್ಯ ಜೀವನಕ್ಕೆ ಕಾನೂನಿನ ಅರಿವು ಅತ್ಯಗತ್ಯ
***********************************************
ಕಲಬುರಗಿ,ಫೆ.15.(ಕ.ವಾ.)-ಪ್ರತಿಯೊಬ್ಬ ಪ್ರಜೆಯು ಕಾನೂನಿನ ಬಗ್ಗೆ ಅಜ್ಞಾನ ಹೊಂದಿದ್ದಲ್ಲಿ ಸದರಿ ವ್ಯಕ್ತಿಯು ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಇದಕ್ಕಾಗಿ ದಿನನಿತ್ಯ ಜೀವನಕ್ಕೆ ಬೇಕಾಗುವ ಜನನ-ಮರಣ ನೋಂದಣಿ ಕಾಯ್ದೆ, ಮೋಟಾರ ವಾಹನ ಕಾಯ್ದೆ, ಜೀವನಾಂಶ ಕಾಯ್ದೆ, ಸ್ವತ್ತು ಹಸ್ತಾಂತರ ಕಾಯ್ದೆಗಳ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ತಿಳಿಸಿದ್ದಾರೆ.
ಅವರು ಮಂಗಳವಾರ ಕಲಬುರಗಿ ಇಂಡಿಯನ್ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಹಾರಾ ಸೇವಾ ಸಂಸ್ಥೆ ಹಾಗೂ ರಹೆನುಮಾ ಕಾನೂನು ಕೇಂದ್ರ ಹಾಗೂ ಇಂಡಿಯನ್ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆ, ಇವುಗಳ ಸಂಯುಕ್ತಾಶ್ರಯದಲ್ಲಿ “ಪೋಲಿಸ್ ದೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಮತ್ತು ಸಂತ್ರಸ್ತೆ ಯೋಜನೆ” ಕುರಿತು ಆಯೋಜಿಸಿದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿನ ಪ್ರತಿಯೊಬ್ಬ ಮಹಿಳೆಯು ತಮ್ಮ ಹಕ್ಕಿನ ಬಗ್ಗೆ ಮತ್ತು ಆಸ್ತಿಯ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಮಹಿಳಾ ದೌರ್ಜನ್ಯ ತಡೆ ಕಾಯ್ದೆಯು ವಿಶೇಷವಾಗಿ ಮಹಿಳೆಯರ ಹಕ್ಕನ್ನು ರಕ್ಷಿಸಲು ರೂಪಿಸಿರುವ ಕಾಯ್ದೆಯಾಗಿದೆ. ಆಧುನಿಕ ಸಮಾಜದಲ್ಲಿ ಆಧುನಿಕ ತಂತ್ರಜ್ಞಾನದಿಂದ ಉಂಟಾಗುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮತ್ತು ಅವುಗಳಿಗೆ ಅನ್ವಯಿಸಬಹುದಾದ ಕಾನೂನುಗಳ ಬಗ್ಗೆ ಸ್ವಲ್ಪ ಮಟ್ಟಿನ ಜ್ಞಾನ ಇರುವುದು ಅವಶ್ಯಕ. ಅದೇ ರೀತಿ ಇಂದಿನ ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ತಿಪ್ಪಣ್ಣ ಸಿರಸಗಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಇದಲ್ಲದೇ ಬಾಲಕಿಯರಿಗಾಗಿ ಇರುವ ಕಿಶೋರಿ ಯೋಜನೆ, ಭಾಗ್ಯ ಲಕ್ಷ್ಮೀ ಯೋಜನೆ ಮತ್ತು ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ವಿದ್ಯಾರ್ಥಿ ವೇತನದ ಬಗ್ಗೆ ಹಾಗೂ ಮಹಿಳೆಯರಿಗಾಗಿ ತಮ್ಮ ಕಚೇರಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಲಹಾ ಕೇಂದ್ರಗಳನ್ನು ತೆರೆದಿರುವ ಬಗ್ಗೆಯೂ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಜಿ.ಜಿ.ಹೆಚ್. ನಿವೃತ್ತ ಆಡಳಿತಾಧಿಕಾರಿ ಮಹ್ಮದ್ ಮಹಮ್ಮದ್ ಮಿನಾಜುದ್ದೀನ್ ಸಾಹಬ್ ಮಾತನಾಡಿದರು.
 ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಅನಿತಾ ಎಮ್. ರೆಡ್ಡಿ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ 2005 ಕುರಿತು ಹಾಗೂ ಎನ್. ಎನ್. ಜಹಾಗೀರದಾರ, ಪೋಲಿಸ್ ದೂರು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಮತ್ತು ಸಂತ್ರಸ್ಥೆ ಯೋಜನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳ ಹಾಗೂ ಬೋಧಕ ವರ್ಗದವರು ಸೇರಿದಂತೆ ಒಟ್ಟು 150ಕ್ಕೂ ಹೆಚ್ಚು ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪೀಠೋಪಕರಣ ಸರಬರಾಜಿಗಾಗಿ ಅರ್ಜಿ ಆಹ್ವಾನ
***********************************************
ಕಲಬುರಗಿ,ಫೆ.15.(ಕ.ವಾ.)-ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಿಗೆ ಸಾಗುವಾನಿ ಬುಕ್ ಸ್ಟ್ಯಾಂಡ್, ಸ್ಟೀಲ್ ಅಲಮಾರಿ, ಸ್ಟೀಲ್ ರ್ಯಾಕ್ಸ್ ಹಾಗೂ ಕಂಪ್ಯೂಟರ್ ಟೇಬಲ್ ಸೇರಿದಂತೆ ಒಟ್ಟು 09 ಫೀಠೋಪಕರಣಗಳನ್ನು ಸರಬರಾಜು ಮಾಡಲು ಕೆ.ಟಿ.ಪಿ.ಪಿ. ಕಾಯ್ದೆ 1999 ನಿಯಮ 2000ರನ್ವಯ ಅರ್ಹ ತಯಾರಕರು, ಡೀಲರ್ ಮತ್ತು ಸರಬರಾಜುದಾರರಿಂದ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವಿ.ಪಾಟೀಲ್ ತಿಳಿಸಿದ್ದಾರೆ.
