GULBARGA VARTHE

GULBARGA VARTHE

Monday, 13 February 2017

News and photo Date: 13-2-2017

ಕುಡಿಯುವ ನೀರು ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ
****************************************************************************
ಕಲಬುರಗಿ,ಫೆ.13.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾದ ಎಲ್ಲ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಜನರಿಗೆ ನೀರು ಪೂರೈಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಸೂಚಿಸಿದರು.
ಅವರು ಸೋಮವಾರ ಕಲಬುರಗಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಡಿಯುವ ನೀರು ಸರಬರಾಜಿನ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಕಾಲಕಾಲಕ್ಕೆ ಕಾಮಗಾರಿಗಳ ತಪಾಸಣಾ ಕಾರ್ಯ ಕೈಗೊಳ್ಳಬೇಕು. ಕಾಮಗಾರಿಗಳಲ್ಲಿ ವಿಳಂಬವಾಗುವುದನ್ನು ಸಹಿಸಲಾಗದು. ಕಾಮಗಾರಿ ಪೂರ್ಣಗೊಳಿಸಲು ಸಹಕರಿಸದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಹೇಳಿದರು.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಶಾಲೆಗಳಲ್ಲಿ 8-10 ದಿನಗಳ ಕಾಲ ಊಟ ಪೂರೈಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರೇತರ ಸಂಘ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸದರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವಿಫಲರಾದ ಅಧಿಕಾರಿಗಳ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಚ್ಚರಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಎಲ್ಲ ಹಾಸ್ಟೆಲ್‍ಗಳ ಸಮರ್ಪಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಇಲಾಖೆಯ ಜಂಟಿ ನಿರ್ದೆಶಕರು ಪ್ರತಿ ಸೋಮವಾರ ಎಲ್ಲ ವಾರ್ಡನ್‍ಗಳ ಸಭೆ ಕರೆದು ಸಮರ್ಪಕ ಊಟೋಪಹಾರ ಪೂರೈಕೆ, ಕೋಣೆ ಮತ್ತು ಶೌಚಾಲಯಗಳ ಹಾಗೂ ಹಾಸ್ಟೆಲ್ ಆವರಣಗಳಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಚರ್ಚಿಸಬೇಕು. ಎಲ್ಲ ಹಾಸ್ಟೆಲ್‍ಗಳಲ್ಲಿ ವಾರ್ಡನ್‍ಗಳ ಕಡ್ಡಾಯ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಿ ಹಾಸ್ಟೆಲ್‍ಗಳ ಭೇಟಿ ತೀವ್ರಗೊಳಿಸಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾಯಿತ ಪ್ರತಿನಿಧಿಗಳು ಕೇಳಿರುವ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಮ್ಮ ಹಿರೇಮಠ, ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಜಯಂತಿ ಸಂಭ್ರಮದಿಂದಾಚರಿಸಲು ತೀರ್ಮಾನ
**********************************************************************************
ಕಲಬುರಗಿ,ಫೆ.13.(ಕ.ವಾ.)-ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು 2017ರ ಫೆಬ್ರವರಿ 19ರಂದು ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಚುನಾವಣಾ ತಹಸೀಲ್ದಾರ ದಯಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಕಲಬುರಗಿಯಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಅಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಸಮಾರಂಭವನ್ನು ಮಧ್ಯಾಹ್ನ 12.30 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ನೀಡಲು ಹಾಗೂ ಸಮಾರಂಭದ ಅಂಗವಾಗಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆ ಕುರಿತು ಸಮಾಜ ಚಿಂತಕರಾದ ಆರ್.ಡಿ.ಮಾನೆ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲು ಸಭೆ ತೀರ್ಮಾನಿಸಿತು.
