GULBARGA VARTHE

GULBARGA VARTHE

Saturday, 4 February 2017

News and photo Date: 04-02-2017

ದಢಾರ ಮತ್ತು ರುಬೆಲ್ಲಾ ಆಂದೋಲನದಲ್ಲಿ ಶಿಕ್ಷಕರ ಪಾತ್ರ ಮಹತ್ವ
****************************************************************
ಕಲಬುರಗಿ,ಫೆ.04.(ಕ.ವಾ.)-ಭಾರತ ಸರ್ಕಾರವು 2020ನೇ ಇಸವಿ ವೇಳೆಗೆ ದಢಾರ ರೋಗವನ್ನು ನಿರ್ಮೂಲನೆ ಮಾಡಲು ಹಾಗೂ ರುಬೆಲ್ಲಾ ರೋಗ ನಿಯಂತ್ರಿಸುವ ಗುರಿ ಹೊಂದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ ದಢಾರ ಮತ್ತು ರುಬೆಲ್ಲಾ ವಿಶೇಷ ಆಂದೋಲನ ಯಶಸ್ವಿಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣಾಧಿಕಾರಿ ಡಾ|| ಅನೀಲಕುಮಾರ ತಾಳಿಕೋಟಿ ಹೇಳಿದರು.
ಅವರು ಶನಿವಾರ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಲಬುರಗಿ ನಗರದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮುಖ್ಯಸ್ಥರಿಗಾಗಿ ಆಯೋಜಿಸಿದ ಕಾರ್ಯಾಗಾರದಲ್ಲಿ ಮಾತನಾಡಿದರು.
ಮೊದಲನೇ ಹಂತದಲ್ಲಿ ಕರ್ನಾಟಕ, ಗೋವಾ, ಪಾಂಡಿಚೇರಿ, ಲಕ್ಷದ್ವೀಪ, ತಮೀಳುನಾಡು ರಾಜ್ಯಗಳಲ್ಲಿ ದಢಾರ ಮತ್ತು ರುಬೆಲ್ಲಾ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಹಂತ ಹಂತವಾಗಿ 2018ರವರೆಗೆ ಎಲ್ಲ ರಾಜ್ಯಗಳಲ್ಲಿ ಈ ಆಂದೋಲನ ಕೈಗೊಳ್ಳಲು ಯೋಜಿಸಲಾಗಿದೆ. ಆಂದೋಲನದ ಬಳಿಕ ನಿಯಮಿತವಾಗಿ ನಡೆಸುವ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ದಢಾರ ಲಸಿಕೆ ಬದಲಾಗಿ 2 ಡೋಸ್ ಎಂ.ಆರ್. ಲಸಿಕೆ ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಎ.ಎಸ್. ರುದ್ರವಾಡಿ, ತಾಲೂಕು ಆರೋಗ್ಯಾಧಿಕಾರಿ ಡಾ|| ರಾಜಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಭರತರಾಜ ಸಾವಳಗಿ, ದೊಡ್ಡರಂಗಪ್ಪ, ಅಭಿಯಾನದ ಮೇಲ್ವಿಚಾರಕರಾದ ಗುರುನಾಥ ಕವಳಿ, ರವೀಂದ್ರ ಠಾಕೂರ ಉಪಸ್ಥಿತರಿದ್ದರು.