 ಟೆಂಡರ್ ಅರ್ಜಿಯನ್ನು ಈ ಕಚೇರಿಯಿಂದ ಬೆಳಿಗ್ಗೆ 10.30 ರಿಂದ ಸಾಯಂಕಾಲ 5 ಗಂಟೆಯವರೆಗೆ ಪಡೆದು ಭರ್ತಿ ಮಾಡಿ ಅದರೊಂದಿಗೆ ಇ.ಎಂ.ಡಿ. 5000 ರೂ.ಗಳ ಡಿ.ಡಿ./ಎಫ್‍ಡಿಆರ್‍ನ್ನು ಲಗತ್ತಿಸಿದ ಸೀಲ್ಡ್ ಟೆಂಡರ್ ಅರ್ಜಿಯ ಎರಡು ಲಕೋಟೆಗಳನ್ನು 2017ರ ಮಾರ್ಚ್ 4ರ ಸಾಯಂಕಾಲ 4ಗಂಟೆಯೊಳಗಾಗಿ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಸಲ್ಲಿಸಬೇಕು. ಲಕೋಟೆ ಒಂದರಲ್ಲಿ ಡಿ.ಡಿ/ಎಫ್‍ಡಿಆರ್ ಮತ್ತು ಲಕೋಟೆ ಎರಡರಲ್ಲಿ ಟೆಂಡರ್ ಸಂಬಂಧಪಟ್ಟ ಅರ್ಜಿ, ವ್ಯಾಟ್ ನೋಂದಣಿ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳು ಇರಬೇಕು.
ಟೆಂಡರ್‍ದಾರರ ಸಮಕ್ಷಮದಲ್ಲಿ ಸೀಲ್ಡ್ ಮಾಡಿದ ಟೆಂಡರ್ ಅರ್ಜಿಗಳನ್ನು 2017ರ ಮಾರ್ಚ್ 6ರಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ಫೀಠೋಪಕರಣಗಳ ವಿವರ, ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಪಿ.ಎಸ್.ಐ. ನೇಮಕಾತಿಯ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ
******************************************************************
ಕಲಬುರಗಿ,ಫೆ.15.(ಕ.ವಾ.)-ಪಿ.ಎಸ್.ಐ. ರಾಜ್ಯ ಗುಪ್ತವಾರ್ತೆ (ಪುರುಷ ಮತ್ತು ಮಹಿಳೆ) ಸೇವಾನಿರತರನ್ನೊಳಗೊಂಡ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.) ಯನ್ನು 2017ರ ಫೆಬ್ರವರಿ 18, 20 ಹಾಗೂ 21ರಂದು ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಡೆಯಲಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಆಲೋಕ ಕುಮಾರ್ ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಹಾಜರಾತಿ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಲು ಈಗಾಗಲೇ ಸಂದೇಶವನ್ನು ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮಗೆ ಹಾಜರಾತಿ ಪತ್ರದಲ್ಲಿ ನೀಡಿರುವ ಸೂಚನೆಗಳನ್ವಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.)ಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ಮಾಹಿತಿ ಉತ್ಸವ ಕಾರ್ಯಕ್ರಮ ವೀಕ್ಷಿಸಲು ಯುವಕ/ಯುವತಿ ಮಂಡಳಿಗಳಿಗೆ ಸೂಚನೆ
ಕಲಬುರಗಿ,ಫೆ.15.(ಕ.ವಾ.)-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಫೆಬ್ರವರಿ 19 ರಿಂದ 20ರಂದು ಮಾಹಿತಿ ಉತ್ಸವ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರವರ 125ನೇ ಜಯಂತ್ಯೋತ್ಸವ ಅಂಗವಾಗಿ ಫೆಬ್ರವರಿ 21ರಂದು “ಭಾರತ ಭಾಗ್ಯವಿಧಾತಾ” ಧ್ವನಿ ಬೆಳಕು ಕಾರ್ಯಕ್ರಮ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಸಾಯಂಕಾಲ 5 ಗಂಟೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯಾಲಯದಿಂದ ಮಾನ್ಯತೆ ಪಡೆದ ಯುವಕ/ಯುವತಿ ಮಂಡಳಿಗಳ ಸದಸ್ಯರು ಸದರಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಿ, ಈ ಕಾರ್ಯಕ್ರಮದ ಲಾಭವನ್ನು ಪಡೆಯಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಮಾಳಗೆ ಕೋರಿದ್ದಾರೆ. 

No comments:

Post a Comment