ಜಯಂತಿ ಆಚರಣೆ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಿಗ್ಗೆ 10 ಗಂಟೆಗೆ ನೆಹರು ಗಂಜಿನ ನಗರೇಶ್ವರ ಬಾಲವಿಕಾಸ ಮಂದಿರದಿಂದ ಸೂಪರಮಾರ್ಕೆಟ್, ಜಗತ್ ವೃತ್ತದ ಮೂಲಕ ಡಾ.ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಕರ್ನಾಟಕ ಕ್ಷತ್ರೀಯ ಮರಾಠಾ ಸಮಾಜದಿಂದ ಆಯೋಜಿಸಲು ಸಹ ಸಭೆ ನಿರ್ಣಯ ಕೈಗೊಂಡಿತು.
ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಡೊಳ್ಳು, ಹಲಗೆ ವಾದನ ಮತ್ತು ಕರಡಿ ಮಜಲು ಕಲಾ ತಂಡಗಳ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್ ಮುಂತಾದವುಗಳÀ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ತಹಸೀಲ್ದಾರರು ಸೂಚಿಸಿದರು.
ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾ ಅಧ್ಯಕ್ಷ ಆರ್.ಬಿ. ಜಗದಾಳೆ, ಗೌರವಾಧ್ಯಕ್ಷ ಡಾ|| ದಿನಕರ ಮೋರೆ, ಸಮಾಜ ಚಿಂತಕರಾದ ಆರ್.ಡಿ.ಮಾನೆ, ಸೂರ್ಯಕಾಂತ ಕದಂ, ಮತ್ತಿತರ ಮುಖಂಡರು, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಸಂಪತಕುಮಾರ ಪಾಟೀಲ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಜಯಂತಿ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.
ಫೆಬ್ರವರಿ 25ರಿಂದ ಕೈಗಾರಿಕಾ ವಸ್ತು ಪ್ರದರ್ಶನ
*********************************************
ಕಲಬುರಗಿ,ಫೆ.13.(ಕ.ವಾ.)-ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ. ಡೆವಲೆಪ್ಮೆಂಟ್ ಇನ್‍ಸ್ಟಿಟ್ಯೂಟ್, ಜಿಲ್ಲಾ ಕೈಗಾರಿಕಾ ಕೇಂದ್ರ, ಹೆಚ್.ಕೆ.ಸಿ.ಸಿ.ಐ. ಹಾಗೂ ಕೆ-ಲ್ಯಾಂಪ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 1ರವರೆಗೆ ಐದು ದಿನಗಳ ಕಾಲ ನ್ಯಾಷನಲ್ ವೆಂಡರ್ ಡೆವಲೆಪ್ಮೆಂಟ್ ಕಾರ್ಯಕ್ರಮ ಹಾಗೂ ಕೈಗಾರಿಕಾ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ತಿಳಿಸಿದ್ದಾರೆ.
ಸದರಿ ವಸ್ತುಪ್ರದರ್ಶನದಲ್ಲಿ ರೈಲ್ವೆ ಇಲಾಖೆ, ಬಿ.ಎಸ್.ಎನ್.ಎಲ್., ಜೆಸ್ಕಾಂ, ಕೆ.ಎಸ್.ಆರ್.ಟಿ.ಸಿ. ಹಾಗೂ ಬೃಹತ್ ಕೈಗಾರಿಕೆಗಳಾದ ಬೆಮೆಲ್, ಬಿ.ಹೆಚ್.ಇ.ಎಲ್. ಮತ್ತು ಜಿಲ್ಲೆಯಲ್ಲಿರುವ ಸಿಮೆಂಟ್ ಹಾಗೂ ಇನ್ನಿತರ ಎಲ್ಲಾ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆಹ್ವಾನಿಸಲಾಗುತ್ತಿದೆ. ಆಸಕ್ತಿಯುಳ್ಳ ಸ್ಥಳೀಯ ಹಾಗೂ ರಾಜ್ಯ ವ್ಯಾಪಿಯ ಕೈಗಾರಿಕೋದ್ಯಮಿಗಳು/ ಕುಶಲಕರ್ಮಿಗಳು (ಆಹಾರ ಪದಾರ್ಥ ಹಾಗೂ ಸಿದ್ಧ ಉಡುಪು ಹೊರತುಪಡಿಸಿ) ತಮ್ಮ ಅವಿಷ್ಕಾರ, ವಿಭಿನ್ನ ಉತ್ಪನ್ನಗಳನ್ನು ಹಾಗೂ ಮೇಲೆ ನಮೂದಿಸಿರುವ ಬೃಹತ್ ಕೈಗಾರಿಕೆಗಳಿಗೆ ಬೇಕಾಗಬಹುದಾದಂತಹ ಉತ್ಪನ್ನಗಳನ್ನು ಪ್ರದರ್ಶಿಸಿ, ಮಾರುಕಟ್ಟೆಗೆ ವಿಪುಲ ಅವಕಾಶಗಳನ್ನು ಕಂಡುಕೊಳ್ಳಬಹುದಾಗಿದೆ.
ಉತ್ಪಾದಕರು ಹಾಗೂ ಖರೀದಿದಾರರಿಗೆ ಇದೊಂದು ವೇದಿಕೆಯಾಗಿದ್ದು, ಆಸಕ್ತಿಯುಳ್ಳವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಎಂ.ಎಸ್.ಕೆ. ಮಿಲ್ಲ ರಸ್ತೆ, ಜೇವರ್ಗಿ ಕ್ರಾಸ್, ಕಲಬುರಗಿ ಅಥವಾ ಅಧಿಕಾರಿಗಳಾದ ಅಬ್ದುಲ್ ಅಜೀಮ್-9448333593, ಬಿ.ಎಸ್. ಜವಳಗಿ-9632467868ಗಳನ್ನು ಸಂಪರ್ಕಿಸಲು ಕೋರಿದೆ.
ವಸತಿ ಶಾಲೆ ಪ್ರವೇಶ ಪರೀಕ್ಷೆ ಮುಂದೂಡಿಕೆ
ಕಲಬುರಗಿ,ಫೆ.13.(ಕ.ವಾ.)-ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ವಸತಿ ಶಾಲೆಗಳ 2017-18ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು 2017ರ ಮಾರ್ಚ್ 5ಕ್ಕೆ ಮುಂದೂಡಲಾಗಿದೆ. ಈ ಮೊದಲು ಪರೀಕ್ಷೆಯ ದಿನಾಂಕವನ್ನು ಫೆಬ್ರವರಿ 19ರಂದು ನಿಗದಿಪಡಿಸಲಾಗಿತ್ತೆಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್. ರಾಜಪ್ಪ ತಿಳಿಸಿದ್ದಾರೆ.