ಕ್ಯಾನ್ಸರ್ ಜನಜಾಗೃತಿ ಬೃಹತ್ ರ್ಯಾಲಿಗೆ ಚಾಲನೆ
*************************************************
ಕಲಬುರಗಿ,ಫೆ.04.(ಕ.ವಾ.)-ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಕ್ಯಾನ್ಸರ್ ಜನಜಾಗೃತಿ ಬೃಹತ್ ರ್ಯಾಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಲಬುರಗಿ ಜಗತ್ ವೃತ್ತದಲ್ಲಿ ಶನಿವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ಯಾನ್ಸರ್ ರೋಗದ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಕೇವಲ ಒಂದೇ ದಿನಕ್ಕೆ ಸೀಮಿತಗೊಳ್ಳದೆ ನಿರಂತರವಾಗಿ ನಡೆಯಬೇಕು. ಈ ರೋಗವನ್ನು ಬೇಗ ಪತ್ತೆ ಹಚ್ಚಿದರೆ ಗುಣಪಡಿಸಬಹುದೆಂದು ಜನರಿಗೆ ತಿಳಿಹೇಳಬೇಕೆಂದರು.
ವಿಧಾನ ಪರಿಷತ್ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ್, ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವಿನಿ ಯಾಕಾಪುರ, ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಸರ್ಜನ್ ಡಾ|| ಜೋಶಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಶಿವಶರಣಪ್ಪ ಭೂಸನೂರ, ಮೈರಾಡ ಕಾರ್ಯಕ್ರಮ ಅಧಿಕಾರಿ ಕಲ್ಯಾಣಶೆಟ್ಟಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ವಿ.ಟಿ.ಎಸ್.ಎಂ. ಫೆರಿಫೆರಲ್ ಕ್ಯಾನ್ಸರ್ ಕೇಂದ್ರ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಡಿಸ್ಟಿಕ್ಟ್ ಎನ್‍ಸಿಡಿ ಸೆಲ್, ಮೈರಾಡ್ ಸಂಸ್ಥೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಹಯೋಗದಲ್ಲಿ ಆಯೋಜಿಸಿದ ಈ ರ್ಯಾಲಿಯು ಜಗತ್ ವೃತ್ತದಿಂದ ಡಾ. ಎಸ್.ಎಂ. ಪಂಡಿತ ರಂಗಮಂದಿರ, ಕೆ.ಬಿ.ಎನ್., ಮಿನಿ ವಿಧಾನಸೌಧದ ಮೂಲಕ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕೊನೆಗೊಂಡಿತು.
ರ್ಯಾಲಿಯಲ್ಲಿ ಪಾಲ್ಗೊಂಡ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು “ಫೈಟ್ ಕ್ಯಾನ್ಸರ್ ವಿತ್ ಹೋಪ್”, “ಅರ್ಲಿ ಡಿಟೆಕ್ಷನ್ ಕ್ಯೂರೇಬಲ್ ಕ್ಯಾನ್ಸರ್”, “ಟೇಕ್ ಪ್ಲೆಜ್ ಟು ಫೈಟ್ ಅಗೆನಸ್ಟ್ ಕ್ಯಾನ್ಸರ್”, “ನೋ ಟೂ ಅಲ್ಕೋಹಾಲ್”, ನೋ ಟು ಪ್ರೊಸೆಸ್ಟ್ ಫುಡ್”, ನೋ ಟೊಬ್ಯಾಕೊ” ಮುಂತಾದ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಫೆಬ್ರವರಿ 7ರಂದು ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳ ಆಯ್ಕೆ
******************************************************************
ಕಲಬುರಗಿ,ಫೆ.04.(ಕ.ವಾ.)-ಕಲಬುರಗಿ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸಕ್ತ 2016-17ನೇ ಸಾಲಿನ ಕೃಷಿ ಭಾಗ್ಯ ಯೋಜನೆಯಡಿ ರೈತ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು 2017ರ ಫೆಬ್ರವರಿ 7 ರಂದು ಮಂಗಳವಾರ ಬೆಳಿಗ್ಗೆ ನಡೆಯಲಿದೆ. ಲಾಟರಿ ಮುಖಾಂತರ ಗ್ರಾಮ ಪಂಚಾಯಿತಿವಾರು ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುವುದು. ಈಗಾಗಲೇ ಅರ್ಜಿ ಸಲ್ಲಿಸಿದ ಎಲ್ಲ ರೈತರು ಹಾಗೂ ಜನಪ್ರತಿನಿಧಿಗಳು ಹಾಜರಾಗಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.

ಕೆ.ಪಿ.ಎಸ್.ಸಿ. ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
**********************************************************************
ಕಲಬುರಗಿ,ಫೆ.04.(ಕ.ವಾ.)-ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2017ರ ಫೆಬ್ರವರಿ 5ರಂದು ಒಟ್ಟು 48 ಪರೀಕ್ಷಾ ಕೇಂದ್ರ, ಫೆಬ್ರವರಿ 11ರಂದು ಒಟ್ಟು 61 ಪರೀಕ್ಷಾ ಕೇಂದ್ರಗಳು ಮತ್ತು ಫೆಬ್ರವರಿ 12ರಂದು ಒಟ್ಟು 69 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10 ರಿಂದ ಬೆಳಗಿನ 11.30 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷೆಗಳಲ್ಲಿ ಅಕ್ರಮ ಮತ್ತು ನಕಲು ಅವ್ಯವಹಾರ ತಡೆಯಲು ಹಾಗೂ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಅನುವಾಗುವಂತೆ ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶÀದಲ್ಲಿ 1973ರ ಸಿಆರ್.ಪಿ.ಸಿ. ಕಾಯ್ದೆಯ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿರಾಕ್ಸ್/ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಕಲಬುರಗಿ ತಹಸೀಲ್ದಾರ್ ಅಶೋಕ ಹಿರೊಳ್ಳಿ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೋಣೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಮೊಬೈಲ್ ಹಾಗೂ ಇತರೆ ಚಿಕ್ಕ ಎಲೆಕ್ಟ್ರಾನಿಕ್ಸ್ ಸೇರಿದಂತೆ ಮತ್ತಿತರ ಯಾವುದೇ ವಸ್ತುಗಳನ್ನು ತರಕೂಡದು ಎಂದು ಸೂಚಿಸಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ 08 ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ
*******************************************************************
ಕಲಬುರಗಿ,ಫೆ.04.(ಕ.ವಾ.)-ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಘಟಕದಲ್ಲಿ ಖಾಲಿಯಿರುವ 08 ಶೀಘ್ರಲಿಪಿಗಾರರ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಪೈಕಿ ಹೈದ್ರಾಬಾದ್ ಕರ್ನಾಟಕ ಸ್ಥಳೀಯ ಅಭ್ಯರ್ಥಿಗಳಿಗೆ 05 ಹುದ್ದೆಗಳು ಹಾಗೂ ಉಳಿದ 03 ಹುದ್ದೆಯನ್ನು ಹೈದ್ರಾಬಾದ್ ಕರ್ನಾಟಕ ಭಾಗದÀವರಲ್ಲದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ವ್ಹಿ.