ಮುಟ್ಟುಗೋಲು ಹಾಕಿಕೊಂಡ 26 ವಾಹನಗಳ ಹರಾಜು
****************************************************
ಕಲಬುರಗಿ,ಫೆ.13.(ಕ.ವಾ.)-ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಸಂದಾಯ ಮಾಡದಿರುವ ಹಾಗೂ ವಿವಿಧ ಅಪರಾಧಗಳಿಗಾಗಿ ಸಾರಿಗೆ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಂಡಿರುವ ಒಟ್ಟು 26 ವಾಹನಗಳ ಬಹಿರಂಗ ಹರಾಜು 2017ರ ಮಾರ್ಚ್ 14ರಂದು ಬೆಳಗಿನ 11 ಗಂಟೆಗೆ ಕಲಬುರಗಿ ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಜರುಗಲಿದೆ ಎಂದು ಉಪ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ್ ತಿಳಿಸಿದ್ದಾರೆ.
ಹರಾಜು ಮಾಡುವ ವಾಹನಗಳ ವಿವರ ಇಂತಿದೆ. ಮ್ಯಾಕ್ಸಿಕ್ಯಾಬ್-11, ಆಟೋರಿಕ್ಷಾ-05, ಹೆಚ್‍ಐವಿ-02, ಎಲ್‍ಜಿವಿ-03, ಮೋಟಾರು ಸೈಕಲ್, ಟ್ರ್ಯಾಕ್ಟರ್ ಟ್ರ್ಯಾಕ್ಟರ್ ಟೇಲರ್, ಆಟೋ ಟ್ರ್ಯಾಲಿ, ಕಮಾಂಡರ ಜೀಪ, ಜೆಸಿಬಿ ತಲಾ ಒಂದು. ಈ ಹರಾಜಿನಲ್ಲಿ ಭಾಗವಹಿಸುವರು ಮುಂಗಡ ಠೇವಣಿ 2000 ರೂ.ಗಳ ಸಂದಾಯ ಮಾಡಬೇಕು. ವಾಹನಗಳ ವಿವರ, ಹರಾಜು ನಡೆಯುವ ಸ್ಥಳ, ಮಾದರಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪ್ರಾದೇಶಿಕ ಸಾರಿಗೆ ಉಪ ಆಯುಕ್ತರ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.