ಪಾಟೀಲ್ ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಮತ್ತು ಶೀಘ್ರಲಿಪಿಗಾರ ಕೋರ್ಸುಗಳಲ್ಲಿ (ಸಿನಿಯರ್) ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅಥವಾ ಕಮರ್ಶಿಯಲ್ ಪ್ರ್ಯಾಕ್ಟೀಸ್ ಡಿಪ್ಲೋಮಾ/ಸೆಕ್ರೆಟ್ರಿಯೇಟ್ ಪ್ರ್ಯಾಕ್ಟೀಸ್ ಅಥವಾ ವಿಶ್ವವಿದ್ಯಾಲಯ ಅಥವಾ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ನಡೆಸುವ ಇತರ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಅಭ್ಯರ್ಥಿಯು ಕನಿಷ್ಟ 18 ವರ್ಷ ವಯೋಮಿತಿ ಹೊಂದಿರಬೇಕು. ಎಸ್.ಸಿ./ಎಸ್.ಟಿ. ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ. ಇತರ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ, 3ಎ, 3ಬಿ. ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ಇರುತ್ತದೆ. ಅರ್ಜಿ ಶುಲ್ಕ 200 ರೂ. ಇದ್ದು, ಚಲನ್ ಮೂಲಕ ಶುಲ್ಕವನ್ನು ಪಾವತಿಸಲು ಮಾರ್ಚ್ 4 ಕೊನೆಯ ದಿನವಾಗಿದೆ. ಎಸ್.ಸಿ./ಎಸ್.ಟಿ. ಮತ್ತು ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಈ ಶುಲ್ಕದಿಂದ ವಿನಾಯಿತಿ ಇರುತ್ತದೆ.ಸ
ಜಿಲ್ಲಾ ನ್ಯಾಯಾಲಯದ hಣಣಠಿ://eಛಿouಡಿಣs.gov.iಟಿ/ಞಚಿಟಚಿbuಡಿಚಿgi/oಟಿಟiಟಿe-ಡಿeಛಿಡಿuiಣmeಟಿಣ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಫೆಬ್ರವರಿ 1 ರಿಂದ ಮಾರ್ಚ್ 2ರ ರಾತ್ರಿ 11:59 ಗಂಟೆಯವರೆÀಗೆ ಸಲ್ಲಿಸಬೇಕು. ಹುದ್ದೆಗಳ ಮೀಸಲಾತಿ, ನೇಮಕಾತಿ ವಿಧಾನ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಾರ್ಯಾಲಯ, ಜಿಲ್ಲಾ ನ್ಯಾಯಾಲಯ ಆವರಣ, ಕಲಬುರಗಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಅಬಕಾರಿ ಇಲಾಖೆ: ವಾಹನಗಳ ಬಹಿರಂಗ ಹರಾಜು
*************************************************
ಕಲಬುರಗಿ,ಫೆ.04.(ಕ.ವಾ.)-ಕಲಬುರಗಿ ಅಬಕಾರಿ ಉಪ ಆಯುಕ್ತರ ಕಚೇರಿಯ ವ್ಯಾಪ್ತಿಯಲ್ಲಿರುವ ಕಲಬುರಗಿ, ಆಳಂದ, ಜೇವರ್ಗಿ, ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿರುವ ವಿವಿಧ ಮಾದರಿಯ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಫೆಬ್ರವರಿ 14 ರಿಂದ 16 ರವರೆಗೆ ಬೆಳಿಗ್ಗೆ 11 ಗಂಟೆಗೆ ಆಯಾ ಕಚೇರಿಗಳಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಬಹಿರಂಗ ಹರಾಜು ಮಾಡುವ ದಿನಾಂಕ, ಸ್ಥಳ ಮತ್ತು ವಾಹನಗಳ ವಿವರ ಇಂತಿದೆ. ಫೆಬ್ರವರಿ 14: ಕಲಬುರಗಿ ವಲಯ ನಂ. 1ರಲ್ಲಿ ಟಿವಿಎಸ್ ಎಕ್ಸ್‍ಲ್ ದ್ವಿಚಕ್ರ, ಆಟೋ ರಿಕ್ಷಾ, ಬಜಾಜ ಪ್ಲಾಟಿನಂ ದ್ವಿಚಕ್ರ, ಕಲಬುರಗಿ ವಲಯ ನಂ.2ರಲ್ಲಿ ಟಂಟಂ, ಟಿವಿಎಸ್ ಸುಪರ ಎಕ್ಸೆಲ್ ಹೆವ್ಹಿ ಡ್ಯೂಟಿ ದ್ವಿಚಕ್ರ. ಚಿತ್ತಾಪುರ ವಲಯ ಕಚೇರಿಯಲ್ಲಿ ಮೋಟಾರ ಸೈಕಲ್ ದ್ವಿಚಕ್ರ ಮತ್ತು ಪಿಜನ್ ಅಪೆ ಟಂಟಂ.
ಫೆಬ್ರವರಿ 15: ಆಳಂದ ವಲಯ ಕಚೇರಿಯಲ್ಲಿ ಹಿರೋ ಹೊಂಡಾ ಸ್ಲೈಂಡರ್ ಪ್ಲಸ್, ಹಿರೋ ಸ್ಪೈಂಡರ್ ಪ್ಲಸ್, ಟಿವಿಎಸ್ ಎಕ್ಸ್‍ಲ್ ಸುಪರ ಹೆವಿ ಡ್ಯೂಟಿ ದ್ವಿಚಕ್ರ, ಬಜಾಜ್ ಡಿಸ್ಕವರಿ ದ್ವಿಚಕ್ರ, ಹಿರೋ ಹೊಂಡಾ ಸ್ಲೈಂಡರ್ ಪ್ಲಸ್, ಹಿರೋ ಹೊಂಡಾ ಸ್ಲೈಂಡರ್ ಪ್ರೊ. ದ್ವಿಚಕ್ರ, ಹಿರೋ ಹೊಂಡಾ ಸ್ಲೈಂಡರ್, ಎಕ್ಸ್-5543 ಟಂಟಂ, ಸೇಡಂ ವಲಯ ಕಚೇರಿಯಲ್ಲಿ: ಬಜಾಜ ಪಲ್ಸರ್ ದ್ವಿಚಕ್ರ, ಹಿರೋ ಹೊಂಡಾ ಫ್ಯಾಶನ್ ಪ್ಲಸ್, ಬಜಾಜ್ ಬಾಕ್ಸರ್ ದ್ವಿಚಕ್ರ, ಬಜಾಜ್ ಎಂ-80 ದ್ವಿಚಕ್ರ, ಟಿವಿಎಸ್ ಎಕ್ಸೆಲ್ ದ್ವಿಚಕ್ರ, ಟಿವಿಎಸ್ ಸ್ಟಾರ್ ಸ್ಪೋಟ್ರ್ಸ್ ದ್ವಿಚಕ್ರ, ಹಿರೋ ಹೊಂಡಾ ಫ್ಯಾಶನ್ ದ್ವಿಚಕ್ರ, ದ್ವಿಚಕ್ರ, ಬಜಾಜ್ ಡಿಸ್ಕವರಿ, ಹಿರೋ ಹೊಂಡಾ ಫ್ಯಾಶನ್ ಪ್ಲಸ್.
ಫೆಬ್ರವರಿ 16: ಜೇವರ್ಗಿ ವಲಯ ಕಚೇರಿಯಲ್ಲಿ: ಹಿರೋ ಹೊಂಡಾ ಸ್ಲೈಂಡರ್ ಪ್ಲಸ್ ಮತ್ತು ಚಿಂಚೋಳಿ ವಲಯ ಕಚೇರಿಯಲ್ಲಿ ಹಿರೋ ಹೊಂಡಾ ಫ್ಯಾಶ್ ಪ್ರೊ. ದ್ವಿಚಕ್ರ ವಾಹನಗಳು ಹರಾಜಕ್ಕಿದೆ. ಷರತ್ತು ಮತ್ತು ನಿಬಂಧನೆಗಳು ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ವಾಹನವಿರುವ ಆಯಾ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಬೆಳಿಗ್ಗೆ 10 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.

ಫೆಬ್ರವರಿ 13ರಂದು ಮಾಸಿಕ ಕೆ.ಡಿ.ಪಿ.ಸಭೆ
****************************************
ಕಲಬುರಗಿ,ಫೆ.04.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ., ಎಸ್.ಡಿ.ಪಿ. ಮತ್ತು ನಬಾರ್ಡ್ ಯೋಜನೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಫೆಬ್ರವರಿ 13ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಜಿಲ್ಲಾ ಪಂಚಾಯತ್ ಹೊಸ ಸಭಾಂಗಣದಲ್ಲಿ ಜರುಗಲಿದೆ. ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಸದರಿ ಸಭೆಗೆ ಖುದ್ದಾಗಿ ಹಾಜರಾಗುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಬಾಲಕಾರ್ಮಿಕರ ಸಮೀಕ್ಷೆಗೆ ಸೂಚನೆ
*********************************************
ಕಲಬುರಗಿ,ಫೆ.04.(ಕ.ವಾ.)-ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿರುವ ಬಾಲಕಾರ್ಮಿಕರ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಸೂಚಿಸಿದರು.
ಅವರು ಶನಿವಾರ ಕಲಬುರಗಿಯಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಮೀಕ್ಷೆಯ ಅವಧಿಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಕಾರ್ಖಾನೆ, ಅಂಗಡಿ, ವಾಣಿಜ್ಯ ಸಂಸ್ಥೆ, ಆಸ್ಪತ್ರೆ, ಗಣಿ, ಹೋಟೆಲ್/ ರೆಸ್ಟೋರೆಂಟ್/ಧಾಬಾ ಮತ್ತು ವಸತಿ ನಿಲಯಗಳು, ಕಟ್ಟಡ ನಿರ್ಮಾಣ, ಗ್ಯಾರೇಜ್, ಗೃಹಕತ್ಯ/ ಅಪಾರ್ಟ್‍ಮೆಂಟ್, ಇಟ್ಟಿಗೆ ಭಟ್ಟಿ, ಮಂಡಕ್ಕಿ ಭಟ್ಟಿ, ಮುಜರಾಯಿ ದೇವಸ್ಥಾನ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ನಿಖರವಾದ ಸಮೀಕ್ಷೆ ನಡೆಸಬೇಕು ಎಂದರು.
ಮೊದಲನೇ ಹಂತದಲ್ಲಿ ಫೆಬ್ರವರಿ 20ರಿಂದ 25ರವರೆಗೆ ಆಳಂದ ತಾಲೂಕಿನ ನರೋಣಾ, ನಿಂಬರಗಾ, ಆಳಂದ, ಮಾದನ ಹಿಪ್ಪರಗಾ ಮತ್ತು ಖಜೂರಿ ಹೋಬಳಿಗಳು; ಸೇಡಂ ತಾಲೂಕಿನ ಮಳಖೇಡ, ಸೇಡಂ, ಮುಧೋಳ, ಕೋಡ್ಲಾ ಮತ್ತು ಅಡಕಿ ಹೋಬಳಿಗಳು; ಕಲಬುರಗಿ ತಾಲೂಕಿನ ಪಟ್ಟಣ, ಕಮಲಾಪುರ, ಮಹಾಗಾಂವ, ಫರ್ತಾಬಾದ, ಕಲಬುರಗಿ ಮತ್ತು ಕಲಬುರಗಿ ಗ್ರಾಮೀಣ ಹೋಬಳಿಗಳಲ್ಲಿ ಈ ಸಮೀಕ್ಷೆ ನಡೆಯಲಿದೆ.
ಎರಡನೇ ಹಂತದಲ್ಲಿ ಫೆಬ್ರವರಿ 27ರಿಂದ ಮಾರ್ಚ್ 4ರವರೆಗೆ ಅಫಜಲಪುರ ತಾಲೂಕಿನ ಗಾಣಗಾಪುರ, ಅತನೂರ, ಕರ್ಜಗಿ ಮತ್ತು ಅಪಜಲಪುರ ಹೋಬಳಿಗಳು; ಚಿಂಚೋಳಿ ತಾಲೂಕಿನ ಸುಲೇಪೇಟ್, ಕೋಡ್ಲಿ, ಐನಾಪುರ ಮತ್ತು ಚಿಂಚೋಳಿ ಹೋಬಳಿಗಳು ಹಾಗೂ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುವುದು. ಇದಲ್ಲದೇ ಮೂರನೇ ಹಂತದಲ್ಲಿ ಮಾರ್ಚ್ 6ರಿಂದ 10ರವರೆಗೆ ಚಿತ್ತಾಪುರ ತಾಲೂಕಿನ ಶಹಾಬಾದ, ವಾಡಿ, ನಾಲವಾರ, ಕಾಳಗಿ, ಗುಂಡಗುರ್ತಿ ಮತ್ತು ಚಿತ್ತಾಪುರ ಹೋಬಳಿಗಳು ಹಾಗೂ ಜೇವರ್ಗಿ ತಾಲೂಕಿನ ನೆಲೋಗಿ, ಯಡ್ರಾಮಿ, ಅರಳಗುಂಡಗಿ, ಇಜೇರಿ, ಆಂದೋಲಾ ಮತ್ತು ಜೇವರ್ಗಿ ಹೋಬಳಿಗಳಲ್ಲಿ ಸಮೀಕ್ಷೆ ನಡೆಸಲಾಗುವುದು.