ಫೆಬ್ರವರಿ 20ರಂದು ಸರ್ವಜ್ಞ ಜಯಂತಿ ವಿಜೃಂಭಣೆಯಿಂದಾಚರಿಸಲು ನಿರ್ಣಯ
**************************************************************************
ಕಲಬುರಗಿ,ಫೆ.13.(ಕ.ವಾ.)-ಮಹಾನ್ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜಯಂತಿಯನ್ನು 2017ರ ಫೆಬ್ರವರಿ 20ರಂದು ಕಲಬುರಗಿ ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಚುನಾವಣಾ ತಹಸೀಲ್ದಾರ ದಯಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಕಲಬುರಗಿಯಲ್ಲಿ ಜರುಗಿದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಅಂದು ಮಹಾನ್ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತಿಯ ಸಮಾರಂಭವನ್ನು ಮಧ್ಯಾಹ್ನ 12.30 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸರ್ವಜ್ಞ ಕವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ನೀಡಲು ಸಭೆ ನಿರ್ಣಯ ಕೈಗೊಂಡಿತು.
ಸಮಾರಂಭದ ಅಂಗವಾಗಿ ಮಹಾನ್ ಮಾನವತಾವಾದಿ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲು ಹಾಗೂ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕವಿ ಸರ್ವಜ್ಞರ ಜಯಂತಿ ಆಚರಣೆ ಮಾಡಿ ಪ್ರಮುಖ ಸಮಾರಂಭದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಳ್ಳುವಂತೆ ಸೂಚಿಸಲು ಸಭೆ ನಿರ್ಧರಿಸಿತು. ಜಯಂತಿ ಆಚರಣೆ ಅಂಗವಾಗಿ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಿಗ್ಗೆ 10.30 ಗಂಟೆಯಿಂದ ಸೂಪರಮಾರ್ಕೆಟ್ ಜನತಾ ಬಜಾರದಿಂದ ಜಗತ್ ವೃತ್ತದ ಮೂಲಕ ಡಾ.ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಆಯೋಜಿಸಲು ಸಹ ಸಭೆ ನಿರ್ಣಯ ಕೈಗೊಂಡಿತು. ಸಮಾರಂಭದ ಅಂಗವಾಗಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕುಂಬಾರ ಸಮಾಜದ ವಿದ್ಯಾರ್ಥಿಗಳು ಹಾಗೂ ಸಮಾಜದಲ್ಲಿ ವಿಶೇಷ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.
ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್ ಮುಂತಾದವುಗಳÀ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ಸೂಚಿಸಿದರು.
ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಶಿವಶರಣಪ್ಪ, ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಲಕ್ಷ್ಮಣ ಕುಂಬಾರ, ಜಿಲ್ಲಾ ಕುಂಬಾರ ಸಂಘದ ಪ್ರತಿನಿಧಿ ರೇಖಾ ನಂದಕುಮಾರ ಕುಂಬಾರ, ನಂದಕುಮಾರ ಕುಂಬಾರ, ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಜಯಂತಿ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.


No comments:

Post a Comment