ಈ ಸಮೀಕ್ಷಾ ಕಾರ್ಯ ಪೂರ್ಣಗೊಂಡ ಬಳಿಕ ಕೊನೆಯ ಹಂತದಲ್ಲಿ ಮಾರ್ಚ್ 13ರಿಂದ 18ರವರೆಗೆ ಬಾಲಕಾರ್ಮಿಕ ಸಮೀಕ್ಷೆಯ ದತ್ತಾಂಶಗಳ ಕ್ರೋಢೀಕರಣ ಮಾಡಿ ವರದಿ ಸಿದ್ಧಪಡಿಸಲಾಗುವುದು ಹಾಗೂ ಸದರಿ ವರದಿಯನ್ನು ಕಾರ್ಮಿಕ ಆಯುಕ್ತರ ಕಚೇರಿಗೆ ಹಾಗೂ ಕೇಂದ್ರ ಕಾರ್ಮಿಕ ಮಂತ್ರಾಲಯಕ್ಕೆ ಸಲ್ಲಿಸಲಾಗುವುದು. ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ತರಬೇತಿಯನ್ನು ಆಯೋಜಿಸಬೇಕು. ಬಾಲಕಾರ್ಮಿಕರ ಪದ್ಧತಿಯ ನಿವಾರಣೆಗಾಗಿ ನಡೆಸಲಾಗುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪತ್ತೆಯಾಗುವ ಬಾಲಕಾರ್ಮಿಕರ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಪುನರ್ವಸತಿ ಕಲ್ಪಿಸುವ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂದಿಹಟ್ಟಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ಆರ್. ದೇಶಪಾಂಡೆ, ಡಿವೈ.ಎಸ್.ಪಿ. ಎಸ್. ಜಾಹ್ನವಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ಸದಸ್ಯ ಶಿವಾನಂದ ಅಣಜಗಿ, ಚೈಲ್ಡ್ ಲೈನ್ ನಿರ್ದೇಶಕ ಡಾ. ಲಿಂಗರಾಜ ಕೋಣಿನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ಮತ್ತಿತರ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಫೆಬ್ರವರಿ 9ರಂದು ತಾಲೂಕು ಪಂಚಾಯಿತಿ ಕೆ.ಡಿ.ಪಿ. ಸಭೆ
******************************************************
ಕಲಬುರಗಿ,ಫೆ.04.(ಕ.ವಾ.)-ಕಲಬುರಗಿ ತಾಲೂಕು ಪಂಚಾಯಿತಿ ಕೆ.ಡಿ.ಪಿ. ಸಭೆಯು ಫೆಬ್ರವರಿ 9ರಂದು ಬೆಳಗಿನ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಲಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಕಲ್ಲಪ್ಪಾ ಸಜ್ಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ತಾಲೂಕಿನ ಎಲ್ಲ ಇಲಾಖೆಗಳ ಮುಖ್ಯಸ್ಥರು ತಪ್ಪದೇ ಆಗಮಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೋರಿದ್ದಾರೆ.

No comments:

Post a Comment